ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆತ್ಮೀಯ ಪ್ರಾಧ್ಯಾಪಕಿ ಸುಧಾ ಮೂರ್ತಿ

By ಎಂ.ಜಿ.ರಾಧಿಕಾ
|
Google Oneindia Kannada News

ಆತ್ಮೀಯ ಓದುಗರೆ, ಇದು 2009ರಲ್ಲಿ ಒನ್ಇಂಡಿಯಾ ಕನ್ನಡದಲ್ಲಿ ಪ್ರಕಟವಾದ ಲೇಖನ. ಶಿಕ್ಷಕರ ದಿನಾಚರಣೆಯ ನಿಮಿತ್ತ ಎಂಜಿ ರಾಧಿಕಾ ಅವರು ಇನ್ಫಿ ಫೌಂಡೇಷನ್ ಅಧ್ಯಕ್ಷೆ, ಲೇಖಕಿ ಸುಧಾ ಮೂರ್ತಿ ಅವರ ಕುರಿತಂತೆ ಬರೆದಿರುವ ಲೇಖನವನ್ನು ಓದುಗರ ಅವಗಾಹನೆಗಾಗಿ ಮತ್ತೆ ಪ್ರಕಟಿಸುತ್ತಿದ್ದೇವೆ. ಮೆಚ್ಚುತ್ತೀರೆಂದು ಭಾವಿಸುತ್ತೇವೆ. - ಸಂಪಾದಕ.

ಪ್ರಿಯ ವಿದ್ಯಾರ್ಥಿನಿಯರೇ, ಐದು ವರ್ಷದ ನಮ್ಮ ನಿಮ್ಮ ಸಂಬಂಧ ಕೊನೆಗೆ ಬರುತ್ತಿದೆ. ಇಲ್ಲಿಯವರೆಗೆ ಎಲ್ಲರೂ ಒಂದು ಕುಟುಂಬದ ಸದಸ್ಯರಂತೆ ಇದ್ದೆವು. ಎಷ್ಟೋ ಬಾರಿ ಕಾಲೇಜಿನ ಪ್ರಾಧ್ಯಾಪಕರು ನಿಮ್ಮನ್ನು ಬಯ್ದಿದ್ದೇವೆ, ನೀವು ಮಾಡುತ್ತಿರುವುದು ತಪ್ಪಿದ್ದಲ್ಲಿ ತಪ್ಪೆಂದು ತೋರಿಸಿದ್ದೇವೆ. ಅದು ನಿಮ್ಮ ಕೋಪಕ್ಕೆ ಕಾರಣವಾಗಿರಲಿಕ್ಕೂ ಸಾಕು. ನಮ್ಮ ಬೆನ್ನ ಹಿಂದೆ ನೀವೆಲ್ಲರೂ ನಮ್ಮನ್ನು ನಿಂದಿಸಿರಲೂಬಹುದು. ಆದರೆ ನಮಗೆ ಅದಕ್ಕೆ ಬೇಸರವಿಲ್ಲ. ಕಾರಣ ಕೋಪದ ಭರದಲ್ಲಿ ವ್ಯಕ್ತಿಯ ಭಾವನೆಗಳು ವ್ಯಕ್ತವಾಗುವುದೇ ಹೀಗೆ.

