ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆಗಾಲದ ಇಳಿಸಂಜೆಯಲ್ಲಿ ಮೆಣಸಿನಕಾಳು ತಂಬುಳಿ!

By ವನಿತ ವೈ ಜೈನ್
|
Google Oneindia Kannada News

ಅಯ್ಯೋ ನಮ್ಮ ಮನೆ ಒಂಥರಾ ಮಲೆನಾಡಿನ ಮನೆಯೂ ಅಲ್ಲ, ಪೂರ್ತಿ ನಗರಕ್ಕೆ ತಳುಕಿಹಾಕಿಕೊಂಡಿರುವ ಗೃಹವೂ ಅಲ್ಲ. ನಮ್ಮ ಕುಟುಂಬ ಮೂಲತಃ ಸಾಗರ ತಾಲೂಕಿನ ಸಿಗಂದೂರು ಬಳಿಯ ಬ್ಯಾಕೋಡು ಎಂಬ ಪುಟ್ಟ ಹಳ್ಳಿ. ಇಲ್ಲಿಗೆ ಹೋಗ್ಬೇಕಾದ್ರೇ ಒಂದು ಅರಬ್ಬೀ ಸಮುದ್ರಕ್ಕೆ ಹೋಗೋಕೆ ಕಷ್ಟ ಪಡ್ಬೇಕೋ ಬೇಡ್ವೋ ಗೊತ್ತಿಲ್ಲ. ಆದರೆ ಇಲ್ಲಿಗೆ ಹೋಗೋಕೆ ಒಂದು ವಾರದ ಮೊದಲೇ ಯೋಚಿಸಿರಬೇಕು. ಯಾಕಂದ್ರೇ ಇರೋದು ಒಂದೋ ಎರಡೋ ಬಸ್ಸುಗಳು. ಅಂಡಮಾನ್ ನಿಕೋಬಾರ್ ದ್ವೀಪ ಎಂದೇ ಪ್ರಸಿದ್ಧಿ ಪಡೆದ ನನ್ನೂರು ಸಾಗರ ತಾಲೂಕಿನಿಂದ ಸುಮಾರು 60 ಕಿ.ಮೀ ಇದ್ದು, ಹಸಿರು ದಟ್ಟ ಕಾನನದ ನಡುವೆ 10 ಅಥವಾ 15 ಮನೆಗಳ ಒಂದು ಚಿಕ್ಕ ಕುಗ್ರಾಮ ಎಂದರೂ ತಪ್ಪಿಲ್ಲ.

ಬುಡ್ಡಿ ದೀಪದಲ್ಲಿ ಇಂದಿಗೂ ಕಾಲ ತಳ್ಳುತ್ತಿರುವ ನನ್ನ ಊರಿನ ಹಸಿರು ಸೌಂದರ್ಯ ದೇವತೆಯನ್ನು ಕಾಣೋಕೆ ನೀವೇ ಒಮ್ಮೆ ಬಂದು ನೋಡಿ. ನಾಲ್ಕು ದಿಕ್ಕಿನಲ್ಲೂ ಕಾಣುವ ಹಸಿರು ಕಾನನದ ಜೊತೆಗೆ ಅಡಿಕೆ ಮರಗಳ ದಟ್ಟ ಸಾಲುಗಳು, ಮೈ ತುಂಬಿ ನಿಂತ ಭತ್ತದ ಗದ್ದೆಗಳು, ಇವುಗಳಿಗೆ ಕುಂಕುಮದಂತಿರುವ ಕೆಂಪು ಮಣ್ಣಿನ ರಸ್ತೆ, ಒಂದು ಗಂಟೆಗೊಮ್ಮೆಯೋ ಅಥವಾ ಅದಕ್ಕೂ ಹೆಚ್ಚು ಕಾಲದ ನಂತರ ಕೇಳುವ ವಾಹನದ ಹಾರನ್ ಶಬ್ದಗಳು ಹೀಗೆ ನಿಶಬ್ದತೆಯ, ಹಸಿರು ಸೊಬಗಿನ ನಮ್ಮೂರು ಚಂದವೋ.....ನಿಮ್ಮೂರು ಚಂದವೋ.....ಹೇಳಬಲ್ಲೆಯೇನು?[ಅಪ್ಪೆಮಿಡಿ ಉಪ್ಪಿನಕಾಯಿ ಬೇಕಾ? ಭಟ್ಟರಿಗೆ ಫೋನ್ ಮಾಡಿ]

