ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನಂದನ ಮೇಲೆ ಅರೆಸ್ಟ್ ವಾರಂಟ್

By Super
|
Google Oneindia Kannada News

ಆನಂದ ಊರಲ್ಲೇ ಇದ್ದಿದ್ದರೆ, ಸುಗಂಧಿ ಸುಟ್ಟುಕೊಂಡು ಸತ್ತಿದ್ದನ್ನು ಅವನೇ ಪೊಲೀಸರಿಗೆ ತಿಳಿಸಿದ್ದರೆ ಅವನು ಕೊಲೆ ಆಪಾದನೆಯಿಂದ ಪಾರಾಗಬಹುದಿತ್ತು. ಆದರೆ ಆ ರಾತ್ರಿಯ ಕತ್ತಲಲ್ಲಿ ಜಿಗಿದು ಓಡಿದ ಆನಂದ ಮತ್ತೆ ಆ ಊರಲ್ಲಿ ಕಾಣಿಸಿಕೊಳ್ಳಲಿಲ್ಲ. ಆನಂದನಿಗೂ ಸುಗಂಧಿಗೂ ಇದ್ದ ಸಂಬಂಧ ಜಗಜ್ಜಾಹೀರಾಗಿತ್ತು. ಹೀಗಾಗಿ ಸುಗಂಧಿಯನ್ನು ಆನಂದನೇ ಸುಟ್ಟು ಕೊಂದು ಪರಾರಿಯಾಗಿದ್ದಾನೆ ಎಂಬ ತೀರ್ಮಾನಕ್ಕೆ ಬಂದ ಪೊಲೀಸರು ತಮ್ಮ ಕೆಲಸ ಸುಗಮವಾಯಿತು ಎಂದುಕೊಂಡರು.

ಆದರೆ ಸುಗಂಧಿಯ ಹೆಣವನ್ನು ನೋಡಿದ ತಕ್ಪಣವೇ ಬೆಳ್ತಂಗಡಿಯ ಇನ್ಸ್‌ಪೆಕ್ಟರ್‌ ಗೋವಿಂದ ರೆಡ್ಡಿಗೆ ಅದು ಆತ್ಮಹತ್ಯೆ ಅನ್ನುವುದು ಗೊತ್ತಾಗಿತ್ತು. ಆದರೆ ತಾನಾಗಿಯೇ ಅದನ್ನು ಆತ್ಮಹತ್ಯೆ ಎಂದು ದಾಖಲು ಮಾಡುವುದಕ್ಕೆ ಅವನ ಮನಸ್ಸು ಒಪ್ಪಲಿಲ್ಲ. ಬೆಳ್ತಂಗಡಿಯ ಪಕ್ಕದ ಲಾೖಲದ ಗುಡ್ಡದಲ್ಲಿ ಸಿಕ್ಕಿದ ಹರಿಜನ ಯುವತಿಯ ಶವವನ್ನು ಮುಂದಿಟ್ಟುಕೊಂಡು ಬೆಳ್ತಂಗಡಿ ಪೊಲೀಸರ ನಿಷ್ಕಿೃಯತೆಯ ಬಗ್ಗೆ ಆನಂದನ ಮುಂದಾಳತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯ ಕಹಿನೆನಪು ಇನ್ನೂ ಗೋವಿಂದರೆಡ್ಡಿಯ ಮನಸ್ಸಿನಿಂದ ಮಾಸಿರಲಿಲ್ಲ. ಅದು ಸಾಲದು ಎಂಬಂತೆ ಪತ್ರಿಕೆಗಳಲ್ಲೂ ಗೋವಿಂದ ರೆಡ್ಡಿಯ ವಿರುದ್ಧ ಸಾಕಷ್ಟು ಲೇಖನಗಳನ್ನು ಆನಂದ ಬರೆಸಿದ್ದ. ಹೀಗಾಗಿ ಇದು ಆನಂದನನ್ನು ಫಿಟ್‌ ಮಾಡುವುದಕ್ಕೆ ಸಕಾಲ ಎಂಬ ತೀರ್ಮಾನಕ್ಕೆ ಬಂದ ರೆಡ್ಡಿ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಒಟ್ಟು ಮಾಡಿ ಆನಂದನೇ ಸುಗಂಧಿಯನ್ನು ಕೊಲೆ ಮಾಡಿದ್ದಾನೆ ಎಂದು ಎಫ್‌ಐಆರ್‌ ಜಡಿದುಬಿಟ್ಟ. ಜಾರಿಯಾಯಿತು. ಆನಂದನ ಫೋಟೋ ಎಲ್ಲ ಪೊಲೀಸ್‌ ಸ್ಟೇಷನ್ನುಗಳಿಗೂ ರವಾನೆಯಾದವು.

