ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತನಿಖಾವರದಿ ಬರೆಯಿರಿ,50ಸಾವಿರ ಗೆಲ್ಲಿರಿ

By Staff
|
Google Oneindia Kannada News

Beluru Sudarshana
ಬೆಂಗಳೂರು, ಆ. 7 : ಪ್ರತಿಭಾನ್ವಿತ ಪತ್ರಕರ್ತೆ ದಿ.ಶಿಲ್ಪಶ್ರೀ ನೆನಪಿನಲ್ಲಿ ಮಿತ್ರಮಾಧ್ಯಮ ಅಂತರ್ ಜಾಲತಾಣವು ತನಿಖಾ ವರದಿ ಪ್ರಶಸ್ತಿಯನ್ನು ಸ್ಥಾಪಿಸಿದೆ. 2009ರ ಆಗಸ್ಟ್ 15ರಿಂದ 2010ರ ಆಗಸ್ಟ್ 15ರ ಅವಧಿಯಲ್ಲಿ ಪ್ರಕಟವಾಗುವ ಕನ್ನಡದ ಅತ್ಯುತ್ತಮ ತನಿಖಾ ವರದಿಗೆ ಪ್ರಪ್ರಥಮ ಶಿಲ್ಪಶ್ರೀ ತನಿಖಾ ವರದಿ ಪ್ರಶಸ್ತಿ"ಯನ್ನು ನೀಡಲಾಗುವುದು. ಈ ಪ್ರಶಸ್ತಿಯು ಆರಂಭದಲ್ಲಿ 50 (ಐವತ್ತು) ಸಾವಿರ ರೂ.ಗಳ ನಗದು ಮತ್ತು ಪ್ರಶಸ್ತಿಪತ್ರವನ್ನು ಒಳಗೊಂಡಿರುತ್ತದೆ. ಮುಂದಿನ ವರ್ಷಗಳಲ್ಲಿ ಈ ಪ್ರಶಸ್ತಿಯ ಮೊತ್ತವನ್ನು ಹೆಚ್ಚಿಸುವ ಉದ್ದೇಶವಿದೆ.

ಪ್ರಶಸ್ತಿಯ ಸಾಮಾನ್ಯ ನಿಯಮಗಳು:

* ತನಿಖಾ ವರದಿಯು ಯಾವುದೇ ರಾಜಕೀಯ, ಧಾರ್ಮಿಕ, ಸಾಮಾಜಿಕ ಹಿತಾಸಕ್ತಿಗಳಿಂದ ಪ್ರಚೋದಿತವಾಗಿರಬಾರದು; ಸ್ವತಂತ್ರ, ನಿಷ್ಪಕ್ಷಪಾತ ವರದಿಗಳಿಗೆ ಮಾತ್ರ ಅವಕಾಶವಿದೆ. ನಾಡಿನ ಅಭ್ಯುದಯ ಮತ್ತು ಸಮಷ್ಟಿ ಹಿತವೇ ಈ ತನಿಖಾ ವರದಿಗಳ ಸ್ಫೂರ್ತಿಯಾಗಿರಬೇಕು.

* ಸಮಾಜದ ಮೇಲೆ, ಆಡಳಿತದ ಮೇಲೆ ತೀವ್ರ ಪರಿಣಾಮ ಬೀರಿ ಸಮಾಜಹಿತಕ್ಕೆ ಕಾರಣವಾದ ವರದಿಗಳಿಗೆ ಆದ್ಯತೆ ನೀಡಲಾಗುವುದು.

* ಕರ್ನಾಟಕದ ರಾಜ್ಯ ಮತ್ತು ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಪ್ರಕಟವಾಗುವ ಕನ್ನಡದ ವರದಿಗಳು ಮಾತ್ರವೇ ಪ್ರಶಸ್ತಿಗೆ ಅರ್ಹವಾಗಿರುತ್ತವೆ. ವಿದ್ಯುನ್ಮಾನ ವರದಿಗಳನ್ನು ಈ ವರ್ಷದ ಪ್ರಶಸ್ತಿಯಲ್ಲಿ ಸೇರಿಸಿಲ್ಲ.

