• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕುರುಬರಿಗೇ ಒಂದು ರೇಡಿಯೋ ಚಾನಲ್!

By Staff
|
Google Oneindia Kannada News

ಸಮುದಾಯ ರೇಡಿಯೋ ಅಂದರೇನು? ಒಂದು ಉದಾಹರಣೆ : ಕರ್ನಾಟಕದಲ್ಲಿ 50 ಲಕ್ಷ ಕುರುಬರಿದ್ದಾರೆ ಎಂದಿಟ್ಟುಕೊಳ್ಳಿ. ಕುರಿಸಾಕಾಣಿಕೆ, ಉಣ್ಣೆ ಉತ್ಪನ್ನ, ವ್ಯಾಪಾರ, ಮಾಂಸ, ಕುರಿ ರೋಗರುಜಿನ, ಬ್ಯಾಂಕ್ ಸಾಲ, ವಧೂವರ ಸಮ್ಮಿಲನ, ಹಬ್ಬ ಜಾತ್ರೆ, ಶಿಕ್ಷಣ, ಅನಾಥಾಲಯ, ವೃದ್ಧಾಶ್ರಮ ಮುಂತಾದ ಕುರುಬ ಜನಾಂಗಕ್ಕೆ ಸಲ್ಲುವ ಎಲ್ಲ ವಿವರಗಳನ್ನು ಪ್ರಸಾರ ಮಾಡಿದರೆ ಕುಲಕ್ಕೆ ಸೇರಿದ ಜನಾಂಗಕ್ಕೆ ಎಷ್ಟೊಂದು ಪ್ರಯೋಜನ ಸಿಗುತ್ತದೆ. ಯೋಚಿಸಿ. ಸಮುದಾಯ ರೇಡಿಯೋ ಕಲ್ಪನೆ, ಉಪಯೋಗ ಮತ್ತು ರಾಜ್ಯದಲ್ಲಿರುವ ಇಂಥ ರೇಡಿಯೋಗಳ ಬಗೆಗೆ ರೇಡಿಯೋಪ್ರಿಯ ಲೇಖಕರು ಬೆಳಕು ಚೆಲ್ಲಿದ್ದಾರೆ. ಓದಿ.

* ನಾಗರಾಜ್, ದೊಮ್ಮಲೂರು, ಬೆಂಗಳೂರು

ಸಮುದಾಯ ಬಾನುಲಿ ಭಾರತಕ್ಕೆ ಹೊಸದು. ಆದರೆ, ನೇಪಾಳ, ಶ್ರೀಲಂಕಾ, ಲ್ಯಾಟಿನ್ ಅಮೇರಿಕಾ, ಉತ್ತರ ಅಮೇರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್, ಆಫ್ರಿಕಾ, ಯುರೋಪ್ ಮುಂತಾದ ದೇಶಗಳಲ್ಲಿ ಜನಜನಿತ. ನಮ್ಮ ದೇಶದಲ್ಲಿ ಸಮುದಾಯ ಬಾನುಲಿ ಪ್ರಾರಂಭಿಸಲು ಭಾರತ ಸರ್ಕಾರ 2006ರ ನವಂಬರ್ 16ರಂದು ಒಂದು ಪಾಲಿಸಿಯನ್ನು ಹೊರಡಿಸಿತು. ಇದರ ಪ್ರಕಾರ ನೊಂದಾಯಿತ ಯಾವುದೇ ಸಂಘ ಸಂಸ್ಥೆಯು ಪರವಾನಗಿಯನ್ನು ಪಡೆದು, ಅವರದೇ ಆದ ಸಮದಾಯ ಬಾನುಲಿಯನ್ನು ತರಂಗಗಳಲ್ಲಿ ಪ್ರಾರಂಭಿಸಬಹುದು. ಈ ಪಾಲಿಸಿಯನ್ನು ಬಳಸಿಕೊಂಡು ಈಗಾಗಲೇ ಹಲವಾರು ವಿಶ್ವವಿದ್ಯಾಲಯಗಳು, ಕೃಷಿ ವಿಶ್ವವಿದ್ಯಾಲಯಗಳು, ಸರ್ಕಾರೇತರ ಸಂಸ್ಥೆಗಳು ಸಮುದಾಯ ಬಾನುಲಿಗಳನ್ನು ಪ್ರಾರಂಬಭಿಸಿವೆ. ಸಂಖ್ಯೆ ನಿಧಾನವಾಗಿ ಬೆಳೆಯುತ್ತಿದೆ.

