ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಸರ ಹೋರಾಟಕ್ಕೆ ನಡೆದ ಬಲಿದಾನವೇ ?

By Super
|
Google Oneindia Kannada News

ಸೀತಾರಾಮ ಆ ಮುಸ್ಸಂಜೆ ಹೊಳೆಯ ಹತ್ತಿರ ಹೋಗಿದ್ದು ಯಾಕೆ ? ಅವನು ಹೇಗೆ ಹೊಳೆಗೆ ಬಿದ್ದ ? ಅವನಿಗೆ ಈಜುವುದಕ್ಕೆ ಗೊತ್ತಿದ್ದರೂ ಅಷ್ಟೇನೂ ಸೆಳವಿಲ್ಲದ ಹೊಳೆಯಲ್ಲಿ ಹೇಗೆ ಕೊಚ್ಚಿಕೊಂಡು ಹೋದ ? ಅದನ್ನು ನೋಡುತ್ತಾ ನಿಂತಿದ್ದವರು ಆಗ ಏನು ಮಾಡುತ್ತಿದ್ದರು?

ಇವೇ ಮುಂತಾದ ಪ್ರಶ್ನೆಗಳು ಆನಂದನನ್ನು ಕಾಡಿದವು. ಆದರೆ ಅದು ಪ್ರಶ್ನೆಗಳನ್ನು ಕೇಳಿಕೊಳ್ಳುವ ಹೊತ್ತಲ್ಲ ಅನ್ನುವುದು ಅವನಿಗೆ ಗೊತ್ತಿತ್ತು. ತಕ್ಷಣ ಮಾಡಬೇಕಾದ್ದೆಂದರೆ ಸೀತಾರಾಮನಿಗಾಗಿ ಹೊಳೆಯಲ್ಲಿ ಹುಡುಕಾಟ ನಡೆಸುವುದು. ಅವನ ಹೆಣ ಸಿಗುತ್ತದಾ ಅಂತ ನೋಡುವುದು. ಎಲ್ಲಕ್ಕಿಂತ ಮುಂಚೆ ಅವನ ಮನೆಯವರಿಗೆ ವಿಷಯ ತಿಳಿಸಿ, ಅವರು ಕಂಗಾಲಾಗದಂತೆ ಸಾಂತ್ವನ ಹೇಳುವುದು. ಪೊಲೀಸು ಕಂಪ್ಲೇಂಟು ಕೊಟ್ಟು ಹೀಗಾಗಿದೆ ಅಂತ ರೆಕಾರ್ಡು ಮಾಡುವುದು.

ಗಾಬರಿಯಲ್ಲಿ ನಡುಗುತ್ತಲೇ ಆನಂದ ಹೊಳೆಬದಿಗೆ ಹೋದ. ಕುಮಾರಧಾರೆಗೆ ಅಂಥ ಸೆಳೆತವೇನೂ ಇರಲಿಲ್ಲ. ಆದರೆ ಕೊಂಚ ಎತ್ತರದಿಂದ ತಗ್ಗಿಗೆ ಹರಿಯುತ್ತಿದ್ದುದರಿಂದ ಸ್ವಲ್ಪವೇ ನೀರಿದ್ದರೂ ಕಾಲು ಜಾರಿದರೆ ಆಯತಪ್ಪಿ ಕೊಚ್ಚಿಕೊಂಡು ಹೋಗುವ ಅಪಾಯವಿತ್ತು. ನೋಡುತ್ತಿದ್ದ ಆನಂದನಿಗೆ ಎತ್ತರದಿಂದ ಇಳಿದ ಕುಮಾರಧಾರೆ ಇದ್ದಕ್ಕಿದ್ದಂತೆ ಎಡಕ್ಕೆ ತಿರುಗಿ ಹರಿಯುತ್ತಿರುವುದು ಕಾಣಿಸಿತು. ಸೀತಾರಾಮನಿಗೆ ಏನಾಗಿದೆ ಅಂತ ಊಹಿಸುವುದೇನೂ ಅವನಿಗೆ ಕಷ್ಟವಾಗಲಿಲ್ಲ.

