ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಕೃರವರ ಸ್ವಯಂಸಂದರ್ಶನ ಕಲೆ

By Staff
|
Google Oneindia Kannada News

Anakru
*ಕಲ್ಯಾಣರಾಮನ್, ಬೆಂಗಳೂರು

1930-40ರ ದಶಕದಲ್ಲಿ ಹಿಂದಿ ಪ್ರಚಾರ ಕರ್ನಾಟಕಕ್ಕೂ ಕಾಲಲಿಟ್ಟಿತು. ಬಹುಷಃ ಅದನ್ನು ಮೊದಲಿಗೆ ವಿರೋಧಿಸಿದವರು ಕನ್ನಡ ಕಾದಂಬರಿ ಸಾರ್ವಭೌಮ, ಕನ್ನಡ ಚಳವಳಿ ಪಿತಾಮಹ ಅನಕೃ ಎಂದು ನಮಗೆ ಇಂದು ಲಭ್ಯವಿರುವ ದಾಖಲೆಗಳಿಂದ ಕಂಡು ಬರುತ್ತದೆ.1944 ರಲ್ಲಿ ಪ್ರಕಟವಾಗಿರುವ ಅನಕೃ ಅವರ "ನನ್ನನ್ನು ನಾನೆ ಕಂಡೆ" ಎಂಬ ಗ್ರಂಥದಲ್ಲಿ ಹಿಂದಿ ಹುಟ್ಟುಹಾಕಿದ ಸಮಸ್ಯೆಯನ್ನು ಅವರು ಸವಿಸ್ತಾರವಾಗಿ ಪ್ರಸ್ತಾಪಿಸಿದ್ದಾರೆ. ಹಿಂದಿ ಕುರಿತಾಗಿ ಸುಮಾರು 65 ವರ್ಷಗಳ ಹಿಂದೆಯೇ ಅನಕೃ ಅವರು ಯಾವ ರೀತಿ ಯೋಚಿಸಿದ್ದರು ಮತ್ತು ಅವರ ದೂರದರ್ಶಿತ್ವ ಎಂತಹುದೆಂದು ಮನವರಿಕೆಯಾಗುತ್ತದೆ. ಹಿಂದಿ ಭಾಷೆ ಒಂದೆ ಭಾರತಕ್ಕೆ ಪರಿಹಾರವಲ್ಲ. ಸ್ವಾಂತಂತ್ರ್ಯ ದೊರೆತ ಮೇಲೆ ನಮಗೆ ಅಂತರರಾಷ್ಟ್ರೀಯ ಸಂಪರ್ಕ ನಿಕಟವಾಗುತ್ತದೆ. ಆಗ ಜಗತ್ತಿನ ಭಾಷೆಯ ಹೊರೆಯೂ ನಮ್ಮ ಮೇಲಾಗುತ್ತದೆ ಎಂದು ಅನಕೃ ಅಂದೇ ಮನಗಂಡಿದ್ದು ತಿಳಿದುಬರುತ್ತದೆ.

'ನನ್ನನ್ನು ನಾನೆ ಕಂಡೆ' ಪುಸ್ತಕ ಸಹ ಅಂದಿನ ಸಮಯಕ್ಕೆ ಹೊಸ ಪ್ರಯೋಗ ಎಂದೆ ಹೇಳಬಹುದಾಗಿದೆ. ಇದರಲ್ಲಿ ಅನಕೃ ಅವರು ತಮಗೆ ತಾವೆ (ಸಂದರ್ಶಕನಾಗಿ) ಪ್ರಶ್ನೆ ಹಾಕಿಕೊಳ್ಳುತ್ತ ಅದಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅನಕೃ ಈ ಕೃತಿಯನ್ನು ಸ್ವಯಂ ಸಂದರ್ಶನ ಕಲೆ ಎಂದು ಸಹ ಕರೆದಿದ್ದಾರೆ. ಸಂದರ್ಶನದ ಆಯ್ದ ಭಾಗಗಳು ನಿಮಗಾಗಿ.

ಸಂದರ್ಶಕ: ಹಿಂದೂಸ್ಥಾನಕ್ಕೆ ಏಕ ಭಾಷೆ, ಏಕ ಲಿಪಿ ಬೇಕೆಂಬುದರ ಬಗ್ಗೆ ತಮ್ಮ ಅಭಿಪ್ರಾಯವೇನು?
ಅನಕೃ: ನಾನು ಹಲವು ಸಲ ಆ ಬಗ್ಗೆ ಬರೆದಿದ್ದೇನೆ. ಆದರೆ ನನ್ನ ಹಿಂದಿನ ವಿಚಾರಗಳು ಕೆಲವು ಸ್ವಲ್ಪ ಮಾರ್ಪಾಟು ಹೊಂದಿವೆ.
ಸಂದರ್ಶಕ: ಏಕೆ?
