ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಸಾಹಿತ್ಯ ಅಕಾಡೆಮಿ ಧ್ಯೇಯ ಮತ್ತು ಉದ್ದೇಶ

By Prasad
|
Google Oneindia Kannada News

ಅರ್ಧ ಶತಮಾನಕ್ಕೂ ಹೆಚ್ಚು ಭವ್ಯ ಇತಿಹಾಸ ಹೊಂದಿರುವ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹಲವಾರು ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ, ಲೇಖಕರನ್ನು ಸನ್ಮಾನಿಸುತ್ತ, ಶ್ರೇಷ್ಠ ಸಾಹಿತ್ಯ ಕೃತಿಗಳಿಗೆ ಬಹುಮಾನ ನೀಡುತ್ತ ಬಂದಿದೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯುವುದು ಪ್ರತಿಷ್ಠೆಯ ವಿಷಯ ಎಂಬುದು ಹಲವಾರು ಸಾಹಿತಿಗಳ ಅಭಿಪ್ರಾಯ. ಇಂತಿರುವ ಕರ್ನಾಟಕ ಸಾಹಿತ್ಯ ಅಕಾಡೆಮಿ ಈಗ ವಿವಾದದ ಕೇಂದ್ರಬಿಂದುವಾಗಿದೆ. ಈ ವಿವಾದವೇನೇ ಇರಲಿ, ಅಕಾಡೆಮಿ ಹುಟ್ಟಿಬಂದ ಬಗೆ, ಅದರ ಧ್ಯೇಯ ಉದ್ದೇಶಗಳೇನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ರೂಪುಗೊಂಡ ಮೈಸೂರು ಸಂಸ್ಥಾನದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆ ಜನಪ್ರಿಯ ಗ್ರಂಥಗಳನ್ನು ಪ್ರಕಟಿಸಿತು. ಕೆಲವು ವರ್ಷಗಳ ನಂತರ ಮೈಸೂರು ರಾಜ್ಯ ಸಾಹಿತ್ಯ ಅಕಾಡೆಮಿಯು 1961ರಲ್ಲಿ ಅಸ್ತಿತ್ವಕ್ಕೆ ಬಂದಿತು.

ಮೊದಲಿಗೆ ರಾಜ್ಯ ಶಿಕ್ಷಣ ಸಚಿವರೇ ಅಕಾಡೆಮಿಯ ಅಧ್ಯಕ್ಷರಾಗಿರುತ್ತಿದ್ದರು. ನಂತರ ಖ್ಯಾತ ಸಾಹಿತಿಗಳಾದ ಎಎನ್ ಮೂರ್ತಿರಾವ್, ಪ್ರೊ. ಸಿಕೆ ವೆಂಕಟರಾಮಯ್ಯ, ಖ್ಯಾತ ಶಿಕ್ಷಣ ತಜ್ಞ ಪ್ರೊ. ಕೆಎಸ್ ಧರಣೇಂದ್ರಯ್ಯ ಮುಂತಾದವರು ನಿರ್ದೇಶಕರಾಗಿ ಅಕಾಡೆಮಿಯ ಕಾರ್ಯ ನಿರ್ವಹಿಸಿದರು. ಮೈಸೂರು ರಾಜ್ಯದ ಹೆಸರು 1973ರಲ್ಲಿ "ಕರ್ನಾಟಕ" ಎಂದು ನಾಮಕರಣವಾದ ಮೇಲೆ 'ಮೈಸೂರು ರಾಜ್ಯ ಸಾಹಿತ್ಯ ಅಕಾಡೆಮಿ'ಯು ಕರ್ನಾಟಕ ಸಾಹಿತ್ಯ ಅಕಾಡೆಮಿ' ಎಂಬ ಹೆಸರನ್ನು ಪಡೆಯಿತು. [ಹೇ ಭಗವಾನ್! ಯಾರು? ಏನು? ಎತ್ತ? ಏನಿದೆಲ್ಲ?]

