ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಟಿಎಸ್ ರೂಟ್ ನಂ. 11 ಮ್ಯಾಜಿಕ್ ಬಾಕ್ಸ್ ದೃಶ್ಯಗಳು

By * ಇ ಆರ್ ರಾಮಚಂದ್ರನ್, ಮೈಸೂರು
|
Google Oneindia Kannada News

Bangalore Nostalgic Trip BTS no 11
ಬೆಂಗಳೂರನ್ನು ನೋಡಬೇಕೆಂದರೆ ಬಿಟಿಎಸ್ ನಲ್ಲಿ ಕೂತರೆ ಸಾಕು.... ಅದರಲ್ಲೂ ರೂಟ್ ನಂ. 11ರಲ್ಲಿ. "ಮ್ಯಾಜಿಕ್ ಬಾಕ್ಸ್" ತರಹ ಪದರ ಪದರವಾಗಿ ಒಂದೊಂದಾಗಿ ಊರಿನ ದೃಶ್ಯಗಳು ಕಣ್ಣು ಮುಂದೆ ಕಾಣಿಸಿಕೊಳ್ಳುತ್ತಿದ್ದವು.

ಗಾಂಧೀಬಜಾರಿನಿಂದ ಮಲ್ಲೇಶ್ವರದ 18ನೆ ಕ್ರಾಸಿಗೆ ಹೋಗಲು ಕೊನೇಪಕ್ಷ ಒಂದೆರಡು ಗಂಟೆಗಳಾಗುತ್ತಿತ್ತು! 3ಆಕಳಿಕೆ, 2 ನಿದ್ದೆ ಮಾಡಿ ಎಲ್ಲಾರು "ಫ್ರೆಶ್" ಆಗಿ ಇಳಿಯುತ್ತಿದ್ದರು. ಮಧ್ಯ ಮಧ್ಯ ಸ್ವಲ್ಪ ನೂಕು ನುಗ್ಗಲಿಂದ ಕೂಗಾಟ ಕಾಮನ್ ಆದರೂ ಆಗಾಗ್ಗೆ ಫೈಟಿಂಗ್ ಸೀನ್ಸ್ ಫ್ರೀಆಗಿ ನೋಡಲು ಸಿಗೋದು!
***

ರೂಟ್ ನಂಬರ್ 11: ಬಸವನಗುಡಿಯ ಗಾಂಧೀಬಜಾರ್ ನಲ್ಲಿರುವ "ವಿಧ್ಯಾರ್ಥಿ ಭವನ"ದ ಎದುರುಗಡೆ ಶುರುವಾಗುತ್ತಿತ್ತು. ರವೆ ವಡೆ ತಿಂದು ಮಸಾಲೆದೋಸೆಗೆ ಕಾಯುತ್ತಿರುವಾಗ, ಕಂಡಕ್ಟರ್ "ರ್ರೈಟ್ಟ್" ಅನ್ನೊ ಕೂಗು ಕೇಳಿ, ಅವನಿಗೆ ಶಾಪ ಹಾಗುತ್ತ ಓಡಿ ಬಂದು ಹತ್ತುವವರೇ ಅರ್ಧಕ್ಕರ್ಧ ಜನ.

ವಿದ್ಯಾರ್ಥಿ ಭವನದ ದೋಸೆ ತಿನ್ನುವುದಕ್ಕೆ ದೇವತೆಗಳೇ ವೇಷ ಮರೆಸಿಕೊಂಡು ಕ್ಯೂನಲ್ಲಿ ನಿಂತು, ದೋಸೆ ತಿನ್ನುತ್ತಿರುವವರ ಚೇರ್ ಪಕ್ಕದಲ್ಲಿ ಜಾಗ ಹಿಡಿದು, ಅವರು ಕಾಫಿ ಹೀರುತ್ತಿರುವಾಗಲೇ ಆರ್ಧಸೀಟನ್ನು ಹಿಡಿಯುತ್ತಾರೋ ಅಂತ ಒಂದು ನಂಬಿಕೆ ಇತ್ತು!

