ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಊರು ಹೋಗು, ಕಾಡು ಬಾ ಅಂತಿದೆ

By Staff
|
Google Oneindia Kannada News

Soliloquies of a senior citizen (Photo by Gopika Nath)
ಮನೆಯಲ್ಲಿ ಒಂದು ಹಿರಿಯ ಜೀವ ಅಂತ ಇರತ್ತೆ. ಆ ಜೀವಾತ್ಮವು ಅರುವತ್ತೋ ಎಪ್ಪತ್ತೋ ಎಂಭತ್ತೋ ವಸಂತಗಳನ್ನು ಕಂಡಿರತ್ತೆ. ಕೆಮ್ಮುತ್ತೆ, ಬಾಗಿ ನಡೆಯತ್ತೆ, ಯಾವಾಗಲೂ ಮಲಗೇಯಿರತ್ತೆ. ಆಗಾಗ ಟೀಕೆ ಟಿಪ್ಪಣಿಗಳನ್ನೂ ಮಾಡುತ್ತಿರುತ್ತದೆ. ಪ್ರಕೃತಿ ಸಹಜವಾಗಿ ಆ ಜೀವಕ್ಕೆ ಈಗ ಊರು ಹೋಗು ಅಂತಿದೆ, ಕಾಡು ಬಾ ಅಂತಿದೆ. ಪರಿಸ್ಥಿತಿಯ ಪಿತೂರಿ ಹೇಗಿದೆ ಎಂದರೆ, ಹಿರಿಯ ಜೀವಕ್ಕೆ ಕಾಡು ಸಿಗಲ್ಲ, ಊರು ಬಿಡಲ್ಲ. ಇದು ಪ್ರಶ್ನೆ.

* ಕೆ.ಎಸ್.ರಾಮಗೋಪಾಲ್, ರಾಮನಗರ

ನಾಲಕ್ಕು ಆಶ್ರಮಗಳ ಪೈಕಿ ಕೊನೆಯ ಆದರೆ ಹೆಚ್ಚು ಪ್ರಚಾರವಿಲ್ಲದ ಆಶ್ರಮ ವಾನಪ್ರಸ್ಥ. ಕನ್ನಡದಲ್ಲಿ ಇದರ ಅರ್ಥ, ಮುದುಕರಾದ ಮೇಲೆ ಬದುಕಿನ ಜಂಜಾಟಕ್ಕೆ ವಿರಾಮ ಹೇಳಿ ದಂಪತಿಗಳು ಕಾಡಿಗೆ ಹೋಗಿ ಅಲ್ಲಿ ಶಾಂತ ಜೀವನ ಮಾಡುವುದು. ಸರಳವಾಗಿ ಹೇಳುವುದಾದರೆ ಕಾಡುಪಾಲಾಗುವುದು. ಸಾಮಾನ್ಯವಾಗಿ ಈ ಆಶ್ರಮ ಬದುಕಿನ ಸುಮಾರು 70 ವರ್ಷಗಳ ಆಚೆಯದು. ಮಹಾಭಾರತದ ಕಾಲದಲ್ಲಿ ವಾನಪ್ರಸ್ಥಾಶ್ರಮ ಸಾಮಾನ್ಯವಾಗಿತ್ತು. ಧರ್ಮರಾಯನ ಪಟ್ಟಾಭಿಷೇಕದ ಹಲವಾರು ವರ್ಷಗಳ ನಂತರ ಧೃತರಾಷ್ಟ್ರ, ಗಾಂಧಾರಿ, ಕುಂತಿ ಹಾಗೂ ವಿದುರ ಕಾಡಿಗೆ ಹೋಗಿದ್ದು ನಿಮಗೆ ಗೊತ್ತಿರಬಹುದು.

