ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗರು ಬಿಟ್ಟಿ ಬಿದ್ದಿಲ್ಲ ಅನ್ನುವುದು ನೆನಪಿರಲಿ!

By * ರಾಕೇಶ್ ಶೆಟ್ಟಿ, ಬೆಂಗಳೂರು
|
Google Oneindia Kannada News

Rakesh Shetty
ಹೊಟ್ಟೆ ಪಾಡಿಗೆ ಅಂತ ಹುಟ್ಟಿದ ಊರು ಬಿಟ್ಟು ನಮ್ಮ ಬೆಂಗಳೂರಿಗೆ ಬಂದು, ಇಲ್ಲಿನ ಅನ್ನ, ನೀರು ಕುಡಿದು "ಕನ್ನಡ ಕಲಿಯಿರಿ" ಅಂದರೆ ನಮ್ಮ ವಿರುದ್ಧವೇ ತಿರುಗಿ ಬಿದ್ದು ಕನ್ನಡ/ಬೆಂಗಳೂರಿನ ಬಗ್ಗೆ ದ್ವೇಷ ಕಾರುವುದು ಒಂದು ರೀತಿಯ ಸುಲಭದ ತುತ್ತಾಗಿದೆ. ನೀವು ಓದಿರಬಹುದು, ಮೊನ್ನೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ, "ಐಟಿ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಪ್ರವಾಹದಲ್ಲಿ, ಕರ್ನಾಟಕ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವವರು ಇನ್ನು ಮುಂದೆ ಕನ್ನಡ ಭಾಷೆ ಪ್ರಾಥಮಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಡ್ಡಾಯವಾಗಬೇಕು" ಅನ್ನುವ ಪ್ರಸ್ತಾವನೆಯೊಂದನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿತ್ತು.

ಹೊರನಾಡಿನಿಂದ ಬಂದು ಈ ನೆಲದಲ್ಲಿ ಬದುಕು ಕಟ್ಟಿಕೊಂಡಿರುವ ಕೆಲವರಲ್ಲಿ ಈ ನೆಲದ ಭಾಷೆ, ಸಂಸ್ಕೃತಿ, ಆಚಾರಗಳಿಗೆ ಬೆಲೆ ಕೊಡಬೇಕು ಅನ್ನುವ ಕಾಮನ್ ಸೆನ್ಸ್ ಇಲ್ಲ ಅನ್ನುವುದಕ್ಕಿಂತ, ಯಾವುದಕ್ಕೂ ಪ್ರತಿಕ್ರಿಯಿಸದ ಕನ್ನಡಿಗರ ಧೋರಣೆಯನ್ನೆ ಇಂತಹ ಜನಗಳು ನಮ್ಮ ದೌರ್ಬಲ್ಯ ಅಂದುಕೊಂಡಿದ್ದಾರೆ. ಇಲ್ಲದಿದ್ದರೆ ಫ಼ೇಸ್ಬುಕ್ಕಿನಲ್ಲಿ ರಾಬಿನ್ ಚುಗ್ ಅನ್ನುವ ಪರದೇಶಿ ಕನ್ನಡಿಗರಿಗೆ ಫ಼ಕ್ ಆಫ಼್ ಅನ್ನುತ್ತಿರಲಿಲ್ಲ ಅಲ್ಲವಾ? ಆತ ಕೆಲಸ ಮಾಡುವ ಕಂಪನಿಗೆ ಮಿಂಚೆ ಬರೆದು (ಭಾಷೆ ವಿಷಯ ಮುಟ್ಟಿಸುವಂತಿರಲಿ, ಬೈಗುಳ ದಯವಿಟ್ಟು ಬೇಡ) ಈ ಮಣ್ಣಿನ ಭಾಷೆಯ ಬಗ್ಗೆ ಗೌರವ ಇಲ್ಲದ ಇಂಥವರನ್ನ ನಿಮ್ಮ ಕಂಪೆನಿಯಲ್ಲಿ ಇಟ್ಟುಕೊಳ್ಳುವಿರಾ ಅಂತಲೇ ಕೇಳಬೇಕು. ಇಂತಹ ಹುಡುಗನನ್ನು ವಾಪಸ್ ಅವನ ಮನೆಗೆ ಕಳಿಸೋದು ನಮ್ಮ ಕರ್ತವ್ಯವಲ್ಲವೇ ಗೆಳೆಯರೇ?

