ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯುತ ಚಂಡಿಕಾಯಾಗಕ್ಕೆ ವೇದಿಕೆ ಸಜ್ಜು

By Super
|
Google Oneindia Kannada News

ಯಾರೆಷ್ಟೇ ಮುಚ್ಚಿಟ್ಟರೂ ಸುದ್ದಿ ಹಬ್ಬುವುದು ತಡವಾಗಲಿಲ್ಲ. ಸೋಮಯಾಜಿಗಳನ್ನು ನೋಡುವುದಕ್ಕೆ ಮುಖ್ಯಮಂತ್ರಿಗಳು ಬಂದಿದ್ದರು ಎಂಬ ಸುದ್ದಿ ಇಡೀ ಉಪ್ಪಿನಂಗಡಿಯನ್ನು ಕ್ಷಣಾರ್ಧದಲ್ಲಿ ವ್ಯಾಪಿಸಿತು. ಒಂದೇ ದಿನದಲ್ಲಿ ಇಡೀ ದಕ್ಷಿಣ ಕನ್ನಡವನ್ನೂ ಹಬ್ಬಿತು. ಸೋಮಯಾಜಿಗಳಿಗೆ ಇದ್ದಕ್ಕಿದ್ದಂತೆ ಬೇಡಿಕೆ ಬಂತು. ಸೋಮಯಾಜಿಗಳು ಭಯಂಕರ ದೊಡ್ಡ ಪುರೋಹಿತರಂತೆ. ದ್ವಾಪರಯುಗರದಲ್ಲಿ ಪಾಂಡವರು ಅಶ್ವಮೇಧಯಾಗ ಮಾಡಿಸಿದ್ದು ಸೋಮಯಾಜಿಗಳ ವಂಶದವರಿಂದಂತೆ, ಸೋಮಯಾಜಿಗಳು ಹೋಮ ಮಾಡಿದರೆ ದೇವತೆಗಳು ಪ್ರತ್ಯಕ್ಷವಾಗಿ ಪ್ರಸಾದ ಸ್ವೀಕರಿಸುತ್ತಾರಂತೆ- ಹೀಗೆ ಸುದ್ದಿ ಹಬ್ಬಿತು. ಅಷ್ಟಲ್ಲದೆ ಮುಖ್ಯಮಂತ್ರಿಗಳು ಅವರನ್ನು ಹುಡುಕಿಕೊಂಡು ಉಪ್ಪಿನಂಗಡಿಯಂಥ ಊರಿಗೆ ಬರುತ್ತಾರಾ ಅಂತ ಜನ ತಮ್ಮ ವಾದಕ್ಕೆ ತಾವೇ ಸಮರ್ಥನೆಯನ್ನೂ ಒದಗಿಸಿಕೊಂಡರು.

ಮುಖ್ಯಮಂತ್ರಿಗಳು ಬಂದು ಹೋದಾಗಿನಿಂದ ಸೋಮಯಾಜಿಗಳಿಗೆ ಜನ ಇಲ್ಲದ ಗೌರವ ಕೊಡತೊಡಗಿದರು. ಅವರನ್ನು ನೋಡದವರೂ ದೇವಸ್ಥಾನಕ್ಕೆ ಹೋಗಿ ನೋಡಿ ಬರುವುದಕ್ಕೆ ಶುರುಮಾಡಿದ ಕಾರಣ, ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸದಾ ಜನ ಗಿಜಿಗುಡುತ್ತಿತ್ತು. ಜೊತೆಗೇ ಅವರ ಹತ್ತಿರ ನಿಮಿತ್ಯ ಹೇಳಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಯಿತು. ಸೋಮಯಾಜಿಗಳು ನಾರಾಯಣ ರೈಗಳ ಮಗಳಿಗೆ ಮದುವೆ ಕೂಡಿಸಿಕೊಟ್ಟರಂತೆ, ದಾಸಪ್ಪಯ್ಯನ ಮನೆಗೆ ಮಾಡಿದ ಮಾಟ ತೆಗೆಸಿದರಂತೆ- ಎಂಬ ಸುದ್ದಿಗಳು ಒಂದೇ ದಿನದಲ್ಲಿ ಗಾಳಿಯ ತುಂಬ ಹಾರಾಡತೊಡಗಿದವು.