ನನಗೂ ಹಾಗೆ ಮಾಡುವಾಸೆ. ಆದರೆ ಈ ಕಾಲಮಾನದಲ್ಲಿ ಹೋಗಬೇಕೆಂದುಕೊಂಡರೂ ಕಾಡೆಲ್ಲಿದೆ? ಇದ್ದರೂ ನಗರಗಳಲ್ಲಿ ಸುಖ ಜೀವನ ನಡೆಸಿದ ನಮಗೆ ಕಾಡು ಒಂದು ಕೆಟ್ಟ ಕನಸು. ಟಿ.ವಿ, ಫೋನು, ಗೀಸರ್ ಇಲ್ಲದ ಬದುಕು ಘನಘೋರ. ಮೊಮ್ಮಕ್ಕಳ ಆಟ ಪಾಟ ನೋಡುವುದನ್ನು ಬಿಟ್ಟು ಕಾಡುಪ್ರಾಣಿಗಳ ಭಯದಲ್ಲಿ ಬದುಕಲಾದೀತೇ? ಎಲ್ಲಕ್ಕಿಂತ ಮನೆಯ ಹಿರಿತನ ಬಿಟ್ಟುಕೊಡುವುದೆಂದರೇನು? 40 ವರ್ಷದ ಆಸುಪಾಸಿನಲ್ಲಿರುವ ಮಗ/ ಮಗಳು ಇನ್ನೂ ನಮ್ಮ ಪಾಲಿಗೆ ಏನೂ ತಿಳಿಯದ ಕಿರಿಯರು. ಮನೆಯ ಮರ್ಯಾದೆ ನಮ್ಮ ಹೆಗಲ ಮೇಲೇ ಇದೆ. ಇವರ ಹುಡುಗಾಟದಿಂದ ಅದು ಹೋದರೆ ಇಷ್ಟು ವರ್ಷ ಬದುಕಿದ್ದೇನು ಫಲ? ಈ ಆಲೋಚನಾ ಕ್ರಮಗಳು ನಮ್ಮ ಭ್ರಮೆಯೇ ಇರಬಹುದು. ಅಥವಾ ಬರೀ ಈಗೋ ಸಮಸ್ಯೆ ಇರಬಹುದು. ಆದರೂ ವಾನಪ್ರಸ್ಥದ ಸೆಳೆತ ಆಂತರ್ಯದಲ್ಲಿ ಇದ್ದೇ ಇರುತ್ತದಲ್ಲವೆ.

ಈ ವಯಸ್ಸಿನಲ್ಲಿ ಮನಸ್ಸು ಹುಚ್ಚು ಕುದುರೆ. ಆದರೆ ದೇಹದಲ್ಲಿ ತ್ರಾಣ ಕಮ್ಮಿ. ಹಾಗಾಗಿ ಕಲ್ಪನೆಯೇ ಹೆಚ್ಚು; ಮಾಡಿದ್ದಕ್ಕಿಂತ 'ನಾನು ಮಾಡಿದ್ದೆ' 'ನಾನು ನೋಡಿದ್ದೆ' ಎಂದು ಕೊಚ್ಚಿಕೊಳ್ಳುವ ಹಂಬಲ. ಹೀಗಾಗಿ ಕಿರಿಯರಿಗೆ ಒಣ ಉಪದೇಶ ಮಾಡುವ ಚಟ. ನಮ್ಮ ಕಾಲ ಅಂದರೆ ತಾರುಣ್ಯದ ಕಾಲ ಚೆನ್ನಾಗಿತ್ತು ಎಂಬ ಕಲ್ಪನೆ. ಹಾಗೇ ಇಂದು ಯಾವುದೂ ಸರಿ ಇಲ್ಲ ಅಂತ ಹೇಳಿ ಸಮಾಧಾನ ಪಟ್ಟುಕೊಳ್ಳುವ ಹಠ ಮತ್ತು ಚಟ. ಉದಾಹರಣೆಗೆ ಹೇಳಿದ್ದೇ ಹೇಳಿದ್ದು:ನಮ್ಮ ಕಾಲದಲ್ಲಿ ಮಸಾಲೆ ದೋಸೆಗೆ ನಾಲ್ಕೇ ಆಣೆ. (ಆದರೆ ಪ್ರತಿ ದಿನ ದೋಸೆ ತಿನ್ನಲಿಲ್ಲ ಅನ್ನೋದು ಬೇರೆ ಮಾತು). ಈಗಿನ ಹುಡುಗರು ಸರಿ ಇಲ್ಲ. ನಮ್ಮ ಮಾತು ಕೇಳೋದಿಲ್ಲ. ಇದೇ ನಿತ್ಯ ಜಪ. ನಾವು ಎಷ್ಟು ಕೇಳುತ್ತಿದ್ದೆವು ಅನ್ನೋದು ನಮಗೇ ಗೊತ್ತು. ಹಿಂದೆ ನಮ್ಮ ಹಿರಿಯರು ಏನು ಗೊಣಗುತ್ತಿದ್ದರೋ ಅದೇ ಹಾಡು ನಮ್ಮದು. ಮುಂಚಿನಂತೆ ಮನೆಯಲ್ಲೇ ರೋಫ್ ಹಾಕಿಕೊಂಡು ಇರುವುದು ಖಂಡಿತ ಅಸಾಧ್ಯ. ಈ ತರಹದ ಮನೋಭಾವ ಸಮಸ್ಯೆಗಳನ್ನು ಹೆಚ್ಚು ಮಾಡುತ್ತವೆಯೇ ಹೊರತು ಪರಿಹರಿಸುವುದಿಲ್ಲ. ಮನಸ್ಸನ್ನು ಹದ ಮಾಡಿಕೊಳ್ಳಬೇಕು. ಅದೇ ಪರಿಹಾರ.

