ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಹೆಮ್ಮೆಯ ಪ್ರಭಾತ್ ಕಲಾವಿದರು

By Shami
|
Google Oneindia Kannada News

TV Gopinathdas, founder - Prabhat Kalavidaru
ಕನ್ನಡ ನಾಡಿನ ಹೆಮ್ಮೆಯ ನೃತ್ಯ ನಾಟಕ ಪರಿವಾರ ಪ್ರಭಾತ ಸಂಸ್ಥೆ ಒಂದು ಜೀವಂತ ವಾಹಿನಿಯಾಗಿ 75 ವರ್ಷಗಳಿಂದ ಭೋರ್ಗರೆಯುತ್ತಾ ಹರಿದುಬರುತ್ತಿದೆ. ಹಲವಾರು ಪೀಳಿಗೆಗಳನ್ನು ದಾಟಿ ನಡೆದಿದೆ. ಹರಿಕಥಾ ರತ್ನ ಟಿ.ವಿ.ಗೋಪೀನಾಥ ದಾಸರು ತಮ್ಮ ಸಹೋದರರೊಂದಿಗೆ ಸುಮಾರು 1930ರಲ್ಲಿ ಪ್ರಭಾತ ಕಲಾಸಂಘ ಎನ್ನುವ ಸಂಸ್ಥೆಯ ಹೆಸರಿನಡಿ ಪೌರಾಣಿಕ ನಾಟಕಗಳನ್ನು ಆಡಿದರು. ನಂತರದ ವರ್ಷಗಳಲ್ಲಿ ಪ್ರಭಾತ ಕಲಾ ಸಂಘ - ಪ್ರಭಾತ ಕಲಾವಿದರು ಎನ್ನುವ ಹೆಸರನ್ನು ಪಡೆಯಿತು. ಗೋಪೀನಾಥ ದಾಸರು ಬರೆದು ರಚಿಸಿದ ಹಲವಾರು ನಾಟಕಗಳು ಪ್ರದರ್ಶನ ಕಂಡವು.

1969ರ ನಂತರ ಪ್ರಭಾತ ಕಲಾವಿದರು ಗೋಪೀನಾಥ ದಾಸರ ನೇತೃತ್ವದಲ್ಲಿ ಬ್ಯಾಲೆ ಶೈಲಿಯ ನಾಟಕಗಳು ಪ್ರದರ್ಶಿಸಲು ತೊಡಗಿದರು. ಈ ನವ-ವಿಧಾನಗಳಿಂದ ಭಾರತೀಯ ನೃತ್ಯ ರೂಪಕಗಳು ಇತಿಹಾಸದಲ್ಲೇ ಹೆಗ್ಗಳಿಕೆಯನ್ನು ಸಾಧಿಸಿತು. ಗೋವಿನ ಕಥೆ, ಕಿಂದರ ಜೋಗಿ ಇವು ಜಾನಪದದ ಕಥೆಗಳಾದರೆ, ಧರ್ಮಭೂಮಿ, ಕರ್ನಾಟಕ ವೈಭವ ಮುಂತಾದವುಗಳು ಇತಿಹಾಸದ ಹಿನ್ನಲೆಯ ವಸ್ತುಗಳಾಗಿದ್ದವು. ಆದರೂ ಪೌರಾಣಿಕ ಕಥೆಗಳನ್ನು ಕೈ ಬಿಟ್ಟಿರಲಿಲ್ಲ. ಮೋಹಿನಿ ಭಸ್ಮಾಸುರ, ಭಗವದ್ಗೀತೆ ಮುಂತಾದ ಪುರಾಣ ವಸ್ತುಗಳ ಆಯ್ಕೆಯೂ ಇತ್ತು.

ಇವುಗಳೊಂದಿಗೆ ಪಾಶ್ಚಿಮಾತ್ಯ ಕಥಾಹಂದರವನ್ನು ಹೊಂದಿದ ಸಿಂಡ್ರೆಲಾ ನೃತ್ಯ ನಾಟಕ ಹೊಸ ರೀತಿಯಲ್ಲಿ ಪ್ರಯೋಗವಾಗಿ ನೂರಾರು ಪ್ರದರ್ಶನಗಳು ಆದವು. ಅದು ಇಂದಿಗೂ ಮುಂದುವರೆದು ಜನವರಿ 29, 2007ರಂದು 1001ನೇ ಪ್ರದರ್ಶನ ಕಂಡಿತು. ಕರ್ನಾಟಕದಲ್ಲಿ ಇದು ಒಂದು ದಾಖಲೆ ಎನ್ನುವುದನ್ನು ಮರೆಯಲಾಗದು. ರೇಷ್ಮೆ ವಸ್ತ್ರದ ಉಗಮದ ಕಥಾವಸ್ತುವನ್ನೊಳಗೊಂಡ ಕ್ರೌನ್ ಆಫ್ ಕ್ರಿಯೇಷನ್ (ದಿವ್ಯ ಸೃಷ್ಟಿ), ಪರಿಸರದ ಪ್ರಾಮುಖ್ಯತೆಯನ್ನು ಹೇಳುವ ಅಭಿಜ್ಞಾನ ಯಶಸ್ವಿಯಾಗಿ ಹೊರಬಂದ ಕಾರ್ಯಕ್ರಮಗಳು.

