• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಳಸಾ ಬಂಡೂರಿ ಯೋಜನೆ, ವಿವಾದ ಮತ್ತು ನಾವು

By ಸಂಪಿಗೆ ಶ್ರೀನಿವಾಸ, ಬೆಂಗಳೂರು
|

ಕರ್ನಾಟಕ ಮತ್ತು ಗೋವಾ ನಡುವೆ ಮಹದಾಯಿ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ವಿವಾದ ಭುಗಿಲೆದ್ದಿದೆ. ಕಳಸಾ ಮತ್ತು ಬಂಡೂರಿ ನಾಲೆಯನ್ನು ನಿರ್ಮಿಸಿ ಉತ್ತರ ಕರ್ನಾಟಕದ ಧಾರವಾಡ, ಗದಗ ಮತ್ತು ಬೆಳಗಾವಿ ಜಿಲ್ಲೆಯ ಕೆಲ ಹಳ್ಳಿಗಳಲ್ಲಿರುವ ನೀರಿನ ಬವಣೆಯನ್ನು ತಪ್ಪಿಸಬೇಕೆಂದು ಕರ್ನಾಟಕದ ಜನತೆ ಹೋರಾಟ ನಡೆಸುತ್ತಿದ್ದಾರೆ. ಈ ನದಿ ಕರ್ನಾಟಕದಲ್ಲೇ ಹುಟ್ಟಿದ್ದರೂ ನೀರನ್ನು ಬಳಸಿಕೊಳ್ಳಲಾಗದಿರುವುದು ನಿಜಕ್ಕೂ ದುರಂತವೇ ಸರಿ. ಇದಕ್ಕೆ ಪೂರಕವಾಗಿ, ಮಹದಾಯಿ ನ್ಯಾಯಾಧಿಕರಣ ಕರ್ನಾಟಕದ ಮನವಿಯನ್ನು ತಿರಸ್ಕರಿಸಿದೆ. ಈ ಯೋಜನೆ, ಮಧ್ಯಂತರ ತೀರ್ಪು, ಮುಂದೆ ಕನ್ನಡಿಗರು ಮಾಡಬೇಕಾಗಿರುವುದೇನು ಎಂಬ ವಿವರವನ್ನು ಸಂಪಿಗೆ ಶ್ರೀನಿವಾಸ ಅವರು ಹಂಚಿಕೊಂಡಿದ್ದಾರೆ. [Live : ಕರ್ನಾಟಕ ಬಂದ್ : ರಾಜಭವನ ಬಳಿ ಕರವೇ ಕಾರ್ಯಕರ್ತರ ಬಂಧನ]

ಕಳಸಾ ಬಂಡೂರಿ ಎಂದರೇನು?

ಕಳಸಾ ಮತ್ತು ಬಂಡೂರಿ ಮಹದಾಯಿ ನದಿಯ ಉಪನದಿಗಳು. ಮಹದಾಯಿ ನದಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಪಶ್ಚಿಮ ಘಟ್ಟದಲ್ಲಿರುವ ಭೀಮಗಡ ಅರಣ್ಯ ಪ್ರದೇಶದಲ್ಲಿ ಹುಟ್ಟಿ ಕರ್ನಾಟಕದಲ್ಲಿ 22 ಕಿಲೋ ಮೀಟರ್ ಹರಿದು ಗೋವಾ ರಾಜ್ಯ ಪ್ರವೇಶಿಸಿ ಅಲ್ಲಿ 52 ಕಿ.ಮೀ ಹರಿದು ಪಣಜಿ ಬಳಿ ಅರಬ್ಬೀ ಸಮುದ್ರ ಸೇರುತ್ತದೆ. ಈ ನದಿಗೆ ಗೋವಾದಲ್ಲಿ ಮಾಂಡೋವಿ' ಎಂದು ಹೆಸರು. ಮಹದಾಯಿ ನದಿಗೆ ಹಲತಾರಾ, ಕಳಸಾ, ಬಂಡೂರಿ, ಕಾರಂಜೋಳ, ಬೊಮ್ಮನರಿ, ದೂದ ಸಾಗರ ಹೀಗೆ ಅನೇಕ ಉಪನದಿಗಳಿಂದ ಕೂಡಿದ ನದಿ ಕಣಿವೆ ಆಗಿದೆ. ಇದು ಹೆಚ್ಚು ಮಳೆಬೀಳುವ ಪ್ರದೇಶವಾಗಿದ್ದು ಸರಾಸರಿ 3,134 ಮಿಲಿಮೀಟರ್ ಮಳೆ ಬೀಳುತ್ತದೆ. [ಮಹದಾಯಿ ನೀರು ಹಂಚಿಕೆ : ಅಂದಿನಿಂದ ಇಂದಿನವರೆಗೆ]