ನನ್ನ ಪ್ರಕಾರ ಯಾವುದೇ ವ್ಯಕ್ತಿಯನ್ನು ಮೂರು ಮಂದಿ ಮಾತ್ರ ದಂಡಿಸಬಹುದು, ತಿದ್ದಬಹುದು. ಅವರೆಂದರೆ ತಂದೆ, ತಾಯಿ ಮತ್ತು ಗುರುಗಳು. ಗುರುವಾಗಿ ನಾನು ತಿಳಿ ಹೇಳುವುದು ನನ್ನ ನೈತಿಕ ಕರ್ತವ್ಯವೆಂದೇ ತಿಳಿದಿದ್ದೇನೆ. ನಿಮ್ಮ ಜೊತೆಯಿದ್ದು ನನ್ನ ವಿದ್ಯಾರ್ಥಿ ಜೀವನ ಕಣ್ಮುಂದೆ ಬರುತ್ತಿರುತ್ತದೆ. ನಿಮ್ಮೊಡನೆ ಕಳೆದ ಒಂದೊಂದು ಕ್ಷಣವೂ ಅವಿಸ್ಮರಣೀಯ. ಪಾಠ ಮಾಡುವಾಗ ನನಗೆ ಏನೂ ತಿಳಿದಿಲ್ಲವೆಂದೇ ಅಂದುಕೊಂಡು ನಿಮಗೆ ಅರ್ಥವಾಗುವ ರೀತಿಯಲ್ಲಿ ಹೇಳಲು ಸರ್ವ ಪ್ರಯತ್ನವನ್ನೂ ಮಾಡಿದ್ದೇನೆ. ಎಲ್ಲ ವಿದ್ಯಾರ್ಥಿಗಳೊಡನೆಯೂ ನಿಷ್ಪಕ್ಷಪಾತದಿಂದಿರಲು ಆದಷ್ಟೂ ಪ್ರಯತ್ನಿಸಿದ್ದೇನೆ.

Sudha Murthy

ನಮ್ಮ ಹಿಂದೂ ಪದ್ಧತಿಯ ಪ್ರಕಾರ ಶಿಷ್ಯರ ಕಾಲು ಭಾಗದಷ್ಟು ಗಳಿಕೆ ಗುರುಗಳಿಗೆ ಸಲ್ಲಬೇಕಾದ್ದು. ನಾನು ಗುರುದಕ್ಷಿಣೆಯಾಗಿ ಕೇಳುವುದೇನೆಂದರೆ ನೀವು ಎಲ್ಲೇ ಇರಿ, ನಿಮ್ಮ ಜೀವನದಲ್ಲಿ ಎಂದೆಂದಿಗೂ ಪ್ರಾಮಾಣಿಕರಾಗಿರಿ. ಹಣ ಸಂಪಾದಿಸಲು ಅನೇಕ ಮಾರ್ಗಗಳಿವೆ. ಆದರೆ ಹಣ ಜೀವನದಲ್ಲಿ ಎಲ್ಲವೂ ಅಲ್ಲ. ಮಾನಸಿಕ ನೆಮ್ಮದಿ ನಿಸ್ಪೃಹ ಸೇವೆಯಿಂದ ಮಾತ್ರ ಸಾಧ್ಯ. ಹಣ ಕ್ಷಣಿಕ. ಕಾಲಾನಂತರ ಪ್ರಾಮಾಣಿಕತೆಯೇ ನೆಮ್ಮದಿಗೆ ಹಾದಿ. ಯಾವುದೇ ಕೆಟ್ಟದ್ದಕ್ಕಾಗಲಿ ಒಳ್ಳೆಯದ್ದಕ್ಕಾಗಲಿ ಒಂದು ಕೊನೆಯಿದ್ದೇ ಇರುತ್ತದೆ. ಆ ದಿನ ಇಂದು ಬಂದಿದೆ ಅನಿಸುತ್ತಿದೆ. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ.

