• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡದ ಕತ್ತು ಹಿಚುಕುತ್ತಿರುವ ಕೇರಳ ಸರಕಾರ?

By * ಕುಮಾರ ರೈತ, ಬೆಂಗಳೂರು
|

ಶೀರ್ಷಿಕೆ ಓದಿದಾಗ ಆಶ್ವರ್ಯ-ಪ್ರಶ್ನಾರ್ಥಕ ಭಾವಗಳು ಮೂಡುವುದು ಸಹಜ. ಆದರೆ 'ಕನ್ನಡದ ಕತ್ತು ಹಿಚುಕುತ್ತಿರುವ ಕೇರಳ ಸರಕಾರ ಎನ್ನುವುದು ಅಕ್ಷರಶಃ ಸತ್ಯ. ಗಡಿ ಅಂಚಿನ ಕಾಸರಗೋಡಿನಿಂದ ಕನ್ನಡಕ್ಕೆ ಸ್ಥಾನವೇ ಇಲ್ಲದಂತೆ ಮಾಡುವ ನಿಟ್ಟಿನಲ್ಲಿ ಆ ಸರಕಾರ ನಾನಾ ಬಗೆಯ ತಂತ್ರಗಾರಿಕೆಯನ್ನು ಮಾಡುತ್ತಲೇ ಬಂದಿದೆ. ಭಾಷಾವಾರು ಪ್ರಾಂತ್ಯ ರಚನೆಯಾಗಿ 54 ವರ್ಷ ಸಂದರೂ ಕಾಸರಗೋಡಿನಲ್ಲಿ ಕನ್ನಡ ಉಳಿದಿರುವುದನ್ನು ಕಂಡು ಈ ಬಾರಿ ಪ್ರಬಲ ಅಸ್ತ್ತಪ್ರಯೋಗಿಸಿದೆ. ಇದಕ್ಕೆ ತಕ್ಕ ಪ್ರತ್ಯಸ್ತ್ರ ಹೂಡದೇ ಇದ್ದರೆ ಸಂಭವಿಸುವ ಅಪಾಯಗಳು ಅನೇಕ. ಅವುಗಳೇನು…?

ಬದಿಯಡ್ಕ ಶಾಲಾ ಮಕ್ಕಳು : 2011ರ ಜುಲೈ 8ರಿಂದ 17ರವರೆಗೆ ಕೇರಳದಲ್ಲಿನ ಕನ್ನಡ ಪ್ರಾಂತ್ಯಗಳಾದ ಕಾಸರಗೋಡು-ಹೊಸದುರ್ಗಗಳಲ್ಲಿ ಕ್ಷೇತ್ರ ಪ್ರವಾಸದಲ್ಲಿದ್ದೆ. ಎಂದಿನಂತೆ ಕನ್ನಡ ಭಾಷಾ ಚಳವಳಿಗಾರನ್ನು ಭೇಟಿಯಾದೆ. "ಕನ್ನಡಕ್ಕೆ ಭಾರಿ ಅಪಾಯ ತಂದೊಡ್ಡುವ ಕ್ರಮವನ್ನು ಕೇರಳ ಸರಕಾರ ಜರುಗಿಸಿದೆ. ಇದರಿಂದ ಕಾಸರಗೋಡಿನ ಕನ್ನಡದ ಕತ್ತು ಹಿಚುಕಿದಂತಾಗುತ್ತದೆ. ಕೆಲವೇ ವರ್ಷಗಳಲ್ಲಿ ಇಲ್ಲಿನ ಕನ್ನಡ ಸಂಸ್ಕೃತಿ ಕಣ್ಮರೆಯಾಗಲಿದೆ" ಎಂಬ ಆತಂಕವನ್ನು ಮುಳ್ಳೇರಿಯಾದ ಆಯುರ್ವೇದ ವೈದ್ಯ ನರೇಶ್ ಮತ್ತು ಕಾಸರಗೋಡಿನ ಸರಕಾರಿ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ರತ್ನಕರ ಮಲ್ಲಮೂಲೆ ಅವರು ವ್ಯಕ್ತಪಡಿಸಿದರು.