ಭಾರತದಲ್ಲಿ ಈಗಾಗಲೇ ಸುಮಾರು 50 ಕೃಷಿ ವಿಶ್ವವಿದ್ಯಾಲಯದ ಸಮುದಾಯ ಬಾನುಲಿಗಳು, ಸುಮಾರು 47 ವಿಶ್ವವಿದ್ಯಾಲಯದ ಸಮುದಾಯ ಬಾನುಲಿಗಳು , ಸುಮಾರು 12 ಸರ್ಕಾರೇತರ ಸಂಸ್ಥೆಗೆ ಪರವಾನಗಿ ದೊರೆತ ಬಾನುಲಿಗಳು ಚಾಲ್ತಿಯಲ್ಲಿವೆ. ನಮ್ಮ ಕರ್ನಾಟಕದಲ್ಲಿ ಹೇಳುವುದಾದರೆ ಸದ್ಯಕ್ಕೆ ಒಂದು ಸರ್ಕಾರೇತರ ಸಂಸ್ಥೆಗೆ (ಮೈರಾಡ) ಪರವಾನಗಿ ದೊರೆತಿದ್ದು, ಕೋಲಾರ ಜಿಲ್ಲೆಯ, ಬಂಗಾರಪೇಟೆ ತಾಲ್ಲೂಕಿನ, ಬೂದಿಕೋಟೆಯಲ್ಲಿ ಸುಮಾರು ನಾಲ್ಕು ತಿಂಗಳಿನಿಂದ 90.4 ಕಂಪನಾಂಕದಲ್ಲಿ ಪ್ರಾಯೋಗಿಕ ಪ್ರಸಾರವಾಗುತ್ತಿದೆ.

ಕೃಷಿ ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟಂತೆ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಸುಮಾರು ಒಂದು ವರ್ಷದಿಂದ ಸಮುದಾಯ ಬಾನುಲಿ ತರಂಗಗಳಲ್ಲಿ ಪ್ರಸಾರವಾಗುತ್ತಿದೆ. ಇತ್ತ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಹಾವೀರ್ ಜೈನ್ ಕಾಲೇಜಿನಲ್ಲಿ ಸುಮಾರು ಒಂದೂವರೆ ವರ್ಷದಿಂದ 90.4 ಕಂಪನಾಂಕದಲ್ಲಿ ತರಂಗಗಳಲ್ಲಿ ಪ್ರಸಾರವಾಗುತ್ತಿದೆ. ಶ್ರೀರಮಣ ಮಹರ್ಷಿ ಅಕಾಡೆಮಿಯಲ್ಲಿ ಸುಮಾರು ಒಂದು ವರ್ಷದಿಂದ 90.4 ಕಂಪನಾಂಕದಲ್ಲಿ ಪ್ರಸಾರವಾಗುತ್ತಿದೆ. ಮಂಗಳೂರಿನಲ್ಲಿ ಸಂತ ಅಲೋಷಿಯಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗವು ಸುಮಾರು ಒಂದು ತಿಂಗಳಿನಿಂದ ಪ್ರಾಯೋಗಿಕವಾಗಿ 107.8 ಕಂಪನಾಂಕದಲ್ಲಿ ಪ್ರಸಾರಮಾಡುತ್ತಿದೆ. ತುಮಕೂರಿನಲ್ಲಿ ಸಿದ್ದಾರ್ಥ ಮಿಡಿಯಾ ಸೆಂಟರ್ ನವರು ಸುಮಾರು ಆರು ತಿಂಗಳಿನಿಂದ ಪ್ರಾಯೋಗಿಕವಾಗಿ ಪ್ರಸಾರ ಮಾಡುತ್ತಿದ್ದಾರೆ. ಗುಲ್ಬರ್ಗದಲ್ಲಿ ಶ್ರೀ ಶರಣ ಬಸವೇಶ್ವರ ವಿಧ್ಯಾವರ್ದಕ ಸಂಘದ 94.6 ಕಂಪನಾಂಕ ನಿನ್ನೆ ತಾನೆ (ಆಗಸ್ಟ್ 28, 2009) ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರು ಚಾಲನೆಯನ್ನು ನೀಡುವ ಮುಖಾಂತರ ತರಂಗಗಳಲ್ಲಿ ಪ್ರಸಾರ ಮಾಡಿತು.