ಅಲ್ಲಿಗೆ ಸೋಮಯಾಜಿಗಳು ಏಕಕಾಲಕ್ಕೆ ಪ್ರಸಿದ್ಧರೂ ಕುಪ್ರಸಿದ್ಧರೂ ಆಗಿಬಿಟ್ಟರು. ಪೋಲಿಸರು ಅವರ ಮನೆಗೆ ನಾಲ್ಕೈದು ಸಾರಿ ಹೋಗಿ ಬಂದು 'ಆನಂದ ಎಲ್ಲಿದ್ದಾನೆ ಹೇಳಿ" ಎಂದು ಪೀಡಿಸಿದರು. ತಮ್ಮ ಕೈಲಾದಷ್ಟು ಪೀಕಿಸಿದರು. ಲಂಚ ಕೊಟ್ಟು ಕೊಟ್ಟು ಸಾಕಾಗಿ ಹೋಗಿ ಸೋಮಯಾಜಿಗಳು ಕೊನೆಗೆ ಗುರುವಾಯನಕೆರೆಗೆ ರಾಮನಾಥ ಪ್ರಭುಗಳ ಹತ್ತಿರ ತಮ್ಮ ಗೋಳು ಹೇಳಿಕೊಂಡರು. ಪ್ರಭುಗಳು ಮಂಗಳೂರಿನ ಎಸ್ಪಿಗೆ ಸೋಮಯಾಜಿಗಳ ಎದುರೇ ಫೋನು ಹಚ್ಚಿ ಬೆಳ್ತಂಗಡಿ ಪೋಲಿಸರು ಕೊಡುತ್ತಿರುವ ಕಾಟವನ್ನು ವಿವರಿಸಿದರು. ಅಲ್ಲಿಗೆ ಪೊಲೀಸರ ಕಾಟ ನಿಂತಿತು.

ಆದರೆ ಸೋಮಯಾಜಿಗಳು ಮತ್ತೊಂದು ರೀತಿಯ ಹಿಂಸೆ ಅನುಭವಿಸಬೇಕಾಗಿ ಬಂತು. ವೇಣೂರು ಪ್ರಾಂತ್ಯದವರು ಸೋಮಯಾಜಿಗಳನ್ನು ಬಹಿಷ್ಕರಿಸಿದ ಹಾಗೇ ಉಳಿದ ಪ್ರಾಂತ್ಯಗಳ ಜನರೂ ಅವರನ್ನು ದೂರವಿಟ್ಟರು. ಸತ್ತರೆ ಪಿಂಡ ಹಾಕಬೇಕಾದ ಮಗನೇ ನೀಚಸಂಗ ಮಾಡಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಅಂಥವರನ್ನು ಕರೆಸಿ ಪೌರೋಹಿತ್ಯ ಮಾಡಿಸಿದರೆ ನಾವು ಉದ್ಧಾರವಾಗುತ್ತೇವಾ ಎಂಬ ಐತಾಳರ ಮಾತಿಗೆ ಎಲ್ಲೆಡೆಯೂ ಬಹುಮತ ಸಿಕ್ಕಿತು. ಇದು ಮಾತಾಡುವುದಕ್ಕೂ ತುಂಬ ರೋಚಕ ಸಂಗತಿಯಂತೆ ಕಂಡದ್ದರಿಂದ ಯಾರಿಗೂ ಸೋಮಯಾಜಿಗಳ ಪರವಾಗಿ ವಾದಿಸುವುದು ಬೇಕಿರಲಿಲ್ಲ. ಹೀಗಾಗಿ ಆನಂದನ ಪರಾರಿಯ ನಂತರ ನಡೆದ ಎಲ್ಲ ಮದುವೆ, ಉಪನಯನ, ಶ್ರಾದ್ಧ, ವರ್ಷಾಂತಿಕ, ವೈಕುಂಠ ಸಮಾರಾಧನೆಗಳಲ್ಲಿ ಸೋಮಯಾಜಿಗಳದ್ದೇ ಮಾತು. ಅವರ ಕುರಿತ ಅನುಕಂಪ ಕೂಡ ಸಾಕಷ್ಟು ಆಕರ್ಷಕವಾಗಿಯೇ ವ್ಯಕ್ತವಾಯಿತು.

