ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುವಳ್ಳುವರ್ ಪ್ರತಿಮೆ ಅನಾವರಣ ನಂತರ ಮುಂದೇನು?

By Staff
|
Google Oneindia Kannada News

H Anandarama Shastry, Bengaluru
ಬೆಂಗಳೂರಿನಲ್ಲಿ ಕನ್ನಡಿಗರು ಕನ್ನಡೇತರರೊಡನೆ ಕನ್ನಡದಲ್ಲೇ ಮಾತನಾಡುವ ಮತ್ತು ವ್ಯವಹರಿಸುವ ದೃಢಸಂಕಲ್ಪ ಮಾಡಬೇಕು. ಇದೇ ವೇಳೆ, ಕರ್ನಾಟಕದ ರಾಜಧಾನಿಯಲ್ಲಿ ಕನ್ನಡಿಗರು ಆಗಲೇ ಅಲ್ಪಸಂಖ್ಯಾತರಾಗಿಬಿಟ್ಟಿರುವುದರಿಂದ ಇನ್ನುಮೇಲೆ ಅನ್ಯ ರಾಜ್ಯಗಳಿಂದ ಬೆಂಗಳೂರಿಗೆ ಜನರ ಪ್ರವಾಹೋಪಾದಿಯ ವಲಸೆಯನ್ನು ನಿಯಂತ್ರಿಸಲು ಸರ್ಕಾರವು ಕಾನೂನಿನ ಚೌಕಟ್ಟಿನೊಳಗೇ ಕ್ರಮಗಳನ್ನು ಕೈಗೊಳ್ಳಬೇಕು.

* ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು

ಪರ-ವಿರೋಧಗಳ ಮಧ್ಯೆ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆಯು ಅನಾವರಣಗೊಳ್ಳುತ್ತಿದೆ. ಅನಾವರಣವನ್ನು ಸಮರ್ಥಿಸುತ್ತ ಕರ್ನಾಟಕದ ಉಚ್ಚ ನ್ಯಾಯಾಲಯವು ಕನ್ನಡಪರ ಸಂಘಟನೆಗಳಿಗೆ ದಂಡಿಯಾಗಿ ಉಪದೇಶವನ್ನೂ ನೀಡಿದೆ.

ಇನ್ನೀಗ ಆಗಬೇಕಿರುವುದು ಕಾವೇರಿ ಜಲವಿವಾದ, ಹೊಗೇನಕಲ್ ಹಗರಣ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಮುಂತಾಗಿ ತಮಿಳುನಾಡಿನೊಡನೆ ಜ್ವಲಂತವಾಗಿರುವ ಕರ್ನಾಟಕದ ಸಮಸ್ಯೆಗಳ ನಿವಾರಣೆ ಮತ್ತು ಬೆಂಗಳೂರಿನಲ್ಲಿ ತಮಿಳರೂ ಸೇರಿದಂತೆ ಕನ್ನಡೇತರರು ಮೇಲುಗೈ ಸಾಧಿಸಹೊರಡದೆ ಕನ್ನಡಿಗರೊಡನೆ ಬೆರೆತು, ಕನ್ನಡವನ್ನೇ ಮಾತಾಡುತ್ತ, ತಾವೂ ಕನ್ನಡನಾಡಿನ ಪ್ರಜೆಗಳೆಂಬ ವಾಸ್ತವವನ್ನು ಮನಸಾ ಸ್ವೀಕರಿಸಿ ಸಮಾನಭಾವದಿಂದ ಸಾಗುವಂಥ ವಾತಾವರಣದ ಸೃಷ್ಟಿ.

