ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಿನ ಕಾಲದ ಟೈಲರ್ ಗಳು! ಡ್ರೆಸ್ ಶೈಲಿಗಳು

By * ಇಆರ್ ರಾಮಚಂದ್ರನ್, ಮೈಸೂರು
|
Google Oneindia Kannada News

Karnataka Fashion Trend
ಈಗೆಲ್ಲಾ ಮುಗ್ಗುರಿಸಿದರೆ ಒಂದು ಮಾಲ್ ಸಿಗುತ್ತೆ ಮೂಲೆ ಮೂಲೆಗೂ. ಬಟ್ಟೆ ತೊಗೋಬೇಕೆಂದ್ರೆ ಬೇಕುಬೇಕಾದ ಬ್ರ್ಯಾಂಡ್ ಗಳು. ರೇಮೆಂಡ್ಸ್, ಆರೋ, ಪೀಟರ್ ಇಂಗ್ಲೆಂಡ್.. ಒಂದೇ, ಎರಡೇ...

ಆದ್ರೆ ಟೀ-ಶರ್ಟ್ ಬೇಕೆಂದ್ರೆ ಹುಡುಗನಿಂದ, ಮುದುಕರವರೆಗೆ ಯಾವ ಬ್ರ್ಯಾಂಡ್ ಆದ್ರೂ ಸಿಗೋದು ನಾಲ್ಕೇ ಸೈಜ್ ! ಎಂ, ಎಸ್, ಎಲ್, ಎಕ್ಸೆಲ್.

ಯಾರಾದರೂ ಫುಡ್- ಇನ್ಸ್ ಪೆಕ್ಟರ್ ಮಗನಾದರೆ ದೇವರೇ ಗತಿ. ಅದಕ್ಕೇ ಅವನಿಗೆ 'ಎಕ್ಸ್ ಎಕ್ಸ್ ಎಲ್' - Extra Large ಬೇಕಾಗುತ್ತದೆ.

ಪ್ಯಾಂಟ್ ಗಳಿಗೂ ಅದೇ ಗತಿ. ಒಂದೇ ಒಂದು ಬದಲಾವಣೆ ಎಂದರೆ ನಿಮಗೆ ಪ್ಯಾಂಟ್ ನ ಸೊಂಟ ಎಷ್ಟು ಕೆಳಗೆ ಇರುಬೇಕೋ ಅದೂ ಕೂಡ, ಸಿಗುತ್ತೆ!

ಮುಂಚೆಯೆಲ್ಲಾ, ಮಾತು ಮಾತಿಗೆ,'ನಾನು ನನ್ನ ಟೈಲರ್ ಹತ್ತಿರ ಟ್ರೈಯಲ್ಸ್ ಗೆ ಹೋಗ್ಬೇಕು' ಅಂತ ಹೇಳುವುದು ಒಂದು ಜಂಬದ ಮಾತಾಗಿತ್ತು.

ಆಗಿನ ಟೈಲರ್ ಅಂದ್ರೆ ಸಿದ್ದೋಜಿ, ಮುತ್ತೋಜಿ... ಬಾಯಿನ ಸುತ್ತಲೂ ಗುಂಡು ಸೂಜಿ ಇಟ್ಟುಕೊಂಡು ಮಾತು ಮಾತಿಗೂ ಅಲ್ಲಿ ಇಲ್ಲಿ ಚುಚ್ಚುವರು!

'ಸೆಲೆಕ್ಟ್, ರಿಲೈಯನ್ಸ್, ಅಂತಹ ಹೆಸರಿಟ್ಟುಕೊಂಡು, ಶರ್ಟಿನ ಹಿಂದೆ ಕಾಲರ್ ಗೆ ಮತ್ತು ಪ್ಯಾಂಟ್ ಸೊಂಟಕ್ಕೆ ಅವರ ಹೆಸರಿನ ಬಟ್ಟೆಯ ಬಿಲ್ಲೆ ಹಾಕೋವ್ರು.

