ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ವಾರ ಮನೇಲಿ ಬೋರಿ ಮಾಡಿರಿ, ನಮ್ಮನ್ನೂ ಕರೀರಿ

By ವನಿತ.ವೈ ಜೈನ್
|
Google Oneindia Kannada News

ಮಲೆನಾಡಿನ ಅಡುಗೆ, ಹಬ್ಬಹರಿದಿನಗಳ ಸಂಭ್ರಮ ನಗರಕ್ಕಿಂತ ವಿಭಿನ್ನ ವಿಶೇಷತೆಯಿಂದ ಕೂಡಿರುತ್ತದೆ. ಅದರ ಸೊಗಸೇ ಬೇರೆ..ನಾಲಿಗೆಗೆ ರುಚಿ ಹಿಡಿಸುವ ಆಹಾರದಿಂದ ಹಿಡಿದು ಕಣ್ಣು, ಮನಸ್ಸು ತುಂಬುವ ಸೌಂದರ್ಯದಲ್ಲಿಯೂ ನಂಬರ್ ಒನ್. ಇದನ್ನು ನಾನು ಹೆಚ್ಚಾಗಿ ಹೇಳ್ಬೇಕಿಲ್ಲ. ಕಳೆದ ವಾರ ನಮ್ಮೂರಿನ ಅಡುಗೆ, ಅಂದ ಚಂದದ ಬಗ್ಗೆ ನನ್ನ ಸಂತಸದ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೆ. ಅದರಲ್ಲಿ ಕೆಲವು ಗೊಜ್ಜುಗಳ ಬಗ್ಗೆ, ಕೆಲವು ಸಾಂಬಾರುಗಳ ಬಗ್ಗೆ ಸಣ್ಣ ಪರಿಚಯ ಮಾಡಿಸಿದ್ದೆ. ಇಂದು ಈ ವಾರದ ಅಡುಗೆ ಮನೆಯಲ್ಲಿ ಮಲೆನಾಡಿನ ಬೋರಿ(ಮಜ್ಜಿಗೆ ಸಾರು) ಮಾಡೋದು ಹೇಗೆ ಅಂತ ಹೇಳ್ತಿನಿ...ಇದನ್ನು ಮಾಡಿ ನಿಮ್ಮ ಅಡುಗೆ ಮನೆಯನ್ನು ಮಲೆನಾಡಾಗಿಸಿ..ಜೊತೆಗೆ ನಮ್ಮನ್ನು ಊಟಕ್ಕೆ ಕರೆಯಿರಿ..

ಬೋರಿ ಎಂದರೇನು?
ನಗರದಲ್ಲಿ ಇದಕ್ಕೆ 'ಮಜ್ಜಿಗೆ ಸಾರು' ಎಂದು ಕರೆದರೆ, ಮಲೆನಾಡಿನಲ್ಲಿ ಇದನ್ನು 'ಬೋರಿ' ಅಂತಾರೆ. ಆದರೆ ನಗರದ ಮಜ್ಜಿಗೆ ಸಾರು, ಮಲೆನಾಡಿನ ಬೋರಿಗೆ ಹೋಲಿಸಿದರೆ ಮಾಡುವ ವಿಧಾನದಿಂದ ಹಿಡಿದು ಬಳಸುವ ಅಡುಗೆ ಸಾಮಾನು, ರುಚಿಯಲ್ಲಿ ಬಹಳಷ್ಟು ವೈವಿಧ್ಯತೆಯನ್ನು ಕಾಯ್ದುಕೊಳ್ಳುತ್ತದೆ...ಇದನ್ನು ಹೇಗೆ ಮಾಡೋದು ಮುಂದೆ ಓದಿ.....[ಮಳೆಗಾಲದ ಇಳಿಸಂಜೆಯಲ್ಲಿ ಮೆಣಸಿನಕಾಳು ತಂಬುಳಿ!]