ಏನಿದು ಸಮುದಾಯ ಬಾನುಲಿ?

ಸಮುದಾಯ ಬಾನುಲಿ ಅಂದರೆ ಒಂದು ನಿರ್ದಿಷ್ಟ ಸಮುದಾಯವೊಂದರ ಸದಸ್ಯರಿಂದ ನಡೆಸಲ್ಪಡುವ, ಸಮುದಾಯದ ಒಡೆತನಕ್ಕೊಳಪಟ್ಟ ಮತ್ತು ಸಮುದಾಯದಲ್ಲೇ ಇರುವಂತಹ ರೇಡಿಯೋ ವ್ಯವಸ್ಥೆ. ಅಂದರೆ ಒಂದು ನಿರ್ದಿಷ್ಟ ಸಮುದಾಯದ ಅಭಿವೃದ್ಧಿಯ ಸಲುವಾಗಿ ಸರ್ಕಾರದ ಸಹಭಾಗಿತ್ವದಲ್ಲಿ ಕಾರ್ಯವಹಿಸುವ ರೇಡಿಯೋ. ಇದರಲ್ಲಿ ಕೇಳುಗರು ಮತ್ತು ಕಾರ್ಯಕ್ರಮ ಮಾಡುವವರು ಸಾಮಾನ್ಯವಾಗಿ ಒಂದೇ ಸಮುದಾಯದವರು ಆಗಿರುತ್ತಾರೆ. ಸಮುದಾಯ ಬಾನುಲಿಯ ಹಿಂದಿರುವ ಉದ್ದೇಶಗಳೆಂದರೆ ಸಮುದಾಯದ ಶೈಕ್ಷಣಿಕ ಅಭಿವೃದ್ಧಿ, ಸಾಂಸ್ಕೃತಿಕ ಮತ್ತು ಸಾಮಾಜಿಕ ಬೇಡಿಕೆಗಳನ್ನು ನಿವೇದಿಸುವುದು. ರೇಡಿಯೋದಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ಸಮುದಾಯ ರೇಡಿಯೋ ಕೇಂದ್ರ ಸ್ಥಾಪನೆಯಾಗಿರುವ ಪ್ರದೇಶದ ಭಾಷೆಯಲ್ಲಿಯೇ ಇರುತ್ತವೆ. ಅಲ್ಲದೇ ಸ್ಥಳೀಯ ಸಮುದಾಯ ಜನರ ಆಡುಭಾಷೆ ಅಥವಾ ಉಪಭಾಷೆಗಳು ಕೂಡ ಇಲ್ಲಿ ಪ್ರಸಾರ ಮಾಡಲು ಯೋಗ್ಯವಾಗಿರುತ್ತದೆ.

ಯಾರು ಅರ್ಹರು?

ಮೂರು ವರ್ಷಕ್ಕೆ ಮುಂಚೆ ನೊಂದಾಯಿತವಾಗಿರುವ ಯಾವುದೇ ಸಂಸ್ಥೆಯು ಸಮುದಾಯ ರೇಡಿಯೋ ಪರವಾನಗಿ ಪಡೆಯಲು ಅರ್ಹರಾಗಿದ್ದು, ಭಾರತ ಸರ್ಕಾರಕ್ಕೆ ಪರವಾನಗಿಯನ್ನು ಪಡೆಯಲು ಅರ್ಜಿಯನ್ನು ಮತ್ತು ಹಲವು ದಾಖಲೆಗಳನ್ನು ಸಲ್ಲಿಸಬೇಕು. ಭಾರತ ಸರ್ಕಾರದಿಂದ ಪರವಾನಗಿ ದೊರೆಯಲು ಒಂದು ವರ್ಷ ಕಾಲ ಬೇಕಾಗುತ್ತದೆ. ಸರ್ಕಾರಕ್ಕೆ ಅರ್ಜಿ ಸಲ್ಲಿಸುವ ಬಗೆಗೆ, ಇನ್ನಷ್ಟು ಮಾಹಿತಿಯನ್ನು ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರದ ವೆಬ್ ಸೈಟ್ ಆದ http://www.mib.nic.in ನಲ್ಲಿ ಪಡೆಯಬಹುದು.

ಖರ್ಚು ವೆಚ್ಚ?

