• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಶಿ ಚನ್ನಲಿಂಗೇಶ್ವರ ದೇವಸ್ಥಾನಕ್ಕೂ ಕಬಡ್ಡಿ ನಂಟು

By Staff
|

ರಾಜ್ಯ ಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ ಇತ್ತೀಚೆಗೆ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕ್ಕಿನ ಜೋಡಿಘಟ್ಟೆ-ಹಿರೀಹಳ್ಳಿ ಗ್ರಾಮದಲ್ಲಿ, ಚನ್ನಲಿಂಗೇಶ್ವರ ಯುವಕ ಸಂಘದ ಆಶ್ರಯದಲ್ಲಿ ನಡೆಯಿತು. ಅವಿರತ ತಂಡದ ಸದಸ್ಯರಾದ ಸುಭಾಷ್ ಮತ್ತು ಕೃಪಾಶಂಕರ್ ರವರು ತಮ್ಮ ಸ್ವಗ್ರಾಮವಾದ ಜೋಡಿಘಟ್ಟೆಯಲ್ಲಿನ ಯುವಕ ಸಂಘವನ್ನು ಈ ನಿಟ್ಟಿನಲ್ಲಿ ಪ್ರೋತ್ಸಾಹಿಸಿದರು.

ಲೇಖನ : ಚಿ.ಮ.ಗು ಮತ್ತು ಜಗದೀಶ

ಆಟಗಾರರು ಮತ್ತು ಆಯೋಜಕರು ಹಾಗು ಪರವೂರಿನಿಂದ ಬಂದಿದ್ದ ಇತರ ಆಸಕ್ತರಿಗೂ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದು ನಿಜಕ್ಕೂ ಅಭಿನಂದಿಸಲೇಬೇಕಾದ ವಿಷಯ. ಹಾಸನ ಜಿಲ್ಲೆಯ ಜನತೆಯ ಆದರಾತಿಥ್ಯಕ್ಕೆ ನೆರೆದ ಜನರು ಮಾರುಹೋಗಿದ್ದರಲ್ಲಿ ಅತಿಶಯೋಕ್ತಿಯೇನಲ್ಲ.