ಫ಼ೇಸ್ಬುಕ್ಕಿನಲ್ಲಿ, ಮಿಂಚೆಗಳ ಮೂಲಕ ಮತ್ತೆ ಕರೆ ಮಾಡಿ ಗದರಿಸಿದ ಮೇಲೆ, ನಂದು ತಪ್ಪಾಯ್ತು ಕ್ಷಮಿಸಿಬಿಡಿ ಅನ್ನುತಿದ್ದಾನೆ ಈತ. [ಚುಗ್ ಬರೆದಿರುವ ಕೈಲಿಖಿತ ಕ್ಷಮಾಪಣಾ ಪತ್ರದ ಪ್ರತಿ ಇಲ್ಲಿದೆ, ಓದಿರಿ] ನಾವುಗಳು ಕೇಳದೆ ಸುಮ್ಮನಿದ್ದಿದ್ದರೆ ಆತನಿಗೆ ಜ್ಞಾನೋದಯವಾಗುತ್ತಿರಲಿಲ್ಲ. ಈಗ ಎಲ್ಲರೂ ದಬಾಯಿಸಿದ ಮೇಲೆ ಭಯಕ್ಕೆ ಕ್ಷಮೆ ಕೋರುತಿದ್ದಾನೆ ಹೊರತು ತಪ್ಪಿನ ಅರಿವಾಗಿಯಲ್ಲ. ಕಂಪನಿ ಕೂಡ ಇವ ಮಾಡಿದ ತಪ್ಪನ್ನು ಮನ್ನಿಸಿ ಎಂದು ಕೇಳುತ್ತಿದೆ. ಮನ್ನಿಸಬೇಕೆ? ಖಂಡಿತ ಕೂಡದು. ಇವನನ್ನು ಮನೆಗಟ್ಟುವವರೆಗೆ ನಾವು ಸುಮ್ಮನೆ ಕೂಡುವುದು ಬೇಡ. ಇವನ ಮೇಲಿನ ಕ್ರಮವೇ ಇಂಥವರಿಗೊಂದು ಪಾಠವಾಗಲಿ. ನಾವು ಕನ್ನಡಿಗರು ಯಾವಾಗಲೂ ವಿಶಾಲ ಹೃದಯಿಗಳಾಗುವುದು ಬೇಡ ಅಂತ ನನ್ನಿಸಿಕೆ.

ಪಾಠ ಕಲಿಯದ ಹೊರನಾಡಿಗರು...

ಇಷ್ಟಕ್ಕೂ, ಈ ರೀತಿ ಆಗುತ್ತಿರುವುದು ಇದೇ ಮೊದಲೇನಲ್ಲ. ಹಿಂದೊಮ್ಮೆ 'ಸ್ಯಾನ್ ಮಿತ್ರ" ಅನ್ನೋ ಕೊಲ್ಕತ್ತದವ ಅಮೆರಿಕನ್ ಮೂಲದ ಕಂಪೆನಿಯಿಂದ ಇಂಥದ್ದೆ ಕೆಲ್ಸಕ್ಕೆ ಕೈ ಹಾಕಿ, ಬೆಂಗಳೂರಿಂದ ಹೊರದಬ್ಬಿಸಿಕೊಂಡಿದ್ದ. ಆಮೇಲೆ ಸಾಸ್ಕೇನ್ ಕಂಪೆನಿಯಲ್ಲಿ ಕನ್ನಡದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ ಉದ್ಯೋಗಿಯಿಂದಾಗಿ ಆ ಕಂಪೆನಿ ಕನ್ನಡ ಪರ ಹೋರಾಟಗಾರರ ಆಕ್ರೋಶಕ್ಕೆ ತುತ್ತಾಗಿತ್ತು. ಕಳೆದ ವರ್ಷ ಐಟಿಸಿ ಕಂಪೆನಿಯಲ್ಲಿ ಕೆಲಸ ಮಾಡುತಿದ್ದ ಪ್ರಶಾಂತ್ ಚುಬೇಯ್ ಕೊಬ್ಬು ಜಾಸ್ತಿಯಾಗಿ My Love for South Indians ಅನ್ನೋ ಥರ್ಡ್ ರೇಟ್ ಲೇಖನ ಬರೆದಿದ್ದು ಅಲ್ಲದೆ, ಪುಣ್ಯಾತ್ಮ ಅದನ್ನ ಕಂಪೆನಿಯ ಮಿಂಚೆ ವಿಳಾಸದಲ್ಲಿ ತಿರುಪತಿ ಪ್ರಸಾದದಂತೆ ಹಂಚಿ ಸಿಕ್ಕಿ ಬೀಳಬಾರದಿದ್ದವರ ಕೈಗೆ ಸಿಕ್ಕಿ ಬಿದ್ದು, ಮಾಡಿದ ತಪ್ಪಿಗೆ ಕೆಲಸ ಕಳೆದುಕೊಂಡ.