ಉಪನಿಷತ್ತು ಹೇಳುತ್ತದೆ: ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋ:. ನಮ್ಮ ಮುಂದಿರುವ ಒಂದೇ ದಾರಿ: ಕುಟುಂಬದ ರಂಗಮಂಚದಿಂದ ನೇಪಥ್ಯಕ್ಕೆ ನಾವಾಗಿಯೇ ಹೋಗುವುದು. ಹಾಗೆಂದರೆ ಊಟ ಮಾಡಿ ಗೊರಕೆ ಹೊಡೆಯುವುದೆಂದಲ್ಲ. ಹೆಚ್ಚಿನ ಜವಾಬ್ದಾರಿಗಳಿಂದ ಮುಕ್ತರಾಗುವುದು. ನಗುಮುಖ, ಸಂದರ್ಭಕ್ಕೆ ತಕ್ಕಂತೆ ಮಾತುಕಥೆ. ಅದಕ್ಕೆ ಬೇಕಾದಂತೆ, ಮನಸ್ಸನ್ನು ಹದ ಮಾಡಿಕೊಳ್ಳುವುದು.

ಈ ಘಟ್ಟದಲ್ಲಿ ಬಲವಾಗಿ ಕಾಡುವುದು ಒಂಟಿತನ. ಇದುವರೆಗೆ ತೆಪ್ಪಗಿದ್ದ ಹೆಂಡತಿ (ಅಪರೂಪವಾಗಿ ಗಂಡ) ಈಗೀಗ ಕೆಲವಾರು ಬಾರಿಯಾದರೂ ತಾತ್ಸಾರ ತೋರಿಸುತ್ತಿದ್ದಾರೆ ಎನ್ನುವ ಅನುಮಾನ ಕಾಡಬಹುದು. ಮನೆಯಲ್ಲಿ ತನ್ನ ಮಾತು ಯಾರಿಗೂ ಬೇಡವೇನೋ ಅನ್ನುವ ದುಗುಡ. ಇದಕ್ಕೆ ಒಂದೇ ಉಪಾಯ ಅಂದರೆ ಯಾರಾದರೂ ಸಲಹೆ ಕೇಳಿದರೆ ನಮ್ಮ ಅನುಭವದ ಆಧಾರದ ಮೇಲೆ ಅಭಿಪ್ರಾಯ ಕೊಡುವುದು. ಕೇಳದಿದ್ದರೆ ಅಥವಾ ಅವರು ತಮಗೆ ತೋಚಿದಂತೆ ಬೇರೆ ನಿರ್ಧಾರ ತೆಗೆದುಕೊಂಡಾಗ ತೆಪ್ಪಗಿರುವುದು. ಮಾತು ಬೆಳ್ಳಿ, ಮೌನ ಬಂಗಾರ.