ಕರವೇ ಗೌಡರು, ಎಚ್ ಡಿ ರೇವಣ್ಣ ಅವರ ಉಪಸ್ಥಿತಿ

ಶನಿವಾರ ಸಂಜೆ 6.45 ರ ಹೊತ್ತಿಗೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜಾಧ್ಯಕ್ಷ ಟಿ. ಎ. ನಾರಾಯಣಗೌಡರು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಾಂಪ್ರದಾಯಿಕ ರೀತಿಯಲ್ಲಿ ಡೊಳ್ಳು ಕುಣಿತದ ಮೆರುಗಿನೊಂದಿಗೆ ನಾರಾಯಣಗೌಡರಾದಿಯಾಗಿ ಉಳಿದೆಲ್ಲ ಗಣ್ಯರನ್ನು ವೇದಿಕೆಗೆ ಕರೆತರಲಾಯಿತು. ನಂತರ ಸಭಿಕರನ್ನುದ್ದೇಶಿಸಿ ಮಾತನಾಡಿದ ಗೌಡರು ,ಗ್ರಾಮೀಣ ಕ್ರೀಡೆಯಾದ ಕಬ್ಬಡಿಯನ್ನು ಆ ಸ್ಥಳದಲ್ಲಿ ಪ್ರೋತ್ಸಾಹಿಸುತ್ತಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದರು. ಹಾಗೆಯೇ ದೇವಸ್ಥಾನದ ನಿರ್ಮಾಣಕ್ಕೆ ಹಣದ ನೆರವು ನೀಡುವುದಾಗಿ ಆ ಸಂದರ್ಭದಲ್ಲಿ ಘೋಷಿಸಿದರು. ಕಾರ್ಯಕ್ರಮದಲ್ಲಿ ರಾಜಶೇಜರ್ ರವರು ಮಾತನಾಡಿ ಈ ಕೆಲಸವನ್ನು ಅಭಿನಂದಿಸಿ ತಾವು ಸಹ ದೇವಸ್ಥಾನದ ನಿರ್ಮಾಣಕ್ಕೆ ನೆರವು ನೀಡುವುದಾಗಿ ಆಶ್ವಾಸನೆಯಿತ್ತರು. ನಂತರ ಹೊಳೆನರಸೀಪುರದ ಶಾಸಕ, ಮಾಜಿ ಸಚಿವ ರೇವಣ್ಣನವರು ಪಂದ್ಯಾವಳಿಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಒಟ್ಟು 25 ತಂಡಗಳು ರಾಜ್ಯದ ವಿವಿಧ ಮೂಲೆ ಮೂಲೆಗಳಿಂದ ಆಗಮಿಸಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಶನಿವಾರ ರಾತ್ರಿಗೆ ಆರಂಭವಾದ ಪಂದ್ಯಗಳು ಭಾನುವಾರ ಬೆಳ್ಳಿಗ್ಗೆ ಸುಮಾರು 3 ಗಂಟೆಯವರೆಗೂ ಹೊನಲು ಬೆಳಕಿನಡಿ ನಡೆಯಿತು. ಪ್ರತಿಯೊಂದು ಪಂದ್ಯದಲ್ಲೂ ತಂಡಗಳು ಅಂಕ ಗಳಿಸಿದಾಗ ಡೊಳ್ಳು ಕುಣಿತದ ತಂಡದವರು ಡೊಳ್ಳನ್ನು ಬಾರಿಸಿ, ಆಟಗಾರರ ಮತ್ತು ವೀಕ್ಷಕರಿಗೆ ಮತ್ತೂ ಹೆಚ್ಚಿನ ಸ್ಫೂರ್ತಿಯನ್ನು ತುಂಬುತ್ತಿದ್ದರು. ಪ್ರತಿಯೊಂದು ಪಂದ್ಯದ ನಂತರವೂ ಡೊಳ್ಳು ಕುಣಿತದ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಅಂಕಣವನ್ನು ಸಜ್ಜು ಗೊಳಿಸಲು ಮಾರ್ಕರ್ ಕೃಷ್ಣಪ್ಪ ರವರ ಜೊತೆಗೆ ಯುವಕ ಸಂಘದ ಸದಸ್ಯರು ಸಾಕಷ್ಟು ಶ್ರಮ ವಹಿಸಿದರು. ತೀರ್ಪನ್ನು ನೀಡುವ ಜವಾಬುದಾರಿ ರಾಮಲಿಂಗಾಚಾರ್ಯರು, ಮರಿಯಪ್ಪ, ನಂಜೇಶ್ ಗೌಡರು, ಪ್ರಸಾದ್ ಮತ್ತು ತಮ್ಮಣಗೌಡರ ಮೇಲಿತ್ತು.

ಹೀಗೆ ಎಂಟರ ಘಟ್ಟಕ್ಕೆ ತಲುಪಿದ ತಂಡಗಳೆಂದರೆ,

1. ಕೇಶವ ಎ ತಂಡ, ಬೆಂಗಳೂರು

2. ಕೇಶವ ಬಿ ತಂಡ, ಬೆಂಗಳೂರು

3. ಮಾರುತಿ ತಂಡ,

4. ಆರ್. ಡಬ್ಲ್ಯು. ಎಸ್. ಎಫ್. ಎ ತಂಡ, ಬೆಂಗಳೂರು

5. ಬಸವನಗುಡಿ, ಬೆಂಗಳೂರು

6. ವಿಜಯಕುಮಾರ ತಂಡ, ಬೆಂಗಳೂರು

7. ನೇತಾಜಿ ತಂಡ, ಚನ್ನರಾಯಪಟ್ಟಣ

8. ಅಣ್ಣೇನಹಳ್ಳಿ ತಂಡ

ಅಂತಿಮ ಸುತ್ತಿಗೆ ಕೇಶವ ಎ ತಂಡ ಮತ್ತು ಆರ್. ಡಬ್ಲ್ಯು. ಎಸ್. ಎಫ್. ಎ ತಂಡ ಗಳು ಆಯ್ಕೆಯಾದವು.

