ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾದಗಿರಿ ಬಡ ಶಾಲಾ ಮಕ್ಕಳ ಲೈಫು ಇಷ್ಟೇನಾ?

By * ಸಾಗರ ದೇಸಾಯಿ, ಯಾದಗಿರಿ
|
Google Oneindia Kannada News

Pathetic state of govt school in Yadgir
ಮುರುಕಲು ಬೋರ್ಡ್, ಕೂಡಲು ಪೀಠೋಪಕರಣಗಳಿಲ್ಲ, ಒಂದೇ ಕೋಣೆ, 5 ತರಗತಿ, 72 ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರು! ಇದು ಯಾವುದೇ ಕುಗ್ರಾಮದಲ್ಲಿ ನಡೆಯುವ ಶಾಲೆಯಲ್ಲ. ಯಾದಗಿರಿ ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ಹಿರಿಯ ಪಾಥಮಿಕ ಶಾಲೆಯೊಂದರ ದುರಂತ ಕಥೆ!

ಹೊರಗಡೆಯಿಂದ ಈ ಶಾಲೆಯನ್ನು ನೋಡಿದ್ದರೆ ಯಾವುದೋ ಮನೆ ಕಟ್ಟುವುದನ್ನು ಅರ್ಧಕ್ಕೆ ನಿಲ್ಲಿಸಿರಬಹುದು ಅನ್ನಿಸುತ್ತದೆ. ಸಮೀಪ ಹೋಗುತ್ತಲೆ, ಅಯೋ ಇದು ಮನೆಯಲ್ಲ ಶಾಲೆ ಅಂತ ಫುಲ್ ಕನ್‌ಫ್ಯೂಸ್ ಆಗಿಬಿಡುತ್ತದೆ. ಕಿತ್ಹೋಗಿರೋ ಗೋಡೆ, ಆ ಗೋಡೆಗೆ ಕಿತ್ಹೋಗಿರೋ ಬೋರ್ಡ್! ಎ ಮಲ್ಯಾ... ಭೀಮ್ಯಾ... ಸಿದ್ದಾ ಕುಡ್ರಲೇ ಅನ್ನೋ ಇಬ್ಬರು ಶಿಕ್ಷಕಿಯರು. ಟೀಚರ್... ನಾನು ತಂದಿದ್ದ ಪೆನ್ಸಿಲ್ ರಬ್ಬರ್ ತೊಗೊಂಡಾನ ಅಂತ ಕಿತ್ತಾಡೊ ಮಕ್ಕಳು. ಇದು ನಮ್ಮ ಯಾದಗಿರಿ ನಗರದ ಬಡವರ ಮಕ್ಕಳು ಓದುತ್ತಿರುವ ಶಾಲೆ ಕಣ್ರೀ.

ನಮ್ಮ ಮಕ್ಕಳ ತರಹ ಈ ಮಕ್ಕಳು ಶಾಲೆಯಲ್ಲಿ ಕುರ್ಚಿ ಅಥವಾ ಬೆಂಚ್ ಮೇಲೆ ಕುಳಿತುಕೊಳ್ಳುವುದಿಲ್ಲ. ಮನೆಯಿಂದ ಬರುವಾಗ 'ಶ್ರೀಮಂತ' ಹುಡುಗರು ಸಣ್ಣ ಪ್ಲಾಸ್ಟಿಕ್ ಚೀಲ ತಂದು ಅದರ ಮೇಲೆ ಕುಳಿತುಕೊಳ್ಳುತ್ತಾರೆ. ಇನ್ನೂ ಉಳಿದವರಿಗೆ ನೆಲವೇ ಆಸನ. ಬೆಡ್ ರೂಂ ಅಳತೆಯ ಒಂದು ಕೋಣೆಯಲ್ಲಿ 1ರಿಂದ 5ನೇ ತರಗತಿವರೆಗೆ ಒಟ್ಟು 72 ಮಕ್ಕಳಿಗೆ ಇಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಇಬ್ಬರು ಶಿಕ್ಷಕಿಯರಿದ್ದಾರೆ. ಜಿಲ್ಲಾ ಕೆಂದ್ರದ ಗಂಜ್ ಪ್ರದೇಶದಲ್ಲಿ ಶೂನ್ಯ ಸೌಲಭ್ಯಗಳ ಮಧ್ಯೆ ಬಾಡಿಗೆ ಕಟ್ಟಡವೊಂದರಲ್ಲಿ ಈ ಶಾಲೆ ನಡೆಯುತ್ತಿದೆ. ಈ ಕಟ್ಟಡ ಸರ್ಕಾರದ್ದೇ ಆದರೂ, ಇದು ಅಂಗನವಾಡಿ ಕಟ್ಟಡ ಎಂದು ಹೇಳಲಾಗುತ್ತದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರತಿ ತಿಂಗಳು 300ರೂ. ಬಾಡಿಗೆ ನೀಡುತ್ತಿದೆ.