ಅನಕೃ: ಅನುಭವ, ವ್ಯಾಸಂಗ ಮತ್ತು ಕಾಲ ಪರಿವರ್ತನೆಗಳಿಂದ
ಸಂದರ್ಶಕ: ಹಾಗಾದರೆ ಈಗ ನೀವು ಏನು ಹೇಳುತ್ತೀರಿ
ಅನಕೃ: ಸಾಕ್ರೆಟಿಸನ ಮಾರ್ಗವನ್ನವಲಂಬಿಸಿ ಕೆಲವು ಪ್ರಶ್ನೆಗಳನ್ನು ನಾನು ಕೇಳುತ್ತೇನೆ. ಸಮಂಜಸವಾಗಿ ಉತ್ತರ ಹೇಳಬೇಕು.
ಸಂದರ್ಶಕ: ಪ್ರಯತ್ನಿಸುತ್ತೇನೆ.
ಅನಕೃ: ಏಕ ಭಾಷೆ ಯಾರಿಗೆ ಬೇಕು?
ಸಂದರ್ಶಕ: ಒಂದು ರಾಷ್ಟ್ರಕ್ಕೆ
ಅನಕೃ: ಹಿಂದೂಸ್ಥಾನವು ಈಗ ಒಂದು ರಾಷ್ಟ್ರವಾಗಿದೆಯೋ?
ಸಂದರ್ಶಕ :ಸಾಂಸ್ಕೃತಿಕ ದೃಷ್ಟಿಯಿಂದ ಆಗಿದೆ. ರಾಜಕೀಯ ದೃಷ್ಟಿಯಿಂದ ಆಗಿಲ್ಲ
ಅನಕೃ: ಇನ್ನು ಹಿಂದೂಸ್ಥಾನ ಸ್ವಾತಂತ್ರ್ಯವನ್ನು ಗಳಿಸಿಕೊಂಡು ಒಂದು ರಾಷ್ಟ್ರವಾದ ಮೇಲೆ ತಾನೆ ಈ ಪ್ರಶ್ನೆ ಏಳುವುದು?
ಸಂದರ್ಶಕ: ಹೌದು, ಆದರೆ ಅದಕ್ಕೆ ಏಕ ಭಾಷೆ ಒಂದು ಸಾಧನವಲ್ಲವೇ?
ಅನಕೃ: ಸ್ವತಂತ್ರವಾಗಿರುವ ಯಾವ ದೇಶದಲ್ಲಿ ಏಕ ಭಾಷೆ ಪ್ರಚಾರದಲ್ಲಿದೆ ಹೇಳಿ? ಅಮೇರಿಕಾ, ಸ್ವಿಟ್ಚರ್ಲೆಂಡ್, ಇಂಗ್ಲೆಂಡ್, ರಷ್ಯಾ ದೇಶಗಳಲ್ಲೆಲ್ಲಾ ಹಲವಾರು ಭಾಷೆಗಳು ಪ್ರಚಾರದಲ್ಲಿಲ್ಲವೆ? ಹಿಂದೂಸ್ಥಾನಕ್ಕೆ ಸ್ವಾತಂತ್ರ್ಯ ಸಿಕ್ಕದಂತೆ ಮಾಡುವುದಕ್ಕೆ ಆಳರಸರು ಹೂಡಿದ ಒಂದು ಕುಹಕವಿದು. ನಮ್ಮವರು ಅದೇ ಕಿನ್ನರಿಯನ್ನು ಬಾರಿಸುತ್ತ ಹೊರಟಿದ್ದಾರೆ.
ಸಂದರ್ಶಕ: ಗಾಂಧೀಜಿಯವರೇ ಇದರ ಪುರಸ್ಕೃತರಾಗಿದ್ದಾರಲ್ಲ?
ಅನಕೃ: ಗಾಂಧೀಜಿಯವರು ಹೇಳಿದ್ದೊಂದು. ಜನ ತಿಳಿದುಕೊಂಡಿದ್ದೊಂದು. ದೊಡ್ಡವರ ಮಾತು ಸಣ್ಣವರ ಮೂಲಕ ಬಂದಾಗ ಪರ್ವತಧಾರೆ ಕಿರುಗಾಲವೆಯಲ್ಲಿ ಹರಿದಂತೆ ಆಗುತ್ತದೆ. ಗಾಂಧೀಜಿಯವರು ವ್ಯವಹಾರ ದೃಷ್ಟಿಯಿಂದ ಏಕಭಾಷೆ ಬೇಕೆಂದರು. ಹಿಂದಿಯನ್ನು ಹಿಂದೂಸ್ಥಾನದ ಹತ್ತನೆಯ ನಾಲ್ಕು ಅಂಶ ಜನ ಮಾತಾಡುವುದರಿಂದ ಅದನ್ನು ರಾಷ್ಟ್ರಭಾಷೆಯನ್ನಾಗಿ ಅಳವಡಿಸಬೇಕೆಂದು ಹೇಳಿದರು.
ಸಂದರ್ಶಕ: ನ್ಯಾಯವಾಗಿಯೇ ಇದೆ. ಭಿನ್ನಾಭಿಪ್ರಾಯಕ್ಕೆ ಅವಕಾಶವೆಲ್ಲಿಂದ ಬಂತು?