***
ಹತ್ತು ಹಲವು ವರ್ಷಗಳ ಹಿಂದೆ ನಮ್ಮ ಕಾಲೇಜಿನ ಕಂಪ್ಯೂಟರ್ ವಿಭಾಗದ ಮುಖ್ಯಸ್ಥೆ, ಆತ್ಮೀಯ ಪ್ರಾಧ್ಯಾಪಕಿ, ಸುಧಾ ಮೂರ್ತಿಯವರ ಈ ಮಾತನ್ನು ಕೇಳಿ ನಮ್ಮಲ್ಲನೇಕರ ಕಣ್ಣಲ್ಲಿ ನೀರಾಡಿತ್ತು. ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜಿನಲ್ಲಿ ಏಕಾಕಿ ವಿದ್ಯಾರ್ಥಿನಿಯೊಂದಿಗೆ ಕಂಪ್ಯೂಟರ್ ವಿಭಾಗವನ್ನು ಆರಂಬಿಸಿ, ಮುಂದೆ ಸಾವಿರಾರು ವಿದ್ಯಾರ್ಥಿನಿಯರ ಉತ್ತಮ ಭವಿಷ್ಯಕ್ಕೆ ಹಾದಿ ಮಾಡಿಕೊಟ್ಟವರು ಸುಧಾ ಮೂರ್ತಿ. ಸತತವಾಗಿ ಉತ್ತಮ ಫಲಿತಾಂಶವನ್ನು ಪಡೆಯುವ ಮೂಲಕ ಉತ್ತಮ ಹೆಸರನ್ನು ಗಳಿಸಿರುವ ವಿಭಾಗದ ಹಿಂದಿರುವುದು ಸುಧಾ ಮೂರ್ತಿಯವರ ಹಲವು ವರುಷಗಳ ಪರಿಶ್ರಮ.

ಆಗಿನ್ನೂ ಇನ್ಫೋಸಿಸ್ ಬಾಲ್ಯಾವಸ್ಥೆಯಲ್ಲಿತ್ತು. ಹಲವು ದೇಶಗಳ ಪರ್ಯಟನೆ ಮಾಡಿ ಅಲ್ಲಿಯ ಒಳ್ಳೆಯದೆಲ್ಲದ್ದರ ನೆನಪುಗಳನ್ನು ಹೊತ್ತು ತಂದು ನಮ್ಮೊಡನೆ ಹಂಚಿಕೊಳ್ಳುವ ಸುಧಾ ಮೂರ್ತಿಯವರ ತರಗತಿ ಎಂದರೆ ನಮ್ಮೆಲ್ಲರಿಗೂ ಅಚ್ಚು ಮೆಚ್ಚು. ತಾವು ಇಂಜಿನಿಯರಿಂಗ್ ಓದುವಾಗ ಇಡೀ ತರಗತಿಗೆ ಒಬ್ಬಳೇ ವಿದ್ಯಾರ್ಥಿನಿಯಾಗಿ ಸೇರಿದ ದಿನಗಳನ್ನು ನೆನೆಸಿ ಕೊಳ್ಳುತ್ತಿದ್ದರು. ಈಗಿನ ತಂದೆ ತಾಯಿಗಳು ಹೆಣ್ಣು ಮಕ್ಕಳ ಶಿಕ್ಷಣಕ್ಕೂ ಸಮಾನ ಪ್ರಾಶಸ್ತ್ಯ ನೀಡುತ್ತಿರುವದನ್ನು ಕಂಡು ಅವರಿಗೆ ಬಹಳ ಸಂತೋಷ. ನಮ್ಮ ಕಾಲೇಜಿನ ಬಗಲಿನಲ್ಲೇ ಇರುವ ಭಾರತೀಯ ವಿಜ್ಞಾನ ಮಂದಿರದಲ್ಲಿ ಎಮ್.ಟೆಕ್ ಪದವಿಯಲ್ಲಿ ಹಲವು ಚಿನ್ನದ ಪದಕಗಳನ್ನು ಗಳಿಸಿದ್ದರೂ ಯಾವುದೇ ಅಹಂ ತೋರಿಸುತ್ತಿರಲಿಲ್ಲ. ನಮ್ಮೊಲ್ಲೊಬ್ಬರಾಗಿ ಎಲ್ಲರೊಡನೆ ವಿದ್ಯಾರ್ಥಿನಿಯಾಗಿ ಬೆರೆಯುತ್ತಿದ್ದರು. ಎಮ್.ಟೆಕ್ ಓದಿ ಡಿಗ್ರೀ ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದಾರಲ್ಲ ಅಂತ ನಮ್ಮೆಲ್ಲರಿಗೂ ಅನಿಸಿತ್ತು. ಕೆಲವರು ಅವರಿಗೆ ಹಣದ ಅವಶ್ಯಕತೆ ಇಲ್ಲ ಅನ್ನುತ್ತಿದ್ದರು. ಹಾಗೆಂದು ಅವರೇನೂ ಪಾಠ ಮಾಡುವುದನ್ನು ನಿರ್ಲಕ್ಷ್ಯ ಮಾಡಿದ್ದಿಲ್ಲ.

