• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂಗ್ಲಿಷ್ ಶಾಲೆಗಳ ಬಗ್ಗೆ ಕನ್ನಡಿಗರು ಏನನ್ನುತ್ತಾರೆ?

By * ಆನಂದ್ ಜಿ, ಅಧ್ಯಕ್ಷರು, ಬನವಾಸಿ ಬಳಗ
|

ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಆರನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಾಲೆಗಳನ್ನು ತಾನೇ ಆರಂಭಿಸಲು ಮುಂದಾಗಿದೆ. ಈ ನಡೆಯು ಕನ್ನಡ ಮಾಧ್ಯಮ ಕಲಿಕೆಯ ಬಗ್ಗೆ ನಂಬಿಕೆಯಾಗಲೀ, ಈಗಿರುವ ಕನ್ನಡ ಮಾಧ್ಯಮದ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಯೋಚನೆಯಾಗಲೀ ಸರ್ಕಾರಕ್ಕಿಲ್ಲವೆಂಬುವಂತಿದೆ. ಸರ್ಕಾರದ ಈ ನಡೆಯು ದೀರ್ಘಾವಧಿಯಲ್ಲಿ ನಾಡಿನ ಏಳಿಗೆಯನ್ನು ಮಣ್ಣುಪಾಲು ಮಾಡಬಲ್ಲುದಾಗಿದೆ.

ರಾಜ್ಯ ಸರ್ಕಾರವು ಕಲಿಕೆಯ ವಿಷಯದಲ್ಲಿ ಮೊದಲಿನಿಂದಲೂ ಕನ್ನಡ ವಿರೋಧಿಯನ್ನು ಧೋರಣೆಯನ್ನು ತೋರಿಸುತ್ತಿರುವ ಅನುಮಾನವಿದೆ. ಎರಡು ವರ್ಷಗಳ ಹಿಂದೆ ಬಿಬಿಎಂಪಿ ವ್ಯಾಪ್ತಿಯ ಸರ್ಕಾರಿ ಶಾಲೆಯನ್ನು ಭಾರತೀಯ ವಿದ್ಯಾಭವನ ಎನ್ನುವ ಖಾಸಗಿ ಸಂಸ್ಥೆಗೆ ಕೇಂದ್ರೀಯ ಪಠ್ಯಕ್ರಮದ ಆಂಗ್ಲ ಮಾಧ್ಯಮ ಶಾಲೆಯನ್ನು ನಡೆಸಲು ಒಪ್ಪಿಸಿಬಿಟ್ಟಿತು. ಆ ಮೂಲಕ ರಾಜ್ಯ ಸರ್ಕಾರದ ಪಠ್ಯಕ್ರಮದಲ್ಲಿ ತನಗೆ ನಂಬಿಕೆ ಇಲ್ಲವೆಂಬುದನ್ನು ತೋರಿಸಿಕೊಂಡಿತ್ತು. ಹೀಗೆ ನಡೆದುಕೊಳ್ಳಲು "ಬಡಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು" ಎನ್ನುವ ಕಾರಣವನ್ನು ನೀಡಿತ್ತು. ಇದಾದ ಕೆಲದಿನಗಳಲ್ಲೇ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಎಂದು ಸುಮಾರು ಮೂರು ಸಾವಿರ ಕನ್ನಡ ಪ್ರಾಥಮಿಕ ಶಾಲೆಗಳನ್ನು ಮುಚ್ಚಲು ಮುಂದಾಯಿತು. ಈ ಬಗ್ಗೆ ಜನರಿಂದ ವಿರೋಧ ಬಂದಾಗ "ಮುಚ್ಚುವಿಕೆ ಅಲ್ಲಾ... ಹತ್ತಿರದ ಶಾಲೆಯೊಂದಿಗೆ ವಿಲೀನ" ಎಂದಿತು.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಯಾಕೆ ಕಡಿಮೆ? ಎನ್ನುವುದಕ್ಕೆ "ಹಳ್ಳಿಗಳಿಂದ ನಗರಗಳಿಗೆ ಜನರು ವಲಸೆ ಹೋಗುತ್ತಿದ್ದಾರೆ" ಎಂದಿತು. "ಹಾಗಾದರೆ ಹಳ್ಳಿಗಾಡಿನ ಖಾಸಗಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೇಗೆ ಹೆಚ್ಚುತ್ತಿದೆ?" ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಸರ್ಕಾರಿ ಶಾಲೆಗಳನ್ನು ಮುಚ್ಚಲು ಮಕ್ಕಳ ಸಂಖ್ಯೆ ಐದಕ್ಕಿಂತಾ ಕಡಿಮೆಯಿದೆ ಎನ್ನುವ ಕಾರಣ ನೀಡುತ್ತಾ "ಇದು ಕೇಂದ್ರ ಸರ್ಕಾರದ ಆದೇಶ, ನಮ್ಮ ತಪ್ಪೇನೂ ಇಲ್ಲಾ" ಎಂದು ತಿಪ್ಪೆ ಸಾರಿಸಲಾಯಿತು. ಇಷ್ಟೇ ಅಲ್ಲದೆ ಕೇಂದ್ರೀಯ ಪಠ್ಯಕ್ರಮದ ಶಾಲೆಗಳನ್ನು ಆರಂಭಿಸಲು ಇರುವ ಕಟ್ಟುಪಾಡುಗಳನ್ನೆಲ್ಲಾ ಗಾಳಿಗೆ ತೂರಿ ನಿರಾಕ್ಷೇಪಣಾ ಪತ್ರಗಳನ್ನು ನೀಡುವುದನ್ನು ಮುಂದುವರೆಸಲಾಯಿತು, ಇದು ಬೀದಿಗೊಂದು ಕೇಂದ್ರ ಪಠ್ಯಕ್ರಮದ ಶಾಲೆ ಆರಂಭವಾಗಲು ಕಾರಣವಾಯಿತು. ಇವಿಷ್ಟೂ ಒಂದು ಹಂತದ ಕಥೆಯಾದರೆ ಈಗಿನದ್ದು ಮತ್ತೊಂದು.

