• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸರಕಾರಿ ಕನ್ನಡ ಶಾಲೆಗಳನ್ನು ಏಕೆ ಮುಚ್ಚಬೇಕು?

By * ಡಾ. ಚಂದ್ರಶೇಖರ ದಾಮ್ಲೆ, ಸುಳ್ಯ
|

ರಾಜ್ಯದಲ್ಲಿ 886 ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚಲಾಗುವುದೆಂಬ ಪತ್ರಿಕೆಯೊಂದರಲ್ಲಿ ಪ್ರಕಟವಾದ ಸುದ್ದಿ ನಿಜಕ್ಕೂ ಆತಂಕಕಾರಿ ಸುದ್ದಿ. ಇದು ನಿಜವಾಗಿಯೂ ಸರಕಾರ, ಶಿಕ್ಷಣ ಇಲಾಖೆ ಹಾಗೂ ಸಮಾಜವು ಎಚ್ಚೆತ್ತುಕೊಂಡು ತುರ್ತಾಗಿ ಸ್ಪಂದಿಸಬೇಕಾದ ಸಮಸ್ಯೆ. ರಾಜ್ಯವ್ಯಾಪಿಯಾಗಿ 886 ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚುವುದೆಂದರೆ ಅದೊಂದು ದುರಂತವೆನಿಸದೇ?

ಏನು ಕೊರತೆ? : ಶಾಲೆಗಳಿಗೆ ದಾಖಲಾದ ಮಕ್ಕಳ ಸಂಖ್ಯೆಯಲ್ಲಿ ಕೊರತೆ ಇರುವುದನ್ನು ಪರಿಗಣಿಸಿ ಆರ್ಥಿಕ ಅಪವ್ಯಯವನ್ನು ತಪ್ಪಿಸಲು ಈ ಹೆಜ್ಜೆಯನ್ನು ಸರಕಾರ ಇಟ್ಟಿದೆಯೆಂದು ಹೇಳಲಾಗುತ್ತಿದೆ. ಆದರೆ ಯಾಕೆ ಮಕ್ಕಳ ಕೊರತೆ ಉಂಟಾಗಿದೆ ಎಂಬುದರ ಕಡೆಗೆ ಸರಕಾರವು ಲಕ್ಷ್ಯ ಹರಿಸಿದಂತಿಲ್ಲ. ಈ ಶಾಲೆಗಳನ್ನು ಮುಚ್ಚುತ್ತಿರುವ ಊರುಗಳಲ್ಲಿ ಮಕ್ಕಳೇ ಇಲ್ಲವೆ? ಇದ್ದರೆ ಕಲಿಕೆಗಾಗಿ ಅವರೆಲ್ಲಿಗೆ ಹೋಗುತ್ತಿದ್ದರೆ? ಅವರೇಕೆ ಉಚಿತ ಶಿಕ್ಷಣದ ಬಹು ಸೌಲಭ್ಯಗಳ ಸರಕಾರಿ ಶಾಲೆಗಳಿಗೆ ಬರುವುದಿಲ್ಲ? ಈ ಕುರಿತಾಗಿ ಅಧ್ಯಯನ ನಡೆಸಲಾಗಿದೆಯೆ? ನಡೆಸಿದ್ದರೆ ಅದರ ಫಲಿತಾಂಶಗಳೇನು? ಪರಿಹಾರವಾಗಿ ಕೈಗೊಂಡ ಕ್ರಮಗಳೇನು? ಇಂತಹ ಅಧ್ಯಯನವನ್ನು ನಡೆಸದೆ ಏಕಾಏಕಿಯಾಗಿ ಶಾಲೆಗಳನ್ನು ಮುಚ್ಚುವುದು ಸರಿಯೇ?

