• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಳಗಾವಿ ಗಡಿ ಗಿರಣಿಯಲ್ಲಿ ಹಿಟ್ಟಾದವನ ಅಳಲು

By * ಮಹೇಶ ಗಜಬರ, ಚಿಕ್ಕೋಡಿ
|

ದೇವರು ಬಹುಶಃ ಕರ್ನಾಟಕ ಮಹಾರಾಷ್ಟ್ರ ಗಡಿ ಸಮಸ್ಯೆಯನ್ನು ಅಕ್ಷಯಪಾತ್ರೆಯಲ್ಲಿ ಹಾಕಿ ಬಿಟ್ಟಿದ್ದಾನೆ ಅಂತಾ ಕಾಣಿಸುತ್ತೆ. ಎಂದೂ ಮುಗಿಯದ ಸಂತೆಯಾಗಿ ನನ್ನಂಥ ಅನೇಕರಿಗೆ ವೈಯಕ್ತಿಕ ತಲೆನೋವು ಮತ್ತು ಜಿಗುಪ್ಸೆ ತಂದಿದೆ. ಇತ್ತೀಚಿನ ಗಣಿ ಗಲಾಟೆಯಲ್ಲಿ ಮಾಧ್ಯಮದಲ್ಲಿ ಗಡಿ ತಂಟೆ ವಿಷಯ ಮಂಡನೆ ಸಪ್ಪೆಯಾಯಿತಾದರೂ, ನಿಜವಾಗಿ ಅಲ್ಲಿ ನಡೆದ ಗದ್ದಲ ಗಲಾಟೆ ಮಾತ್ರ ಸಾರಿಗೆ ವ್ಯವಸ್ಥೆ ಮೇಲೆ ಭಾರೀ ಪರಿಣಾಮ ಬೀರಿ ನಮ್ಮ ಸ್ಥಿತಿ ಹೈರಾಣು ಮಾಡಿತು. ದೂರದೃಷ್ಟಿಯಿರುವ ನಾಯಕರ ಕೊರತೆಯಿಂದ ಎಂದೋ ಮುಗಿದು ಹೋಗಬೇಕಾದ ಕಥೆ ಜನರನ್ನು ಇಂದಿಗೂ ಸುಡುತ್ತಿದೆ. ಈ ವಿಷಯದ ಬಗ್ಗೆ ಬರೆಯುವುದು ಸುಮ್ಮನೆ ಸಮಯದ ವ್ಯರ್ಥ ಅಂಥ ನಾನು ಇದರ ಬಗ್ಗೆ ತಲೆನೇ ಕೇಡಿಸಿಕೊಳ್ಳೊದು ಇಲ್ಲ. ಆದ್ರೂ ಯಾಕೋ ಎನೋ ನನಗೆ ಅನಿಸಿದ ಕೆಲವು ವಿಷಯ ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿದರಿಂದ ಈ ಒಂದು ಲೇಖನ ನಿಮ್ಮ ಮುಂದೆ ಇಡುತ್ತಿದ್ದೇನೆ. ಓದುವುದಕ್ಕೆ ಪುರುಸೊತ್ತು ಇದೇ ತಾನೆ?

