• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೀರಾಳ ದೇಹ-ಮನಸ್ಸಿಗೆ ಪ್ರೀತಿ ಬೇಕಿತ್ತು

By Super
|

ಬದುಕು ಹೇಗೆ ಇದ್ದಕ್ಕಿದ್ದ ಹಾಗೆ ತನ್ನ ರೋಚಕತೆಗಳನ್ನು ಕಳೆದುಕೊಂಡು ಮಾಘ ಮಾಸದ ಮರಗಳಂತೆ ಬೋಳಾಗುತ್ತದೆ ಅನ್ನುವುದು ಮೀರಾಳಿಗೆ ಅರಿವಾದದ್ದು ಆಕೆ ಉಪ್ಪಿನಂಗಡಿಗೆ ಬಂದ ನಂತರವೇ. ಗೋಪಾಲಕೃಷ್ಣನ ತಪ್ಪು ಲೆಕ್ಕಾಚಾರದಿಂದಾಗಿ ಮೀರಾ ದಿಕ್ಕು ತಪ್ಪಿದವಳಂತಾದಳು. ಉಪ್ಪಿನಂಗಡಿಗೆ ಹೊರಟು ಬರುವ ಹೊತ್ತಿಗೆ ಅವಳಿಗಿನ್ನೂ ಮೂವತ್ತಾರೇ ವರುಷ. ಮೂವತ್ತಾರನೇ ವರುಷಕ್ಕೇ ಹದಿನೇಳು ತುಂಬಿದ ಮಗಳಿದ್ದ ಮೀರ ಮಗಳಿಗಿಂತ ಸುಂದರಿಯಾಗಿ ಕಂಡಿದ್ದರೆ ಅದಕ್ಕೆ ಆಕೆಗೆ ದೈವದತ್ತವಾಗಿ ಬಂದ ಚೆಲುವೇ ಕಾರಣ. ತನ್ನ ಹೆಂಡತಿಯ ಸೌಂದರ್ಯದ ಬಗ್ಗೆ ಗೋಪಾಲಕೃಷ್ಣ ಒಮ್ಮೆಯಾದರೂ ಒಳ್ಳೆಯ ಮಾತಾಡಿದವನೇ ಅಲ್ಲ. ಅವನು ಮೊದಲಿನಿಂದಲೂ ಹಾಗೇ; ಸ್ವಲ್ಪ ಪರಕೀಯ ಎಂದು ಅವನನ್ನು ಲಾಗಾಯ್ತಿನಿಂದ ಬಲ್ಲವರು ಹೇಳಿದಾಗ ಗೋಪಾಲ ಕೃಷ್ಣನಿಗೆ ಹೆಮ್ಮೆಯೆನಿಸುತ್ತಿತ್ತು.

ಆದರೆ ಮೀರಾಳ ದೇಹಕ್ಕೂ ಮನಸ್ಸಿಗೂ ಪ್ರೀತಿ ಬೇಕಿತ್ತು. ಅದಕ್ಕಿಂತ ಹೆಚ್ಚಿನದೇನೋ ಬೇಕಿತ್ತು. ಗುರುವಾಯೂರಿನಲ್ಲಿದ್ದಾಗ ಹಗಲಿರುಳೂ ಕಷ್ಟಪಟ್ಟು ದುಡಿಯುತ್ತಾ, ರಾತ್ರಿ ನಿದ್ದೆಗೆಟ್ಟು ಬತ್ತಿ ಹೊಸೆಯುತ್ತಾ, ದೇವಸ್ಥಾನದ ಪ್ರಸಾದದ ಪ್ಯಾಕೆಟ್ಟುಗಳನ್ನು ತುಂಬುತ್ತಾ ಅರೆನಿದ್ರಾವಸ್ಥೆಯ ಅರಳುಮರುಳುತನದಲ್ಲಿ ಆಕೆ ತನ್ನ ಕಾಮನೆಗಳನ್ನು ಮೀರುತ್ತಿದ್ದಳು. ಆದರೆ ಉಪ್ಪಿನಂಗಡಿಗೆ ಬಂದ ನಂತರ ಅದೂ ನಿಂತುಹೋಯ್ತು.

