ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಬೆಳಗ್ಗೆ 10 ರಿಂದ ರಾತ್ರಿ 10

By * ಇ.ಆರ್. ರಾಮಚಂದ್ರನ್, ಮೈಸೂರು
|
Google Oneindia Kannada News

Benagluru nostalgia journey
ಸುಮಾರು 10 ಗಂಟೆ ಹೊತ್ತಿಗೆ ಹೋಲ್ ಸೇಲ್, ರೀಟೈಲ್ ಮತ್ತು ಬೆಂಕಿ ಪೊಟ್ಟಣದಷ್ಟು ಇರುವ ಅಂಗಡಿ ಮಾಲೀಕರನ್ನು ಸೂಜಿಗಲ್ಲಿಂತಿರುವ ಸಿಟಿ ಮಾರ್ಕೆಟ್ ಎಳೆಯುವುದು. ಆಲ್ಲಿ ಹೊತ್ತು ಹೊತ್ತಾಗಿ ಬೆಳೆದುಕೊಂಡಿರುವ ಪೇಟೆಗಳಿಗೆ ಹೋಗಿ ವ್ಯಾಪಾರಿಗಳು ಅವರವರ ಕೆಲಸದಲ್ಲಿ ತೊಡಗುವರು.

ಚಿಕ್ಕಪೇಟೆ, ಮಾಮೂಲ್ ಪೇಟೆ, ಅಕ್ಕಿ ಪೇಟೆ, ಬಳೇಪೇಟೆ, ತರುಗ ಪೇಟೆ, ನ್ಯೂ ತರುಗ ಪೇಟೆ... ಮತ್ತು ಅದರೊಳಗೆ ಇರುವ ಗಲ್ಲಿಗಳಲ್ಲಿ ಇರುವ ಅಂಗಡಿಗಳು!

ಬಿ.ವಿ.ಕೆ. ಐಯಂಗಾರ್ ರಸ್ತೆಯಲ್ಲಿ ಎಲ್ಲ ಹಾರ್ಡವೇರ್ ಅಂಗಡಿಗಳು ಇದ್ದವು. ಆಗ ಸಾಫ್ಟ್ ವೇರ್ ಎಂಜಿನಿಯರ‍್ಗಳು ಇನ್ನೂ ಹುಟ್ಟಿರಲಿಲ್ಲ; ಯಾಕೆ....... ಸಾಫ್ಟ್ ವೇರ್ ಅನ್ನೊ ಪದವೂ...... ಇಲ್ಲಿ ಹುಟ್ಟಿರಲಿಲ್ಲ !!

ಮನೆ ಕೆಲಸವಾದ ಮೇಲೆ ಹೆಂಗಸರು ಚಿಕ್ಕಪೇಟೆಗೆ ರುಕ್ಮಿಣಿ ಹಾಲ್, ಸೀತಾಲಕ್ಷ್ಮಿ ಹಾಲ್ ಗೆ ಹೋಗಿ ಸೀರೆ ವ್ಯಾಪಾರ ಮಾಡಿ ಬರುವರು ಅವರ ಗಂಡಂದಿರು ಮೂಗಿಗೆ ದಾರ ಹಾಕಿಕೊಂಡು ದುಡಿಯುವಾಗ!

ಬೆಂಗಳೂರಿನ ವಾಣಿಜ್ಯ ಅಭಿವೃದ್ಧಿಗೆ ಈ ಎರಡು ಚದರ ಮೈಲಿಯಲ್ಲಿ ಆಗುವ ದಿನ ನಿತ್ಯದ ವ್ಯಾಪರವೇ ಕಾರಣವಾಗಿತ್ತು ಅಂದರೆ ಅತಿಶಯೋಕ್ತಿ ಅಲ್ಲ ಅಂತ ಅನ್ನಿಸುತ್ತೆ. ಇವರುಗಳು ಬೆಳಗ್ಗೆಯಿಂದ ರಾತ್ರಿ 9 ಗಂಟೆಯ ತನಕ ದುಡಿಯುತ್ತಿದ್ದರು......
***
ಮಧ್ಯಾಹ್ನ ಉಡುಪಿ ಕೃಷ್ಣಭವನಿನಲ್ಲಿ ಮಸಾಲೆ ದೋಸೆಯೋ, ಮಲಬಾರ್ ಲಾಡ್ಜಿನಲ್ಲಿ ಪೂರಿ ಪಲ್ಯವೋ ತಿಂದು ಮತ್ತೆ ಕೆಲಸ ಶುರು ಮಾಡುತ್ತಿದ್ದರು. ಬೆಂಕಿಪೊಟ್ಟಣದಷ್ಟಿರುವ ಅಂಗಡಿಗಳಲ್ಲಿ, ಬಾಗಿಲು ಅರ್ಧ ಹಾಕಿ, ನ್ಯೂಸ್ ಪೇಪರನ್ನು
ಹರಡಿ, ಮನೆಯಿಂದ ತಂದ ಬುತ್ತಿಯನ್ನು ಬಿಚ್ಚಿದರೆ ಅರ್ಥ, "ಪ್ರೊಪ್ರೈಟರ್ ಅವರ ಲಂಚ್ ಟೈಮ್"!

