ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರ್ಮದೆಯ ಸೆಳವಿನಲ್ಲಿ ನೆನಪಾದ ಸುಗಂಧಿ

By Super
|
Google Oneindia Kannada News

ನಾಲ್ಕೂ ತಂಡದ ಮುಖ್ಯಸ್ಥರನ್ನು ಕರೆಸಿ ಅವರಿಗೆ ಮುಂದಿನ ಯೋಜನೆಗಳನ್ನು ವಿವರಿಸುವ ಕೆಲಸ ಆನಂದನ ಪಾಲಿಗೆ ಬಂತು. ರಘುನಂದನ ವೆಂಕಪ್ಪಗೌಡರ ಮನೆಗೆ ಹೋಗಿ ಅವರಿಗೆ ಅಲ್ಲಿಗೆ ಬರುವ ನೂರೈವತ್ತು ಮಂದಿಗೆ ಬೇಕುಬೇಕಾದ ಸಿದ್ಧತೆಗಳನ್ನು ಮಾಡುವಂತೆ ಹೇಳುವುದಕ್ಕೆ ಹೊರಟು ಹೋದ.

ತನ್ನ ಮುಂದೆ ಕುಳಿತ ನಾಲ್ವರನ್ನೂ ಆನಂದ ಕಿರುಗಣ್ಣಿಂದ ನೋಡಿದ. ಇಬ್ಬರು ಹುಡುಗರೂ ಅವನಿಗೆ ಪರಿಚಿತರೇ. ಮತ್ತೊಬ್ಬ ಬಂಟ್ವಾಳದಿಂದ ಬಂದವನು. ಕಾಲೇಜು ಹುಡುಗನಂತಿದ್ದ. ಅವನ ಹಿಂದೆ ಕುಳಿತಿದ್ದ ನರ್ಮದೆಯನ್ನು ಆನಂದ ಕಣ್ಣೆತ್ತಿ ನೋಡಿದ.

ಒಂದು ಕ್ಷಣ ಆನಂದ ನಖಶಿಖಾಂತ ಕಂಪಿಸಿದ. ಅವನು ನರ್ಮದೆಯನ್ನು ನೋಡಿದ್ದು ಅದೇ ಮೊದಲು. ಆಕೆಯ ಹಿನ್ನೆಲೆಯೇ ಅವನಿಗೆ ಗೊತ್ತಿರಲಿಲ್ಲ. ಆಕೆ ತನ್ನ ಚಿಕ್ಕಪ್ಪನ ಮಗಳು ಅನ್ನುವುದೂ ಅವನಿಗೆ ಅರಿವಿರಲಿಲ್ಲ. ಹಾಗೆ ನೋಡಿದರೆ ಗುರುವಾಯೂರಿನಲ್ಲಿ ತನಗೊಬ್ಬ ಚಿಕ್ಕಪ್ಪನಿದ್ದಾನೆ ಅನ್ನುವುದು ಆನಂದನಿಗೆ ಗೊತ್ತೇ ಇರಲಿಲ್ಲ. ಆಗಾಗ ಅಪ್ಪಯ್ಯ ಕೇರಳಕ್ಕೆ ಹೋಗಿ ಬರುತ್ತಾರೆನ್ನುವುದು ಗೊತ್ತಿದ್ದರೂ ಆನಂದನೆಂದೂ ಕೇರಳಕ್ಕೆ ಕಾಲಿಟ್ಟಿರಲಿಲ್ಲ. ಅಲ್ಲದೇ ಚಂಡಿಕಾಹೋಮ ನಡೆದು ಅದಕ್ಕಾಗಿ ಚಿಕ್ಕಪ್ಪ ಕುಟುಂಬ ಸಮೇತನಾಗಿ ಉಪ್ಪಿನಂಗಡಿಗೆ ಬಂದು ತಳವೂರಿದ ಸಂಗತಿ ಅವನ ಗಮನಕ್ಕೆ ಬರುವ ಸಾಧ್ಯತೆಯಂತೂ ಇರಲೇ ಇಲ್ಲ.

