ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬಾರೆ ಆನೆ ಶಿಬಿರದಲ್ಲಿ ಸಮಸ್ಯೆಗಳದ್ದೇ ದರ್ಬಾರ್

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

Dubare elephant camp
ಕೊಡಗಿನ ಪ್ರವಾಸಿ ತಾಣಗಳಲ್ಲೊಂದಾಗಿರುವ ದುಬಾರೆ ಇದೀಗ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಕಾವೇರಿ ನದಿಯಲ್ಲಿ ರಿವರ್ ರ‍್ಯಾಫ್ಟಿಂಗ್ ಮಾಡಲೆಂದು ಬರುವವರು ಒಂದೆಡೆಯಾದರೆ... ಮತ್ತೊಂದೆಡೆ ಆನೆ ಸಫಾರಿ ಹಾಗೂ ದುಬಾರೆಯ ನಿಸರ್ಗ ಸೌಂದರ್ಯ ಸವಿಯಲು ಪ್ರವಾಸಿಗರು ಬರುತ್ತಾರೆ. ಇವತ್ತು ದುಬಾರೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಪಡೆದ ಪ್ರವಾಸಿ ತಾಣವಾಗಿ ಗಮನಸೆಳೆಯುತ್ತಿರುವುದು ಕೊಡಗಿನ ಮುಕುಟಕ್ಕೊಂದು ಗರಿಯಾಗಿದೆ.

ದೂರದಿಂದ ಬಂದು ದೋಣಿಯಲ್ಲಿ ವಿಹರಿಸಿ, ಆನೆ ಸಫಾರಿ ಮಾಡಿ ಒಂದಷ್ಟು ಹೊತ್ತು ನಿಸರ್ಗದ ಮಡಿಲಲ್ಲಿ ಮೈಮರೆತು ನೀರಾಟವಾಡಿ ತಮ್ಮ ಊರುಗಳಿಗೆ ಹಿಂದಿರುಗುವ ಪ್ರವಾಸಿಗರಿಗೆ ದುಬಾರೆ ಒಂದು ಅದ್ಭುತ ತಾಣ. ಆದರೆ ಇಲ್ಲಿಯ ಮತ್ತೊಂದು ಕರಾಳ ಮುಖ ಯಾರಿಗೂ ಗೊತ್ತಾಗದಿರುವುದು ಮಾತ್ರ ದುರಂತ.

ಇವತ್ತು ದುಬಾರೆ ಆನೆ ಶಿಬಿರದಲ್ಲಿ ಎರಡು ಮರಿ ಆನೆಗಳು ಸೇರಿದಂತೆ ಸುಮಾರು 17 ಸಾಕಾನೆಗಳಿವೆ. ಇವುಗಳೇ ಇಲ್ಲಿನ ಪ್ರಮುಖ ಆಕರ್ಷಣೆ ಎಂದರೆ ತಪ್ಪಾಗುವುದಿಲ್ಲ. ದೂರದಿಂದ ಹೆಚ್ಚಿನ ಪ್ರವಾಸಿಗರು ಈ ಆನೆಗಳನ್ನು ನೋಡಲೆಂದೇ ಬರುತ್ತಾರಲ್ಲದೆ, ಕೆಲವರು ಆನೆ ಸವಾರಿ ಮಾಡಿದರೆ ಮತ್ತೆ ಕೆಲವರು ಅವುಗಳಿಗೆ ನೀಡುವ ಆಹಾರ ಹಾಗೂ ಗಜಮಜ್ಜನವನ್ನು ನೋಡಿ ಆನಂದಪಡುತ್ತಾರೆ.

ದುಬಾರೆಗೆ ನಮ್ಮ ದೇಶವಲ್ಲದೆ, ವಿದೇಶಿ ಪ್ರವಾಸಿಗರೂ ಆಗಮಿಸುತ್ತಾರೆ. ಇಷ್ಟೊಂದು ಖ್ಯಾತಿ ಪಡೆದ ಪ್ರವಾಸಿ ತಾಣ ಮಾತ್ರ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ ಎಂಬುವುದು ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗನ ಕಣ್ಣಿಗೆ ರಾಚುವ ಕಟುಸತ್ಯ.