ರೆಡಿಮೇಡ್ ಅಂದ್ರ ಮೂಗು ಮುರಿತ್ತಿದ್ರು: ಯಾರಾದ್ರೂ ರೆಡಿಮೇಡ್ ಖರೀದಿಸುವವನು ಶುದ್ಧ ಹಳ್ಳಿ ಗುಗ್ಗು; ಅವನ ಸಹವಾಸವೇ ಬೇಡ ಅನ್ನುವ ಕಾಲ ಅದು!

ಟೈಲರ್ಸ್ ಗಳು ಹೇಗೆ ಹೊಲೀತಿದ್ರು? ನೋಡೋಣ ಬನ್ನಿ. ಆಗ ಸಿಗುತ್ತಿದ್ದ ಬಟ್ಟೆಗಳು, ಲಾಂಗ್ ಕ್ಲಾತ್, ಕೋರಾ, ಡ್ರಿಲ್ ಅಷ್ಟೆ. ಏನು ಹೊಲಿಸಿದರೂ ಈ ಬಟ್ಟೆಗಳಿಂದಲೇ! ಆಮೇಲೆ, ಟೆರಿಲೀನ್, ಷಾರ್‍ಸ್ಕಿನ್, ಟೆರಿಕಾಟ್ ಬಟ್ಟೆಗಳು ಬರಲು ಶುರುವಾಯಿತು.

ಒಂದಿಬ್ಬರು ಸಿಲ್ಕ್, ಗ್ಯಾಬರ್ಡಿನ್ ಬಟ್ಟೆಗಳಿಂದ ಸೂಟ್ ಹೊಲಿಸೋವ್ರು. ಅಂಥಾ ಕುಳಗಳು ಕಡಿಮೇನೆ.

ಆವಾಗಿನ ಪ್ಯಾಂಟ್ಗಳಿಗೆ ಯಾರೂ ಬೆಲ್ಟ್ ಹಾಕ್ತಿರಲಿಲ್ಲ! ಅಯ್ಯೋ!! ಹೆದರಬೇಡಿ. ಕಾಲ ಇನ್ನೂ ಅಷ್ಟು ಕೆಟ್ಟಿರಲಿಲ್ಲ ಆಗ.

ಸೊಂಟದ ಎರಡುಕಡೆಯೂ, ಬಕಲ್ನಿಟ್ಟು, ಬಟ್ಟೆಯನ್ನು ಅದರ ಮೂಲಕ ತೂರಿಸಿ, ಎಷ್ಟು ಟೈಟ್ ಬೇಕೋ ಅಷ್ಟು ಎಳೆದು ಬಕಲ್ ನ ಪಿನ್ ಗೆ ಸಿಕ್ಕಿಸಿಬಡುವುದು.

ದಾರೀಲಿ ಎಲ್ಲೂ 'ಶೇಂ! ಶೇಂ!' ಅಗಲ್ಲ ಅಂತ ಖಚಿತ ಮಾಡಿಕೊಂಡ ಮೇಲೆ, ಕ್ರಾಪು ಬಾಚಿ, ಸೈಕಲ್ ಮೇಲೆ ಹಾರಿ, ದೇವ್ ಆನಂದ್ ಹಾಗೆ, 'ಮೈ ಜಿಂದಗೀ ಕ ಸಾಥ್ ನಿಭಾತಾ ಚಲಾ ಗಯಾ' ಹಾಡ್ತಾ ವಿದ್ಯಾರ್ಥಿ ಭವನ್ಗೋ, ಉಡುಪಿ ಕೃಷ್ಣ ಭವನಕ್ಕೋ ಪೆಡಲ್ ತುಳಿಯುವುದು.

ಇಷ್ಟು ಖುಶಿಯಾಗಿ ಫಿಲ್ಮ್ ಸ್ಟಾರ್ ತರಹ ನಕಲಿ ಮಾಡೋವ್ರ ಆಗಿನ ಕಾಲದ ಡ್ರೆಸ್ಸಾದ್ರೂ ಏನದು?