ಈಗ ರಾಜ್ಯ ಸರ್ಕಾರದ 341 ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ಶುರುಮಾಡಲು ಮುಂದಾಗಿದೆ. "ಇದಕ್ಕೆ ಜನರಿಂದ ಬೇಡಿಕೆಯಿದೆ, ಬಡಮಕ್ಕಳು ಖಾಸಗಿ ಶಾಲೆಗಳನ್ನು ಸೇರಲಾಗದ ಕಾರಣದಿಂದ ಆಂಗ್ಲ ಮಾಧ್ಯಮದಲ್ಲಿ ಕಲಿಯುವುದರಿಂದ ವಂಚಿತರಾಗಬಾರದು, ಇದು ರಾಜ್ಯ ಸರ್ಕಾರದ ಭಾಷಾ ನೀತಿಯನ್ನು ಉಲ್ಲಂಘಿಸುತ್ತಿಲ್ಲ" ಇತ್ಯಾದಿ ಕಾರಣಗಳನ್ನು ಕೊಡಲಾಗುತ್ತಿದೆ. ಕರ್ನಾಟಕದ ಭಾಷಾ ನೀತಿ ಕನ್ನಡ ಮಾಧ್ಯಮದಲ್ಲಿನ ಕಲಿಕೆಯನ್ನು 5ನೇ ತರಗತಿಯವರೆಗೆ ಕಡ್ಡಾಯ ಮಾಡಿರುವುದನ್ನು "ಕನಿಷ್ಠ 5ನೇ ತರಗತಿಯವರೆಗೆ" ಎಂದು ಪರಿಗಣಿಸದೇ "ಗರಿಷ್ಠ 5ನೇ ತರಗತಿಯವರೆಗೆ" ಎಂದು ಸರ್ಕಾರ ಪರಿಗಣಿಸಿದಂತಿದೆ.

ಇದೆಲ್ಲದರ ಅರ್ಥವು ನೇರವೂ ಸರಳವೂ ಆಗಿದೆ. ಕನ್ನಡನಾಡಿನ ಭವಿಷ್ಯ ರೂಪಿಸಲು ಅಗತ್ಯವಾಗಿರುವ 'ಕನ್ನಡಿಗರ ಕಲಿಕೆ'ಗೆ ‘ಕನ್ನಡ ನುಡಿ' ಯೋಗ್ಯವಾಗಿದೆ ಎನ್ನುವ ನಂಬಿಕೆಯೇ ಸರ್ಕಾರಕ್ಕಿಲ್ಲ. ಈಗಿರುವ ಕಲಿಕೆ ಏರ್ಪಾಟಿನಲ್ಲಿರುವ ಕುಂದುಕೊರತೆಗಳನ್ನು ನೀಗಿಸಿಕೊಂಡು "ಅತ್ಯುತ್ತಮವಾಗಿ ನಿರ್ವಹಿಸಲಾಗುತ್ತಿರುವ, ಅತ್ಯುತ್ತಮ ಗುಣಮಟ್ಟದ ಶಿಕ್ಷಣ ವ್ಯವಸ್ಥೆ"ಯನ್ನು ಕಟ್ಟಬೇಕೆಂಬ ಸಣ್ಣ ಹಂಬಲವೂ ಸರ್ಕಾರಕ್ಕಿರುವಂತೆ ತೋರುತ್ತಿಲ್ಲ. ಬದಲಾಗಿ ಕನ್ನಡಕ್ಕೆ ಕಲಿಕಾ ಮಾಧ್ಯಮವಾಗುವ ಯೋಗ್ಯತೆಯಿಲ್ಲಾ ಎಂದೂ, ಕನ್ನಡಿಗರಿಗೆ ಆಂಗ್ಲ ಮಾಧ್ಯಮದಲ್ಲಿನ ಕಲಿಕೆಯೇ ಒಳಿತೆಂದೂ ತಿಳಿದಿರುವಂತಿದೆ.

English summary
Karnataka govt is killing Kannada medium schools by opening English medium schools from 6th standard. It looks like govt has no faith in it's own education system. Writes G. Anand of Banavasi Balaga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more