ನದಿಯ ಅಪಾಯವೇ ಅದು. ತಣ್ಣಗೆ ಹರಿಯುವ ನದಿಯಲ್ಲಿ ಎಲ್ಲಿ ಸುಳಿಗಳಿರುತ್ತವೆ ಅಂತ ಹೇಳಲಿಕ್ಕಾಗುವುದಿಲ್ಲ. ನದಿ ಒಂದೊಂದು ತಿರುವು ತೆಗೆದುಕೊಂಡಾಗೆಲ್ಲ ಅಲ್ಲಿ ವಿಚಿತ್ರ ರೀತಿಯಲ್ಲಿ ಸುಳಿಯಾಂದು ಸೃಷ್ಟಿಯಾಗುತ್ತದೆ. ಕೆಲವೊಮ್ಮೆ ಸುಳಿ ಮೇಲ್ನೋಟಕ್ಕೆ ಕಾಣಿಸುತ್ತದೆ. ಎಲೆಯನ್ನೋ ತೇಲುವಂಥ ಇನ್ನೇನನ್ನೋ ಎಸೆದರೆ ಅದು ಗಿರಗಿರ ತಿರುಗತೊಡಗುತ್ತದೆ. ಆದರೆ ಕೆಲವು ಒಳಸುಳಿಗಳು ಕಣ್ಣಿಗೆ ಕಾಣುವುದಿಲ್ಲ. ಈಜುಕೊಳದ ನೀರಿನಂತೆ ಅಪ್ಯಾಯಮಾನವಾಗಿ ಕಾಣುವ ನೀರಿನಾಳದಲ್ಲಿ ಎಂಥ ಈಜುಗಾರನನ್ನೂ ಆಳಕ್ಕೆಳೆದು ಮುಳುಗಿಸಬಲ್ಲ ಬಲವಾದ ಚಕ್ರಸುಳಿ ಇರುತ್ತದೆ.

ತನ್ನ ಜೊತೆ ಬಂದ ಹುಡುಗರಿಗೆ ಆನಂದ ಹೇಳಿದ; ಅಲ್ಲಿ ನೋಡಿ, ನೀರು ನಿಂತಂತೆ ಕಾಣುತ್ತದಲ್ಲ. ಅಲ್ಲಿ ತಾನೆ ಸೀತಾರಾಮ ನೀರಿಗಿಳಿದದ್ದು?

ಹುಡುಗರು ಇರಬಹುದು ಎಂಬಂತೆ ತಲೆಯಾಡಿಸಿದರು. ಅವರಿಗೂ ಸ್ಪಷ್ಟವಾಗಿ ಗೊತ್ತಿರಲಿಲ್ಲ.

'ಅಲ್ಲೆ ಇಳಿದಿರಬೇಕು. ಯಾಕೆಂದರೆ ಅಲ್ಲಿ ಚಕ್ರ ಸುಳಿಯಿದೆ. ಅದರಿಂದ ತಪ್ಪಿಸಿಕೊಳ್ಳುವುದು ಕಷ್ಟ. ಚಕ್ರಸುಳಿಗೆ ಸಿಕ್ಕಿದ್ದೇ ಆದರೆ ಸೀತಾರಾಮನ ದೇಹ ಕೊಚ್ಚಿಕೊಂಡು ಹೋಗಿರುವ ಸಾಧ್ಯತೆಯಿಲ್ಲ. ಸುಳಿಯ ಹಿಕ್ಮತಿ ಬಲ್ಲ ಈಜುಗಾರರನ್ನು ಕರೆಸಿ ನೀರಿಗಿಳಿಸಿದರೆ ಸೀತಾರಾಮನ ಹೆಣ ಅಲ್ಲೇ ಸಿಗಬಹುದು. ಯಾರಾದರೂ ಈಜುಗಾರರಿದ್ದರೆ ಕರೆದುಕೊಂಡು ಬನ್ನಿ" ಎಂದು ಆನಂದ ಹುಡುಗರನ್ನು ಅಟ್ಟಿದ.