ಈ ಶಾಲೆಯಲ್ಲಿ ಓದುತ್ತಿರುವ ಮಕ್ಕಳೆಲ್ಲರೂ ಅತ್ಯಂತ ಕಡುಬಡವರು. ಒಪ್ಪತ್ತಿನ ಗಂಜಿಗೂ ಪರದಾಡುವ ಕುಟುಂಬದಿಂದ ಬಂದವರು. ಎಲ್ಲಾ ಮಕ್ಕಳ ತರಹ ನಮ್ಮ ಮಕ್ಕಳು ಶಿಕ್ಷಣ ಪಡೆಯಲಿ, ಮುಂದಿನ ನಮ್ಮ ಕುಟುಂಬಕ್ಕೆ ನೆರವಾಗಲಿ ಎಂದು ಹಾರೈಸಿ ಪಾಲಕರು ಈ ಮಕ್ಕಳನ್ನು ಶಾಲೆಗೆ ಕಳುಹಿಸಿದ್ದಾರೆ. ಆದರೆ, ಸರ್ಕಾರ ಇಂತಹ ಮಕ್ಕಳಿಗೆ ಸೌಲಭ್ಯಗಳನ್ನು ಒದಗಿಸದೆ ಅವರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಇವರ ಲೈಫ್ ಇಷ್ಟೇನಾ?

2006ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಾರಂಭಿಸಲಾದ ಈ ಶಾಲೆಗೆ ಸೂರು ಕಲ್ಪಿಸಲಾಗಿಲ್ಲ. ಅದೇ ವರ್ಷ ಶಾಲೆಯ ಕಟ್ಟಡಕ್ಕೆ 4 ಲಕ್ಷ ರೂಪಾಯಿ ಅನುದಾನ ಇತ್ತು. ಆ ಸಂದರ್ಭದಲ್ಲಿ ಕಟ್ಟಡ ನಿರ್ಮಾಣಕ್ಕೆ ಸ್ಥಳವಿರಲಿಲ್ಲ. ಈಗ ಸ್ಥಳವಿದೆ ಆದರೆ, ಕಟ್ಟಡ ನಿರ್ಮಾಣಕ್ಕೆ 4 ಲಕ್ಷ ಸಾಲುವುದಿಲ್ಲ. ಹೀಗಾಗಿ ಶಾಲೆಯ ನಿರ್ಮಾಣ ನೆನೆಗುದಿಗೆ ಬಿದ್ದಿದೆ. ಅಧಿಕಾರಿಗಳು ಮತ್ತು ಮಂತ್ರಿಗಳು ಸರ್ಕಾರಿ ಹಣದಲ್ಲಿ ಓಡಾಡುವ ಇಂಧನಕ್ಕೆ ಹಣ ಇದೆ. ಅವರು ನಡೆಸುವ ಐಷಾರಾಮಿ ಮೀಟಿಂಗ್‌ಗಳಿಗೆ ಹಣವಿದೆ. ಆದರೆ, ಬಡ ಮಕ್ಕಳು ಓದುವ ಶಾಲೆ ಕಟ್ಟುವುದಕ್ಕೆ ಹಣದ ಕೊರತೆ ಇದೆ ಎಂದರೆ ಅತ್ಯಂತ ನಾಚಿಕೆಗೇಡಿನ ಸಂಗತಿ.