ನಮ್ಮ ದೈನಂದಿನ ಜೀವನದ ಉದಾಹರಣೆಗಳನ್ನೇ ನೀಡುತ್ತಾ ಕಂಪ್ಯೂಟರ್ ಕಲಿಕೆ ಕಬ್ಬಿಣದ ಕಡಲೆ ಎಂದು ಅನಿಸದಂತೆ ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಪಾಠ ಮಾಡುತ್ತಿದ್ದರು. ಅವರ ಪ್ರತಿ ತರಗತಿಯಲ್ಲೂ ಅವರ ಅನುಭವ ಮೂಸೆಯಿಂದ ಆಯ್ದ ಘಟನೆಯ ಅಥವಾ ಕಥೆಯ ಪರಿಚಯ ನಮಗಾಗಿ ಇದ್ದೇ ಇರುತ್ತಿತ್ತು.ತಾನು ಪಂಚ್ ಕಾರ್ಡ್ ಯುಗದಿಂದ ಬಂದಿದ್ದು. ಪ್ರೋಗ್ರಾಮ್ ಬರೆಯುವಾಗ ತುಸು ತಪ್ಪಾದರೂ ಎಷ್ಟು ಫಜೀತಿಗಿಟ್ಟುಕೊಳ್ಳುತ್ತಿತ್ತು ನಿಮಗೇ ಪರವಾಗಿಲ್ಲ ಐದೂ ಕಾಲಿಂಚಿನ ಫ್ಲಾಪಿ ಇದೆ ಅಂದು ನಮ್ಮಲ್ಲಿ ಹೆಮ್ಮೆ ಮೂಡಿಸುತ್ತ್ತಿದ್ದರು!

ಆದರೆ ಮೂರೂವರೆ ಇಂಚಿನ ಫ್ಲಾಪ್ಪಿ ಹಿಡಿದು ಅಮ್ಮನ ಜೊತೆ ಬರುತ್ತಿದ್ದ ತುಸು ಸಂಕೋಚ ಸ್ವಭಾವದ ಅವರ ಮಕ್ಕಳು ಅಕ್ಷತಾ, ರೋಹನ್ ನಮ್ಮಲ್ಲಿ ಬೆರಗು ಮೂಡಿಸುತ್ತಿದ್ದರು. ಇನ್ನೂ ಶಾಲೆ ಕಲಿಯುತ್ತಿರುವ ಮಕ್ಕಳು ಎಷ್ಟು ಸುಲಲಿತವಾಗಿ ಕಂಪ್ಯೂಟರ್ ಆಪರೇಟ್ ಮಾಡ್ತಾರಲ್ಲ ಅಂತ!ಈ-ಮೆಯ್ಲ್ ಏನೂ ಹೊಸ ಆವಿಷ್ಕಾರವಲ್ಲ. ದೇವಾನುದೇವತೆಗಳು ಅಂದಿನ ಕಾಲಕ್ಕೇ ತಮ್ಮ ಪ್ರಿಯತಮ-ಪ್ರಿಯತಮೆಗೆ ಸುದ್ದಿ ಮುಟ್ಟಿಸಲು ಅದೇ ರೀತಿ ಸಂವಹನ ತಂತ್ರವನ್ನು ಉಪಯೋಗಿಸುತ್ತಿದ್ದರು. ಅದಕ್ಕೆಂದೇ ಅದಕ್ಕೆ ಮರ್ಕ್ಯುರಿ ಮೆಯ್ಲ್ ಅನ್ನುತ್ತಾರೆ ಅನ್ನುತ್ತಾ ಕಥೆಯ ನಿರೂಪಣೆಯೊಡನೆ ಈ-ಮೆಯ್ಲ್ ಆರಂಭವಾದ ಹಾದಿಯನ್ನು ವಿವರಿಸುತ್ತಿದರು.