ಕೆಲವರು ಇಡ್ಲಿಯೋ, ಹುಳಿಯವಲಕ್ಕಿಯೋ ತಂದಿದ್ದರೆ, ಮಿಕ್ಕವರು ಸಮೋಸ, ಕಚೋರಿ, ಖಾಖ್ರ ಮುಂತಾದ ರಾಜಾಸ್ಥಾನಿಯ ತಿನಿಸುಗಳನ್ನು ತರುವರು..
**

ಬೆಂಗಳೂರು ಗತಕಾಲ ಜೀವನಶೈಲಿ ಮಾಲಿಕೆ ಇತರೆ ಲೇಖನಗಳು:

*ಹಳೆಕಾಲದ ಕಚೇರಿ, ಡಾಕ್ಟರು, ಪೊಲೀಸಪ್ಪ</a><br>*<a href=ಕಂಪ್ಯೂಟರ್ ಬರೋಕ್ಕೆ ಮುಂಚೆ ಬೆಂಗ್ಳೂರ್ ಜೀವನ" title="*ಹಳೆಕಾಲದ ಕಚೇರಿ, ಡಾಕ್ಟರು, ಪೊಲೀಸಪ್ಪ
*ಕಂಪ್ಯೂಟರ್ ಬರೋಕ್ಕೆ ಮುಂಚೆ ಬೆಂಗ್ಳೂರ್ ಜೀವನ" />*ಹಳೆಕಾಲದ ಕಚೇರಿ, ಡಾಕ್ಟರು, ಪೊಲೀಸಪ್ಪ
*ಕಂಪ್ಯೂಟರ್ ಬರೋಕ್ಕೆ ಮುಂಚೆ ಬೆಂಗ್ಳೂರ್ ಜೀವನ

ಏದುಸುರು ಬಿಡುತ್ತಾ ಓಡಿ ಬಂದ ಶಾಲಾ ಮಕ್ಕಳು ಸ್ಕೂಲಿನೊಳಕ್ಕೆ ಹೋಗಿ ಪ್ರಾರ್ಥನೆಗೆ ನಿಂತಾಗ, ರಸ್ತೆಯೆಲ್ಲಾ ಸುಮಾರು ಬಿಕೋ ಅನ್ನುವುದು.

ಎರಡು ಸರ್ತಿ ಟಪಾಲ್ ತಲುಪಿಸುವರರು ನಡೆದುಕೊಂಡು ಬಂದರೆ, ಎಕ್ಸ್ಪ್ರೆಸ್ ಲೆಟರ್, ಟೆಲಿಗ್ರಾಮ್ ಕೊಡುವವರು ಕೆಂಪು ಸೈಕಲ್ನಲ್ಲಿ ಬರೋವ್ರು. ಆ ಕೆಂಪು ಸೈಕಲ್ ಮನೆ ಹತ್ತಿರ ಬಂದರೆ ಅದನ್ನು ನೋಡಿಯೇ ಬಹಳ ಜನ ಬೆಚ್ಚಿ ಬೀಳುತ್ತಿದ್ದರು "ಏನೋ ಕೆಟ್ಟ ಸಮಾಚಾರ ಕಾದಿದೆ" ಅಂತ.