ಪ್ಯಾಂಟು ಹೇಗಿತ್ತು: ಪ್ಯಾಂಟು ಅಂತ ಕರೆದಿದ್ದು, ಒಂದು ಗೋಣಿ ಚೀಲವನ್ನು ಪದರ ಪದರವಾಗಿ ಸೇರಿಸಿ ಕಾಲಿನ ಹತ್ತಿರ ಬರುವುಷ್ಟರಲ್ಲಿ ಅದು ದೊಗಳಂಬಟ್ಟೆಯಾಗಿ ಅದನ್ನೆಲ್ಲಾ ಪಾದದ ಹತ್ತಿರ ಸುತ್ತಿ, ಮಡಿಸಿ ಒಂದು 'ಬಾಕ್ಸ್' ಮಾಡಿ ಹೊಲಿಗೆ ಹಾಕಿರುವರು.

ಈ ದೊಗಳೆ ಪ್ಯಾಂಟು ಸೈಕಲ್ ಚೈನ್ಗೆ ತಾಕಿ ಮಸಿಯಾಗದೆ ಇರುವುದಕ್ಕೆ ಕಾಲಿಗೆ ಬೇಡಿಯ ಹಾಗೆ ಒಂದು ಕ್ಲಿಪ್!

ಫ್ಯಾಷನ್ ಗಾಳಿ ಬೀಸಿದಂತೆ, ಪ್ಯಾಂಟೂ ಬದಲಾಗುತ್ತಾ, ಮುನಿಸಿಪಾಲ್ಟಿಯ ಪೈಪಿನ ಹಾಗೆ ಆಗಿ, ಅದನ್ನು ಹಾಕಿಕೊಂಡವರಿಗೆ ಉಸಿರಾಡುವುದಕ್ಕೂ ಕಷ್ಟವಾಗೋದು. ಆದರೆ ಅದೇ ಫ್ಯಾಷನ್!

ಅದನ್ನು ಹಾಕಿಕೊಳ್ಳದಿದ್ದರೆ ನಿಮ್ಮನ್ನು ಯಾರೂ ಮೂಸಿಮೋಡುತ್ತಿರಲಿಲ್ಲ! ಹತ್ತಿರಾನೂ ಸೇರಿಸ್ತಿರಲಿಲ್ಲ.ಸಾಮಾನ್ಯವಾಗಿ ಹುಡುಗರು ಚೆಡ್ಡಿ ಹಾಕ್ಕೊಳ್ತಿದ್ದರು.

ಆದರೆ ಆರ್.ಎಸ್.ಎಸ್. ಮತ್ತು ಆರ್.ಎಸ್.ಡಿ.ನಲ್ಲಿ ಎಲ್ಲಾ ವಯಸ್ಸಿನವರೂ ಚೆಡ್ಡಿಲೀ ಓಡಾಡೊವ್ರು.

ಚೆನ್ನಾಗಿ ಗಂಜಿ ಹಾಕಿದ ಚೆಡ್ಡಿಯನ್ನು ಕೋಣೆಯ ಮೂಲೆಯಲ್ಲಿ ನಿಲ್ಲಿಸಬಹುದಾಗಿತ್ತು!

ಅವರ ಚೆಡ್ಡಿ ಮಂಡಿಯ ಹತ್ರ ಎಷ್ಟು ಅಗಲಾ ಇರೋದು ಅಂದ್ರೆ ಅವರು ಎರಡು ಹೆಜ್ಜೆ ನಡೆದರೆ, ಚೆಡ್ಡಿ ಮಾತ್ರ ಒಂದೇ ಸಲ ಚಲಿಸೋದು!

ಪ್ಯಾಂಟು ಹೊಲಿಸೋದು ಅಷ್ಟು ಸುಲಭವಿರಲಿಲ್ಲ. ಆದ್ರೆ ಅದರ ವೈಭವನೇ ಬೇರೆ!