ಕಳಸಾ-ಬಂಡೂರಿ ನಾಲಾ ಯೋಜನೆ ಎಂದರೇನು?

ಇದು ಮೇಲಿಂದ ಮೇಲೆ ಬರಗಾಲಕ್ಕೆ ತುತ್ತಾಗುತ್ತಿದ್ದ ಗದಗ ಜಿಲ್ಲೆಯ ನರಗುಂದ, ರೋಣ, ಧಾರವಾಡ ಜಿಲ್ಲೆಯ ನವಲಗುಂದ ಹಾಗೂ ಬೆಳಗಾವಿ ಜಿಲ್ಲೆಯ ಸವದತ್ತಿ, ಬೈಲಹೊಂಗಲ ತಾಲೂಕುಗಳಿಗೆ ಮತ್ತು ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಿಗೆ ಕುಡಿಯುವ ನೀರು ಪೂರೈಸುವುದಕ್ಕಾಗಿ ಕರ್ನಾಟಕ ಸರ್ಕಾರವು ಕೈಗೊಂಡ ಒಂದು ಯೋಜನೆಯಾಗಿದೆ. ಮಹಾದಾಯಿ ನದಿ ಕಣಿವೆಯ ಕಳಸಾ ಮತ್ತು ಬಂಡೂರಿ ಉಪನದಿಗಳಿಗೆ ಚಿಕ್ಕ ಅಣೆಕಟ್ಟೆ ಕಟ್ಟಿ ನೀರನ್ನು ಎತ್ತಿ ಕಾಲುವೆ ಮೂಲಕ ಸವದತ್ತಿ ಬಳಿಯ ಮಲಪ್ರಭಾ ನದಿಯ ರೇಣುಕಾ ಸಾಗರ(ನವಿಲು ತೀರ್ಥ) ಜಲಾಶಯಕ್ಕೆ ನೀರು ವರ್ಗಾಯಿಸುವುದೇ ಈ ಯೋಜನೆಯ ಉದ್ದೇಶ.

ಕಳಸಾ ನಾಲಾ ತಿರುವು:

ಕಳಸಾ ಹಳ್ಳವು ಕರ್ನಾಟಕದಲ್ಲಿ ಹುಟ್ಟಿ ದಕ್ಷಿಣಾಭಿಮುಖವಾಗಿ ಹರಿದು ಗೋವಾದಲ್ಲಿ ಮಹದಾಯಿ ನದಿಯನ್ನು ಸೇರುತ್ತದೆ. ಈ ಹಳ್ಳದಿಂದ 3.56 ಟಿಎಂಸಿ ನೀರನ್ನು ಪಡೆಯುವ ಉದ್ದೇಶದಿಂದ ಯೋಜನೆ ತಯಾರಿಸಲಾಗಿದೆ. ಕಳಸಾ ಯೋಜನೆಗೆ ಎರಡು ಅಣೆಕಟ್ಟೆಗಳನ್ನು ನಿರ್ಮಿಸುವುದು. ಹುಬ್ಬಳ್ಳಿ-ದಾರವಾಡ ಅವಳಿ ನಗರಗಳಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ ಎಚ್.ಕೆ.ಪಾಟೀಲ್ 2000ರಲ್ಲಿ ಕಳಸಾ ಬಂಡೂರಿ ನಾಲಾ ಯೋಜನೆಯನ್ನು ರೂಪಿಸಿದ್ದರು.

(1) ಕಳಸಾ ಹಳ್ಳಕ್ಕೆ ಅಣೆಕಟ್ಟು ಹಾಗೂ 4.8 ಕಿ.ಮಿ. ಉದ್ದದ ಕಾಲುವೆ ನಿರ್ಮಾಣ.

(2) ಹಳತಾರ ಹಳ್ಳಕ್ಕೆ ಅಣೆಕಟ್ಟು ನಿರ್ಮಿಸಿ ಅಲ್ಲಿ ಸಂಗ್ರಹವಾದ ನೀರನ್ನು 5.5 ಕಿ.ಮೀ. ಉದ್ದದ ಕಾಲುವೆಯ ಮೂಲಕ ಕಳಸಾ ಅಣೆಕಟ್ಟೆಗೆ ಸಾಗಿಸುವುದು.

ಬಂಡೂರಿ ನಾಲಾ ತಿರುವು:

ಬಂಡೂರಿ ಮಹದಾಯಿ ನದಿಯ ಇನ್ನೊಂದು ಉಪನದಿ. ಸಿಂಗಾರ ನಾಲಾ ಹಾಗೂ ವಾಟಿ ನಾಲಾಗಳಿಗೆ ಅಣೆಕಟ್ಟು ಕಟ್ಟಿ ಸಂಗ್ರಹವಾದ ನೀರನ್ನು ಬಂಡೂರಿ ಜಲಾಶಯಕ್ಕೆ ವರ್ಗಾಯಿಸುವುದು. ಇಲ್ಲಿ ಸಂಗ್ರಹವಾದ 4 ಟಿಎಂಸಿ ನೀರನ್ನು 5.15 ಕಿ.ಮೀ ಕಾಲುವೆ ಮೂಲಕ ಮಲಪ್ರಭಾ ನದಿಗೆ ವರ್ಗಾಯಿಸುವುದು. ಬಂಡೂರ ನಾಲಾ ಯೋಜನೆಗೊಳಪಡುವ ಜಲಾನಯನ ಪ್ರದೇಶ 32.25 ಚ.ಕಿ.ಮೀ. ಇದರಿಂದ ಒಟ್ಟು 380 ಹೆಕ್ಟೇರ್ ಭೂಮಿ ಮುಳುಗಡೆ ಆಗಲಿದೆ. ಇದರ ವೆಚ್ಚ ಯೋಜನೆ ತಯಾರಿಸುವಾಗ 49 ಕೋಟಿ ರೂ.ಗಳು. ಈಗ ಅದರ ವೆಚ್ಚ 370 ಕೋಟಿ ರೂ. ಆಗಿದೆ.

ಈ ಎರಡೂ ಯೋಜನೆಗಳಿಂದ ಒಟ್ಟು 7.56 ಟಿಎಂಸಿ ನೀರು ಲಭ್ಯವಾಗಲಿದೆ. ಬರಗಾಲದಿಂದ ತತ್ತರಿಸುವ, ಕುಡಿಯುವ ನೀರಿಗೆ ಪರದಾಡುತ್ತಿರುವ ಬೆಳಗಾವಿ, ಧಾರವಾಡ ಹಾಗು ಗದಗ ಜಿಲ್ಲೆಯ ಜನರ ನೀರಿನ ದಾಹ ನೀಗಿಸಲು ಕೈಗೊಂಡ ಯೋಜನೆಯೇ ಕಳಸಾ-ಬಂಡೂರಿ ನಾಲಾ ಯೋಜನೆ.

ಕಳಸಾ ಬಂಡೂರಿ ಯೋಜನೆಗೆ ಗೋವಾದ ವಿರೋಧವೇಕೆ?

