ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಾಥಃಸ್ಮರಣೀಯ ಶಿಕ್ಷಕ, ಮೈಸೂರು ತಾತಯ್ಯ

By Staff
|
Google Oneindia Kannada News

Tribute to mysore Thathayya
ಸೆಪ್ಟಂಬರ್ 5, ಮೈಸೂರನ್ನು ಕಟ್ಟಿ ಬೆಳೆಸಿದ ಮಹನೀಯರಲ್ಲಿ ಅಗ್ರಗಣ್ಯರಾದ ಎಂ.ವೆಂಕಟಕೃಷ್ಣಯ್ಯ(ತಾತಯ್ಯ)ನವರ ಜನ್ಮದಿನ.ತನ್ನಿಮಿತ್ತ ಈ ಲೇಖನ.

*ರಾಮಚಂದ್ರ ಹೆಗಡೆ, ಬೆಂಗಳೂರು

ಪ್ರತಿಯೊಂದು ದೇಶ, ರಾಜ್ಯ, ನಗರ ಸಮಾಜಗಳ ಇತಿಹಾಸದಲ್ಲಿ ಅದನ್ನು ಕಟ್ಟಿ ಬೆಳೆಸಿದ ಮಹನೀಯರ ಪರಿಶ್ರಮ,ಕಳಕಳಿ,ತ್ಯಾಗ ಬಲಿದಾನಗಳ ಪಾತ್ರ ಮಹತ್ತರವಾದುದು. ನಮ್ಮ ದೇಶದಲ್ಲಂತೂ 'ಸ್ವಂತಕ್ಕಾಗಿ ಸ್ವಲ್ಪ,ಸಮಾಜಕ್ಕಾಗಿ ಸರ್ವಸ್ವ' ಎಂಬುದನ್ನೇ ಬದುಕಿನ ಧ್ಯೇಯವಾಗಿಸಿಕೊಂಡು ಸಮಾಜದ ಹಿತಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿದ ಮಹಾನುಭಾವರ, ಧೀಮಂತರ ಪರಂಪರೆಯೇ ಇದೆ. ಆದರಿಂದು ಸಮಾಜದ ಪರಿಕಲ್ಪನೆಯನ್ನೇ ಮರೆತು ನಮ್ಮ ನಮ್ಮ ಸುತ್ತ ಸ್ವಾರ್ಥದ ಗೋಡೆಗಳನ್ನು ಕಟ್ಟಿಕೊಂಡಿರುವ ನಮಗೆ ಆ ಮಹನೀಯರ ಬದುಕು,ಆದರ್ಶಗಳ ನೆನಪೇ ಇಲ್ಲದಿರುವುದು ದುರಂತ. ಸ್ವಾತಂತ್ರ್ಯ ಪೂರ್ವದಲ್ಲೇ ದೇಶದ ಮಾದರಿ ಪ್ರಾಂತ್ಯವೆನ್ನಿಸಿಕೊಂಡಿದ್ದ, ದಕ್ಷಿಣಭಾರತದಲ್ಲೇ 'ಶಿಕ್ಷಣಕಾಶಿ' ಎಂಬ ಪ್ರಖ್ಯಾತಿಗೆ ಪಾತ್ರವಾಗಿದ್ದ ಮೈಸೂರು ನಗರವನ್ನು ಕಟ್ಟಿ ಬೆಳೆಸುವಲ್ಲಿ ಬದುಕನ್ನೇ ಸಮರ್ಪಿಸಿ ದುಡಿದ ಮಹನೀಯರಲ್ಲಿ ದಯಾಸಾಗರ ಎಂ.ವೆಂಕಟಕೃಷ್ಣಯ್ಯನವರ ಪಾತ್ರ ಬಲು ದೊಡ್ಡದು.

