• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಭಾರತಿ ಈಗ ಗರ್ಭಿಣಿ’

By Super
|

ವಿದ್ಯಾನಂದರು ಹೇಳುವುದೆಲ್ಲ ಹತಾಶ ಗುರುವೊಬ್ಬನ ಹಳಹಳಿಕೆಯಂತೆ ಇರುತ್ತದೆ. ಅವರು ತನ್ನ ಅಕೃತ್ಯಗಳನ್ನು ಸಮರ್ಥಿಸಿಕೊಳ್ಳುವುದಕ್ಕೊಂದು ವಾದವನ್ನು ಹುಟ್ಟುಹಾಕಿರುತ್ತಾರೆ. ಅವರ ಲೈಂಗಿಕ ಆಸಕ್ತಿಗಳು ತಮಗೆ ತಿಳಿದಿದೆ ಅನ್ನುವುದು ಅವರಿಗೆ ಗೊತ್ತಾಗಿಬಿಟ್ಟಿದೆ. ಅದಕ್ಕಾಗಿ ಅವರೊಂದು ಆತ್ಮಾವಲೋಕನದ ತಡೆಗೋಡೆ ನಿರ್ಮಿಸಿಕೊಳ್ಳಲು ಯತ್ನಿಸುತ್ತಿದ್ದಾರೆ...

ಹಾಗಂದುಕೊಂಡು ಆನಂದ ಅರೆಬರೆ ಮನಸ್ಸಿನಿಂದ ಅವರ ಮುಂದೆ ಕುಳಿತ. ಆದರೆ ರಘುನಂದನನಿಗೆ ಅಂಥ ಯಾವುದೇ ಪೂರ್ವಗ್ರಹಗಳಿರಲಿಲ್ಲ. ನೀವು ಹೇಳುವುದನ್ನೆಲ್ಲ ಈ ಕ್ಷಣಕ್ಕೆ ನಾನು ನಂಬುತ್ತೇನೆ ಎಂಬ ಪ್ರಾಮಾಣಿಕತೆ ಅವನು ಕುಳಿತ ಭಂಗಿಯಲ್ಲೇ ಪುಟಿಯುತ್ತಿತ್ತು.

ವಿದ್ಯಾನಂದರು ತಮ್ಮ ಕಥಾನಕವನ್ನು ಆರಂಭಿಸಿದರು. ತೊಡೆಯ ಮೇಲೆ ಕೂರಿಸಿಕೊಂಡು ಮಗನಿಗೆ ಗಾಯತ್ರಿಮಂತ್ರೋಪದೇಶ ಮಾಡುವ ಶಾಸ್ತ್ರಸಿದ್ಧ ಗೃಹಸ್ಥನ ಏಕಾಗ್ರತೆ ಅವರ ಮಾತಲ್ಲಿದೆ ಅಂತ ರಘುನಂದನನಿಗೆ ಅನ್ನಿಸಿತು.

‘ನಾನು ಹುಟ್ಟಿದ್ದು ಉತ್ತರ ಕನ್ನಡದ ಒಂದು ಪುಟ್ಟ ಹಳ್ಳಿಯಲ್ಲಿ. ನಮ್ಮೂರಿನ ಹೆಸರೇ ಬೆಟ್ಟದ ಕೊಳಲು. ಅದು ಕಾಲಕ್ರಮೇಣ ಬೆತ್ತದ ಕೊಳಲು ಅಂತ ಬದಲಾಗಿದೆ. ತುಂಬಾ ಹಿಂದೆ ಅದು ಬೆಟ್ಟದ ಕೊಳ ಆಗಿತ್ತು ಅಂತ ಅಪ್ಪಯ್ಯ ಹೇಳುತ್ತಿದ್ದರು. ಆದರೆ ನಾನು ಕೊಳವನ್ನಾಗಲೀ, ಕೊಳಲನ್ನಾಗಲೀ ನೋಡಲಿಲ್ಲ. ಆದರೆ ಇವತ್ತಿಗೂ ಕೊಳ ಮತ್ತು ಕೊಳಲು ಎರಡೂ ನನ್ನನ್ನು ಮೋಹಪರವಶನನ್ನಾಗಿಸುತ್ತವೆ.