ತಿರುಗಿ ಬಿದ್ದಿದ್ದ ಕನ್ನಡ ರಕ್ಷಣಾ ವೇದಿಕೆ...

ಕನ್ನಡಿಗರು ಗುಗ್ಗುಗಳು , ಪೆದ್ದುಮುಂಡೆಮಕ್ಕಳು ಎಂಬ ಅರ್ಥ ಬರುವಂತಹ ಒಂದು ಪದ್ಯವನ್ನು ಸ್ಯಾಸ್ಕೆನ್ 'ಕವಿ'ಯೊಬ್ಬ ಬರೆದಿದ್ದಾಗ ನಾರಾಯಣ ಗೌಡ ಅವರ ನೇತೃತ್ವದಲ್ಲಿ ಕನ್ನಡ ರಕ್ಷಣಾ ವೇದಿಕೆ ಹೋರಾಟಕ್ಕಿಳಿದು, ಸ್ಯಾಸ್ಕೆನ್ ಕಚೇರಿಯನ್ನು ಧ್ವಂಸ ಮಾಡಿತ್ತು. ಲೀ ಎಂಬಾತನನ್ನು ಕೆಲಸದಿಂದ ಕಿತ್ತುಹಾಕುವವರೆಗೆ ಹೋರಾಟ ನಿಲ್ಲಿಸಿದ್ದಿಲ್ಲ. ಇಂದು ಕನ್ನಡ ರಕ್ಷಣಾ ವೇದಿಕೆಯ ಹೋರಾಟಗಾರರಿಗೆ ಅದೇನಾಗಿದೆಯೋ?

ಕನ್ನಡ ದ್ವೇಷಿ ಆಂಗ್ಲ ಪತ್ರಿಕೆಗಳು...
ಇವರೆಲ್ಲ ಸಾಲದು ಅಂತ ಮತ್ತೊಂದೆಡೆ ಇಂಗ್ಲಿಷ್ ಪತ್ರಿಕೆಗಳ ಕನ್ನಡ ವಿರೋಧಿ ನೀತಿ. ಯಾವಾಗಲೋ ಒಂದ್ ಸರಿ ಬಂದ್ರೆ ಎಲ್ಲೋ ಅಪ್ಪಿ ತಪ್ಪಿ ಹೀಗ್ ಬರ್ದಿರ್ಬೇಕು ಅನ್ಕೊಬಹುದಿತ್ತೇನೋ. ಆದ್ರೆ ಒಬ್ಬರಾದ ಮೇಲೆ ಒಬ್ರು ಕನ್ನಡಿಗರ ಹಕ್ಕು ಪ್ರತಿಪಾದನೆಯನ್ನು ಮಹಾಪರಾಧವೇನೋ ಎಂಬಂತೆ ಚಿತ್ರಿಸಲು ಹೊರಟಿವೆ. ಬೆಂಗಳೂರು ಮಹಾನಾಗರ ಪಾಲಿಕೆಯ ಚುನಾವಣೆಯ ಸಮಯದಲ್ಲಿ, ಮತ ಯಂತ್ರದಲ್ಲಿ 'ಕನ್ನಡ"ಬಳಸಿದ್ದನ್ನು ಆಕ್ಷೇಪಿಸಿದ ಲೋಕಸತ್ತಾ ಪಕ್ಷದ ಕೆಲವರ ಮಾತುಗಳನ್ನು ಪ್ರಕಟಿಸಿ ಅದಕ್ಕೊಂದು ಇಂತಹ ಕಿತ್ತೋಗಿರೋ ಶೀರ್ಷಿಕೆ ಕೊಟ್ಟಿದ್ದು ಯಾಕೆ? ಯಾರ ಮಧ್ಯೆ ಬೆಂಕಿ ಹಚ್ಚೋಕೆ ಹೊರಟಿದ್ದಾರೆ ಇವ್ರು? ಒಂದು ಊರಿಗೆ ಬಂದ ಮೇಲೆ ಅಲ್ಲಿನ ಜನರ ರೀತಿ, ರಿವಾಜುಗಳನ್ನ ಕಲಿತು ಅವರೊಂದಿಗೆ ಬೆರೆತು ಬದುಕಬೇಕಾಗಿರುವುದು ಹೊರಗಿನಿಂದ ಬಂದವರ ಕರ್ತವ್ಯ. ಅವರಿಗೋಸ್ಕರ ಈ ನೆಲೆದಲ್ಲೇ ಹುಟ್ಟಿ ಬೆಳೆದು ಬಂದವರು ನಮ್ಮ ಭಾಷೆನ ಬಿಟ್ಟು ಇಂಗ್ಲಿಷ್ ಕಲಿಬೇಕಾ? ನಮ್ ಕರ್ಮಕ್ಕೆ ಕೆಲ ಕನ್ನಡಿಗರು ಮನೆಗೆ ತರಿಸೋದು ಆಂಗ್ಲ ಪತ್ರಿಕೆಯನ್ನೇ!