ಮೈಸೂರಿನ ಪತ್ರಿಕೋದ್ಯಮ ಪಿತಾಮಹರಾಗಿ,ರಾಜಗುರು-ರಾಜನೀತಿಜ್ಞರಾಗಿ,ಆದರ್ಶ ಅಧ್ಯಾಪಕರಾಗಿ,ಸಾಮಾಜಿಕ ಕಾರ್ಯಕರ್ತರಾಗಿ, ಶ್ರೇಷ್ಠ ಸಾಹಿತಿಗಳಾಗಿ,ಸ್ತ್ರೀ ವಿದ್ಯಾಭ್ಯಾಸ ಪ್ರವರ್ತಕರಾಗಿ, ಅಸ್ಪೃಶ್ಯೋದ್ಧಾರಕರಾಗಿ, ಶಿಕ್ಷಣ ಸಂಸ್ಥೆಗಳ ಸ್ಥಾಪಕರಾಗಿ,ದೀನದುರ್ಬಲರ ದನಿಯಾಗಿ ಅವರು ಸಲ್ಲಿಸಿದ ಸೇವೆ ಅನುಪಮ ಮತ್ತು ಅವಿಸ್ಮರಣೀಯ.ಅದಕ್ಕಾಗಿಯೇ ಮೈಸೂರಿನ ನಾಗರೀಕರು ಅವರನ್ನು 'ತಾತಯ್ಯ' ನೆಂದು, ವೃದ್ಧಪಿತಾಮಹ,ದಯಾಸಾಗರ ಎಂದು ಕರೆದು ಗೌರವಿಸಿದ್ದು. ಮೈಸೂರಿನ ಇಂದಿನ ನಗರ ಬಸ್ ನಿಲ್ದಾಣದ ಎದುರಿಗಿರುವ 'ತಾತಯ್ಯ ಪಾರ್ಕ್' ನಲ್ಲಿ ಶ್ರೀ ವೆಂಕಟಕೃಷ್ಣಯ್ಯನವರ ಪ್ರತಿಮೆಯನ್ನು ಸ್ಥಾಪಿಸಿ ಮೈಸೂರು ಮಹಾಜನತೆ ಅವರಿಗೆ ಗೌರವ ಸಮರ್ಪಿಸಿದೆ.

ವೆಂಕಟಕೃಷ್ಣಯ್ಯನವರ ಬದುಕನ್ನು ಬರೆಯುವುದೆಂದರೆ ಅದು ಒಂದೆರಡು ಶತಮಾನದ ಮೈಸೂರಿನ ಇತಿಹಾಸ ಬರೆಯುವಷ್ಟೇ ಸಾಹಸದ ಕೆಲಸ.ಅವರ ಇಡೀ ಜೀವನವೂ ಪೂರಾ ಹೋರಾಟದ ಬದುಕೇ ಆಗಿತ್ತು. ಸಾಂಸಾರಿಕ ಜೀವನದಲ್ಲಿ ಆರಂಭದಿಂದಲೇ ಬಡತನ,ದಾರಿದ್ರ್ಯ,ದುಃಖ ಸಂಕಟಗಳ ಸರಮಾಲೆಯೇ ಅವರನ್ನು ಕಾಡಿಸಿದವು.ಅವರು ಎದೆಗುಂದದೆ ಅವೆಲ್ಲವನ್ನೂ ಧೀಮಂತರಾಗಿಯೇ ಎದುರಿಸಿದರು.ಜನಪರರ ದುಃಖ ಸಂಕಷ್ಟಗಳಿಗೆ ಅವರ ನಿರಕ್ಷರತೆಯೇ ಕಾರಣವೆಂಬುದನ್ನು ತೀರಾ ತಾರುಣ್ಯದಲ್ಲಿಯೇ ಕಂಡುಕೊಂಡ ವೆಂಕಟಕೃಷ್ಣಯ್ಯ ಶಾಲೆಗಳನ್ನು ಸ್ಥಾಪಿಸುವುದರ ಮೂಲಕ ಅಂದಿನ ಮೈಸೂರು ನಗರದಲ್ಲಿ ವಿದ್ಯಾಪ್ರಸಾರದ ಚಳುವಳಿಯನ್ನೇ ಕೈಗೊಂಡರು. ಇಂದಿನ ಪ್ರಖ್ಯಾತ ವಿದ್ಯಾಸಂಸ್ಥೆಗಳಾದ ಮರಿಮಲ್ಲಪ್ಪ ಶಾಲೆ,ಮಹಾರಾಣಿ ಕಾಲೇಜ್,ಶಾರದಾವಿಲಾಸ ಕಾಲೇಜ್, ಸದ್ವಿದ್ಯಾ ಪಾಠಶಾಲೆ ಇವೆಲ್ಲಾ ತಾತಯ್ಯನವರ ಕೈಗೂಸುಗಳು.ಶಿಕ್ಷಣಕ್ಕೆ ಅಷ್ಟೇನು ಮಹತ್ವವೂ,ಅವಕಾಶವೂ ಇರದಿದ್ದ ಕಾಲದಲ್ಲಿ ತಾವೇ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ,ಸ್ವತಃ 35 ವರ್ಷ ಅಧ್ಯಾಪಕರಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅಕ್ಷರಜ್ಞಾನದ ಬೆಳಕು ನೀಡಿದರು. ದಟ್ಟದರಿದ್ರರಾದ,ತಬ್ಬಲಿಗಳಾದ ವಿದ್ಯಾರ್ಥಿಗಳಿಗಾಗಿ ಅನಾಥಾಲಯವನ್ನು ಸ್ಥಾಪಿಸಿದರು.

ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದನ್ನು ಬಹುತೇಕರು ವಿರೋಧಿಸುತ್ತಿದ್ದ ಕಾಲದಲ್ಲಿ ಸ್ವತಃ ತಾವೇ ಹೆಣ್ಣುಮಕ್ಕಳಿಗಾಗಿ ಶಾಲೆ ಆರಂಭಿಸಿದರು.ವಿಧವಾ ವಿವಾಹ ಏರ್ಪಡಿಸಿದರು. ವಿಧವೆಯರಿಗಾಗಿ ವೃತ್ತಿಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಮನೆ ತಪ್ಪಿದ, ತಬ್ಬಲಿ ಹೆಣ್ಣುಮಕ್ಕಳು ಪರಾಶ್ರಯಕ್ಕೆ ಬೀಳುವುದನ್ನು ತಪ್ಪಿಸಲು ಅವರಿಗಾಗಿ ಒಂದು ಉದ್ಯೋಗ ಕೇಂದ್ರವನ್ನು ಸ್ಥಾಪಿಸಿದರು.ಅಸ್ಪೃಶ್ಯರಿಗಾಗಿ ಶಾಲೆಗಳನ್ನು ಆರಂಭಿಸಿದರಲ್ಲದೆ ಅವರಿಗೆ ವೃತ್ತಿಶಿಕ್ಷಣವನ್ನು ಕಲಿಸುವ ಏರ್ಪಾಟು ಮಾಡಿದರು. ಗಾಂಧೀಜಿ ಹರಿಜನ ಸಮಸ್ಯೆಯನ್ನು ಕೈಗೆತ್ತಿಕೊಳ್ಳುವ ಎಷ್ಟೋ ಮೊದಲು ಹರಿಜನರಿಗಾಗಿ ಹಾಸ್ಟೆಲುಗಳನ್ನು ತಾವೇ ತೆರೆದು ಮೈಸೂರು ಸಂಸ್ಥಾನದ ನಾನಾ ಕಡೆ ಅವರಿಗಾಗಿ ವೃತ್ತಿ ಶಿಕ್ಷಣ ಶಾಲೆಗಳನ್ನು ಸರ್ಕಾರದಿಂದ ತೆರೆಸಿದ ಕೀರ್ತಿ ಅವರದು.ಅಶಕ್ತ ಪ್ರ್ರಾಣಿಗಳಿಗಾಗಿ "ಪಿಂಜರಾಪೋಲನ್ನು" ಸ್ಥಾಪಿಸಲು ನೆರವಾದರು.'ಮೈಸೂರು ಪತ್ರಿಕೋದ್ಯಮ ಪಿತಾಮಹ'ರಾಗಿ ಹತ್ತಾರು ಪತ್ರಿಕೆಗಳನ್ನು ಆರಂಭಿಸಿ ಜನಜಾಗೃತಿ ಉಂಟುಮಾಡಿದರು.