* ಈ ವರದಿಗಳು 2009ರ ಆಗಸ್ಟ್ 15ರಿಂದ 2010ರ ಆಗಸ್ಟ್ 15ರ ಅವಧಿಯಲ್ಲಿ ಪ್ರಕಟವಾಗಿರಬೇಕು.

* ಪ್ರಶಸ್ತಿಗೆ ಅರ್ಹವೆನಿಸಿದ ವರದಿಗಳನ್ನು ವರದಿ ಬರೆದ ಪತ್ರಕರ್ತರಲ್ಲದೆ, ಬೇರೆಯವರೂ ಸಲ್ಲಿಸಬಹುದು.

* ಪ್ರಶಸ್ತಿ ನೀಡುವಲ್ಲಿ ಮಿತ್ರಮಾಧ್ಯಮದ ತೀರ್ಮಾನವೇ ಅಂತಿಮ; ಪ್ರಶಸ್ತಿಗೆ ಅರ್ಹ ವರದಿಗಳು ಬರದಿದ್ದರೆ ಪ್ರಶಸ್ತಿಯನ್ನು ತಡೆ ಹಿಡಿಯಲಾಗುವುದು. ತಜ್ಞ ತೀರ್ಪುಗಾರರ ತಂಡವೊಂದು ಈ ಪ್ರಶಸ್ತಿಯ ವಿಜೇತರನ್ನು ಆಯ್ಕೆ ಮಾಡುತ್ತದೆ.

* ಈ ಪ್ರಶಸ್ತಿಯನ್ನು ತನಿಖಾ ವರದಿಗಾರಿಕೆಯನ್ನು ಉತ್ತೇಜಿಸಲು ನೀಡಲಾಗುತ್ತಿದೆಯೇ ವಿನಃ ಯಾವುದೇ ಪ್ರಚಾರದ ಉದ್ದೇಶ ಇಲ್ಲಿಲ್ಲ. ಆದ್ದರಿಂದ ಪ್ರಶಸ್ತಿ ನೀಡಿಕೆ ಸಮಾರಂಭಕ್ಕೆ ಆದ್ಯತೆಯಿಲ್ಲ. ನಾಡಿನ ಹಿರಿಯರಿಂದ ಪ್ರಶಸ್ತಿಯನ್ನು ನೀಡಿಸುವ ಪ್ರಯತ್ನ ಮಾಡಲಾಗುವುದು. ದಿನಪತ್ರಿಕೆಗಳ ಸಹಕಾರದಿಂದ ಈ ಪ್ರಶಸ್ತಿಯ ಬಗ್ಗೆ ಹೆಚ್ಚಿನ ಪ್ರಚಾರಕ್ಕೆ ಒತ್ತು ನೀಡಲಾಗುವುದು.

* ಆಸಕ್ತರು ತಮ್ಮ ವರದಿಗಳ ಮುದ್ರಿತ ಪ್ರತಿಯನ್ನು ಸ್ಕ್ಯಾನ್ ಮಾಡಿಸುವುದರ ಜೊತೆಗೆ ಒಂದು ಸಾಫ್ಟ್ ಪ್ರತಿಯನ್ನು ಸೇರಿಸಿ [email protected] ಈ ಮೈಲ್ ವಿಳಾಸಕ್ಕೆ ಕಳಿಸಬೇಕು. ಯಾವುದೇ ಕಾಗದದ ಅಂಚೆಯನ್ನು (ಪೋಸ್ಟ್) ಸ್ವೀಕರಿಸಲಾಗುವುದಿಲ್ಲ.

* ತನಿಖಾ ವರದಿಯ ಬಗ್ಗೆ ಯಾವುದೇ ನೆರವು ಬೇಕಾದಲ್ಲಿ ಪತ್ರಕರ್ತರು ಮಿತ್ರಮಾಧ್ಯಮವನ್ನು ಸಂಪರ್ಕಿಸಬಹುದು. ಅಂಥವರ ವಿಷಯ ಗೌಪ್ಯತೆಯನ್ನು ಕಾಪಾಡಲಾಗುವುದು.

