ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಣ್ಣನ್ನು ಮರೆತವರು ಮರಳಿ ಮಣ್ಣಿಗೆ

By Staff
|
Google Oneindia Kannada News

Vinayak Patagar, Kumata
ಶಿವರಾಮ ಕಾರಂತರ 'ಮರಳಿ ಮಣ್ಣಿಗೆ' ಕೃತಿಯ ಬಗ್ಗೆ ಮಾತನಾಡುತ್ತಿಲ್ಲ. ಮಣ್ಣನ್ನೆ ಮರೆತು ಹೊದ ನಮ್ಮ ಜಿಲ್ಲೆಯ ಪ್ರತಿಭಾವಂತರು ಮರಳಿ ಮಣ್ಣಿಗೆ ಮರಳುತ್ತಿರುವವ ಬಗ್ಗೆ ಒಂದಿಷ್ಟು ಮಾತು. ಆರ್ಥಿಕ ಬಿಕ್ಕಟ್ಟು ಜಾಸ್ತಿ ದುಃಖವನ್ನು ತಂದಿದ್ದರೆ, ಒಂದು ಹಿಡಿ ಮಣ್ಣಿನಷ್ಟು ಸಂತೋಷವನ್ನೂ ಮರಳಿ ನೀಡಿದೆ. ಡಾಲರ್ ಕನಸನ್ನು ಬೆನ್ನತ್ತಿ ಋಣವನ್ನು ಮರೆತಿದ್ದ ಯುವಕ ಯುವತಿಯರಿಗೆ ಆರ್ಥಿಕ ಸಂಕಷ್ಟ ತಕ್ಕ ಪಾಠ ಕಲಿಸಿದೆ.

* ವಿನಾಯಕ ಎಲ್ ಪಟಗಾರ, ಬೆಟ್ಕುಳಿ, ಕುಮಟಾ

ಜಗತ್ತಿನ್ಯಾದಂತ ಆರ್ಥಿಕ ಕುಸಿತ. ಪ್ರತಿದಿನ ನಿಮಿಷದ, ಸೆಕೆಂಡಿನ ಲೆಕ್ಕದಲ್ಲೋ ಸಾವಿರಗಳ ಲೆಕ್ಕದಲ್ಲಿ ಉದ್ಯೋಗ ಕಡಿತವಾಗುತ್ತಿರುವುದನ್ನು ಸುದ್ದಿ ಮಾಧ್ಯಮಗಳು ಮಾತ್ರ ಯಾವುದೇ ಕಡಿತ ಮಾಡದೇ ಪ್ರಕಟಿಸಿದುವರ ಮೂಲಕ ತಮ್ಮ ಧಾರಳತನವನ್ನು ತೊರಿಸುತ್ತಿದೆಯೆನ್ನಿ. ಅದೇನೆ ಇರಲಿ, ಆರ್ಥಿಕ ಕುಸಿತದ ಬಗ್ಗೆ ಮೊದಲು ಕೇಳಿದಾಗ ನಮ್ಮಲ್ಲಿ ಇದರ ಪರಿಣಾಮ ಬೀರಲಿಕ್ಕಿಲ್ಲ ಎಂದೇ ಭಾವಿಸಿದ್ದೆ. ಆದರೆ ಇತ್ತೀಚೆಗೆ ಸದ್ದಿಲ್ಲದೆ ಬದಲಾವಣೆಗಳು ಆಗುತ್ತಿವೆ. ಇದರ ಬಗ್ಗೆ ಒಂದಿಷ್ಟು ಮಾಹಿತಿ.

