ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗರ ಮೇಲೆ ಹಿಂದಿ ಸವಾರಿ ಏಕೆ ಅಷ್ಟು ಸುಲಭವೆಂದರೆ...

By ಸಂಪಿಗೆ ಶ್ರೀನಿವಾಸ್, ಬೆಂಗಳೂರು
|
Google Oneindia Kannada News

ಹಿಂದಿ ಭಾರತ ಸರ್ಕಾರದ ಅಧಿಕೃತ ಭಾಷೆ ಮಾತ್ರ. ಅದು ರಾಷ್ಟ್ರ ಭಾಷೆ ಎಂದು ಭಾರತದ ಸಂವಿಧಾನದಲ್ಲಿ ಎಲ್ಲಿಯೂ ಹೇಳಿಲ್ಲ. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆ ಎಂದು ಕೇಂದ್ರ ಸರ್ಕಾರಗಳು ಬೇರೆ ರಾಜ್ಯಗಳ ಮೇಲೆ, ಅದರಲ್ಲೂ ದಕ್ಷಿಣದ ರಾಜ್ಯಗಳ ಮೇಲೆ ಹೇರುತ್ತ ಬಂದಿವೆ.

ಹಿಂದಿ ಭಾಷೆ ಉತ್ತರ ಭಾರತದ ರಾಜ್ಯಗಳಾದ ಉತ್ತರಪ್ರದೇಶ, ಹರ್ಯಾಣ, ಮಧ್ಯಪ್ರದೇಶ, ಹಿಮಾಚಲಪ್ರದೇಶ, ಉತ್ತರಾಂಚಲ ಮತ್ತು ದೆಹಲಿಯಲ್ಲಿ ಮಾತ್ರ ಆಧಿಕೃತ ಭಾಷೆಯಾಗಿದೆ. ಉಳಿದ ರಾಜ್ಯಗಳಲ್ಲಿ ಆಯಾ ರಾಜ್ಯಗಳ ಬಹುಸಂಖ್ಯಾತ ಜನರಾಡುವ ಭಾಷೆಯನ್ನು ಅಧಿಕೃತ ಭಾಷೆ ಎಂದು ಸಂವಿಧಾನ ಹೇಳಿದೆ. ಹೀಗಿದ್ದೂ ಹಿಂದಿಯನ್ನು ಎಲ್ಲಾ ರಾಜ್ಯಗಳ ಮೇಲೆ ಹೇರುವ ಕೇಂದ್ರ ಸರ್ಕಾರದ ನೀತಿ ಸಮಂಜಸವಲ್ಲ.

ಹಿಂದಿ ರಾಷ್ಟ್ರಭಾಷೆಯೆಂದ ವೆಂಕಯ್ಯನ ವಿರುದ್ಧ ಸಿಡಿದೆದ್ದ ಭಾಷಾಪ್ರೇಮಿಗಳುಹಿಂದಿ ರಾಷ್ಟ್ರಭಾಷೆಯೆಂದ ವೆಂಕಯ್ಯನ ವಿರುದ್ಧ ಸಿಡಿದೆದ್ದ ಭಾಷಾಪ್ರೇಮಿಗಳು

ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಿಂದಿ ಭಾಷೆ ಅರ್ಥವಾಗುವ, ಅಥವಾ ಮಾತನಾಡುವ ಮಂದಿ ಬಹಳ ಕಡಿಮೆ. ಉತ್ತರ ಭಾರತದಿಂದ ವಲಸೆ ಬಂದಿರುವ ಜನರಷ್ಟೇ ಕರ್ನಾಟಕದಲ್ಲಿ ಹಿಂದಿ ಮಾತನಾಡುತ್ತಿದ್ದರು.

ಆದರೆ ಕೇಂದ್ರ ಸರ್ಕಾರ ಈ ರಾಜ್ಯಗಳಲ್ಲಿ ಹಿಂದಿ ಪ್ರಚಾರ ಪರಿಷತ್ತುಗಳ ಮೂಲಕ, ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರ ಎಂದು ಹೇಳಿ ಹಿಂದಿ ಭಾಷೆಯನ್ನು ಕಡ್ಡಾಯವಾಗಿ ಕಲಿಸುವ ಮೂಲಕ, ದೂರದರ್ಶನ ಮತ್ತು ಆಕಾಶವಾಣಿ ಕೇಂದ್ರಗಳಲ್ಲಿ ಅದರಲ್ಲೂ ಇತ್ತೀಚೆಗೆ ಎಫ್.ಎಂ ರೇಡಿಯೋದಲ್ಲಿ ಹಿಂದಿ ಕಾರ್ಯಕ್ರಮಗಳನ್ನು ಹೆಚ್ಚಾಗಿ ಪ್ರಸಾರ ಮಾಡುವ ಮೂಲಕ ಹಿಂದಿಯನ್ನು ಹೇರುತ್ತಿದ್ದಾರೆ.