ಇವೆಲ್ಲದರ ಪರಿಣಾಮವಾಗಿ ಸೋಮಯಾಜಿಗಳು ಗುರುವಾಯನಕೆರೆ ಬಿಡಬೇಕಾಗಿ ಬಂತು. ಇಂಥ ಕುಹಕವನ್ನೆಲ್ಲ ಒಂದೇ ಮಾತಿನಿಂದ ತೊಡೆದು ಹಾಕಬಲ್ಲೆ ಎಂಬ ಛಾತಿಯೇನೋ ಸೋಮಯಾಜಿಗಳಿಗಿತ್ತು. ಆದರೆ ಅವರನ್ನು ಸುಗಂಧಿ ಬೇರೆಯೇ ರೀತಿಯಲ್ಲಿ ಕಾಡತೊಡಗಿದಳು. ಮನಸ್ಸಿನ ಒಂದು ಮೂಲೆಯಲ್ಲಿ ಸುಗಂಧಿಯನ್ನು ಕೊಲೆ ಮಾಡಿದ್ದು ತಾನೆಂಬ ಭಾವನೆ ಅವರನ್ನು ಬಾಧಿಸತೊಡಗಿತು.

ಸುಗಂಧಿಯಲ್ಲಿ ತಾನು ಪಾಪಪ್ರಜ್ಞೆ ತುಂಬಿದೆನೇ? ಅಥವಾ ಆಕೆ ತನ್ನನ್ನು ಕಾಡುವುದಕ್ಕೆಂದೇ ಆತ್ಮಹತ್ಯೆ ಮಾಡಿಕೊಂಡಳೇ ? ತನ್ನಿಂದಾಗಿ ಅವಳೊಳಗಿನ ನೈತಿಕ ಪ್ರಜ್ಞೆ ಜಾಗೃತವಾಗಿರಬಹುದೇ ? ಹಾಗಿದ್ದರೆ ನೀತಿವಂತರನ್ನಾಗಿಸುವುದೂ ತಪ್ಪಿರಬಹುದೇ?

ಸುಗಂಧಿ ತೀರಿಕೊಂಡದ್ದು ಆಕೆಯ ಪಾಪದ ಫಲ. ಅವಳ ಸಾವಿಗೆ ನಾನೂ ಕಾರಣನಲ್ಲ, ಆನಂದನೂ ಕಾರಣ ಅಲ್ಲ ಎಂದು ಮತ್ತೆ ಮತ್ತೆ ಹೇಳಿಕೊಂಡರು ಸೋಮಯಾಜಿಗಳು. ಪೂಜೆಗೆ ಕುಳಿತು ಯಾನಿ ಕಾನಿ ಚ ಪಾಪಾನಿ ಜನ್ಮಾಂತರ ಕೃತಾನಿ ಚ। ಪಠಿಸುತ್ತಿದ್ದಂತೆ ಸುಗಂಧಿ ನೆನಪಾದಳು. ಸೋಮಯಾಜಿಗಳಿಗೆ ಗುರುವಾಯನಕೆರೆಯಲ್ಲಿ ಬದುಕುವುದು ಅಸಾಧ್ಯವೆಂದು ತೋರತೊಡಗಿತು. ತಮ್ಮ ಮೂವತ್ತು ಸೆನ್ಸು ಗೇರುಬೀಜದ ಗುಡ್ಡವನ್ನೂ ಅದರ ನಡುವಿರುವ ಯಾವ ಕ್ಷಣ ಬೇಕಾದರೂ ಬೀಳಬಹುದಾಗಿದ್ದ ಮಂಗಳೂರು ಹೆಂಚಿನ ಮನೆಯನ್ನೂ ಗಾಡಿ ಬಾಬಣ್ಣನಿಗೆ ಐವತ್ತಾರು ಸಾವಿರಕ್ಕೆ ಮಾರಿ ಸೋಮಯಾಜಿಗಳು ಗುರುವಾಯನಕೆರೆ ಬಿಟ್ಟರು.

*

ಅದು ಭಕ್ತಿಪರವಶತೆಯ ಉಚ್ಛ್ರಾಯದ ಕಾಲ. ಅಡಕೆಗೆ ರೇಟು ಏರಿತ್ತು. ಸಣ್ಣಪುಟ್ಟ ಮನೆಗಳಲ್ಲಿ ಒಪ್ಪತ್ತೂಟಕ್ಕೂ ಪರದಾಡುತ್ತಿದ್ದವರೆಲ್ಲ ಅಡಕೆಯ ರೇಟು ಮೂರು ಪಟ್ಟು ಹೆಚ್ಚಾಗುತ್ತಿದ್ದಂತೆ ಶ್ರೀಮಂತರಾದರು. ಹಾಗೆ ಇದ್ದಕ್ಕಿದ್ದ ಹಾಗೆ ಶ್ರೀಮಂತರಾದವರನ್ನು ಪಾಪಪ್ರಜ್ಞೆ ಕಾಡತೊಡಗಿತು. ಹೀಗಾಗಿ ಪಾಳುಬಿದ್ದ ಗುಡಿಗಳನ್ನೆಲ್ಲ ಜೀರ್ಣೋದ್ಧಾರ ಮಾಡುವ ದೈವಕಾರ್ಯ ಆರಂಭವಾಯಿತು. ಪರಿಣಾಮವಾಗಿ ಪುರೋಹಿತರ ಕೊರತೆ ಕಾಣಿಸಿಕೊಂಡಿತು.

