ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳೆಕಾಲದ ಕಚೇರಿ, ಡಾಕ್ಟರು, ಪೊಲೀಸಪ್ಪ

By * ಇ ಆರ್ ರಾಮಚಂದ್ರನ್, ಮೈಸೂರು
|
Google Oneindia Kannada News

Old Bangalore Nostalgia
ಸುಮಾರು ಕಾಲು ಭಾಗದ ಬೆಂಗಳೂರು ಈ ತರಹ ಖಾಲಿಯಾದ ಮೇಲೆ, ಮತ್ತೆ ರಸ್ತೆಗಳು ಬಿಕೋ. ಇನ್ನೂ ಮಲಗಿರುವವರು ಏಳಬೇಕೆ ಅಂತ ಯೋಚಿಸಿರುವಷ್ಟರಲ್ಲಿ, ಬೆಂಗಳೂರಿನ ಬೇರೆ ಬೇರೆ ಕಸುಬಿನವರು ರಸ್ತೆಗೆ ಇಳಿಯುವರು.

ಬುಡುಬುಡುಕೆ ದಾಸಯ್ಯನು, ನಿಮ್ಮ ಹಾಸಿಗೆ ಪಕ್ಕದಲ್ಲೇ ಬಂದು ಕಿವಿಯಲ್ಲಿ ಕೊರೆದಂತೆ, ಕಣಿಹೇಳುವನು! ಒಂದು ಕಡೆ ಅವನ ಬುಡುಬುಡುಕೆ, ಮತ್ತೊಂದು ಕಡೆ ಅವನ ಕಣಿ - ನಿದ್ರೆಯನ್ನು ಅಟ್ಟಿಸಿಕೊಂಡು ಹೋಗುವುದು

ಬುಡುಬುಡುಕೆಯವರು ಕಣಿಹೇಳುವುದನ್ನು ಹಾಸ್ಯ ಚಕ್ರವರ್ತಿ ಎಂದು ಕರೆಯಲು ಯೋಗ್ಯರಾದ ನಮ್ಮ ಮೈಸೂರಿನ ಪ್ರೊಫೆಸರ್. ಕೃಷ್ಣೇಗೌಡರಿಂದಲೇ ಕೇಳಬೇಕು; ಒಂದೇ ಉಸುರಿನಲ್ಲಿ ಮನುಷ್ಯನಿಗೆ ಇಷ್ಟೊಂದು ಮಾತನಾಡೋದಕ್ಕೆ ಸಾಧ್ಯವಾ ಅಂತ ಆಶ್ಚರ್ಯವಾಗುತ್ತೆ! ದಾಸಯ್ಯಗಳು ಇವರ ಹತ್ತಿರ "ಟ್ಯೂಷನ್"ಗೇನದರೂ ಹೋಗುತ್ತಿದ್ದರೋ ಅಂತ ಸಂದೇಹ ಬರುತ್ತೆ..

ಮಾರ್ಗಶಿರ ಮಾಸದಲ್ಲಿ ಹಸುವಿನ ಜೊತೆಯಲ್ಲಿ ವಾಲಗದವನು ಮನೆ ಮನೆಗೂ ಊದುತ್ತಾ ಬರುವನು, ದಕ್ಷಿಣೆಗೆ. ದಾಸಯ್ಯನ ಹಿಂದೆಯೇ ಬರುವರು ಹಳ್ಳಿಂಯಿಂದ ಬರುವ ಹೆಂಗಸರು. "ಸೊಪ್ಪು ಕಣಮ್ಮ.... ಸೊಪ್ಪೂ...".ಅಂತ ಕೂಗು,ಜೊತೆಯಾಗಿ ಕೇಳಿಬರುವುದು "ಮೊಸರು ಕಣಮ್ಮ.... ಗಟ್ಟಿ ಮೊಸರೂ......." ಇದನ್ನು ಮಾರುವವರ ವಿಶೇಷ ವೆಂದರೆ ಇವರುಗಳ ಹಣೆಯ ಮೇಲಿನ ಎರಡು ರೂಪಾಯಿನ ಅಗಲದ ಕೆಂಪು ಕುಂಕುಮ!

ಅದಾದಮೇಲೆ ಒಬ್ಬೊಬ್ಬರಾಗಿ ಬರುವರು... ಮನೆ ಕೆಲಸ ಮಾಡುವ ತಿಮ್ಮಮ್ಮ , ಅಗಸ ಅಂಜನಪ್ಪ, ಬೆಣ್ಣೆ ಮಾರುವ ಶೀನಪ್ಪ....