ನಮ್ಮ ಮೆಟ್ರೋದಲ್ಲಿ ನಿಲ್ಲದ ಹಿಂದಿ ಹೇರಿಕೆ, ಟ್ವೀಟ್ ಅಭಿಯಾನನಮ್ಮ ಮೆಟ್ರೋದಲ್ಲಿ ನಿಲ್ಲದ ಹಿಂದಿ ಹೇರಿಕೆ, ಟ್ವೀಟ್ ಅಭಿಯಾನ

ಇದಲ್ಲದೆ, ಹಿಂದಿ ಸಿನಿಮಾಗಳ ಮೂಲಕ, ನಮ್ಮ ಮೆಟ್ರೋ, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳ ನಾಮ ಫಲಕಗಳಲ್ಲಿ ಹಿಂದಿ ಭಾಷೆಯ ನಾಮ ಫಲಕಗಳನ್ನು ತುರುಕಿ, ಹಿಂದಿಯನ್ನು ಕನ್ನಡಿಗರ ಮೇಲೆ ಹೇರಿ ಕನ್ನಡಿಗರು ಹಿಂದಿ ಕಲಿಯುವಂತೆ ಪ್ರಚೋದಿಸಿದ್ದಾರೆ, ಪ್ರಚೋದಿಸುತ್ತಿದ್ದಾರೆ.

ಹಿಂದಿ ರಾಷ್ಟ್ರಭಾಷೆ ಎಂಬ ಪ್ರಚೋದನೆಯನ್ನು ಬಹಳಷ್ಟು ಕನ್ನಡಿಗರು ನಂಬಿ ಹಿಂದಿಯನ್ನು ರಾಷ್ಟ್ರ ಭಾಷೆಯೆಂದು ಆತ್ಮೀಯತೆಯಿಂದ ಸ್ವೀಕರಿಸಿಬಿಟ್ಟಿದ್ದಾರೆ. ಹಿಂದಿಯೊಂದೇ ರಾಷ್ಟ್ರಭಾಷೆ ಎಂದರೆ ಭಾರತ ಒಕ್ಕೂಟದ ಒಂದು ರಾಜ್ಯವಾದ ಕರ್ನಾಟಕದ ಭಾಷೆ ಕನ್ನಡ ಈ ರಾಷ್ಟ್ರದ ಭಾಷೆಯಲ್ಲವೇ? ಹಿಂದಿಯೇತರ ತಮಿಳು, ಮಲಯಾಳ, ತೆಲುಗು, ಬಂಗಾಳಿ, ಮರಾಠಿ, ಒಡಿಯಾ, ಅಸ್ಸಾಮಿ, ಪಂಜಾಬಿ ಇತ್ಯಾದಿ ಭಾಷೆಗಳು ನಮ್ಮ ರಾಷ್ಟ್ರದ ಭಾಷೆಗಳಲ್ಲವೇ?

ಇದರ ಪರಿಣಾಮವಾಗಿ ಬಹಳಷ್ಟು ಕನ್ನಡಿಗರಿಗೆ ಹಿಂದಿ ಭಾಷೆಯ ಬಗ್ಗೆ ಸಲ್ಲದ ವ್ಯಾಮೋಹ ಶುರುವಾಗಿದೆ. ಶಾಲಾ-ಕಾಲೇಜುಗಳಲ್ಲಿ, ಕೆಲಸಮಾಡುವ ಸ್ಥಳಗಲ್ಲಿ ಉತ್ತರ ಭಾರತದ ವಲಸಿಗರೊಂದಿಗೆ ಕನ್ನಡಿಗರು ಸುಲಲಿತವಾಗಿ ಹಿಂದಿಯಲ್ಲಿ ವ್ಯವಹರಿಸುತ್ತಾರೆ. ಬೆಂಗಳೂರಿನ ಯಾವುದೇ ವಾಣಿಜ್ಯ ಮಳಿಗೆಗಳಿಗೆ ಹೋದರೂ ಅಲ್ಲಿನ ಸಿಬ್ಬಂದಿ ಹಿಂದಿ ಭಾಷೆಯಲ್ಲಿ ವ್ಯವಹರಿಸುತ್ತಾರೆ. ನಮ್ಮ ಕನ್ನಡಿಗರು ಉದಾರ ಮನೋಭಾವದಿಂದ ಹಿಂದಿ ಭಾಷೆಯಲ್ಲೇ ವ್ಯವಹರಿಸುತ್ತಾರೆ. ಇದರಿಂದ ಉತ್ತರ ಭಾರತೀಯರು ಕನ್ನಡ ಕಲಿಯದೆ ತಮ್ಮ ಭಾಷೆ ರಾಷ್ಟ್ರ ಭಾಷೆ ಎನ್ನುವ ಅಹಂಕಾರದಿಂದ ಕನ್ನಡ ಭಾಷೆಯನ್ನು, ಸಂಸ್ಸೃತಿಯನ್ನು ಕೀಳಾಗಿ ನೋಡುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ.