ಮೊದಲಿಗೆ ನಮ್ಮಲಿನ ಯಾವ ಜನ ಹೆಚ್ಚಾಗಿ ಸಾಫ್ಟ್ ವೇರ್, ಅದು ಇದು ಅಂತ ಬೆಂಗಳೂರು, ವಿದೇಶ, ಅಂತ ಹೋದವರು ಎಂದು ನೊಡಿದರೆ, ಮಲೆನಾಡಿನ ತಂಪಾದ ನೆರಳಲ್ಲಿ ಅಡಿಕೆ ತೋಟ ಮಾಡಿಕೊಂಡಿದ್ದ ರೈತರ (ಒಡೆಯರ..?) ಮಕ್ಕಳು. ಇದಕ್ಕೂ ಒಂದು ಕಾರಣವಿದೆ. ಸಾಫ್ಟ್ ವೇರ್ ಪ್ರವರ್ಧಮಾನಕ್ಕೆ ಬರುವ ಸಂದರ್ಭದಲ್ಲೇ ಅಡಿಕೆಗೆ ನಿರೀಕ್ಷೆಗೂ ಮೀರಿ ಬೆಲೆ ಬಂದಿತು. ಇದು ಉನ್ನತ ವ್ಯಾಸಂಗಕ್ಕೆ ಅನುಕೂಲವನ್ನು ಒದಗಿಸಿಕೊಟ್ಟಿತ್ತಲ್ಲದೆ, ಬುದ್ದಿವಂತರಾದ ನಮ್ಮ ಜನಕ್ಕೆ ಬೆಳೆಯಲು ತುಂಬಾ ಅನುಕೂಲವನ್ನೂ ಒದಗಿಸಿಕೊಟ್ಟಿತು. ದೈಹಿಕ ಶ್ರಮವನ್ನು ಕೇಳದೇ ಬುದ್ದಿಮತ್ತೆಯನ್ನು ಮಾತ್ರ ಬೇಡುವ ಸಾಫ್ಟ್ ವೇರ್ ಕ್ಷೇತ್ರ ನಮ್ಮವರಿಗೆ ತಕ್ಕದಾಗಿ ಹೊಂದಿಕೆಯಾಗಿ, ತಣ್ಣನೆಯ ಏಸಿ ರೂಮಿನಲ್ಲಿ ನಿರೀಕ್ಷೆಗೂ ಮಿರಿದ ಸಂಬಳ ಎಣಿಸುತ್ತ ಪಕ್ಕದೂರಿಗೆ ಹೊಗಿ ಬಂದಂತೆ ವಿದೇಶ ಸುತ್ತತೊಡಗಿದ್ದರು. ಮೊದಲಿಗೆ ಅಪ್ಪ - ಅಮ್ಮಂದಿರಿಗೆ ತಮ್ಮ ಮಕ್ಕಳು ವಿದೇಶದಲ್ಲಿ ದುಡಿಯುವುದು ಸಂತೋಷವೇನೋ ಕೊಡುತ್ತಿತ್ತು. ಆದರೆ ಕ್ರಮೇಣ ಹಿರಿಯರಿಗೆ ಒಂಟಿತನ ಕಾಡಿದ್ದಂತೂ ಸುಳ್ಳಲ್ಲ. ವರ್ಷ ಕಳೆದಂತೆ ಉದ್ಯೋಗ, ವಲಸೆ ಎನ್ನುವುದು ನಮ್ಮ ಮಲೆನಾಡು ಪ್ರದೇಶಗಳ ಮಾನವೀಯ ಸಂಬಂಧಗಳಲ್ಲಿ, ಸಾಮಾಜಿಕ, ಸಾಂಸ್ಕೃತಿಕವಾಗಿ ಪರಿಣಾಮಗಳನ್ನು ಬೀರಲಾರಂಬಿಸಿತು.