Unadulterated village, monsoon rain and tasty Pepper tambuli

ಇಲ್ಲಿಂದ ಶಿವಮೊಗ್ಗಕ್ಕೆ ಬಂದು 25 ವರ್ಷಗಳು ಕಳೆದೇ ಹೋದವು. ಅದರೆ ಅಲ್ಲಿನ ನಂಟನ್ನು ಇನ್ನೂ ಉಳಿಸಿಕೊಂಡಿರುವುದು ಮಾತ್ರ ಇಂದಿಗೂ ನನಗೆ ಸಂತೋಷ ಕೊಡುವ ಸಂಗತಿ. ಅಲ್ಲಿನ ಹಬ್ಬಹರಿದಿನದಿಂದ ಹಿಡಿದು ಆಹಾರ ಸಂಸ್ಕೃತಿಯ ವರೆಗೂ ಅಲ್ಲಿಯ ಸಂಸ್ಕೃತಿಯನ್ನೇ ಅನುಸರಿಸುತ್ತಿರುವುದು ಹೆಮ್ಮೆ ಎನಿಸುತ್ತದೆ. ಹೊರಗಿನಿಂದ ಮನೆಗೆ ಬಂದವರೂ ಇದನ್ನು ಒಪ್ಪಿ ಮೆಚ್ಚಿದ್ದು ಉಂಟು.

ಬೇಸಿಗೆ, ಮಳೆಗಾಲ ಬಂತೆಂದರೆ ಸಾಕು ಎಲ್ಲರೂ ಉಡುಪು, ಮನೆಯ ರಿಪೇರಿ ಹೀಗೆ ನಾನಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ನಮ್ಮ ಮನೆಯಲ್ಲಿ ಅಡುಗೆಗಳಿಗೆ ತಯಾರಿ ಮಾಡಿಕೊಳ್ಳುತ್ತಾರೆ. ಅದರ ಸಂಭ್ರಮ ಹಬ್ಬಹರಿದಿನಗಳಿಗಿಂತ ಒಂದು ಕೈ ಮೇಲೆಯೇ ಇರುತ್ತದೆ, ಬೇಸಿಗೆ ಮತ್ತು ಮಳೆಗಾಲದಲ್ಲಿ ನಮ್ಮ ಮನೆಯ ಪಾತ್ರೆಗಳು ಬೇಳೆ, ತರಕಾರಿ ಸಾರುಗಳನ್ನು ಮರೆತೇ ಬಿಡುತ್ತವೆ. ಇದನ್ನು ಕಾಣಬೇಕೆಂದರೆ ಇನ್ನು ಚಳಿಗಾಲವೇ ಬರಬೇಕು.[ಬಾರ್ಬಿಕ್ಯೂ ನೇಷನ್ ಫುಡ್ ರುಚಿ ಎಲ್ಲೆಡೆ ಹಬ್ಬುತ್ತಿದೆ]

ಹೌದು....ಬೇಸಿಗೆ ಬಂತೆಂದರೆ ಮಳೆಗಾಲಕ್ಕೆ ಬೇಕಾದ ಮಜ್ಜಿಗೆ ಮೆಣಸು, ಹಲಸಿನಕಾಯಿ ಹಪ್ಪಳ, ಅಪ್ಪೆಮಿಡಿ ಉಪ್ಪಿನಕಾಯಿ, ವಾಟೆ ಹುಳಿ, ಬಾಟಲಿಗಟ್ಟಲೇ ಮೆಣಸಿನಕಾಳು ಶೇಖರಣೆ ಮಾಡಲು ಫೋನುಗಳು ರೆಡಿಯಾಗುತ್ತದೆ. ಇಲ್ಲ ಅಂದ್ರೆ ಅಪ್ಪನ ಕಾಲು ನಮ್ಮ ಊರಿನ ಬಸ್ಸಿನ ದಾರಿ ಹಿಡಿಯುತ್ತದೆ. ಅದಿರಲಿ ಮಳೆಗಾಲಕ್ಕಿಂತ ಮುಖ್ಯವಾಗಿ ಬೇಸಿಗೆ ಕಾಲದ ಬಗ್ಗೆ ಮಾತಾಡ್ತೀನಿ.