ಕುಮಾರಧಾರೆಗೆ ಬಹಳಷ್ಟು ಜೀವಗಳನ್ನು ತೆಗೆದುಕೊಂಡ ಅಪಕೀರ್ತಿ ಇದ್ದದ್ದಂತೂ ನಿಜ. ವರ್ಷಕ್ಕೆ ಇಬ್ಬರನ್ನಾದರೂ ಆ ನದಿ ಬಲಿತೆಗೆದುಕೊಳ್ಳುತ್ತದೆ ಅನ್ನುವ ವದಂತಿ ಬಹಳ ವರ್ಷಗಳಿಂದ ಸುಳ್ಳಾಗಿರಲಿಲ್ಲ. ಅದು ಕುಮಾರಾಧಾರೆಗೆ ಇಳಿಯುವ ಹುಡುಗರ ಉಡಾಫೆಯೂ ಅಥವಾ ನದಿಯ ಅಹಂಕಾರವೋ, ಬಲಿಯಂತೂ ಖಚಿತವಾಗಿತ್ತು. ಆನಂದ ನದಿಯನ್ನೇ ನೋಡುತ್ತಾ ಕುಳಿತ. ಉಪ್ಪಿನಂಗಡಿಯ ಹತ್ತಿರ ಮಳೆಗಾಲದಲ್ಲಿ ಭೀಕರವಾಗಿ ಗರ್ಜಿಸುತ್ತಾ ಕೆಂಪುಕೆಂಪಾಗಿ ಹರಿಯುವ ಕುಮಾರಾಧಾರೆಯ ರಭಸ ಕಣ್ಣಮುಂದೆ ಬಂತು. ಆ ಅಬ್ಬರ ಏನಿದ್ದರೂ ಒಂದು ತಿಂಗಳು ಮಾತ್ರ. ಶಿರಾಡಿ, ಬಿಸಲೆ ಘಾಟಿಗಳಲ್ಲಿ ಕುಮಾರಪರ್ವತದ ತಪ್ಪಲಲ್ಲಿ ಮಳೆಯಾದರೆ ಮಾತ್ರ ನದಿ ತುಂಬುತ್ತದೆ. ಇಲ್ಲದಿದ್ದರೆ ಸಾರಾಯಿ ಕುಡಿದು ಕುಡಿದು ಸೊರಗಿದ ಗಂಡಸರಂತೆ ಬತ್ತಿಹೋಗುತ್ತದೆ.

ಹುಡುಗರು ಇಬ್ಬರನ್ನು ಕರೆದುಕೊಂಡು ಬಂದರು. ಬಂದವರ ಜೊತೆ ಆನಂದ ಮಾತಾಡಿದ. ಆದರೆ ಆ ಜಾಗ ನೋಡುತ್ತಲೇ ಅವರಿಬ್ಬರೂ ನದಿಗೆ ಇಳಿಯುವುದಕ್ಕೇ ಒಪ್ಪಲೇ ಇಲ್ಲ. ಅವರ ಪ್ರಕಾರ ಅದು ಅತ್ಯಂತ ಆಳವಾದ ಸುಳಿ. ತಾಳೆ ಮರಕ್ಕಿಂತ ಆಳವಾಗಿದೆ. ಅಲ್ಲಿಗೆ ಇಳಿದು ಮೇಲೆ ಬರುವುದು ಕಷ್ಟ. 'ನಿಮಗೆ ಗೊತ್ತಿಲ್ಲ. ಕೆಳಗಿಳಿದರೆ ಅಲ್ಲಿ ನೀರು ಅಲ್ಲೋಲಕಲ್ಲೋಲವಾಗುತ್ತಾ ಇರುತ್ತದೆ. ಕರೆಂಟು ಷಾಕು ಹೊಡೆದ ಹಾಗಾಗಿ ನಾವೂ ಕೊಚ್ಚಿಕೊಂಡು ಆಳಕ್ಕೆ ಹೋಗುತ್ತೇವೆ. ನಾವಂತೂ ಇಳಿಯುವುದಿಲ್ಲ. ಕರಿಯ ಅಂತ ಸುಳ್ಯ ರಸ್ತೆಯಲ್ಲಿ ಒಬ್ಬನಿದ್ದಾನೆ. ಅವನಿಗೆ ಹೇಳಿನೋಡಿ" ಎಂದು ಅವರಿಬ್ಬರೂ ಒಂದೇ ಉಸಿರಲ್ಲಿ ಹೇಳಿದರು.