ಯಾವಾಗಲೂ ಡಾಕ್ಟರ್ ಸ್ಟೇಥೋಸ್ಕೋಪ್ ಹಾಕಿಕೊಂಡ ಹಾಗೆ, ಸಿದ್ದೋಜಿ, ಇಲ್ಲಾ ಮುತ್ತೋಜಿ ಕೊರಳಿನಸುತ್ತ ಇಂಚ್ ಟೇಪ್, ಕಿವಿಯ ಹಿಂದೆ ಹೆಬ್ಬೆಟ್ಟಿನ ಉದ್ದ ಒಂದು ಪೆನ್ಸಿಲ್ ಯಾವಾಗಲೂ ಹಾಕಿರಲೇಬೇಕು. ಅದು ಅವರ ಯೂನಿಫಾರ್ಮ!

ನಿಮ್ಮನ್ನು ನಿಲ್ಲಿಸಿ, ದೇವರ ಮುಂದೆ ಪ್ರದಕ್ಷಿಣೆ ಮಾಡಿದ ಹಾಗೆ ತಿರುಗಿಸಿ, ಅಳತೆಯನ್ನು ಅವನ ಅಸಿಸ್ಟೆಂಟ್ಗೆ ಕೂಗುವನು.

ಅಸಿಸ್ಟೆಂಟ್ ನಿಮಗಾಗಿ ಹೊಸ ಹಾಳೆ ಶುರುಮಾಡಿ, ಇನ್ನೂ ಸಣ್ಣದಾಗಿರುವ ಪೆರುಮಾಳ್ ಚೆಟ್ಟಿ ಪೆನ್ಸಿಲ್ನಲ್ಲಿ, ಚೆನ್ನಾಗಿ ಬರೆಯಲೆಂದು ಅದನ್ನು ಅಗಾಗ್ಗೆ ಎಂಜುಲು ಮಾಡುತ್ತಾ ಬಟ್ಟೆಯಿಂದ ಪ್ಯಾಂಟ್ ಮಾಡುವುದಕ್ಕೆ ಬೇಕಾಗುವ ನಕ್ಷತ್ರ, ಗೋತ್ರವನ್ನು ಬರೆಯುವನು.

ಬಟ್ಟೆಯ ಗುಂಡಿ ಹಾಕಬೇಕಾ ಇಲ್ಲಾ ಮರದ್ದಾ ಅಂತ ಕೇಳಿ, ಕೊನೆಗೆ ಏನು ಮಾಡಬೇಕೆಂದು ಅವನೇ ನಿಷ್ಕರ್ಷೆ ಮಾಡುವನು ಟೈಲರ್.

ಆಗ ಜಿಪ್ಪರ್ ಇನ್ನೂ ಬಂದಿರಲಿಲ್ಲ. ಪ್ಲಾಸ್ಟಿಕ್ ಜಮಾನ ಹುಟ್ಟಿರಲಿಲ್ಲ.

ಬಟ್ಟೆಯ ಕೊನೆಯಿಂದ ಸ್ವಲ್ಪ ಕತ್ತರಿಸಿ ನಿಮಗೆ ಬಿಲ್ಕೊಡುತ್ತಾ 'ಟ್ರೈಯಲ್'ಗೆ ಯಾವತ್ತು ಬರಬೇಕೆಂದು ತಿಳಿಸುವರು.

ನಿಮಗೆ ಎಂಪ್ಲಾಯ್ಮೆಂಟ್ ಎಕ್ಸ್ ಚೇಂಜ್ ಕೆಲಸಕ್ಕೆ ಇಂಟರ್ ವ್ಯೂಗೋ, ಅಥವಾ ಯೂ.ಪಿ.ಎಸ್.ಸಿಯವರು ದೆಹಲಿಯ ವಿಜ್ಞಾನ್ ಭವನ್ಗೆ ಇಂಟರ್ ವ್ಯೂಗೋ ಕರೆದ ಹಾಗೆ ಬಿಲ್ನಲ್ಲೇ ಟ್ರೈಯಲ್ ಡೇಟ್.

ನೀವು ಫ್ಲೆಕ್ಸ್ ಶೂ ಹಾಕಿ ಟಿಪ್ ಟಾಪಾಗಿ ಅವನ ಶಾಪಿಗೆ ಹೋದಾಗ ನಿಮಗೆ ಮೊದಲ ಷಾಕ್ ನಿಮ್ಮ ಬಟ್ಟೆಯ ಅವಸ್ಥೆಯನ್ನು ನೋಡಿ!