ಬೇಸಿಗೆ ಎಂದರೆ ಫುಲ್ ಹಾಟ್ ಹಾಟ್ ನೋ ಕೂಲ್ ಅಲ್ವಾ? ಇನ್ನು ಮಾಡುವ ಅಡುಗೆಯೂ ಫುಲ್ ಹಾಟ್ ಆಗ್ಬಿಟ್ರೇ....ದೇವ್ರೇ....ನೆನಸಿಕೊಳ್ಳೋಕೇ ಕಷ್ಟ....ಇನ್ನು ತಿನ್ನೋದು ಹೇಗೆ? ಕಷ್ಟನಪ್ಪಾ ಕಷ್ಟ! ಆದರೆ ನನ್ನ ಮನೆಲೀ ಮಾತ್ರ ಆ ಪ್ರಾಬ್ಲಂ ಇಲ್ಲ...ಯಾಕೆ ಅಂತೀರಾ? ಬೇಸಿಗೆಯಲ್ಲಿ ನಮ್ಮ ಮನೆಯ ಪಾತ್ರೆಗಳು ಕಾಣುವುದು ಮಲೆನಾಡಿನ ನಾನಾ ಗೊಜ್ಜುಗಳನ್ನು, ನಗರದ ಮಸಾಲೆಯ ಸಾಂಬರ್ ಗಳನ್ನಲ್ಲ. ನಿಮಗೂ ಬೇಕಾ ಆ ಗೊಜ್ಜುಗಳ ಲಿಸ್ಟ್...ಜಸ್ಟ್ ಕ್ಲಿಕ್ ಇಟ್....[ಕಾಫಿ ಪ್ರಿಯರಿಂದ ಕಾಫಿ ಪ್ರಿಯರಿಗಾಗಿ ಆನ್ಲೈನ್ ಕೆಫೆ]

ತಂಬುಳಿ ಸೊಪ್ಪಿನ ಗೊಜ್ಜು, ಕಂಚಿನ ಕಾಯಿ ಗೊಜ್ಜು, ಅಮ್ಟೆ ಕಾಯಿ ಗೊಜ್ಜು, ಬದನೆಕಾಯಿ, ಟೊಮ್ಯಾಟೋ ಗೊಜ್ಜು, ಜೀರಿಗೆ ಗೊಜ್ಜು, ಮಾವಿನಕಾಯಿ ಗೊಜ್ಜು, ಬೆಳ್ಳುಳ್ಳಿ ಗೊಜ್ಜು, ಕೆಂಪು ಮೆಣಸಿನ ಗೊಜ್ಜು, ಹಗಲಕಾಯಿ ಗೊಜ್ಜು, ನುಗ್ಗೆ ಸೊಪ್ಪಿನ ಗೊಜ್ಜು, ಕರಿಬೇವು ಸೊಪ್ಪಿನ ಗೊಜ್ಜು, ಮಾವಿನಕಾಯಿ ನೀರು ಗೊಜ್ಜು, ಶುಂಠಿ ತಂಬುಳಿ, ಸೌತೆಕಾಯಿ ಪಚಡಿ ಹೀಗೆ.....ಒಟ್ಟಿನಲ್ಲಿ ಬೇಸಿಗೆ ಎಂದರೆ ನಮ್ಮ ಮನೆ ಪಾತ್ರೆ ಗೊಜ್ಜುಗಳ ಸಾಮ್ರಾಜ್ಯ ಆಗಿಬಿಟ್ಟಿರುತ್ತದೆ. ಆಹಾ! ಗೊಜ್ಜುಗಳ ಲಿಸ್ಟ್ ನೋಡಿ ಸುಸ್ತು ಆಯ್ತಾ! ಇವನ್ನೆಲ್ಲಾ ಬಿಸಿ ಅನ್ನದೊಂದಿಗೆ ತಿನ್ನುತ್ತಿದ್ರೇ..ಅಬ್ಬಬ್ಬಾ ಎಂಥಾ ರುಚಿ..ಅದರಲ್ಲೂ ಅಮ್ಮ ಮಾಡಿದ್ರೇ ಕೇಳ್ಬೇಕಾ.....ಇನ್ನು ಒಂದೆರಡು ತುತ್ತು ಜಾಸ್ತಿಯೇ ಹೋಗುತ್ತೇ....

ಹೊರಡ್ಬೇಡಿ ಇದು ಮಳೆಗಾಲ...ಉಧೋ ಎಂದು ಸುರಿಯುವ ಮಳೆಗಾಲಕ್ಕೆ ಕೇವಲ ಹೊದಿಕೆ, ಸ್ವೆಟರ್ ಗಳನ್ನು ಬೀರುವಿನಲ್ಲೋ, ಪೆಟ್ಟಿಗೆಯಲ್ಲಿ ಮಡಚಿ ಇಟ್ಟು ಸೇಫ್ ಮಾಡಿದ್ರೇ ಸಾಕಾಗುತ್ತಾ ಖಂಡಿತ ಸಾಕಾಗಲ್ಲ. ಅಡುಗೆಗೂ ತಯಾರಿ ಬೇಕಾಗುತ್ತದೆ. ಮಳೆಗಾಲದಲ್ಲಿ ಮಲೆನಾಡಿನಲ್ಲಿ ತಯಾರು ಮಾಡುವ ವಿವಿಧ ಸಾರುಗಳ ಲಿಸ್ಟನ್ನೂ ಕೊಡ್ತೀನಿ...ಪ್ಲೀಸ್ ರೈಟ್ ಇಟ್...ಕೇವಲ ದೇಹದ ಹೊರಗೆ ಬೆಚ್ಚಗೆ ಇದ್ರೆ ಸಾಕಾಗಲ್ಲಾ ರೀ..ದೇಹದ ಒಳಗೂ ನಾವು ಸಖತ್ ಸ್ಟ್ರಾಂಗ್ ಇರಬೇಕಲ್ವಾ?[ಒಣಹಣ್ಣುಗಳ ಸರದಾರ ರಸಲ್ ಮಾರ್ಕೆಟ್ ಮಹಮ್ಮದ್]