ಇದರಿಂದ ಸೋಮಯಾಜಿಗಳಿಗೆ ಸಂತೋಷಕ್ಕಿಂತ ಹೆಚ್ಚು ಗಾಬರಿಯಾಯಿತು. ಮುಖ್ಯಮಂತ್ರಿಗಳು ತಮ್ಮನ್ನು ನೋಡಬಯಸುತ್ತಾರೆ ಅಂತ ವಿನೀತನಾಗಿ ಹೊಳ್ಳ ಹೇಳಿದ ತಕ್ಷಣ ಆತ ತಮಾಷೆ ಮಾಡುತ್ತಿದ್ದಾನೆ ಅಂದುಕೊಂಡಿದ್ದರು ಸೋಮಯಾಜಿಗಳು. ಹಾಗಾಗಿ ಅವನ ಮಾತಿಗೆ ಅವರು ಪ್ರತಿಕ್ರಿಯಿಸುವುದಕ್ಕೆ ಹೋಗಲಿಲ್ಲ. ಅವರನ್ನು ಒತ್ತಾಯ ಮಾಡುವುದಕ್ಕೆ ಹೊಳ್ಳನಿಗೂ ಭಯವಾಯಿತು. ಅವರನ್ನು ಹೇಗೆ ಕರೆದೊಯ್ಯುವುದು? ತನ್ನ ಜೀಪಿನಲ್ಲಿ ಕೂರಿಸುವುದೇ? ಕಾರು ತರಿಸುವುದೇ ಎನ್ನುವ ದ್ವಂದ್ವದಲ್ಲಿ ಆತ ತಾವು ಹೇಗೆ ಬರುತ್ತೀರಿ, ನನ್ನ ಜೀಪು ಇಲ್ಲಿ ನಿಲ್ಲಿಸಿ ಹೋಗಲೇ ಅಂತ ಕೇಳಿದ್ದ. ಸೋಮಯಾಜಿಗಳಿಗೆ ಅವನ ಮಾತಿನಿಂದ ಕಿರಿಕಿರಿಯಾಗಿ 'ಅವರ್ಯಾಕೆ ಇಲ್ಲಿಗೆ ಬರ್ತಾರೆ. ಅವರಿಗೆ ಬೇರೆ ಕೆಲಸ ಇಲ್ವಾ?" ಎಂದು ಸಹಜವಾಗಿ ರೇಗಿದ್ದರು. ಅದರಲ್ಲೇ ಹೊಳ್ಳ ನೂರು ಅರ್ಥಗಳನ್ನು ಕಂಡುಕೊಂಡ. ಅಂದರೆ ಮುಖ್ಯಮಂತ್ರಿಗಳು ಮೊದಲೇ ಸೋಮಯಾಜಿಯನ್ನು ಭೇಟಿಯಾಗಿದ್ದಾರೆ. ಆಗ ಸೋಮಯಾಜಿಗಳು ಅವರನ್ನು ಬೈದು ಕಳಿಸಿದ್ದಾರೆ. ಅವರಿಂದ ತಪ್ಪಿಸಿಕೊಳ್ಳಲಿಕ್ಕೆ ಸೋಮಯಾಜಿ ಈ ಊರಿಗೆ ಬಂದಿದ್ದಾರೆ. ಆದರೆ ಮುಖ್ಯಮಂತ್ರಿಗಳು ಬಿಡದೇ ಇಲ್ಲಿಗೂ ಅವರನ್ನು ಹುಡುಕಿಕೊಂಡು ಬಂದಿದ್ದಾರೆ... ಹೀಗೆ ಲೆಕ್ಕ ಹಾಕುತ್ತಾ ಆತ ಸೋಮಯಾಜಿಗಳ ಪವರ್‌ ಎಷ್ಟೆಂಬುದನ್ನು ಲೆಕ್ಕ ಹಾಕತೊಡಗಿದ. ಅವರಂಥ ಪ್ರಭಾವಶಾಲಿಯನ್ನು ತಾನು ನೋಡೇ ಇಲ್ಲ ಎನ್ನಿಸಿತು. ಇಬ್ಬರ ಜಗಳದಲ್ಲಿ ತಾನು ಹತನಾಗುವುದು ಖಂಡಿತಾ ಎನ್ನಿಸಿ ಸೀದಾ ಹೋಗಿ ಸೋಮಯಾಜಿಗಳ ಕಾಲು ಹಿಡಕೊಂಡೇ ಬಿಟ್ಟ.

