• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆನಂದನ ಪತ್ರಿಕೆಯಲ್ಲಿ ಸ್ವಾಮೀಜಿ ಪ್ರೇಮಕಥಾ

By Super
|

ತೋಳ್ಪಡಿತ್ತಾಯರ ವಿರುದ್ಧ ಬರೆದು ದಕ್ಕಿಸಿಕೊಂಡೇನು ಅನ್ನುವ ಧೈರ್ಯ ಆನಂದನಿಗೆ ಸರ್ವಥಾ ಇರಲಿಲ್ಲ . ಆದರೆ ಅವರ ಬಗ್ಗೆ ಬರೆಯದೇ ಅವನಿಗೆ ಬೇರೆ ದಾರಿಯೇ ಉಳಿದಿರಲಿಲ್ಲ . ಒಂದು ವೇಳೆ ಅವರನ್ನು ಹಾಗೇ ಬಿಟ್ಟರೆ ತನ್ನ ಘನತೆಗೆ ಕುಂದು ಎಂದು ಅವನು ಭಾವಿಸಿದ್ದ.

ಅದು ಅವನ ಸ್ವಭಾವ. ಅವನಿಗೆ ಸದಾ ಸೇಡು ತೀರಿಸಿಕೊಂಡೇ ಅಭ್ಯಾಸ. ತಾನಾಗಿಯೇ ಯಾರ ತಂಟೆಗೂ ಹೋಗಬಾರದು; ಆದರೆ ಅವರಾಗಿಯೇ ತಡವಿಕೊಂಡರೆ ಸುಮ್ಮನಿರಬಾರದು ಅನ್ನುವ ಪಾಲಿಸಿಯನ್ನು ಅವನು ಬಹಳ ವರುಷಗಳಿಂದ ಪಾಲಿಸಿಕೊಂಡು ಬಂದಿದ್ದ . ತೋಳ್ಪಡಿತ್ತಾಯರ ವಿಚಾರದಲ್ಲೂ ಅವನು ಅದನ್ನೇ ಪಾಲಿಸಿದ್ದು.

ತೋಳ್ಪಡಿತ್ತಾಯರೂ ಸುಮ್ಮನೆ ಕೂರಲಿಲ್ಲ . ಆದರೆ, ಅವರು ನೇರವಾಗಿ ಆನಂದನನ್ನು ಎದುರಿಸುವಂತಿರಲಿಲ್ಲ. ಆನಂದ ಆ ಲೇಖನ ಪ್ರಕಟವಾಗುವ ಮೊದಲೇ ತನಗೆ ತೋಳ್ಪಡಿತ್ತಾಯರಿಂದ ಪ್ರಾಣಭಯವಿದೆ ಎಂದೂ ಅವರು ತನ್ನನ್ನು ಹೆದರಿಸಿದ್ದಾರೆಂದೂ ತನ್ನ ಕೆಲಸ ಕಳೆದವರು ಅವರೇ ಎಂದೂ ಪೊಲೀಸು ಕಂಪ್ಲೇಂಟು ಕೊಟ್ಟಿದ್ದ. ಆವತ್ತು ಪತ್ರಿಕೆಯ ಬಿಡುಗಡೆ ಸಮಾರಂಭದಲ್ಲೂ ಅವನು ತೋಳ್ಪಡಿತ್ತಾಯರ ಬಗ್ಗೆ ನೇರವಾಗಿಯೇ ಪ್ರಸ್ತಾಪ ಮಾಡಿದ್ದ. ಹೀಗಾಗಿ ಅವನಿಗೇ ಯಾರು ಏನು ಮಾಡಿದರೂ ಅದು ನೇರವಾಗಿ ತೋಳ್ಪಡಿತ್ತಾಯರ ಮೇಲೆಯೇ ಬರುತ್ತಿತ್ತು.

ತೋಳ್ಪಡಿತ್ತಾಯರು ಸೋತಿದ್ದು ಅದೇ ಮೊದಲು. ಅವರನ್ನು ಗಾಢವಾಗಿ ಕಾಡಿದ್ದು ತನ್ನನ್ನು ತನ್ನ ಜಾತಿಯವನೇ ಆದವನೊಬ್ಬ ಹೀಗೆ ಅವಮಾನಿಸಿದನಲ್ಲ ಎನ್ನುವ ಸತ್ಯ. ಅವರು ಬ್ರಾಹ್ಮಣರ ಸಂಘ ಕಟ್ಟಿದಾಗ ಬ್ರಾಹ್ಮಣ ವಿರೋಧಿ ಪತ್ರಿಕೆಗಳು ಅದನ್ನು ಖಂಡಿಸಿ ಬರೆದಿದ್ದವು. ಸಾಕಷ್ಟು ಅವಮಾನವನ್ನೂ ಅವರು ಅನುಭವಿಸಿದ್ದರು. ಆದರೆ ಆಗೆಲ್ಲ ತಾನೇನೋ ಮಹತ್ವದ ಸಾಧನೆ ಮಾಡುತ್ತಿದ್ದೇನೆ ಎನ್ನುವ ಭ್ರಮೆಯಲ್ಲಿ ಅವರಿದ್ದರು. ಹೀಗಾಗಿ ಆ ಟೀಕೆ ಕೂಡ ಅವರ ಸಾಧನೆಗೆ ಪೂರಕವಾಗಿಯೇ ಇತ್ತು.