ಸಾಫ್ಟ್ ವೇರ್, ಎಂ.ಎನ್.ಸಿ. ಅಂತ ಬೆಂಗಳೂರು, ವಿದೇಶ ಅಂತ ಬಸ್ಸು ವಿಮಾನ ಹತ್ತಿದ ಮೇಲೆ ಮಲೆನಾಡಿನ ಹಳ್ಳಿಗಳಲ್ಲಿ ಜನರೇ ವಿರಳವಾಗತೊಡಗಿದರು. ನೂರಾರು ಎಕರೆ ಅಡಿಕೆ ತೋಟಗಳನ್ನು ನೋಡಿಕೊಳ್ಳಲು ಯಾರು ಇಲ್ಲದಂತಾಗಿ ಬರೆ ಆಳಿನ ಮೇಲೆ ಹಿರಿಯರು ಅವಲಂಬಿತವಾಗಬೇಕಾಯಿತು. ಇಲ್ಲಿಯ ಹೆಣ್ಣು ಮಕ್ಕಳು ಸಹ ಬೆಂಗಳೂರು, ವಿದೇಶದಲ್ಲಿದ್ದವರನ್ನೇ ಮದುವೆಯಾಗಲು ಬಯಸಿದ್ದ ಪರಿಣಾಮ ತೋಟ ನೋಡಿಕೊಳ್ಳುತ್ತಿದ್ದವರಿಗೆ ಹೆಣ್ಣೆ ಸಿಗದೆ ಒತ್ತಾಯದ ಬ್ರಹ್ಮಚರ್ಯ ಪಾಲನೆಗೆ ಒಳಗಾಗಬೇಕಾಯಿತು. ಹೆಣ್ಣು ಸಿಗದೆ ಕಂಗಾಲಾದ ಕೆಲವರು ಬೆಂಗಳೂರಿಗೆ ಹೋಗಿ ತಾತ್ಕಾಲಿಕ ಚಾಕರಿ ಮಾಡಿ ಬೆಂಗಳೂರು ಗಂಡು ಎನ್ನಿಸಿಕೊಂಡು ಮದುವೆಯಾದ ಮೇಲೆ ಪುನ: ಊರಿಗೆ ಮರುಳಿದ ಉದಾಹರಣೆಗಳು ಸಾಕಷ್ಟಿದೆಯೆನ್ನಿ. ಹಬ್ಬ ಹರಿದಿನ ಅಂತ ವಾರಗಟ್ಟಲೆ ಮನೆಗಳೆಲ್ಲಾ ಜನಜಂಗುಳಿಯಿಂದ ಕೂಡಿರುತ್ತಿದ್ದ ದಿನಗಳು ಮಾಯವಾಗಿ ಅಪ್ಪ - ಅಮ್ಮ ಆಳು ಮಾತ್ರ ಮಾಡಿಕೊಳ್ಳುವ ಪರಿಸ್ಥಿತಿ ಪ್ರತಿಯೊಂದು ಮನೆಯಲ್ಲಿ ಬರತೊಡಗಿತು. ದೊಡ್ಡದಾದ ಮನೆಯಲ್ಲಿ ಹಿರಿಯ ಜೀವಿಗಳು ಶಾಪಗ್ರಸ್ತ ಜೀವಿಗಳಂತೆ ಕಾಣ ತೊಡಗಿದ್ದರು. ವರ್ಷಕ್ಕೊಂದು ಬಾರಿನೋ, ಎರಡು ವರ್ಷಕ್ಕೊಂದು ಬಾರಿನೋ ಬುರ್ ಅಂತ ಗಾಡಿ ಮೇಲೆ ಬಂದು ವಾಹ್ ಅಂತಾ ಅಡಿಕೆ ತೋಟ ನೋಡಿ, ಅದೇ ದೃಷ್ಟಿಯಲ್ಲಿ ಹಿರಿಯ ಜೀವಗಳನ್ನು ನೋಡಿ ಟಾಟಾ ಎಂದು ಹೊಗುವ ವಿಸಿಟಿಂಗ್ ಅತಿಥಿಗಳಂತೆ, ಮನೆಯಲ್ಲಿ ಹುಟ್ಟಿ ಬೆಳೆದ ಮಕ್ಕಳೂ ಬದಲಾದರು. ಅಥವಾ ಸಾಫ್ಟವೇರೆ ಆ ರೀತಿ ಬದಲಾಯಿಸಿತೆ ಗೊತ್ತಾಗುತ್ತಿಲ್ಲ.