ಹಿಂದಿ ಬರಲಿಲ್ಲ ಅಂದರೆ ದೇಶ ಬಿಟ್ಟು ತೊಲಗಿ ಎಂದ ಮಂಡ್ಯದ ಬ್ಯಾಂಕ್ ಸಿಬ್ಬಂದಿಹಿಂದಿ ಬರಲಿಲ್ಲ ಅಂದರೆ ದೇಶ ಬಿಟ್ಟು ತೊಲಗಿ ಎಂದ ಮಂಡ್ಯದ ಬ್ಯಾಂಕ್ ಸಿಬ್ಬಂದಿ

ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಲ್ಲಿ ಹಿಂದಿ ಪ್ರಚಾರ ಪರಿಷತ್ತುಗಳನ್ನು ಸ್ಥಾಪಿಸಿ ರಾಷ್ಟ್ರೀಕೃತ ಬ್ಯಾಂಕುಗಳು, ಜೀವ ವಿಮಾ ನಿಗಮ, ಅಂಚೆ ಇಲಾಖೆ, ಭಾರತೀಯ ರೈಲ್ವೆ, ಇತ್ಯಾದಿ ಕೇಂದ್ರೀಯ ಸಂಸ್ಥೆಗಳಲ್ಲಿ ಹಿಂದಿಯನ್ನು ವ್ಯಾಪಕವಾಗಿ ಅನುಷ್ಠಾನಗೊಳಿಸಿದ್ದಾರೆ. ಇದರಿಂದ ಕರ್ನಾಟಕದಲ್ಲಿ ಕನ್ನಡಕ್ಕೆ ಇರಬೇಕಾದ ಸ್ಥಾನವನ್ನು ಹಿಂದಿ ಕಬಳಿಸಿಬಿಟ್ಟಿದೆ. ಕೇಂದ್ರೀಯ ಸಂಸ್ಥೆಗಳಾದ ಅಂಚೆ ಇಲಾಖೆ, ಜೀವ ವಿಮಾ ನಿಗಮ ಇತ್ಯಾದಿ ಸಂಸ್ಥೆಗಳಲ್ಲಿ ತ್ರಿಭಾಷಾ ಸೂತ್ರವನ್ನು ಗಾಳಿಗೆ ತೂರಿದ್ದಾರೆ. ಅರ್ಜಿಗಳು, ಚಲನ್‌ಗಳು, ಇನ್ನಿತರ ವ್ಯವಹಾರಗಳಲ್ಲೂ ಹಿಂದಿ, ಇಂಗ್ಲಿಷ್ ಭಾಷೆಗಳಿಗೆ ಮಾತ್ರ ಅಲ್ಲಿ ಸ್ಥಾನವಿದೆ. ಕನ್ನಡ ಮಾಯವಾಗಿದೆ. ಕನ್ನಡಿಗರ ಹಿತಕಾಯಬೇಕಾದ ರಾಜ್ಯ ಸರ್ಕಾರ ಇದನ್ನೆಲ್ಲಾ ನೋಡಿಕೊಂಡು ಮೌನವಾಗಿದೆ.

ಚೆನ್ನೈ, ಕೊಚಿ, ಕೊಲ್ಕತ್ತಾ, ದೆಹಲಿ ಮೆಟ್ರೋಗಳಲ್ಲಿ ಅಲ್ಲಿನ ಭಾಷೆ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ನಾಮಫಲಕಗಳಿವೆ. ಬೆಂಗಳೂರು ಮೆಟ್ರೊನಲ್ಲಿ ಮಾತ್ರ ಯಾಕೆ ಹಿಂದಿ ಬೇಕು? ತಮಿಳುನಾಡಿನಲ್ಲಿ ಮೊದಲಿನಿಂದಲೂ ಹಿಂದಿ ಹೇರಿಕೆಗೆ ಅಲ್ಲಿನ ಜನ ಕಡು ವಿರೋಧ ವ್ಯಕ್ತಪಡಿಸಿ ಹೋರಾಟ ಮಾಡಿದ್ದರೆ. ತಮಿಳುನಾಡಿನಲ್ಲಿ ಹಿಂದಿ ಹೇರಲು ಕೇಂದ್ರ ಹಿಂದೆ ಮುಂದೆ ನೋಡುತ್ತೆ. ಆದರೆ ಕರ್ನಾಟಕದ ಬಹಳಷ್ಟು ಮಂದಿ ಹಿಂದಿ ರಾಷ್ಟ್ರ ಭಾಷೆಯಲ್ಲದಿದ್ದರೂ ಹಿಂದಿ ರಾಷ್ಟ್ರ ಭಾಷೆಯೆಂಬ ಭ್ರಮೆಯಲ್ಲಿರುವುದರಿಂದ ಕನ್ನಡಿಗರ ಮೇಲೆ ಹಿಂದಿ ಸರಾಗವಾಗಿ ಹೇರಲಾಗುತ್ತಿದೆ.

