ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಬೆಂಗಳೂರು ಪೆನ್ಷನರ್ಸ್ ಪ್ಯಾರಡೈಸ್

By ಇ ಆರ್ ರಾಮಚಂದ್ರನ್, ಮೈಸೂರು
|
Google Oneindia Kannada News

Bangalore Nostalgic trip
ಸುಮಾರು 50 ವರ್ಷದ ಹಿಂದೆ ಬೆಂಗಳೂರು ಕುಗ್ರಾಮವಲ್ಲದಿದ್ದರೂ ಒಂದು ಪಕ್ಕ ಹಳ್ಳಿಯೇ ಆಗಿತ್ತು. "ಪೆನ್ಷನರ್ಸ್ ಪ್ಯಾರಡೈಸ್" ಅನ್ನವ ಹೆಸರು 1970ರ ತನಕ ಚೆನ್ನಾಗಿಯೇ ಅನ್ವಯಿಸಿತ್ತು.

ಮುಖ್ಯವಾಗಿ ಊರನ್ನು ಎರಡು ಭಾಗಗಳಾಗಿ ಗುರ್ತಿಸುತ್ತಿದ್ದರು. "ಸಿಟಿ" ಮತ್ತು "ಕಂಟೋನ್ ಮೆಂಟ್". ಅಥವಾ "ಕಂಟ್ರುಮೆಂಟ್ರು" ಇಲ್ಲ "ದಂಡು". ಎಲ್ಲರಿಗೂ ಚೆನ್ನಾಗಿ ಗೊತ್ತಿದ್ದ ಬಡಾವಣೆಗಳು ಮುಖ್ಯವಾಗಿ ಎರಡೇ! "ಬಸವನಗುಡಿ" ಮತ್ತು "ಮಲ್ಲೇಶ್ವರ".

ಜಯನಗರವಾಗಲೀ, ಅದಕ್ಕಿಂತಲೂ ಫೇಮಸ್ ಆದ ಅದರ ಸೊಳ್ಳೆಗಳಾಗಲಿ, ಇನ್ನೂ ಹುಟ್ಟಿಕೊಂಡಿರಲಿಲ್ಲ!

ಬೆಂಗಳೂರಿನ ವಾಣಿಜ್ಯ ಚಕ್ರವೆಲ್ಲಾ ಸಿಟಿ ಮಾರ್ಕೆಟ್ ಹತ್ತಿರ ಸುತ್ತುತ್ತಿತ್ತು. ಅದರ ಸುತ್ತ ಒಂದಿಷ್ಟು ಪೇಟೆಗಳು ಹುತ್ತದಂತೆ ಬೆಳಕೊಂಡಿದ್ದವು. ಬಳೇಪೇಟೆ, ಅಕ್ಕಿಪೇಟೆ, ಕಾಟನ್ಪೇಟೆ, ಚಿಕ್ಕಪೇಟೆ, ತರುಗುಪೇಟೆ........

ಕಂಟ್ರುಮೆಂಟ್ರು ಅಂದ್ರೆ ದಂಡು ಮುಕ್ಕಾಲು ವಾಸಿ ಜನಕ್ಕೆ ಬಹಳ ದೂರವೆ. ಲಂಡನ್ ಅಷ್ಟೆ ದೂರ ಅಂದುಕೊಂಡವರೂ ಇದ್ದ್ರು.

ಆಗ ಬೆಂಗಳೂರನ್ನು ನೋಡಬೇಕೆಂದರೆ ಬಿ.ಟಿ.ಎಸ್. ಬಸ್ಸ್ ಸರ್ವೀಸ್ಸೆ ಗತಿ. "ಬಿಟ್ಟರೆ ತಿರುಗ ಸಿಗೊಲ್ಲ!" ಅಂತಾನೂ ಅದಕ್ಕೆ ಇನ್ನೊಂದು ಅಡ್ಡ ಹೆಸರಿತ್ತು.

ಆಗ ಜನಗಳು ಓಡಾಡುವುದಕ್ಕೆ ಇದ್ದದ್ದು ಮುಖ್ಯವಾಗಿ ಮೂರೇ ಸರ್ವೀಸ್ಸ್; ನಟರಾಜ ಸರ್ವೀಸ್; ಜಟಕಾ ಗಾಡಿ ಮತ್ತು ಸೈಕಲ್; ಸುಮಾರು ಜನ ಆಫೀಸ್ಗೆ ಹೋಗೋರು "ನಟರಾಜ" ಸರ್ವೀಸ್"ನಲ್ಲೇ ಹೋಗುತ್ತಿದ್ದರು; ಅಂದರೆ ಕೈ ಬೀಸಿಕೊಂಡು ದಾಪು ಗಾಲು ಹಾಕಿ ನಡೆಯೋದು! ಸೈಕಲ್ ಕೊಂಡುಕೊಂಡವರು ಬಹಳ ಕಡಿಮೆ ಸಂಖ್ಯೆನೇ. ಸೈಕಲ್ನಲ್ಲಿ ಹೋಗುವವರು ಘಂಟೆಗೆ 4 ಆಣೆಯಂತೆ ಬಾಡಿಗೆಗೆ ತೊಗೊಳ್ಳುತ್ತಿದ್ದರು.