ತಮಿಳುನಾಡಿನೊಡನೆ ಮಾತುಕತೆ ಮೂಲಕ ಸಮಸ್ಯೆಗಳನ್ನು ನಿವಾರಿಸುವುದಾಗಿ ನಮ್ಮ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಹೇಳಿದ್ದಾರೆ. ಪ್ರತಿಮೆಯ ಸ್ಥಾಪನೆಯಾದ ಮರುಕ್ಷಣವೇ ಅವರು ಈ ಆಶ್ವಾಸನೆಯನ್ನು ಗಾಳಿಗೆ ತೂರಿಬಿಡುವ ಲಕ್ಷಣ ಅವರ ಇದುವರೆಗಿನ ಕಾರ್ಯವೈಖರಿಯನ್ನು ಗಮನಿಸಿದಾಗ ಕಾಣುತ್ತದೆ. ನಾಡಿನ ನೆಲ-ಜಲ-ಭಾಷೆಗಳ ವಿಷಯದಲ್ಲಿ ಹೀಗೆ ಮಾಡಿದರೆ ಅದು ಅಕ್ಷಮ್ಯ ಅಪರಾಧ. ನಾಡಿನ ಕೋಟ್ಯಂತರ ಜನರು ಈ ವಿಷಯದಲ್ಲಿ ಮುಖ್ಯಮಂತ್ರಿಗಳ ಭವಿಷ್ಯದ ನಡೆಯೇನೆಂಬುದನ್ನು ಕಾತರದಿಂದ ನಿರೀಕ್ಷಿಸುತ್ತಿದ್ದಾರೆ. ಮುಖ್ಯಮಂತ್ರಿಯವರು ತಾನು ನುಡಿದಂತೆ ನಡೆದು ತೋರಿಸಬೇಕು.

ಸಮಸ್ಯೆಗಳು ನ್ಯಾಯಮಂಡಳಿ ಮತ್ತು ನ್ಯಾಯಾಲಯಗಳ ಮೆಟ್ಟಿಲು ಹತ್ತಿದ್ದರೂ ಉಭಯ ರಾಜ್ಯಗಳು ಒಂದು ಒಪ್ಪಂದಕ್ಕೆ ಬಂದರೆ ಸಮಸ್ಯೆಗಳ ಇತ್ಯರ್ಥವು ಕಗ್ಗಂಟೇನಲ್ಲ. ಉಭಯ ರಾಜ್ಯಗಳೂ ಒಪ್ಪಂದವನ್ನು ನ್ಯಾಯಮಂಡಳಿ ಮತ್ತು ನ್ಯಾಯಾಲಯಗಳಿಗೆ ಸೂಕ್ತ ಮನವಿಯೊಂದಿಗೆ ಕಾನೂನು ರೀತ್ಯಾ ಸಲ್ಲಿಸಿದರಾಯಿತು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿಕೆ ವಿರೋಧಿಸಿ ಗಾಂಧಿ ಎಂಬುವವರು ತಾನು ಹೂಡಿರುವ ಮೊಕದ್ದಮೆಯನ್ನೂ ಕರುಣಾನಿಧಿ ಒಂದು ಸೂಚನೆ ಕೊಟ್ಟರೆ ಸಾಕು, ಹಿಂತೆಗೆದುಕೊಂಡುಬಿಡುತ್ತಾರೆ.

ಇನ್ನು, ಬೆಂಗಳೂರಿನಲ್ಲಿ ತಮಿಳರೂ ಸೇರಿದಂತೆ ಕನ್ನಡೇತರರ ವಿಷಯ. ಈ ವಿಷಯದಲ್ಲಿ ಸರ್ಕಾರದಷ್ಟೇ ಬೆಂಗಳೂರಿನ ಕನ್ನಡಿಗರೂ ಜವಾಬ್ದಾರರು. ಸರ್ಕಾರವು ಯಾವುದೇ ಕಾರಣಕ್ಕಾಗಲೀ ಕನ್ನಡೇತರರನ್ನು ಓಲೈಸುವ ಕೆಲಸಕ್ಕಿಳಿಯಬಾರದು. ಈ ಅನುಮಾನದಿಂದಲೇ ಹಲವರು ಪ್ರತಿಮೆ ಅನಾವರಣವನ್ನು ವಿರೋಧಿಸಿದ್ದೆಂಬುದನ್ನು ಸರ್ಕಾರವು ನೆನಪಿಟ್ಟುಕೊಳ್ಳಬೇಕು.

