ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ ಜನರಿಗೆ ಬೇಕಿರುವುದು ನೆಮ್ಮದಿ ಮಾತ್ರ!

By Prasad
|
Google Oneindia Kannada News

Kittur Chennamma
ಬೆಳಗಾವಿಯನ್ನು ಕನ್ನಡ-ಮರಾಠಿ ಭಾಷಾ ಕಲಹಕ್ಕೆ ಸರ್ವನಾಶವಾಗುವ ಮುನ್ನ ಕಾಪಾಡಬೇಕಿದೆ. ಬರೀ ಭಾಷಾ ಸಮಸ್ಯೆಯಿಂದಲೇ ಈ ಪರಿಯ ದಂಗೆಗಳಾಗಬೇಕಿದ್ದರೆ ಬೆಳಗಾವಿ ಎಂದೋ ಸ್ಮಶಾನವಾಗಬೇಕಿತ್ತು. ವರ್ಷಾನುಗಟ್ಟಲೆ ಬೆಳಗಾವಿಯನ್ನು ಜತನದಿಂದ ಕಾಪಾಡಿಕೊಂಡು ಬಂದಿರುವ ಭಾಷೆಗೂ ಮಿಗಿಲಾದ ಅಂತಃಕರಣದ ಪ್ರೀತಿಯನ್ನು ಹೊಲಸು ರಾಜಕೀಯ ಹೊಸಕಿ ಹಾಕುತ್ತಿದೆ. ಬೆಳಗಾವಿ ನಿಜಕ್ಕೂ ಹೇಗಿದೆ? ನಿಜಕ್ಕೂ ಅಲ್ಲಿನ ಮರಾಠಿಗರಿಗೆ ಕನ್ನಡಿಗರ ಮೇಲೆ ಅಷ್ಟೊಂದು ದ್ವೇಷವಿದೆಯಾ? ನಿಜ ಸಂಗತಿಯನ್ನು ತಿಳಿಯುವ ಒಂದು ಪ್ರಯತ್ನ ಇಲ್ಲಿದೆ.

* ಯಶೋಧರ ಪಟಕೂಟ

ಶೆಟ್ಟಿ ಗಲ್ಲಿ, ಭಡಕಲ ಗಲ್ಲಿ, ಶೇರಿ ಗಲ್ಲಿ, ಚವಾಟ ಗಲ್ಲಿ, ಮರಾಠ ಗಲ್ಲಿ, ಕುಲಕರ್ಣಿ ಗಲ್ಲಿ, ಚವಡಿ ಗಲ್ಲಿ, ಸಪಾರ ಗಲ್ಲಿ... ಒಂದರ ಪಕ್ಕ ಒಂದೊಂದು ಗಲ್ಲಿಗಳು. ಹೊರವಲಯದ ಹೊಸ ಬಡಾವಣೆಗಳ ಮನೆಗಳನ್ನು ಹೊರತುಪಡಿಸಿದರೆ ಪ್ರತಿ ಗಲ್ಲಿಗಳಲ್ಲಿ ಮನೆಗಳು ಹೊಸದಾಗಿ ಮದುವೆಯಾದ ಗಂಡ ಹೆಂಡಿರಂತೆ ಬೆಸೆದುಕೊಂಡಿವೆ. ಮುಂದಿನ ಹಿಂದಿನ ಬಾಗಿಲು ಮುಚ್ಚಿದರೆ ಹಂಚಿನ ಮನೆ ತುಂಬ ಕತ್ತಲೋ ಕತ್ತಲು. ಕಿಟಕಿಗಳಿದ್ದರೂ ಕಡಿಮೆ. ಸದಾ ಚಟುವಟಿಕೆಯಿಂದ ಕೂಡಿರುವ ಗಲ್ಲಿಗಳಲ್ಲಿ ಜೀವಂತಿಕೆಗೆ ಕೊರತೆಯೇ ಇಲ್ಲ.