ಹಾಗೇ ನರ್ಮದೆಗೂ ಆನಂದನ ಹಿನ್ನೆಲೆ ಗೊತ್ತಿರಲಿಲ್ಲ . ಅವಳಿಗೆ ಈ ಅಭಿಯಾನವನ್ನು ಯಾರು ಆಯೋಜಿಸಿದ್ದಾರೆ ಅನ್ನುವುದೂ ಗೊತ್ತಿರಲಿಲ್ಲ . ಅವಳ ಕಾಲೇಜಿನ ಇಂಗ್ಲಿಷ್‌ ಅಧ್ಯಾಪಕರು ನೀವೆಲ್ಲ ಸುಬ್ರಹ್ಮಣ್ಯಕ್ಕೆ ಹೋಗಿ. ನಾನು ಬರಲಾಗುವುದಿಲ್ಲ. ಬಂದರೆ ನನ್ನ ಕೆಲಸ ಹೋಗುತ್ತದೆ. ಆದರೆ ನೀವು ಇಂಥದ್ದರಲ್ಲಿ ಭಾಗವಹಿಸಬೇಕು ಅಂತ ಗುಟ್ಟಾಗಿ ಹೇಳಿದಾಗ ಅವರ ಮಾತನ್ನು ಚಾಚೂ ತಪ್ಪದೆ ಪಾಲಿಸುವ ಇತರ ವಿದ್ಯಾರ್ಥಿಗಳಂತೆ ಅವಳೂ ಸುಬ್ರಹ್ಮಣ್ಯಕ್ಕೆ ಬಂದಿದ್ದಳು ಅಷ್ಟೇ.

ನರ್ಮದೆಯನ್ನು ನೋಡುತ್ತಿದ್ದ ಹಾಗೆ ಆನಂದನಿಗೆ ಸುಗಂಧಿ ನೆನಪಾದಳು. ಸುಗಂಧಿ ಅಂತ ಸುಂದರಿಯೇನೂ ಆಗಿರಲಿಲ್ಲ . ಆದರೆ ಅವಳಲ್ಲಿ ಒಂದು ವಿಲಕ್ಷಣ ಆಕರ್ಷಣೆಯಿತ್ತು. ಆದರೆ ನರ್ಮದೆಯಲ್ಲಿ ಆ ಆಕರ್ಷಣೆಯಿರಲಿಲ್ಲ . ಆದರೆ ಅವಳ ಸೌಂದರ್ಯವೇ ವಿಲಕ್ಷಣವಾಗಿದೆ ಅಂದುಕೊಂಡ ಆನಂದ. ಆಕೆ ತನ್ನನ್ನು ಅಕಾರಣ ಸೆಳೆಯುತ್ತಿದ್ದಾಳೆ ಅನ್ನಿಸಿತು. ಆ ಸೆಳೆತದಲ್ಲಿ ತ ಾನು ಕರಗಿಹೋಗುತ್ತಿದ್ದೇನೆ ಅನ್ನಿಸಿತು. ಸೀತಾರಾಮ ಮುಳುಗಿ ಸತ್ತ ಕುಮಾರಧಾರೆಯ ಚಕ್ರಸುಳಿಯ ಆಕರ್ಷಣೆಯನ್ನು ಅವಳಲ್ಲಿ ಕಂಡಂತಾಗಿ ಆನಂದ ಕಣ್ಣು ಹೊರಳಿಸಿದ.