1982ರ ನಂತರ, ಸಂಸ್ಥೆಯ ರೂವಾರಿ ಗೋಪೀನಾಥ ದಾಸರು ದಿವಂಗತರಾದ ಮೇಲೆ, ಅವರ ಹಿರಿಯ ಮಗನಾದ ಟಿ.ಜಿ. ವೆಂಕಟೇಶಾಚಾರ್ ಮತ್ತು ಸಹೋದರರು ಓಡುತ್ತಿದ್ದ ರಥದ ಚುಕ್ಕಾಣಿ ಹಿಡಿದು ಶ್ರೀನಿವಾಸ ಕಲ್ಯಾಣ, ಶ್ರೀ ಕೃಷ್ಣ ವೈಜಯಂತಿ, ಶ್ರೀ ರಾಮ ಪ್ರತಿಕ್ಷಾ, ಮಹಿಷಾಸುರ ಮರ್ಧಿನಿ ಮುಂತಾದ ನೃತ್ಯನಾಟಕಗಳ ಯಶಸ್ವಿ ಪ್ರಯೊಗಗಳನ್ನು ಮಾಡಿದ್ದಾರೆ. ಈ ಕಾರ್ಯಕ್ರಮಗಳೆಲ್ಲಾ 5,000ಕ್ಕೂ ಮೇಲ್ಪಟ್ಟು ಪ್ರದರ್ಶನಗಳನ್ನು ಕಂಡಿವೆ.

ಪ್ರಭಾತ ಕಲಾವಿದರು ಕರ್ನಾಟಕವಲ್ಲದೆ ದೇಶಾದ್ಯಂತ ನೂರಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಹಲವಾರು ಕಾರ್ಯಕ್ರಮಗಳು ಹಿಂದಿ, ಆಂಗ್ಲ, ತೆಲುಗು, ತಮಿಳು, ಸಂಸ್ಕೃತ ಭಾಷೆಗಳಿಗೂ ಭಾಷಾಂತರಗೊಂಡು ಆಯಾ ಪ್ರಾಂತ್ಯಗಳಲ್ಲಿ ಪ್ರದರ್ಶನಗಳನ್ನು ಕಂಡಿವೆ. ಇದೂ ಅಪರೂಪವಾದ ದಾಖಲೆ. ದೆಹಲಿಯಲ್ಲಿ ಪ್ರತಿ ವರ್ಷವೂ ನಡೆಯುತ್ತಿದ್ದ ಇಂಡಸ್ಟ್ರಿಯಲ್ ಟ್ರೆಂಡ್ ಫೇರ್‌ನಲ್ಲಿ ಏಳು ವರ್ಷಗಳೂ ಸತತವಾಗಿ ವಿಭಿನ್ನ ಪ್ರದರ್ಶನಗಳನ್ನು ನೀಡಲಾಗಿದೆ. ಸಿಂಗಪುರ, ಮಲೇಶಿಯಾ ದೇಶಗಳಲ್ಲಿ ಬ್ಯಾಲೆ ಪ್ರದರ್ಶನಗಳು ನಡೆದಿವೆ. 1993ರಲ್ಲಿ ಅಮೇರಿಕಾದ ಬೇರೆ ಬೇರೆ ನಗರಗಳಲ್ಲಿ ಪ್ರದರ್ಶನಗಳನ್ನು ನೀಡಿ ಜನಮನ್ನಣೆ ಪಡೆದಿದೆ. ಇದೇ ಸೆಪ್ಟೆಂಬರ್ ನಲ್ಲಿ ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ನಡೆಯುವ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪ್ರದರ್ಶನ ನೀಡಲು ಪ್ರಭಾತ ಕಲಾವಿದರ ತಂಡ ಅಮೆರಿಕಾಗೆ ತೆರಳುತ್ತಿದೆ.

ಪ್ರಭಾತ ಸಂಸ್ಥೆಯ 75 ವರ್ಷಗಳ ಕಾಲಾವಧಿಯಲ್ಲಿ, ಅದು ಸಂಪಾದಿಸಿದ ಕೀರ್ತಿಯ ಶಿಖರವನ್ನು ಒ೦ದೊಂದೇ ಹತ್ತಿ ಅದರ ಎತ್ತರ ಬಿತ್ತರವನ್ನು ಅಳೆಯುವುದು ಕಷ್ಟ. ಇಷ್ಟು ಮಾತ್ರ ಹೇಳಬಹುದು, ಈಗ ಆಗಿರುವ ಕಲಾ ಸೇವೆ ಅತ್ಯಲ್ಪ, ಇನ್ನೂ ಆಗಬೇಕಾದದ್ದು ಬೆಟ್ಟದಷ್ಟಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X