ಮಧ್ಯೆ ಮಧ್ಯೆ "ಕತ್ರೀ ಚಾಕೂ ಸಾಣೇ ಹಿಡಿಯೋದೂ......., "ನಿಮ್ಮ ಚೊಂಬು, ಪಾತ್ರೆಗಳಿಗೆ "ಕಲಾಯ್" ಹಾಕೋದೂ...." "ಹಳೇಬಟ್ಟೆಗೆ, ಕಲಾಪತ್ತಿನ ಸೀರೆಗೆ ಸ್ಟೀಲ್ ಪಾತ್ರೆ ಅಮ್ಮಾವ್ರೇ........"ಬಾವೀಲಿ ಸಾಮಾನು ಬಿದ್ದಿದ್ರೆ ಎತ್ಕೊಡ್ತಿನಮ್ಮ......"ಹಾಸ್ಗೆಗೆ, ದಿಂಬ್ಗೆ ಹತ್ತಿ ಹಾಕ್ಕೊಡ್ತೀನಮ್ಮ..... ಅಂತ ಕೂಗು ಬಂದ್ರೆ ಅ ಕೂಗು ಮನೆಯ ಹೆಂಗಸರಿಗೆ ಮಾತ್ರ ಎಂದರ್ಥ!

ಒಂದರ್ಧ ಗಂಟೆ, ಕಳ್ಳ- ಪೋಲೀಸ್, ಬೆಕ್ಕು- ಇಲಿಯ ನಾಟಕವನ್ನಾಡಿ, ಮನೆಯಲ್ಲಿರುವ ಎಲ್ಲಾ ಹಳೇಬಟ್ಟೆಯನ್ನು ಅವನ ಮುಂದೆ ಗುಡ್ಡೆಹಾಕಿ ಬ್ರಹ್ಮಾಸ್ತ್ರವಾದ ಮಾವಿನಕಾಯಿಬಣ್ಣದ ಗೋಲ್ಡ್ ಬಾರ್ಡರ್‌ದು ಜರತಾರಿ ಸೀರೆ ಹಾಕಿದ ಮೇಲೆ, ಕೊನೆಗೂ ನಾಲ್ಕು -ಪಾತ್ರೆಯ ಉದ್ದಕ್ಕಿರುವ ಎವರ್ ಸಿಲ್ವರ್ ಟಿಫನ್ ಕ್ಯಾರಿಯರ್ ಗಿಟ್ಟಿಸಿದ್ದಾಯಿತು ! ಅದನ್ನು ಕಣ್ಣಿಗೆ ಕಾಣುವ ಹಾಗೆ ಹಾಲ್ನಲ್ಲೇ ಇಟ್ಟು, ಸಂಜೆ ಗಂಡ ಒಳಗೆ ಬರುತ್ತಲೇ ,"ಇದೆನೇ ಇದು!" ಅಂದು ಕೂಗಿದಾಗ, ಅಡುಗೆ ಮನೆಯಿಂದ, ಬಿಸಿ ಬಿಸಿ ಕಾಫಿಯ ಜೊತೆ ಶಂಕರ್ ಪೋಳಿ, ಖಾರದ ಅವಲಕ್ಕಿ ಕೊಟ್ಟು, ಅವಳು ಮಾಡಿದ ಪ್ರಚಂಡ "ಸೇಲ್" ಬಗ್ಗೆ ವ್ಯಾಖ್ಯಾನ ಶುರು!

ಗಂಡನಿಗೆ ಗೊತ್ತು.. ಇವಳಿಗೆ ಮಕಮಲ್ ಟೋಪಿಹಾಕಿ ಹೋಗಿದಾನೆ ಅಂತ.... ಆದ್ರೂ ಗೃಹ ಶಾಂತಿಗೆ ಧಕ್ಕೆ ಬರಬಾರದಲ್ಲಾ...! ಸ್ವಲ್ಪ ಹೊತ್ತು ಹೊಗಳು ಭಟ್ಟನಾಗಿ ಅವಳ ಚಾತುರ್ಯಕ್ಕೆ ತಲೆ ತೂಗುವನು! ಇಲ್ದಿದ್ರೆ ಕಾಫಿಯಾದ ಮೇಲೆ "ಸ್ವೀಟ್" ಸಿಗೊಲ್ಲವಲ್ಲಾ....!

ಮಧ್ಯಾಹ್ನದ ವ್ಯಾಪಾರ:ಸುಮಾರು ಮಟಮಟ ಮಧ್ಯಾಹ್ನ " ಬಳೇ ನಮ್ಮಾ ಬಳೇ.... ಅಂತ ಕೂಗು ಬಂತೂಂದ್ರೆ "ವರಮಹಾಲಕ್ಷ್ಮಿ" ಹಬ್ಬ ಬಂತೂ ಅಂತ.. ಆವಾಗಿನಿಂದ, ಪ್ರತಿಹಬ್ಬಕ್ಕೆ ಮುಂಚೆ ಕಾಣಿಸಿಕೊಳ್ಳುವನು ಬಳೆಗಾರ.. ಮನೆಯಲ್ಲಿ ಮದುವೆ, ಮುಂಜಿ ಅಂದ್ರೆ ಅವನು ಹಾಜರ್!