ಆರ್ಥಿಕ ಕುಸಿತ ಎನ್ನುವುದು 'ಮರಳಿ ಮಣ್ಣಿಗೆ' ಎನ್ನುವ ಮಾತು ನೆನಪಿಗೆ ತರಿಸುತ್ತಿದೆ. ವಿದೇಶದಲ್ಲಿದವರೂ ಬೆಂಗಳೂರಿಗೆ, ಬೆಂಗಳೂರಿನವರೂ ಊರಿಗೆ ಮರುಳುತ್ತಿದ್ದಾರೆ. ವಿದೇಶದಲ್ಲಿರುವವರು ಪದೇ ಪದೇ ಫೋನ್ ಮಾಡಿ ಕ್ಷೇಮ -ಕುಶಲದ ಬಗ್ಗೆ, ಅಡಿಕೆ ಬೆಳೆಗಳ ಬಗ್ಗೆ ವಿಚಾರ ಮಾಡತೊಡಗಿದ್ದಾರೆ. ಮೊದಲ್ಲೆಲ್ಲಾ ಒನ್ ಲೈನ್ ಮುಖಾಂತರ ದೇವರ ಕಾರ್ಯವನ್ನೋ, ಅಜ್ಜನ್ನ ತಿಥಿನ್ನೋ ಮಾಡಿ ಮುಗಿಸುತ್ತಿದ್ದ ಮಂದಿ ಈಗ ಅದೇ ಕಾರ್ಯ ಮಾಡಲು ಕೆಂಪು ಬಸ್ಸು ಹಿಡಿದು ಹಳ್ಳಿಗಳಲ್ಲಿರುವ ತಮ್ಮ ಮನೆಯತ್ತ ಮುಖ ಮಾಡಿದ್ದಾರೆ. ಪ್ರತಿ ಅಡಿಕೆ ಮರವನ್ನು ಮುಟ್ಟಿ ಮುಟ್ಟಿ ನೋಡುತ್ತಿದ್ದಾರೆ. ಬೆಳಿಗ್ಗೆ ವಾಕಿಂಗ್ ಹೆಸರಿನಲ್ಲಿ ತೋಟ ಸುತ್ತುತ್ತಾ ಅಡಿಕೆ ಆರಿಸತೊಡಗಿದ್ದಾರೆ. ಹಿರಿಯ ಜೀವಗಳನ್ನು ಆತ್ಮೀಯವಾಗಿ ಮಾತನಾಡಿಸತೊಡಗಿದ್ದಾರೆ. ಅಡಿಕೆ ಬೆಳೆಗಳ ಬಗ್ಗೆ, ತಮಗಿರುವ ಆಸ್ತಿಗಳ ಬಗ್ಗೆ ಕೂಲಂಕಷವಾಗಿ ವಿಚಾರಿಸತೊಡಗಿದ್ದಾರೆ.

ವರ್ಷಕ್ಕೊಂದು ಬಾರಿ ಊರಿಗೆ ಬರುತ್ತಿದ್ದ ಮನೆ ಮಕ್ಕಳು ಈಗ ಮೂರು ತಿಂಗಳಿಗೊಮ್ಮೆಯಾದರು ಅಜ್ಜನ ತಿಥಿ, ದೇವರ ಕಾರ್ಯಎನ್ನುತ್ತ ಬರುವುದನ್ನು ನೋಡಿ ಹಿರಿಯ ಜೀವಗಳು ಸಂತೋಷ ಪಡಬೇಕೋ, ದುಃಖ ಪಡಬೇಕೋ ತಿಳಿಯದೆ ತಳಮಳ ಗೊಂಡಂತಾಗಿದ್ದಾರೆ. ಇನ್ನು ಅರ್ಧ- ಮರ್ಧ ಬುದ್ಧಿವಂತರಾದ ಕೆಲವು ಯುವಕರು ಬೆಂಗಳೂರಿನಂತಹ ಮಹಾನಗರಗಳಲ್ಲಿ ಖಾಸಗಿ ಬ್ಯಾಂಕುಗಳಲ್ಲಿ ಸಾಲ ಕೊಡಿಸುವ ಏಜೆಂಟರುಗಳಾಗಿ ಟೈ ಕಟ್ಟಿಕೊಂಡು ಕೆಲಸ ಮಾಡುತ್ತ, ಊರಲ್ಲಿ ತಾವೂ ಬ್ಯಾಂಕಿನಲ್ಲಿ ದೊಡ್ಡ ಹುದ್ದೆಯಲ್ಲಿದ್ದೇವೆ ಎಂದು ಹೇಳುತ್ತಿದ್ದವರು, ಈಗ ಟೈ ಕಳಚಿಟ್ಟು ಊರು ಕಡೆ ಮರಳಿದ್ದಾರೆ. ಬ್ಯಾಂಕಿನಲ್ಲಿ ನೌಕರಿಯಿದ್ದ ನಮ್ಮ ಹುಡುಗುರು ಯಾಕೇ ಹಿಂದಿರುಗುತ್ತಿದ್ದಾರೆ ಎಂದು ಅರ್ಥವಾಗದೆ, ಹಿರಿಯ ತಲೆಗಳು ಕಾಶ್ಮೀರ ಸಮಸ್ಯೆಯಷ್ಟೇ ಸೀರಿಸ್ಸಾಗಿ ಸಂಜೆ ಕಟ್ಟೆ ಮೇಲೆ ಗಂಭೀರವಾಗಿ ಚರ್ಚೆಯಲ್ಲಿ ತೊಡಗಿದ್ದಾರೆ. ಆ ಯುವಕರದು ಅಯೋಮಯ ಪರಿಸ್ಥಿತಿ.

