• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುಗಂಧಿಯ ಅಂಗಳದಲ್ಲಿ ಸೋಮಯಾಜಿಗಳ ನೆರಳು

By Super
|

ಗಂಧಿ ಬರೆದ ಮೂರೇ ಮೂರು ಸಾಲಿನ ಕಾಗದ ಓದುತ್ತಿದ್ದ ಹಾಗೆ ಆನಂದನಿಗೆ ಒಂದು ಕ್ಷಣ ತನ್ನ ಬಗ್ಗೆಯೇ ವಿಪರೀತ ಕೀಳರಿಮೆ ಬಂತು. ಅದರ ಬೆನ್ನಿಗೇ ಭಯ ಶುರುವಾಯಿತು. ಆ ಪತ್ರ ಅಷ್ಟೇನೂ ಸ್ಪಷ್ಟವಿರಲಿಲ್ಲ. ಸುಗಂಧಿ ತನಗೆ ತೋಚಿದ ಕನ್ನಡದಲ್ಲಿ ಅನ್ನಿಸಿದ ಭಾಷೆಯಲ್ಲಿ ಬರೆದಿದ್ದಳು;

ದೊಡ್ಡ ಧಣಿಯವರಿಗೆ,

ನೀವು ಹೇಳಿದ್ದು ಅರ್ಥವಾಗಲಿಲ್ಲ. ಗುಡ್ಡದ ಮೇಲೆ ನಿಮ್ಮನ್ನು ನೋಡಿದಾಗ ನಿಮ್ಮ ಮೇಲೆ ಆಸೆಯಾಯಿತು. ಆ ರಾತ್ರಿಯಲ್ಲಿ ಗುಡ್ಡ ಇಳಿಯುವಾಗ ಭಯವಾಗಲಿಲ್ಲ, ಪಾಪ ಮಾಡಿದ್ದೇನೆ ಅನ್ನಿಸಿತು. ತಂದೆಮಗ ಇಬ್ಬರನ್ನೂ ಕೆಟ್ಟ ದೃಷ್ಟಿಯಲ್ಲಿ ನೋಡಿದ್ದಕ್ಕೆ ಬದುಕುವ ಶಕ್ತಿಯಿಲ್ಲದಂತಾಗಿದೆ. ಇನ್ನೆಂದೂ ಯಾರಿಗೂ ತೊಂದರೆ ಕೊಡುವುದಿಲ್ಲ.

- ಸುಗಂಧಿ

ಆ ಪತ್ರದಲ್ಲಿದ್ದದ್ದು ಅಷ್ಟೇ. ಆದರೆ ಅದು ಕೆರಳಿಸಿದ ಕಲ್ಪನೆಯಲ್ಲಿ ಆನಂದ ಬಹುದೂರ ಹೋಗಿದ್ದ. ಅಪ್ಪಯ್ಯ ಹಾಗಿದ್ದರೆ ಸುಗಂಧಿಯನ್ನು ಭೇಟಿಯಾಗಿದ್ದಾರೆ. ಅದೂ ಗುಡ್ಡದ ಮೇಲೆ. ತನ್ನ ಬಗ್ಗೆ ಅವರು ಏನೋ ಮಾತಾಡಿದ್ದಾರೆ. ಸುಗಂಧಿಗೆ ಅವರ ಮೇಲೆ ಆಸೆಯಾಗಿದ್ದಕ್ಕೆ ಏನು ಕಾರಣ ಇರಬಹುದು. ಅಪ್ಪಯ್ಯನನ್ನು ನೆನಪಿಸಿಕೊಂಡ ಆನಂದ. ತನಗಿಂತ ಎತ್ತರದ ಜೀವ. ಇನ್ನೂ ನೆತ್ತರು ಬತ್ತದ ತೋಳುಗಳು, ತೇಜೋವಂತ ಕಣ್ಣುಗಳು, ಜರ್ಜರಿತವಾಗದ ಹಲ್ಲುಗಳು, ನರೆಯದ ಕೂದಲು. ಅವರ ವಯಸ್ಸು ಇಂತಿಷ್ಟು ಅಂತ ಹೇಳುವುದು ಕಷ್ಟವೇ. ಈಗಲೂ ಅನಪಥ್ಯ ಬಿದ್ದರೆ ಅಡಕೆ ಮರ ಹತ್ತುತ್ತಾರೆ. ತನಗಿಂತ ಸಲೀಸಾಗಿ ಅಟ್ಟದಿಂದ ಅಕ್ಕಿಯ ಮುಡಿ ಇಳಿಸುತ್ತಾರೆ.