ಗೋವಾದ ವಾದ ಪ್ರಕಾರ, ಮಹದಾಯಿ ನದಿ ನೀರಿನ ಕೊರತೆಯನ್ನು ಅನುಭವಿಸುತ್ತಿರುವ ಒಂದು ಕಣಿವೆ ಪ್ರದೇಶವಾಗಿದೆ. ಆದ್ದರಿಂದ ನೀರಿನ ಕೊರತೆ ಇರುವ ಕಣಿವೆಯಿಂದ ನೀರನ್ನು ಬೇರೆಡೆಗೆ ವರ್ಗಾಯಿಸುವುದು ಸರಿಯಲ್ಲ. ಮಹದಾಯಿ ಅಥವಾ ಮಾಂಡೋವಿ ನದಿ ಗೋವಾ ರಾಜ್ಯದ ಜೀವ ನದಿಯಾಗಿದೆ. ಮಹದಾಯಿ ನದಿ ನೀರನ್ನು ಬೇರೆಡೆಗೆ ವರ್ಗಾಯಿಸಿದರೆ ಪಶ್ಚಿಮ ಘಟ್ಟದ ಪರಿಸರದ ಮೇಲೆ ತೀವ್ರ ಪರಿಣಾಮ ಉಂಟಾಗಿ ನದಿಯ ಉಗಮದ ಪ್ರದೇಶದ ಅರಣ್ಯ ನಾಶವಾಗಿ, ನದಿಯ ನೀರಿನ ಹರಿವಿಗೆ ಕೊರತೆಯಾಗುತ್ತದೆ ಎಂಬುದು ಗೋವಾದ ವಾದವಾಗಿದೆ.

ಅದ್ಯಯನ ಮತ್ತು ಸಮೀಕ್ಷೆಗಳು ಹೇಳುವುದೇನು?

ಅಧ್ಯಯನಗಳು ಮತ್ತು ಸಮೀಕ್ಷೆಗಳು ಗೋವಾದ ವಾದದಲ್ಲಿರುವ ಪೊಳ್ಳುತನವನ್ನು ಎತ್ತಿತೋರಿಸಿವೆ. ಕೇಂದ್ರ ಸರಕಾರದ ಸಲಹೆಯಂತೆ ಕರ್ನಾಟಕ ಸರಕಾರ ಮಾಡಿಕೊಂಡ ಮನವಿ ಮೇರೆಗೆ ಮಹಾರಾಷ್ಟ್ರದ ನಾಗಪುರದಲ್ಲಿರುವ ನೀರಿ' ಅಧ್ಯಯನ ನಡೆಸಿ ಮಹದಾಯಿ ತಿರುವು ಯೋಜನೆಯಿಂದ ಪರಿಸರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗುವುದಿಲ್ಲವೆಂದೂ ಮತ್ತು ಮಹದಾಯಿ ಕಣಿವೆ ನೀರಿನ ಕೊರತೆ ಇರುವ ಪ್ರದೇಶ ಅಲ್ಲವೇ ಅಲ್ಲವೆಂದೂ ತಿಳಿಸಿತು. ಅದರಂತೆ ರಾಷ್ಟ್ರೀಯ ನೀರಿನ ಅಭಿವೃದ್ಧಿ ಸಂಸ್ಥೆ ಹಾಗೂ ಕೇಂದ್ರ ಜಲ ಆಯೋಗಗಳು ಕೂಡಾ ಅಧ್ಯಯನ ನಡೆಸಿ ಗೋವಾದ ವಾದದಲ್ಲಿ ಹುರುಳಿಲ್ಲ ಎಂಬುದನ್ನು ತಿಳಿಸಿವೆ. ಆದರೆ ಗೋವಾ ಸರಕಾರ ಮಾತ್ರ ಈ ಯಾವ ವರದಿಯನ್ನು ಒಪ್ಪಿಕೊಳ್ಳಲು ಸಿದ್ದವಿಲ್ಲ ಅಷ್ಟೆ.

