• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದು ಅವಕಾಶಕ್ಕಾಗಿ ಕಾಯೋಣ

By Super
|

ಕೆಲವೊಂದು ಬಾರಿ ನಾವು ಎಷ್ಟು ವಿಚಿತ್ರವಾಗಿ ಯೋಚಿಸುತ್ತೇವೆ ಎಂದು ಊಹಿಸಿದರೆ ನಮಗೇ ಆಶ್ಚರ್ಯವಾಗುತ್ತದೆ. ರಘುನಂದನ ಮತ್ತು ಆನಂದ ಇಬ್ಬರೂ ಹಾಗೆ ಜಗಳವಾಡಬೇಕಾದ ಅಗತ್ಯವೇ ಇರಲಿಲ್ಲ . ಹಾಗಂತ ನಿಧಾನವಾಗಿ ಆನಂದನಿಗೂ ಅನ್ನಿಸತೊಡಗಿತು. ಆದರೆ ಇಬ್ಬರೂ ಹಿಂದಿರುಗಿ ಬರಲಾರದಷ್ಟು ಮುಂದೆ ಹೋಗಿಬಿಟ್ಟಿದ್ದೇವೆ ಅನ್ನುವುದೂ ಅವನಿಗೆ ಗೊತ್ತಾಗಿತ್ತು. ಮತ್ತೆ ತಮ್ಮಿಬ್ಬರ ನಡುವೆ ಮೊದಲಿನಂತೆ ಸ್ನೇಹ ಬೆಸೆಯುವುದು ಸಾಧ್ಯವೇ ಇಲ್ಲ. ಎಂಥ ಸ್ನೇಹವಿದ್ದರೂ ಆಳದಲ್ಲೊಂದು ಹುಳಿ ಇದ್ದೇ ಇರುತ್ತದೆ.

ಜಗಳವಾಡಿದರೂ ಉಳಿಯುವ ಸಂಬಂಧವೆಂದರೆ ದಾಂಪತ್ಯವೊಂದೇ ಅಂದುಕೊಂಡ. ಬಹುಶಃ ದಾಂಪತ್ಯದಲ್ಲಿ ಮಾತು ಅರ್ಥ ಕಳಕೊಂಡಿರುತ್ತದೆಯೋ ಏನೋ. ಯಾಕೆಂದರೆ ಮಾತು ಆಡಿ ಆಡಿ ಸವಕಲಾಗಿ ಹೋಗಿರುತ್ತದೆ. ಯಾವ ಮಾತಿಗೂ ಅದರ ಮೂಲ ಅರ್ಥ ಉಳಿದಿರುವುದಿಲ್ಲ. ಆದರೆ ಬೇರೆ ಸಂದರ್ಭದಲ್ಲಿ ಹಾಗಲ್ಲ . ಅಲ್ಲಿ ಒಂದೊಂದು ಮಾತೂ ಸ್ಪಷ್ಟವಾಗಿ ಅದರ ಎಲ್ಲ ಅರ್ಥಗಳನ್ನೂ ಆವಾಹಿಸಿಕೊಂಡೇ ಇನ್ನೊಬ್ಬರನ್ನು ತಲುಪುತ್ತದೆ.