ಆದರೆ ಆನಂದನ ಟೀಕೆಯನ್ನು ಎದುರಿಸುವ ಧೈರ್ಯ ಅವರಲ್ಲಿ ಇರಲಿಲ್ಲ. ಅಷ್ಟು ಹೊತ್ತಿಗಾಗಲೇ ಅವರು ಟೀಕಾತೀತರಾಗಿದ್ದರಿಂದ ಅವರ ಟೀಕಾನಿರೋಧಕ ಗುಣವೂ ಕಡಿಮೆಯಾಗಿತ್ತು . ಒಂದು ಹಂತ ತಲುಪಿದ ನಂತರ ಬರುವ ಟೀಕೆಗಳನ್ನು ಎದುರಿಸುವುದು ಕಷ್ಟ ಅನ್ನುವುದು ಆಗಲೇ ಅವರಿಗೆ ಅರಿವಾದದ್ದು.

ಅವೆಲ್ಲದರ ಪರಿಣಾಮವಾಗಿ ಆನಂದನನ್ನು ಬಿಡಬಾರದು ಅನ್ನುವ ಛಲವೊಂದು ಅವರ ಮನಸ್ಸಿನಲ್ಲಿ ಅಂದೇ ಹೆಡೆಯೆತ್ತಿತು. ಅದಕ್ಕೊಂದು ಕುಟಿಲೋಪಾಯವನ್ನು ಅವರು ಯೋಚಿಸತೊಡಗಿದರು.

ಅದು ಒದಗಿ ಬಂದದ್ದು ತನಿಯ ಮೇರನ ರೂಪದಲ್ಲಿ .

*

ಈ ಮಧ್ಯೆ ರಘುನಂದನ ಬೆಂಗಳೂರಿಗೆ ಹೋದ. ಒಂದು ಕಲಾತ್ಮಕ ಚಿತ್ರವನ್ನು ನಿರ್ದೇಶಿಸುವ ಅವಕಾಶ ಅವನಿಗೆ ಸಿಕ್ಕಿತ್ತು. ಅದನ್ನು ಪೂರ್ತಿಯಾಗಿ ದಕ್ಷಿಣ ಕನ್ನಡದಲ್ಲೇ ನಿರ್ದೇಶಿಸಬೇಕೆಂದು ರಘುನಂದನ ನಿರ್ಧರಿಸಿದ. ದಕ್ಷಿಣ ಕನ್ನಡದಲ್ಲೇ ಆಗಿದ್ದರೆ ಉಪ್ಪಿನಂಗಡಿಯೇ ಏಕಾಗಬಾರದು ಅನ್ನಿಸಿ ರಘುನಂದನ ಪುಳಕಿತನಾದ. ಉಪ್ಪಿನಂಗಡಿ ಅಂದಾಕ್ಷಣ ಅವನಿಗೆ ನೆನಪಾದದ್ದು ನರ್ಮದೆ.

ಅದು ಯಾಕೋ ಅವನನ್ನು ನರ್ಮದೆ ಪದೇ ಪದೇ ಕಾಡಲು ಶುರುಮಾಡಿದ್ದಳು. ಅವಳಲ್ಲಿ ಅಂಥ ಆಕರ್ಷಣೆ ಏನಿದೆ ಅಂತ ಗೊತ್ತಾಗದೇ ಇದ್ದರೂ ರಘುನಂದನನಿಗೆ ಅವಳ ನೆನಪು ಮತ್ತೆ ಮತ್ತೆ ಮರುಕಳಿಸತೊಡಗಿತು. ಅವಳ ಒಂದೊಂದು ಭಂಗಿಗಳೂ ನೆನಪಾಗತೊಡಗಿದವು. ಅವಳ ಜೊತೆ ಕುಮಾರಪರ್ವತಕ್ಕೆ ಹತ್ತಿದ್ದು ತನ್ನ ಜೀವನದ ಅಮೂಲ್ಯ ಗಳಿಗೆಯಲ್ಲೊಂದು ಎಂದು ಅವನಿಗೆ ಭಾಸವಾಗತೊಡಗಿತು. ಹೇಗಾದರೂ ಮಾಡಿ ಆಕೆಯನ್ನು ಸಂಧಿಸಬೇಕು ಎಂದು ಮನಸ್ಸು ಹೇಳತೊಡಗಿತು.