ಬರೇ ಸಾಫ್ಟವೇರ್, ವಿದೇಶ, ಬೆಂಗಳೂರಿನ ಕನಸುಗಳೇ ಬೀಳುತ್ತಿದ್ದ ಯವತಿಯರಿಗೆ ಈಗ ಆ ರೀತಿಯ ಕನಸುಗಳು ಬೀಳುವುದು ಕಡಿಮೆಯಾಗಿದೆ. ಮನೆಯ ಮುಂದಿನ ಅಡಿಕೆಮರ, ಕೆಂಪು ಮಣ್ಣಿನ ರಸ್ತೆ , ತಣ್ಣನೆಯ ಮಜ್ಜಿಗೆ, ಕೊಟ್ಟಿಗೆಯ ಎಮ್ಮೆ ಎಲ್ಲವೂ ಹಿತವೆನಿಸತೊಡಗಿದೆ. ಮೊದಲ್ಲೆಲ್ಲಾ ಕಣ್ಣೆತ್ತಿಯೂ ನೋಡದ ಪಕ್ಕದ ಮನೆಯ ಅಡಿಕೆ ತೋಟ ನೋಡಿಕೊಂಡಿರುವ ಯುವಕನ ಕಡೆ ಈಗ ಮುಗಳ್ನಗೆ ಬೀರುತ್ತಿದ್ದಾಳೆ. ತಮ್ಮೂರಿನ ಯುವತಿಯರಿಂದಲೇ ನಿರ್ಲಕ್ಷಕ್ಕೆ ಒಳಗಾಗಿ, ಮದುವೆಯಿಂದ ವಂಚಿತರಾಗಿ, ಚಿಕ್ಕಪುಟ್ಟ ಕತೆ ಕವನ ಲೇಖನಗಳನ್ನು ಬರೆದುಕೊಂಡಿದ್ದ ಬಡಪಾಯಿ ಲೇಖಕನಿಗೆ, ಪಿಗ್ಮಿ ಸಂಗ್ರಹಣೆಕಾರನಿಗೆ, ಅಂಚೆಯಣ್ಣನಿಗೆ, ಕನ್ನಡ ಶಾಲಾ ಮಾಸ್ತರನಿಗೆ, ಅಡಿಕೆ ದಲ್ಲಾಳಿಗೆ ಈಗ ಹುಡುಗಿಯರು ವಾರೆಗಣ್ಣು ಬೀರುತ್ತಿರುವುದು ನೋಡಿ ವಾಸ್ತವವೋ, ಕನಸೋ ಎಂದು ತಿಳಿಯದೇ ಗಲಿಬಿಲಿಗೊಳಗಾಗಿದ್ದಾರೆ. ಊರಲ್ಲೇ ಇದ್ದು ಚಿಕ್ಕಪುಟ್ಟ ಉದ್ಯೋಗ ಮಾಡಿಕೊಂಡಿದ್ದವರಿಗೆ ಈಗ ಮನೆಯವರಿಂದ ದಂಡ - ಪಿಂಡ ಎಂದು ಬೈಯಿಸಿಕೊಳ್ಳುವುದು ತಪ್ಪಿದೆ. ಅವರಿಗೆ ಇದ್ದಕ್ಕಿದ್ದಂತೆ ಡಿಮ್ಯಾಂಡಪ್ಪೋ ಡಿಮಾಂಡೋ.