ಹೀಗೆಲ್ಲ ಯೋಚಿಸುತ್ತಲೇ ಅವನು ಆ ಸಂಚಿಕೆಯನ್ನು ಸಿದ್ಧಪಡಿಸುವುದರಲ್ಲಿ ಮಗ್ನನಾದ. ಎಲ್ಲವನ್ನೂ ಮರೆಯುವುದಕ್ಕೆ ದುಡಿಮೆಗಿಂತ ದೊಡ್ಡ ಮಾರ್ಗವಿಲ್ಲ ಎಂಬುದು ಅವನಿಗೆ ಅನುಭವದಿಂದ ಗೊತ್ತಾಗಿತ್ತು . ದುಡಿಯುತ್ತಾ ನಮ್ಮ ಸುತ್ತಲಿನ ಕ್ಷುದ್ರತೆಯನ್ನೂ ಸಣ್ಣತನವನ್ನೂ ಮೀರಬಹುದು. ದುಡಿಯುತ್ತಾ ದೊಡ್ಡವರಾಗಬಹುದು. ದುಡಿಯುತ್ತಾ ಎಲ್ಲವನ್ನೂ ಎಲ್ಲರನ್ನೂ ದಾಟಬಹುದು ಅಂತ ಅವನು ಯಾವತ್ತೋ ಕಂಡುಕೊಂಡಿದ್ದ . ಹಾಗಿದ್ದರೂ ಒಮ್ಮೊಮ್ಮೆ ಮನಸ್ಸನ್ನು ಆವರಿಸಿ ಹಿಂಸಿಸುವ ಸಣ್ಣತನ ಯಾಕೆ ನೀಗಿಕೊಳ್ಳಲಾಗುವುದಿಲ್ಲ.

ಅಂಥ ಸಣ್ಣತನದಿಂದಲೇ ತಾನು ರಘುನಂದನನನ್ನು ಛೇಡಿಸಿರಬಹುದೇ? ಅಥವಾ ಅವನನ್ನೂ ಮೀರಿ ನಿಲ್ಲಬೇಕು ಅನ್ನುವ ಆಳದ ಆಸೆ ಅದಕ್ಕೆ ಕಾರಣವೇ? ತನ್ನ ಕುಟುಂಬಕ್ಕೆ ಸೇರಿದ ಹುಡುಗಿಯಾಬ್ಬಳನ್ನು ಆತ ಬಳಸಿಕೊಳ್ಳುತ್ತಿದ್ದಾನೆ ಅನ್ನುವ ಸುಪ್ತ ಸಿಟ್ಟಿನಿಂದ ಹಾಗೆ ಅರಚಾಡಿದೆನೇ?

ಉತ್ತರ ಸಿಗದ ಪ್ರಶ್ನೆಗಳಿಗೆ ಸೊಪ್ಪು ಹಾಕಬಾರದು ಅಂದುಕೊಂಡು ಆತ ಮತ್ತೆ ಬರೆಯಲು ಕುಳಿತ. ರಘುನಂದನನ ಬಗ್ಗೆ ಬರೆಯಬೇಕು ಅನ್ನಿಸಿತು. ಇಂಥ ಹೊತ್ತಲ್ಲಿ ಬರೆದರೆ ಮನಸ್ಸು ಪೂರ್ವಗ್ರಹದಿಂದ ಕೂಡಿರುತ್ತದೆ. ಹೊಗಳಿ ಬರೆದರೂ ತಪ್ಪಾಗುತ್ತದೆ, ಬೈದು ಬರೆದರೂ ತಪ್ಪಾಗುತ್ತದೆ. ಅವನ ಪ್ರಸ್ತಾಪ ಮಾಡದೇ ಇದ್ದರೇ ಒಳ್ಳೆಯದು. ಅವನ ಕುರಿತು ಬರೆಯೋದಕ್ಕೆ ಅಂದುಕೊಂಡ.

*

ನಿಮ್ಹಾನ್ಸಿನಲ್ಲಿ ತನಗೆ ಪರಿಚಯವಿದ್ದ ವೈದ್ಯರಿಗೆ ನರ್ಮದೆಯನ್ನು ತೋರಿಸುವ ಹೊತ್ತಿಗೆ ಅವಳು ಗುಣಮುಖಳಾಗಲಿ ಎಂಬ ಆಶೆಯ ಹೊರತು ರಘುನಂದನನ ಮನಸ್ಸಿನಲ್ಲಿ ಬೇರೆ ಯಾವ ಭಾವನೆಯೂ ಇರಲಿಲ್ಲ . ಮೀರಾಳಂತೂ ಕೈಲಿ ಕಾಸಿಲ್ಲದೆ ಇದ್ದುದರಿಂದ ಭೇಟಿಯಾದ ಡಾಕ್ಟರಿಗೆಲ್ಲ ಕಡಿಮೆ ಖರ್ಚಲ್ಲಿ ಗುಣವಾಗುವಂತೆ ಮಾಡಿ ಎಂದು ಒಂದು ಸಾಲು ಸೇರಿಸಿಯೇ ಮಾತಾಡುತ್ತಿದ್ದಳು.