ಸಿಕ್ಕಾಪಟ್ಟೆ ಗುಂಡುಸೂಜಿ ಚುಚ್ಚಿಸಿಕೊಂಡ ನಿಮ್ಮ ಬಟ್ಟೆಯ ಮಧ್ಯ, ಬಾಂಬ್ ಡಿಫ್ ಫ್ಯೂಷನ್ ಸ್ಕ್ವಾಡ್‌ನ ಪೊಲೀಸರು ನಿಮ್ಮನ್ನು ಸುರಕ್ಷಿತ ಜಾಗಕ್ಕೆ ಕರೆದೊಯ್ಯುವಹಾಗೆ ನಿಮ್ಮನ್ನು ತೂರಿಸಿಕೊಂಡು ಹೋಗುವನು.

ಎಲ್ಲಿ ಗುಂಡ್ಸೂಜಿ ಚುಚ್ಚಿ ಸೆಪ್ಟಿಕ್ ಆಗುವುದೋ ಅಂತ ನೀವು ಹೆದರಿನಿಂತಿದ್ದರೆ, ಬಾಯಲ್ಲಿ ಕಚ್ಚಿಟ್ಟಿದ್ದ ಸೂಜಿಯನ್ನು ಇನ್ನರೆಡು ಕಡೆ ಹಾಕಿ, ಸೋಪಿನ ಹಾಗಿರುವ ನೀಲಿ ಬಣ್ಣದ ಬಳಪದಿಂದ ಅಲ್ಲಲ್ಲಿ ಗೀಚಿ, ನಿಮ್ಮನ್ನು ಅಸಿಸ್ಟೆಂಟ್ ಜೊತೆಬಿಟ್ಟು ಬೀಡಿ ಸೇದಲು ಹೋಗುವನು.

ಮೂರು ಸರ್ತಿ ನಿಮಗೆ ನಾಮ ಹಾಕಿ, ಕೊನೆಗೆ ಪ್ಯಾಂಟ್ ಸಿಗುವ ಮುಹೂರ್ತ ಬಂದಾಗ ಅಲ್ಲಿ ಸೀನೇ ಬೇರೆ!

ಮುತ್ತೋಜಿ ಮುತ್ತುವರ್ಜೆ ವಹಿಸಿ, ನಿಮ್ಮ ಪ್ಯಾಂಟನ್ನು ಇದ್ದಲು ಕಲ್ಲಿನ ಐರನ್ ಬಾಕ್ಸಿನಿಂದ 'ಇಸ್ತ್ರಿ' ಮಾಡುವುದನ್ನು ನೋಡಿ ನಿಮಗೆ ಖುಶಿಯೋ ಖುಶಿ. ಯಾಕೆಂದರೆ ಅದೇ ಅದನ್ನು ಮೊದಲ ಬಾರಿಗೆ ಗುಂಡುಸೂಜಿಯಿಲ್ಲದೆ ನೋಡುತ್ತಿರುವುದು!

ಪದರೆಲ್ಲಾ ಹೋಗಿ ಪ್ಯಾಂಟ್ನ ಹಾಗೆ ಕಾಣುತ್ತಿದೆ.

ಬೆಚ್ಚಗಿನ ಪ್ಯಾಂಟಿನೊಳಗೆ ಹೋಗುತ್ತಿದ್ದಾಗ, ಮ್ಯಾಗ್ನೆಟ್ಗೆ ಕಬ್ಬಿಣದ ಅದುರು ಆಕರ್ಷವಾದ ಹಾಗೆ, ನಿಮ್ಮ ಪ್ಯಾಂಟಿಗೆ ಅಂಟುಕೊಂಟಿದ್ದ ಸಣ್ಣ ಪುಟ್ಟ ದಾರದ ತುಂಡುಗಳನ್ನು ಅಸಿಸ್ಟೆಂಟ್ ಆರಿಸಿ ತೆಗೆಯುವನು. ಮಾಸ್ಟರ್ ಮೇಲಿಂದ ಕೆಳಗೆ ಬ್ರಷ್ ಮಾಡುವನು. ಕನ್ನಡಿಯಲ್ಲಿ ನೋಡ್ತಿದ್ದರೆ ಯಾರಿವನೂ ಅನ್ನುವ ಹಾಗೆ ನಿಮಗೇ ಡೌಟ್!