ತನ್ನ ಕಾರ್ಯಕ್ರಮವನ್ನು ಆನಂದ ಒಂದಿನಿತೂ ತಪ್ಪಿಲ್ಲದಂತೆ ವಿವರಿಸಿದಾಗ ನಾಲ್ವರೂ ತಲೆದೂಗಿದರು. ನರ್ಮದೆ ಮಾತ್ರ ಇದ್ಯಾವುದೂ ತನಗೆ ತಟ್ಟುವಂಥದ್ದಲ್ಲ ಎಂಬಂತೆಯೂ ತಾನು ಈ ಜಗತ್ತನ್ನೇ ಮೀರಿದವಳು ಎಂಬಂತೆಯೂ ಕುಳಿತಿದ್ದಳು. ಅವಳ ನಿರಾಸಕ್ತ ಉಡಾಫೆಯಿಂದ ಕೊಂಚ ಕಿರಿಕಿರಿಯೂ ಅವಮಾನವೂ ಆದಂತಾಗಿ ಆನಂದ ನರ್ಮದೆಯನ್ನು ಉದ್ದೇಶಿಸಿ ಕೇಳಿದ;

'ನಾನು ಹೇಳಿದ್ದೆಲ್ಲ ನೆನಪಿದೆ ತಾನೆ? ನೀನೇನೂ ನೋಟ್ಸು ಮಾಡಿಕೊಳ್ಳುವ ಹಾಗೆ ಕಾಣುತ್ತಿಲ್ಲ . ಆಸಕ್ತಿ ಇಲ್ಲದಿದ್ದರೆ ಬೇರೆ ಯಾರನ್ನಾದರೂ ಮುಂದಾಳತ್ವ ವಹಿಸಿಕೊಳ್ಳಲು ಹೇಳುತ್ತೇನೆ."

ನರ್ಮದೆ ನಕ್ಕಳು. ಆಕೆ ಸಿಟ್ಟಾಗುತ್ತಾಳೆ ಅಂದುಕೊಂಡಿದ್ದ ಆನಂದನಿಗೆ ಗಾಬರಿಯೂ ಅವಮಾನವೂ ಆಗುವಂತೆ ನರ್ಮದೆ ಸುಖವಾಗಿ ನಕ್ಕಳು.

'ಇದರಲ್ಲಿ ನೋಟ್ಸು ಮಾಡಿಕೊಳ್ಳಲಿಕ್ಕೆ ಎಂಥದುಂಟು. ನೀವು ಹೇಳಿದ ಕಾರ್ಯಕ್ರಮದ ಪಟ್ಟಿ ತಲೆಯಲ್ಲಿ ರಿಜಿಸ್ಟರ್‌ ಆಗಿದೆ. ನಾನು ನಾಳೆ ಅಲ್ಲಿ ಮಾತಾಡಬೇಕಾಗಿ ಬಂದರೆ ಏನಂತ ಮಾತಾಡಲಿ ಅಂತ ಲೆಕ್ಕ ಹಾಕುತ್ತಾ ಕೂತಿದ್ದೇನೆ, ನನಗೊಂದು ಪಶ್ಚಿಮ ಘಟ್ಟ , ಕುದುರೆಮುಖ, ಸಹ್ಯಾದ್ರಿಯ ವಿವರವಾದ ಮ್ಯಾಪು ಸಿಕ್ಕಿದರೆ ಚೆನ್ನಾಗಿತ್ತು. ಅರೆಬರೆ ಜ್ಞಾನದೊಂದಿಗೆ ಮಾತಾಡೋದು ನನಗೆ ಇಷ್ಟವಾಗೋಲ್ಲ" ಅಂದಳು ನರ್ಮದೆ.