ಡೇಟಾಬೇಸ್ ನಲ್ಲಿ ಪ್ರೈಮರಿ ಕೀ, ಸೆಕಂಡರಿ ಕೀ ಬಗ್ಗೆ ಹೇಳುವಾಗ ಅವರು ಕೊಡುತ್ತಾ ಇದ್ದ ಉದಾಹರಣೆ: ತನ್ನ ಸಹಪಾಠಿಯೊಬ್ಬನ ಮನೆಗೆ ಹೋದಾಗ ಹೊರ ನಿಂತು ಕುಲಕರ್ಣಿ ಎಂದು ಕರೆದಾಗ ಮನೆಯಲ್ಲಿ ಇದ್ದ ಎಲ್ಲರೂ ಪ್ರತ್ಯಕ್ಷರಾದರು ಎಂದು ನಮ್ಮನ್ನು ನಗೆಗಡಲಿನಲ್ಲಿ ಮುಳುಗಿಸುತ್ತಿದ್ದರು. ಹೆಸರಿನ ಮುಂದೆ ಸರ್ ನೇಮ್ ಸೇರಿಸಿಕೊಡಾಗ ಅದು ಹೇಗೆ ಪ್ರೈಮರಿ ಕೀ ಆಗುತ್ತೆ ಅಂತ ವಿವರಿಸುತ್ತಾ ಇದ್ರು. ತಮ್ಮ ಹೆಸರಿನ ಜೊತೆ ಮೂರ್ತಿಯವರ ಹೆಸರನ್ನು ಸೇರಿಸಿಕೊಂಡಿರುವುದು ಅವರಿಗೆ ಹೆಮ್ಮೆಯ ವಿಷಯವಾಗಿತ್ತು. ವಿವಾಹ ಪೂರ್ವದಲ್ಲಿ ತಂದೆಯ ಹೆಸರು ನಂತರ ಮೂರ್ತಿಯವರ ಹೆಸರು ಜೊತೆಗಿರುವುದು ಒಂದು ರೀತಿಯ ಸುರಕ್ಷೆಯ ಭಾವನೆ ಮೂಡಿಸುತ್ತೆ ಅನ್ನುತ್ತಾ ಇದ್ದರು.

ಪ್ರತಿ ವರ್ಷವೂ ಫಲಿತಾಂಶ ಬಂದ ಸಮಯದಲ್ಲಿ ಉತ್ತಮ ಫಲಿತಾಂಶ ಬಾರದೇ ಇರುವ ವಿದ್ಯಾರ್ಥಿನಿಯರಿಗೆ ಇತರೇ ಕೆಲವು ಪ್ರಾಧ್ಯಾಪಕಿಯರು ಮಾಡಿದ್ದುಣ್ಣೋ ಮಹರಾಯ ಎನ್ನುವ ರೀತಿಯಲ್ಲಿ ಮಾತುಗಳನ್ನಾಡಿದರೆ ಇವರದೇ ಬೇರೆ ಪರಿ.“Success has many fathers. But failure has none"- ಇದು ಅವರು ನೊಂದ ಮನಗಳಿಗೆ ಸಾಂತ್ವನ ಹೇಳುತ್ತಿದ್ದ ರೀತಿ. ಪರೀಕ್ಷೆಯ ಫಲಿತಾಂಶ ನಿಮ್ಮನು ಧೃತಿಗೆಡಿಸಬಾರದು. ಅಂಕಗಳು ಮುಖ್ಯವಲ್ಲ. ಇವತ್ತು ಕಡಿಮೆ ಅಂಕ ಬಂದಿರಬಹುದು ಆದರೆ ಪ್ರಯತ್ನ ಪಟ್ಟರೆ ಉತ್ತಮ ಅಂಕಗಳನ್ನು ಗಳಿಸುವುದು ಕಷ್ಟವಲ್ಲ ಎಂಬ ಹುರಿದುಂಬಿಸುವ ಮಾತುಗಳನ್ನಾಡುತ್ತಿದ್ದರು.