ಇದಾದ ಮೇಲೆ ಎಲ್ಲರ ಮನೆಯಲ್ಲಿ ಊಟ. ಮಧ್ಯಾಹ್ನ ಊರಿಗೇ ಜೊಂಪು ಬಂದಹಾಗೆ ಸ್ವಲ್ಪ ಹೊತ್ತು ಎಲ್ಲೆಲ್ಲೂ ನಿಶಬ್ದ.

ಸ್ಮಶಾನ ಮೌನ.
***
ಮಧ್ಯಾಹ್ನ ಮೂರು ಗಂಟೆಯಾದರೆ ಮತ್ತೆ ಸ್ವಲ್ಪ ಸ್ವಲ್ಪವಾಗಿ ಊರಿಗೆ ಜೀವ ಬರುವುದಕ್ಕೆ ಶುರು....

ಅಲ್ಲಲ್ಲಿ ಕೆಂಪು, ನೀಲಿ ಬಸ್ಸುಗಳು ಕಾಣಲು ಶುರುವಾಗಿ ನಾಲ್ಕು ಗಂಟೆ ಹೊತ್ತಿಗೆ ಪ್ರತಿ ರಸ್ತೆಯಲ್ಲಿ ಮತಾಪಿನಂತ ಬಣ್ಣ ಬಣ್ಣದ ಬಸ್ಸುಗಳಿಂದ ಇಳಿಯುತ್ತಿದ್ದರು ಬೆಂಗಳೂರಿನ ಟೆಕ್ನಿಕಲ್ ಬ್ರೈನ್ಸ್!

ಸೋತು ಹೋದ ಕಾಲುಗಳು ಅವರನ್ನು ಮನೆಗೆ ಎಳೆದು ತಂದು ಹಾಕುವಷ್ಟರಲ್ಲಿ, ಬಿಸಿ ಕಾಫಿ ಜೊತೆಗೆ ಏನಾದರು ಕುರುಕುಲು ತಿನ್ನಕ್ಕೆ ಇದ್ರೆ ಸರಿ! ಇಲ್ದಿದ್ರೆ ಮೂರನೇ ಮಹಾಯುದ್ದ..... ಆ ಮನೆಯಿಂದಲೇ ಶುರುವಾಯ್ತು ಅಂತ ಮುಂದೆ ಜನ ಬೆಟ್ಟು ತೋರಿಸಿ ಹೇಳುವರು, ಜೋಕೆ!

ಬಸವನಗುಡಿ, ಮಲ್ಲೇಶ್ವರದಲ್ಲಿರುವ ಅಂಗಡಿಯವರು ಮಧ್ಯಾಹ್ನ ಒಂದು ಸಣ್ಣ ನಿದ್ದೆ ಹೊಡೆದು, ಕಾಫಿ ಜೊತೆ ಮೆಂತ್ಯದ ದೋಸೆತಿಂದು, 4 ಗಂಟೆಗೆ ಅಂಗಡಿ ತೆಗೆಯುವರು..ರಾತ್ರಿ 9 ಘಂಟೆಯ ತನಕ ವ್ಯಾಪಾರ ಮಾಡಿ ಬಾಗಿಲು ಮುಚ್ಚೋಹತ್ತಿಗೆ, ಊಟ ಮಾಡಿ ಸಣ್ಣ ವಾಕ್ ಎಂದು ಬರುವರಿಗೆ ಕಲ್ಕತ್ತಾ, ಬನಾರಸ್ ಬೀಡಾ ಕಟ್ಟಿಕೊಟ್ಟ ಮೇಲೆ ಬಾಗಿಲು.

ಫ್ಯಾಕ್ಟರಿಯಿಂದ ಬಂದವರು, ಕ್ರಿಕೆಟ್ ಅಥವಾ ಹಾಕಿ ಪ್ರಾಕ್ಟಿಸ್‌ಗೆ ಸೈಕಲ್ನಲ್ಲಿ ಫ್ರೆಂಡ್‌ನು "ಡಬಲ್ ರೈಡ್" ಕೂಡಿಸಿಕೊಂಡು ಹೋಗುವರು.