ಶಿಲ್ಪಶ್ರೀ ಬಗೆಗೆ : ಕುವೆಂಪು ವಿಶ್ವವಿದ್ಯಾಲಯದಿಂದ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ಬೆಂಗಳೂರಿಗೆ ಬಂದು ವೃತ್ತಿನಿರತೆಯಾಗಿದ್ದ ಕು. ಶಿಲ್ಪಶ್ರೀ 2008ರ ಸೆಪ್ಟೆಂಬರ್ 5ರಂದು ಬೆಂಗಳೂರಿನಲ್ಲಿ ಅಪಘಾತವೊಂದರಲ್ಲಿ ನಿಧನರಾದರು. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ವಾಸಿಸುತ್ತಿದ್ದ ಶಿಲ್ಪಶ್ರೀಯವರು ಬೇಳೂರು ಗ್ರಾಮದ ಹಳೆಮನೆ ರಾಮಚಂದ್ರರ ಕುಟುಂಬಕ್ಕೆ ಸೇರಿದವರು. ಶಿಲ್ಪಶ್ರೀಯವರ ತಂದೆ ನರಹರಿ ತಾಯಿ ಶ್ರೀಮತಿ ಜ್ಯೋತಿ (ಪತ್ರಕರ್ತ ಪೂರ್ಣಪ್ರಜ್ಞ ಬೇಳೂರು ಅವರ ಅಕ್ಕ), ತಂಗಿ ಕುಮಾರಿ ನಭ – ಸಾಗರದಲ್ಲಿ ವಾಸವಾಗಿದ್ದಾರೆ.

ಮಿತ್ರಮಾಧ್ಯಮ : ಕಳೆದ ಹನ್ನೆರಡು ವರ್ಷಗಳಿಂದ ಪುಸ್ತಕ ಪ್ರಕಟಣೆ, ಮಾಧ್ಯಮ ಸಲಹೆ – ಸೇವೆ ಮುಂತಾದ ಬಹುಮುಖೀ ಮಾಧ್ಯಮ ಚಟುವಟಿಕೆಗಳನ್ನು ನಡೆಸುತ್ತಿರುವ ಮಿತ್ರಮಾಧ್ಯಮವು ಈಗ ಕನ್ನಡದ ಮುಂಚೂಣಿ ವೆಬ್‌ಸೈಟ್ ರೂಪದಲ್ಲಿ ಸೃಜನ-ಸೃಜನೇತರ ಸಾಹಿತ್ಯ ಪ್ರಕಟಣೆಯಲ್ಲಿ ತೊಡಗಿದೆ. ಈ ಒಂದು ವರ್ಷದಲ್ಲಿ ಮಿತ್ರಮಾಧ್ಯಮವು ತದಡಿ ಶಾಖೋತ್ಪನ್ನ ವಿದ್ಯುತ್ ಸ್ಥಾವರದ ವಿರುದ್ಧ, ಶಾಸಕರೊಬ್ಬರ 80 ಲಕ್ಷ ರೂ.ಗಳ ದುರ್ಬಳಕೆ ವಿರುದ್ಧ ತನಿಖಾ ವರದಿಗಳನ್ನು ಪ್ರಕಟಿಸಿದೆ. ಸಮಷ್ಟಿಹಿತದ ದೃಷ್ಟಿಯಿಂದ ಮಿತ್ರಮಾಧ್ಯಮವು ಮುಕ್ತ ಮಾಹಿತಿಗಾಗಿ ಹೆಜ್ಜೆ ಇಡುತ್ತಿದೆ. ಮಿತ್ರಮಾಧ್ಯಮವನ್ನು ನಡೆಸುತ್ತಿರುವವರು ಪತ್ರಕರ್ತ ಬೇಳೂರು ಸುದರ್ಶನ.

ವೆಬ್‌ಸೈಟ್: www.mitramaadhyama.co.in
ಈ ಮೈಲ್: [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X