Today Malenadu special recipe is Bori, make it taste it

ಬೇಕಾದ ಸಾಮಾಗ್ರಿಗಳು:
ಉದ್ದಿನಬೇಳೆ, ಕಡ್ಲೆ ಬೇಳೆ, ಕೊತ್ತಂಬರಿ ಬೀಜ, ಅಕ್ಕಿ, ಬೆಳ್ಳುಳ್ಳಿ, ಅರಿಶಿಣದ ಪುಡಿ, ತೆಂಗಿನಕಾಯಿ, ಒಣಮೆಣಸಿನಕಾಯಿ, ಮಜ್ಜಿಗೆ, ಜೀರಿಗೆ, ಸಾಸಿವೆ, ಕರಿಬೇವಿನ ಸೊಪ್ಪು. ನಿಮ್ಮ ಮನೆ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಅಡುಗೆ ಸಾಮಾನನ್ನು ಬಳಸಬಹುದು.

ಬೋರಿ(ಮಜ್ಜಿಗೆ ಸಾರು) ಮಾಡುವುದು ಹೇಗೆ?
ಇದನ್ನು ಮಾಡಲು ಶುರು ಮಾಡುವ ಮೊದಲು ಒಂದು ಸಣ್ಣ ಪಾತ್ರೆಯಲ್ಲಿ ಒಂದು ಹಿಡಿಯಷ್ಟು ಅಕ್ಕಿಯನ್ನು ನೆನಸಬೇಕು. ಆಮೇಲೆ ಬಾಣಲಿಗೆ ಉದ್ದಿನಬೇಳೆ, ಕಡ್ಲೆಬೇಳೆ, ಕೊತ್ತಂಬರಿ ಬೀಜ, ಜೀರಿಗೆ, ಒಣಮೆಣಸಿನಕಾಯಿಯನ್ನು ಹಾಕಿ ಸಣ್ಣ ಬೆಂಕಿಯಲ್ಲಿ ಹುರಿದುಕೊಳ್ಳಬೇಕು. ಬಳಿಕ ಹುರಿದಿಟ್ಟುಕೊಂಡಿದ್ದ ಎಲ್ಲವನ್ನು, ಸ್ವಲ್ಪ ಅರಿಶಿಣ ಪುಡಿ, ತೆಂಗಿನಕಾಯಿ ಹಾಗೂ ನೆನೆಸಿಟ್ಟುಕೊಂಡಿದ್ದ ಅಕ್ಕಿಯ ಜೊತೆ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಮಸಾಲೆಯನ್ನು ಒಂದು ಪಾತ್ರೆಯಲ್ಲಿ ಹಾಕಿ ಕುದಿಸಲು ಇಡಬೇಕು. ಆ ಸಮಯದಲ್ಲಿ ರುಬ್ಬಿದ ಮಸಾಲೆಯನ್ನು ಕುದಿಸುವ ಸಮಯದಲ್ಲಿ ಮಜ್ಜಿಗೆ ಬೆರೆಸಬೇಕು. ತಳ ಹಿಡಿಯುವ ಸಾಧ್ಯತೆ ಇರುವುದರಿಂದ ಸಣ್ಣ ಬೆಂಕಿಯಲ್ಲಿ ಕುದಿಸಿದರೆ ಒಳ್ಳೆಯದು. ಅದಕ್ಕೆ ಸ್ವಲ್ಪ ಬೆಳ್ಳುಳ್ಳಿ, ಕರಿಬೇವು, ಸಾಸಿವೆ, ಜೀರಿಗೆ ಹಾಕಿ ಒಗ್ಗರಣೆ ಮಾಡಿದರೆ ಮಲೆನಾಡಿನ ಬೋರಿ ನಿಮ್ಮ ಮುಂದೆ ರೆಡಿ.

ತರಕಾರಿಗಳನ್ನು ಬಳಸಬಹುದು!
ಇದನ್ನು ಬಡಿಸಿಕೊಂಡು ಊಟ ಮಾಡುವ ಸಮಯದಲ್ಲಿ ಸಾರಿನಲ್ಲಿ ಹೋಳುಗಳು ಇಲ್ಲವಲ್ಲ ಎಂದು ತರಕಾರಿ ಪ್ರಿಯರಿಗೆ ಬೇಸರ ಬರಬಹುದು. ಆದರೆ ಬೇಸರ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ನುಗ್ಗೆಕಾಯಿ, ಹೀರೆಕಾಯಿ, ಬಣ್ಣದ ಸೌತೆಕಾಯಿ, ಹಲಸಿನಹಣ್ಣಿನ ಬೀಜ, ತೊಂಡೆಕಾಯಿ, ಕುಂಬಳಕಾಯಿ ಈ ತರಕಾರಿಗಳನ್ನು ಬೋರಿಗೂ ಬಳಸಬಹುದು.