'ನಾನು ತಪ್ಪು ಮಾಡಿದ್ದೇನೆ. ಅದಕ್ಕೆ ಈ ಥರ ಶಿಕ್ಷೆ ಕೊಡಬೇಡಿ. ನೀವು ದಯವಿಟ್ಟು ಬರಬೇಕು" ಅಂತ ಅಂಗಲಾಚಿದ. ಏನೊಂದೂ ಅರ್ಥವಾಗದೇ ಸೋಮಯಾಜಿಗಳು ಜೀಪು ಹತ್ತಿದರು. ಅವರನ್ನು ಮುಂದೆ ಕೂರಿಸಿ, ತಾನು ಹಿಂದೆ ಕುಳಿತು ಹೊಳ್ಳ ಅವರನ್ನು ಗೆಸ್ಟ್‌ಹೌಸಿಗೆ ಕರೆತಂದ. ಸೋಮಯಾಜಿಗಳನ್ನು ನೋಡಿದ ತಕ್ಷಣವೇ ಮುಖ್ಯಮಂತ್ರಿಗಳು ಎದ್ದು ನಿಂತು ಸೋಮಯಾಜಿಗಳ ಪಾದಕ್ಕೆ ಅಡ್ಡ ಬಿದ್ದಿದ್ದರು. ಅಲ್ಲಿಗೆ ಸೋಮಯಾಜಿಗಳ ಶಕ್ತಿ ಏನೆಂಬುದು ಹೊಳ್ಳನಿಗೆ ಖಚಿತವಾಗಿ ಹೋಯ್ತು.

ಅವರಿಬ್ರು ಏನೇನು ಮಾತಾಡಿದರು ಅನ್ನುವುದು ಹೊಳ್ಳನಿಗೆ ಗೊತ್ತಾಗಲಿಲ್ಲ. ಸೋಮಯಾಜಿಗಳನ್ನು ಕರೆದುಕೊಂಡು ಅವರಿಬ್ಬರೂ ಒಳಗೆ ಹೋದರು. ಹೊಳ್ಳ ಹೊರಗೆ ಕಾಯುತ್ತಾ ನಿಂತಿದ್ದ. ಹೊರಗೆ ಬರುವ ಹೊತ್ತಿಗೆ ಸೋಮಯಾಜಿಗಳ ಮುಖ ಗಂಟಿಕ್ಕಿತ್ತು. ಮುಖ್ಯಮಂತ್ರಿಗಳ ಮುಖದಲ್ಲಿ ಮಂದಹಾಸವಿತ್ತು.

*

ಸೋಮಯಾಜಿಗಳಿಗೆ ನಿಜಕ್ಕೂ ಗಾಬರಿಯಾಗಿತ್ತು. ಮುಖ್ಯಮಂತ್ರಿಯೆಲ್ಲಿ ತಾನೆಲ್ಲಿ, ತನ್ನಿಂದ ಅವರಿಗೆ ಆಗಬೇಕಾದ್ದಾದರೂ ಏನು ಎಂದೆಲ್ಲ ಯೋಚಿಸುತ್ತಲೇ ಅವರು ಮುಖ್ಯಮಂತ್ರಿಯೆದುರು ನಿಂತಿದ್ದರು. ಅವರು ಕಾಲಿಗೆ ಬಿದ್ದಾಗಲಂತೂ ತಮ್ಮ ಬಗ್ಗೆ ಒಂದು ಕ್ಷಣ ಹೆಮ್ಮೆಯೆನಿಸಿತು. ಇದನ್ನು ಆನಂದ ನೋಡಬೇಕಾಗಿತ್ತು ಅಂದುಕೊಂಡರು.