ಉಪ್ಪಿನಂಗಡಿಯಲ್ಲೂ ಅದೇ ಆಯ್ತು. ಕುಮಾರಧಾರ ಮತ್ತು ನೇತ್ರಾವತಿ ನದಿಗಳು ಸೇರುವ ಜಾಗದಲ್ಲೊಂದು ಪುರಾತನ ದೇವಾಲಯವಿತ್ತು. ಅದು ಸುಮಾರು ವರುಷಗಳಿಂದ ಪಾಳು ಬಿದ್ದಿತ್ತು. ಉಪ್ಪಿನಂಗಡಿಯಲ್ಲಿದ್ದ ಕೊಂಕಣಿಗಳೆಲ್ಲ ತಮ್ಮ ಕುಲದೇವರಾದ ಲಕ್ಪ್ಮೀವೆಂಕಟರಮಣನಿಗೆ ಬೇರೆಯೇ ದೇವಸ್ಥಾನ ಕಟ್ಟಿಕೊಂಡು ವರ್ಷಕ್ಕೊಮ್ಮೆ ಜಾತ್ರೆ, ರಥೋತ್ಸವ ನಡೆಸುತ್ತಾ ತಮ್ಮ ಶಕ್ತ್ಯಾನುಸಾರ ದೈವಭಕ್ತಿ ಪ್ರದರ್ಶಿಸಿಕೊಂಡು ಬಂದಿದ್ದರು. ಆದರೆ ಸಂಗಮಸ್ಥಾನದಲ್ಲಿದ್ದ ಪಂಚಲಿಂಗೇಶ್ವರನ ದೇವಸ್ಥಾನ ಮಾತ್ರ ಪಾಳುಬಿದ್ದಿತ್ತು.

ಅಡಕೆ ರೇಟು ಏರುತ್ತಿದ್ದಂತೆ ತಮ್ಮ ದೇವಸ್ಥಾನವನ್ನೂ ಜೀರ್ಣೋದ್ಧಾರ ಮಾಡಬೇಕೆಂದು ಅಡಕೆ ತೋಟದವರಿಗೆಲ್ಲ ದೈವಪ್ರೇರಣೆಯಾಯ್ತು. ಅದಕ್ಕೊಂದು ಸಮಿತಿ ರಚನೆಯಾಗಿ ನಾಲ್ಕೇ ತಿಂಗಳ ಅವಧಿಯಲ್ಲಿ ದೊಡ್ಡದೊಂದು ಬ್ರಹ್ಮಕಲಶ ಮಹೋತ್ಸವವೂ ನಡೆದುಹೋಯ್ತು. ಅಂದಿನಿಂದ ಪಂಚಲಿಂಗೇಶ್ವರನಿಗೆ ನಿತ್ಯಪೂಜೆ ಸಲ್ಲಬೇಕೆಂದು ಸಮಿತಿ ನಿರ್ಧರಿಸಿದ್ದರಿಂದ ಗುರುವಾಯನಕೆರೆ ಬಿಟ್ಟು ಉಪ್ಪಿನಂಗಡಿಗೆ ಬಂದು ನೆಲೆಸಿದ್ದ ಸೋಮಯಾಜಿಗಳಿಗೆ ಪಂಚಲಿಂಗೇಶ್ವರ ದೇವಸ್ಥಾನದ ಅರ್ಚಕರ ಪಟ್ಟ ದೊರಕಿತು. ಉಳಿದುಕೊಳ್ಳುವುದಕ್ಕೆ ದೇವಾಲಯದ ಪ್ರಾಂಗಣದಲ್ಲೇ ಪಾಳುಬಿದ್ದುಹೋಗಿದ್ದ ಮನೆಯನ್ನು ರಿಪೇರಿ ಮಾಡಿ ಕೊಡಲಾಯಿತು, ಆಸ್ತಿ ಮಾರಿ ಬಂದ ಹಣವನ್ನು ಉಪ್ಪಿನಂಗಡಿಯ ಸಿಂಡಿಕೇಟು ಬ್ಯಾಂಕಿನಲ್ಲಿ ಫಿಕ್ಸೆಡ್‌ ಇಟ್ಟು ಸೋಮಯಾಜಿಗಳು ಪಂಚಲಿಂಗೇಶ್ವರನಿಗೆ ಅಡ್ಡಬಿದ್ದರು. ಸುಗಂಧಿಯ ನೆನಪು ನೇತ್ರಾವತಿಯ ನದಿಯಲ್ಲಿ ಕೊಚ್ಚಿಕೊಂಡು ಹೋಯ್ತು.

English summary
A Kannada novel series to go online on thatskannada.com from 3rd november 2002
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X