ಸಮುದಾಯ ಬಾನುಲಿಯನ್ನು ಶುರು ಮಾಡಲು ಕಟ್ಟಡವನ್ನು ಹೊರತುಪಡಿಸಿದರೆ ಕನಿಷ್ಟ 3ರಿಂದ 4 ಲಕ್ಷಗಳು ಸಾಕಾಗುತ್ತದೆ. ಆದರೆ ಹಲವಾರು ಸಂಸ್ಥೆಯವರು ಕೋಟಿಗಟ್ಟಲೆ ಹಣವನ್ನು ದುಂದು ವೆಚ್ಚ ಮಾಡಿ ಸಮುದಾಯ ಬಾನುಲಿಗಳನ್ನು ಶುರು ಮಾಡುತ್ತಿದ್ದಾರೆ. ಉದಾ: ಗುಲ್ಬರ್ಗದ ಶ್ರೀ ಶರಣ ಬಸವೇಶ್ವರ ವಿದ್ಯಾವರ್ದಕ ಸಂಘವು ಸುಮಾರು ಒಂದು ಕೋಟಿ ರೂಗಳನ್ನು ಸಮುದಾಯ ಬಾನುಲಿಗೆ ಖರ್ಚು ಮಾಡಿರುವುದಾಗಿ ಮಾಧ್ಯಮಗಳ ಮೂಲಕ ತಿಳಿಸಿದೆ. ಸಮುದಾಯ ನಿರ್ವಹಿಸುವ ಸಮುದಾಯ ಬಾನುಲಿಗೆ ಇಷ್ಟೆಲ್ಲಾ ಖರ್ಚು ಮಾಡುವ ಅವಶ್ಯಕತೆ ಇಲ್ಲ. ಹೆಚ್ಚು ಹಣ ಖರ್ಚು ಮಾಡಿದರೆ ಸಂಸ್ಥೆಯವರು ಸಮುದಾಯದ ಜನರನ್ನು ಹೆಚ್ಚಾಗಿ ಭಾಗವಹಿಸಲು ಅವಕಾಶ ಕಲ್ಪಿಸುವುದಿಲ್ಲ ಜೊತೆಗೆ ಸಮುದಾಯ ಬಾನುಲಿಯನ್ನು ನಿಯಂತ್ರಿಸಲು ಪಟ್ಟಣಗಳಿಂದ ಮಾಧ್ಯಮದಲ್ಲಿ ಪದವಿ ಪಡೆದವರನ್ನು ಕರೆತಂದು ಕೂರಿಸುತ್ತಾರೆ.

ಸಣ್ಣ ಪುಟ್ಟ ಸಂಸ್ಥೆಗಳು ಇಷ್ಟೆಲ್ಲಾ ದುಡ್ಡು ಖರ್ಚು ಮಾಡಿ ಸಮುದಾಯ ಬಾನುಲಿಯನ್ನು ಪ್ರಾರಂಭಿಸಲು ಸಾಧ್ಯವಿಲ್ಲ. ಅದಕ್ಕಾಗಿ ಸಣ್ಣ ಮೊತ್ತದಲ್ಲೇ ಈ ಸಮುದಾಯ ಬಾನುಲಿಯನ್ನು ಪ್ರಾರಂಭಿಸಬಹುದು. ಇದಕ್ಕಾಗಿಯೇ ಹಲವಾರು ಸಂಸ್ಥೆಗಳು ಕಡಿಮೆ ವೆಚ್ಚದಲ್ಲಿ ಸಮುದಾಯ ಬಾನುಲಿಗಳನ್ನು ಶುರು ಮಾಡುವ ಪ್ರಯತ್ನವನ್ನು ಮಾಡುತ್ತಿವೆ. ನಿಮಗೂ ಸಹ ನಿಮ್ಮ ಸಮುದಾಯವನ್ನು ಇನ್ನಷ್ಟು ಅಭಿವೃದ್ದಿಯನ್ನು ಪಡಿಸಲು ಆಸಕ್ತಿಯಿದ್ದರೆ ಸಮುದಾಯ ಬಾನುಲಿಯನ್ನು ಶುರುಮಾಡಿ. ಭಾರತ ಸರಕಾರದ ಸಂಬಂಧ ಪಟ್ಟ ಇಲಾಖೆಗೆ ಅರ್ಜಿ ಹಾಕಿ. ನಿಮಗೆ ನಿಮ್ಮದೆ ಆದ ಒಂದು ರೇಡಿಯೋ ಅಂತ ಇರಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X