ಪ್ರಜಾಪ್ರತಿನಿಧಿ ಸಭೆ,ನ್ಯಾಯವಿಧಾಯಕ ಸಭೆ ,ಪೌರಸಭೆ ಮತ್ತು ಎಕನಾಮಿಕ್ ಕಾನ್ಫರೆನ್ಸ್ ಗಳಲ್ಲಿ ಸದಸ್ಯರಾಗಿ ಪ್ರಜೆಗಳ ಪ್ರತಿನಿಧಿಯಾಗಿ ವಿರೋಧಪಕ್ಷವಾಗಿ ಜನಪರವಾಗಿ ದುಡಿದರು.ಸುಮಾರು 50 ವರ್ಷಕ್ಕೂ ಮೇಲ್ಪಟ್ಟು ಸಂಪೂರ್ಣ ಸಮಾಜದ ಏಳಿಗೆಗಾಗಿ ಅಹರ್ನಿಶಿ ಸೇವೆ ಸಲ್ಲಿಸಿದರು.ತಮ್ಮ ಪತ್ರಿಕಾ ವೃತ್ತಿಯಿಂದಾಗಿ,ಸಾರ್ವಜನಿಕ ಜೀವನದಿಂದಾಗಿ ಅವರು ತಮ್ಮ ಮನೆ ಹೊಲ ಎಲ್ಲ ಮಾರಿಕೊಳ್ಳಬೆಕಾಯಿತು.ಆದರೆ ಯಾವುದರಿಂದಲೂ ಧೃತಿಗೆಡದೆ,ಅನ್ಯಾಯದೊಂದಿಗೆ ರಾಜಿಮಾಡಿಕೊಳ್ಳದೆ ಬಡವರ ನಿಸ್ಸಹಾಯಕರ ಸೇವೆಯನ್ನು ಕೊನೆಯುಸಿರೆಳೆವವರೆಗೂ ವ್ರತವಾಗಿ ಸ್ವೀಕರಿಸಿ ಸಮಾಜಕ್ಕಾಗಿ ಧೀಮಂತ ಸೇವೆ ಸಲ್ಲಿಸಿದ ಶ್ರೇಷ್ಠ ಕರ್ಮಯೋಗಿ ಎಂ.ವೆಂಕಟಕೃಷ್ಣಯ್ಯನವರು.