ಕಳಸಾ-ಬಂಡೂರಿ ನಾಲಾ ಯೋಜನೆಗೆ ಕೇಂದ್ರದ ಒಪ್ಪಿಗೆ ಹಾಗೂ ತಡೆ

ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ ಹಾಗೂ ಗದಗ ಜಿಲ್ಲೆಯ ನರಗುಂದ, ನವಲಗುಂದ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರನ್ನು ಪೂರೈಸಲು ಈ ಯೋಜನೆ ಅಗತ್ಯ ಎಂಬುದನ್ನು ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ, ಕೇಂದ್ರ ಜಲ ಆಯೋಗ 2002ರಲ್ಲಿ ಕಳಸ ಬಂಡೂರಿ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿತು. ಇದಾದ ಐದು ತಿಂಗಳಲ್ಲೇ ಗೋವಾ ಸರಕಾರದ ಹಠಮಾರಿತನ, ವಿರೋಧ ಹಾಗೂ ಆಕ್ಷೇಪಣೆಗಳಿಗೆ ಬಗ್ಗಿದ ಕೇಂದ್ರ ಜಲ ಆಯೋಗ ತಾನೇ ನೀಡಿದ ತಾತ್ವಿಕ ಒಪ್ಪಿಗೆಗೆ ತಡೆಯಾಜ್ಞೆ ನೀಡಿತು.

ನ್ಯಾಯಾಧಿಕರಣ ನೇಮಕ

ಗೋವಾ ಸರಕಾರ ಕೇಂದ್ರ ಜಲಸಂಪನ್ಮೂಲ ಸಚಿವರಿಗೆ ಜುಲೈ 2002ರಂದು ಪತ್ರ ಬರೆದು ನ್ಯಾಯಾಧಿಕರಣ ರಚಿಸುವಂತೆ ಕೇಳಿಕೊಂಡಿತು. ಅದಲ್ಲದೆ 2006ರಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿ ಕಳಸಾ ಬಂಡೂರಿ ಕಾಮಗಾರಿ ತಡೆಯುವಂತೆ ಹಾಗೂ ನ್ಯಾಯಾಧಿಕರಣ ನೇಮಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಬೇಕೆಂದು ವಿನಂತಿಸಿತು. [ಮಹದಾಯಿ ತೀರ್ಪು: ಕನ್ನಡಿಗರು ಗಮನಿಸಬೇಕಾದ್ದು ಏನು?]

ನವೆಂಬರ್ 2006ರಲ್ಲಿ ಕೇಂದ್ರ ನೀರಾವರಿ ಮಂತ್ರಾಲಯವು ಕರ್ನಾಟಕ ಸರಕಾರವನ್ನು ಸಂಪರ್ಕಿಸಿ "ಈ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಲು ಅಸಾಧ್ಯ ಎಂಬ ಅಭಿಪ್ರಾಯಕ್ಕೆ ಬಂದಿದೆ. ಆದರಿಂದ ಮುಂದಿನ ಕ್ರಮವನ್ನು 1956ರ ಅಂತರರಾಜ್ಯ ಜಲವಿವಾದ ಕಾಯ್ದೆ ಮೇರೆಗೆ ಕ್ರಮ ಜರುಗಿಸಲಾಗುವುದು" ಎಂದು ತಿಳಿಸಿತು. ಕೇಂದ್ರ ಸರಕಾರ ನವೆಂಬರ್ 16, 2010ರಂದು ಮಹದಾಯಿ ಜಲವಿವಾದ ನ್ಯಾಯಾಧಿಕರಣ' ರಚಿಸಿತು. ಹೀಗಾಗಿ ಕಳಸಾ ಬಂಡೂರಿ ನಾಲಾ ಯೋಜನೆ ಈಗ ನ್ಯಾಯಾಧಿಕರಣದ ಅಂಗಳದಲ್ಲಿದೆ.

ಮಹದಾಯಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪು

27-7-2016ರಂದು ಮಹದಾಯಿ ನದಿಯಿಂದ 7 ಟಿಎಂಸಿ ನೀರನ್ನು ಏತ ನೀರಾವರಿ ಮೂಲಕ ಮಲಪ್ರಭಾಕ್ಕೆ ಹರಿಸಬೇಕೆಂಬ ಕರ್ನಾಟಕದ ಮಧ್ಯಂತರ ಅರ್ಜಿಯನ್ನು ನ್ಯಾ.ಜೆ.ಎಂ. ಪಾಂಚಾಲ್ ನೇತೃತ್ವದ ತ್ರಿಸದಸ್ಯ ನ್ಯಾಯಾಧಿಕರಣ, ಈಗ ಆ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ ಎಂಬ ಕಾರಣ ನೀಡಿ ಮತ್ತು ಬೇಡಿಕೆಯಲ್ಲಿ ಇತರೆ ದೋಷಗಳಿವೆ ಎಂದು ಅರ್ಜಿಯನ್ನು ವಜಾಗೊಳಿಸಿದೆ. [ನ್ಯಾಯಾಧೀಕರಣದ ಮಧ್ಯಂತರ ತೀರ್ಪಿನಲ್ಲಿ ಏನಿದೆ?]

ಮಹದಾಯಿ ಮಧ್ಯಂತರ ತೀರ್ಪಿನಿಂದ ಕರ್ನಾಟಕದಲ್ಲಿ ಕಿಚ್ಚು

ಮಹದಾಯಿ ನ್ಯಯಾದಿಕರಣ ಕರ್ನಾಟಕದ ಮಧ್ಯಂತರ ಅರ್ಜಿ ತಿರಸ್ಕರಿಸಿರುವುದರಿಂದ ಕಳೆದ ಒಂದು ವರ್ಷದಿಂದ ಶಾಂತಿಯುತ ಹೋರಾಟ ನಡೆಸಿಕೊಂಡು ಬರುತ್ತಿದ್ದ ಕಳಸ ಬಂಡೂರಿ ಹೋರಾಟ ಸಮಿತಿ ಮತ್ತು ಕರ್ನಾಟಕದ ಜನತೆ ತೀವ್ರಾ ನೀರಸೆ ವ್ಯಕ್ತಪಡಿಸಿದೆ. ಕುಡಿಯುವ ನೀರಿನ ತಮ್ಮ ನ್ಯಾಯಯುತ ಹಕ್ಕನ್ನು ಪೂರೈಸಲು ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಾಯಕರ ರಾಜಕೀಯ ಕೆಸರೆರಚಾಟದಿಂದ ವ್ಯಗ್ರರಾಗಿ ಉಗ್ರ ಪ್ರತಿಭಟನೆ ಹಮ್ಮಿಕೊಂಡಿವೆ. ಕನ್ನಡ ಸಂಘಟನೆಗಳು, ಕನ್ನಡ ಚಿತ್ರರಂಗ ಮತ್ತು ಕರ್ನಾಟಕದ ಅನೇಕ ಸಂಘ ಸಂಸ್ಥೆಗಳು ಉತ್ತರ ಕರ್ನಾಟಕದ ಜನರ ಪರವಾಗಿ ಇದ್ದೇವೆ ಎಂದು ತೋರಿಸಲು ಶನಿವಾರ ಜುಲೈ 30ರಂದು ಕರ್ನಾಟಕ ಬಂಧ್ ಗೆ ಕರೆನೀಡಿವೆ.

ಮುಂದಿನ ಹೋರಾಟದ ರೂಪು ರೇಷೆ ಏನು?

ಕರ್ನಾಟಕ ಬಂದ್, ಪ್ರತಿಭಟನೆ ಇತ್ಯಾದಿಯಿಂದ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆಯೋ ಗೊತ್ತಿಲ್ಲ. ಆದರೆ ಇದರಿಂದ ರಾಜ್ಯ ಸರ್ಕಾರ ಹಾಗು ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತದೆ ಎಂಬುದು ಸತ್ಯ. ಕುಡಿಯುವ ನೀರಿನ ಈ ನ್ಯಾಯಯುತ ಯೋಜನೆಯ ವಿವಾದ ಪರಿಹಾರಕ್ಕಿರುವ ಮಾರ್ಗಗಳು...