ಸುಗಂಧಿ ಆಕರ್ಷಿತಳಾದದ್ದು ಅದರಿಂದಲೇ? ಆದರೆ ಅಪ್ಪಯ್ಯನಿಗಿಂತ ಎಳೆಯ ಜೀವದ, ಉಕ್ಕುವ ತಾರುಣ್ಯದ ಹುಡುಗರು ಈ ಊರಲ್ಲಿ ಎಷ್ಟಿಲ್ಲ. ಸುಗಂಧಿಗೆ ಅಪ್ಪಾಜಿಯ ಜ್ಞಾನ ಬೇಕಿತ್ತೇ ? ಅವರನ್ನು ಸೇರುವ ಮೂಲಕ ತಾನು ಮತ್ತೊಂದು ಉತ್ತುಂಗಕ್ಕೆ ಏರುತ್ತೇನೆ ಎನ್ನುವ ಕಲ್ಪನೆಯಿತ್ತೆ?

ಅಪ್ಪಯ್ಯ ಮತ್ತು ಸುಗಂಧಿ ರಾತ್ರೋರಾತ್ರಿ ಗುಡ್ಡಕ್ಕೆ ಹೋಗಿದ್ದು ಯಾಕೆ? ಅದು ಯಾವ ಗುಡ್ಡ ? ಅದನ್ನು ಬೇರೆ ಯಾರೂ ನೋಡಲೇ ಇಲ್ಲವೇ? ಇನ್ನು ಮುಂದೆ ಯಾರಿಗೂ ತೊಂದರೆ ಕೊಡುವುದಿಲ್ಲ ಅಂದರೆ ಏನರ್ಥ ? ಆನಂದನಿಗೆ ವಿವರಗಳು ಸ್ಪಷ್ಟವಾಗಲಿಲ್ಲ. ಆನಂದ ಮತ್ತಷ್ಟು ಹಿಂದಕ್ಕೆ ಹೋದ. ಮತ್ತಷ್ಟು ಮುಂದಕ್ಕೆ ಹೋದ. ಭೂತ ಭವಿಷ್ಯತ್ತುಗಳಲ್ಲಿ ಅವನಿಗೆ ಬೇಕಾದ ವರ್ತಮಾನ ಸಿಗಲಿಲ್ಲ.

ಸುಗಂಧಿ ಈಗೆಲ್ಲಿರಬಹುದು ? ಅಪ್ಪಯ್ಯ ಎಲ್ಲಿಗೆ ಹೋಗಿರಬಹುದು ? ಅಷ್ಟಕ್ಕೂ ಸುಗಂಧಿ ಅಪ್ಪಯ್ಯನನ್ನು ಹುಡುಕಿಕೊಂಡು ಬಂದಿದ್ದೇಕೆ ? ಒಂದಕ್ಕೊಂದು ತಾಳಮೇಳವಿಲ್ಲದಂತಾಗಿ ಆನಂದ ಚಡಪಡಿಸಿದ. ಆ ಚಡಪಡಿಕೆಯ ನಡುವೆಯೇ ಅವನನ್ನು ಮತ್ತೊಂದು ಪ್ರಶ್ನೆ ಕಾಡತೊಡಗಿತು.