ಸಾಕಷ್ಟು ಜನ ಅನೇಕ ಮಾಧ್ಯಮಗಳಲ್ಲಿ ಈ ವಿಷಯದ ಬಗ್ಗೆ ನಿಮಗೆ ಬೇಸರ ತರಿಸುವಷ್ಟು ಬರೆದಿದ್ದಾರೆ. ಆದ್ರೆ ಅವರೆಲ್ಲರೂ ಹೊರಗಣರವರು. ನನಗೆ ಗೊತ್ತಿರೊ ಹಾಗೆ ಒಳಗೊಣನವನು ನಾನೊಬ್ಬನೆ. ಹಾಗಾಗಿ ನಾ ಕಂಡ ರೀತಿಯಲ್ಲಿ ಮತ್ತು ನನಗೆ ಅನಿಸಿದ ಹಾಗೆ ಕೆಲವು ಸಂಗತಿಗಳನ್ನು ಬರೆದಿದ್ದೇನೆ. ಎರಡು ರಾಜ್ಯಗಳ ನಡುವಿನ ಈ ತಂಟೆ ಕೇವಲ ಬೆಳಗಾವಿ ನಗರಕ್ಕೆ ಮಾತ್ರ ಸಂಬಂಧಿಸಿದಲ್ಲ. ಇದರಲ್ಲಿ ಮಹಾರಾಷ್ಟ್ರ ಹಕ್ಕು ಪ್ರತಿಪಾದಿಸುತ್ತಿರುವ ಇತರೆ 814 ಊರುಗಳು ಮತ್ತು ಕರ್ನಾಟಕ ಕೇಳುತ್ತಿರುವ 516 ಊರುಗಳಿವೆ. ಆದ್ರೆ ಸುದ್ದಿ, ಗಲಾಟೆ ಮಾತ್ರ ಬರೀ ಸಕ್ಕರೆಯ ಅಕ್ಕರೆ ನಗರಿ ಮತ್ತು ಕುಂದಾ ನಗರಿ ಬೆಳಗಾವಿ ಬಗ್ಗೆ ಆಗುತ್ತೆ. ಏಕೆ ಹೀಗೆ?

ಎರಡು ರಾಜ್ಯಗಳು ಮತ್ತು ಸಂಬಂಧಪಟ್ಟ ಮಾಧ್ಯಮಗಳು ಈ ನಗರ ನಮ್ಮ ಅವಿಭಾಜ್ಯ ಅಂಗ ಅಂತಾನೆ ಹೇಳಿಕೊಳ್ಳುತ್ತವೆ. ಮಹಾರಾಷ್ಟ್ರ ಪ್ರತಿಪಾದಿಸಿದ 814 ಊರುಗಳಲ್ಲಿ ವಾಸ್ತವವಾಗಿ ಎಷ್ಟು ಅದಕ್ಕೆ ಸೇರಬೇಕು ಅಂತ ನಾನು ಮತ್ತು ನನ್ನ ಸ್ನೇಹಿತರು ಅನಧಿಕೃತ ಮಾಹಿತಿ ಕಲೆ ಹಾಕಿದಾಗ ನಮಗೆ ತಿಳಿದು ಬಂದಿದ್ದು ಏನಂದ್ರೆ ಕೇವಲ 290 ಊರುಗಳು ಅದಕ್ಕೆ ಸೇರಬೇಕು ಅಂತಾ. ಕರ್ನಾಟಕ ಸರ್ಕಾರವೆ ಮಹಾಜನ ಸಮಿತಿ ರಚನೆಗಿಂತ ಮೊದಲು 260 ಊರುಗಳನ್ನು ಬಿಟ್ಟು ಕೊಡಲು ನಿರ್ಧರಿಸಿತ್ತು. ಹಾಗೆ ಕರ್ನಾಟಕ ಕೇಳಿದ 516ರಲ್ಲಿ ಅದಕ್ಕೆ 290 ಊರುಗಳು ಅದಕ್ಕೆ ಸೇರಬೇಕು. ಮಹಾರಾಷ್ಟ್ರ 260 ಊರುಗಳನ್ನು ಕೊಡಲು ಒಪ್ಪಿತ್ತು. ಮಹಾಜನ ಸಮಿತಿ ಕರ್ನಾಟಕಕ್ಕೆ 247 ಮತ್ತು ಮಹಾರಾಷ್ಟ್ರಕ್ಕೆ 262 ಊರುಗಳನ್ನು ಕೊಡಲು ಒಪ್ಪಿಕೊಂಡಿತ್ತು.