ನಾನು ಬಾಲ್ಯದಿಂದಲೇ ಅಕ್ಷರಮೋಹಿತ. ಅಮರಾ ನಿರ್ಜರಾ ದೇವಾ ಸ್ತ್ರಿದಶಾ ವಿಬುಧಾ ಸ್ಸುರಾಃ। ಸುಪರ್ವಾಣ ಸ್ಸುಮನಸ ಸ್ತ್ರಿದಿವೇಶಾ ದಿವೌಕಸಃ।

ಆದಿತ್ಯಾ ಋಭವೋǚಸ್ವಪ್ನಾ ಅಮರ್ತ್ಯಾ ಅಮೃತಾಂಧಸಃ। ಆದಿತೇಯಾ ದಿವಿಷದೋ ಲೇಖಾ ಅದಿತಿನಂದನಾಃ।। ಅನ್ನುವ ಅಮರಕೋಶದ ಪಂಕ್ತಿಗಳನ್ನು ನಾನು ಕಲಿತದ್ದು ಆಗಲೇ. ವೇದದ ಲಯಮಾಧುರ್ಯ ನನ್ನನ್ನು ಆಗಲೇ ಆಕರ್ಷಿಸಿತ್ತು. ಪದಗಳು ನನ್ನನ್ನು ಪುಲಕಗೊಳಿಸುತ್ತಿದ್ದವು. ಶ್ರವಣಕುಮಾರ ಅನ್ನುವ ಹೆಸರನ್ನು ಔತ್ತರೇಯ ಉಪನಿಷತ್ತಿನಲ್ಲಿ ಓದಿದಾಗ ನಾನು ರೋಮಾಂಚನಗೊಂಡೆ. ಶಬ್ದವೇಧಿ ವಿದ್ಯೆಯ ಮೂಲಕ ಶ್ರವಣ ಕೊಳದಿಂದ ನೀರು ಮೊಗೆಯುತ್ತಿದ್ದ ಸದ್ದನ್ನು ಆಲಿಸಿ ಅವನನ್ನು ದಶರಥ ಕೊಂದ ಕತೆಯನ್ನು ಸ್ವತಃ ದಶರಥನೇ ಕೈಕೇಯಿಗೆ ಹೇಳುತ್ತಿದ್ದಾಗ ನನಗೆ ಶ್ರವಣನ ಸಾವಿನ ಬಗ್ಗೆ ದುಃಖವಾಗಲಿಲ್ಲ. ಅವನ ಕುರುಡು ತಂದೆತಾಯಿಯರ ಬಗ್ಗೆ ಏನೂ ಅನ್ನಿಸಲಿಲ್ಲ. ಶ್ರವಣ ಅನ್ನುವ ಹೆಸರಿನವನನ್ನು ದಶರಥ ಕಣ್ಣಾರೆ ಕಾಣದೇ ಕೇವಲ ಶ್ರವಣದಿಂದ ಕೊಂದು ಕೆಡವಿದನಲ್ಲ ಅನ್ನಿಸಿತು. ಅವನ ಹೆಸರಿಗೂ ದಶರಥನ ಕ್ರಿಯೆಗೂ ಸಂಬಂಧವಿದೆ ಅಂತನ್ನಿಸಿ ಪದಗಳ ಶಕ್ತಿಗೆ ಖುಷಿಯಾಯಿತು.’