ಸುಗಂಧಿ ಮನೆಯ ಬಾಗಿಲು ಒಳಗಿನಿಂದ ಯಾಕೆ ಹಾಕಿಕೊಂಡಿದೆ ? ಸುಗಂಧಿ ಒಳಗಿದ್ದೂ ಬಾಗಿಲು ತೆಗೆಯಲಿಲ್ಲ ಯಾಕೆ ? ಅಥವಾ ತಾನು ಬಾಗಿಲು ಬಡಿಯುವ ಹೊತ್ತಿಗೆ ಸುಗಂಧಿಯ ಜೊತೆ ಮತ್ಯಾರಾದರೂ ಇದ್ದಿರಬಹುದೆ ? ಅವಳು ತನ್ನಿಂದ ದೂರವಾಗಿರಬಹುದೇ? ಅವಳಿಗೆ ಈ ಆನಂದನೆಂಬ ಕ್ರಾಂತಿಕಾರಿ ಬ್ರಾಹ್ಮಣರ ಹುಡುಗ ಬೇಸರ ಮೂಡಿಸಿರಬಹುದೆ ? ಆಚಾರವಂತ ಅಪ್ಪಯ್ಯನೇ ಹೆಚ್ಚು ಆಕರ್ಷಕವಾಗಿ ಕಂಡಿರಬಹುದೆ ?

'ಶೂದ್ರ ಹುಡುಗಿಯರು ಬ್ರಾಹ್ಮಣರನ್ನು ಸೇರೋದಕ್ಕೆ ಕಾರಣ ಕಾಮವಲ್ಲ, ಧರ್ಮ. ಮೋಕ್ಷದ ಆಸೆ ಆ ಹುಡುಗಿಯರಿಗೆ. ಈ ಬ್ರಾಹ್ಮಣನ ಮೂಲಕ ಮೋಕ್ಷ ಸಿಗುತ್ತೆ ಅನ್ನೋ ಬಯಕೆ. ತಾವೂ ದೈವತ್ವಕ್ಕೇರಿದ ಹೆಮ್ಮೆಯಲ್ಲಿ ಅವರು ತುಂಬಿ ತುಳುಕಾಡುತ್ತಾರೆ. ಪ್ರತಿಭಾಸಂಪನ್ನ ಸಂಗೀತಾಚಾರ್ಯರಿಗೆ ಶಿಷ್ಯೆಯರು ತಮ್ಮನ್ನು ತಾವೇ ಅರ್ಪಿಸಿಕೊಂಡು ಧನ್ಯರಾಗುತ್ತಾರಲ್ಲ, ಅಂಥ ಧನ್ಯತೆ ಅದು. ಆದರೆ ಬ್ರಾಹ್ಮಣರಿಗೆ ಶೂದ್ರ ಸ್ತ್ರೀಯರ ಜೊತೆ ಮಲಗಿದಾಗಲೂ ಅವರಲ್ಲಿರೋದು ಬಿಡುಗಡೆಯ ಭಾವವೇ. ತಮ್ಮ ಪಾವಿತ್ರ ಮತ್ತು ಶ್ರದ್ಧೆಯಿಂದ ಹೊರಗೆ ಬರೋದಕ್ಕೆ ಅವರಿಗೊಂದು ಸುಲಭವಾದ ಮಾರ್ಗ ಬೇಕಾಗಿರುತ್ತೆ. ಈ ನೆಲಕ್ಕೆ ಹತ್ತಿರಾಗುವ ಆಸೆಯಿಂದ ಅವರು ಹಾದರ ಮಾಡ್ತಾರೆ. ಹಾಗೆ ನೋಡಿದರೆ ಹಾದರ ಅನ್ನೋದೇ ಒಂದು ರೀತಿಯ ಬಿಡುಗಡೆ. ಗರತಿಗೆ ಪಾತಿವ್ರತ್ಯದ ಪಂಜರದಿಂದ ಗೃಹಸ್ಥನಿಗೆ ತನ್ನ ಕಟ್ಟುಪಾಡುಗಳಿಂದ ಹೊರ ಬರುವುದಕ್ಕೊಂದು ಹಾದಿ. ಮನುಷ್ಯ ಅರ್ಥಪೂರ್ಣನಾಗೋದು ಸೃಜನಶೀಲನಾಗೋದು ಶಿಸ್ತಿನಿಂದಲ್ಲ, ಕಠೋರ ನಿಷ್ಠೆಯಿಂದ ಅಲ್ಲ, ಸಹಜ ಚಂಚಲತೆಯಿಂದ..."