ಮುಖ್ಯಮಂತ್ರಿಗಳ ಜೊತೆ ಮಾತಾಡುತ್ತಾ ಸೋಮಯಾಜಿಗಳಿಗೆ ಒಂದೊಂದೇ ವಿಷಯ ಅರಿವಾಗುತ್ತಾ ಬಂತು. ತನ್ನ ಹೆಸರನ್ನು ಮುಖ್ಯಮಂತ್ರಿಗಳಿಗೆ ಹೇಳಿದ್ದು ಚಾರ್ಮುಡಿಯ ಶಂಕರನಾರಾಯಣ ಜೋಯ್ಸ. ಅವನು ತನ್ನನ್ನು ಸೋಮಯಾಜಿಗಳ ಶಿಷ್ಯ ಎಂದುಕೊಂಡು ಓಡಾಡುತ್ತಾನೆ. ಅದು ಅವನ ಅಸಂಖ್ಯಾತ ತಂತ್ರಗಳಲ್ಲಿ ಒಂದು. ಸೋಮಯಾಜಿಗಳ ಹೆಸರು ಹೇಳಿಕೊಂಡೇ ಅವನು ಲಕ್ಷಾಂತರ ಸಂಪಾದಿಸಿದ್ದಾನೆ. ಸೋಮಯಾಜಿಗಳ ಹೆಸರು ಹೇಳಿಕೊಂಡೇ ಬೆಂಗಳೂರಿನ ರಾಜಕೀಯ ವಲಯದಲ್ಲಿ ಪ್ರಖ್ಯಾತನಾಗಿದ್ದಾನೆ. ಕೇಳಿದರೆ ನಾನು ನಿಮ್ಮ ಶಿಷ್ಯ ಅನ್ನುತ್ತಾನೆ.

'ಜೋಯಿಸರು ಹೇಳಿದರು. ಅಯುತ ಚಂಡಿಕಾಹೋಮ ಮಾಡಬಲ್ಲ ಅಧ್ವರ್ಯುಗಳು ಈ ಜಗತ್ತಿನಲ್ಲಿ ಒಬ್ಬರೇ ಇದ್ದಾರಂತೆ. ಅವರು ಅನಂತಕೃಷ್ಣ ಸೋಮಯಾಜಿಗಳಂತೆ. ನಿಮ್ಮನ್ನೇ ನಂಬಿ ಬಂದಿದ್ದೇವೆ. ಈ ಯಾಗವನ್ನು ನೀವು ನಡೆಸಿಕೊಡಬೇಕು. ಇದನ್ನು ನಾವು ಲೋಕಕಲ್ಯಾಣಕ್ಕಾಗಿ ಮಾಡುತ್ತಿದ್ದೇವೆ. ಜೊತೆಗೆ ನಮ್ಮ ಏಳಿಗೆಯ ಉದ್ದೇಶವೂ ಉಂಟು. ನೀವು ಒಪ್ಪುವುದಿಲ್ಲ ಅಂತ ಜೋಯ್ಸರು ಹೇಳಿದರು. ಹಾಗಾಗಿ ನಾವೇ ಬಂದಿದ್ದೇವೆ. ನೀವು ಒಪ್ಪುವ ತನಕ ನಿಮ್ಮನ್ನು ಬಿಟ್ಟು ಹೋಗೋದಿಲ್ಲ"

ಮುಖ್ಯಮಂತ್ರಿಗಳು ಅತ್ಯಂತ ಆಪ್ತ ದನಿಯಲ್ಲಿ ತಮ್ಮ ಅರಿಕೆ ಸಲ್ಲಿಸಿದ್ದರು. ಸೋಮಯಾಜಿಗಳಿಗೆ ಅವರ ಕೋರಿಕೆಯನ್ನು ನಿರಾಕರಿಸಬೇಕು ಅನ್ನಿಸಲಿಲ್ಲ.