ಹೀಗೆ ಬೆಳೆಯುತ್ತಿದ್ದ ನಾನು ಕವಿಯಾಗಬೇಕು ಅಂದುಕೊಂಡಿದ್ದೆ. ಕವಿಯಾಗಿದ್ದೆ. ಸಾಕಷ್ಟು ಬರೆಯುತ್ತಿದ್ದೆ. ಆದರೆ ಒಂದು ದಿನ ಬರೆಯುವುದಕ್ಕಿಂತ ಓದುವುದೇ ಸೊಗಸು ಅನ್ನಿಸಿತು. ಆವತ್ತು ಬರೆಯುವುದನ್ನು ನಿಲ್ಲಿಸಿ ಓದುವುದಕ್ಕೆ ಆರಂಭಿಸಿದೆ. ಓದುತ್ತಾ ಓದುತ್ತಾ ಓದಿದ್ದೆಲ್ಲ ಮುಗಿಯಿತು ಅನ್ನಿಸಿತು. ಜ್ಞಾನಿಯಾದವನನ್ನು ಮುಂದೇನು ಅನ್ನುವ ಅತೃಪ್ತಿ ಕಾಡುತ್ತದೆ ಅಂತ ನನಗೆ ಅದುವರೆಗೂ ಗೊತ್ತಿರಲಿಲ್ಲ. ಆದರೆ ಓದುವುದೆಲ್ಲ ಮುಗಿದ ನಂತರ ಹಾಗನ್ನಿಸಿತು. ನಾನು ಅಜ್ಞಾನಿ ಅನ್ನಿಸಿತು. ಹೀಗನ್ನಿಸಿದಾಗ ನನಗೆ ಹದಿನಾರು ವರುಷ.

ಆಗಲೇ ಸುಬ್ರಹ್ಮಣ್ಯದ ಹಿರಿಯ ಸ್ವಾಮಿಗಳು ನಮ್ಮೂರಿಗೆ ಬಂದದ್ದು. ಬಂದವರು ಒಂದು ಉಪನ್ಯಾಸ ಕೊಟ್ಟರು. ಅವರು ಮನೆಗೆ ಬಂದ ರಾತ್ರಿ ಅದರ ಬಗ್ಗೆ ನಮ್ಮ ಮನೆಯಲ್ಲಿ ವಿಚಾರಗೋಷ್ಠಿಯಾಂದು ನಡೆಯಿತು. ಸ್ವಾಮೀಜಿಗಳ ಹತ್ತಿರ ಅನೇಕರು ಅನೇಕ ಪ್ರಶ್ನೆಗಳನ್ನು ಕೇಳಿದರು. ಕೊನೆಗೆ ನಾನು ಅವರನ್ನೊಂದು ಪ್ರಶ್ನೆ ಕೇಳಿದೆ. ಅದರಲ್ಲಿ ಅಹಂಕಾರವಾಗಲೀ ಕುಹಕವಾಗಲೀ ಇರಲಿಲ್ಲ.

‘ಭಗವಂತನಿಗೂ ಜ್ಞಾನಕ್ಕೂ ಏನಾದರೂ ಸಂಬಂಧವುಂಟೆ?’

ಅವರು ಎಂದಿನಂತೆ ‘ಜ್ಞಾನವೆಂದರೆ ಮುಕ್ತಿ’ ಅಂದರು. ನಾನು ‘ಯಾವುದರಿಂದ ಮುಕ್ತಿ. ಅಜ್ಞಾನದಿಂದಲೋ ಜ್ಞಾನದಿಂದಲೋ’ ಅಂತ ಕೇಳಿದೆ. ನನ್ನ ಮಾತಿನ ಅರ್ಥ ಅವರಿಗೆ ಆಗಿರಬೇಕು. ಹತ್ತಿರ ಕರೆದರು. ಮೈದಡವಿದರು. ತಸ್ಯ ಕರ್ತಾರಮಪಿ ಮಾಮ್‌। ವಿದ್ಧ್ಯಕರ್ತಾರಮವ್ಯಯಮ್‌।। ಅಂದರು. ನಾನೇ ಕತೃ. ಆದರೆ ನಾನೇ ಅಕರ್ತಾರ ಅನ್ನುವುದರ ಅರ್ಥ ಅದುವರೆಗೆ ಅಷ್ಟು ಸಚಿತ್ರವಾಗಿ ನನಗೆ ಹೊಳೆದಿರಲಿಲ್ಲ. ನನ್ನ ಮುಖದಲ್ಲಿ ಸುಳಿದುಹೋದ ಸಂತೋಷದ ಮಿಂಚು ಅವರನ್ನು ತಲುಪಿರಬೇಕು. ಮತ್ತೊಂದು ಶ್ಲೋಕ ಉದ್ಗರಿಸಿದರು;