ನಿಮ್ಮ ಸಂದೇಹ ಗಳನ್ನು ಅಲ್ಲೇ ಕ್ಲಿಯರ್ ಮಾಡುವರು. ಬಹಳ ದೊಗಳೆಯಾದರೆ, ಒಗೆದ ತಕ್ಷಣ 'ಶ್ರಿಂಕ್' ಆಗಿ ಪರ್‍ಫೆಕ್ಟ್ ಆಗಿ ಕೂರುವುದು. ಟೈಟ್ ಆದರೆ, ಗಂಜಿಯೆಲ್ಲಾ ಹೋದ ಮೇಲೆ ಪ್ಯಾಂಟ್ ಲೂಸಾಗಿ, ಸರಿಯಾಗಿ ಫಿಟ್ ಆಗುವುದು! ಯಾತಕ್ಕೂ ಉತ್ತರ ರೆಡಿ!

ನೀವು ಶರ್ಟ್ ಹೊಲಿಸಿದಲ್ಲಿ, ನಿಮಗೆ ಪೂರ್ತಿ ಓಪನ್ ಶರ್ಟ ಬೇಕೇ, ಎಡಗಡೆ ಪ್ಯಾಕೆಟ್ ಬೇಕೇ, ಬಟನ್ ಬೇಕೇ ಇಲ್ಲವೇ;

ನಿಮಗೆ ಶರ್ಟಿಗೆ ಬಟನ್ ಬೇಡಾಂದ್ರೆ, ದಾರದಲ್ಲಿ ಹಿತ್ತಾಳೆಯ ಗುಂಡಿಯನ್ನು ಹಾಕಿ ಕೊಡುವನು ಟೈಲರ್. ನೀವು ಶರ್ಟ್ ಬದಲಾಯಿಸಿದಾಗೆಲ್ಲಾ ಈ ಗುಂಡಿ ದಾರವನ್ನು ತೆಗೆದು ಹೊಸ ಶರ್ಟಿಗೆ ಹಾಕಿಕೊಳ್ಳಬೇಕು!

ಶರ್ಟಿನ ಉದ್ದ ಕೈ ಮೀರಿ ಅದು ಮುಚ್ಚಿಹೋದಹಾಗೆ ಇದ್ರೆ, ಅದನ್ನು ಎರಡು ಸಲ ಮಡಿಚಿ, ಕೈ ಕಾಣಿಸಿದ ಮೇಲೆ ಗ್ಲಾಸಿನದೋ, ಬಂಗಾರದ್ದೋ ಕಫ್ ಲಿಂಕ್ಸ್ ಹಾಕಿ ಕೊಳ್ಳುವುದು ರೂಢಿ.

ಯಾರು ಸೂಟ್ ಅಥವಾ ಕೋಟ್ (ಜ್ಯಾಕೆಟ್) ಹೊಲಿಸಿತ್ತದ್ದರೋ, ಅವರು ಕಂಟೋನ್ಮೆಂಟಿಗೆ ಅಲ್ಲಿ ಸೈಯದ್ ಬಾಕರ್, ಇಲ್ಲ ವಿಷ್ಣುವಿನ ಹತ್ರ ಹೋಗಿ ಆರ್ಡರ್ ಕೊಡುತ್ತಿದ್ದರು.

ಅಲ್ಲಿಯ ಟೈಲರ್‍ಗಳಿಗೆ, ನೀವು ಸಿಟಿಯಿಂದ ಬಂದ್ರಿ ಅಂದ್ರೇನೇ ಒಂದು ಅಸಡ್ಡೆ!