ಸಂತೆಯಲ್ಲಿ, ಅಂಗಡಿಗಳಲ್ಲಿ, ಥಿಯೇಟರುಗಳಲ್ಲಿ, ಶಾಲೆಗಳಲ್ಲಿ, ಗಲ್ಲಿಗಳಲ್ಲಿ ಹೆಚ್ಚಾನು ಹೆಚ್ಚು ಮರಾಠಿಯದೇ ಕಲರವ. ಕನ್ನಡಿಗರೂ ಅದು ಕೂಡ ತಮ್ಮದೇ ಭಾಷೆ ಎಂಬಂತೆ ಮಾತನಾಡುತ್ತಾರೆ. ಮರಾಠಿ ಬರದ ಕನ್ನಡಿಗರು ಬೆಳಗಾವಿಯಲ್ಲಿ ವಿರಳ. ಯಾರು ಕನ್ನಡಿಗರು, ಯಾರು ಮರಾಠಿಗರು ಎಂದು ಕಂಡುಹಿಡಿಯುವುದು ಕಷ್ಟಸಾಧ್ಯ ಎಂಬಷ್ಟು ಕನ್ನಡಿಗರಲ್ಲಿ ಮರಾಠಿ ಮನೆಮಾಡಿದೆ. 'ಮರಾಠಿ ಬರತ್ತಾ?' ಅಂತ ಕೇಳಿದ್ರೆ. ಕಣ್ಣರಳಿಸಿ 'ಓಹೋ ಬರ್ತದಲ್ಲೋ' ಅಂತ ಹೆಮ್ಮೆಯಿಂದ ಹೆಳ್ತಾರೆ. ಇದು ಒಂದು ಪ್ರತಿಷ್ಠೆಯ ಪ್ರಶ್ನೆ ಕೂಡ. ಭಾಷೆ ಬಗ್ಗೆ ದ್ವೇಷವಾದರೂ ಏತಕೆ?

ಆದರೆ, ಇದೇ ಮಾತನ್ನು ಕೆಲ ಮರಾಠಿಗರ ಬಗ್ಗೆ ಹೇಳುವಂತಿಲ್ಲ. ಒಂದೇ ಒಂದು ಕನ್ನಡ ಅಕ್ಷರವನ್ನು ಮಾತನಾಡದ ಅನೇಕ ಮರಾಠಿಗರು ದಂಡಿಯಾಗಿ ಸಿಗುತ್ತಾರೆ. ಕನ್ನಡ ಕಲಿಯುವ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವುದೂ ಇಲ್ಲ. ಇದನ್ನೂ ಕನ್ನಡದ ಬಗೆಗಿನ ದ್ವೇಷವೆಂದು ಹೇಳಲಾಗದು. ಅದು ಅವರು ತಮ್ಮ ತಾಯ್ನುಡಿಯ ಬಗ್ಗೆ ಇಟ್ಟುಕೊಂಡಿರುವಂಥ ಅಪಾರ ಪ್ರೇಮ, ಅಭಿಮಾನ. ಇಷ್ಟಿದ್ದರೂ ಕನ್ನಡಿಗರು ಮತ್ತು ಮರಾಠಿಗರ ನಡುವೆ ವ್ಯವಹಾರಕ್ಕೆಂದೂ ಕುಂದು ಬರುವುದಿಲ್ಲ. ಅವರು ಇವರಿಗೆ ಮನೆ ಬಾಡಿಗೆ ನೀಡುತ್ತಾರೆ, ಇವರು ಅವರಿಗೆ ಸಹಾಯಹಸ್ತ ಚಾಚುತ್ತಾರೆ. ಇಷ್ಟೊಂದು ತ್ವೇಷಮಯ ವಾತಾವರಣ ಇದ್ದಾಗ್ಯೂ ಈ ಬಗೆಯ ಬಾಂಧವ್ಯ ಹೇಗೆ ಸಾಧ್ಯ?