ಹೆಮ್ಮೆಯ ಕ್ರೀಡಾಪಟುಗಳಿಗೆ ಸನ್ಮಾನ

ಕಾರ್ಯಕ್ರಮದ ನಿರೂಪಣೆ ನಡೆಸಿಕೊಟ್ಟ ಸುಭಾಷ್ ಮತ್ತು ಕೃಪಾಶಂಕರ್ ರವರು ವೀಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಹಾಗೆಯೇ ಕಾಶಿಚನ್ನಲಿಂಗೇಶ್ವರ ದೇವಸ್ಥಾನ ದ ಬಗ್ಗೆ ಒಂದು ಕಿರು ಸಾಕ್ಷ್ಯ ಚಿತ್ರ ಪ್ರದರ್ಶನವನ್ನೇರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ 5 ಜನ ಗಣ್ಯರನ್ನು ಸನ್ಮಾಸಿದ್ದು ಅತಿ ವಿಶೇಷವಾಗಿತ್ತು.ಖೊ-ಖೋ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದ ಆಟಗಾರ ಪ್ರಕಾಶ ಅವರನ್ನು ಕೋಡಿಹಳ್ಳಿ ಶ್ರೀನಿವಾಸರವರು ಸನ್ಮಾನಿಸಿದರು. ರಾಷ್ಟ್ರಮಟ್ಟದ ಟೇಬಲ್ ಟೆನ್ನಿಸ್ ಆಟಗಾರರಾದ ಯತೀಶ್ ಚಿನ್ನೇನಹಳ್ಳಿ ಕಾಳೇಗೌಡ ರವರಿಗೆ ಸನ್ಮಾನ ಮಾಡಲಾಯಿತು.

ಬಾಲಕರ ರಾಷ್ಟ್ರ ಮಟ್ಟದ ಕಬ್ಬಡಿ ಪಂದ್ಯಾವಳಿ ಯಲ್ಲಿ ರಾಜ್ಯವನ್ನು ಹಲವು ಬಾರಿ ಪ್ರತಿನಿಧಿಸಿದ್ದ ಹರೀಶ್ ರವರನ್ನು ಸನ್ಮಾನಿಸಲಾಯಿತು. ರಾಷ್ಟ್ರಕ್ಕೆ ಚಿನ್ನದ ಪದಕ ಗಳಿಸಿಕೊಟ್ಟ ಚನ್ನಪಟ್ಟಣದ ಅರ್ಜುನ ಪ್ರಶಸ್ತಿ ವಿಜೇತ ಬಿ.ಸಿ. ರಮೇಶ್ ರವರನ್ನು ಸನ್ಮಾನಿಸಲಾಯಿತು. ಇವರು ಸದ್ಯಕ್ಕೆ ಕಿಶೋರ್ ನಿರ್ಮಾಣದ, ನಾಗೇಂದ್ರ ಬಾಬು ನಿರ್ದೇಶನದ ಕಬ್ಬಡಿ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಕಡೆಯದಾಗಿ ಜೋಡಿಘಟ್ಟೆ ಗ್ರಾಮದ ಹಿರಿಯರೂ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರೂ ಆದ ನಿಂಗಯ್ಯನವರನ್ನು ಸನ್ಮಾಸಿಲಾಯಿತು.