ಅದ್ಭುತ ಪಯಣ ಶುರು: ಡೈವರ್ ಸ್ಟಾರ್ಟರ್ ರಾಡ್ ಎರಡು, ಮೂರು ಸಲ ತಿರುಗಿಸಿದ ಮೇಲೆ ಭಯಂಕರವಾಗಿ ಒಂದೆರಡು ಸಲ ಕೆಮ್ಮಿ, ಜೋರಾಗಿ ಕಿರಿಚಿ, ಎಲ್ಲಾ ಕಡೆಯಿಂದ ಹೊಗೆಬಿಡುತ್ತಾ ಬಸ್ಸು ಆನೆಯಂತೆ ಚಲಿಸಲು ಶುರು.

ಹಾಗೆ ಸ್ವಲ್ಪ ಸ್ವಲ್ಪವಾಗಿ ಕುಂಟುತ್ತಾ ರೋಡ್ ಕೊನೆಯಲ್ಲಿರುವ ಟ್ಯಾಕ್ಸಿ ಸ್ಟಾಂಡ್ ಹತ್ತಿರ ಹಾದು, ಎಮ್. ಎನ್. ಕೃಷ್ಣರಾಯರ ಪಾರ್ಕ್ ಕಡೆ ಕಣ್ಣಹಾಯಿಸುತ್ತಾ, ಕೆ.ಆರ್. ರೋಡ್ನಲ್ಲಿ, ಪೆನ್ಷನರ್ಸ್ ಕ್ಲಬಲ್ಲಿ ಲೆಫ್ಟ್ ತಿರಿಗಿ, ಪೋಸ್ಟ್ ಆಫೀಸ್ ಮುಂದೆ ಹೋಗಿ, ಡೈಯಾಗೊನಲ್ ರೋಡಲ್ಲಿ ನ್ಯಾಷನಲ್ ಕಾಲೇಜ್ ಸರ್ಕಲ್ನಲ್ಲಿ ನರಸಿಂಹಾಚಾರ್ ಕ್ಲಿನಿಕ್ ಮುಂದೆ ಕೀರ್ಲು ದನಿಯಲ್ಲಿ ಹೂಂಕರಿಸಿ ನಿಂತಾಗಲೇ ಮೊದಲ ಸ್ಟಾಪ್.

ಎಷ್ಟೋ ಸರ್ತಿ ಸಾಯಂಕಾಲ, ಕರ್ನಾಟಕದ ಆಸ್ತಿಯೆಂದು ಪ್ರಸಿಧ್ಧರಾದ "ಮಾಸ್ತಿ" ಯವರು ಕ್ಲಬ್ಬಿಗೆ ನಡಕೊಂಡು ಹೋಗುತ್ತಿರುವುದನ್ನು ನೋಡಬಹುದಾಗಿತ್ತು.

ಮಹಾರಾಣಿ ಕಾಲೇಜಿಗೆ ಹೋಗುವ ಒಂದಿಬ್ಬರು ಹುಡುಗಿಯರು, ಆಕ್ಯುಪೇಷನಲ್ ಇನ್ಸಟಿಟ್ಯುಟ್‌ಗೆ ಹುಡುಗರು ಮತ್ತು ಕಬ್ಬನ್ ಪಾರ್ಕನಲ್ಲಿ ಹಾಗೇ ಸುತ್ತಾಡಕ್ಕೆ ಹೋಗುವರಿಬ್ಬರು ಹತ್ತಿದರು.