ಕಟ್ಟಡ ಸಮಸ್ಯೆ ಒಂದೇ ಅಲ್ಲ ಸಿಬ್ಬಂದಿಯ ಕೊರತೆಯು ಈ ಶಾಲೆಗೆ ಕಾಡುತ್ತಿದೆ. ಬೆಳಿಗ್ಗೆಯಿಂದ ಸಂಜೆವರೆಗೆ ಇಬ್ಬರೇ ಶಿಕ್ಷಕಿಯರು ಬೋಧನೆ ಮಾಡುವುದಕ್ಕೆ ತೊಂದರೆಯಾಗುತ್ತಿದೆ. ನಮ್ಮ ತೊಂದರೆ ಯಾರ ಹತ್ತಿರ ಹೇಳುವುದೆಂದು ದಾರಿ ತೋಚದಂತಾಗಿದೆ ಎನ್ನುತ್ತಾರೆ ಶಿಕ್ಷಕಿಯರು. ಕಡಿಮೆ ಮಕ್ಕಳಿರುವ ಸರಕಾರಿ ಶಾಲೆಗಳನ್ನು ಮುಚ್ಚಲು ಸರಕಾರ ಮುಂದಾಗುತ್ತಿದೆ. ಆದರೆ, ಇಲ್ಲಿ ಮಕ್ಕಳು ತುಂಬಿಕೊಂಡಿದ್ದರೂ ಅವರಿಗೆ ಸವಲತ್ತುಗಳನ್ನು ಸರಕಾರ ಒದಗಿಸುತ್ತಿಲ್ಲ. ಇವರಿಗೆ ದೊಡ್ಡ ಕಟ್ಟಡ, ಮಕ್ಕಳಿಗೆ ಯುನಿಫಾರ್ಮ್, ಟೈಬೂಟು ಯಾವ್ದೂ ಬೇಕಾಗಿಲ್ಲ. ಬೇಕಿರುವುದು ಉತ್ತಮ ಕಟ್ಟಡ ಮಾತ್ರ.

ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಹಣೆ ಪಟ್ಟಿಯಿರುವ ಯಾದಗಿರಿ ಜಿಲ್ಲೆಗೆ ಇಷ್ಟು ದಿನ ಗ್ರಾಮೀಣ ಪ್ರದೇಶದಲ್ಲಿ ಕಟ್ಟಡ ಸಮಸ್ಯೆ ಕಾಡುತ್ತಿತು. ಈಗ ಈ ಸಮಸ್ಯೆ ಜಿಲ್ಲಾ ಕೇಂದ್ರಕ್ಕೂ ಹಬ್ಬಿಕೊಂಡಿದೆ. ಆದಷ್ಟು ಬೇಗನೆ ಶಾಸಕರು, ಮಂತ್ರಿಗಳು, ಅಧಿಕಾರಿಗಳು ಬಡ ಮಕ್ಕಳ ಶಾಲೆಗೆ ಭೇಟಿ ನೀಡಿ ಪರಿಶೀಲಿಸಲಿ. ಇಲ್ಲಿ ಓದುತ್ತಿರುವ ಮಕ್ಕಳು ನಿಮ್ಮವರೆ ಅಂತ ಭಾವಿಸಿ ಶಾಲೆಯ ಕಟ್ಟಡ ಹಾಗೂ ಶಿಕ್ಷಕರ ಕೊರತೆ ನೀಗಿಸಲು ತಾತ್ಕಾಲಿಕ ಕ್ರಮವಾದರೂ ಕೈಗೊಳ್ಳಲಿ ಎಂಬದು ನಾಗರಿಕರು ಮನವಿ ಮಾಡಿದ್ದಾರೆ. ಉಸ್ತುವಾರಿ ಸಚಿವರು ಇದಕ್ಕೆ ಸ್ಪಂದಿಸುವರೆ?

English summary
Whole story of this govt school says why Yadgir district is still in back bench while departing education to students. This govt school has 1 room, 2 teachers, 72 students, no black board, no benches, no proper building.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X