ಗೆದ್ದವರು, ಸೋತವರು : ಬಹುಶಃ ಭಾಷಾ ಅಧಾರಿತವಾಗಿ ರೂಪುಗೊಂಡ ಯಾವ ರಾಜ್ಯವೂ ನೂರಕ್ಕೆ ನೂರರಷ್ಟು ತನ್ನ ಭಾಷಾ ಪ್ರದೇಶಗಳನ್ನು ಒಳಗೊಂಡಿಲ್ಲ. ಇದು ಆಗಿನ ರಾಜ್ಯ ಪುನರ್ವಿಂಗಡನೆ ಆಯೋಗದ ದೊಡ್ಡ ತಪ್ಪು ಮತ್ತು ಇಂತಹ ದೊಡ್ಡ ತಪ್ಪಿಗೆ ಸಮ್ಮತಿ ಮುದ್ರೆ ಒತ್ತಿದ್ದು ಆಗಿನ ರಾಜಕೀಯ ಮುಖಂಡರ ಅತಿದೊಡ್ಡ ತಪ್ಪು. ಈಗ ಕೇಂದ್ರ ಸರ್ಕಾರ ಸಲ್ಲಿಸಿರುವ ಅಫಿಡವಿಟ್ ಯಾವುದೇ ಪ್ರದೇಶದ ವರ್ಗಾವಣೆ ಸಾಧ್ಯವಿಲ್ಲ ಅಂತ ಹೇಳಿರೊದು ಬೆಳಗಾವಿ ನಗರದ ಮಟ್ಟಿಗೆ ಕರ್ನಾಟಕದ ವಿಜಯವಾದರೂ ಕೂಡ, ಉಳಿದವರ ಬಗ್ಗೆ ಏನು?

ಬೆಳಗಾವಿ ಎರಡು ಭಾಷೆಗಳ ಸಮ್ಮಿಶ್ರಣದ ಊರು. ಅಲ್ಲಿ ಬಹುತೇಕ ಎಲ್ಲರಿಗೂ ಕನ್ನಡ ಮತ್ತು ಮರಾಠಿ ಎರಡು ಭಾಷೆ ಬರುತ್ತೆ. ಆದರಿಂದ ಅದು ಕರ್ನಾಟಕದಲ್ಲೆ ಉಳಿದರೆ ಅಲ್ಲಿನ ಮರಾಠಿಗರಿಗೆ ಏನು ಸಮಸ್ಯೆಯೆ ಆಗುವುದಿಲ್ಲ. ಅಲ್ಲಿನ ವಿದ್ಯಾವಂತ ಯುವ ಜನಾಂಗ ಕರ್ನಾಟಕವೆ ನಮ್ಮ ಭೂಮಿ ಅಂತ ಹೊಂದಿಕೊಂಡಿದೆ. ಹಾಗೆನೇ, ಕನ್ನಡ ಯುವಜನ ಅಲ್ಲಿ ಮಹಾರಾಷ್ಟ್ರದಲ್ಲಿ. ಆದ್ರೆ ಕನ್ನಡದ ಗಾಳಿ ಸೋಂಕದ ನನ್ನ ಊರಿನಂತಹ ಎಷ್ಟೋ ಊರುಗಳು ನಮ್ಮ ರಾಜ್ಯದಲ್ಲಿ ಮತ್ತು ಹಾಗೆನೇ ಮರಾಠಿ ಗೊತ್ತಿಲ್ಲದ ಎಷ್ಟೊ ಊರುಗಳೂ ಮಹಾರಾಷ್ಟ್ರದಲ್ಲಿ ಇವೆ. ಈ ಊರಿನ ಜನರಿಗೆ ಯಾವ ಭಾಷಾ ರಾಜಕೀಯವು ಬೇಕಾಗಿಲ್ಲ. ಅವರ ಏಕೈಕ ಬೇಡಿಕೆ ಅಂದ್ರೆ ನಮ್ಮ ಸರ್ಕಾರಿ ದಾಖಲೆ ಕಾಗದ ಪತ್ರಗಳನ್ನು ನಮ್ಮ ಮಾತೃಭಾಷೆಯಲ್ಲಿ ಕೊಡಿ ಮತ್ತು ಅಭಿವೃದ್ಧಿ ಕೆಲಸ ಮಾಡಿ.