1844 ರಲ್ಲಿ ಹೆಗ್ಗಡದೇವನಕೋಟೆಯ ಮಗ್ಗೆ ಗ್ರಾಮದಲ್ಲಿ ಜನಿಸಿದ ವೆಂಕಟಕೃಷ್ಣಯ್ಯ ಬಾಲ್ಯದಿಂದಲೇ ಬಡತನವನ್ನು ಬಳುವಳಿಯಾಗಿ ಪಡೆದಿದ್ದರು. ಅವರು ಓದಿದ್ದು ಮೆಟ್ರಿಕ್ಯುಲೇಶನ್ ಅಷ್ಟೆ.ಆದರೂ ವಿದ್ವತ್ಪೂರ್ಣ ಶಿಕ್ಷಕರಾಗಿ ಮರಿಮಲ್ಲಪ್ಪ ಶಾಲೆ,ಸದ್ವಿದ್ಯಾ ಶಾಲೆಗಳಲ್ಲಿ ಸುಮಾರು 40 ವರ್ಷಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.ಸಾಮಾಜಿಕ ಜಾಗೃತಿಗಾಗಿ ಪತ್ರಿಕೋದ್ಯಮವನ್ನು ಪ್ರಾರಂಭಿಸಿದರು.ಕನ್ನಡದಲ್ಲಿ ಸ್ವತಂತ್ರ ಪತ್ರಿಕೆಗಳೇ ಇಲ್ಲದಿದ್ದ ಕಾಲದಲ್ಲಿ ಸಾಧ್ವಿ,ಉದಯ ಚಿಂತಾಮಣಿ,ವಿದ್ಯಾದಾಯಿನಿ,ವೃತ್ತಾಂತ ಚಿಂತಾಮಣಿ,ಹಿತಭೋದಿನಿ,ಸಂಪದಭ್ಯುದಯ, ಮುಂತಾದ ಕನ್ನಡ ಪತ್ರಿಕೆಗಳನ್ನು, Wealth of Mysore, Mysore Patriot,The civil and social journal, Nature cure ಮುಂತಾದ ಇಂಗ್ಲೀಷ್ ಪತ್ರಿಕೆಗಳನ್ನು ನಡೆಸಿ ಜನಜಾಗೃತಿಯನ್ನುಂಟುಮಾಡಿದರು.

ಜನಪರವಾಗಿದ್ದ ಹಾಗೂ ಭ್ರಷ್ಟ ಅಧಿಕಾರಿಗಳಿಗೆ ಸಿಂಹ ಸ್ವಪ್ನವಾಗಿದ್ದ ಕಾರಣಕ್ಕೆ ಇವರ ಅನೇಕ ಪತ್ರಿಕೆಗಳು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ ಮುಟ್ಟುಗೋಲಾದವು.ತಮ್ಮ ಪತ್ರಿಕೆಗಳ ಮೂಲಕ ನಿರ್ಭಯವಾಗಿ ಆಳುವವರ ಅನ್ಯಾಯಗಳನ್ನು ಹೊರಹಾಕಿ ಸಾರ್ವಜನಿಕ ಸಭೆಗಳನ್ನು ಏರ್ಪಡಿಸಿ ಜಾಗೃತಿಯನ್ನು ಉಂಟುಮಾಡುತ್ತಿದ್ದ ವೆಂಕಟಕೃಷ್ಣಯ್ಯನವರು ಆ ಮೂಲಕ 'ಕನ್ನಡ ಪತ್ರಿಕಾ ಪಿತಾಮಹ' ಎಂಬ ಕೀರ್ತಿಗೆ ಭಾಜನರಾದರು.ಜೊತೆಗೆ ಸಾಹಿತಿಗಳೂ, ವಿದ್ವಾಂಸರೂ ಆಗಿದ್ದ ತಾತಯ್ಯ ಅರ್ಥಸಾಧನ, ದೇಶಾಭಿಮಾನ,ವಿದ್ಯಾರ್ಥಿ ಕರಭೂಷಣ, ಆರೋಗ್ಯಸಾಧನ ಪ್ರಕಾಶಿಕೆ, ಹರಿಶ್ಚಂದ್ರ ಚರಿತ್ರೆ ಮುಂತಾದ ವಿದ್ವತ್ಪೂರ್ಣ ಗ್ರಂಥಗಳನ್ನು ಬರೆದಿದ್ದಾರೆ.ಕನ್ನಡ ಸಾಹಿತ್ಯ ಪರಂಪರೆಗೆ ಗಣನೀಯ ಕೊಡುಗೆ ಸಲ್ಲಿಸಿರುವ ವೆಂಕಟಕೃಷ್ಣಯ್ಯನವರನ್ನು1922 ರಲ್ಲಿ ದಾವಣಗೆರೆಯಲ್ಲಿ ನಡೆದ 8 ನೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆರಿಸಿ ಗೌರವ ಅರ್ಪಿಸಲಾಯಿತು.