ಮಹಾರಾಷ್ಟ್ರದ ರಾಜಕಾರಣಿಗಳು ಬೆಳಗಾವಿ ಜನರನ್ನು ನೆಮ್ಮದಿಯಾಗಿ ಇರಲು ಬಿಡುವರೆ?
ಗಣೇಶ ಚತುರ್ಥಿಯನ್ನು ಕನ್ನಡಿಗರು ಮತ್ತು ಮರಾಠಿಗರು ಒಗ್ಗೂಡಿ ಸಂಭ್ರಮದಿಂದ ಆಚರಿಸುವಷ್ಟು ಬೇರೆ ಎಲ್ಲೂ ಆಚರಿಸಲಾಗುವುದಿಲ್ಲ. ಹೋಳಿ ಹುಣ್ಣಿಮೆ ಕೂಡ ಅಷ್ಟೇ ಉತ್ಸಾಹದಿಂದ ಇಬ್ಬರೂ ಒಟ್ಟುಗೂಡಿ ಆಚರಿಸುತ್ತಾರೆ. ಕನ್ನಡಿಗರು ಮತ್ತು ಮರಾಠಿಗರು ಒಬ್ಬರನ್ನೊಬ್ಬರು ದ್ವೇಷಿಸುತ್ತಾರೆಂದರೆ, ಇಂಥ ಹಬ್ಬಗಳನ್ನು ಒಟ್ಟಾಗಿ ಆಚರಿಸಲು ಹೇಗೆ ಸಾಧ್ಯ? ಕನ್ನಡಿಗರು, ಮರಾಠಿಗರು ಮತ್ತು ಮುಸ್ಲಿಂರ ನಡುವೆ ಒಂದು ವಿಚಿತ್ರವಾದ ಬಾಂಧವ್ಯ ಕಾಣಸಿಗುವುದು ಬೆಳಗಾವಿಯಲ್ಲಿ ಮಾತ್ರ. ಮರಾಠಿಗರ ವಿರುದ್ಧ ಕನ್ನಡಿಗರು ಮತ್ತು ಮುಸ್ಲಿಂರು ಒಂದಾಗುತ್ತಾರೆ, ಕನ್ನಡದ ವಿರುದ್ಧ ತಂಟೆ ಮಾಡಬೇಕಿದ್ದರೆ ಮರಾಠಿಗರು ಮತ್ತು ಮುಸ್ಲಿಂರು ಕೈಕೈ ಜೋಡಿಸುತ್ತಾರೆ, ಮುಸ್ಲಿಂರ ವಿರುದ್ಧ ದಂಗೆ ಏಳಬೇಕಿದ್ದರೆ ಕನ್ನಡಿಗರು ಮತ್ತು ಮರಾಠಿಗರು ಒಟ್ಟಾಗಿರುತ್ತಾರೆ. ಇದು ನಿಜಕ್ಕೂ ವಿಸ್ಮಯ.

ಇದನ್ನು ರಾಜಕೀಯ ನಾಯಕರುಗಳು ಅರಿತುಕೊಂಡರೆ ಬಹುಶಃ ಈಗ ಉದ್ಭವವಾಗಿರುವ ಸನ್ನಿವೇಶ ಮತ್ತೆ ಉದ್ಭವಾಗಲಾರದು. ಮರಾಠಿ ಭಾಷಿಗರು ಹೆಚ್ಚಿರುವ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಕೂಗು ಹಳೆಯದಾದರೂ, ಅದನ್ನು ಮತ್ತೆ ಮತ್ತೆ ಕೆದಕುತ್ತಿರುವವರು ಮಹಾರಾಷ್ಟ್ರದ ರಾಜಕಾರಣಿಗಳು ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ ಮಾತ್ರ. ಮಹಾರಾಷ್ಟ್ರ ಗಡಿಯಲ್ಲಿನ ಊರುಗಳನ್ನು ತೆಗೆದುಕೊಂಡರೆ ಸಂಮೃದ್ಧವಾಗಿರುವುದು ಬೆಳಗಾವಿ ಮಾತ್ರ. ಮಹಾರಾಷ್ಟ್ರದಲ್ಲಿನ ಗಡಿಯಲ್ಲಿನ ಹಳ್ಳಿಗಳನ್ನು ಗಮನಿಸಿದರೆ ಅಭಿವೃದ್ಧಿಯ ಲವಲೇಶವೂ ಅಲ್ಲಿ ಕಂಡುಬರುವುದಿಲ್ಲ.