ಇನ್ನೊಂದು ಕಡೆ ಜಾಹೀರಾತು ಫಲಕಗಳಲ್ಲಿ ದುರ್ಬಿನು ಹಾಕಿದರೂ ಕಾಣದ ಕನ್ನಡ. ಹಾಗೆ ಮಾಲ್, ರೆಸ್ಟೋರೆಂಟ್ಗಳಲ್ಲಿ ಕನ್ನಡ ವಾತಾವರಣಕ್ಕಾಗಿ ಬೇಡಿಕೊಳ್ಳುವ ದೈನೇಸಿ ಸ್ಥಿತಿಗೆ ಬಂದು ನಿಂತಿದ್ದೇವೆ. ನಮ್ಮ ನೆಲದಲ್ಲೇ ಪರದೇಶಿಗಳಂತೆ! ಒಂದೆಡೆ ಕಂಪೆನಿಗಳಿಗಾಗಿ ಭೂಮಿ ಕೊಟ್ಟ ಇಲ್ಲಿನ ಜನರ ಮಕ್ಕಳು ಅದೇ ಭೂಮಿಯಿಂದೇಳುವ ಕಂಪೆನಿ/ಮಾಲ್/ರೆಸ್ಟೋರೆಂಟ್ಗಳಲ್ಲಿ 'ಸಿ", 'ಡಿ" ದರ್ಜೆಯ ನೌಕರರಾದರೆ, ಅವರ ಮೇಲೆ ಬಂದು ಕೂರುವ ಅನ್ಯಭಾಷಿಕರು ಅವರ ತಲೆಯ ಮೇಲೆ ಕೂರುತ್ತಾರೆ. ಕಡೆಗೆ ಅಲ್ಲಿ ಅವರ ದರ್ಬಾರು ಶುರುವಾಗುತ್ತದೆ. ಹಾಗಂತ ನಾನು ಎಲ್ಲ ಅನ್ಯಭಾಷಿಕರನ್ನುದ್ದೇಶಿಸಿ ಹೀಗೆ ಬರೆಯುತ್ತಿಲ್ಲ. ಅಲ್ಲಿಂದ ಇಲ್ಲಿ ಬಂದು ನಮ್ಮ ನೆಲ, ಭಾಷೆಯ ಬಗ್ಗೆ ತುಚ್ಚವಾಗಿ ಮಾತನಾಡುವ ಕಿಡಿಗೇಡಿಗಳಿಗೆ ಮಾತ್ರ.

ಇನ್ಮುಂದೆ ಇಂತಹ ಕಿಡಿಗೇಡಿ ಕೃತ್ಯವನ್ನು 'ಕನ್ನಡ ದ್ವೇಷಿಗಳ ವಿರುದ್ಧ ಕರ್ನಾಟಕ" ಗುಂಪಿನಲ್ಲಿ ಹಂಚಿಕೊಳ್ಳೋಣ. ಮತ್ತು ಅಂತವರಿಗೆ ಶಾಂತಿ ಮಾರ್ಗದಲ್ಲಿಯೇ ಬುದ್ದಿ ಕಲಿಸೋಣ. ಬನ್ನಿ, ಇಂತಹ ಅನಿಷ್ಟಗಳ ವಿರುದ್ಧ ಒಂದಾಗೋಣ. ಕನ್ನಡಿಗರು ಬಿಟ್ಟಿ ಬಿದ್ದಿಲ್ಲ ಅನ್ನುವುದು ನೆನಪಿಸುತ್ತಲೇ, ನಮ್ಮ ನಿರ್ಲಿಪ್ತತೆ ನಮ್ಮ ದೌರ್ಬಲ್ಯವಲ್ಲ ಅಂತ ಇಂತ ಕನ್ನಡ ದ್ವೇಷಿಗಳಿಗೆ ತೋರಿಸೋಣ.

English summary
Kannada language users in Karnataka are deeply upset with Robin Chug, who made derogatory remarks on Kannada. The guy wrote dirty words on facebook to criticize KDA chairman Mukhya Mantri Chandrus recommendation to Government to make the Knowledge of basic Kannada compulsory for non-Kannadiga living in Karnataka. Rakesh Shetty beams torch light on the episode.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X