ಗುರುಗಳು ಹೇಳಿದ್ದು ಆನಂದನಿಗೆ ನೆನಪಾಯಿತು. ಅಪ್ಪಾಜಿಗೂ ಅಂಥದ್ದೊಂದು ಹೊರದಾರಿ ಬೇಕಿತ್ತಾ ? ಅವರೂ ಸಹಜ ಚಂಚಲತೆಗೆ ಈಡಾಗುವ ಮೂಲಕ ತಮ್ಮ ಕಠೋರ ಶ್ರದ್ಧೆಯನ್ನು ಮೀರಲು ಯತ್ನಿಸಿದರೇ?

ತಕ್ಷಣವೇ ಸುಗಂಧಿಯ ಮನೆಗೆ ಹೋಗಬೇಕು ಅನ್ನಿಸಿತು. ಯಾರೋ ತನ್ನನ್ನು ತನ್ನ ಪರಿಸರದಿಂದ ಕಿತ್ತು ಮತ್ತೊಂದು ಅಪರಿಚಿತ ಪರಿಸರದಲ್ಲಿ ಇರಿಸುತ್ತಿದ್ದಾರೆ ಅನ್ನಿಸತೊಡಗಿತು. ತಾನು ಧರ್ಮಕ್ಕೂ ಅಧರ್ಮಕ್ಕೂ ಹೊರತಾದೆ ಅನ್ನಿಸಿತು. ವ್ರತನಿಯಮಗಳಲ್ಲಿ ಗೆಲ್ಲಲಾಗದ್ದನ್ನು ಸೊಕ್ಕಿನಿಂದಲೂ ಗೆಲ್ಲಲಾಗಲಿಲ್ಲವಲ್ಲ ಎಂಬ ಹಳಹಳಿಕೆಯಲ್ಲೇ ಆನಂದ ಜೋಡು ಮೆಟ್ಟಿಕೊಂಡು ಮನೆಗೆ ಬಾಗಿಲೆಳೆದುಕೊಂಡು ಬೀಗದ ಕೈಯನ್ನು ಜೋಬಿಗೆ ಇಳಿಬಿಟ್ಟು ಸುಗಂಧಿಯ ಮನೆಯತ್ತ ಹೆಜ್ಜೆಹಾಕಿದ.

ಸುಗಂಧಿಯ ಮನೆಯ ಬಾಗಿಲು ಒಳಗಿನಿಂದ ಹಾಕಿತ್ತು. ಜೋರಾಗಿ ತಳ್ಳಿದರೆ ತೆರೆದುಕೊಳ್ಳಬಹುದಾದ ಬಾಗಿಲಿನಂತೆ ಕಂಡರೂ ಆನಂದ ಒದ್ದಾಗಲೂ ಅದು ಮಿಸುಕಾಡಲಿಲ್ಲ. ಮನೆಗೊಂದೆರಡು ಸುತ್ತುಹಾಕಿ ಯಾವ ಸುಳಿವೂ ಸಿಗದಾದಾಗ ಆನಂದ ಮುಂದೇನು ಅನ್ನುವುದು ತೋಚದೆ ನಿಂತ.