ಸಾರಿಗೆ ವ್ಯವಸ್ಥೆ ಹೀಗಿತ್ತು: ಬಸ್ಸು ಸರ್ವಿಸ್ಸ್ ಅಂದರೆ ಹೊಗೆ ತುಂಬಿಕೊಂಡು ಘಂಟೆಗೆ ಒಂದೋ ಎರಡೋ ಬಸ್ಸು ಅಲ್ಲಿ ಇಲ್ಲಿ ಓಡಾಡುತ್ತಿರುತ್ತಿತ್ತು. ಆಟೋರಿಕ್ಷ ಅಥವಾ ಆಟೋರಾಕ್ಷಸ ಇನ್ನೂ ಹುಟ್ಟಿರಲಿಲ್ಲ, ಸದ್ಯ!

ನಟರಾಜ ಸರ್ವೀಸ್ ನಲ್ಲಿ ಹೋಗುವವರು ಮುಖ್ಯತಹ ಏ. ಜೀಸ್. ಆಫೀಸ್ಗೆ, ಕೋರ್ಟು, ಕಛೇರಿಗೆ ಹೋಗುವವರು. ವಿಧಾನಸೌಧ ಕಟ್ಟುವುದಕ್ಕೆ ಮುಂಚೆ ಆಡಳಿತ ಕಛೇರಿಗಳು "ಅಠಾರಾ ಕಛೇರಿ"ಯಲ್ಲಿ ಇದ್ದುದರಿಂದ ಎಲ್ಲಾರು ಅಲ್ಲಿಗೆ ಹೋಗ್ತಿದ್ರು.

ಬೆಳಗ್ಗೆ ತಿಂಡಿ ಬದುಲು, ದಿಢೀರ್ ಊಟ ಮಾಡಿ, ಮೈಸೂರು ವಿಳೇದಳೆ ಮತ್ತು ಸುಘಂಧಿ ಅಡಿಕೆಯನ್ನು ಅಗಿಯುತ್ತ, ಕಚ್ಚೆಪಂಚೆಹಾಕಿ ಮೇಲೆ ಮದುವೆಯ ಕೋಟ್ ಹಾಕಿ, ಟಿಫಿನ್ ಬಾಕ್ಸ್ ನಲ್ಲಿ ಮಧ್ಯಾಹ್ನಕ್ಕೆ ಬಿಸಿ ಬಿಸಿ ಉಪ್ಪಿಟ್ಟು ಬುತ್ತಿ ಕಟ್ಕೊಂಡು ಹೊರಟರೆ, ಬೀದಿಯವರೆಲ್ಲಾ ನೋಡುತ್ತಿದ್ದರು ಆ ಠೀವಿಯನ್ನು! ಮನೆಯಾಕೆ ನೋಡುತ್ತಿದ್ದಿದ್ದು ಕಿಟಕಿಯಂದ ಅಷ್ಟೆ!

ಒಬ್ಬೊಬ್ಬರು ಮನೆಯಿಂದ ಸ್ವಲ್ಪ ದೂರ ಹೋದ ಮೇಲೆ "ಅಂಬಾಳ್" ನಶ್ಯ ವನ್ನು ಮೂಗಿಗೇರುಸಿತ್ತಿದ್ದರು!

ದಿನ ನಿತ್ಯದ ಸಸ್ಪೆನ್ಸ್: ಸಂಜೆ ಬರುವಾಗ ಅದೇ ಟಿಫಿನ್ ಬಾಕ್ಸ್ ನಲ್ಲಿ ಮನೆಯಾಕೆಗೆ ಉಡುಪಿ ಕೃಷ್ಣ ಭವನ್‌ನ ಮೈಸೂರ್ ಪಾಕ್ ಅಥವಾ ಬಳೇಪೇಟೆಯ ಮಲಬಾರ್ ಲಾಡ್ಜಿಂದ ಬಾದಾಮಿ ಹಲ್ವ ಮತ್ತು ಮೈಸೂರು ಮಲ್ಲಿಗೆ; ಇವಿಷ್ಟು ಹಿಡುಕೊಂಡು ಬಾಗಿಲ ಹತ್ತಿರ ಬರುವಷ್ಟರಲ್ಲಿ ಅವಳು ಬಿಸಿ ಬಿಸಿ ಕಾಫಿ ಜೊತೆಗೆ ಕೋಡುಬಳೆ ಕೊಟ್ಟೆ, ಭಾರದ ಟಿಫಿನ್ ಬಾಕ್ಸ್‌ನಲ್ಲಿ ಏನಿದೆ ಅಂತ ತೆಗೆದು ನೋಡುವಳು. ಸಸ್ಪೆನ್ಸ್ ಓವರ್. ಒಟ್ಟೊಟ್ಟಿಗೆ ಇಬ್ಬರಿಗೂ ಎರಡೆರೆಡು ಸ್ವೀಟ್ಸ್!