ಅನಕೃ: ಬರುತ್ತದೆ. ಮೂಲ ತತ್ವದಲ್ಲಲ್ಲ. ಸೂಕ್ಷ್ಮ ಆಚರಣೆಯಲ್ಲಿ. ಗಾಂಧೀಜಿಯವರು ಹಿಂದಿಯನ್ನು ಬಲವದ್ಬಂದನದಿಂದ ಪ್ರಚಾರ ಮಾಡಬೇಕೆಂದು ಹೇಳಲಿಲ್ಲ ಅಲ್ಲವೇ?
ಸಂದರ್ಶಕ: ಹೌದು
ಅನಕೃ: ಚಕ್ರವರ್ತಿ ರಾಜಗೋಪಾಲಚಾರ್ಯರು ಕಾಂಗ್ರೆಸ್ ಮಂತ್ರಿಮಂಡಲವನ್ನು ಸ್ಥಾಪಿಸಿದ ಕೂಡಲೇ ಮದರಾಸು ಪ್ರಾಂತ್ಯದಲ್ಲಿ ಕಾನೂನಿನ ಮೊರೆಹೊಕ್ಕರು. ತಮ್ಮ ತತ್ವಕ್ಕೆ ವಿರೋಧಿಸಿದವರನ್ನು ಕಾರಾಗಾರಕ್ಕೆ ಕಳುಹಿಸಿದರು. ಬ್ರಿಟಿಷ್ ಸಾಮ್ರಾಜ್ಯವಾದಿಗಳನ್ನು ಮೀರಿಸುವಷ್ಟು ದಬ್ಬಾಳಿಕೆ ನಡೆಸಿಬಿಟ್ಟರು.
ಸಂದರ್ಶಕ: ಹೌದು ತುಂಬಾ ಅನ್ಯಾಯ ಮಾಡಿ ಅನವಶ್ಯಕವಾಗಿ ದ್ವೇಷಾಸೂಯೆಗಳನ್ನು ಜನತೆಯಲ್ಲಿ ಬಿತ್ತಿದರು.
ಅನಕೃ: ಗಾಂಧೀಜಿಯವರು ಹಿಂದೀ ಪ್ರಾಂತ್ಯಭಾಷೆಗಳನ್ನು ಪ್ರತಿಭಟಿಸಕೂಡದೆಂದು, ಅವುಗಳ ಮೇಲೆ ಅಪಪ್ರಚಾರ ಮಾಡಕೂಡದೆಂದು ಖಂಡಿತವಾಗಿ ಹೇಳಿಲ್ಲವೇ?
ಸಂದರ್ಶಕ: ಹೇಳಿದ್ದಾರೆ.
ಅನಕೃ: ಹಿಂದೀ ಪ್ರಚಾರಕರು ಏನು ಮಾಡಿದರು? ಹೋದ ಕಡೆ, ಪ್ರಾಂತ್ಯಭಾಷೆ, ಸಾಹಿತ್ಯ, ಸಂಸ್ಕೃತಿಗಳನ್ನು ತೆಗಳುತ್ತ ಬಂದರು. ಹಿಂದೀ ಪ್ರಚಾರವನ್ನು ಮರೆತು ಅವರು ಪ್ರಾಂತ್ಯ ಭಾಷೆಗಳ ಅಪ-ಪ್ರಚಾರವನ್ನು ಮಾಡಿದರು. ಸ್ಥಳೀಯ ಸಂಸ್ಥೆಗಳ ನೆರವು ಪಡೆದು ಪ್ರಾಂತ್ಯ ಭಾಷೆಗಳನ್ನು ಉಪವಾಸ ಸಾಯಿಸುತ್ತ ಬಂದರು.
ಸಂದರ್ಶಕ: ತಪ್ಪು ಸ್ಥಳೀಯ ಸಂಸ್ಥೆಗಳದೇ ವಿನಾ ಗಾಂಧೀಜಿಯವರದಲ್ಲ - ಹಿಂದೀ ಪ್ರಚಾರಕರದೂ ಅಲ್ಲ
ಅನಕೃ: ನಿಮ್ಮ ತಿಳಿವಳಿಕೆ ತಪ್ಪು. ಗಾಂಧೀ, ನೆಹರು, ಆಜಾದರ ಹೆಸರುಗಳನ್ನು ಮುಂದೆ ಮಾಡಿಕೊಂಡು ಪ್ರಚಾರಕರು ನಿಂತರು. ಕಾಂಗ್ರೆಸ್ ನ ಭಕ್ತರಾಗಿದ್ದ ಸ್ಥಳೀಯ ಸಂಸ್ಥೆಗಳ ಪ್ರವರ್ತಕರು ದೊಡ್ಡ ಹೆಸರುಗಳಿಗೆ ಮರುಳಾಗಿ ಆತ್ಮ ಘಾತಕ ಮಾಡಿಕೊಳ್ಳಲಾರಂಭಿಸಿದರು.