ಯಸ್ಯ ಸರ್ವೇ ಸಮಾರಂಭಾಃ

ಕಾಮಸಂಕಲ್ಪವರ್ಜಿತಾಃ।

ಜ್ಞಾನಾಗ್ನಿದಗ್ಧಕಮಾಧಣಮ್‌

ತಮಾಹುಃ ಪಂಡಿತಂ ಬುಧಾಃ।।

ಬಯಕೆ ಮತ್ತು ಸಂಕಲ್ಪಗಳಿಂದ ವರ್ಜಿತವಾಗಿ ಯಾರು ಮಾಡುವ ಕರ್ಮಗಳು ಜ್ಞಾನಾಗ್ನಿಯಿಂದ ದಹಿಸಲ್ಪಟ್ಟಿರುತ್ತವೆಯೋ ಅವನು ಪಂಡಿತ ಎನ್ನುವುದು ನನಗೆ ಗೊತ್ತಿತ್ತು. ಆದರೆ ಕಾಮಸಂಕಲ್ಪವರ್ಜಿತಾ ಅನ್ನುವ ಪದಕ್ಕಿರುವ ವಿಸ್ತಾರ ಹೊಳೆದಿರಲಿಲ್ಲ. ಬಯಕೆಯನ್ನು ವರ್ಜಿಸುವ ಬಗ್ಗೆ ಗೊತ್ತಿತ್ತು. ಸಂಕಲ್ಪವನ್ನು ವರ್ಜಿಸುವುದು ಹೇಗೆಂದು ತಿಳಿದಿರಲಿಲ್ಲ. ಆವತ್ತೇ ಅವರ ಜೊತೆ ಹೊರಟು ಬಂದೆ.

ಅವರು ಮತ್ತೇನನ್ನೂ ನನಗೆ ಕಲಿಸಲಿಲ್ಲ. ಕಲಿಯಬೇಕು ಅಂತ ನನಗೆ ಅನ್ನಿಸಲೂ ಇಲ್ಲ. ನಾನು ಕಲಿತದ್ದೆಲ್ಲ ಒಂದೊಂದು ಘಟನೆ ನಡೆದಾಗಲೂ ನನ್ನ ಕಣ್ಮುಂದೆ ಬರುತ್ತಿತ್ತು. ಜ್ಞಾನ ಹೇಗೆ ನಮ್ಮನ್ನು ಮುನ್ನಡೆಸುತ್ತದೆ ಅನ್ನುವುದು ಗೊತ್ತಾಯಿತು. ನಹೀ ಜ್ಞಾನೇನ ಸದೃಶಃ ಅನ್ನುವ ಮಾತಿನ ಅರ್ಥ ಹೊಳೆಯಿತು.

ಅದೇ ಸ್ಥಿತಿಯಲ್ಲಿದ್ದರೆ ನಾನು ಸಂತೋಷವಾಗಿರಬಹುದಿತ್ತು. ಆದರೆ ಪಂಚೇಂದ್ರಿಯಗಳ ಮೂಲಕ ಪಡೆಯಬಹುದಾದ ಎಲ್ಲ ಜ್ಞಾನವನ್ನೂ ನಾನು ಪಡೆದುಕೊಂಡಿಲ್ಲ ಅಂತ ಅನ್ನಿಸಲು ಶುರುವಾಯಿತು. ಹಾಗೆ ಅನ್ನಿಸುವುದಕ್ಕೆ ಕಾರಣ ಭಾರತಿ.