ಮಳೆಗಾಲ ಬಂತೆಂದರೆ ವ್ಯತ್ಯಾಸ ಇಷ್ಟೆ. ಕೈಲಿ ಕಾಶೀಯಾತ್ರೆಯಲ್ಲಿ ಮಾವ ಕೊಟ್ಟ ಛತ್ರಿ; ಕೋಟಿನ ಒಳಗೆ ಸ್ಲೀವ್ಲೆಸ್ಸ್ ಸ್ವೆಟರ್. ರಾತ್ರಿ ನೆಗಡಿಗೆ ಅಜ್ಜಿ ಮಾಡಿಕೊಡುವ ಕಷಾಯ.

ಕಾಲಚಕ್ರ ಸುಮಾರು ಹೀಗೇ ಉರುಳುತ್ತಿತ್ತು. 1950, 1960ರಲ್ಲಿ ಕೂಡ ಬೆಂಗಳೂರೊಂದು ಸುಮಾರು ಹಳ್ಳಿಯೇ ಆಗಿತ್ತು.

ಆಗ ಒಂದು ವಿಶೇಷವೆಂದರೆ, ಇನ್ನು ನಸುಕಿರುವಾಗಲೇ, ಸೂರ್ಯನು ಹುಟ್ಟುವುದಕ್ಕೆ ಮುಂಚೆಯೇ, ಊರಲ್ಲಿ ಯಾರ‍್ಯಾರು ಎಂಜಿನೆಯರಿಂಗ್ ಡಿಗ್ರಿ ಇಲ್ಲ ಡಿಪ್ಲೊಮ ಮಾಡಿದಾರೊ ಅವರುಗಳೆನ್ನಾ ಬಸ್ಸು ಗಳಲ್ಲಿ ತುಂಬಿಕೊಂಡು ಊರಾಚೆ ಇರುವ ಫ್ಯಾಕ್ಟರಿಗಳಿಗೆ ಹಾಕಿ ಬರುತ್ತಿದ್ದರು! ಅರ್ಧ ನಿದ್ರೆಯಲ್ಲಿರುವಾಗಲೇ ಎಚ್.ಎಮ್ .ಟಿ., ಐ.ಟಿ.ಐ, ಏಚ್. ಏ. ಎಲ್, ಬಿ.ಇ.ಎಲ್, ಎನ್.ಜಿ.ಇ.ಫ್, ರೆಮ್ಕೊ ಫ್ಯಾಕ್ಟರಿಗಳಿಗೆ ಹೋಗಿ ಅವರವರ ಸೀಟಿಗೆ ಹೋಗಿ, ಡಿಸೈನೊ, ಶಾಪ್ ಫ್ಲೋರ‍್ಗೆ ಹೋಗಿ ಪ್ರೊಡಕ್ಷನ್ ಇತ್ಯಾದಿ ಕೆಲಸ ಶುರುಮಾಡುತ್ತಿದ್ದರು.

ಅವಾಗ ತಯಾರಿಸಿದ ರೇಡಿಯೊ, ಟೆಲಿಫೊನ್ ಗಳಲ್ಲಿ ಮದ್ಯ ಗೊರ ಗೊರಾ ಶಬ್ಧ ಬರೋದಲ್ಲಾ... ಅದೆಲ್ಲಾ ಅವರ ಗೊರಕೇ ಶಬ್ದವೇ !

ಸೂಚನೆ:
ಈ ಲೇಖನದ ಆಂಗ್ಲ ಆವೃತ್ತಿ ಚುರುಮುರಿಯಲ್ಲಿ ಪ್ರಕಟವಾಗಿತ್ತು.

ನಿರೀಕ್ಷಿಸಿ: ಮಾಲಿಕೆ 2: ಮ್ಯಾಜಿಕ್ ಬಾಕ್ಸ್! [ಬೆಂಗಳೂರು]

English summary
Bangalore Nostalgic Trip Down the Memory Lane: Bengaluru once called as Pensioners Paradise. It was real paradise in late 70's. Beautiful memories down the line traveling in Bangalore Transport Servide(BTS), walking to govt office was common. Malleswaram, Basavanagudi were known to all apart from Cantonment and City Market area
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X