ಸಂದರ್ಶಕ: ಹಿಂದೀ ಪ್ರಚಾರ ಸಂಸ್ಥೆಗಳ ಮೇಲೆ ನಿಮ್ಮ ಆಕ್ಷೇಪವೇನು?
ಅನಕೃ: ಎರಡು. ಒಂದು, ಅದು ಬಂಡವಾಳಗಾರರ ಸಂಸ್ಥೆ. ಕನ್ನಡನಾಡು ಬಡವರ ದೇಶ. ಇಲ್ಲಿ ಹಣ ಕೊಟ್ಟು ಪ್ರಚಾರ ನಡೆಸುವ ಸಂಸ್ಥೆಗಳಿಲ್ಲ. ಈ ಕಾರಣದಿಂದ ಹಣದ ಸೌಲಭ್ಯವಿದೆಯಂದು ಹಿಂದೀ ಪ್ರಚಾರ ಸಂಘಗಳು ಕನ್ನಡದ ಮೇಲೆ ಧಾಳಿ ನಡೆಸಿದವು. ಎರಡು, ಪ್ರಚಾರಕರ ಉದ್ದೇಶ, Hinidi Imperialism (ಹಿಂದೀ ಸಾಮ್ರಾಜ್ಯವಾದ) ಸ್ಥಾಪಿಸುವುದು. ಗುರುದೇವ ರವೀಂದ್ರರು ಹೇಳಿದಂತೆ ಸ್ವಾಭಿಮಾನವುಳ್ಳ ಯಾವ ನಾಡಿನವನೇ ಆಗಲಿ, ಭಾಷಾಸಂಬಂಧಿ ಸಾಮ್ರಾಜ್ಯವಾದವನ್ನು ಸಹಿಸನು.
ಸಂದರ್ಶಕ: ಇದಕ್ಕೆ ಪರಿಹಾರವೇನು?
ಅನಕೃ: ರವೀಂದ್ರರೆ ಅದನ್ನು ಸೂಚಿಸಿದ್ದಾರೆ. Do not rest content with the accidental advantage of your numbers. Attract people by creating great creative literature. ( ಹಿಂದೀ ಮಾತನಾಡುವವರ ಸಂಖ್ಯೆ ತುಂಬ ಇದೆಯೆಂದು ಸಂತುಷ್ಟ್ರರಾಗಿ ಕೂಡಬೇಡಿ. ಅದೊಂದು ಆಕಸ್ಮಿಕ ಅನುಕೂಲ ಲಾಭ ಮಾತ್ರ. ನೀವು ಉಚ್ಚಕೋಟಿಯ ಸೃಷ್ಟಿಕಾರಕ ಸಾಹಿತ್ಯವನ್ನು ರಚಿಸಿ ಜನರನ್ನು ಆಕರ್ಷಿಸಿರಿ). ಹಿಂದೀ ಪ್ರಚಾರಕರು ಕೇವಲ ಭಾಷಾ ಪ್ರಚಾರವಲ್ಲ. ಜನತೆಯಲ್ಲಿ ಸಾಹಿತ್ಯ ಸಂಸ್ಕೃತಿಯ ಪ್ರಸಾರವನ್ನು ಕೈಗೊಳ್ಳಬೇಕು
ಸಂದರ್ಶಕ: ಆ ಬಗ್ಗೆ ನಿಮ್ಮ ವಿರೋಧವಿಲ್ಲವೇ?
ಅನಕೃ: ನಾನು ಅದನ್ನು ಹೃತ್ಪೂರ್ವಕ ಸ್ವಾಗತಿಸುತ್ತೇನೆ. ಹಿಂದೀ ಬಗ್ಗೆ ನಾನೆಷ್ಟು ವಿರೋಧವನ್ನು ವ್ಯಕ್ತಪಡಿಸಿದ್ದೇನೆಯೋ ಅದರ ಹತ್ತರಷ್ಟು ಸಾಂಸ್ಕೃತಿಕ ಭಾಂಧವ್ಯಕ್ಕಾಗಿ ಹೆಣಗಾಡುತ್ತಿದ್ದೇನೆ. ಹಿಂದಿಯ ಕಥೆ ಕಾದಂಬರಿಗಳು ಕನ್ನಡಕ್ಕೆ ಅನುವಾದಿಸಲು ಶ್ರಮಿಸಿದ್ದೇನೆ. ಹಾಗೆ ಹಿಂದೀ ಜನಗಳಿಗೆ ಕನ್ನಡದ ಬಗ್ಗೆ ಅರಿವುಂಟುಮಾಡಲೆತ್ನಿಸಿದ್ದೇನೆ. ಭಾರತದಲ್ಲಿ ಮೂಡಿಬರುವ ಈ ಅನೈಕಮತ್ಯಕ್ಕೆ ಸಾಕಷ್ಟು ಪರಸ್ಪರ ಬಳಕೆ, ಪರಿಚಯಗಳಿಲ್ಲದಿರುವುದೇ ಕಾರಣವೆಂದು ನನ್ನ ಮತ. ಪ್ರಸಾರ ದೃಷ್ಟಿಯಿಂದ ಕೆಲಸ ಮಾಡುತ್ತಿರುವವರು ತಾವು ದಿಗ್ವಿಜಯ ಮಾಡುತ್ತಿದ್ದೇವೆಂದು ಭಾವಿಸಿರುತ್ತಾರೆ. ಇದು ತಪ್ಪು. ನಮ್ಮ ದುರ್ದೈವ ನೋಡಿ ಫ್ರೆಂಚ್, ಇಂಗ್ಲಿಷ್, ರಷ್ಯನ್, ಇಟಾಲಿಯನ್, ಕವಿಗಳು, ಕತೆಗಾರರು, ವಿಮರ್ಷಕರು ಇವರ ಬಗ್ಗೆ ಸಾಕಷ್ಟು ಗೊತ್ತಿದೆ. ಹೆಚ್ಚು ತಿಳಿಯಲು ಬಯಸಿದರೆ ಅಪಾರವಾದ ಅನುಕೂಲವಿದೆ. ನಮ್ಮ ದೇಶ ಭಾಷೆಗಳ ಬಗ್ಗೆ ಎಂತಹ ದಾರಿದ್ರ್ಯ ಮೂಡಿದೆ ನೋಡಿ. ನೆರೆ ಪ್ರಾಂತ್ಯಗಳಾದ ತಮಿಳು, ತೆಲುಗಿನ ಬಗ್ಗೆ ಕೂಡ ನಮಗೇನೂ ಗೊತ್ತಿಲ್ಲ. ಹಿಂದೀ, ಬಂಗಾಳಿ, ಗುಜರಾತಿ, ಅಸಾಮಿ ಹೆಸರುಗಳನ್ನು ಮಾತ್ರ ಕೇಳಿಬಲ್ಲೆವು.
ಸಂದರ್ಶಕ: ಈ ಅಜ್ಞಾನಾಂಧಕಾರವನ್ನು ಹೋಗಲಾಡಿಸುವುದು ಹೇಗೆ?
ಅನಕೃ: ಮುಂಬಯಿಯ ಪಿಇಎನ್ ಸಂಸ್ಥೆ ಮೇಲ್ಪಂಕ್ತಿ ಹಾಕಿ ತೋರಿಸಿದೆ, ಎಲ್ಲಾ ಭಾರತೀಯ ಭಾಷೆಗಳ ಸಾಹಿತ್ಯ ಪರಿಚಯ ಮಾಡಿಕೊಡುವ ಒಂದು ಉತ್ತಮ ವರ್ಗದ ಮಾಸಪತ್ರಿಕೆಯನ್ನು ನಡೆಸುತ್ತಿದೆ. ಇದುವರೆಗೆ ಅಸಾಮಿ, ಬಂಗಾಳಿ ಭಾಷಾ ಸಾಹಿತ್ಯ ಇತಿಹಾಸಗಳನ್ನು ಪ್ರಕಟಿಸಿದೆ. ಮುಂದೆ ಬೇರೆ ಬೇರೆ ಭಾಷೆಗಳ ಸಾಹಿತ್ಯೇತಿಹಾಸಗಳನ್ನು ಪ್ರಕಟಿಸುತ್ತದೆ. ಪ್ರತಿಯೊಂದು ಭಾರತೀಯ ಭಾಷೆಯಲ್ಲಿಯೂ ಇಂತಹ ಪ್ರಯತ್ನವಾಗಬೇಕು.
ಸಂದರ್ಶಕ: ಪರಿಷತ್ತು ಈ ಕಾರ್ಯವನ್ನೇಕೆ ಕೈಗೊಳ್ಳಬಾರದು?
ಅನಕೃ: ಪರಿಷತ್ತು ಕೈಗೊಳ್ಳಬೇಕಾದ ಅನೇಕ ಕಾರ್ಯಗಳಲ್ಲಿ ಇದೊಂದು. ಈ ಸಂಸ್ಥೆಗೆ ಮೊದಲು ಆಕ್ಸಿಜನ್ ಗ್ಯಾಸ್ ಕೊಟ್ಟು ಬದುಕಿಸಿ ಅನಂತರ ಮಂದಿನ ವಿಷಯವನ್ನು ಯೋಚಿಸಬೇಕಿದೆ
ಸಂದರ್ಶಕ: ಹಿಂದಿಯ ಬಗ್ಗೆ ಇಂದು ಪರಿಷತ್ತು ತೆಳೆದಿರುವ ಧೋರಣೆಯೇನು?