ಹದಿನೇಳು ಆನೆಗಳಿಗೆ ಒಂದೇ ಪಾತ್ರೆ : ದುಬಾರೆ ಆನೆ ಶಿಬಿರದಲ್ಲಿರುವ ಸಾಕಾನೆಗಳೆಲ್ಲವೂ ಅರಣ್ಯ ಇಲಾಖೆ ಅಧೀನದಲ್ಲಿವೆಯಾದರೂ ಇಲ್ಲಿ ಆನೆ ಸಫಾರಿಯ ಉಸ್ತುವಾರಿಯನ್ನು ಜಂಗಲ್ ಲಾಡ್ಜ್‌ನವರು ವಹಿಸಿಕೊಂಡಿದ್ದಾರೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಆನೆ ಸಫಾರಿ ನಡೆಯುತ್ತದೆ. ಸಫಾರಿಯಲ್ಲಿ ಪಾಲ್ಗೊಳ್ಳಬೇಕಾದರೆ ಪ್ರತಿಯೊಬ್ಬರೂ ನೂರು ರೂಪಾಯಿ ನೀಡಬೇಕು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಸ್ಥಳದಲ್ಲಿದ್ದು, ಹಣ ಸಂಗ್ರಹಿಸಿಕೊಂಡು ಹೋಗುವುದಷ್ಟೆ ಜಂಗಲ್ ಲಾಡ್ಜ್‌ನವರ ಕಾಯಕ. ಪ್ರತಿ ದಿನವೂ ಸಹಸ್ರಾರು ರೂಪಾಯಿ ಆದಾಯ ತರುವ ಸಾಕಾನೆಗಳ ಸ್ಥಿತಿ ಮಾತ್ರ ಸದ್ಯಕ್ಕೆ ಶೋಚನೀಯವಾಗಿದೆ.

ಸಾಕಾನೆಗಳನ್ನು ದುಡಿಸಿಕೊಂಡು ಅವುಗಳಿಂದ ಆದಾಯ ಪಡೆಯುತ್ತಿರುವ ಅರಣ್ಯ ಇಲಾಖೆ ಅವುಗಳತ್ತ ಗಮನಹರಿಸುತ್ತಿಲ್ಲ ಎಂಬುವುದಕ್ಕೆ ಆನೆಗಳಿಗೆ ಆಹಾರ ಬೇಯಿಸುವ ತೂತು ಬಿದ್ದ ಪಾತ್ರೆಯೇ ಸಾಕ್ಷಿಯಾಗಿದೆ. ಇಲ್ಲಿರುವ ಆನೆಗಳಿಗೆ ಹುರುಳಿ, ರಾಗಿ ಸೇರಿದಂತೆ ಆಹಾರವನ್ನು ಬೇಯಿಸಲು ಸಮರ್ಪಕವಾದ ಪಾತ್ರಗಳಿಲ್ಲ. ಕನಿಷ್ಠ ಸುಮಾರು ಅರ್ಧ ಕ್ವಿಂಟಾಲ್ ಆಹಾರ ಪದಾರ್ಥ ಬೇಯಿಸುವಂತಹ ಪಾತ್ರೆಗಳು ಮೂರ‍್ನಾಲ್ಕಾದ್ರು ಬೇಕು ಆದರೆ ಇಲ್ಲಿರುವುದು ಒಂದೇ ಪಾತ್ರೆ. ಆ ಪಾತ್ರೆಯೂ ತೂತು ಬಿದ್ದಿದೆ. ಸದ್ಯಕ್ಕೆ ಅದಕ್ಕೆ ತೇಪೆ ಹಚ್ಚಿ ಆಹಾರ ಬೇಯಿಸಲಾಗುತ್ತಿದೆ. ಒಂದು ವೇಳೆ ಇದು ಹಾಳಾಗಿ ಹೋದರೆ ಆನೆಗಳು ಉಪವಾಸವೇ ಇರಬೇಕಾಗುತ್ತದೆ. ಈ ಬಗ್ಗೆ ಸಿಬ್ಬಂದಿಗಳು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ವಿದ್ಯುತ್ ಸಮಸ್ಯೆ : ದುಬಾರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಣ್ಯ ಸಿಬ್ಬಂದಿಗಳು ಇನ್ನೂ ಕೂಡ ಆದಿ ಮಾನವರಂತೆ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿರುವ ವಸತಿಗೃಹಗಳಿಗೆ ವಿದ್ಯುತ್ ಸೌಲಭ್ಯವಿಲ್ಲ ಹಾಗಾಗಿ ಸೀಮೆಣ್ಣೆ ದೀಪದಲ್ಲಿ ಯಾವುದೇ ಆಧುನಿಕ ಸೌಕರ್ಯವಿಲ್ಲದೆ ದಿನ ಕಳೆಯುವಂತಾಗಿದೆ. ಎಲ್ಲದಕ್ಕೂ ಕಾವೇರಿ ನದಿಯನ್ನು ದೋಣಿಯಲ್ಲಿ ದಾಟಿ ಹೋಗಬೇಕಾಗಿರುವುದರಿಂದ ಅನಾರೋಗ್ಯ ಅಥವಾ ಇನ್ನೇನಾದರು ಅವಘಡ ಸಂಭವಿಸಿದರೆ ದೇವರೇ ಗತಿ. ಬೇರೆ ಕಡೆಗಳಿಗೆ ಹೋಲಿಸಿದರೆ ದುಬಾರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳದ್ದು ಮಾತ್ರ ನಾಯಿಪಾಡಾಗಿದೆ.