ಬೆಂಗಳೂರಿನಲ್ಲಿ (ಮತ್ತು ಇಡೀ ಕರ್ನಾಟಕದಲ್ಲೂ ಕೂಡ) ಕನ್ನಡಿಗರು ಕನ್ನಡೇತರರೊಡನೆ ಕನ್ನಡದಲ್ಲೇ ಮಾತನಾಡಬೇಕು ಮತ್ತು ವ್ಯವಹರಿಸಬೇಕು. ಇಂದಿನಿಂದ ಹೀಗೊಂದು ದೃಢಸಂಕಲ್ಪ ಮಾಡಬೇಕು. ಇದೇ ವೇಳೆ, ಕರ್ನಾಟಕದ ರಾಜಧಾನಿಯಲ್ಲಿ ಕನ್ನಡಿಗರು ಆಗಲೇ ಅಲ್ಪಸಂಖ್ಯಾತರಾಗಿಬಿಟ್ಟಿರುವುದರಿಂದ ಇನ್ನುಮೇಲೆ ಅನ್ಯ ರಾಜ್ಯಗಳಿಂದ ಬೆಂಗಳೂರಿಗೆ ಜನರ ಪ್ರವಾಹೋಪಾದಿಯ ವಲಸೆಯನ್ನು ನಿಯಂತ್ರಿಸಲು ಸರ್ಕಾರವು ಕಾನೂನಿನ ಚೌಕಟ್ಟಿನೊಳಗೇ ಕ್ರಮಗಳನ್ನು ಕೈಗೊಳ್ಳಬೇಕು. ಉದ್ಯಮ, ನೌಕರಿ ಇತ್ಯಾದಿ ವಿಷಯಗಳಲ್ಲಿ ಇಂಥ ಕ್ರಮಗಳನ್ನು ಕೈಗೊಳ್ಳಲು ಸರ್ವಥಾ ಸಾಧ್ಯ.

ಶಾಲಾ ಪಠ್ಯದಲ್ಲಿ ಸರ್ವಜ್ಞನ ಬಗ್ಗೆ ಪಾಠವನ್ನು ತಮಿಳುನಾಡು ಸರ್ಕಾರವೂ, ತಿರುವಳ್ಳುವರ್ ಕುರಿತು ಪಾಠವನ್ನು ಕರ್ನಾಟಕ ಸರ್ಕಾರವೂ ಅಳವಡಿಸಲಿ. ತಿರುವಳ್ಳುವರ್ ಪ್ರತಿಮೆಯ ಅನಾವರಣವಾಗಿ ನಾಲ್ಕು ದಿನಗಳ ಅನಂತರ ಸರ್ವಜ್ಞನ ಪ್ರತಿಮೆಯು ಅನಾವರಣಗೊಳ್ಳುತ್ತಿದೆ. ಸರ್ವಜ್ಞನ ಪಾಠವನ್ನು ತಮಿಳುನಾಡು ಸರ್ಕಾರವು ಶಾಲಾಪಠ್ಯದಲ್ಲಿ ಅಳವಡಿಸಿದ ಶೈಕ್ಷಣಿಕ ವರ್ಷದ ಮುಂದಿನ ವರ್ಷ ನಾವು ತಿರುವಳ್ಳುವರ್ ಪಾಠವನ್ನು ಅಳವಡಿಸೋಣ. ಇದಕ್ಕೆ ತಮಿಳುನಾಡು ಸರ್ಕಾರ ಒಪ್ಪಲಿ. ಆಗ ನಮಗೆ ತಮಿಳುನಾಡು ಸರ್ಕಾರದಮೇಲೆ ನಂಬಿಕೆಯೂ ಬರುತ್ತದೆ, ಸೌಹಾರ್ದವೆಂಬ ಮಾತಿಗೆ ಬೆಲೆಯೂ ಇರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X