ಇದಾದ ನಂತರ ಎಲ್ಲರೂ ಬಹುಕಾಲದಿಂದ ನಿರೀಕ್ಷಿಸಿದ್ದ ಅಂತಿಮ ಪಂದ್ಯ ಆರಂಭವಾಯಿತು. ಈ ಪಂದ್ಯದಲ್ಲಿ ಬೆಂಗಳೂರಿನ ತಂಡಗಳಾದ ಕೇಶವ ಏ ಮತ್ತು ಆರ್. ಡಬ್ಲ್ಯು. ಎಸ್. ಎಫ್. ಎ ತಂಡಗಳು ಸೆಣಸಿದವು. ಒಂದರಗಳಿಗೆಯಲ್ಲೇ ಅಂಕಣ ರಣಾಂಗವಾಗಿ ಪರಿವರ್ತಿತವಾದಂತೆ ಕಂಡು ಬಂದಿತು. ಕೇಶವ ತಂಡದ ಲಕ್ಷ್ಮೀಶ ರವರ ಪ್ರಬಲ ಪ್ರತಿರೋಧದ ನಡುವೆಯೂ ಎದುರಾಳಿ ತಂಡದ ಅದರಲ್ಲೂ ಮುಖ್ಯವಾಗಿ ಹಾರುವ ಹಕ್ಕಿಯೇಂದೇ ಖ್ಯಾತಿ ಪಡೆದ ವೆಂಕಟೇಶ ಮತ್ತು ತಾಳ್ಮೆಗೆ ಹೆಸರಾದ ಮಂಜುನಾಥ್ ರವರ ಸಮಯೋಚಿತ ಆಟದಿಂದಾಗಿ ಆರ್. ಡಬ್ಲ್ಯು. ಎಸ್. ಎಫ್. ಎ ತಂಡ ಮೊದಲೆನಯ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಮೊದಲ ಸ್ಥಾನಕ್ಕೆ 15,000 ರು ನಗದು ಮತ್ತು ಪಾರಿತೋಷಕ ಮತ್ತು ಎರಡೆನೆಯ ಸ್ಥಾನವನ್ನಲಂಕರಿಸಿದ ತಂಡಕ್ಕೆ 10,000ರು ನಗದು ಮತ್ತು ಪಾರಿತೋಷಕ ಹಾಗೆಯೇ ಮೂರು ಮತ್ತು ನಾಲ್ಕನೆಯ ಸ್ಥಾನವನ್ನಲಂಕರಿಸಿದ ತಂಡಗಳಿಗೆ ಕ್ರಮವಾಗಿ 5,000 ಮತ್ತು 3000 ನಗದು ಮತ್ತು ಪಾರಿತೋಷಕವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಬಿ.ಜೆ.ಪಿ ಉಪಾಧ್ಯಕ್ಷೆ ಪೂರ್ಣಿಮಾ ಪ್ರಕಾಶ್ ಮತ್ತು ಇನ್ನೋರ್ವ ಬಿ.ಜೆ.ಪಿ ನಾಯಕ ಕಡವಿನ ಕೋಟೆ ಶ್ರೀನಿವಾಸ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾದ ಲಲಿತಮ್ಮ,ಕೆನಾಲಿ ಗೌಡರು, ಆನಂದ್ ಶಿವಪ್ಪ, ಖ್ಯಾತ ಚಿತ್ರ ನಿರ್ದೇಶಕ, ಸಂಕಲನಕಾರ ಹಾಗು ಖ್ಯಾತ ನಟ ದಿ. ಸುಂದರ ಕೃಷ್ಣ ಅರಸ್ ರವರ ಪುತ್ರ ನಾಗೇಂದ್ರ ಅರಸ್, ಕಬ್ಬಡಿ ಚಿತ್ರದ ನಿರ್ದೇಶಕ ನಾಗೇಂದ್ರ ಬಾಬು ರವರು ಉಪಸ್ಥಿತರಿದ್ದರು. ಈ ಪಂದ್ಯಾವಳಿಗೆ ಸಾಕಷ್ಟು ಪ್ರಮಾಣದಲ್ಲಿ ಪ್ರಾಯೋಜಕರು ದೊರಕ್ಕಿದ್ದು ಕಬ್ಬಡಿ ಪಂದ್ಯಕ್ಕೆ ಈಗಲೂ ಇರುವ ಜನಪ್ರಿಯತೆಗೆ ಸಾಕ್ಷಿಯಾಗಿತ್ತು. ಜಾಗತೀಕರಣದ ಅಲೆಯಲ್ಲಿ ಕೊಚ್ಚಿ ಹೋಗುತ್ತಿರುವ ಯುವ ಸಮುದಾಯ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಈ ಒಂದು ಮಟ್ಟದಲ್ಲಿ ಇಷ್ಟೊಂದು ಯಶಸ್ವಿಯಾಗಿ ವ್ಯವಸ್ಥಿತವಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದು ನಿಜಕ್ಕೂ ಒಂದು ಸಾಧನೆಯೇ ಸರಿ. ಇದು ಇತರ ಯುವ ಶಕ್ತಿಗೆ ದಾರಿದೀಪವಾಗಿ ತಮ್ಮ ತಮ್ಮ ಗ್ರಾಮಗಳ ಏಳ್ಗೆಗೆ ಶ್ರಮಿಸುವಂತಾದರೆ ಅದುವೇ ಈ ಭವ್ಯ ಭಾರತದ ಸಾರ್ಥಕತೆ.