ನರ್ಮದೆ ತನಗಿಂತಲೂ ಮುಂದಿದ್ದಾಳೆ ಅಂತ ಆನಂದನಿಗೆ ಒಂದು ಕ್ಷಣ ಅಚ್ಚರಿಯಾಯಿತು. ಹೀಗೆ ಸೌಂದರ್ಯವೇ ಸಾಕಾರಗೊಂಡಂತೆ ಕುಳಿತ ಈಕೆಯಾಳಗೆ ಆ ಸೌಂದರ್ಯಪ್ರಜ್ಞೆಯನ್ನೂ ಮೀರಿಸುವ ಪರಿಸರಪ್ರಜ್ಞೆ ಇದೆಯೇ ಎಂದು ಆತ ಬೆರಗಾದ. ಆ ಬಗ್ಗೆ ಅವನಿಗೆ ಅನುಮಾನಗಳಿದ್ದವು. ಎಷ್ಟೋ ಸಾರಿ ಆತ ತನ್ನ ಸೌಂದರ್ಯದಲ್ಲೇ ಎಲ್ಲವನ್ನೂ ಸಾಕ್ಷಾತ್ಕಾರಗೊಳಿಸಲಿಕ್ಕೆ ಯತ್ನಿಸುವ ಹುಡುಗಿಯರನ್ನು ಕಂಡಿದ್ದ. ತಮ್ಮ ಸಿರಿವಂತಿಕೆಯ ಮೂಲಕವೇ ಎಲ್ಲವನ್ನೂ ತಲುಪಲೆತ್ನಿಸುವ ಹುಡುಗರಷ್ಟೇ ಎಳಸಾಗಿ ಅವರು ಆನಂದನಿಗೆ ಕಂಡಿದ್ದರು. ಸಂಪತ್ತಿನ ಮೂಲಕ ಗೆಲ್ಲ ಹೊರಡುವ ಹುಡುಗರು ಮತ್ತು ಸೌಂದರ್ಯದ ಮೂಲಕ ಗೆಲ್ಲ ಬಯಸುವ ಹುಡುಗಿಯರು ಬಹಳ shallow ಆಗಿರುತ್ತಾರೆ ಮತ್ತು ಬಹಳ ಬೇಗ ಬೋರಾಗುತ್ತಾರೆ ಅನ್ನುವುದನ್ನು ಅವನು ಮತ್ತೆ ಮತ್ತೆ ಹೇಳುತ್ತಿದ್ದ.

ನರ್ಮದೆ ತನ್ನ ಚೆಲುವಿನಾಚೆಗೂ ಸಂವಹಿಸಬಲ್ಲಳು ಅನ್ನುವುದೇ ಅವನಿಗೆ ಖುಷಿಕೊಟ್ಟಿತು. ಅವಳ ಹತ್ತಿರ ಮತ್ತೆ ವಿವರವಾಗಿ ಮಾತನಾಡಬಹುದು ಅನ್ನಿಸಿ ಮಾರನೆ ದಿನದ ಸಿದ್ಧತೆಗೆ ಬೇಕಾದ ವಿವರಗಳನ್ನೆಲ್ಲ ಹೇಳಿ ಅವರನ್ನು ಕಳುಹಿಸಿಕೊಟ್ಟ. ಹೊರಟು ಹೋಗುವ ಹೊತ್ತಿಗೆ ನರ್ಮದೆ ತನ್ನನ್ನು ತಿರುಗಿ ನೋಡಿ ನಕ್ಕಂತೆ ಆನಂದನಿಗೆ ಭಾಸವಾಯಿತು. ಆದರೆ ಅದನ್ನು ನೆನಪಿಟ್ಟುಕೊಳ್ಳುವ ತಾಳ್ಮೆ ಮತ್ತು ಮನಸ್ಥಿತಿಯಲ್ಲಿ ಅವನಿರಲಿಲ್ಲ.