ಆಕೆ ಚಂದ್ರೇಗೌಡರ ಮಗಳು ಅನ್ನುವುದೂ ನನಗೆ ಗೊತ್ತಿರಲಿಲ್ಲ. ಅಪೂರ್ವ ಸೌಂದರ್ಯವತಿ ಅನ್ನುವುದೂ ಗೊತ್ತಿರಲಿಲ್ಲ. ಸೌಂದರ್ಯದ ಕಲ್ಪನೆ ನನಗಿರಲೇ ಇಲ್ಲ. ಸಕಲೇಶಪುರದ ದೇವಸ್ಥಾನದಲ್ಲಿ ನಾನು ಸಾಂಖ್ಯಯೋಗದ ಬಗ್ಗೆ ಮಾತಾಡುತ್ತಿರುವಾಗ ಸಭೆಯಲ್ಲಿ ಅವಳು ಕುಳಿತಿದ್ದಳು. ಅವಳ ಕಣ್ಣುಗಳು ಅಚಾನಕ್ಕಾಗಿ ನನ್ನ ಕಣ್ಣುಗಳನ್ನು ಸಂಧಿಸಿದವು. ಒಂದು ಕ್ಷಣ ನಾನು ತೊದಲಿದೆ. ಅಮರಕೋಶವನ್ನು ಅರೆದು ಕುಡಿದ ನಾನು ತೊದಲಿದೆ ಅಂದರೆ ಊಹಿಸಿಕೊಳ್ಳಿ. ಮನಸ್ಸು ಚಂಚಲವಾಗಿದೆ ಎಂದೇ ಅರ್ಥ. ನನ್ನ ಮನಸ್ಸನ್ನು ಚಂಚಲಗೊಳಿಸಿದ ಆ ಕಣ್ಣುಗಳು ಯಾರವು ಅಂತ ಮತ್ತೊಮ್ಮೆ ನೋಡಿದೆ. ಬೆಳ್ಳಗಿನ ಹಸಿರು ಅಂಚಿನ ಸೀರೆಯುಟ್ಟು, ಪೂರ್ತಿ ಒಣಗಿರದ ತಲೆಗೂದಲನ್ನು ಹಾಗೇ ಬಿಟ್ಟುಕೊಂಡು ಹಣೆಗೆ ಇಷ್ಟಗಲದ ಕುಂಕುಮ ಇಟ್ಟುಕೊಂಡು ಆಕೆ ಬಂದು ಕುಳಿತಿದ್ದಳು. ತನ್ಮಯಳಾಗಿದ್ದಳು. ಆಕೆ ನನ್ನ ಮಾತುಗಳನ್ನು ಕೇಳುತ್ತಿಲ್ಲ ಅನ್ನುವುದು ನನಗೆ ಸ್ಪಷ್ಟವಾಗಿತ್ತು.

ಆಕೆ ಯಾರು ಎನ್ನುವುದನ್ನು ತಿಳಿದುಕೊಳ್ಳಬೇಕು ಅಂತ ಆವತ್ತೇ ಅನ್ನಿಸಿತು. ನಮ್ಮ ಗಿಂಡಿಮಾಣಿಯನ್ನು ಕರೆದು ಹೇಳಿದೆ. ಅವನು ವಿವರಗಳೊಂದಿಗೆ ಬಂದ. ಅವಳನ್ನು ಕರೆಸಿ ಮಾತನಾಡಿದೆ. ಅವಳಿಗೆ ಆಧ್ಯಾತ್ಮವಾಗಲೀ ಸಾಹಿತ್ಯವಾಗಲೀ ಗೊತ್ತಿರಲಿಲ್ಲ. ಆದರೆ ಹೆಣ್ಣಿಗೊಂದು ವಿಶಿಷ್ಟ ಶಕ್ತಿಯಿರುತ್ತದೆ. ತಮ್ಮೆದುರು ಕುಳಿತವರ ಅರ್ಧ ಶಕ್ತಿಯನ್ನು ಅವರು ಹೀರಿಬಿಡುತ್ತಾರೆ. ಅವಳೂ ಅಷ್ಟೇ, ತನ್ನ ಅಜ್ಞಾನದಿಂದಲೇ ನನ್ನನ್ನು ಸೋಲಿಸಿಬಿಟ್ಟಳು. ದೇಹಕ್ಕೆ ಜ್ಞಾನದ ಸೋಂಕಿಲ್ಲ ಅನ್ನುವುದನ್ನು ಕಲಿಸಿಕೊಟ್ಟಳು.