ಅನಕೃ: ಹರಿಯುವ ದೋಣಿಯಲ್ಲಿ ತೇಲುವುದು.(Drifting). ಹಿಂದೆ ಪರಿಷತ್ತು ತಾನೇ ಈ ಸಮಸ್ಯೆಯನ್ನು ಹುಟ್ಟಿಹಾಕಿತು. ಆಗ ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಶ್ರೀ ಡಿ.ವಿ.ಗುಂಡಪ್ಪನವರೂ, ಪರಿಷತ್ಪತ್ರಿಕೆಯ ಸಂಪಾದಕರಾಗಿದ್ದ ಪ್ರೊ. ಎ. ಆರ್. ಕೃಷ್ಣಶಾಶ್ತ್ರೀಗಳು ಗಂಡುಗಲಿಗಳಂತೆ ಕಾದಿದ್ದರು. ಪ್ರೊ. ಬಿ.ಎಂ.ಶ್ರೀಕಂಠಯ್ಯನವರು ಉಪಾಧ್ಯಕ್ಷರಾದರು. ಅವರೂ ಕೆಲಕಾಲ ಹಿಂದಿಯ ದಾಳಿಯನ್ನು ಎದುರಿಸಿ ಹೋರಾಡಿದರು. ಆದರೆ ಒಂದು ದಿನ ಶ್ರೀ ರಂ.ರಾ. ದಿವಾಕರರನ್ನು ಬಳ್ಳಾರಿ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಮಾಡಿದರು. ಅಂದಿನಿಂದ ಶ್ರೀ ಶ್ರೀಯವರ ಧೋರಣೆ ಬದಲಾಯಿಸಿತು. ಪರಿಷತ್ತಿನ ಸಮ್ಮೇಳನಾಧ್ಯಕ್ಷರಾಗಿದ್ದ ಶ್ರೀ ದಿವಾಕರರು ಹಿಂದೀ ಪ್ರಚಾರಕ್ಕೆ ಬಂದರು. ಸರ್ಕಾರದ ಮರೆಹೊಕ್ಕರು. ದೇಶದಲ್ಲೆಲ್ಲಾ ಸಂಚರಿಸಿ ಹಿಂದೀ ಪ್ರಚಾರ ಮಾಡುತ್ತಾರೆಂದ ಮೇಲೆ ಹಿಂದೀ ಪ್ರಚಾರಕರಿಗೆ ಏನು ಕಡಿಮೆಯಾದ ಹಾಗಾಯಿತು. ಪರಿಣಾಮ ಕರ್ಣಾಟಕ ಸಂಘಗಳು, ಹಿಂದೀ ಪ್ರಚಾರಕ ಸಂಘಗಳಾಗುತ್ತ ಬಂದವು. ಕನ್ನಡದ ಕೆಲಸಗಾರರು ಹಿಂದೀ ಪ್ರಚಾರಕರಾಗುತ್ತ ಬಂದರು. ಸ್ಥಳೀಯ ಸಂಸ್ಥೆಗಳು, ಕನ್ನಡ ವಾಚನಾಲಯ ಪುಸ್ತಕ ಭಂಡಾರಗಳಿಗೆ ಕೊಡುತ್ತಿದ್ದ ಹಣವನ್ನು ಹಿಂದಿಗೆ ಕೊಡುತ್ತ ಬಂದರು. ಶಾಲೆ ಕಾಲೇಜುಗಳಿಗೆ ಹಿಂದಿ ಕಾಲಿಟ್ಟು ಕನ್ನಡವನ್ನು ಒತ್ತರಿಸುತ್ತ ಬಂದಿತು. ಹೆಣ್ಣು ಮಕ್ಕಳು ಬಯಲು ಭ್ರಾಂತಿಯಿಂದ ಹಿಂಡು ಹಿಂಡಾಗಿ ಹಿಂದಿಯನ್ನು ಕಲಿಯುತ್ತ ಬಂದರು. ಕನ್ನಡಕ್ಕೆ ಸರ್ವತೋಮುಖವಾದ ಪೆಟ್ಟು ಬೀಳುತ್ತ ಬಂದಿತು. ಆಗ ನಾನು ಪರಿಷತ್ತಿನ ವಾರಪತ್ರಿಕೆಯ ಸಂಪಾದಕನಾಗಿದ್ದೆ. ಎಚ್ಚರಕೊಟ್ಟೆ. ದಿವಾಕರರ ದೇಶದ್ರೋಹವನ್ನು ಖಂಡಿಸಿದೆ. ಶ್ರೀ ಶ್ರೀ ಯವರು ಕುಪಿತರಾದರು. ದಿವಾಕರರಿಗೆ ನಾನು ಶರಣಾಗಬೇಕೆಂದರು-ನಾನು ಸಾಧ್ಯವಿಲ್ಲವೆಂದೆ. ನನ್ನ ಪರವಾಗಿ ತಾವು ಆ ಕೆಲಸ ಮಾಡಲು ಮುಂದುವರೆದರು. ನನ್ನ ಹೆಸರಿರುವ ಕನ್ನಡ ನುಡಿಯಲ್ಲಿ 'ಕ್ಷಮಯಾಚನೆ' ಬರಕೂಡದೆಂದು ಕನ್ನಡ ನುಡಿ ಪತ್ರಿಕೆಗೆ ನನ್ನ ಅಂತ್ಯ ಪ್ರಣಾಮವನ್ನು ಸಲ್ಲಿಸಿಬಿಟ್ಟೆ. ಅಂದಿನಿಂದ ಹಿರಿಯರ ಕಣ್ಣಿಗೆ ನಾನೊಬ್ಬ ಕ್ರಾಂತಿಪುರುಷ, ಅಶ್ಲೀಲ ವ್ಯಕ್ತಿ, ವಿವೇಕ ಶೂನ್ಯನಾದ ಬಿಸಿ ರಕ್ತದ ಒಬ್ಬ ಬಂಡಾಯಗಾರ.