ಬ್ರೈನ್ ಟಾನಿಕ್ ಬೇಕೆ? :ಈ ಸರ್ಕಲ್ನಲ್ಲಿ ಸಾಯಂಕಾಲವಾದರೆ ಗೋಖಲೆ(ಮರಾಠಿಗ) ಯ "ಬ್ರೈನ್ ಟಾನಿಕ್" ಅಂಗಡಿ ಹತ್ತಿರ ಯಾವಾಗಲೂ ರಷ್. ಅಂಗಡಿಯೆಂದರೆ ಒಂದು ಸೈಕಲ್ನ ಕ್ಯಾರಿಯರ‍್ಮೇಲೆ ಕಾಂಗ್ರೆಸ್ಸ್ ಕಡಲೇಕಾಯಿಗೆ ಕೊತ್ತಂಬರಿ, ದಾಲ್ಚಿನ್ನಿ, ಕರಬೇವಿನ ಸೊಪ್ಪು ಹಾಕಿ ಮಾಡಿದ ಬ್ರೈನ್ ಸ್ಟಿಮ್ಯುಲೆನ್ಟ್. ಕತ್ತಲಿನಲ್ಲಿ ಗೋಖಲೆಯ ಶಾಪ್ಗೆ ಲೈಟ್ ಅವರ ಸೈಕಲ್ ಡೈನಮೋನಿಂದ ಬರುತ್ತಿತ್ತು! ಯಾರಾದರೂ ಸವಕಲು ಕಾಸು ಕೊಟ್ಟರೆ ಗೋಖಲೆ ತಕ್ಷಣ ಹಿಡಿಯುತ್ತಿದ್ದರು! ಅವರ ಬ್ರೈನ್ ಟಾನಿಕ್ ತಿಂದೇ ಅಲ್ಲಿಯ ಹುಡುಗರು ರ‌್ಯಾಂಕ್ ಪಡೆದು , ಆ ಕಾಲೇಜೇ "ಕುಡುಮಿ" ಕಾಲೇಜ್ ಅಂತ "ಫೇಮಸ್ಸ್ ಆಗಿದೆಯೆಂದು ಗೋಖಲೆ ಯವರ ಥೀಯರಿ!

ಡಾ.ಹೊ. ನರಸಿಂಹೈಯ್ಯ ( ಎಚ್.ಎನ್) ಮತ್ತು ಕೆ. ಸಂಪತ್ಗಿರಿರಾಯರು ಆ ಕುಡುಮಿ ಅಕಾಡಮಿಯ ಪ್ರಿನ್ಸಿಪಾಲ್ ಮತ್ತು ಹೆಡ್ ಮಾಸ್ಟರ್ ಆಗಿದ್ದರು!

ಶೆಟ್ಟರ ಪಾಳ್ಯಕ್ಕೆ ಎಂಟ್ರಿ: ಮುಂದಿನ ಸ್ಟಾಪ್ ಸಜ್ಜನ್ ರಾವ್ ಸರ್ಕಲ್, ಶೆಟ್ಟರ ಪಾಳ್ಯ ಅಂದರೂ ತಪ್ಪಾಗಲಾರದು. ಇಲ್ಲಿಯ ವಿ.ಬಿ. ಬೇಕರೀಸ್‌ನ ಖಾರದ ತಿಂಡಿಗಳು ಬನ್, ಪಫ್ ಬೆಂಗಳೂರಸ್ಟೆ ಅಲ್ಲ, ಹೊರಗಡೆಯೂ ಪ್ರಖ್ಯಾತಿ ಯಾಗಿತ್ತು. ಅಲ್ಲಿ ಕೆಲಸ ಮಾಡುವ ಹುಡುಗರು ಪಂಚೆ ಮತ್ತು ಬನಿಯನ್ ತೊಟ್ಟು ಪಾದರಸದಂತೆ ಆರ್ಡರ್ ತೊಗೊಂಡು, ಹತ್ತು ಕೈಇರುವ ಹಾಗೆ ಕೋಡಬಳೆಯೋ, ಖಾರದ ಅವಲಕ್ಕಿಯೋ ಕೊಡುತ್ತ, ಮತ್ತೊಬ್ಬರಿಗೆ ಸ್ವೀಟ್ ಬನ್, ಪಾಕಂಪ್ಪು; ಹಲ್ಲಿಲ್ಲದ ಮುದುಕರೊಬ್ಬರಿಗೆ ಬಾದಾಮಿ ಹಲ್ವ ಸಪ್ಲೈ!