ತುಂಬ ರಾತ್ರಿಯಾಗುತ್ತಿದ್ದಂತೆ ರಘುನಂದನ ಮರಳಿ ಬಂದ. ಅನುಮತಿ ಕೊಡುವುದಕ್ಕೆ ಪೊಲೀಸರು ತಕರಾರು ಮಾಡಿದ್ದಾಗಿಯೂ ತಾನು ಬೆಂಗಳೂರಿಗೆ ಫೋನ್‌ ಮಾಡಿಸಿ ಅನುಮತಿ ಕೊಡುವಂತೆ ಮಾಡಿದ್ದನ್ನೂ ಹೇಳಿಕೊಂಡ. ಹೊಳ್ಳ ಇದ್ದಕ್ಕಿದ್ದ ಹಾಗೆ ಯಾಕೆ ಉಲ್ಟ ಹೊಡೆಯುತ್ತಿದ್ದಾನೆ ಅನ್ನುವುದು ಆನಂದನಿಗೆ ಗೊತ್ತಾಗಲಿಲ್ಲ . ಉಪ್ಪಿನಂಗಡಿಯಲ್ಲಿದ್ದಾಗ ಎಷ್ಟೊಂದು ಸಾಧುವಾಗಿದ್ದ. ಅಂದರೆ ಈ ಒಂದೂವರೆ ವರುಷದಲ್ಲಿ ಮಹತ್ವದ ಬದಲಾವಣೆ ಏನಾದರೂ ಆಗಿರಬಹುದೇ? ಹೊಳ್ಳನನ್ನು ಪವರ್‌ಫುಲ್‌ ಆಗಿ ಮಾಡುವಂಥ ಘಟನೆಯಾಂದು ಸಂಭವಿಸಿರಬಹುದೆ?

'ಹೊಳ್ಳ ಬೆಕ್ಕಿನ ಥರ ಇದ್ದವನು, ಯಾಕೆ ಹೀಗಾದ?" ಆನಂದ ಕೇಳಿದ.

'ನೀನು ಊರು ಬಿಟ್ಟು ಹೋದಾಗ ಏನೇನು ನಡೆಯಿತು ಗೊತ್ತಾ ? ಉಪ್ಪಿನಂಗಡಿಯಲ್ಲೊಂದು ದಶಸಹಸ್ರ ಚಂಡಿಕಾಯಾಗ ಏರ್ಪಾಡಾಯಿತು. ಅದರ ನೇತೃತ್ವ ವಹಿಸಿದ್ದು ನಿನ್ನ ಅಪ್ಪಯ್ಯ. ಆಗ ಮುಖ್ಯಮಂತ್ರಿಗಳೂ ಗೃಹಸಚಿವರೂ ಉಪ್ಪಿನಂಗಡಿಗೆ ಬಂದಿದ್ದರು. ಅವರ ಆತಿಥ್ಯ ನೋಡಿಕೊಂಡದ್ದು ಇದೇ ಹೊಳ್ಳ. ಈಗಂತೂ ಹೊಳ್ಳ ಗೃಹ ಸಚಿವರ ಪಾಲಿಗೆ ದಕ್ಷಿಣ ಕನ್ನಡದ ಸೂಪರ್‌ ಸ್ಪೈ. ಇಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳನ್ನು ಆತ ವರದಿ ಮಾಡುತ್ತಾನೆ. ಪೊಲೀಸ್‌ ಇಲಾಖೆಯ ಟ್ರಾನ್ಸ್‌ಫರ್‌ಗಳನ್ನು ನಿರ್ಧರಿಸುವವನೂ ಅವನೇ" ರಘು ವಿವರಿಸುತ್ತಾ ತನ್ನ ಅನುಮಾನವನ್ನು ಮುಂದಿಟ್ಟ.

'ಹೌದೂ..... ಸುಗಂಧಿಯ ಕೊಲೆಯ ಆರೋಪ ಹೊತ್ತು ಓಡಿಹೋದವನು ನೀನೆಲ್ಲಿಗೆ ಹೋಗಿದ್ದೆ?"

ಆನಂದ ಥಟ್ಟನೆ ತಿರುಗಿ ರಘುವಿನ ಮುಖವನ್ನೇ ನೋಡಿದ. ಕತ್ತಲಲ್ಲಿ ಅದು ಕರಗಿಹೋಗಿತ್ತು.

English summary
A Kannada novel series to go online on thatskannada.com from 3rd november 2002
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X