ಇಲ್ಲಿ ಮುಖ್ಯವಾಗಿರುವ ಪ್ರಶ್ನೆಯೆಂದರೆ ಊರಿನಲ್ಲಿ ಮಕ್ಕಳಿದ್ದು ಅವರು ಸರಕಾರಿ ಶಾಲೆಗಳಿಗೆ ಬರುತ್ತಿಲ್ಲವಾದರೆ, ಅರ್ಥಾತ್ ಬೇರೆ ಖಾಸಗಿ (ಆಂಗ್ಲ ಮಾಧ್ಯಮ) ಶಾಲೆಗಳಿಗೆ ಹೋಗುತ್ತಿದ್ದರೆ ಆ ಊರಿನ ಶಾಲೆಯ ನ್ಯೂನತೆಯನ್ನು ಸರಿಮಾಡಿ ಸರಕಾರಿ ಶಾಲೆಯ ಆಕರ್ಷಣೆಯನ್ನು ಹೆಚ್ಚಿಸಬೇಕಾದ್ದು ಸರಕಾರದ ಕರ್ತವ್ಯ. ಸೌಲಭ್ಯಗಳ ಕೊರತೆಯೊಂದೇ ನ್ಯೂನತೆಯಲ್ಲ. ಸರಿಯಾಗಿ ಶಿಕ್ಷಣ ಪ್ರಕ್ರಿಯೆ ನಡೆಯದ ನ್ಯೂನತೆಯು ಪ್ರಧಾನವಾಗಿ ಕಾಡುತ್ತಿದೆ. ಇದಕ್ಕೆ ಶಿಕ್ಷಕರ ಕೊರತೆಯೊಂದೇ ಅಲ್ಲ. ಇರುವ ಶಿಕ್ಷಕರೂ ಸರಿಯಾಗಿ ಕಾರ್ಯ ನಿರ್ವಹಿಸದಿರುವ ಕಟು ಸತ್ಯವೂ ಕಾರಣವಾಗಿದೆ.

ಶಿಕ್ಷಣ ಇಲಾಖೆಯ ವಿವಿಧ ಮಟ್ಟಗಳಲ್ಲಿರುವ ಅಧಿಕಾರಿಗಳಿಗೆ ಇದು ಗೊತ್ತಿಲ್ಲದ ಸಂಗತಿಯೇನೂ ಅಲ್ಲ. ಆದರೆ ಅವರಲ್ಲಿ ಅನೇಕರಿಗೆ ಮಾತಾಡಲು ಬರುವುದಿಲ್ಲ. ಮಾತಾಡಲು ಬರುವವರಿಗೆ ಕೆಲಸ ಮಾಡಲು ಬರುವುದಿಲ್ಲ. ಇವೆರಡನ್ನೂ ಬಲ್ಲವರಿಗೆ ಪುರುಸೊತ್ತೆಂಬುದೇ ಇಲ್ಲ. ಹಾಗಾಗಿ ಅವರಿಗೆ ಮಕ್ಕಳು ಮತ್ತು ಸೌಲಭ್ಯಗಳಿಲ್ಲದ ನೆಪದಲ್ಲಿ ಶಾಲೆಗಳನ್ನು ಮುಚ್ಚಿ ಕೈತೊಳೆದುಕೊಳ್ಳುವುದೇ ವಾಸಿಯೆಂದು ಅನ್ನಿಸಿದ್ದರ ಫಲಶ್ರುತಿಯನ್ನು ಈ 886 ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚುವ ಕ್ರಿಯೆಯಲ್ಲಿ ಕಾಣುತ್ತಿದ್ದೇವೆ.