ಅಲ್ಲಿ ಮೀರಾಳಿಗೆ ಮಾಡುವುದಕ್ಕೆ ಕೆಲಸವೂ ಇಲ್ಲ, ಬೆರೆಯುವುದಕ್ಕೆ ಗೆಳತಿಯರೂ ಇರಲಿಲ್ಲ. ಆಕೆಗೆ ಉಪ್ಪಿನಂಗಡಿಯಲ್ಲಿ ಸಿಕ್ಕಿದ ಏಕೈಕ ಸೌಲಭ್ಯ ಎಂದರೆ ಪಂಚಲಿಂಗೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿರುವ ಟೆಂಟಿನಲ್ಲಿ ಸಿನಿಮಾ ನೋಡುವ ಸೌಭಾಗ್ಯ. ಆಕೆ ಗುರುವಾಯೂರಿನಲ್ಲಿದ್ದಾಗ ಸಿನಿಮಾ ನೋಡಿದವಳೇ ಅಲ್ಲ. ಚಿಕ್ಕಂದಿನಲ್ಲಿದ್ದಾಗ ಚಿಕ್ಕಪ್ಪನ ಜೊತೆಗೆ ಒಂದೆರಡು ಸಿನಿಮಾ ನೋಡಿದ ನೆನಪು ಮಾಸಲು ಕಪ್ಪು ಬಿಳುಪಿನಲ್ಲಿತ್ತೇ ಹೊರತು ಅದಕ್ಕಿಂತ ಹೆಚ್ಚಿಗೆ ಸಿನಿಮಾಗಳ ಬಗ್ಗೆ ಆಕೆಗೆ ಗೊತ್ತಿರಲಿಲ್ಲ. ಆದರೆ ಉಪ್ಪಿನಂಗಡಿಗೆ ಬಂದ ಆರಂಭದಲ್ಲೇ, ಶ್ರೀಮಂತನಾಗುವ ಖುಷಿಯಲ್ಲಿ ಗೋಪಾಲಕೃಷ್ಣ ಹೆಂಡತಿ ಮಕ್ಕಳನ್ನು ಸಿನಿಮಾಕ್ಕೆ ಕರೆದುಕೊಂಡು ಹೋಗಿದ್ದ. ನಂತರ ವಾರಕ್ಕೊಂದು ಸಿನಿಮಾ ನೋಡುವುದು ಮಾಮೂಲಾಗಿತ್ತು. ಚಂಡಿಕಾಹೋಮದ ಕನಸುಗಳು ಕಮರಿದ ನಂತರವೂ ಗೋಪಾಲಕೃಷ್ಣ ಜ್ಯೋತಿಷ್ಯ ಶಾಲೆ ಇಟ್ಟುಕೊಂಡು ಬಕಪಕ್ಷಿಯಂತೆ ಗಿರಾಕಿಗಳಿಗೆ ಕಾಯುತ್ತಾ ಕೂರುವುದು ಶುರುವಾದ ನಂತರವೂ ಮೀರಾ ಸಿನಿಮಾ ನೋಡುವುದು ತಪ್ಪಿಸಲಿಲ್ಲ.