ಕಬಡ್ಡಿ ಪಂದ್ಯಾವಳಿ ಹಿಂದಿನ ಕಥೆ

ಜೋಡಿಘಟ್ಟೆಯ ಗ್ರಾಮದಲ್ಲಿ 1962 ನೇ ಇಸ್ವಿಯಲ್ಲಿ ದಿವಂಗತ ಚನ್ನೇಗೌಡರ ನೇತೃತ್ವದಲ್ಲಿ, ಕಾಶಿ ಚನ್ನಲಿಂಗೇಶ್ವರ ದೇವಸ್ಥಾನದ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗಿತ್ತು. ಕಾರಣಾಂತರಗಳಿಂದ ಆ ದೇವಸ್ಥಾನದ ನಿರ್ಮಾಣ ಕಾರ್ಯ ಅಪೂರ್ಣವಾಗಿತ್ತು. ಮತ್ತೆ ಈ ಕೈಂಕರ್ಯಕ್ಕೆ ಜೀವ ಬಂದಿದ್ದು 2007ನೇ ಇಸ್ವಿಯಲ್ಲಿ. ಚನ್ನೇಗೌಡರ ಕಿರಿಯ ಸೊಸೆ ರಶ್ಮಿ ನಟರಾಜ್ ರವರು ತಮ್ಮ ಮಾವನವರ ಕನಸನ್ನು ನನಸಾಗಿಸಲು ಟೊಂಕ ಕಟ್ಟಿ ನಿಂತರು. ಅವರ ಮಾರ್ಗದರ್ಶನದಲ್ಲಿ ದೇವಸ್ಥಾನದ ಕಾರ್ಯಗಳು ಮುಂದುವರಿಯುತ್ತಿದೆ. ಈ ಸಂದರ್ಭದಲ್ಲಿ ಅವರ ನೆರವಿಗೆ ಬಂದಿದ್ದು ಅಲ್ಲಿಯ ಯುವಕ ಸಂಘ. ಕೃಪಾಶಂಕರ ಮತ್ತು ಸುಭಾಷ್ ಎಂಬ ಯುವಕರು. ಗ್ರಾಮದಲ್ಲಿನ ಎಲ್ಲಾ ಯುವಕರನ್ನು ಸಂಘಟಿಸಿ ಒಂದು ಸಂಘವನ್ನು ರಚಿಸಿಕೊಂಡರು. ಜನರ ಮನಸ್ಸಿನಿಂದ ಮರೆಯಾಗಿದ್ದ ದೇವಸ್ಥಾನದ ನಿರ್ಮಾಣ ಕಾರ್ಯಕ್ಕೆ ಕಾಯಕಲ್ಪ ನೀಡಲು ದೃಢವಾದ ಸಂಕಲ್ಪದೊಂದಿಗೆ ರಶ್ಮಿ ನಟರಾಜ್ ರವರ ಜೊತೆ ಕೈ ಜೋಡಿಸಿದರು. ತಮ್ಮ ಶಕ್ತ್ಯಾನುಸಾರ ಹಣವನ್ನೂ ಹರಿಸಿದರು. ಆದರೂ ದೇವಸ್ಥಾನದ ನಿರ್ಮಾಣ ಕಾರ್ಯ ಅಷ್ಟೊಂದು ಸುಲಭ ಸಾಧ್ಯ ಕಾರ್ಯವೇನಲ್ಲವಲ್ಲ. 14 ಅಡಿ ಎತ್ತರದ ಶಿವಲಿಂಗ ಗೋಪುರವುಳ್ಳ, ದಕ್ಷಿಣ ಭಾರತದಲ್ಲೇ ವಿಶಿಷ್ಟವಾದ ದೇವಸ್ಥಾನವಿದು. ಹಾಗಾಗಿ ಇದಕ್ಕೆ ಇನ್ನೂ ಸಾಕಷ್ಟು ಹಣದ ಆವಶ್ಯಕತೆ ಬಂತು. ಹೀಗಾಗಿ ಹಣವನ್ನು ಹೊಂದಿಸುವ ಹೊಸ ದಾರಿಗಳಿಗೆ ಈ ಯುವ ಪಡೆ ಚಿಂತಿಸುತ್ತಿರುವಾಗ ಇವರಿಗೆ ಹೊಳೆದ ಮಾರ್ಗವೆಂದರೆ ರಾಜ್ಯ ಮಟ್ಟದ ಕಬ್ಬಡಿ ಪಂದ್ಯಾವಳಿ ಆಯೋಜನೆ. ಈ ಆಲೋಚನೆ ಬಂದದ್ದೆ ತಡ, ಅನುಷ್ಠಾನಕ್ಕೆ ಇಳಿದೇ ಬಿಟ್ಟರು. ಚನ್ನರಾಯಪಟ್ಟಣದಿಂದ ಹಾಸನಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ, ಚನ್ನರಾಯಪಟ್ಟಣದಿಂದ ಸುಮಾರು 14 ಕಿ.ಮೀ ದೂರದಲ್ಲಿ ಈ ಗ್ರಾಮವಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more