ಘಟಪ್ರಭಾ ಮತ್ತು ಮಲಪ್ರಭಾ ನದಿಗಳು ಬೆಳಗಾವಿ ಜಿಲ್ಲೆಯ ಜೀವನಾಡಿ. ಕರ್ನಾಟಕದ ನಯಾಗರಾ ಗೋಕಾಕ ಜಲಪಾತ ಜಿಲ್ಲೆಯ ಆಕರ್ಷಣೆಯ ಕೇಂದ್ರಬಿಂದು. ರಾಜ್ಯದ ಮಂಡ್ಯ ಜಿಲ್ಲೆ ಬಿಟ್ಟರೆ ಬೆಳಗಾವಿಯಲ್ಲೇ ಹೆಚ್ಚು ಕಬ್ಬು ಬೆಳೆಯುತ್ತಾರೆ. ಫಲವತ್ತಾದ ಮಣ್ಣಿನಿಂದ ರೈತರು ಜಿಲ್ಲೆಯಲ್ಲಿ ಇನ್ನೂ ಜೀವಂತವಾಗಿದ್ದಾರೆ. ವ್ಯವಸಾಯವೇ ಇಲ್ಲಿನ ಜನರ ಜೀವಾಳ.

ರಾಜಕಾರಣಿಗಳು ಬೆಳಗಾವಿ ಸಮಸ್ಯೆಯನ್ನು ತಮ್ಮ ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೂ ಕೆಲ ಕಾರಣಗಳಿವೆ. ಬೆಳಗಾವಿ ಸಂಮೃದ್ಧವಾಗಿರುವುದು ಒಂದು ಕಾರಣವಾದರೆ, ತಕರಾರು ತೆಗೆಯದಿದ್ದರೆ ಕೆಲ ರಾಜಕಾರಣಿಗಳಿಗೆ ನಿದ್ದೆ ಬರುವುದಿಲ್ಲ ಎಂಬುದು ಇನ್ನೊಂದು ಕಾರಣ. ಮರಾಠಿ ಭಾಷಿಗರು ಬೆಳಗಾವಿಯಲ್ಲಿ ಹೆಚ್ಚಾಗಿದ್ದಾರೆ ಎನ್ನುವುದು ಒಂದು ನೆಪ ಮಾತ್ರ.

ಕೆಲ ಊರುಗಳಲ್ಲಿ ಮರಾಠಿಗರು ಹೆಚ್ಚಿದ್ದಾರೆ, ಇನ್ನು ಕೆಲ ಹಳ್ಳಿಗಳಲ್ಲಿ ಮರಾಠಿಯ ಸುಳಿವು ಕೂಡ ಸಿಗುವುದಿಲ್ಲ. ನಿಪ್ಪಾಣಿಯಂಥ ಸಣ್ಣ ನಗರಕ್ಕೆ ಹೋದರೆ ಅಲ್ಲಿಯದು ಅಪ್ಪಟ ಮರಾಠಿ ವಾತಾವರಣ. ಕನ್ನಡ ಅಲ್ಲಿ ದುರ್ಬೀನು ಹಾಕಿ ಹುಡುಕಿದರೂ ಸಿಗುವುದಿಲ್ಲ. ಬಲವಂತವಾಗಿ ಕನ್ನಡದಲ್ಲಿ ಮಾತಾಡಿದರೆ ಮಾತ್ರ ಕನ್ನಡದಲ್ಲಿ ಉತ್ತರಿಸುವ ಸೌಜನ್ಯ ತೋರಿಸುತ್ತಾರೆ. ಬೆಳಗಾವಿ ಸುತ್ತಲಿನ ಹಳ್ಳಿಗಳಾದ ಕೆಕೆ ಕೊಪ್ಪ, ಕುಡಚಿ ಅಂತಲ್ಲಿ ಹೋದರೆ ಕನ್ನಡಿಗರು ಹೆಮ್ಮೆ ಪಡುವಂತೆ ಕನ್ನಡದ ವಾತಾವರಣವಿದೆ. ಅದೇ ನಗರದಲ್ಲಿನ ಎಳ್ಳೂರು ಎಂಬ ಪ್ರದೇಶಕ್ಕೆ ಹೋದರೆ 'ಇದು ಮಾಹಾರಾಷ್ಟ್ರ ರಾಜ್ಯ' ಎಂಬ ಬೋರ್ಡೇ ಸಿಗುತ್ತದೆ.