ನಮಗೆ ಯಾವ ರಾಜ್ಯವಾದರೇನು? ಎಲ್ಲಾ ಒಂದೇ. ಒಂದು ವೇಳೆ ಸರ್ವೋಚ್ಛ ನ್ಯಾಯಲಯ ಮಹಾಜನ ಸಮಿತಿ ವರದಿಯೆ ಅಂತಿಮ ಅಂತ ತೀರ್ಪು ಕೊಟ್ಟರೂ ಅದು ಈಗ ನಮ್ಮ ಪಾಲಿಗೆ ಅಪ್ರಸ್ತುತ. ಇದರಿಂದ ಬೆಳಗಾವಿ ಕರ್ನಾಟಕದ್ದಲ್ಲಿ ಉಳಿದರೂ ಕೂಡ ನನ್ನಂತ ಎಷ್ಟೋ ಊರುಗಳು ಕರ್ನಾಟಕದಿಂದ ಮಹಾರಾಷ್ಟಕ್ಕೆ ಸೇರಿಸಲಾಗುತ್ತೆ. ಇದರಿಂದ ಜನರಿಗೆ ಮತ್ತೆ ತೊಂದರೆ, ಸಂಕಷ್ಟಗಳೆ ಹೆಚ್ಚಾಗುತ್ತವೆ. ಇಷ್ಟು ದಿನ ಭಾವನಾತ್ಮಕವಾಗಿ ಹೊಂದಿಕೊಂಡಿರೊ ರಾಜ್ಯ ಬಿಟ್ಟು ಬೇರೊಂದು ರಾಜ್ಯದ ಜೊತೆ ಗುರುತಿಸಿಕೊಳ್ಳೊದು ಅಷ್ಟೊಂದು ಸುಲಭ ಅಲ್ಲ. ನನ್ನ ಮಾತೃಭಾಷೆ ಕನ್ನಡ. ಆದರಿಂದ ನಾನು ಕನ್ನಡ ಮಾಧ್ಯಮದಲ್ಲೆ ಕಲಿತದ್ದು. ನನ್ನ ಪ್ರದೇಶದ ಎಷ್ಟೊ ಮರಾಠಿ ಮಾತೃಭಾಷೆಯ ಜನ ಕನ್ನಡ ಮಾಧ್ಯಮದಲ್ಲೆ ಕಲಿತಿದ್ದಾರೆ. ನಾಳೆ ನಮ್ಮನೆಲ್ಲ ಒಮ್ಮಿಂದೊಮ್ಮಿಗೆ ಮಹಾರಾಷ್ಟ್ರಕ್ಕೆ ಸೇರಿಸಿದರೆ ನಮ್ಮ ಗತಿ ಏನು?

ಯಥಾ ಸ್ಥಿತಿಗೆ ತಥಾಸ್ತು : ಇದು ಮಹಾರಾಷ್ಟ್ರ ಪ್ರದೇಶದ ಜನರನ್ನ ಕರ್ನಾಟಕಕ್ಕೆ ಸೇರಿಸಿದರೆ ಅವರಿಗೂ ಅನ್ವಯಿಸುತ್ತದೆ. ನನ್ನ ಊರು ಮಹಾರಾಷ್ಟ್ರಕ್ಕೆ ಸೇರಿಸಲ್ಪಟ್ಟರೆ ನಾನು ಮಹಾರಾಷ್ಟ್ರದ ಅಥವಾ ಕರ್ನಾಟಕದ ಸರ್ಕಾರಿ ನೌಕರಿಗೆ ಅರ್ಜಿ ಹಾಕಲು ಅರ್ಹನಾಗುತ್ತಾನೆಯೆ? ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಿ ನೌಕರಿಗೆ ಅರ್ಜಿ ಹಾಕಲು ಕನಿಷ್ಠ 7 ವರ್ಷ ಅದೇ ರಾಜ್ಯದಲ್ಲಿ ಓದಿರಬೇಕು ಮತ್ತು ಆಯಾ ರಾಜ್ಯದ ಭಾಷೆ ಓದಲು ಬರೆಯಲು ಬರಬೇಕು. ನನ್ನ ಜೀವನದ ಎಲ್ಲ 16 ಶೈಕ್ಷಣಿಕ ವರ್ಷಗಳನ್ನು ಇಲ್ಲೆ ಕರ್ನಾಟಕದಲ್ಲೆ ಹುಟ್ಟಿ ಓದಿ ಬೆಳೆದ ನನಗೆ ಕರ್ನಾಟಕ ಪರ ಹೆಚ್ಚು ಒಲವು.