ಯಾವುದೇ ವಿಷಯದಲ್ಲೂ ಉತ್ತಮವಾದ ಗುಣಗಳನ್ನೇ ಹುಡುಕುತ್ತಿದ್ದರು. ಕೇವಲ ಸಮಸ್ಯೆಗಳನ್ನೇ ವೈಭವೀಕರಿಸುವುದು ಅವರ ಜಾಯಮಾನವಲ್ಲ. ಅದಕ್ಕೆ ಒಂದು ಕತೆ ಹೇಳುತ್ತ ಇದ್ದರು. ಒಬ್ಬ ಕಲಾಕಾರ ನಗರದ ಮುಖ್ಯ ಬೀದಿಯಲ್ಲಿ ಈ ಕೃತಿಯಲ್ಲಿ ತಪ್ಪುಗಳಿದ್ದರೆ ಪಕ್ಕದಲ್ಲಿರುವ ಖಾಲಿ ಹಾಳೆಯಲ್ಲಿ ಬರೆಯಿರಿ ಎಂಬ ಒಕ್ಕಣೆಯೊಂದಿಗೆ ತನ್ನ ಕಲಾ ಕೃತಿಯನ್ನು ಪ್ರದರ್ಶನಕ್ಕಿಟ್ಟ. ಮಾರನೇ ದಿನ ಸಲಹೆಗಳ ಮಹಾ ಪೂರವೇ ಖಾಲಿ ಹಾಳೆಯನ್ನು ತುಂಬಿತ್ತು. ಇನ್ನೊಮ್ಮೆ ಖಾಲಿ ಹಾಳೆಯಿಟ್ಟು ಈ ಕೃತಿಯಲ್ಲಿ ತಪ್ಪಿದ್ದಲ್ಲಿ ಸರಿಪಡಿಸಿ ಎಂಬ ಒಕ್ಕಣೆ ಬರೆದ. ಆಗ ಯಾರೂ ಆ ಚಿತ್ರದ ಗೊಡವೆಗೇ ಬರಲಿಲ್ಲ!

ಪದವಿಯ ಅಂತಿಮ ವರ್ಷದಲ್ಲಿ ಅನೇಕ ವಿದ್ಯಾರ್ಥಿನಿಯರ ಮನೆಯಲ್ಲಿ ಆಗಲೇ ವಿವಾಹದ ಮಾತು ಕತೆ ನಡೆವ ಸುಳಿವು ಸಿಕ್ಕಾಗ ಸಲಹೆ ನೀಡುತ್ತಿದ್ದರು. ಪ್ರತಿ ಹುಡುಗಿಯೂ ಹರೆಯದಲ್ಲಿ ಐಡಿಯಲ್ ಹುಡುಗನಿಗಾಗಿ ಹುಡುಕುತ್ತಾ ಇರುತ್ತಾಳೆ. ಕಾರು, ಮನೆ, ಒಳ್ಳೆಯ ಹುದ್ದೆ, ಹೆಚ್ಚಿನ ಸಂಬಳ ಜೊತೆಗೆ ಸಿನಿಮಾ ಹೀರೋನಂಥ ಹುಡುಗನ ಕನಸು. ಹಾಗೆಯೇ ಹುಡುಗ ಕೂಡಾ ಸುಂದರ, ಸುಶಿಕ್ಷಿತ, ಸಂಪ್ರದಾಯಬದ್ಧ ಇತ್ಯಾದಿ ಗುಣಗಳ ಹುಡುಗಿಯನ್ನು ಹುಡುಕುತ್ತಾ ಇರುತ್ತಾನೆ. ಆದರೆ ವಿಪಯರ್ಾಸ ಎಂದರೆ ಇವರಿಬ್ಬರೂ ಎಂದಿಗೂ ಭೇಟಿಯಾಗುವುದಿಲ್ಲ ಎನ್ನುತ್ತಎಲ್ಲರ ಮೊಗದಲ್ಲೂ ನಗೆ ಮೂಡಿಸುತ್ತಾ ಇದ್ದರು.