ಇದು ನಡೆಯುತ್ತಿರುವಾಗಲೇ ಶೆಟ್ಟರ ಫ್ಯಾಮಿಲಿಗೆ ಅವರ ಹತ್ತುಸಾಮಾನುಗಳ "ಪಾರ್ಸಲ್"ದು ಬಿಲ್! ಇದು ಬೆಳಗಿನಿಂದ ಸಂಜೆಯವರಿಗೆ ನಡೆಯುವ ದಿನಚರಿ. ಹಬ್ಬ ಹರಿದಿನವೆಂದರೆ ಮುಗೀತು.... ನಿಮ್ಮ ಸರದಿ ಬರುವಸ್ಟರಲ್ಲಿ ನೀವು ಎರಡು ಬಾದಾಮಿ ಹಾಲು ಗ್ಲೂಕೋಸ್ ಜೊತೆ ಕುಡಿಯಬೇಕಾಗುತ್ತಿತ್ತು!

ಸಜ್ಜನ್ ರಾವ್ ಸರ್ಕಲ್ನಲ್ಲಿ ಯಾವಾಗಲೂ ಮದುವೆ ಸಂಭ್ರಮವೇ! ಅದೇ ಹೆಸರಿನ ಛತ್ರದಲ್ಲಿ ಅಥವಾ ಕೋಟಾ ಕಾಮಾಕ್ಷಿಯ ಛತ್ರದಲ್ಲಿ. ಆ ಸರ್ಕಲ್ನಲ್ಲೇ ಒಂದು ಸತ್ಯನಾರಾಯಣ ದೇವಸ್ಥಾನವಿದೆ. ಸುಳ್ಳು ಪಳ್ಳು ಹೇಳಿ ಸೈಟು ನುಂಗುವ ರಾಜಕಾರಣಿಗಳು ಬರುವ ಮುಂಚೆಯೇ ಕಟ್ಟಿಸಿದ ದೇವಸ್ಥಾನವದು!

ವಿ.ಬಿ. ಬೇಕರಿ ತಿಂಡಿಯ ಸ್ವಾದವನ್ನು ಎಲ್ಲರ ಮೂಗಿಗೆ ಹತ್ತುವದೊರಳೊಗೆ, ನಮ್ಮ ಬಸ್ಸು ಮಾರ್ಡನ್ ಹೋಟೆಲ್ ಮುಂದೆ ಹೋಗಿ, ಮಿನರ್ವ ಟಾಕೀಸಿನ ಸರ್ಕಲ್ಗೆ ಮುಂಚೆ ಇರುವ ನ್ಯೂ ಮಾರ್ಡನ್ ಹೋಟೆಲ್ ಮುಂದೆ ಸ್ಟಾಪ್ಗೆ ಬಂದಾಗಲೇ ಎಲ್ಲಾರಿಗೂಗೊತ್ತು ಯಾಕೆಂದು; ಎನ್, ಎಮ್. ಸಿ, ಯ "ಎಸ್.ಕೆ. ಸಿ.". ಸ್ವೀಟು, ಖಾರ, ಕಾಫಿ - ಅಥವಾ ಚೌ ಚೌ ಭಾತ್. ಅದನ್ನು ತಿಂದೇ ಬಹಳ ಜನ ಮಿನರ್ವ ಥಿಯೇಟರ್‌ನಲ್ಲಿ ಮಾರ್ನಿಂಗ್ ಶೊ ನೋಡೋದಕ್ಕೆ ಬರುವರು.

ನಿರೀಕ್ಷಿಸಿ: ಮಿನರ್ವ ಟಾಕೀಸ್ ಕನ್ನಡ ಚಿತ್ರ? [ಬೆಂಗಳೂರು]

English summary
Bangalore Nostalgic Trip Down the Memory Lane: To getting an idea of what was happening in the city in those days was to travel by BTS route no. 11. from Gandhi bazaar in Basavanagudi opposite Vidyarthi Bhavan to Malleswaram. National College circle stop, Gokhale, a Maharashtrian, sold ‘Brain Tonic' shop, Sajjan Rao circle Food Street mainly consists of Shettys or Komatis of Bangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X