ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಬಸ್ಸುಗಳಲ್ಲೇ ಕನ್ನಡಕ್ಕೆ ಜಾಗವಿಲ್ಲ

By * ಉಮೇಶ್ ಸುಬ್ರಮಣ್ಯಂ, ಬೆಂಗಳೂರು
|
Google Oneindia Kannada News

Umesh Subramanyam, Bengaluru
(ಹಿಂದಿನ ಪುಟದಿಂದ ಮುಂದುವರಿದಿದೆ...)

4) ನಮ್ಮ ಬಸ್ಸುಗಳಲ್ಲೇ ಕನ್ನಡಕ್ಕೆ ಜಾಗವಿಲ್ಲ. ನಮ್ಮ ಬೆಂಗಳೂರು ನಗರ ಸಾರಿಗೆ ಬಸ್ಸುಗಳಲ್ಲಿ ವಿದ್ಯುನ್ಮಾನ ಬೆಳಕಿನಲ್ಲಿ ತಲುಪುವ ಸ್ಥಳಗಳ ಹೆಸರು ಹೆಚ್ಚಾಗಿ ಇಂಗ್ಲಿಷ್ ನಲ್ಲಿ ಇರುತ್ತದೆ. ಕೆಲವು ಕಡೆ ಬರೀ ಇಂಗ್ಲಿಷ್ ನಲ್ಲಿ ಇರುತ್ತದೆ.[ಉದಾ: 96c ಮತ್ತು ಇತರೆ ಬಸ್ಸುಗಳು]. ಮೊದಲು ಕನ್ನಡದಲ್ಲಿ ಕಡ್ಡಾಯವಾಗಿ ಬರೆಯಲಿ. ನಂತರ ಇಂಗ್ಲಿಷ್ ನಲ್ಲಿ ಬರೆಯಲಿ. ಕನ್ನಡದಲ್ಲಿ ಸರಿಯಾಗಿ ಬರೆಯದಿದ್ದಲ್ಲಿ ಕನ್ನಡ ಪ್ರಾಧಿಕಾರದವರು ಕ್ರಮ ತೆಗೆದುಕೊಳ್ಳಬೇಕು.

ಇನ್ನು ಪರ ರಾಜ್ಯದ ಬಸ್ಸುಗಳಲ್ಲಿ ಕನ್ನಡಕ್ಕೆ ಸ್ಥಾನವೇ ಇಲ್ಲ. ಬೇರೆ ರಾಜ್ಯದ ಜೊತೆ ಒಪ್ಪಂದ ಮಾಡಿಕೊಂಡಾಗ, ಕನ್ನಡ ಅಕ್ಷರಗಳ ಗಾತ್ರ ಎಷ್ಟಿರಬೇಕು ಎಂಬಿತ್ಯಾದಿ ವಿಚಾರಗಳನ್ನು ಸರಿಯಾಗಿ ಒಪ್ಪಂದ ಮಾಡಿಕೊಳ್ಳಬೇಕು. ತಮಿಳು, ತೆಲುಗು, ಮರಾಠಿ, ಮಲೆಯಾಳಿ ಭಾಷೆಗಳಲ್ಲಿ ಫಲಕ ಇರುತ್ತದೆ. ಒಂದೂ ಕಡೆ ಕನ್ನಡದಲ್ಲಿ ಬರೆದಿರುವುದಿಲ್ಲ. ಆದರೆ ನಮ್ಮ ರಾಜ್ಯದ ಬಸ್ಸುಗಳಲ್ಲಿ ಆಯಾ ರಾಜ್ಯದ ಭಾಷೆ ಪ್ರಯೋಗಿಸಿ ಉದಾರತನ ತೋರಿಸುತ್ತಿದ್ದಾರೆ. ಬೇರೆ ರಾಜ್ಯದ ಬಸ್ಸುಗಳಲ್ಲಿ ಕನ್ನಡದಲ್ಲಿ ಸರಿಯಾದ ರೀತಿಯಲ್ಲಿ, ಸರಿಯಾದ ಗಾತ್ರ್ರದಲ್ಲಿ, ನಾಲ್ಕೂ ಕಡೆ ಬರೆಯುವಂತೆ ಒತ್ತಾಯಿಸಬೇಕು.