ಸಂದರ್ಶಕ: ಅಂದಿಗೂ ಇಂದಿಗೂ ಪರಿಷತ್ತಿನಲ್ಲಿ ಏನೂ ಬದಲಾವಣೆಯಾಗಿಲ್ಲವೇ?
ಅನಕೃ: ಆಗಿದೆ, ವ್ಯಕ್ತಿಗಳು ಬದಲಾಯಿಸಿದ್ದಾರೆ. ಆದರೆ ಅದೇ ಮನೋಧರ್ಮ. ಅದೇ ಸಂಕುಚಿತ ಮನಸ್ಸು- ಅದೇ ನೈಚ್ಯಾನುಸಂಧಾನ.
ಸಂದರ್ಶಕ: ಸಂಕುಚಿತ ಮನಸ್ಸೆ!
ಅನಕೃ: ಹೌದು, ನಾನು ವೀರಶೈವ ಸಾಹಿತ್ಯ ಸಂಸ್ಕೃತಿ ಗ್ರಂಥ ಬರೆದದ್ದಕ್ಕೆ, ಇಂದಿನವರು ಲಿಂಗಾಯರನ್ನು ಎತ್ತಿಕಟ್ಟಿ ಪರಿಷತ್ತಿಗೆ ವಿರೋಧವಾಗಿ ನಡೆಯುತ್ತಿದ್ದೇನೆಂದು ಹೇಳುತ್ತಿದ್ದಾರೆ.
ಸಂದರ್ಶಕ: ಹಾಗಾದರೆ ಸಾಂಸ್ಕೃತಿಕ ಸಂಘಟನೆಗೆ ಕರ್ನಾಟಕದಲ್ಲಿ ಎಡೆಯೇ ಇಲ್ಲವೇ?
ಅನಕೃ: ಏಕಿಲ್ಲ- ನಮ್ಮ ನಿಮ್ಮಂತಹ ಪುರೋಗಾಮಿಗಳು ಸತ್ತು ಹೋಗಿದ್ದಾರೆಯೇ? ವೈಯುಕ್ತಿಕವಾಗಿ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಮಾಡೋಣ. ಬೇರೆ ಭಾಷೆಗಳಿಂದ ಧಾರಾಳವಾಗಿ ಬೆಳಕನ್ನು ತೆಗೆದುಕೊಳ್ಳೋಣ - ನಮ್ಮ ಬೆಳಕನ್ನು ಅವರಿಗೆ ಔದಾರ್ಯದಿಂದ ನೀಡೋಣ
ಸಂದರ್ಶಕ: ಹಿಂದಿಯ ಬಗ್ಗೆ ಇಂದಿನ ನಮ್ಮ ಧೋರಣೆಯೇನು?
ಅನಕೃ: ಸ್ನೇಹ ಮತ್ತು ಸೌಹಾರ್ದ. ಹಿಂದೀ ಪ್ರಚಾರಕರಲ್ಲಿಯೂ ಸಾಕಷ್ಟು ವಿಚಾರಪರಿವರ್ತನೆಯಾಗಿದೆ. ಸಂಸ್ಕೃತಿಯ ಕಡೆಗೆ ಅವರ ಲಕ್ಷ್ಯ ಹೋಗಿದೆ. ಮೈಸೂರಿನ ಕೆಲವು ಹಿಂದೀ ಪ್ರಚಾರಕ ಕೇಂದ್ರಗಳು ಕನ್ನಡ ದಿನಗಳನ್ನು ಆಚರಿಸುತ್ತಿದ್ದಾರೆ. ಕನ್ನಡ ಸಾಹಿತ್ಯ, ಸಾಹಿತಿಗಳ ಸ್ನೇಹ, ಸೌಹಾರ್ದವನ್ನು ಬಯಸುತ್ತಿದ್ದಾರೆ. ಅಪಪ್ರಚಾರವನ್ನು ಬಿಡುತ್ತಿದ್ದಾರೆ. ನಮಗೆ ಬೇಕಾದುದೂ ಇದೆ ತಾನೇ. ಕನ್ನಡಕ್ಕೆ ಧಕ್ಕೆ ತಗಲದಂತೆ ಹಿಂದೀ ಪ್ರಚಾರ ಮಾಡಿಕೊಳ್ಳಲಿ. ಹಿಂದೀ ಜನ ಕನ್ನಡಿಗರಾಗಿ ಅವರ ಕರ್ತವ್ಯ ಮೊದಲು ನಮ್ಮ ಭಾಷೆಗೆ, ಆನಂತರ ಹಿಂದಿಗೆ ಎಂಬುದನ್ನು ಗ್ರಹಿಸಲಿ. ಎಲ್ಲ ಘರ್ಷಣೆಯೂ ಕೊನೆಗಾಣುತ್ತದೆ. ಹಿಂದೀ ಪ್ರಸಾರದ ರೀತಿಯಲ್ಲಿ ಕನ್ನಡ ಪ್ರಸಾರವಾಗಬೇಕು. ಹಿಂದೂಸ್ಥಾನದ ಬೇರೆ ಬೇರೆ ಪ್ರಾಂತ್ಯಗಳಿಗೆ ಕನ್ನಡ ಪ್ರಸಾರಕರನ್ನು ಕಳುಹಿಸಿಕೊಡಬೇಕು. ಬೇರೆ ಬೇರೆ ಭಾಷೆಗಳಲ್ಲಿ ಕನ್ನಡ ಗ್ರಂಥಗಳ ಅನುವಾದ ಬರುವಂತೆ ಮಾಡಬೇಕು. ಹಿಂದೀ ಪ್ರಚಾರಕರ ನಿಷ್ಠೆ, ಕೆಚ್ಚು ಸ್ಥೈರ್ಯ, ಕರ್ತವ್ಯಪ್ರೇಮ ಕನ್ನಡ ಸೇವಕರಲ್ಲಿಯೂ ಮೂಡಿಬರಬೇಕು.