ಆದರೂ ಒಂದು ಮಾತಂತೂ ಹೇಳಲೇಬೇಕು. ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರಬಲವಾದಂದಿನಿಂದ ಮರಾಠಿಗರು ಹತೋಟಿಗೆ ಬಂದಿದ್ದಾರೆ. ಎಂಇಎಸ್ ಆಟಾಟೋಪಗಳು ಹಿಡಿತಕ್ಕೆ ಸಿಕ್ಕಿವೆ. ಕನ್ನಡ ಮೇಯರ್ ಹುದ್ದೆ ಅಲಂಕರಿಸುವಂತಾಗಿದೆ. ಕನ್ನಡಿಗರು ಕೊಂಚ ನೆಮ್ಮದಿಯನ್ನೂ ಕಂಡಿದ್ದಾರೆ. ಆದರೆ, ಇದೆಲ್ಲ ಎಷ್ಟು ದಿನ? ದಬ್ಬಾಳಿಕೆಯಿಂದ ಹಿಡಿತ ಸಾಧಿಸುವುದು ಸರಿಯಾದ ಮಾರ್ಗವೆ? ಬಲವಂತದಿಂದ ಮರಾಠಿಗರಲ್ಲಿ ಇನ್ನಷ್ಟು ದ್ವೇಷ ಬೆಳೆಯುತ್ತದೆಯೇ ಹೊರತು ಸಾಮರಸ್ಯ ಬೆಳೆಯುವುದಿಲ್ಲ.

ಮಹಾಜನ ವರದಿಯ ಪ್ರಕಾರ ಬೆಳಗಾವಿ ಕರ್ನಾಟಕಕ್ಕೇ ಸೇರಬೇಕು. ಇದು ನಮ್ಮ ರಾಜ್ಯದ ಅವಿಭಾಜ್ಯ ಅಂಗ ಎಂಬುದರಲ್ಲಿ ಎರಡು ಮಾತೇ ಇಲ್ಲ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆ, ಮಹಾರಾಷ್ಟ್ರಕ್ಕೆ ನೀವು ಹೋಗಲು ಇಚ್ಛಿಸುತ್ತೀರಾ ಎಂದು ನೆಮ್ಮದಿಯಿಂದ ಇರುವ ಮರಾಠಿಗರನ್ನೇ ಕೇಳಿ ನೋಡಿ. ಬೇಡವೇ ಬೇಡ ಎಂದು ಹೇಳುತ್ತಾರೆ. ಯಾವುದೇ ದಂಗೆಗಳು ಸಮಾಜ ವಿರೋಧಿ ಗುಂಪುಗಳಿಂದ ಆಗುವಂತೆ ಬೆಳಗಾವಿಯ ಗಲಭೆಗಳು ಕೂಡ. ಬೆಳಗಾವಿಯಲ್ಲಿ ನೆಲೆವೂರಿರುವ ಮರಾಠಿಗರನ್ನು ಕೇಳಿದರೆ ಅವರಿಗೆ ಇದೆಲ್ಲ ಬೇಕಾಗಿಯೇ ಇಲ್ಲ. ಅವರಿಗೆ ಬೇಕಾಗಿರುವುದು ನೆಮ್ಮದಿ ಮಾತ್ರ. ಮಹಾರಾಷ್ಟ್ರದ ರಾಜಕಾರಣಿಗಳು ಇಲ್ಲಿನ ಜನರನ್ನು ನೆಮ್ಮದಿಯಾಗಿ ಇರಲು ಬಿಡುವರೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X