ಕನ್ನಡ ಭಾಷಾ ಶಾಲೆಗಳಲ್ಲಿ 10ನೇ ತರಗತಿವರೆಗೆ ಎರಡನೇ ಭಾಷೆಯಾಗಿ ಮಲೆಯಾಳಂ ಕಲಿಸಬೇಕು-ಕಲಿಯಬೇಕು ಎನ್ನವುದೇ ಈ ಆದೇಶ. ಕಾಸರಗೋಡು-ಹೊಸದುರ್ಗ ಎರಡೂ ತಾಲೂಕುಗಳು ಕೇರಳದಲ್ಲಿವೆ. ಇಲ್ಲಿ ಮಲೆಯಾಳಂ ಭಾಷೆಯನ್ನು ಕಡ್ಡಾಯ ಮಾಡಿದರೇನು ತಪ್ಪು ಎಂಬ ಪ್ರಶ್ನೆ ಮೂಡಬಹುದು. ಆದರೆ ಇಲ್ಲಿಯೇ ಭಾಷಾ ಸೂಕ್ಷ್ಮತೆ ಅಡಕವಾಗಿದೆ. ಕಾಸರಗೋಡಿಗೆ ಭಾಷಾ ಅಲ್ಪ ಸಂಖ್ಯಾತ ಪ್ರದೇಶ ಸ್ಥಾನ-ಮಾನ ಕೇರಳ ಸರಕಾರದಿಂದಲೇ ದೊರಕಿದೆ. ಆದರೆ ಇದು ಕಾಗದದ ಮೇಲಷ್ಟೇ ಉಳಿದಿದೆ. ಇದರಿಂದಾಗಿಯೇ ನಾನಾ ಒಳ ಮಾರ್ಗಗಳ ಮೂಲಕ ಇಲ್ಲಿ ಮಲೆಯಾಳಂ ಹೇರಲು ಪ್ರಯತ್ನ ನಡೆಯುತ್ತಲೇ ಇದೆ.

ಬದಿಯಡ್ಕದ ಪೆರಡಾಲ ಶಾಲೆ : 1956ರ ನವೆಂಬರ್ 1ರಂದು ಭಾಷಾವಾರು ಪ್ರಾಂತ್ಯ ರಚನೆಯಾದ ಬಳಿಕ ಕನ್ನಡಿಗ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಅನೇಕ ಕನ್ನಡ ಪ್ರದೇಶಗಳು ನೆರೆಯ ರಾಜ್ಯಗಳಲ್ಲಿ ಸೇರಿದವು. ಕಾಸರಗೋಡು-ಹೊಸದುರ್ಗ ಕೇರಳ ನಕ್ಷೆಯಲ್ಲಿ ಸೇರ್ಪಡೆಯಾದವು. ಇದರ ವಿರುದ್ಧ ಕಾಸರಗೋಡಿನ ಅಂದಿನ ಕನ್ನಡ ಭಾಷಾ ಹೋರಾಟಗಾರರ ಸತತ ಪ್ರಯತ್ನಗಳ ಬಳಿಕ ಮಹಾಜನ್ ಆಯೋಗ ರಚನೆಯಾಗಿ ಚಂದ್ರಗಿರಿ ನದಿಯ ಉತ್ತರ ಭಾಗ ಕನ್ನಡ ನಾಡಿಗೆ ಸೇರಬೇಕು ಎಂಬ ವರದಿಯೂ ದೊರೆಯಿತು. ಈ ನದಿಯ ದಕ್ಷಿಣಕ್ಕಿರುವ ಅಚ್ಚಗನ್ನಡ ಪ್ರದೇಶ ಹೊಸದುರ್ಗ ಕೈ ತಪ್ಪುವ ಮೂಲಕ ಅನ್ಯಾಯವಾಯಿತಾದರೂ ಸೌಮ್ಯ ಸ್ವಭಾವದ ಕನ್ನಡಿಗರು ಮಹಾಜನ್ ವರದಿಯನ್ನು ಮಾನ್ಯ ಮಾಡಿದರು. ಹೀಗಿದ್ದರೂ ಇದುವರೆಗೂ ಈ ವರದಿ ಜಾರಿಯಾಗಲಿಲ್ಲವೆಂಬುದು ವಿಷಾದದ ಸಂಗತಿ.