ಲೌಕಿಕಕ್ಕೂ ಅಲೌಕಿಕ್ಕೂ ಇರುವ ವ್ಯತ್ಯಾಸ ಅದೊಂದೇ. ಅಲೌಕಿಕವನ್ನು ಯಾರ ಜೊತೆಗೂ ಹಂಚಿಕೊಳ್ಳುವಂತಿಲ್ಲ. ಅಲ್ಲಿ ಕತೃವೂ ಇಲ್ಲ ಕರ್ತಾರನೂ ಇಲ್ಲ. ಆದರೆ ಲೌಕಿಕಕ್ಕೆ ಬಂದಾಗ ಹಾಗಾಗುವುದಿಲ್ಲ. ಎಂಥ ಜ್ಞಾನಿಯೇ ಆದರೂ ತಾನು ಹುಟ್ಟಿಸಿದ ಮಗುವನ್ನು ಇನ್ನೊಬ್ಬನದು ಅಂತ ಹೇಳುವುದಕ್ಕೆ ಒಪ್ಪುವುದಿಲ್ಲ.’

ಅಷ್ಟು ಹೇಳಿ ಒಂದು ಕ್ಷಣ ಅವರು ಮಾತು ನಿಲ್ಲಿಸಿದರು. ಆನಂದನನ್ನೊಮ್ಮೆ ರಘುವನ್ನೊಮ್ಮೆ ನೋಡಿದರು. ರಘು ಅವರು ಹೇಳಿದ್ದು ಅರ್ಥವಾಯಿತು ಎಂಬಂತೆ ತಲೆದೂಗಿದ.

‘ಭಾರತಿ ಈಗ ಗರ್ಭಿಣಿ. ಅವಳ ಗರ್ಭದಲ್ಲಿರುವುದು ನನ್ನ ಮಗು. ನನ್ನ ಇದುವರೆಗಿನ ತ್ಯಾಗಕ್ಕಾಗಲೀ ಜ್ಞಾನಕ್ಕಾಗಲೀ ಆಧ್ಯಾತ್ಮಿಕ ನಿಷ್ಠೆಗಾಗಲೀ ಏನನ್ನೂ ಸೃಷ್ಟಿಸುವ ಶಕ್ತಿಯಿರಲಿಲ್ಲ. ಅದು ಕೇವಲ ನನ್ನ ಮನಸ್ಸಿನೊಳಗಿನ ಭ್ರಮೆಯಷ್ಟೇ ಆಗಿತ್ತು. ಆದರೆ ನನ್ನ ಮತ್ತು ಭಾರತಿಯ ಒಂದು ವರುಷದ ಸಂಬಂಧಕ್ಕೆ ನನ್ನ ತದ್ರೂಪಿಯನ್ನು ಸೃಷ್ಟಿಸುವ ಶಕ್ತಿಯಿದೆ. ಅದು ಗೊತ್ತಾದ ತಕ್ಷಣವೇ ನನಗೆ ಈ ಪೀಠದ ಮೇಲಿನ ಆಸಕ್ತಿ ಹೊರಟುಹೋಗಿದೆ. ನಾನು ಪೀಠತ್ಯಾಗ ಮಾಡಲು ನಿರ್ಧರಿಸಿದ್ದೇನೆ. ಆದರೆ ನಾನು ಹಾಗೆ ಮಾಡುತ್ತಿರುವುದು ಭಾರತಿಯ ಮೇಲಿನ ಮೋಹದಿಂದಲ್ಲ ಅನ್ನುವುದನ್ನು ಕನಿಷ್ಠ ಪಕ್ಷ ಒಬ್ಬರಾದರೂ ಅರ್ಥ ಮಾಡಿಕೊಳ್ಳಬೇಕು. ಅದು ಆನಂದನಿಗೆ ಅರ್ಥವಾಗುತ್ತದೆ ಅನ್ನಿಸಿ ಅವನನ್ನು ಕರೆಸಿಕೊಂಡೆ.’

ವಿದ್ಯಾನಂದರು ಮಾತು ನಿಲ್ಲಿಸಿದರು. ಆನಂದನ ಕಣ್ಣಹನಿಯಲ್ಲಿ ನೀಲಾಂಜನದ ಬೆಳಕು ಹೊಳೆಯುತ್ತಿತ್ತು.

English summary
A Kannada novel series to go online on thatskannada.com from 3rd november 2002
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X