ಲೊಕೇಶನ್‌ ನೋಡುವ ನೆಪದಲ್ಲಿ ನಿರ್ಮಾಪಕರನ್ನೂ ಕರೆದುಕೊಂಡು ಅವನು ಒಂದು ಮುಂಜಾನೆ ಬೆಂಗಳೂರು ಬಿಟ್ಟ . ಸಕಲೇಶಪುರದ ಆಸುಪಾಸು, ಬಿಸಲೆ ಘಾಟಿ, ಸುಬ್ರಹ್ಮಣ್ಯದ ಕಾಡು, ಅಲ್ಲಿಂದಾಚೆಯ ಉಪ್ಪಿನಂಗಡಿಯ ಆಸುಪಾಸನ್ನೆಲ್ಲ ಅವರಿಗೆ ತೋರಿಸಿದ. ಬಯಲು ಸೀಮೆಯಲ್ಲಿ ಹುಟ್ಟಿದ ನಿರ್ಮಾಪಕನಿಗೆ ಆ ಪರಿಸರ ತುಂಬ ಖುಷಿಕೊಟ್ಟಿತು. ತಕ್ಷಣವೇ ತನ್ನ ಚಿತ್ರ ಆರಂಭಿಸಲು ನಿರ್ಧರಿಸಿದ. ಇದಾದ ಒಂದೇ ವಾರದಲ್ಲಿ ಚಿತ್ರಕತೆ, ಸಂಭಾಷಣೆ ಸಿದ್ಧವಾಯಿತು. ರಘುನಂದನ ಮತ್ತು ಅವನ ಮೂವತ್ತು ಮಂದಿಯ ಟೀಮು ಉಪ್ಪಿನಂಗಡಿಗೆ ಹೊರಟು ನಿಲ್ಲಲು ಸನ್ನದ್ಧವಾಯಿತು.

ಇತ್ತ ಆನಂದನ ಪತ್ರಿಕೆಗೆ ಪ್ರಚಾರ ಸಿಕ್ಕುವುದಕ್ಕೂ ರಘುನಂದನನ ಶೂಟಿಂಗು ಕಾರಣವಾಯಿತು. ಶೂಟಿಂಗಿಗೆ ಬೇಕು ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಟ್ಟವನು ಆನಂದ. ಉಳಕೊಳ್ಳುವುದಕ್ಕೆ ಉಪ್ಪಿನಂಗಡಿಯ ಐಬಿಯಲ್ಲೊಂದು ರೂಮು, ಉಳಿದವರಿಗೆ ಆತಿಥ್ಯದಲ್ಲಿ ಒಂದಷ್ಟು ರೂಮುಗಳು, ಅವರ ಊಟಕ್ಕೆ ಲಕ್ಷಿ ್ಮೕನಿವಾಸದಿಂದ ವ್ಯವಸ್ಥೆ, ಶೂಟಿಂಗಿಗೆ ಪಂಚಾಯಿತಿ ಪರ್ಮಿಷನ್ನುಗಳು ಸಿಕ್ಕವು. ಈ ಮಧ್ಯೆ ಆನಂದನ ಪತ್ರಿಕೆಯಲ್ಲಿ ವಿದ್ಯಾನಂದರ ಮದುವೆಯ ಪ್ರಸಂಗ ಧಾರಾವಾಹಿಯಾಗಿ ಪ್ರಕಟವಾಗುತ್ತಿತ್ತು. ಜೊತೆಗೆ ಆಗಾಗ ತೋಳ್ಪಡಿತ್ತಾಯನ ಕುರಿತೂ ಒಂದೆರಡು ಇನ್ಸಿಡೆಂಟುಗಳು ಪ್ರಕಟವಾಗುತ್ತಿದ್ದವು. ಹೀಗಾಗಿ ಆನಂದ ಜನಪ್ರಿಯತೆಯ ಉತ್ತುಂಗದಲ್ಲಿದ್ದ. ಅಧಿಕಾರಿಗಳೂ ಹೆದರಿ ಅವನಿಗೆ ಬೆಂಬಲ ಸೂಚಿಸುತ್ತಿದ್ದರು.

ಇವೆಲ್ಲ ಗಲಾಟೆಯ ನಡುವೆಯೇ ನಿರಂಜನ ಸತ್ತು ಒಂದು ವರುಷ ಕಳೆದಿತ್ತು . ನಿರಂಜನನ ಕೊಲೆಯ ಪ್ರಥಮ ವಾರ್ಷಿಕೋತ್ಸವವನ್ನು ಆಚರಿಸುವುದಕ್ಕೆ ಉಪ್ಪಿನಂಗಡಿಯ ಗಾಂಪಾ ಗೆಳೆಯರು ನಿರ್ಧರಿಸಿದ್ದರು. ಆ ಬಗ್ಗೆ ಆನಂದನ ಸಲಹೆ ಕೇಳುವುದಕ್ಕೆ ಮೋಹನ ಮತ್ತು ಆ್ಯಂಟನಿ ಆ ಸಂಜೆ ಆನಂದನ ಆಫೀಸಿಗೆ ಬಂದರು.

ಅದೇ ರಾತ್ರಿ ರಘುನಂದನ ಬೆಂಗಳೂರಿನಿಂದ ಹೊರಡುವವನಿದ್ದ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Daily Novel series - episode 63
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more