ಅವರಿಬ್ಬರೂ ಕಂಠಪೂರ್ತಿ ಕುಡಿದಿದ್ದಾರೆ ಅನ್ನುವುದು ಆನಂದನಿಗೆ ಖಾತ್ರಿಯಾಗಿತ್ತು. ಅವರನ್ನು ಒತ್ತಾಯಿಸಿ, ಜಾಸ್ತಿ ದುಡ್ಡಿನ ಆಮಿಷವೊಡ್ಡಿ ನದಿಗೆ ಇಳಿಸಿದರೆ ಮೇಲೆ ಬರುತ್ತಾರೆ ಅನ್ನುವ ನಂಬಿಕೆ ಅವನಿಗೆ ಇರಲಿಲ್ಲ. ಹೀಗಾಗಿ ಅವರಿಗೇ ಕರಿಯನ ಮನೆ ತೋರಿಸುವಂತೆ ಹೇಳಿ ಕೈಗೆ ಹತ್ತು ರುಪಾಯಿ ಕೊಟ್ಟ. 'ಅದಕ್ಕೆಲ್ಲ ದುಡ್ಡು ಯಾಕೆ?" ಎನ್ನುತ್ತಲೇ ಅವರು ದುಡ್ಡು ಜೇಬಿಗಿಳಿಸಿಕೊಂಡರು. 'ಬನ್ನಿ ತೋರಿಸ್ತೇವೆ" ಅಂತ ಹುಡುಗರನ್ನು ಕರಕೊಂಡು ಹೊರಟರು.

ಅಷ್ಟು ಹೊತ್ತಿಗಾಗಲೇ, ಸೀತಾರಾಮ ಹೊಳೆಗೆ ಬಿದ್ದ ಸುದ್ದಿ ಎಲ್ಲೆಡೆಯೂ ಹಬ್ಬಿತ್ತು. ಆನಂದ ಕರೆತಂದ ಹುಡುಗರ ಜೊತೆ ಊರವರೂ ಜಮಾಯಿಸಲಾರಂಭಿಸಿದರು. ಅಷ್ಟು ಹೊತ್ತಿಗೆ ಪೊಲೀಸರ ಆಗಮನವೂ ಆಯ್ತು. 'ಸೀತಾರಾಮ ಅಂತ. ನಮ್ಮ ಹೋರಾಟದ ಹುಡುಗ" ಎಂದು ಕೆಲವು ಹುಡುಗರು ಇನ್ಸ್‌ಪೆಕ್ಟರ ಹತ್ತಿರ ಹೇಳುತ್ತಿದ್ದದ್ದು ಆನಂದನಿಗೆ ಕೇಳಿಸಿತು. ಅವನೂ ಕುಳಿತಲ್ಲಿಂದ ಎದ್ದು ಇನ್ಸ್‌ಪೆಕ್ಟರ ಹತ್ತಿರ ಬಂದ.