ಅವರ ಹತ್ತಿರ ಎರಡು 'ಟ್ರೈಯಲ್ಸ್'! ನಿಮ್ಮ ಕುಗ್ಗಿರುವ ಭುಜಕ್ಕೆ ರಟ್ಟು, ಕಾರ್ಡಬೋರ್ಡ್ ಇಟ್ಟು ಹೇಗಾದರೂ 'ದಿಲೀಪ್ ಕುಮಾರ್' ತರಹ ಮಾಡೋದಕ್ಕೆ ಭಗೀರಥ ಪ್ರಯತ್ನ !

ಮೂರು, ನಾಲ್ಕು ಸರ್ತಿ ತಿರುಗಾಡಿದ ಮೇಲೆ, ಇನ್ನು ಇಷ್ಟೇ, ದೇವರು ಕೊಟ್ಟ ಬುಜದಿಂದ ಸಂತ್ರುಪ್ತನಾಗಿರು ಅಂತ ಅವನ ಕೈಲಿ ಹೇಳಿಸಿಕೊಂಡು, ಕೊನೆಯ ಸರ್ತಿ ಹೋದಾಗ, ನಿಮ್ಮ ಸೂಟನ್ನು ದೊಡ್ಡ ಕಾರ್ಡ್ ಬೋರ್ಡ್ ನಲ್ಲಿ ನಿಮ್ಮ ಕೈಲಿಟ್ಟು, ಮನೆಗೆ ಹೋಗುವ ತನಕ ಹೀಗೇ ಹಿಡಿದುಕೊಂಡು ಹೋಗಿ! ಅಂತ ಬೀಳ್ಕೊಡುವನು.

ದೀಪಾವಳಿ ಬಂತೆಂದರೆ, 'ಥಾನ್ ಫ್ಯಾಮಿಲಿ'ಯವರು ಮುದುಕರಿಂದ, ಮಗುವಿನ ತನಕ ಸಾಲಾಗಿ ಒಂದೇ ಬಟ್ಟೆಯಲ್ಲಿ ಚೆಡ್ಡಿ, ಪ್ಯಾಂಟ್, ಶರ್ಟ್, ಬುಶ್ ಶರ್ಟ್ ಹೊಲಿಸಿಕೊಂಡು ಹೊರಗೆ ಬರುವರು!

***
ಗಂಡಸರದು ಹೀಗಾದರೆ, ಹೆಂಗಸರ ಕಥೆ ಏನು? ಅವ್ರು ಯಾವಾಗಲೂ, ಯಾವ ಕಾಲಕ್ಕೂ ಕೂಲ್, ಕಲೆಕ್ಟೆಡ್. ಸೀರೆಗೆ ಸೀತಾಲಕ್ಷ್ಮಿ,ರುಕ್ಮಿಣಿ ಹಾಲ್ಗೆ ಹೋಗಿ ಚೌಕಾಸಿ ಮಾಡಿ ಸೀರೆ ಖರೀದಿಸಿದರೆ, ಜಾಕೆಟ್, ಬ್ಲೌಸ್ ಗಳನ್ನು ಉಷಾ, ಸಿಂಗರ್, ಮಷೀನುಗಳಿಂದ ಮನೆಯಲ್ಲೇ ಹೊಲಿಯುವರು.

ಅವರಿಗಿದ್ದ ವೀಕ್ನೆಸ್ ಒಂದೇ. ಎಲ್ಲಿ 'ಚೀಟಿ ಬಟ್ಟೆ'ಸಿಕ್ಕಿವುದೋ ಅಲ್ಲಿಗೆ ದಾಳಿ ಮಾಡಿ, ಕೊಂಡದನ್ನೇ ಮತ್ತೆಮತ್ತೆ ಕೊಳ್ಳುವುದು!

***
ಹೀಗಿತ್ತು ಆಗಿನ ಕಾಲ.
ಆಗ, ರೆಡಿಮೇಡ್ ಅಂದ್ರೆ ದೂರ ಓಡುತ್ತಿದ್ದವರು, ಈಗ ಎಲ್ಲವೂ ರೆಡಿಮೇಡ್ ಮಯ!

English summary
Karnataka life style changed over past two decades and fashion trend and ladies tailors style of stitching and brand dress style is compared to style followed nowadays writes citizen journalist ER Ramachandran.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X