ಎರಡು ರಾಜ್ಯಗಳ ನಡುವಿನ ಪರಸ್ಪರ ಪ್ರದೇಶಗಳ ವರ್ಗಾವಣೆಯಿಂದ ಆಗೋ ಆಡಳಿತ ಪರಿಣಾಮ ಮಾತ್ರ ಗಂಭೀರ ಮತ್ತು ಎಷ್ಟೋ ತ್ರಾಸದಾಯಕ. ದೇವರಲ್ಲಿ ನನ್ನ ಪ್ರಾರ್ಥನೆ ಅಂದ್ರೆ ಈಗಿರೋ ಯಥಾಸ್ಥಿತಿನೆ ಮುಂದುವರೆಯಲಿ ಅಂತಾ. ಇದು ಕೇವಲ ನನ್ನ ವೈಯಕ್ತಿಕ ಹಿತಾಸಕ್ತಿಗಾಗಿ ಹೇಳುತ್ತಿಲ್ಲ. ಎಲ್ಲ ಆಡಳಿತ, ಮಾನಸಿಕ, ಭಾವನಾತ್ಮಕ ದೃಷ್ಟಿಕೋನದಿಂದ ಯೋಚಿಸಿ ಹೇಳುತ್ತಿದ್ದೇನೆ. ಇದರ ಬಗ್ಗೆ ಪ್ರಜಾವಾಣಿಯ ದೇವು ಪತ್ತಾರ, ವಿಜಯ ಕರ್ನಾಟಕದ ವಿನಾಯಕ ಭಟ್ ಮತ್ತು ಆಂಗ್ಲ ದೈನಿಕ ಡಿ.ಎನ್.ಎ ಪುಣೆ ಸಂಪಾದಕರ ಲೇಖನಗಳನ್ನು ಓದಿದ್ದೇನೆ. ಅವರೆಲ್ಲರ ನಿಲವು ಹೆಚ್ಚು ಕಡಿಮೆ ಒಂದೇ. ಯಥಾ ಸ್ಥಿತಿಯೆ ಎಲ್ಲದಕ್ಕಿಂತ ಉತ್ತಮ ಮಾರ್ಗ. ಯಥಾ ಸ್ಥಿತಿ ಮುಂದುವರೆದರೆ ಎರಡು ರಾಜ್ಯಗಳಿಗೆ ಅನ್ಯಾಯ ಆಗೇ ಆಗುತ್ತೆ. ಆದ್ರೆ ಪರಸ್ಪರ ಊರುಗಳ ವರ್ಗಾವಣೆಯಿಂದ ಸಮಸ್ಯೆ ಬಗೆಹರಿಯುತ್ತಾ? ಸಂಪೂರ್ಣ ನ್ಯಾಯ ಸಿಗುತ್ತಾ? ಇಲ್ಲವೆ ಇಲ್ಲ. ಡಿ.ಎನ್.ಎ ಯ ಸಂಪಾದಕರ ನಿಲುವು ನನ್ನ ನಿಲುವಿಗೆ ಧ್ವನಿಗೂಡಿಸುತ್ತೆ .

1. ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕು. ಮಹಾರಾಷ್ಟ್ರ ತಾನು ಪ್ರತಿಪಾದಿಸುತ್ತಿರುವ ಊರುಗಳ ಜನರಿಗೆ ತನ್ನ ರಾಜ್ಯದ ಸರ್ಕಾರಿ ನೌಕರಿಗಳ ಪರೀಕ್ಷೆಗಳಿಗೆ ಮತ್ತು ನಾಗರಿಕ ಸೇವೆಗಳಿಗೆ ಮೀಸಲಾತಿ ಅಲ್ಲದಿದ್ದರೂ ಅರ್ಹತೆ ಕೋಡಬೇಕು. ಹಾಗೆನೇ ಕರ್ನಾಟಕ ಸರ್ಕಾರ ಕೂಡ ತನ್ನ ಪ್ರತಿಪಾದನೆಯ ಊರುಗಳಿಗೆ. ಹಾಗಾದಾಗ ಆಯಾ ರಾಜ್ಯದಲ್ಲಿ ಸರ್ಕಾರಿ ನೌಕರಿಗಳಿಂದ ವಂಚಿತರಾಗುತ್ತಿದ್ದೇವೆ ಎನ್ನುವ ಎರಡು ಭಾಷೆಯ ಜನರ ಕೂಗಿಗೆ ಪರಿಹಾರ ಸಿಗುತ್ತದೆ.

2. ವಿವಾದಿತ ಪ್ರದೇಶದಲ್ಲಿ ದ್ವಿಭಾಷಾ ಅಥವಾ ತ್ರಿಭಾಷಾ ಸೂತ್ರ ಅಳವಡಿಸಿ ಎನ್ನುವ ಕೆಲವು ಸಲಹೆಗಳು ತೇಲಿ ಬರುತ್ತಿವೆ. ಇವೆರಡು ಸೂತ್ರಗಳು ಒಳ್ಳೆಯವೆ. ಯಾಕಂದ್ರೆ ಕರ್ನಾಟಕದಲ್ಲಿ 5ನೇ ತರಗತಿಯಿಂದ ಹತ್ತನೆ ತರಗತಿಯವರಗೆ ತೃತಿಯ ಭಾಷೆಯಾಗಿ ಮಾತ್ರ ಕನ್ನಡ ಕಲಿಯುವ ಮರಾಠಿ ಮಾಧ್ಯಮ ಜನರಿಗೆ ಕನ್ನಡದ ದಾಖಲೆ ಪತ್ರಗಳು ಸರಿಯಾಗಿ ಅರ್ಥ ಆಗೊಲ್ಲ. ಹಾಗೇನೆ ಮಹಾರಾಷ್ಟ್ರದ ಕನ್ನಡಿಗರಿಗೆ ಈ ಸಮಸ್ಯೆ ದಿನಾ ಎದುರಾಗುತ್ತೆ. ಇಲ್ಲಿ ದ್ವಿಭಾಷಾ ಸೂತ್ರದಡಿ ಎರಡು ರಾಜ್ಯಗಳಲ್ಲಿ ಕನ್ನಡ ಮತ್ತು ಮರಾಠಿಯಲ್ಲಿ ಎಲ್ಲಾ ದಾಖಲೆಗಳು ಸಿಗೋ ಹಾಗಾದ್ರೆ ಜನರಿಗೆ ಯಾವ ರಾಜ್ಯದಲ್ಲಿದ್ದರೇನು. ಭಾಷಾ ತೊಡಕು ಮತ್ತು ಇನ್ನೊಂದು ಭಾಷೆಯನ್ನು ದ್ವೇಷಿಸುವ ಪ್ರಶ್ನೇನೆ ಬರೋದಿಲ್ಲ. ತ್ರಿಭಾಷಾ ಸೂತ್ರದಡಿ ಹಿಂದಿ ಹೇರಿಕೆ ಸಾಧ್ಯತೆ ಇರುವುದರಿಂದ ದ್ವಿಭಾಷಾ ಸೂತ್ರವೆ ಒಳ್ಳೆಯದು. ಮೂರನೇ ಭಾಷೆಯಾಗಿ ಇಂಗ್ಲಿಷ್ ಆದ್ರೆ ಪರವಾಗಿಲ್ಲ.