ಕನ್ನಡಿಗರು ಹಿಂದಿ ಪ್ರೇಮದಿಂದ ಎಚ್ಚೆತ್ತು ಕೊಳ್ಳದಿದ್ದರೆ ಬೆಂಗಳೂರಿನಲ್ಲಿ ವಲಸೆ ಬಂದಿರುವ ಲಕ್ಷಾಂತರ ಉತ್ತರ ಭಾರತೀಯರ ಕನ್ನಡ ವಿರೋಧಿ ದಬ್ಬಾಳಿಕೆ ಇನ್ನೂ ಹೆಚ್ಚಿ ಕನ್ನಡದ ಜಾಗದಲ್ಲಿ ಹಿಂದಿ ರಾರಾಜಿಸುತ್ತದೆ. ಈಗಾಗಲೇ ಕೇಂದ್ರ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಚಲನ್ಗಳಲ್ಲಿ, ನಾಮಫಲಕಗಳಲ್ಲಿ ಹಿಂದಿ, ಇಂಗ್ಲಿಷ್ ಮಾತ್ರ ಇವೆ. ಉತ್ತರ ಭಾರತದಿಂದ ವಲಸೆ ಬಂದಿರುವ ಬ್ಯಾಂಕ್ ಸಿಬ್ಬಂದಿ ಹಿಂದಿಯಲ್ಲೇ ವ್ಯವಹಾರ ಮಾಡಲು ತಾಕೀತು ಮಾಡುತ್ತಿದ್ದಾರೆ.

ಇತ್ತಿಚೆಗೆ ಮಂಡ್ಯದ ಬ್ಯಾಂಕೊಂದರಲ್ಲಿ ಕನ್ನಡದಲ್ಲಿ ವ್ಯವಹಾರ ಮಾಡಲು ಬಯಸಿದ ಕನ್ನಡಿಗ ಗ್ರಾಹಕನಿಗೆ ಉತ್ತರದ ಬ್ಯಾಂಕ್ ಅಧಿಕಾರಿ ರಾಷ್ಟ್ರ ಭಾಷೆ ಹಿಂದಿ ಕಲಿತು ವ್ಯವಹರಿಸಿ ನಾನು ಕನ್ನಡ ಕಲಿಯೋಲ್ಲ ಎಂಬ ಉದ್ಧಟತನ ತೋರಿದ್ದಾನೆ. ಕನ್ನಡದ ಗಂಡು ಮೆಟ್ಟಿದ ನಾಡಿನಲ್ಲೇ ಇಷ್ಟು ಧೈರ್ಯದಿಂದ ಕನ್ನಡ ವಿರೋಧಿ ಧೋರಣೆ ತೋರಿಸುತ್ತಿರುವ ಈ ಉತ್ತರ ಭಾರತೀಯರು ಬೆಂಗಳೂರಿನಲ್ಲಿ ಹಿಂದಿ ರಾಷ್ಟ್ರ ಭಾಷೆಯೆಂಬ ಸುಳ್ಳು ಅಹಂನಿಂದ ಇನ್ನೂ ಹೆಚ್ಚು ಉದ್ಧಟತನ ಮೆರೆಯುತ್ತಿದ್ದಾರೆ.

ಕನ್ನಡಿಗರು ಹಿಂದಿ ರಾಷ್ಟ್ರಭಾಷೆ ಎನ್ನುವ ಭ್ರಮೆಯಿಂದ ಆದಷ್ಟು ಬೇಗ ಹೊರಬರಬೇಕಾಗಿದೆ. ಹಿಂದಿಯಿಂದ ಕನ್ನಡಕ್ಕೆ ಆಗಿರುವ, ಆಗುತ್ತಿರುವ ಹಾನಿಯ ಬಗ್ಗೆ ಜಾಗೃತರಾಗಬೇಕಿದೆ. ಇಲ್ಲವಾದರೆ ಮುಂದೊಂದು ದಿನ ಕರ್ನಾಟಕದಲ್ಲಿ ಕನ್ನಡದ ಸ್ಥಾನದಲ್ಲಿ ಹಿಂದಿ ಮೆರೆಯುವ ದಿನ ದೂರವಿರಲಾರದು.

English summary
Why is it easy to impose Hindi on Kannadigas in Karnataka? It is because many Kannadigas have already accepted that Hindi is national language, many don't hesitate to speak in Hindi, instead of Kannada. It is because Kannadiagas are not showing united fight against Hindi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X