ಹೀಗೆ ಸಿನಿಮಾ ನೋಡುತ್ತಿದ್ದಾಗ ಆಕೆಗೆ ಗೆಳತಿಯಾದವಳು ವೆರೊನಿಕ. ಆಕೆ ಕೊಚ್ಚಿ ಕ್ರಿಶ್ಟಿಯನ್ನರ ಹುಡುಗಿ. ಕೇರಳದಿಂದ ಬಂದವಳು. ಅವಳ ಅಪ್ಪ ಅಮ್ಮ ಉಪ್ಪಿನಂಗಡಿಯಿಂದ ಮೂವತ್ತು ಕಿಲೋಮೀಟರ್‌ ದೂರದ ಶಿಬಾಜೆಯಲ್ಲಿ ರಬ್ಬರು, ಮರ ಗೆಣಸು ಬೆಳೆಯುತ್ತಿದ್ದರು. ವೆರೋನಿಕಾಳನ್ನು ಉಪ್ಪಿನಂಗಡಿಯ ಟೈಲರ್‌ ಜೆರ್ಮಿಗೆ ಮದುವೆ ಮಾಡಿಕೊಟ್ಟಿದ್ದರು. ಕುಳ್ಳ ಆಕೃತಿಯ ಅಪಾರ ಹುಮ್ಮಸ್ಸಿನ ಟೈಲರ್‌ ಜೆರ್ಮಿ ಅಪಾರ ಜೀವನೋತ್ಸಾಹದ ವ್ಯಕ್ತಿ. ತನ್ನ ಬಡತನ, ಆಕಾರ, ರೂಪ, ಅಂತಸ್ತುಗಳಿಗೆ ಮೀರಿದ ಆಸಕ್ತಿಗಳು ಅವನಿಗಿದ್ದವು. ಮಂಗಳೂರಿನಲ್ಲಿ ಬಂದ ಪ್ರತಿಯಾಂದು ನಾಟಕಗಳನ್ನೂ ಆತ ನೋಡುತ್ತಿದ್ದ. ಅದರ ಸಂಭಾಷಣೆಗಳನ್ನು ತನ್ನ ಅಂಗಡಿಗೆ ಬಂದವರಿಗೆ ಒಪ್ಪಿಸಿ ಅವರನ್ನು ರಂಜಿಸುತ್ತಿದ್ದ. ಅವನ ಅಂಗಡಿಗೆ ಬಟ್ಟೆ ಹೊಲಿಸುವವರಿಗಿಂತ ಹೆಚ್ಚಾಗಿ ಅವನ ನಾಟಕದ ಸಂಭಾಷಣೆಗಳನ್ನು ಕೇಳುವುದಕ್ಕೇ ಜಾಸ್ತಿ ಜನ ಬರುತ್ತಿದ್ದರು.

ಆಶ್ಚರ್ಯಕರವಾಗಿ, ಗಂಡನ ಈ ಕಲಾಪ್ರೇಮ ವೆರೋನಿಕಾಳನ್ನೂ ತಗುಲಿಕೊಂಡಿತ್ತು. ಇಂಥದ್ದರಲ್ಲಿ ಯಾವ ಆಸಕ್ತಿಯೂ ಇಲ್ಲದ ಆಕೆ ನಿಧಾನವಾಗಿ ತಾನೂ ಸಿನಿಮಾದ ಕತೆಯನ್ನು ಸಿನಿಮಾದಷ್ಟೇ ಕುತೂಹಲಕರವಾಗಿ ಹೇಳುವುದನ್ನು ಅಭ್ಯಾಸ ಮಾಡಿಕೊಂಡಳು. ಆಕೆಯ ಮಾತುಗಳನ್ನು ಕೇಳುವುದಕ್ಕೂ ಮಧ್ಯಾಹ್ನ ಹೆಂಗಳೆಯರು ಸೇರುತ್ತಿದ್ದರು.

ವೆರೋನಿಕಾ ತನ್ನ ಖರ್ಚಿಗೆ ಗಂಡನನ್ನು ನೆಚ್ಚಿಕೊಂಡಿರಲಿಲ್ಲ. ಆಕೆಗೆ ಬೀಡಿ ಕಟ್ಟುವುದು ಕರಗತವಾಗಿತ್ತು. ಕಣ್ಣುಮುಚ್ಚಿಕೊಂಡೂ ಬೀಡಿ ಎಲೆಯನ್ನು ಸುರುಳಿಸುತ್ತಿ, ಎರಡೂ ತುದಿಯನ್ನು ಚುಚ್ಚಿ, ಸೊಂಟಕ್ಕೊಂದು ದಾರ ಸುತ್ತಿ ಎಸೆಯುವುದು ಆಕೆಗೆ ಕರತಲಾಮಲಕ. ಅದರಿಂದ ಆಕೆಗೆ ದಿನಕ್ಕೆ ನಲುವತ್ತು ರುಪಾಯಿ ಬರುತ್ತಿತ್ತು.