3. ಕೇಂದ್ರಾಡಳಿತ ಪ್ರದೇಶದ ಕಲ್ಪನೆಯೆ ಒಂದು ಹುಚ್ಚು ಪ್ರತಿಪಾದನೆ. ಇದರಿಂದ ಮತ್ತೆ ಮೇಲೆ ಹೇಳಿದ ಎಲ್ಲ ತೊಡಕುಗಳು ಎರಡು ರಾಜ್ಯಗಳ ವಿವಾದಿತ ಪ್ರದೇಶದ ಜನರಿಗೆ ಆಗುತ್ತೆ. ಮನೆಯಲ್ಲಿ ಕುಂತು ಕೇಂದ್ರಾಡಳಿತ ಪ್ರದೇಶ ಮಾಡಿ ಅಂತ ಹೇಳೊ ಎಮ್.ಇ.ಎಸ್ ಮತ್ತು ಮಹಾ ರಾಜ್ಯದ ರಾಜಕಾರಣಿಗಳಿಗೆ ಏನು ಗಂಟು ಹೋಗೊಲ್ಲ.

ಈ ಮೇಲೆ ಹೇಳಿದ ಸೂತ್ರಗಳು ಎರಡು ರಾಜ್ಯಗಳ ವಿವಾದಿತ ಪ್ರದೇಶಕ್ಕೆ ಮಾತ್ರ ಅನ್ವಯಿಸಬೇಕು. ಬೇರೆ ಪ್ರದೇಶದಲ್ಲಿ ಆಯಾ ರಾಜ್ಯ ಭಾಷೆಗಳೆ ಸಾರ್ವಭೌಮ. ನಾಚಿಕೆ, ಮಾನ, ಮರ್ಯಾದೆಯಿಲ್ಲದ ಎಮ್.ಇ.ಎಸ್ ಮತ್ತು ಶಿವಸೇನೆ, ಮ.ನ.ಸೇನೆಗಳ ಬಗ್ಗೆ ನಾ ಏನು ಹೇಳಲಾರೆ. ಇದಿಷ್ಟು ನನಗೆ ಅನಿಸಿದ್ದು ಮತ್ತು ವೈಯಕ್ತಿಕ ಅಭಿಪ್ರಾಯ. ಈ ಮೇಲಿನ ಹೇಳಿದ ಬರೀ ಎರಡು ಸೂತ್ರ ಅಳವಡಿಸಿಕೊಂಡರೆ ಸಾಕು ಎರಡು ರಾಜ್ಯಗಳ ನಡುವೆ ಯಾವುದೇ ತಂಟೆನೇ ಇರೋದಿಲ್ಲ ಮತ್ತು ನಮಗೆ ನೆಮ್ಮದಿ ಸಿಗುತ್ತೆ.

ಈ ಬುದ್ದಿ ಸಂಬಂಧಪಟ್ಟ ಮಹಾ ಮುಖಂಡರಿಗೆ ಬರಲಿ ಅಂತಾ ದೇವರಲ್ಲಿ ಬೇಡಿಕೊಳ್ಳುತ್ತೇನೆ. ಹಾಗೆನೇ ಯಾರದೋ ಮೇಲಿನ ದ್ವೇಷಕ್ಕೆ ಬೇರೆ ರಾಜ್ಯದ ಬಸ್ಸುಗಳಿಗೆ ಮತ್ತು ಮರಾಠಿ ಬೋರ್ಡುಗಳಿಗೆ ಕಲ್ಲು ಹೊಡಿಯೋ ದುರ್ಬುದ್ದಿ ಕೆಲ ಪುಂಡ ಕನ್ನಡ ಕಾರ್ಯಕರ್ತರ ಮನಸಿನಿಂದ ಹೋಗಲಿ. ಯಾಕಂದ್ರೆ ನಮಗೆ ಇಲ್ಲಿ ಎರಡು ರಾಜ್ಯಗಳ ಬಸ್ ಸೇವೆ ಅನಿವಾರ್ಯ. ಕರವೇ ಇನ್ನೊಂದು ಎಮ್.ಇ.ಎಸ್ ಆಗದಿರಲಿ ಎಂಬುದೇ ನನ್ನ ಒತ್ತಾಸೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more