'ಒಂದು ಚಂಡಿಕಾಯಾಗ ಮಾಡುವುದೇ ಕಷ್ಟ. ಅಂಥದ್ದರಲ್ಲಿ ಅಯುತ ಚಂಡಿಕಾಯಾಗ, ಹತ್ತು ಸಾವಿರ ಹೋಮ ಮಾಡೋದು ಎಷ್ಟು ಕಷ್ಟ ಅನ್ನೋದು ಗೊತ್ತುಂಟೋ. ಅದಕ್ಕೆ ಹತ್ತು ಸಾವಿರ ಪುರೋಹಿತರು ಬೇಕು. ಪ್ರತಿದಿನ ಹತ್ತು ಸಾವಿರ ಜನಕ್ಕೆ ಅನ್ನಸಂತರ್ಪಣೆ ಆಗಬೇಕು. ದೊಡ್ಡ ಮೈದಾನದಲ್ಲಿ..." ಎಂದು ಸೋಮಯಾಜಿಗಳು ಹೇಳುತ್ತಿದ್ದಂತೆ ಮುಖ್ಯಮಂತ್ರಿಗಳು ಬಲಗೈ ಎತ್ತಿ ಸಮ್ಮತ ಸೂಚಿಸಿದ್ದರು.

'ಎಷ್ಟು ಖರ್ಚಾದರೂ ಪರವಾಗಿಲ್ಲ. ಇದನ್ನು ನಾವು ನಡೆಸುತ್ತಿರುವುದು ಲೋಕಕಲ್ಯಾಣಕ್ಕಾಗಿ. ಈಗಾಗಲೇ ದುಡ್ಡಿನ ವ್ಯವಸ್ಥೆ ಮಾಡಿದ್ದೇನೆ. ನಿಮ್ಗೆ ಬೇಕಾದ ವ್ಯವಸ್ಥೆ ನೀವು ಮಾಡಿಕೊಳ್ಳಿ. ನಿಮ್ಮ ಹೆಸರಲ್ಲೊಂದು ಬ್ಯಾಂಕು ಅಕೌಂಟು ತೆರೆದು ಅದರಲ್ಲಿ ಸದ್ಯಕ್ಕೆ ಹತ್ತು ಲಕ್ಷ ರುಪಾಯಿ ಇಡುತ್ತೇವೆ. ಅದಕ್ಕೆ ನೀವು ಲೆಕ್ಕ ಕೊಡಬೇಕಾಗಿಲ್ಲ."

ಅದರಿಂದಾಚೆ ಸೋಮಯಾಜಿಗಳು ಮಾತಾಡುವುದಕ್ಕೆ ಹೋಗಲಿಲ್ಲ. ವಾಪಸ್ಸು ಬಂದವರೇ ಗುರುವಾಯೂರಿಗೆ ಫೋನು ಮಾಡಿ ತಮ್ಮ ತಮ್ಮ ಗೋಪಾಲಕೃಷ್ಣ ಸೋಮಯಾಜಿಯನ್ನು ಕೂಡಲೇ ಹೊರಟು ಬರುವಂತೆ ತಿಳಿಸಿದರು.

ಅವನು ಮೂರು ದಿನಗಳ ನಂತರ ಉಪ್ಪಿನಂಗಡಿ ತಲುಪಿದ. ಅವನ ಜೊತೆ ಮಾತಾಡಿದ ಸೋಮಯಾಜಿಗಳು ತಮ್ಮ ಮುಂದಿರುವ ಕಾರ್ಯಕ್ರಮದ ವಿವರ ಒದಗಿಸಿದರು. ಗೋಪಾಲಕೃಷ್ಣ ಸೋಮಯಾಜಿ ಇಂಥ ಅವಕಾಶವನ್ನು ಬಿಡಬಾರದೆಂತಲೂ ತಾನೂ ಉಪ್ಪಿನಂಗಡಿಗೆ ಬಂದು ಸೆಟ್ಲಾಗುತ್ತೇನೆ ಎಂದೂ ಹೇಳಿ ಕೇರಳಕ್ಕೆ ಹೊರಟುಹೋದ. ಒಂದೇ ವಾರದಲ್ಲಿ ಅಲ್ಲಿಂದ ಒಂದು ಟೆಂಪೋದಲ್ಲಿ ತನ್ನ ಸಾಮಾನು ಸರಂಜಾಮುಗಳನ್ನು ಹೆಂಡತಿ-ಮಕ್ಕಳನ್ನೂ ಕರೆದುಕೊಂಡು ಬಂದ.

ಪಂಚಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಪುಟ್ಟಮನೆಯಾಳಗೆ ಗೆಜ್ಜೆಕಾಲ್ಗಳ ದನಿ ಗುಣುಗುಣಿಸಿತು.

English summary
A Kannada novel series to go online on thatskannada.com from 3rd november 2002
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X