ಮೀರಾಳಿಗೂ ಆಕೆಯ ಈ ಸಂಪಾದನೆಯ ಮಾರ್ಗ ಕುತೂಹಲ ಹುಟ್ಟಿಸಿತು. ಅದಕ್ಕಿಂತ ಹೆಚ್ಚಾಗಿ ಈ ವೃತ್ತಿ ತಂದುಕೊಡುವ ಆರ್ಥಿಕ ಸ್ವಾತಂತ್ರದ ಕಲ್ಪನೆ ಬೆಚ್ಚಿ ಬೀಳಿಸಿತು. ಗುರುವಾಯೂರಿನಲ್ಲಿದ್ದಾಗ ಮೀರಾ ಎಂದೂ ತನ್ನ ಸೌಂದರ್ಯ ಎದ್ದು ಕಾಣುವಂಥ ಉಡುಪು ತೊಟ್ಟವಳಲ್ಲ. ಆದರೆ ವೆರೋನಿಕಾ ತೆಳ್ಳಗಿನ ಚೂಡಿದಾರ, ಅಷ್ಟೇ ತೆಳ್ಳಗಿನ ಟೀಶರ್ಟು ತೊಟ್ಟುಕೊಂಡು ಒಮ್ಮೊಮ್ಮೆ ಜೀನ್ಸು ಪ್ಯಾಂಟು ತೊಟ್ಟುಕೊಂಡು ಹೋಗುವುದನ್ನು ಕಂಡಾಗ ಅವಳಿಗಿಂತ ತಾನು ಸಾವಿರ ಪಾಲು ಸುಂದರಿ ಎಂದು ಮೀರಾಳಿಗೆ ಅನ್ನಿಸುತ್ತಿತ್ತು. ಅದು ತನಗೂ ಗೊತ್ತು ಎಂಬಂತೆ ವೆರೋನಿಕಾ ಆಗಾಗ ಮೀರಾಳ ಚೆಲುವನ್ನು ಹೊಗಳುತ್ತಿದ್ದಳು. ಹೀಗಾಗಿ ಮೀರಾಳಿಗೆ ವೆರೊನಿಕಾಳಂತೆ ಬೀಡಿ ಸುತ್ತುವುದು ಒಂದು ರೀತಿಯಲ್ಲಿ ಮಾನಸಿಕ ಮತ್ತು ದೈಹಿಕ ಅವಶ್ಯಕತೆಯೂ ಆಗಿ ಗೋಚರಿಸಿತು.

ಒಂದು ತಿಂಗಳ ಕಾಲ ಅವುಡುಗಚ್ಚಿ ವೆರೋನಿಕಾಳ ಬಳಿ ಕೂತು ಮೀರಾ ಬೀಡಿ ಕಟ್ಟುವ ಕಲೆಯನ್ನು ಕಲಿತೇ ಕಲಿತಳು. ದಿನಕ್ಕೆ ಐನೂರೂ ಆರುನೂರೋ ಬೀಡಿ ಕಟ್ಟಿ ವಾರಾಂತ್ಯಕ್ಕೆ ನೂರರ ಗರಿಗರಿ ನೋಟು ಕೈಗೆ ಬಂದಾಗ ಮೀರಾಳಿಗೆ ತನ್ನ ಬಗ್ಗೆಯೇ ಅಪಾರ ನಂಬಿಕೆ ಬಂತು. ಗೋಪಾಲಕೃಷ್ಣ ಸೋಮಯಾಜಿ ಕೂಡ ಹೆಂಡತಿಯ ಈ ಹೊಸ ಬೆಳವಣಿಗೆಯ ಬಗ್ಗೆ ಆಕ್ಷೇಪ ಎತ್ತಲಿಲ್ಲ. ಹಿಂದಾಗಿದ್ದರೆ ಆಕ್ಷೇಪಿಸುತ್ತಿದ್ದನೋ ಏನೋ? ಆದರೆ ಗುರುವಾಯೂರಿನಿಂದ ಉಪ್ಪಿನಂಗಡಿಗೆ ಬಂದ ನಂತರ ತಾನು ಎದುರಿಸಿದ ಘಟನೆಗಳಿಂದ ಆತ ಪೂರ್ತಿ ಕುಸಿದುಹೋಗಿದ್ದ. ಯಾರಿಗೂ ಏನನ್ನೂ ತಾಕೀತು ಮಾಡುವ ಮನೋಸ್ಥೈರ್ಯ ತನಗಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದ.

