ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡಗದ್ದೆಯಲ್ಲಿ ಬಾನಾಡಿಗಳು ಸೃಷ್ಟಿಸಿದ ತಾರಲೋಕ

By * ಎಂ.ಮೋಹನ್, ಶಿವಮೊಗ್ಗ
|
Google Oneindia Kannada News

Mandagadde bird sancturay
ಮಳೆಗಾಲ ಆರಂಭವಾಗುವ ಮೊದಲೇ ಬಾನಿನಿಂದ ಧರೆಗಿಳಿದು ಬಂದ ಮಿನುಗು ತಾರೆಗಳಂತೆ ಕಂಗೊಳಿಸುವ ದೇಶ ವಿದೇಶಗಳ ಬಾನಾಡಿಗಳಾಗಲೇ ಮಂಡಗದ್ದೆ ಪಕ್ಷಧಾಮಕ್ಕೆ ಆಗಮಿಸಿ ತಾರಾ ಲೋಕವನ್ನೇ ಸೃಷ್ಟಿಸಿದೆ. ತುಂಗಾನದಿ ತೀರದಲ್ಲಿ ಬೀಡುಬಿಟ್ಟಿರುವ ಬಾನಾಡಿಗಳು ಗೂಡು ಕಟ್ಟಲು ತಯಾರಾಗುತ್ತಿದ್ದು, ಮಳೆಬೀಳುವ ಮೊದಲೇ ತಮ್ಮ ತಮ್ಮ ಗೂಡುಗಳನ್ನು ಕಟ್ಟಿಕೊಂಡು safe ಆಗಿ ಬಿಡುವ ತರಾತುರಿಯಲ್ಲಿ ತೊಡಗಿರುವುದನ್ನು ನೋಡುವುದೇ ಒಂದು ಅದ್ಭುತ ಅನುಭವ.

ಶಿವಮೊಗ್ಗದಿಂದ ಕೇವಲ 32 ಕಿ.ಮೀ. ದೂರದಲ್ಲಿರುವ ಮಂಡಗದ್ದೆ ಪಕ್ಷಿಧಾಮದ ಸುತ್ತ ಸುಂದರ ಪರಿಸರವನ್ನು ಹೊಂದಿದ್ದು, ಮಲೆನಾಡ ಸೊಬಗನ್ನು ಮೈತಳೆದು ನಿಂತಿದೆ. ಸುತ್ತಮುತ್ತಲು ಕಾಡು, ಗದ್ದೆ ಬಯಲುಗಳು ಇವುಗಳೇ ಕಣ್ಣಿಗೆ ಬೀಳುತ್ತವೆ. ತುಂಗೆ ಇಲ್ಲಿ ಸಣ್ಣ ದ್ವೀಪಗಳನ್ನು ನಿರ್ಮಿಸಿದ್ದಾಳೆ. ಈ ದ್ವೀಪದಲ್ಲಿರುವ ಮರಗಳೇ ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ.

ದೂರದೂರುಗಳಿಂದ ಮೇ ತಿಂಗಳಿನಲ್ಲಿ ಹಾರಿ ಬರುವ ಬೆಳ್ಳಕ್ಕಿ, ಇಗ್ರೇಟ್ಸ್, ಸ್ನೇಕ್‌ಬರ್ಡ್, ಕಾರ್ಮೋರೆಂಡ್ ಪಕ್ಷಿಗಳು ಮೊಟ್ಟೆ ಇಟ್ಟು ಮರಿ ಮಾಡಿ ನಂತರ ಮರಿಗಳೊಂದಿಗೆ ಹಾರಿ ಹೋಗುತ್ತದೆ. ಇವುಗಳನ್ನು ನೋಡಲು ಪ್ರವಾಸಿಗರು ಬರುತ್ತಿರುತ್ತಾರೆ. ಪಕ್ಷಿ ಪ್ರಿಯರಿಗೆ ಇದು ಹೇಳಿ ಮಾಡಿಸಿದ ತಾಣ. ಜೊತೆಗೆ ಮಕ್ಕಳೊಂದಿಗೆ ಭೇಟಿ ನೀಡಿ ರಜೆಯನ್ನು ಆನಂದದಿಂದ ಕಳೆಯಬಹುದು.

ಇಲ್ಲಿ ಬಾನಾಡಿಗಳನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯಬಹುದು. ಇವುಗಳು ಮೊಟ್ಟೆ ಇಟ್ಟು ಮರಿ ಮಾಡಿದಾಗ ಚಿಕ್ಕಪುಟ್ಟ ಮರಿಗಳಿಗೆ ಆಹಾರ ತಂದು ಅವುಗಳಿಗೆ ಉಣಬಡಿಸುವ ರೀತಿ ಅವುಗಳ ಕಲರವ, ಹಾರಾಟ, ಮೀನಿನ ಬೇಟೆ ಎಲ್ಲವೂ ಚೆನ್ನ. ಈ ಸಮಯದಲ್ಲಿ ಹೋದರಂತೂ ಹಕ್ಕಿಗಳು ತಮ್ಮ ವಂಶಾಭಿವೃದ್ಧಿಗಾಗಿ ಗೂಡು ನಿರ್ಮಿಸುವ ಕಾರ್ಯದಲ್ಲಿ ತೊಡಗಿ, ಕಸ ಕಡ್ಡಿಗಳನ್ನು ಆರಿಸಿ ತಂದು ಗೂಡು ಕಟ್ಟಿ ಮೊಟ್ಟೆ ಇಡುತ್ತವೆ. ನಂತರ ಮರಿಗಳ ಪಾಲನೆಯಲ್ಲಿ ತೊಡಗುತ್ತವೆ. ಎಲ್ಲವೂ ಪಕ್ಷಿ ಪ್ರಿಯರ ಪಾಲಿಗೆ ರಸದೌತಣ. ನವೆಂಬರ್ ತಿಂಗಳಿನಲ್ಲಿ ಅವುಗಳು ಹಾರಿ ಹೋಗುತ್ತದೆ. ಜೊತೆಗೆ ತುಂಗೆಯು ತನ್ನ ಹರಿವನ್ನು ಕಡಿಮೆ ಮಾಡುತ್ತಾಳೆ.