ತನ್ನ ಸ್ನೇಹಿತೆ ಎಲ್ಲಾ ವಿಷಯದಲ್ಲೂ ಮ್ಯಾಚಿಂಗ್ ಬೇಕು ಅನ್ನುತ್ತಿದ್ದವಳು ಹೇಗೆ ತನ್ನ ವಿರುದ್ಧದ ಬಣ್ಣದ ಹುಡುಗನನ್ನು ಮದುವೆಯಾದಳು ಅನ್ನುವುದನ್ನು ಹೇಳುತ್ತಾ ಯಾಕೆ ಈ ವಿಷಯದಲ್ಲಿ ಮ್ಯಾಚಿಂಗ್ ಇಲ್ಲ ಎಂದು ಕೇಳಿದ್ದಕ್ಕೆ ಇದು ಕಾಂಟ್ರಾಸ್ಟ್ ಮ್ಯಾಚಿಂಗ್ ಅಂದಿದ್ದನ್ನು ನೆನೆಸಿಕೊಳ್ಳುತ್ತಾ ಇದ್ದರು.

ಅವರ ಮುದ್ದಿನ ಶಿಶು ಇನ್ಫೋಸಿಸ್ ಕಂಪನಿ ಬಗ್ಗೆ ತಿಳಿದಿದ್ದ ಅಂತಿಮ ಪದವಿಯ ವಿದ್ಯಾರ್ಥಿನಿಯರು ಪದವಿಯ ನಂತರ ಕೆಲಸಕ್ಕೆ ಶಿಫಾರಸು ಮಾಡಿ ಎಂದು ಕೋರಿದರೆ ನನಗೂ ಅದಕ್ಕೂ ಮೈಲು ದೂರ. ನಾನು ಎಂಪ್ಲಾಯ್ಮೆಂಟ್ ಬ್ಯೂರೋ ನಡೆಸುತ್ತಿಲ್ಲ. ನೇರವಾಗಿ ನೀವೇ ಅರ್ಜಿ ಸಲ್ಲಿಸಿ. ನಿಮ್ಮ ಅರ್ಜಿ ಅವರ ನಿರೀಕ್ಷೆಗೆ ತಕ್ಕ ಹಾಗೆ ಇದ್ದಲ್ಲಿ ಕೆಲಸ ಸಿಗುತ್ತದೆ ಅನ್ನುತ್ತಿದ್ದರು. ಆದರೆ ನಮಗೆ ಮಾರ್ಗದರ್ಶನ ನೀಡಲು ಎಂದಿಗೂ ಹಿಂಜರಿಯುತ್ತಿರಲಿಲ್ಲ. ಕಾಲೇಜಿನ ಇತಿಹಾಸದಲ್ಲೇ ಮೊದಲ ಬಾರಿಗೆ 'ವೃತ್ತಿ ಮಾರ್ಗದರ್ಶನ ವಾರ" ನಡೆಸಿದರು. ವಿವಿಧ ವೃತ್ತಿಗಳಲ್ಲಿ ಉನ್ನತ ಪದದಲ್ಲಿರುವವರೊಡನೆ ಭಾಷಣ, ಸಂವಾದಗಳನ್ನು ಏರ್ಪಡಿಸಿದ್ದರು. ಪದವಿಯ ನಂತರ ತಮ್ಮ ಮುಂದಿರುವ ವಿಫುಲ ಅವಕಾಶಗಳ ಪರಿಚಯ ನಮಗಾಯಿತು. ಈ ಮಾರ್ಗದರ್ಶನ ಕಾರ್ಯಕ್ರಮದಿಂದಾಗಿ ಅನೇಕ ವಿದ್ಯಾರ್ಥಿನಿಯರ ಜೀವನ ಪ್ರಗತಿಪರ ತಿರುವನ್ನು ಪಡೆದಿರಲಿಕ್ಕೂ ಸಾಕು.