ಭಾಷಾವಾರು ಪ್ರಾಂತ್ಯ ರಚನೆಗೂ ಮೊದಲಿನಿಂದಲೂ ಕಾಸರಗೋಡು-ಹೊಸದುರ್ಗ ಪ್ರದೇಶಗಳಲ್ಲಿ ಕನ್ನಡ ಶಾಲೆಗಳು ವ್ಯಾಪಕವಾಗಿದ್ದವು. ಇಲ್ಲಿ ಕನ್ನಡಿಗರಷ್ಟೆ ಅಲ್ಲದೇ ತುಳು, ಕೊಂಕಣಿ, ಕರಾಡ, ಮರಾಠಿ, ಉರ್ದು, ಬ್ಯಾರಿ ಮತ್ತು ಹಳೆಯ ತಲೆಮಾರಿನ ಮಲೆಯಾಳಿಗರ ಕಲಿಕೆ ಭಾಷೆ ಕನ್ನಡವೇ ಆಗಿತ್ತು. ಭಾಷಾವಾರು ಪ್ರಾಂತ್ಯ ರಚನೆ ಬಳಿಕವೂ ಇದು ಅಬಾಧಿತವಾಗಿ ಮುಂದುವರಿಯಿತು. ಇದರಿಂದಾಗಿಯೇ ಕೇರಳ ಸರಕಾರಕ್ಕೆ ಕಾಸರಗೋಡನ್ನು ಕನ್ನಡ ಭಾಷಾ ಅಲ್ಪಸಂಖ್ಯಾತ ಪ್ರದೇಶವೆಂದು ಘೋಷಿಸುವುದು ಅನಿವಾರ್ಯವಾಯಿತು. ಮೊದಲೇ ಹೇಳಿದಂತೆ ಇದು ಘೋಷಣೆಯಾಗಿಯಷ್ಟೆ ಉಳಿಯಿತು.

'ಕಾಸರಗೋಡು ತಾಲೂಕು ಮೂಲತಃ ತುಳುನಾಡೆಂಬುದು ನಿರ್ವಿವಾದ. ಇಲ್ಲಿ ತುಳು ಸಂಸ್ಕೃತಿಯಿದೆ. ತುಳು ಮಾತೃಭಾಷೆಯನ್ನಾಡುವ ಜನ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇಲ್ಲಿನ ತುಳುವರು ತಾಯಿ ಭಾಷೆಯಾದ ತುಳುವಿನ ಬಗ್ಗೆ ಅಪಾರ ಪ್ರೀತಿ, ಗೌರವ ಹೊಂದಿದ್ದು ಕನ್ನಡದ ಜೊತೆಗೂ ಬೇರ್ಪಡಿಸಲಾಗದ ಸಂಬಂಧ ಹೊಂದಿದ್ದಾರೆ. ಇವರು ತುಳುವನ್ನು ಹೆತ್ತಬ್ಬೆ ಎಂದು ತಿಳಿದರೆ ಕನ್ನಡವನ್ನು ಪೊರೆದಬ್ಬೆ ಎಂದು ತಿಳಿಯುತ್ತಾರೆ. ಕನ್ನಡವೂ ತುಳುವರ ಸ್ವಂತ ಭಾಷೆ" ಇದು ತುಳು ಸಂಶೋಧಕ ಕೇಶವ ಶೆಟ್ಟಿ ಆದೂರು ಅವರ ಖಚಿತ ಅಭಿಪ್ರಾಯ.