ಮಿಕ್ಕವರು, ಕೌಬಾಯ್ ಕುದುರೆ ನಡೆಸಿಕೊಂಡುಹೋಗುವ ಹಾಗೆ ಸೈಕಲ್ನ ನಡೆಸಿಕೊಂಡೇ ವಾಕಿಂಗ್ ಹೋಗಿ, ನಿತ್ಯದ ಅಭ್ಯಾಸದಂತೆ 2-ಬೈ-3 ಕಾಫಿ ಕುಡಿದೇ ಮನೆಗೆ ತೆರಳುವರು.

ಅವರು ಮನೆಗೆ ಬರುವಷ್ಟರಲ್ಲಿ ರೇಡಿಯೋದಿಂದ ; "ಇದು ಆಕಾಶವಾಣಿ, ವಾರ್ತೆಗಳು, ಓದುತ್ತಿರುವರು ರಾಮಕೃಷ್ಣ"ಎಂದು ಕೇಳಿ ಬರುವುದು.

***
ಕಾಲೇಜಿನ ಹುಡುಗರುದು ಅವರದೇ ಒಂದು ಅಭ್ಯಾಸವಿತ್ತು. ಆಗ ಡ್ರಗ್ಸ್ ಅಂದರೆ ಅರ್ಥ ಬರೀ ಔಷಧ ಅಷ್ಟೆ! ಹುಡುಗರು ರಾತ್ರಿ ಊಟವಾದ ಮೇಲೆ ಹರ್ಷಸ್ಟೋರ್ಸ್ ಇಲ್ಲ ಗಣೇಶ ಸ್ಟೋರ್ಸ್ ಗೆ ಹೋಗಿ ಬೈ ಟು ಬಾದಾಮಿ ಹಾಲು ಅವರ ಫ್ರೆಂಡ್ಸ್ ಜೊತೆಯಲ್ಲಿ ಕುಡಿದು ಬರುತ್ತಲಿದ್ದರು! ಗರ್ಲ ಫ್ರೆಂಡ್ಸ್ ಕಾಲ ಇನ್ನೂ ಬಂದಿರಲಿಲ್ಲ! ಬಾಯ್ ಫ್ರೆಂಡ್ ಅಂದ್ರೆ ಬರೀ ಬಾಯ್ ಅಷ್ಟೆ, ಬೇರಾವ ಅರ್ಥವೂ ಇರಲಿಲ್ಲ ಆಗ!

ಪೇಟೆಗಳಿಂದ ಅಂಗಡಿಯನ್ನು ಮುಚ್ಚಿ ಬರುವಷ್ಟರಲ್ಲಿ, ಮಕ್ಕಳು ಮಲಗುವ ಸಮಯ. ಮೈಸೂರ್ ಪಾಕೋ ಅಥವಾ ಝಾಂಗ್ರಿಯನ್ನು ತಿನ್ನಿಸಿಯೇ ಮಲಗಿಸುವರು.

ಕೊನೆಗೆ 9 ಗಂಟೆಗೆ, ಮೆಲ್ವೆಲ್ ಡಿ ಮೆಲೋ, ಇಲ್ಲ ರೋಷನ್ ಮೆನನ್ ಅಥವಾ ಚಕ್ರಪಾಣಿ ಇಂಗ್ಲಿಷ್ ನ್ಯೂಸ್ ಓದಲು ಶುರು ಮಾಡುವ ಸಮಯದಲ್ಲಿ, ಸೈಕಲ್ನಲ್ಲಿ ಕೆರೊಸಿನ್ ಲ್ಯಾಂಪ್ ಸಿಕ್ಕಿಸಿಕೊಂಡು , "ತಾಟೀ ನುಂಗು ! ನುಂಗು! "ಎಂದು ಕೂಗುತ್ತಾ ಹೋಗುವನು ಬೆಂಗಳೂರಿನ ಕೊನೆಯ ವ್ಯಾಪಾರಿ.

ಇದಾದ ಮೇಲೆ ಎಂದಿನಂತೆ ಬೆಂಗಳೂರನ್ನು ತನ್ನ ವಶಕ್ಕೆ ತೆಗೆದು ಕೊಳ್ಳವಳು, ನಿದ್ರಾದೇವಿ.

English summary
Bangalore Nostalgia journey: Here is glimpse of lifestyle of old Bangaloreans in the morning local businessmen shop keepers in Chickpet, Akkipet, new Tharagupete,then office work, evening walk, college students leisure, house wives expectations, bargaining business were common scene.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X