ಸಂದರ್ಶಕ: ಹಿಂದಿಯ ಏಕಭಾಷಾ-ಏಕಲಿಪಿಯ ವಾದಕ್ಕೆ ನಿಮ್ಮ ಉತ್ತರವೇನು?
ಅನಕೃ: ಅದನ್ನು ದೇಶ ಸ್ವಾತಂತ್ರ್ಯ ಬಂದ ಮೇಲೆ ಇಟ್ಟುಕೊಳ್ಳೋಣ. ಆಗ ಹಿಂದಿಯೇ ಭಾರತದ ಭಾಷೆಯಾಗುತ್ತದೆಯೋ, ಕನ್ನಡವೇ ಆಗುತ್ತದೆಯೋ, ಇಂಗ್ಲೀಷಾಗುತ್ತದೆಯೋ ಖಚಿತವಾಗಿ ಹೇಳಬಲ್ಲವರು ಯಾರು? ರಾಷ್ಟ್ರೀಯತೆ ಒಂದು ಸಾಧಿಸಿದ ಮೇಲೆ - ಅಂತರ ರಾಷ್ಟ್ರೀಯತೆಯ ಸಮಸ್ಯೆಯೇಳುತ್ತದೆ. ಆಗ ನಮ್ಮ ವ್ಯವಹಾರ ಕೇವಲ ಭರತಖಂಡಕ್ಕೆ ಮುಗಿಯುವುದಿಲ್ಲ. ಜಗತ್ತಿನ ಸಂಬಂಧ ನಿಕಟವಾಗುತ್ತದೆ. ಆಗ ಜಗತ್ತಿನ ಭಾಷೆಯನ್ನೂ ನಾವು ಅವಲಂಭಿಸಬೇಕಾಗುತ್ತದೆ.
ಸಂದರ್ಶಕ: ಎಲ್ಲಿಂದ ಎಲ್ಲಿಗೆ ಬಂದರೂ ನೀವು ಕನ್ನಡಕ್ಕೇ ಮೊದಲು ಬೆಲೆ ಕೊಡುವುದು.
ಅನಕೃ: ನಿಸ್ಸಂದೇಹವಾಗಿ. "ಬಲಿಷ್ಠ ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ಬಂಗಾಳ ತಮ್ಮ ಪ್ರಾಂತೀಯ ವೈಶಿಷ್ಟ್ಯವನ್ನುಳಿಸಿಕೊಂಡು ಏಕತ್ರವಾದ ರಾಷ್ಟ್ರೀಯ ಭಾವನೆಯನ್ನು ಬೆಳೆಸಿಕೊಳ್ಳಬೇಕು. ದುರ್ಬಲ ಪ್ರಾಂತ್ಯ ಯಾವಾಗಲೂ ರಾಷ್ಟ್ರೀಯತೆಯ ಶತ್ರುವೆಂಬುದನ್ನು ಮರೆಯಬಾರದು. ಈ ದೃಷ್ಟಿಯಿಂದಲೇ ನಾವು ಕನ್ನಡ-ಕನ್ನಡ ಎಂದು ಹಲಬುವುದು. ಕೆಲವರ ಕಣ್ಣಿಗೆ ನಾವು ಸಂಕುಚಿತ ಮನೋಭಾವದವರಾಗಿ ಕಂಡು ಬಂದರೂ ವಿಧಿಯಲ್ಲ. ಕಾಲ ಎಲ್ಲವನ್ನೂ ನಿರ್ಣಯಿಸುತ್ತದೆ. "

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X