'ಒಳ್ಳೇ ರಗಳೆ ಆಯ್ತಲ್ಲ ನಿಮ್ಮದು. ಯಾರ ಪರ್ಮಿಷನ್‌ ತಗೊಂಡು ಹೋರಾಟ ಮಾಡ್ತಿದ್ದೀರಿ? ಏನಿದೆಲ್ಲ ರಗಳೆ? ಎಲ್ಲಿಂದ ಬಂದವರು ನೀವು?" ಎಂದು ಇನ್ಸ್‌ಪೆಕ್ಟರ್‌ ಎಗರಾಡುತ್ತಿದ್ದಂತೆ ಹುಡುಗರು ಹೋಯ್‌ ಎಂದು ಕಿರುಚಿದರು. ಇನ್ಸ್‌ಪೆಕ್ಟರ್‌ ಪಕ್ಕದಲ್ಲೇ ನಿಂತಿದ್ದ ಸುಬ್ರಹ್ಮಣ್ಯ ಕಾಲೇಜಿನ ಪೊಲಿಟಿಕಲ್‌ ಸೈಯನ್ಸ್‌ ಲೆಕ್ಚರರ್‌ ಕರುಣಾಕರ ಶೆಟ್ಟಿ 'ಹಾಗೆಲ್ಲ ಮಾತಾಡಬೇಡಿ. ಆನಂದ ದಕ್ಷಿಣ ಕನ್ನಡದ ಪರಿಸರ ಹೋರಾಟಗಾರ. ಅವನಿಗೆ ದೊಡ್ಡದೊಡ್ಡವರೆಲ್ಲ ಹೆದರುತ್ತಾರೆ" ಎಂದು ಎಚ್ಚರಿಕೆ ಕೊಟ್ಟರು.

ಆನಂದ ತನಗೆ ಅದೇ ತಾನೆ ಹೊಳೆದಿದೆ ಎಂಬಂತೆ ಗಟ್ಟಿಯಾಗಿ ಎಲ್ಲರಿಗೂ ಕೇಳುವಂತೆ ಹೇಳಿದ;

'ಸೀತಾರಾಮ ತನ್ನನ್ನು ಕುಮಾರಧಾರೆಗೆ ಅರ್ಪಿಸಿಕೊಂಡಿದ್ದಾನೆ. ನಮ್ಮ ಪರಿಸರ ಹೋರಾಟಕ್ಕಾಗಿ ನಡೆದ ಬಲಿದಾನ ಇದು. ಅವನು ಸುಬ್ರಹ್ಮಣ್ಯದ ಎಲ್ಲ ಕಾಡುಗಳ್ಳರ, ಪರಿಸರದ್ರೋಹಿಗಳ ವಿರುದ್ಧ ತನ್ನ ಪ್ರತಿಭಟನೆ ತೋರಿಸುವುದಕ್ಕೆ ಜಲಪ್ರವೇಶ ಮಾಡಿದ್ದಾನೆ. ಅವನ ಈ ಆತ್ಮಾರ್ಪಣೆ ನಮ್ಮ ಹೋರಾಟಕ್ಕೆ ಹೊಸ ಶಕ್ತಿ ಕೊಟ್ಟಿದೆ. ದಯವಿಟ್ಟು ಸೀತಾರಾಮನಿಗಾಗಿ ಕಣ್ಣೀರು ಸುರಿಸಬೇಡಿ. ಅವನ ಬಲಿದಾನ ನಿಮ್ಮನ್ನು ರೋಷಾವಿಷ್ಟಗೊಳಿಸಲಿ. ಇಂಥ ಭ್ರಷ್ಟ ಅಧಿಕಾರಿಗಳ ವಿರುದ್ಧ ಸೆಟೆದು ನಿಲ್ಲುವುದಕ್ಕೆ ಬೇಕಾದ ಆತ್ಮಬಲವನ್ನು ಸೀತಾರಾಮನ ಚೇತನ ನಮಗೆ ಕೊಡಲಿ".

ಅಲ್ಲಿ ವಿಚಿತ್ರ ಮೌನ ಆವರಿಸಿತು. ಇನ್ಸ್‌ಪೆಕ್ಟರ್‌ ತಾನಲ್ಲಿಗೆ ಬರಬಾರದಾಗಿತ್ತು ಅಂದುಕೊಂಡ.

English summary
A Kannada novel series to go online on thatskannada.com from 3rd november 2002
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X