ಆನೆ ಶಿಬಿರದಲ್ಲಿರುವ ಸಾಕಾನೆಗಳನ್ನು ನೋಡಿಕೊಳ್ಳಲು ಮಾವುತರು ಹಾಗೂ ಕಾವಾಡಿಗಳು ಸೇರಿದಂತೆ ಸುಮಾರು 40 ಮಂದಿಯಿದ್ದು, ಇವರಲ್ಲಿ 30 ಮಂದಿ ಖಾಯಂ ನೌಕರರಾಗಿದ್ದಾರೆ. ಉಳಿದಂತೆ 10 ಮಂದಿ ಹಂಗಾಮಿ ನೌಕರರು. ಇವರಿಗೆ ಯಾವುದೇ ವಸತಿ ಗೃಹಗಳಾಗಲೀ, ಶೌಚಾಲಯ ಇನ್ನಿತರ ಯಾವುದೇ ಸೌಲಭ್ಯವಿಲ್ಲ. ಮುರುಕಲು ಗುಡಿಸಲಲ್ಲಿಯೇ ದಿನಕಳೆಯುತ್ತಿದ್ದಾರೆ.

ನಾವು ಅನಾದಿಕಾಲದಿಂದಲೂ ಕಾಡು ಹಾಗೂ ಪ್ರಾಣಿಗಳೊಂದಿಗೆ ಬೆಳೆದು ಬಂದಿದ್ದೇವೆ. ಇಲ್ಲಿ ಬಿಟ್ಟು ಬೇರೆ ಕಡೆ ಬದುಕಲು ನಮ್ಮಿಂದ ಸಾಧ್ಯವಿಲ್ಲ. ನಾವಿದ್ದಲ್ಲಿಯೇ ಮೂಲಭೂತ ಸೌಕರ್ಯ ಕಲ್ಪಿಸಿಕೊಡಿ ಎನ್ನುವುದು ಮಾವುತರು ಸೇರಿದಂತೆ ಹಾಡಿಜನರ ಪ್ರಾರ್ಥನೆಯಾಗಿದೆ. ಆನೆ ಶಿಬಿರದಲ್ಲಿ ಬ್ರಿಟಿಷರ ಕಾಲದಲ್ಲಿ ಕಟ್ಟಿದ ಪ್ರವಾಸಿ ಮಂದಿರ ಇದ್ದರೂ ಅಲ್ಲಿ ವಿದ್ಯುತ್ ಸೌಲಭ್ಯವಿಲ್ಲದೆ, ಸೂಕ್ತ ನಿರ್ವಹಣೆಯಿಲ್ಲದೆ ಭೂತಬಂಗಲೆಯಂತಾಗಿದೆ.