5) ರೈಲಿನಲ್ಲಿ ಕನ್ನಡದ ಕೊಲೆ / ಅಪಮಾನ

ಬೆಂಗಳೂರಿನಿಂದ ಶಿವಮೊಗ್ಗ ಹಾಗೂ ನಮ್ಮ ರಾಜ್ಯದ ಇತರೆ ಸ್ಥಳಗಳಿಗೆ ಮಾತ್ರ ಹೋಗುವ ರೈಲಿನಲ್ಲಿ ಕೂಡ ಕನ್ನಡಕ್ಕಿಂತ ತಮಿಳಿಗೆ ಸ್ಥಾನ ಕೊಟ್ಟಿದ್ದಾರೆ. ತಮಿಳು ಪೊಲೀಸರ ಸೂಚನೆಗಳು ಇವೆ. ಬೆಂಗಳೂರು ರೈಲ್ವೆ ಸ್ಟೇಷನ್ ನಲ್ಲಿ [ಉದಾ: ಪ್ಲಾಟ್ ಫಾರಂ 5 ಹಾಗೂ 6] ಇರುವ ಕೆಂಪು ಬೋರ್ಡುಗಳನ್ನು ನೋಡಿದರೆ ಅದು ಕನ್ನಡದ್ದೆಂದು ಯಾರಿಗೂ ತಿಳಿಯುವಂತಿಲ್ಲ. ಇನ್ನು ಕಾಫಿ ಟೀ ಅಂಗಡಿಗಳೆಲ್ಲಾ ಇತರೆ ಭಾಷೆಯವರದ್ದೆ. ಬೇರೆ ರಾಜ್ಯಕ್ಕೆ ಹೋಗುವ [ಕರ್ನಾಟಕದಿಂದ ಹೊರಡುವ ] ರೈಲ್ ಗಳಲ್ಲಿ ಕಡ್ಡಾಯವಾಗಿ ಕನ್ನಡಕ್ಕೆ ಸರಿಯಾದ ಸ್ಥಾನ ಸಿಗುವಂತಾಗಬೇಕು. ಯಶವಂತಪುರ ಅನ್ನುವುದು ಯಸವಂತಪೂರ್ ಅಥವಾ ಯಶವಂತ್ ಪೂರ್ ಆಗುವುದು ನಿಲ್ಲಬೇಕು.

6) ಊರಿನ ಹೆಸರು ಹೇಳಲು ಅಂಜಿಕೆಯೇಕೆ?

ಕನ್ನಡದ ಸೌಂದರ್ಯ ಇರುವುದೇ 'ಅ'ಕಾರ, 'ಇ'ಕಾರ , 'ಉ'ಕಾರ ಗಳಲ್ಲಿ. ಜಯನಗರ, ಶಿವಾಜಿನಗರ ಇವುಗಳು ಜಯನಗರ್, ಶಿವಾಜಿನಗರ್ ಆಗುವುದು ತಪ್ಪಬೇಕು. ಯಾವುದೇ ಭಾಷೆಯಲ್ಲಿ ಬರೆಯಲಿ, ನಮ್ಮ ಊರಿನ ಜಾಗಗಳ ಹೆಸರುಗಳು ಕನ್ನಡದ್ದೇ ಆಗಿರಬೆಕು.

ಪಡುಕೋಣೆ ನಮ್ಮ ರಾಜ್ಯದ ಪಶ್ಚಿಮ ಭಾಗದಲ್ಲಿ ಇರುವ ಒಂದು ಹಳ್ಳಿ. ಅದು ಪ್ರಸಿದ್ಧಿಗೆ ಬಂದಿದ್ದು, ಪ್ರಕಾಶ್ ಪಡುಕೋಣೆಯವರಿಂದ. ಅವರ ಸಾಧನೆಯಿಂದ ರಾಜ್ಯಕ್ಕೆ ಕೀರ್ತಿ ಬಂದಿದೆ. ಅವರ ಬಗ್ಗೆ ಬರೆಯುವಾಗ ಎಲ್ಲರೂ 'ಪಡುಕೋಣೆ' ಎಂದು ಬರೆಯುತ್ತಿದ್ದರು. ಈಗ ಅವರ ಪುತ್ರಿ ದೀಪಿಕಾ ಅದನ್ನು 'ಪದುಕೊನ್' ಎಂದು ಹಾಳು ಮಾಡುತ್ತಿದ್ದಾರೆ. ಅವರ ಉಪನಾಮದ ಬಗ್ಗೆ ಅವರಿಗೆ ಹೆಮ್ಮೆ ಇರಬೇಕಾಗಿತ್ತು . ಅವರೇ ತಮ್ಮ ಹೆಸರನ್ನು ಸರಿಯಾಗಿ ಹೇಳಿ ಎಂದು ಎಲ್ಲರಿಗೂ ಹೇಳ ಬೇಕಾಗಿತ್ತು, ಅದರ ಬದಲು ಅವರು 'ದಕ್ಷಿಣದಲ್ಲಿ ಪಡುಕೋಣೆ, ಉತ್ತರದವರಿಗೆ ಪದೊಕೊನ್ ಎಂದು ಹೇಳಿ ತಮ್ಮ ಹೆಸರನ್ನೇ ಕೊಂದಿದ್ದಾರೆ. ಹೀಗೆ ನಮ್ಮವರ ಉಪೇಕ್ಷೆಯಿಂದ ಕನ್ನಡಕ್ಕೆ ಅವಮಾನ ಆಗುತ್ತಿದೆ. ಮೊನ್ನೆ ಬೆಂಗಳೂರಿನಲ್ಲಿ ಕ್ರಿಕೆಟ್ ನಡೆದಾಗ ಒಬ್ಬ ವಿದೇಶಿ ಅವರ ಹೆಸರನ್ನು ಸರಿಯಾಗಿ ಹೇಳಿದ್ದು ಖುಷಿ ಕೊಟ್ಟಿತು. ಅಂತುಲೆ, ಮಾನೆ, ಬಹುತಲೆ ಇತ್ಯಾದಿ ಹೇಳುವವರಿಗೆ ಪಡುಕೋಣೆ ಕಷ್ಟವಲ್ಲ. ಚಿತ್ರರಂಗದಲ್ಲಿ ಇರುವವರೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು.