ಅದಕ್ಕಿಂತ ಹೆಚ್ಚಾಗಿ ಇನ್ನೇನೋ ಆತನನ್ನು ಕಾಡುತ್ತಿತ್ತು. ನಿಜಕ್ಕೂ ಅಣ್ಣನಿಗೆ ಮುಖ್ಯಮಂತ್ರಿಗಳು ಮೋಸ ಮಾಡಿದರೇ? ಅಥವಾ ಅಣ್ಣನೇ ತನ್ನನ್ನು ಯಾಮಾರಿಸಿದನೇ? ಅಣ್ಣನಾದರೂ ಆ ಹಣ ಇಟ್ಟುಕೊಂಡು ಏನು ತಾನೇ ಮಾಡಬಲ್ಲ? ಅವನಿಗೆ ದುಡ್ಡಾದರೂ ಯಾಕೆ ಬೇಕು? ಇಂತಿಪ್ಪ ಪರವಿರೋಧದ ಮಾತುಗಳನ್ನು ತನ್ನೊಳಗೇ ಆಡಿಕೊಳ್ಳುತ್ತಾ ಆತ ಒಂದು ದಿನ ಅಣ್ಣನ ರೂಮಿಗೆ ಹೋಗಿ ಅಲ್ಲಿದ್ದ ಅಣ್ಣನ ಬ್ಯಾಂಕು ಪಾಸುಬುಕ್ಕನ್ನು ಗುಟ್ಟಾಗಿ ಕದ್ದುಕೊಂಡು ಹೋಗಿ ಅದನ್ನು ಅಪ್‌ಡೇಟ್‌ ಮಾಡಿಸುವ ನೆವದಲ್ಲಿ ಬ್ಯಾಂಕಿಗೆ ಕೊಟ್ಟ. ಹಾಗೇ ಸೋಮಯಾಜಿಗಳ ಹೆಸರಲ್ಲಿ ಯಾವುದಾದರೂ ಡೆಪಾಜಿಟ್ಟು ಇದೆಯೋ ಎಂದು ಸೂಕ್ಷ್ಮವಾಗಿ ವಿಚಾರಿಸಿದ.

ಬ್ಯಾಂಕಿನವರು ಸೋಮಯಾಜಿಗಳ ಆರ್ಥಿಕ ದುಸ್ಥಿತಿಯನ್ನು ಕರುಣಾಜನಕವಾಗಿ ವಿವರಿಸಿದರು. ತಮ್ಮ ಕೈಯಲ್ಲಿದ್ದ ಅರುವತ್ತು ಸಾವಿರವನ್ನೂ ಅವರು ಹೇಗೆ ಚಂಡಿಕಾ ಯಾಗದ ಖರ್ಚಿಗೆ ಬಲಿಕೊಡಬೇಕಾಯಿತು ಎಂಬುದನ್ನೂ ಅವರು ಕರೆಸಿಕೊಂಡ ಪುರೋಹಿತರ ಲೆಕ್ಕ ಚುಕ್ತಾ ಮಾಡಲು ಎಷ್ಟು ಒದ್ದಾಡಿದರೆಂಬುದನ್ನೂ ವಿವರಿಸಿದ. ಗೋಪಾಲಕೃಷ್ಣ ಸೋಮಯಾಜಿಗೆ ಅಣ್ಣನ ಬಗ್ಗೆ ಅಪಾರ ಪ್ರೀತಿಯೂ ಅದಮ್ಯ ಸಹಾನುಭೂತಿಯೂ ಉಕ್ಕಿಬಂದು ಕಣ್ಣು ಮಂಜಾಯಿತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Kannada novel series to go online on thatskannada.com from 3rd november 2002
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more