ಇವರೆಲ್ಲಾ ಬೆಂಗಳೂರಿನಹತ್ತಿರವಿರುವ ಸಾರಕ್ಕಿ, ಬನ್ನೇರು ಘಟ್ಟ, ಕತ್ರಿಗುಪ್ಪ ಹಳ್ಳಿಗಳಿಂದ ಬರುತ್ತಿದ್ದರು. ಇವೆಲ್ಲಾ ಈಗ ಬೆಂಗಳೂರಿಗೆ ಸೇರಿ ಕೊಂಡಿದೆ.

ಈಗ, ಎಷ್ಟೋ ಸರ್ತಿ ಇವರೆಲ್ಲಾ ಎಲ್ಲಿ ಹೋದರೋ, ಅಂತ ಅನ್ನಿಸುತ್ತೆ......?

ಕಚೇರಿಯಲ್ಲಿ ಏನು ನಡೆದಿದೆ: 9 ಗಂಟೆಗೆಲ್ಲಾ ನಮ್ಮ ರಾಯರು ಮತ್ತು ಅವರ ತರಹ ಅನೇಕರು ಏ.ಜೀಸ್. ಆಫೀಸಿಗೋ, ವಿಧಾನ ಸೌಧಕ್ಕೊ ಹೊರಡುವರು. ಬೆಂಗಳೂರಿನ ಎಲ್ಲಾ ದಿಕ್ಕಿನಿಂದ ಸಾವಿರಾರು ಮಂದಿ ಗುಮಾಸ್ತರು, ಆಫೀಸರ‍್ಗಳು, ಟೈಪಿಸ್ಟ್, ಆಫೀಸ್ ಅಸಿಸ್ಟೆನಟ್... ಎಲ್ಲರೂ ಒಲ್ಲದ ಮನಸ್ಸಿನಿಂದ ಕಾಲೆದು ಕೊಂಡು ಹೋಗುವರು, ಸರ್ಕಾರದ, ಸಾರಿ, ದೇವರ ಕೆಲಸಕ್ಕೆ!

ಈ ಮದ್ಯೆ ಟೈಪ್ರೈಟಿಂಗ್, ಷಾರ್ಟ್ ಹ್ಯಾಂಡ್ ಇನ್ಸ್ಟಿಟ್ಯೂಟ್ ಗಳು, ಸೈಕಲ್ ಬಾಡಿಗೆ ಕೊಡುವ ಅಂಗಡಿಗಳು ಬಾಗಿಲು ತೆಗೆಯುವವು.

ವೈದ್ಯೋ ನಾರಾಯಣೋ ಹರಿ: ಡಾಕ್ಟರುಗಳು ಅವರವರ ಢಿಸ್ಪೆನ್ಸರಿ ಬಾಗಿಲನ್ನು ಎಲ್ಲಾ ಬಡಾವಣೆಗಳಲ್ಲಿ ತೆಗೆಯಲು ಶುರು...ಆವಾಗ ಕೊಡುತ್ತಿದ್ದ ಔಷಧಿಯಾದರೂ ಏನು? ಮಕ್ಕಳಿಗೆ "ಡೋಂಗರೆ ಬಾಲಾಮೃತ". ವಯಸ್ಕರಿಗೆ, ಒಂದು ಬಾಟಲ್ನಲ್ಲಿ "ಕಾರ್ಮನೆಟಿವ್" ಮಿಕ್ಸರ್, ದಿನಕ್ಕೆ ಮೂರು ಡೋಸ್; ಪಾಷಾಣದಂತ ಕಹಿ ಔಷಧಿ ಕುಡಿಯುವಾಗ ಅಮ್ಮನೋ, ಅಜ್ಜಿಯೋ ಒಂದು ಚಮಚ ಸಕ್ಕರೆ ತಕ್ಷಣ ಬಾಯಿಗೆ ಹಾಕದಿದ್ರೆ ಮನೆಯಲ್ಲಿ ದೊಡ್ಡ ರಾದ್ಧಾಂತ! ಗಂಟಲು ನೋವಿಗೆ ಆರ‍್ಜಿರಾಲ್ನಲ್ಲಿ "ಟಚ್" ಮಾಡಿದರೆ, ಮರುದಿನ ನೋವು ಹೋಗಿ ಪುಟ್ಟ ಮೊಸರು ತಿನ್ನಲು ಶುರು!