ವಿಶ್ವವಿಖ್ಯಾತ ಇಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿ ಕನ್ನಡ ನಾಡಿಗೆ ಅದ್ವಿತೀಯ ಕೊಡುಗೆ ನೀಡುವಲ್ಲಿ ತಾತಯ್ಯನವರ ಪಾತ್ರ ಬಹು ಮುಖ್ಯವಾದುದು. ಆಗ ಬೊಂಬಾಯಿ ಸರ್ಕಾರದಲ್ಲಿ ಚೀಫ್ ಇಂಜಿನಿಯರ್ ಆಗಿದ್ದ ವಿಶ್ವೇಶ್ವರಯ್ಯನವರ ಬುದ್ದಿವಂತಿಕೆ,ಕಾರ್ಯದಕ್ಷತೆಗಳು ಅವರದೇ ನಾಡಾದ ಮೈಸೂರಿಗೇ ಲಭಿಸಬೇಕೆಂದು ಮಹಾರಾಜರಿಗೆ ಪತ್ರ ಬರೆದು ,ಅನುಮತಿ ಪಡೆದು ವಿಶ್ವೇಶ್ವರಯ್ಯನವರು ಮೈಸೂರಿಗೆ ಮರಳುವಂತೆ ಮನವೊಲಿಸಿ ಕರೆತಂದವರು ತಾತಯ್ಯ. ಸ್ವಾಮಿ ವಿವೇಕಾನಂದರು,ವಿಶ್ವವಿಖ್ಯಾತ ಕವಿ ರವೀಂದ್ರನಾಥ ಟ್ಯಾಗೋರ್ ರು ,ಮಹಾತ್ಮಾ ಗಾಂಧೀಜಿ,ಜವಾಹರಲಾಲ್ ನೆಹರು ಮುಂತಾದ ಮಹನೀಯರು ತಾತಯ್ಯನವರನ್ನು ಭೇಟಿಯಾಗಿ ಅವರ ಸಮಾಜಕಾರ್ಯಗಳನ್ನು ಪ್ರಶಂಶಿಸಿದ್ದಾರೆ.1927ರಲ್ಲಿ ಅನಾಥಾಲಯಕ್ಕೆ ಭೇಟಿ ನೀಡಿದ್ದ ಗಾಂಧೀಜಿಯವರು ವೆಂಕಟಕೃಷ್ಣಯ್ಯನವರನ್ನು ಆತ್ಮೀಯತೆಯಿಂದ ಆಲಂಗಿಸಿಕೊಂಡು 'ಮೈಸೂರಿನ ಭೀಷ್ಮ' ಎಂದು ಸಂಭೋಧಿಸಿ ಗೌರವಿಸಿದ್ದಾರೆ. 'ಸುಖದಲ್ಲಿ ಕಷ್ಟದಲ್ಲಿ ಅಚಲವಾಗಿ ನಿಂತು ರಾಷ್ಟ್ರದ ಏಳಿಗೆಗಾಗಿ ದುಡಿದ ರಾಷ್ಟ್ರ ವೀರರೆಂದರೆ ಪೂಜ್ಯ ವೆಂಕಟಕೃಷ್ಣಯ್ಯನವರು' ಎನ್ನುತ್ತಾರೆ ಅವರ ಶಿಷ್ಯರು, ಒಡನಾಡಿಗಳಲ್ಲೊಬ್ಬರಾದ ನಾಡಿನ ಶ್ರೇಷ್ಟ ಕವಿ ಡಿ.ವಿ.ಜಿಯವರು.