ಕನ್ನಡ ಕಲಿಯಲೂ ಮಕ್ಕಳು ಬರುತ್ತಾರೆ : ಈ ವಿಚಾರಗಳನ್ನು ನಾನು ಅನುಭವದಿಂದಲೇ ಹೇಳುತ್ತಿರುವೆ. ಸರಿಯಾದ ವ್ಯವಸ್ಥೆಗಳಿದ್ದರೆ ಕನ್ನಡ ಮಾಧ್ಯಮದ ಶಾಲೆಗಳಿಗೂ ಮಕ್ಕಳು ಬರುತ್ತಾರೆ. ಇದು ನನ್ನ ಪ್ರಾಯೋಗಿಕ ಅನುಭವ. ಸುಳ್ಯದಲ್ಲಿ ಕನ್ನಡ ಮಾಧ್ಯಮದಲ್ಲಿ ಖಾಸಗಿ ಅನುದಾನ ರಹಿತವಾಗಿ ಸ್ನೇಹ ಪ್ರಾಥಮಿಕ ಶಾಲೆಯನ್ನು ಯಶಸ್ವಿಯಾಗಿ ಕಳೆದ 14 ವರ್ಷಗಳಿಂದ ನಡೆಸಿಕೊಂಡು ಬಂದಿದ್ದು 10-12 ಕಿ.ಮೀ. ದೂರದಿಂದ ಹೆತ್ತವರು ಆಸಕ್ತಿಯಿಂದ ಮಕ್ಕಳನ್ನು ಕಳಿಸುತ್ತಿದ್ದಾರೆ. ಸುಳ್ಯ ತಾಲೂಕಿನಲ್ಲಿ ಅನೇಕ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದರೂ ನಮ್ಮ ಕನ್ನಡ ಶಾಲೆಗೆ ಮಕ್ಕಳು ಕಡಿಮೆ ಇಲ್ಲ. ಮುಖ್ಯವಾಗಿ ಕಲಿಸುವ ವ್ಯವಸ್ಥೆ ಸರಿ ಇರಬೇಕು. ಇದೇ ರೀತಿಯಲ್ಲಿ ಸಿರ್ಸಿಯಲ್ಲಿ ಚಂದನ ಶಾಲೆ, ಧಾರವಾಡದಲ್ಲಿ ಬಾಲಬಳಗ, ಮೈಸೂರಿನಲ್ಲಿ, ಚಾಮರಾಜನಗರದಲ್ಲಿ ಹೀಗೆ ಕೆಲವು ಕಡೆಗಳಲ್ಲಿ ಅನುದಾನರಹಿತ ಖಾಸಗಿ ಕನ್ನಡ ಮಾಧ್ಯಮದ ಶಾಲೆಗಳ ಯಶೋಗಾಥೆ ಇದೆ.

ಇವುಗಳನ್ನು ನೋಡಿಯಾದರೂ ಸರಕಾರಿ ಕನ್ನಡ ಶಾಲೆಗಳನ್ನು ಬಲಪಡಿಸುವ ಮಾರ್ಗೋಪಾಯದ ಬಗ್ಗೆ ಶಿಕ್ಷಣ ಇಲಾಖೆ ತೊಡಗಬೇಕಾಗಿದೆ. ಕೇವಲ ಔದಾಸೀನ್ಯದಿಂದ ಇದ್ದದ್ದು ಹೋಯಿತು ಮದ್ದಿನ ಗುಣದಿಂದ ಅಂತ ಮಾಡುವುದು ಸರಿಯಲ್ಲ. ಸೌಕರ್ಯವಿಲ್ಲದಲ್ಲಿ ಅದನ್ನು ನೀಡಿ. ಶಿಕ್ಷಕರಿಲ್ಲದಲ್ಲಿ ತರಗತಿಗೊಬ್ಬರಂತೆ ಶಿಕ್ಷಕರನ್ನು ನೀಡಿ. ಕೆಲಸ ಮಾಡದ ಶಿಕ್ಷಕರಿದ್ದರೆ ಸರಿಯಾದ ಕ್ರಮ ಕೈಗೊಳ್ಳಿ. ಆದರೆ ನಾಡಿನ ಜನರ ಹಕ್ಕಾದ ಶಾಲೆಗಳನ್ನು ಮುಚ್ಚುವುದು ಸರಿಯಾಗದು. ಸರಕಾರಿ ಶಾಲೆಗಳನ್ನು ಶಿಕ್ಷಣದ ಗುಣಮಟ್ಟವನ್ನು ಉತ್ತಮ ಪಡಿಸುವ ಮೂಲಕವೇ ಆಕರ್ಷಕಗೊಳಿಸಿ. ಪ್ರಸ್ತುತ ಪರಿಸ್ಥಿಯ ಅಧ್ಯಯನಕ್ಕೆ ಹಾಗೂ ಪರಿಹಾರೋಪಾಯಗಳನ್ನು ಕಂಡು ಹುಡುಕಲು ಅಗತ್ಯವಿದ್ದರೆ ಒಂದು ಸಮಿತಿ ನೇಮಿಸಿ. ಒಂದು ಶಾಲೆ ಮುಚ್ಚುವುದಕ್ಕೆ ಆಯಾ ವಿಭಾಗದ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ. ಆಗ ಅವರು ಈ ಭಾಷಾದ್ರೋಹ ಮಾಡಲಾರರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more