ಇದರಲ್ಲಿ ನಿಮಗೆ ಬೇಕಾದ ತರಕಾರಿಯನ್ನು ಆಯ್ದುಕೊಂಡು ಮೊದಲೇ ಬೇರೊಂದು ಪಾತ್ರೆಯಲ್ಲಿ ಬೇಯಿಸಿಟ್ಟುಕೊಳ್ಳಬೇಕು. ಬಳಿಕ ಮಜ್ಜಿಗೆ ಹಾಕಿ ಕುದಿಸುವ ಸಮಯದಲ್ಲಿ ಸಾರು ಕುದಿಯುವ ಸಮಯದಲ್ಲಿ ಅದಕ್ಕೆ ಬೇಯಿಸಿದ ತರಕಾರಿಯನ್ನು ಹಾಕಿ ಸಂಪೂರ್ಣ ಕುದಿಸಬಹುದು. ಬಳಿಕ ಒಗ್ಗರಣೆ ಮಾಡಿದರೆ ಮಲೆನಾಡಿನ ಬೋರಿ ಬಿಸಿ ಅನ್ನದೊಂದಿಗೆ ಸವಿಯಲು ಸಿದ್ದ.

ಆರೋಗ್ಯಕ್ಕೆ ಎಷ್ಟು ಒಳ್ಳೆಯದು?
ಬೇಸಿಗೆಕಾಲ ಮತ್ತು ಮಳೆಗಾಲ ಎರಡೂ ಕಾಲಕ್ಕೂ ಒಗ್ಗುವ ಇದು ದೇಹಕ್ಕೆ ತಂಪು ನೀಡುತ್ತದೆ. ಮಳೆಗಾಲದಲ್ಲಿ ಮಜ್ಜಿಗೆ, ಮೊಸರು ಬಳಸುವುದು ಬಹಳ ಕಡಿಮೆ..ಅಂತಹ ಸಮಯದಲ್ಲಿ ಮಜ್ಜಿಗೆ ಅಥವಾ ಮೊಸರನ್ನು ಈ ರೀತಿ ಮಾಡುವುದರಿಂದ ಶೀತ ಆಗುತ್ತದೆ ಎಂಬ ಭಯವನ್ನು ತಪ್ಪಿಸಬಹುದು.

ಇದು ಈ ವಾರದ ಅಡುಗೆಮನೆ ವಿಶೇಷ....ಮುಂದಿನವಾರ ಬೇರೊಂದು ಮಲೆನಾಡಿನ ಖಾದ್ಯದೊಂದಿಗೆ ನಿಮ್ಮನ್ನು ಭೇಟಿ ಮಾಡ್ತೇವೆ...ಅಲ್ಲಿವರೆಗೆ ಇಷ್ಟೊತ್ತು ಹೇಳಿಕೊಟ್ಟ ಮಲೆನಾಡಿನ ಬೋರಿಯನ್ನು ಮಾಡಿ, ಪಕ್ಕದಲ್ಲಿ ಕರಿದ ಹಲಸಿನಕಾಯಿ ಹಪ್ಪಳ, ಮಜ್ಜಿಗೆ ಮೆಣಸು, ಅಪ್ಪೆಮಿಡಿ ಉಪ್ಪಿನಕಾಯಿ ಹಾಕ್ಕೊಂಡು ತಿಂದು ಹೇಗಿದೆ ಅಂತ ಟೇಸ್ಟ್ ಹೇಳಿ.......

English summary
The BORI recipe is the malenadu special.Many of the city people as called as majjige saaru.But bori is totally different from the majjige saaru. Make it and taste it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X