ವೆಂಕಟಕೃಷ್ಣಯ್ಯನವರು 1894 ರಲ್ಲಿ ಅನಾಥ ಹಾಗೂ ಬಡಮಕ್ಕಳಿಗಾಗಿ ಸ್ಥಾಪಿಸಿದ 'ಅನಾಥಾಲಯ' ಸಾವಿರಾರು ಬಡಮಕ್ಕಳಿಗೆ ಅನ್ನ ಆಶ್ರಯ ನೀಡಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ.ಅವರು ಪ್ರೇರಣೆ ನೀಡಿ ಕಟ್ಟಿ ಬೆಳೆಸಿದ ಮಹಾರಾಣಿ ಶಾಲೆ , ಮರಿಮಲ್ಲಪ್ಪ ಶಾಲೆ ,ಸದ್ವಿದ್ಯಾ ಹಾಗೂ ಶಾರದಾವಿಲಾಸ ಶಾಲೆಗಳು ಇಂದು ನಾಡಿನ ಪ್ರಖ್ಯಾತ ವಿದ್ಯಾಸಂಸ್ಥೆಗಳಾಗಿವೆ. ಲಕ್ಷಾಂತರ ಜನರಿಗೆ ಅಕ್ಷರಜ್ಞಾನದ ಬೆಳಕು ನೀಡುತ್ತಿವೆ.

ವೆಂಕಟಕೃಷ್ಣಯ್ಯನವರಂತಹ ಅಪ್ರತಿಮ ದೇಶಭಕ್ತ,ಧೀಮಂತ ರಾಜಕಾರಣಿ, ಪ್ರಾಮಾಣಿಕ ಪ್ರಜಾ ಸೇವಕ, ಸಾಮಾಜಿಕ ಜಾಗೃತಿಯ ಹರಿಕಾರ , ಲೋಕಹಿತಚಿಂತಕನ ಜೀವನ-ಸಾಧನೆಗಳ ಅಧ್ಯಯನ ನಮ್ಮೆಲ್ಲರ ಬದುಕಿಗೆ ದಾರಿದೀಪ,ಒಂದು ಮಹತ್ತರ ಮಾರ್ಗದರ್ಶಿ.

(ಗ್ರಂಥ ಋಣ: ಲ.ನ.ಶಾಸ್ತ್ರಿಯವರ "ಜಾಗೃತಿಯ ಹರಿಕಾರ ವೆಂಕಟಕೃಷ್ಣಯ್ಯ" ).

ಸೆಪ್ಟೆಂಬರ್ 5 ತಾತಯ್ಯ ನವರ ಜನ್ಮದಿನ. ತಾತಯ್ಯನವರ ಅಭಿಮಾನಿಗಳು, ಅನಾಥಾಲಯದ ಆಡಳಿತ ಮಂಡಳಿ ಹಾಗೂ ಹಳೆಯ ವಿದ್ಯಾರ್ಥಿಗಳೆಲ್ಲರೂ ಸೇರಿ 'ತಾತಯ್ಯನವರ ಅನಾಥಾಲಯ' ದಲ್ಲಿ 'ತಾತಯ್ಯನವರ ಜನ್ಮದಿನಾಚರಣೆ ಹಾಗೂ ಸ್ಮರಣೆ' ಯ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. 'ಮೈಸೂರು ಮಿತ್ರ' ಪತ್ರಿಕೆಯ ಸಂಪಾದಕ ಕೆ.ಬಿ.ಗಣಪತಿ ಕಾರ್ಯಕ್ರಮ ಉದ್ಘಾಟಿಸಲಿದ್ದು ಹಿರಿಯ ವಿದ್ವಾಂಸರಾದ ಟಿ.ವಿ.ವೆಂಕಟಾಚಲ ಶಾಸ್ತ್ರಿ ವೆಂಕಟಕೃಷ್ಣಯ್ಯನವರ ಜೀವನ-ಸಾಧನೆಗಳ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಹಿರಿಯ ವಾಣಿಜ್ಯೋದ್ಯಮಿ ಆರ್.ಗುರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಹೆಚ್ಚಿನ ವಿವರಗಳಿಗೆ: 99863 72503

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X