ಇಲ್ಲಿ ಜೂನ್, ಆಗಸ್ಟ್ ತಿಂಗಳಲ್ಲಿ ಮಳೆ ಅಧಿಕವಾಗಿರುವುದರಿಂದ ತುಂಗೆಯು ರೌದ್ರವತಾರ ತಾಳುತ್ತಾಳೆ. ಇದರಿಂದಾಗಿ ಹಲವು ಬಾರಿ ಗೂಡಿನ ಜೊತೆಗೆ ಮೊಟ್ಟೆಗಳು ತುಂಗೆಯ ಪಾಲಾಗಿವೆ. ಪ್ರಕೃತಿ ನಿಯಮವನ್ನು ಭೇದಿಸಲು ಸಾಧ್ಯವೆ... ಹಲವು ಬಾರಿ ಈ ಘಟನೆ ಸಂಬವಿಸಿದರೂ ಮರುವರ್ಷ ಮೇ/ಜೂನ್ ತಿಂಗಳಲ್ಲಿ ಹಳೆಯದನ್ನೆಲ್ಲ ಮರೆತು ಮತ್ತೆ ಮಂಡಗದ್ದೆಗೆ ಬಾನಾಡಿಗಳು ಹಾಜರ್.

ಹೀಗಾಗಿ ಮಂಡಗದ್ದೆ ಪಕ್ಷಿಧಾಮ ಒಂದು ದಿನದ ಪ್ರವಾಸಕ್ಕೆ, ಮಲೆನಾಡ ಸೊಬಗನ್ನು ಸವಿಯಲು, ಪಕ್ಷಿಗಳ ವೀಕ್ಷಣೆಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಹಾಗೆಯೇ ನಗರದಿಂದ ಹೋಗುವಾಗ ಗಾಜನೂರು ಅಣೆಕಟ್ಟೆ, ಸಕ್ರೆಬೈಲು ಆನೆಬಿಡಾರ, ಸುಂದರಕಾಡು ಎಲ್ಲವನ್ನು ನೋಡಿಕೊಂಡು ಸಾಗಬಹುದು.

ವೀಕ್ಷಣೆಗೆ ಹೋದಾಗ ಬಾನಾಡಿಗಳು ಗೂಡು ಕಟ್ಟಲು ಕಸ ಕಡ್ಡಿಗಳನ್ನು ಆರಿಸಿ ತರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ದೇಶ ವಿದೇಶಗಳಿಂದ ಮೇ ತಿಂಗಳಲ್ಲಿ ಇಲ್ಲಿನ ಪಕ್ಷಧಾಮಕ್ಕೆ ಆಗಮಿಸಿ ತಮ್ಮ ವಂಶಾಭಿವೃದ್ಧಿಯನ್ನು ಮಾಡಿಕೊಂಡು ಇಲ್ಲಿಂದ ನಿರ್ಗಮಿಸುತ್ತವೆ. ನಂತರ ಮಂಡಗದ್ದೆ ಪಕ್ಷಿಧಾಮ ಖಾಲಿ ಖಾಲಿ. ಮತ್ತೆ ಅದಕ್ಕೆ ಕಳೆ ಬರುವುದು ಮೇ ತಿಂಗಳಲ್ಲಿ ಬಾನಾಡಿಗಳ ಪುನರ್ ಆಗಮನದಿಂದಲೇ...

ಒಟ್ಟಾರೆಯಾಗಿ ಮಂಡಗದ್ದೆ ಪಕ್ಷಿಧಾಮ ಒಂದು ದಿನದ ಮಟ್ಟಿಗೆ ಪ್ರವಾಸ ಕೈಗೊಳ್ಳಲು ಸೂಕ್ತ ಜಾಗ. ಜೊತೆಗೆ ಹೊತ್ತು ಹೋಗುವುದು ಗೊತ್ತಾಗುವುದಿಲ್ಲ. ಸಂಜೆಯಾಗುತ್ತಿದ್ದಂತೆ ಅಲ್ಲಿಂದ ಹೊರಟರೆ ಕತ್ತಲ ಹಾದಿಯಲ್ಲಿ ಕಾಡಿನ ನಡುವೆ ಬರುವುದು ಮತ್ತೊಂದು ರೀತಿಯ ಕುತೂಹಲ ಸೃಷ್ಟಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X