ಸುಗಂಧಿಯ ಮನೆಯ ಬಾಗಿಲು ಒಳಗಿನಿಂದ ಹಾಕಿಕೊಂಡಿದೆ ಅನ್ನುವುದನ್ನು ಯಾರಲ್ಲಿ ಹೇಳಬಹುದು ? ಹೇಳುವುದಾದರೂ ಹೇಗೆ? ಹಾಗೆ ತಾನೇ ಹೇಳುತ್ತಾ ಹೋದರೆ ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ಅಪವಾದ ತನ್ನ ಮೇಲೆ ಬರುತ್ತದೆ. ಒಂದು ವೇಳೆ ಹೇಳದೇ ಸುಮ್ಮನಿದ್ದರೆ ಒಳಗಿನ ರಹಸ್ಯ ತಲೆ ಕೊರೆಯುತ್ತದೆ. ಅಷ್ಟಕ್ಕೂ ಸುಗಂಧಿ ಒಳಗಿದ್ದಾಳೆಯೇ ಅಥವಾ ಹೊರಗೆ ಬಂದ ನಂತರ ಒಳಗಿನ ಚಿಲಕ ಹಾಕುವ ವ್ಯವಸ್ಥೆ ಏನಾದರೂ ಇದೆಯೇ? ಆನಂದ ಬಾಗಿಲನ್ನು ಪರೀಕ್ಷಿಸಿದ. ಅಂಥದ್ದೇನೂ ಕಾಣಿಸಲಿಲ್ಲ.

ರಾತ್ರಿಯ ತನಕ ಕಾಯುವುದು. ರಾತ್ರಿ ಬಂದು ಬಾಗಿಲು ಒಡೆದು ಒಳಗೆ ನುಗ್ಗುವುದು ಎಂದುಕೊಂಡು ಆನಂದ ಅಲ್ಲಿಂದ ಮರಳಬೇಕು ಅನ್ನುವಷ್ಟರಲ್ಲಿ ತಿಮ್ಮಪ್ಪ ಎದುರಾದ. ಹೆಗಲಲ್ಲೊಂದು ಬಾಳೆಗೊನೆ ಹೊತ್ತುಕೊಂಡು ಹೊರಟಿದ್ದ ತಿಮ್ಮಪ್ಪ ಸಹಜವಾಗಿಯೇ ಕೇಳಿದ;

'ಏನು ಇತ್ಲಾಗಿ ಬರದೇ ತುಂಬ ದಿನ ಆಯ್ತಲ್ಲ. ಸುಗಂಧಿಯನ್ನೂ ನೋಡಲಿಲ್ಲ. ದೊಡ್ಡ ಧಣಿಯವರು ಒಂದು ಸರ್ತಿ ಬಂದಿದ್ದರು ಅಂತ ಕಾಣುತ್ತೆ. ದೂರದಿಂದ ನೋಡಿದೆ, ಅವರ ಹಾಗೆ ಕಾಣಿಸಿತು. ಹೌದೋ ಅಲ್ಲವೋ ಗೊತ್ತಾಗಲಿಲ್ಲ"

ಆನಂದನಿಗೆ ಮತ್ತೊಮ್ಮೆ ಆಘಾತವಾಯಿತು. ಅಪ್ಪಯ್ಯ ಹಾಗಿದ್ದರೆ ಸುಗಂಧಿಯ ಮನೆಗೆ ಬಂದಿದ್ದರಾ? ಯಾಕೆ ?

ಉತ್ತರ ಗೊತ್ತಾಗದೇ ಅಪೂರ್ವ ಗೊಂದಲದಲ್ಲಿ ಆನಂದ ಪೇಟೆ ಕಡೆ ಹೆಜ್ಜೆ ಹಾಕುವ ಹೊತ್ತಿಗೆ ಸೋಮಯಾಜಿಗಳು ಮನೆಯ ಮುಂದಿನ ಗುಡ್ಡ ಇಳಿದು ಮನೆಕಡೆ ಹೆಜ್ಜೆ ಹಾಕಿದರು. ಎಂದಿನಂತೆ ಮನೆಯ ಬೀಗದ ಕೈ ಇಡುವ ಗೂಡಿಗೆ ಕೈಹಾಕಿದರು. ಅಲ್ಲಿ ಬೀಗದ ಕೈ ಇರಲಿಲ್ಲ.

ನಿಲ್ಲಲೂ ತ್ರಾಣವಿಲ್ಲದೆ ಜಗಲಿಯಲ್ಲಿ ಕುಸಿದು ಕೂತು ಕಾಯತೊಡಗಿದರು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Kannada novel series to go online on thatskannada.com from 3rd november 2002
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more