ಶಾಲೆಬಿಟ್ಟು ಹಾಡಿ ಸೇರುವ ವಿದ್ಯಾರ್ಥಿಗಳು : ಸುಮಾರು 12,757 ಎಕರೆ ವಿಸ್ತೀರ್ಣ ಹೊಂದಿರುವ ದುಬಾರೆ ಅರಣ್ಯ ಪ್ರದೇಶದಲ್ಲಿ ತಲತಲಾಂತರದಿಂದ ಗಿರಿಜನರು ವಾಸಿಸುತ್ತಾ ಬಂದಿದ್ದಾರೆ. ಈಗ ಸುಮಾರು 86 ಕುಟುಂಬ ಅಲ್ಲಿ ವಾಸಿಸುತ್ತಿದೆ. ಕೆಲವರು ಹಲವು ವರ್ಷಗಳ ಹಿಂದೆ ಸರ್ಕಾರ ಕಟ್ಟಿದ ಶಿಥಿಲಾವಸ್ಥೆಯ ಮನೆಗಳಲ್ಲಿ ವಾಸವಾಗಿದ್ದರೆ, ಮತೆ ಕೆಲವರು ಇದರಲ್ಲಿದ್ದರೆ ಯಾವಾಗ ಬಿದ್ದು ಹೋಗುತ್ತದೆಯೋ ಎಂಬ ಭಯದಿಂದ ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ನದಿ ದಾಟಿ ಹೋಗಿ ವಿದ್ಯಾಭ್ಯಾಸ ಕಲಿಯಲು ಹಾಡಿ ಮಕ್ಕಳಿಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಅಲ್ಲಿ 5ನೇ ತರಗತಿವರೆಗೆ ಶಾಲೆಯನ್ನು ತೆರೆಯಲಾಗಿದ್ದು 39 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.

ಆದರೆ 5ನೇ ತರಗತಿ ಬಳಿಕ ಬೇರೆ ಕಡೆ ಹೋಗಬೇಕಾಗಿರುವುದರಿಂದ ಅಲ್ಲಿ ಓದಲಾಗದೆ ಮರಳಿ ಬಂದು ಅಪ್ಪ ಅಮ್ಮಂದಿರ ಜೊತೆಯಲ್ಲಿ ತೋಟ ಕೆಲಸಕ್ಕೆ ಹೋಗುತ್ತಾರೆ. ಇಲ್ಲಿನ ಶಾಲೆಗೆ ಬರುವ ಶಿಕ್ಷಕರು ನದಿ ದಾಟಿ ಬರಬೇಕು ಅದು ಸುಲಭದ ಕೆಲಸವಲ್ಲ. ಅಂಗನವಾಡಿ ಕೇಂದ್ರದಲ್ಲಿ 9 ಮಕ್ಕಳಿದ್ದು ಈ ಮಕ್ಕಳಿಗೆ ಆಹಾರ ಬೇಯಿಸಬೇಕಾದರೆ ಕಾಡಿನಿಂದ ಸೌದೆ ತರಬೇಕಾದ ಅನಿವಾರ್ಯತೆ ಇಲ್ಲಿನದ್ದಾಗಿದೆ.

ಒಟ್ಟಾರೆ ದುಬಾರೆ ಆನೆಶಿಬಿರವು ಹತ್ತು ಹಲವು ಸಮಸ್ಯೆಗಳಿಂದ ನರಳುತ್ತಿದ್ದು ಅಗತ್ಯ ಸೌಲಭ್ಯವನ್ನು ಕಲ್ಪಿಸಿಕೊಡುವ ಮೂಲಕ ಅಭಿವೃದ್ಧಿಯತ್ತ ಸಂಬಂಧಿಸಿದವರು ಗಮನಹರಿಸಬೇಕಾದ ಅಗತ್ಯವಿದೆ. ಅದು ಸಾಧ್ಯವಾಗುತ್ತದೆಯಾ ಎಂಬುವುದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ.

;
English summary
Though Dubare elephant camp in Madikeri is attracting tourists from all over the world, the caretakers and people staying the forest do not have basic amenities like water, power etc. Will the Karnataka govt look at this and provide necessary amenities?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X