ಕನ್ನಡದ ಬಗ್ಗೆ ಅಪಾರ ಅಭಿಮಾನ : ಇಲ್ಲಿನ ಕೊಂಕಣಿ, ಕರಾಡ, ಮರಾಠಿ, ಉರ್ದು, ಬ್ಯಾರಿ ಮತ್ತು ಹಳೆಯ ತಲೆಮಾರಿನ ಮಲೆಯಾಳಿಗರು ಹೊಂದಿದ್ದಾರೆ ಎಂಬುದು ಕೂಡ ಗಮನಾರ್ಹ. 'ಈ ಭಾಷಿಕರೆಲ್ಲ ತಂತಮ್ಮ ಮಾತೃಭಾಷೆಯನ್ನಾಡಿದರೂ ಕನ್ನಡದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದಾರೆ. ಕನ್ನಡ ಶಾಲೆಗಳಲ್ಲಿ ಕಲಿತಿದ್ದಾರೆ. ಇವರಲ್ಲಿ ಇಂದಿಗೂ ಕನ್ನಡಾಭಿಮಾನ ಮರೆಯಾಗಿಲ್ಲ. ಇವರೆಲ್ಲರ ಮನೆ ಭಾಷೆ ಬೇರೆಯಾಗಿದ್ದರೂ ಸಂಸ್ಕೃತಿ ಮಾತ್ರ ಕನ್ನಡ. ಇದಕ್ಕೆ ಪೂರಕವಾದ ಅಂಶಗಳಿವೆ" ಎಂದು ಕನ್ನಡ ಸಹಾಯಕ ಪ್ರಾಧ್ಯಾಪಕ ರತ್ನಕರ ಮಲ್ಲಮೂಲೆ ಹೇಳುತ್ತಾರೆ.

ಈ ಮಾತಿಗೆ ರತ್ನಕರ ಮಲ್ಲಮೂಲೆ ಅವರೇ ಜ್ವಲಂತ ನಿದರ್ಶನ. ಇವರ ಮನೆ ಭಾಷೆ ಮಲೆಯಾಳ. ಆದರೆ ಇವರು ಕಲಿತದ್ದು ಕನ್ನಡ ಶಾಲೆಯಲ್ಲಿ. ಪದವಿ-ಸ್ನಾತಕೋತ್ತರ ಪದವಿ ಪಡೆದಿದ್ದು ಕನ್ನಡದಲ್ಲಿ. ಕಾಸರಗೋಡಿನ ಸರಕಾರಿ ಕಾಲೇಜಿನಲ್ಲಿ ಕನ್ನಡದ ಸವಿರುಚಿಯನ್ನು ವಿದ್ಯಾರ್ಥಿಗಳಿಗೆ ಉಣಬಡಿಸುತ್ತಿರುವ ಇವರು ಕನ್ನಡಕ್ಕೆ ಅನ್ಯಾಯವಾದಗಲೆಲ್ಲ ಮುಂಚೂಣಿಯಲ್ಲಿ ನಿಂತು ಪ್ರತಿಭಟಿಸುತ್ತಲೇ ಬಂದಿದ್ದಾರೆ. ಕನ್ನಡವನ್ನೇ ಕಲಿತ ಮಲೆಯಾಳಿ-ಬ್ಯಾರಿ ಭಾಷಿಕರ ಸಂಖ್ಯೆ ಅಪಾರವಾಗಿದೆ.