7) ಐಪಿಎಲ್ ನಲ್ಲಿ ಕನ್ನಡ ಕಲೆಗೆ ಅವಕಾಶ

ಐಪಿಎಲ್ ನಲ್ಲಿ ವಿದೇಶಿ ಹುಡುಗಿಯರು ಕುಣಿಯುವ ಬದಲು, ನಮ್ಮ ರಾಜ್ಯದ ಯಕ್ಷಗಾನ, ಡೊಳ್ಳುಕುಣಿತ, ಕರಡಿ ಕುಣಿತ ಇವುಗಳಿಗೆ ಪ್ರೋತ್ಸಾಹ ಕೊಡುವಂತೆ ಒತ್ತಾಯಿಸಬೇಕು. ಕನ್ನಡದಲ್ಲಿ ವಿವರಣೆ ಕೊಡುವಂತೆ ಮಾಡಬೇಕು. ಇತ್ತೀಚೆಗೆ ಮುಖ್ಯಮಂತ್ರಿ ಚಂದ್ರು ಅವರು ವಿದೇಶಿ ಮಹಿಳೆಯರ ಕುಣಿತದ ಬದಲು ಕನ್ನಡ ಕಲಾವಿದರ ನೃತ್ಯಗಳಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರ ಮಾತು ಯಾರಿಗೆ ಕೇಳಿಸಿತೋ ಗೊತ್ತಿಲ್ಲ. ಎಲ್ಲರ ಕಿವಿಗೆ ಬೀಳುವ ಸಮಯಕ್ಕೆ ಐಪಿಎಲ್ 4 ಬಂದಿರುತ್ತದೆ.

8) ಎಟಿಎಂನಲ್ಲಿ ಕನ್ನಡ ಮಾಯ

ಯಶವಂತಪುರದ ದಾರಿ ಆಂಜನೇಯ ಗುಡಿಯ ಎದುರು ಇರುವ ಎಟಿಎಂನಲ್ಲಿ ಮರಾಠಿ ಭಾಷೆಯ ಯಂತ್ರ ಇದೆ. ಯಾಕೆ? ರಾಜ್ಯದ ಎಲ್ಲ ಕಡೆ ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಮಾತ್ರ ಎಟಿಎಂ ಇರಬೇಕು.

9) ನಮ್ಮ ಚಿತ್ರತಾರೆಯರ ಸಂದರ್ಶನದ ಪರಿ

ನಮ್ಮ ರಾಜ್ ಕುಮಾರ್ ಹಾಗೂ ಹಿಂದಿಯ ಅಮಿತಾಭ್ ಬಚ್ಚನ್ ಯಾವುದೇ ಸಂದರ್ಶನದಲ್ಲಿ ಪೂರ್ಣ ಕನ್ನಡ / ಹಿಂದಿ ಭಾಷೆಯ ಪದಗಳನ್ನು ಮಾತ್ರ ಬಳಸುವುದನ್ನು ಗಮನಿಸಿದ್ದೇವೆ. ಆದರೆ ಈಗಿನ ಎಲ್ಲಾ ಕನ್ನಡ ನಟ ನಟಿಯರು ಕನ್ನಡದ ಪದಗಳನ್ನು ಒಗ್ಗರಣೆಯಂತೆ ಉಪಯೋಗಿಸುತ್ತಾರೆ. ಬರೀ ಇಂಗ್ಲಿಷ್ನಲ್ಲಿ ಮಾತಾಡುತ್ತಾರೆ. ಅವರನ್ನು ಅನುಸರಿಸುವ ಆಸೆ ಇರುವ ಅಭಿಮಾನಿಗಳಿಗೆ ಏನು ಮಾಡಬೇಕೆಂದು ತೋರುತ್ತಿಲ್ಲ. ವಿಪರೀತ ಇಂಗ್ಲಿಷ್ ನಲ್ಲಿ ಮಾತಾಡುವ ವಿಪರೀತ ಹುಚ್ಚು ಯಾಕೆ?

ಹೀಗೆ ಈ ಸಂಗತಿಗಳು ನೋಡುವುದಕ್ಕೆ, ಕೋಳುವುದಕ್ಕೆ, ಓದುವುದಕ್ಕೆ ಸಣ್ಣ ಸಣ್ಣ ವಿಷಯಗಳಾಗಿ ತೋರಿಬರಬಹುದು. ಆದರೆ, ತುಂಬಾ ಗಂಭೀರ ವಿಷಯ ಎಂದು ತಿಳಿದು ಹಾಗೆ ವರ್ತಿಸಲು ಆರಂಭಿಸಿದರೆ ಸಂತೋಷ.

« ಹಿಂದಿನ ಪುಟ : ಕನ್ನಡದ ಕೈ ಕಾಲು ಸೊಂಟ ಮುರಿತ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X