ಕೆಲವು ಮಠಕ್ಕೆ, ಸ್ವಾಮಿಗಳಿಗೆ ಆದಾಯದಲ್ಲಿ ಭಾರಿ ಕಡಿತ. ವಿದೇಶದ ಡಾಲರ್ ಬರುತ್ತಿಲ್ಲ. ಕರೆಯೋಲೆಯು ಬರುತ್ತಿಲ್ಲ. ವಿದೇಶಿ ಭಕ್ತಾದಿಗಳೇ ಸಂಕಟದಲ್ಲಿರುವಾಗ ಇನ್ನೆಲ್ಲಿ ದೇಣಿಗೆ. ಬೆಂಗಳೂರಿನ ಕೆಲವು ಸಾಫ್ಟವೇರ್ ಕಂಪನಿಗಳು ಮಧ್ಯಾಹ್ನದ ಊಟ ಬಂದ್ ಮಾಡಿವೆ. ಪರಿಣಾಮ ನಮ್ಮ ಜಿಲ್ಲೆಯಿಂದ ಅವರಿಗಾಗಿಯೇ ತಯಾರಾಗಿ ಹೋಗುತ್ತಿದ್ದ ನವಿರಾದ ಹಲಸಿನ ಹಪ್ಪಳಗಳ ರಪ್ತು ಪ್ರಮಾಣದಲ್ಲಿ ಕುಸಿತ ಕಂಡಿದೆಯಂತೆ. ಇನ್ನು ಮುಂದಾದರು ನಮ್ಮ ಜನಸಾಮನ್ಯರಿಗೆ ಕೈಗೆಟಕಬಹುದು ಎಂಬ ಚಿಕ್ಕ ಆಸೆ ಮೂಡಿದೆ. ಖಾಸಗಿ ಬ್ಯಾಂಕುಗಳ ಮೋಹ ಕಡಿಮೆಯಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವ್ಯವಹಾರ ಜಾಸ್ತಿಯಾಗಿದೆ. ಕೋಕೋ ಕೋಲಾ ಕೋಲಾಹಲ ಕಡಿಮೆಯಾಗಿ ಮುರಳ್ಳಹಣ್ಣಿನ ಕೊಕಂಗೆ ಬೇಡಿಕೆ ಬಂದಿದೆ. ಕಾಲಾಯ ತಸ್ಮೈನಮಃ.

ಒಟ್ಟಿನಲ್ಲಿ ಆರ್ಥಿಕ ಕುಸಿತ ಸುಖ - ದು:ಖ ದ ಜೊತೆಗೆ ತನ್ನ ನೆಲದ ಮಣ್ಣನ್ನು ಮರೆತವರನ್ನು ಮರಳಿ ಮಣ್ಣಿಗೆ ಮರಳುವಂತೆ ಮಾಡಿದೆ. ಜನರೆ ವಿರಳವಾಗಿದ್ದ ಸಂಪದ್ಭರಿತ ಮಲೆನಾಡು ಪ್ರದೇಶಗಳಲ್ಲಿ ಜನ ಮುಖ ಮಾಡುತ್ತಿರುವುದು ನಿಜಕ್ಕೂ ಸಂತೋಷದಾಯಕ ಸಂಗತಿ. ಏನೇ ಆಗಲಿ ನಮ್ಮೂರಿನ ಮಣ್ಣೆ ನಮಗೆ ಶಾಶ್ವ್ವತ ಅಲ್ಲವೇ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X