ಬೇರೆಲ್ಲ ಪ್ರಾಧ್ಯಾಪಕಿಯರೊಡನೆ ಮುಕ್ತವಾಗಿ ಮಾತನಾಡಲು ಹಿಂಜರಿಯುವ ವಿದ್ಯಾರ್ಥಿನಿಯರು ಸುಧಾ ಮೂರ್ತಿಯವರೊಡನೆ ಎಷ್ಟೋ ಬಾರಿ ತಮ್ಮ ಅಂತರಂಗದ ಮಾತುಗಳನ್ನೂ ಹೇಳಿಕೊಳ್ಳುತ್ತಿದ್ದರು. ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಪ್ರೀತಿ ಪ್ರೇಮದ ಹಾದಿಯಲ್ಲಿ ಸಾಗಿದ ವಿದ್ಯಾರ್ಥಿನಿಯರನ್ನು ಅವರ ಕುಟುಂಬದವರನ್ನು ಒಲಿಸಿ ವಿವಾಹಕ್ಕೆ ಒಪ್ಪಿಸಿರುವುದೂ ಉಂಟು. ಕೆಲವು ವಿದ್ಯಾರ್ಥಿನಿಯರೊಡನೆ ಅವರ ನಿಕಟ ಬಾಂಧವ್ಯ ನಮ್ಮಲ್ಲಿ ಕೆಲವು ವಿದ್ಯಾರ್ಥಿನಿಯರಿಗೆ ಅವರು ಪಕ್ಷಪಾತ ಮಾಡುತ್ತಿದ್ದಾರೇನೋ ಅನ್ನುವ ಭಾವನೆ ಮೂಡಿಸಿ ಅದನ್ನು ನಾವು ವ್ಯಕ್ತಪಡಿಸಿದಾಗ ಮನಸ್ಸಿಗೆ ತುಂಬಾ ಬೇಸರ ಮಾಡಿಕೊಂಡಿದ್ದರು. ಎಲ್ಲ ವಿದ್ಯಾರ್ಥಿನಿಯರು ನನ್ನ ಮಕ್ಕಳಿದ್ದ ಹಾಗೆ. ಯಾವ ತಾಯಿಯೂ ತನ್ನ ಮಕ್ಕಳಲ್ಲಿ ಪಕ್ಷಪಾತ ಮಾಡುವುದಿಲ್ಲ ಎಂದು ನೊಂದುಕೊಂಡಿದ್ದರು. ಈಗ ನೆನೆಸಿಕೊಂಡರೆ ನಾವು ಅವರ ಬಗ್ಗೆ ಆ ರೀತಿ ಆಪಾದಿಸಿದ್ದು ಎಷ್ಟು ಬಾಲಿಶ ಅನ್ನಿಸುತ್ತದೆ.

English summary
My teacher Sudha murthy: Reminiscences of good old student days in maharani lakshmi ammanni college Bangalore, by MG Radhika. Special story on the occasion of Teachers Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X