"ಫ್ಯಾಮಿಲಿ" ಡಾಕ್ಟರ್ ರಾತ್ರಿ ಮನೆಗೇ ಬಂದು ಪೇಷಂಟ್ನ ನೋಡುವರು. ಈಗ ಹತ್ತು ಟೆಸ್ಟ್, ಇಪ್ಪತ್ತು ರಿಪೋರ್ಟ್ ಗಳನ್ನು ಅವರು ಕೊಟ್ಟ ಫೈಲ್ನಲ್ಲಿ ಹಾಕಿಕೊಂಡು ಹೋದ್ರೇನೆ ಡಾಕ್ಟರ್ ಸಾರಿ ಸ್ಪೆಷಲಿಸ್ಟ್ ನ ನೋಡ್ಬಹುದು!

ಪೊಲೀಸ್ ಮಾಮೂಲು ಕೆಲ್ಸ: ಪೋಲೀಸ್ ನವರಿಗೆ ಏನು ಕೆಲಸವಿತ್ತು ಆಗ ? ಸೈಕಲ್ ಗಳನ್ನು ನಿಲ್ಲಿಸಿ ಲೈಸನ್ಸ್‌ನ ಚೆಕ್ ಮಾಡ್ತಿದ್ರು. ಆಂಗೈಯಷ್ಟು ತಗಡಿನ ಬಿಲ್ಲೆಯನ್ನು ಸೈಕಲ್ ಹಬ್ಗೋ ಇಲ್ಲ, ಸೀಟಿನ ಕೆಳಗೆ ಯಾರಿಗೂ ಕಾಣಿಸದಂತೆ ಲಗಾಯಿಸಿ, ಪೋಲೀಸಿನವ್ರು ಚೆಕ್ಕಿಂಗ್ಗೆ ಬಂದಾಗ ತೋರಿಸ್ಬೇಕಾಗಿತ್ತು. ಲೈಸನ್ಸ್ ಇಲ್ಲದಿದ್ರೆ ಪೋಲೀಸ್ ಸ್ಟೇಷನ್‌ಗೆ ಹೋಗಿ ಫೈನ್ ಕಟ್ಬೇಕಾಗಿತ್ತು.... ಅದಕ್ಕೆ ಮುಂಚೆಯೇ ಒಂದು ಮರದ ಹಿಂದೆ ಮ್ಯಾಟರ್ "ಸೆಟ್ಲ್" ಮಾಡಿಬಿಡೋವ್ರು ಆವಾಗ್ಲೂನು!

ರಾತ್ರಿ ಸೈಕಲ್ಗೆ ಡೈನಮೋ ಲೈಟು, ಅಥವಾ ಸೀಮೇಎಣ್ಣೆ ಮತ್ತು ಬತ್ತಿ ಇರುವ ಡಬ್ಬಿಯನ್ನು ಸೈಕಲ್ಗೆ ಸಿಕ್ಕಿಸಿ ಕೊಂಡು, ಕತ್ತಲಾಗುವ ಮುಂಚೆ ಅಥವ ಪೋಲೀಸ್ ನಿಮ್ಮನ್ನು ನೋಡುವ ಮುಂಚೆ, ಮರ್ಯಾದೆಯಾಗಿ ಸೈಕಲ್ನಿಂದ ಇಳಿದು, ಲೈಟನ್ನು ಹಚ್ಚಿಸಿಕೋಬೇಕಾಗಿತ್ತು. ಇಲ್ದಿದ್ರೆ ಮಾವನ ಮನೆಗೆ ಕರ್ಕೊಂಡ್ ಹೋಗ್ತಿದ್ರು! ಏನೂ ಇಲ್ದಿದ್ರೆ ನ್ಯೂಸ್ ಪೇಪರ‍್ನ ಹರಿದು, ಪೊಟ್ಟಣ ಮಾಡಿ, ಅದರಲ್ಲಿ ಅರ್ಧ ಮರಳು ತುಂಬಿ, ಕ್ಯಾಂಡಲ್ನ ಅದರ ಮಧ್ಯ ಹಚ್ಚಿಸಿ, ಆ ಪಂಜನ್ನು ಒಂದು ಕೈಲಿ ಹಿಡಿದು ಸೈಕಲ್ ಓಡಿಸುವರು! ಯಾವ ಕಾರಣಕ್ಕೂ ಸಿಕ್ಕಿಹಾಕ್ಕೊಂಡ್ರೆ, ಸೆಟಲ್ ಮೆಂಟ್ ಆಪ್ಷನ್ ಇದ್ದೇ ಇತ್ತು!

ನಿರೀಕ್ಷಿಸಿ:
ಪೇಟೆ ವ್ಯಾಪಾರಿಗಳು...[ಬೆಂಗಳೂರು]

English summary
Bangalore Nostalgia journey: how was lifestyle of old Bangaloreans in the morning. Govt officers, policemen and old doctors and their dispensaries and above all Budabudikes, vegetable vendors will appear in the streets of old Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X