ಒಂದಷ್ಟು ಪರೀಕ್ಷೆಗಳನ್ನು ಮಾಡಿದ ನಂತರ ಡಾ. ನಂದಕಿಶೋರ್‌ ಚೌರಾಸಿಯಾ ಎರಡು ದಿನ ಬಿಟ್ಟು ಬನ್ನಿ ಅಂದರು. ಆ ಎರಡು ದಿನಗಳ ಕಾಲ ಎಲ್ಲಿರುವುದು ಅಂತ ತಿಳಿಯದೇ ತನ್ನ ಗೆಳೆಯನ ಹೊಟೆಲಿನಲ್ಲೊಂದು ರೂಮು ಮಾಡಿ ಅಲ್ಲಿ ಮೀರಾಳನ್ನೂ ನರ್ಮದೆಯನ್ನೂ ಇರಿಸಿ, ರಘುನಂದನ ಮಲ್ಲೇಶ್ವರಂನಲ್ಲಿರುವ ತನ್ನ ಹಳೆಯ ಗೆಳೆಯರನ್ನು ನೋಡಲು ಹೋದ. ಅವನಿಗೆ ಬರಬೇಕಾಗಿದ್ದ ಹಳೆಯ ಬಾಕಿ ವಸೂಲಿಯ ಕೆಲಸವನ್ನೂ ಆ ಎರಡು ದಿನಗಳಲ್ಲಿ ಮಾಡಬಹುದು ಎಂಬ ಆಸೆ ಅವನಿಗಿತ್ತು.

ಆದರೆ ಅವನ ಚಿತ್ರಗಳ ನಿರ್ಮಾಪಕರು ಅವನಿಗೆ ಸಿಗಲಿಲ್ಲ . ಅವರು ಊರಲ್ಲೇ ಇಲ್ಲ ಅನ್ನುವುದು ಗೊತ್ತಾಯಿತು. ಬೇರೆ ನಿರ್ಮಾಪಕರು ಸಿಕ್ಕವರು ಕ್ಯಾಸೆಟ್‌ ತಂದಿಟ್ಟಿದ್ದೇವೆ, ನೋಡಿ ಒಂದೆರಡು ರೀಮೇಕಿಗೆ ಚಿತ್ರಕತೆ ಬರೆದುಕೊಡಿ ಅಂತ ದುಂಬಾಲು ಬಿದ್ದರು. ರೇಜಿಗೆಯಾಗಿ ರಘುನಂದನ ಅತ್ತ ತಲೆಹಾಕುವುದೇ ವೇಸ್ಟು ಅಂತ ಸುಮ್ಮನಾದ.

ಅಷ್ಟರಲ್ಲಿ ಎರಡು ದಿನಗಳು ಉರುಳಿದ್ದವು. ಡಾಕ್ಟರ್‌ ಹೇಳಿದ ಮುಂಜಾನೆ ನಿಮ್ಹಾನ್ಸಿಗೆ ಹೋದಾಗ ಅಲ್ಲಿ ನಂದಕಿಶೋರ್‌ ರಿಪೋರ್ಟುಗಳನ್ನೆಲ್ಲ ಇಟ್ಟುಕೊಂಡು ಕಾಯುತ್ತಿದ್ದರು.

ಅವರ ಮುಖದಲ್ಲಿ ಬೆಳದಿಂಗಳಿನಂಥ ಮಂದಹಾಸವಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Daily Novel series - episode 73

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more