ಮುಖ್ಯವಾಗಿ ಮೆಣಸಿನಕಾಳು ತಂಬುಳಿ, ಮಳೆಗಾಲದಲ್ಲಿ ನಮ್ಮ ಮನೆಯ ವಿಶೇಷ ಖಾದ್ಯ. ಇದರ ಜೊತೆಗೆ ಕೆಸ್ಸಿನ ಸೊಪ್ಪಿನ ಪಲ್ಯ, ನಿಂಬೆ ಹುಳಿ ಸಾರು, ವಾಟೆ ಹುಳಿ ಸಾರು, ಮಜ್ಜಿಗೆ ಸಾರು (ಮಲೆನಾಡಿನಲ್ಲಿ ಬೋರಿ ಅಂತಾರೆ). ಇವೆಲ್ಲವೂ ದೇಹಕ್ಕೆ ಶಕ್ತಿ ನೀಡುವ ಮಲೆನಾಡಿನ ಮಳೆಗಾಲದ ರುಚಿಕಟ್ಟಾದ ಅಡುಗೆಗಳು. ನನ್ನಮ್ಮ ಬಾಣಲಿಗೆ ಮೆಣಸಿನಕಾಳು ಹಾಕಿ ಹುರಿಯುತ್ತಿದ್ದರೆ ಆವಾಗಲೇ ನನ್ನ ಬಾಯಲ್ಲಿ ನೀರು ಬರೋಕೆ ಸ್ಟಾರ್ಟ್ ಆಗುತ್ತೆ...

ಯಾಕೆ ಗೊತ್ತಾ? ಆವತ್ತು ನಮ್ಮ ಮನೆಲೀ ಮೆಣಸಿನಕಾಳು ತಂಬುಳಿ ಮಾಡ್ತಾ ಇರ್ತಾರೆ...ಬಿಸಿ ಅನ್ನ ತಟ್ಟೆಗೆ ಹಾಕಿಕೊಂಡು ಜೊತೆಗೆ ಎರಡು ಚಮಚ ತುಪ್ಪದೊಂದಿಗೆ ಮೆಣಸಿನಕಾಳು ತಂಬುಳಿಯೊಂದಿಗೆ ಕಲಿಸಿಕೊಂಡು, ಎಣ್ಣೆಯಲ್ಲಿ ಕರಿದ ಹಲಸಿನಕಾಯಿ ಹಪ್ಪಳ, ಮಜ್ಜಿಗೆ ಮೆಣಸು, ಅಪ್ಪೆಮಿಡಿ ಉಪ್ಪಿನಕಾಯಿ ಜೊತೆ ತುತ್ತುಗಳನ್ನು ಬಾಯಿಗೆ ಇಟ್ರೇ.....ಆಹಾಹಾ!!!! ಸಾಕು ರೀ ಸಾಕು.....ಇದು ಮಳೆಗಾಲ ಬೇರೆ ನಾನು ಇದೀಗ ಬೆಂಗಳೂರಿನಲ್ಲಿದ್ದೀನಿ...ತಂಬುಳಿ ನೆನಸಿಕೊಂಡು ಆಮೇಲೆ ಆಫೀಸ್ ಗೆ ರಜೆ ಹಾಕಿ ಮನೆಗೆ ಹೋಗ್ಬೇಕಾಗುತ್ತೇ ಮೆಣಸಿನಕಾಳು ತಂಬುಳಿ, ಬಿಸಿ ಅನ್ನ ತಿನ್ನೋಕೆ.....ನಿಮಗೆ ನಮ್ಮೂರಿನ ವಾಟೆಹುಳಿ ಸಾಂಬಾರ್, ಮಜ್ಜಿಗೆ ಸಾರು (ಬೋರಿ) ಹೇಗೆ ಮಾಡೋದು ಅಂತ ಬೇಕಾ....ಹಾಗಾದ್ರೆ ಕಾಯ್ತಾ ಇರೀ....

English summary
Oneindia Kannada Food Talk: Thank God my village in Shivamogga district, Sagar taluk is still unadulterated with fresh air and without urbanization. We frequently go their during our holidays. I will never forget the taste of Pepper Tambuli prepared by my mother. Would you like to have a taste o
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X