Karnataka Sahitya Academy : Background and purpose

ಅಕಾಡೆಮಿಯ ಸ್ವರೂಪವು ಕಾಲದಿಂದ ಕಾಲಕ್ಕೆ ಬದಲಾವಣೆಯನ್ನು ಹೊಂದುತ್ತಾ ಬಂದಿದೆ. ಪ್ರಾರಂಭದಲ್ಲಿ ಅಕಾಡೆಮಿಯ ಕಾರ್ಯವನ್ನು ಸರ್ಕಾರವೇ ನಿರ್ವಹಿಸುತ್ತಿತ್ತು. ರಾಜ್ಯದ ಶಿಕ್ಷಣ ಸಚಿವರು ಅಕಾಡೆಮಿಯ ಅಧ್ಯಕ್ಷರಾಗಿಯೂ, ಉಪ ಶಿಕ್ಷಣ ಸಚಿವರು ಉಪಾಧ್ಯಕ್ಷರಾಗಿಯೂ ಇರುತ್ತಿದ್ದರು. ಆನಂತರ ನಾಡಿನ ಹಿರಿಯ ಸಾಹಿತಿಯೊಬ್ಬರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಪದ್ಧತಿಯನ್ನು ಜಾರಿಗೆ ತರಲಾಗಿದೆ.

ಅಕಾಡೆಮಿ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಒಂದು ಭಾಗವಾಗಿದ್ದರೂ ಅದಕ್ಕೆ ಆಂತರಿಕ ಸ್ವಾಯತ್ತತೆಯನ್ನು ಕೊಟ್ಟು, ನವೆಂಬರ್ 1977ರಲ್ಲಿ ಕರ್ನಾಟಕ ಸರ್ಕಾರ ಅದರ ಸಂವಿಧಾನದಲ್ಲಿ ಅನೇಕ ತಿದ್ದುಪಡಿಯನ್ನು ಮಾಡಿ ಅಕಾಡೆಮಿಗಳ ಸನ್ನದನ್ನು (ಚಾರ್ಟರ್) ಪ್ರಕಟಿಸಿದೆ. ಅದರ ಪ್ರಕಾರ ಅಕಾಡೆಮಿಯ ಅಧ್ಯಕ್ಷ ಹಾಗೂ ಸದಸ್ಯರನ್ನು ಸರ್ಕಾರವೇ ನಾಮಕರಣ ಮಾಡುತ್ತದೆ. ಈ ನಾಮನಿರ್ದೇಶಿತ ಮಂಡಳಿಯು ಸಹ-ಸದಸ್ಯರನ್ನು ಆಯ್ಕೆ ಮಾಡುವ ಅಧಿಕಾರವನ್ನು ಹೊಂದಿರುತ್ತದೆ.

ಅಕಾಡೆಮಿಯ ನಿಯತ ಕಾರ್ಯನಿರ್ವಹಣೆಗೆ ಒಂದು ಕಾರ್ಯ ನಿರ್ವಾಹಕ ಸಮಿತಿಯನ್ನು ರೂಪಿಸಿಕೊಳ್ಳಬಹುದಾಗಿದೆ. ಅಲ್ಲದೆ, ಅಗತ್ಯಕ್ಕೆ ತಕ್ಕಂತೆ ಉಪ-ಸಮಿತಿಗಳನ್ನು ರಚಿಸಿಕೊಳ್ಳುವ ಅಧಿಕಾರ ಅಕಾಡೆಮಿಗೆ ಇದೆ. ಅಕಾಡೆಮಿಯ ಅಧ್ಯಕ್ಷರು, ರಿಜಿಸ್ಟ್ರಾರರು ಮತ್ತು ಅರ್ಥ ಸದಸ್ಯರು ಅಕಾಡೆಮಿಯ ಪದಾಧಿಕಾರಿಗಳಾಗಿರುತ್ತಾರೆ. ರಿಜಿಸ್ಟ್ರಾರ್ ಮತ್ತು ಅರ್ಥ ಸದಸ್ಯರಾದ ಲೆಕ್ಕಾಧಿಕಾರಿಗಳು ಸರ್ಕಾರಿ ಅಧಿಕಾರಿಗಳಾಗಿರುತ್ತಾರೆ. ರಿಜಿಸ್ಟ್ರಾರರು ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೂ ಆಗಿರುತ್ತಾರೆ. [ಭಗವಾನ್‌ಗೆ ನೀಡಿರುವ ಪ್ರಶಸ್ತಿ ಹಿಂಪಡೆಯಲು ಹಕ್ಕೊತ್ತಾಯ]

ಅಕಾಡೆಮಿಯ ಧ್ಯೇಯೋದ್ದೇಶಗಳು

1977ರ ಅಕಾಡೆಮಿಯ ಚಾರ್ಟರ್ ಪ್ರಕಾರ ಸಾಹಿತ್ಯ ಅಕಾಡೆಮಿಯ ಕೆಲವು ಮುಖ್ಯ ಧ್ಯೇಯೋದ್ದೇಶಗಳು ಈ ರೀತಿ ಇವೆ:

1. ಸಾಹಿತ್ಯ ಕ್ಷೇತ್ರದಲ್ಲಿ ಅಧ್ಯಯನ, ಸಂಶೋಧನೆಗಳಿಗೆ ಪ್ರೋತ್ಸಾಹ ಮತ್ತು ಈ ಉದ್ದೇಶಗಳಿಗಾಗಿ ಸಂಸ್ಥೆಗಳ ಗ್ರಂಥಾಲಯ ಸ್ಥಾಪನೆ.

2. ಸಾಹಿತ್ಯದ ಅಭಿವೃದ್ಧಿ ಹಾಗೂ ಅಂಥ ಉದ್ದೇಶಗಳ ಈಡೇರಿಕೆಯ ದೃಷ್ಟಿಯಿಂದ ಸಮಾನೋದ್ದೇಶ ಹೊಂದಿದ ರಾಜ್ಯದಲ್ಲಿನ ಇತರ ಸಂಘಗಳೊಡನೆ ಸಹಕರಿಸುವುದು.

3. ವಿವಿಧ ಪ್ರದೇಶಗಳ ನಡುವೆ ಸಾಹಿತ್ಯ ವಿಚಾರ ವಿನಿಮಯ ನಡೆಸುವುದು.

4. ದೇಣಿಗೆಗಳ ಮೂಲಕ ತನ್ನ ಕಾರ್ಯೋದ್ದೇಶಗಳಿಗೆ ಹಣವನ್ನು ಸಂಗ್ರಹಿಸುವುದು.

5. ಗ್ರಂಥಗಳ ಸಂಗ್ರಹ ಮತ್ತು ಪ್ರಕಟಣೆ.

6. ಪ್ರತಿಭಾವಂತ ಲೇಖಕರಿಗೆ ಮತ್ತು ಶ್ರೇಷ್ಠ ಸಾಹಿತ್ಯ ಕೃತಿಗಳಿಗೆ ಬಹುಮಾನಗಳನ್ನು ಮತ್ತು ಅಂಥ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವುದು.

7. ರಾಜ್ಯದ ವಿವಿಧ ಭಾಗಗಳಲ್ಲಿನ ವೈವಿಧ್ಯಪೂರ್ಣ ಸಾಹಿತ್ಯದ ಸಂಗ್ರಹ, ಸಂರಕ್ಷಣೆ ಮತ್ತು ಅಂಥ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವುದು.

8. ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ಅಥವಾ ಕೇಂದ್ರ ಸಾಹಿತ್ಯ ಅಕಾಡೆಮಿಯಾಗಲಿ ಕೇಳಿದಾಗ ಸಲಹೆ ನೀಡುವುದು.

9. ಸಾಹಿತ್ಯೋತ್ಸವಗಳನ್ನು ನಡೆಸುವುದು.

10. ಉನ್ನತ ಶಿಕ್ಷಣಕ್ಕೆ, ಸಂಶೋಧನ ವೇತನಗಳಿಗೆ ಶಿಫಾರಸು ಮಾಡುವುದು.

11. ಅಸಹಾಯಕರಾದ, ವೃದ್ಧರಾದ ಲೇಖಕರಿಗೆ ಅವರು ಸಲ್ಲಿಸಿರುವ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಆರ್ಥಿಕ ಸಹಾಯಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡುವುದು.

12. ತನ್ನ ಧ್ಯೇಯೋದ್ದೇಶಗಳನ್ನು ಸಾಧಿಸಲು ಅಗತ್ಯವಿರುವ ಎಲ್ಲ ಕಾರ್ಯಕ್ರಮಗಳನ್ನು ಕೈಗೊಳ್ಳುವುದು. [ಮಾಹಿತಿ ಮೂಲ : ಕರ್ನಾಟಕ ಸಾಹಿತ್ಯ ಅಕಾಡೆಮಿ]

English summary
Karnataka Sahitya Academy is an autonomous organization set up by the government of Karnataka to promote Kannada literature and recognize literary merit by giving awards. It is fully funded by the Directorate of Kannada and Culture, Government of Karnataka. The Karnataka Sahitya Academy Award, given since 1983, is regarded as one of the most prestigious literary awards in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X