1. ದೇಶದ ಮಾನ್ಯ ಪ್ರಧಾನ ಮಂತ್ರಿ ಮೋದಿಯವರು ಮಾನವೀಯತೆ ದೃಷ್ಟಿಯಿಂದ ವಿವಾದವನ್ನು ರಾಜಕೀಯ ಪ್ರತಿಷ್ಠೆಗೊಳಿಸದೆ ಕರ್ನಾಟಕ, ಗೋವಾ ಹಾಗು ಮಹಾರಾಷ್ಟ್ರ ಮುಖ್ಯಮಂತ್ರಿಗಳನ್ನು ಒಟ್ಟಿಗೆ ಕರೆದು ಎಲ್ಲ ರಾಜ್ಯಗಳಿಗೂ ಒಪ್ಪಿಗೆ ಯಾಗುವಂತೆ ವಿವಾದ ಪರಿಹರಿಸುವ ಚಾಹಣಾಕ್ಷತೆ ತೋರುವುದು.

2. ಕರ್ನಾಟಕ ಸರ್ಕಾರ ಮಹದಾಯಿ ಮಧ್ಯಂತರ ತೀರ್ಪಿನ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿ ತನ್ನ ವಾದಕ್ಕೆ ಪುಷ್ಟಿನೀಡುವ ದಾಖಲೆಗಳನ್ನು ಮಂಡಿಸಿ ತನ್ನ ಪರವಾಗಿ ತೀರ್ಪು ಬರುವಂತೆ ನ್ಯಾಯದೇವತೆಯ ಮೊರೆ ಹೋಗುವುದು.

3. ಕರ್ನಾಟಕ ಸರ್ಕಾರ ಮಹದಾಯೀ ನ್ಯಾಯಾಧಿಕರಣದ ಅಂತಿಮ ತೀರ್ಪು ಕರ್ನಾಟಕದ ಪರವಾಗಿ ಬರಲು ಸಕಲ ಸಿದ್ಧತೆ ಮಾಡಿಕೊಂಡು ತನ್ನ ವಾದ ಮಂಡಿಸಿ ಉತ್ತರ ಕರ್ನಾಟಕದ ಜನರ ಮಹತ್ವಾಕಾಂಕ್ಷೆಯ ಯೋಜನೆಯ ಅನುಷ್ಠಾನವನ್ನು ಸಾಕಾರಗೊಳಿಸುವುದು. [ಮಹದಾಯಿ ವಿವಾದ : ಉತ್ತರ ಕರ್ನಾಟಕದಲ್ಲಿ ಭುಗಿಲೆದ್ದ ಆಕ್ರೋಶ]

ನಾವೇನು ಮಾಡಬಹುದು?

1. ಕಳಸ ಬಂಡೂರಿ ಯೋಜನೆಯ ಬಗ್ಗೆ ಹಾಗೂ ವಿವಾದದ ಬಗ್ಗೆ ತಿಳಿದುಕೊಂಡು ಸ್ನೇಹಿತರಿಗೂ ಇದರ ಅರಿವು ಮೂಡಿಸಉವುದು.

2. ಮೂಕ ಶಾಂತಿಯುತ ಮೆರವಣಿಗೆ ಮೂಲಕ, ಪತ್ರಿಕೆಗಳಿಗೆ ಪತ್ರ ಬರೆಯುವ ಮೂಲಕ, ಅಂತರ್ಜಾಲದಲ್ಲಿ ಮನವಿ ಪತ್ರ ಸಹಿ ಅಭಿಯಾನ (www.change.orgನಲ್ಲಿ Petition) ನಡೆಸುವ ಮೂಲಕ, ಕರ್ನಾಟಕ ಹಾಗೂ ಕೇಂದ್ರ ಸರ್ಕಾರದ ಮೇಲೇ ಈ ವಿವಾದ ಪರಿಹರಿಸಲು ಒತ್ತಾಯ ತಂದು ಉತ್ತರ ಕರ್ನಾಟಕದ ಜನತೆಗೆ ಭಾವನಾತ್ಮಕ ಬೆಂಬಲ ನೀಡುವುದು.

English summary
Kalasa Banduri and Mahadayi controversy : Oneindia Explainer. Sampige Srinivas narrates the controversy surrounding Kalasa Banduri nala project and sharing of Mahadayi river between Karnataka and Goa. He also tells what Karnataka need to do to get Mahadayi river water for drinking and irrigation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X