ಕೇರಳ ಪ್ರಯೋಗಿಸಿದ ಪ್ರಬಲ ಅಸ್ತ್ರ : ಈ ಎಲ್ಲ ಹಿನ್ನೆಲೆಯಲ್ಲಿ ಕನ್ನಡವನ್ನು ಕಾಸರಗೋಡಿನಿಂದ ಸಂಪೂರ್ಣವಾಗಿ ಹೊರದಬ್ಬುವ ಮಾರ್ಗವಾಗಿ ಎರಡನೇ ಭಾಷೆಯಾಗಿ ಮಲೆಯಾಳಂ ಕಡ್ಡಾಯ ಎಂಬ ಅಸ್ತ್ರವನ್ನು ಕೇರಳ ಸರಕಾರ ಪ್ರಯೋಗಿಸಿದೆ. ಇದರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳ ಮೇಲೆ ಮಾರಕ ಪರಿಣಾಮ ಉಂಟಾಗುತ್ತದೆ. 'ಕೇರಳ ಸರಕಾರದ ಈ ಆದೇಶ ಕನ್ನಡಿಗರಿಗೆ ತೀವ್ರ ಆಘಾತಕಾರಿ. ಇದು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಹಂತಹಂತವಾಗಿ ನಾಶ ಮಾಡುವ ಹುನ್ನಾರ" ಹೀಗೆಂದು ಬದಿಯಡ್ಕದ ಬಲ್ಪು(ಬೆಳಕು) ಸಂಘಟನೆಯ ಸುಂದರ ಬಾರಡ್ಕ ಆಕ್ರೋಶದಿಂದ ನುಡಿಯುತ್ತಾರೆ.

ಕನ್ನಡ ಶಾಲೆಗಳ ವಿದ್ಯಾರ್ಥಿಗಳು 8ನೇ ತರಗತಿಯಿಂದ ಹಿಂದಿ-ಇಂಗ್ಲಿಷ್ ಕಲಿಯಬೇಕು. ಈಗ ಇದರ ಜೊತೆಗೆ ಮಲೆಯಾಳಂ ಅನ್ನು ಕಡ್ಡಾಯವಾಗಿ ಕಲಿಯಲೇಬೇಕು. ಕನ್ನಡ ಭಾಷೆ ತೆಗೆದುಕೊಂಡ ತುಳು-ಮಲೆಯಾಳಿ ಭಾಷಿಕರು ಅರೇಬಿಕ್, ಉರ್ದು ಅಥವಾ ಇಂಗ್ಲಿಷನ್ನು ಐಚ್ಛಿಕವಾಗಿ ಕಲಿಯುತ್ತಿದ್ದರು. ಇಂಥವರೀಗ ಕನ್ನಡದ ಬದಲು ಮಲೆಯಾಳಂ ಅನ್ನೇ ತೆಗೆದುಕೊಳ್ಳುವಂಥ ಪರಿಸ್ಥಿತಿಯನ್ನು ಕೇರಳ ಸರಕಾರ ನಿರ್ಮಾಣ ಮಾಡಿದೆ.

ಇವೆಲ್ಲದರಿಂದ ಆಗಲಿರುವ ಅಪಾಯಗಳ ಪಟ್ಟಿ ದೊಡ್ಡದಿದೆ. ಇದಲ್ಲದೇ ದೈನಂದಿನ ವ್ಯವಹಾರದಲ್ಲಿಯೂ ಕನ್ನಡವನ್ನು ಕಡೆಗಣಿಸಿ, ಹೊರದೂಡುವ ಕಾರ್ಯವನ್ನು ಕೇರಳ ಸರಕಾರ ಅತ್ಯಂತ ವ್ಯವಸ್ಥಿತವಾಗಿ ಮಾಡಿದೆ. ಮಾಡುತ್ತಲಿದೆ. ನಾವು ಎಚ್ಚತ್ತುಕೊಳ್ಳದಿದ್ದರೆ ಮುಂದೆಯೂ ಮಾಡುತ್ತದೆ. ಈ ಕುರಿತು ಬರೆಯುತ್ತೇನೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
What is the status of Kannada schools in Kasargod and Hosadurga? Probably we will never be able to find answer to this question if we, Kannadigas keep quite without objecting to the policies of Kerala. Kannada language is fast vanishing in those regions, wake up fast.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more