ಕಿರಿಯರಿಗಿರುವ ಇಂದಿನ ಒತ್ತಡಗಳಿಗೆ ಹೋಲಿಸಿದರೆ ನಮ್ಮದು ಸಮಸ್ಯೆಗಳೇ ಅಲ್ಲ; ಅವರವರ ಬದುಕು ಅವರವರದು, ಅವರ ಜೀವನಶೈಲಿಯ ಬಗ್ಗೆ ಟೀಕಿಸದೇ ಸುಮ್ಮನಿರುವುದು ಒಳ್ಳೆಯದು. ನಮ್ಮ ಎಲ್ಲಾ ಬೇಡಿಕೆಗಳನ್ನೂ ತೀರಿಸುವುದು ಕಿರಿಯರ ಹೊಣೆಯಲ್ಲ ಎನ್ನುವ ಎಚ್ಚರ ಇರುವುದು ಉತ್ತಮ. ಮೊಮ್ಮಕ್ಕಳನ್ನು ಮಗ/ಸೊಸೆ, ಮಗಳು/ಅಳಿಯ ಗದರಿಸಿದಾಗ ಮೂಗು ತೂರಿಸಬಾರದು. ಇದರಿಂದ ನಮ್ಮ ಮರ್ಯಾದೆ ಉಳಿಯುತ್ತೆ.

ನಮ್ಮ ನಂಬಿಕೆಗಳು ನಮ್ಮದೇ, ಅದನ್ನು ಬೇರೆಯವರ ಮೇಲೆ ಹೇರದಿರುವುದು ನಮಗೇ ಕ್ಷೇಮ. ಇನ್ನೊಂದು ಎಚ್ಚರಿಕೆಯ ಮಾತು: ಮನೆಗೆ ಬಂದವರೊಂದಿಗೆ ಮನೆಯ ಸಣ್ಣಪುಟ್ಟ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳಬಾರದು. ಕೆಲಸದ ಹುಡುಗ/ಹುಡುಗಿ ಒಳ್ಳೆಯರೆಂದು ಒಡವೆ, ಹಣ ಇಟ್ಟಿರುವ ಜಾಗ ತೋರಿಸುವುದು, ಬ್ಯಾಂಕು ಪಾಸ್ ಬುಕ್ ಅಥವಾ ಹಣ ತರಲು ಅವರಿಗೆ ಚೆಕ್ ಕೊಡುವುದು ಅಪಾಯ. ಯಾವುದೇ ಕಾರಣಕ್ಕೂ ಕೆಲಸದವರೊಂದಿಗೆ ಮನೆಯವರನ್ನು ದೂರಬಾರದು. ಮನೆಯ ಎಲ್ಲಾ ಗೋಡೆಗಳಿಗೂ ಕಿವಿ ಇರುತ್ತೆ ಅಂತ ನೆನಪಿನಲ್ಲಿರಬೇಕು.

ಸಾಧ್ಯವಾದರೆ ನಮ್ಮದೇ ಹಣ, ಸಾಧ್ಯವಾದರೆ ಸ್ವಂತ ವಾಹನ ಇಟ್ಟುಕೊಂಡಿರುವುದು ಕ್ಷೇಮ. ಇದರಿಂದ ಎಲ್ಲಕ್ಕೂ ಬೇರೆಯವರನ್ನು ಆಶ್ರಯಿಸುವುದು ಕಮ್ಮಿಯಾಗಬಹುದು. ಟಿ.ವಿ. ನೋಡುವ ಚಟ ಇದ್ದರೆ ರೂಮಿನಲ್ಲಿ ಇನ್ನೊಂದು ಟಿವಿ ಇಟ್ಟುಕೊಳ್ಳಬಹುದು. ವಿರಾಮವಾಗಿ ಬೇಕಾದ ಪ್ರೋಗ್ರಾಂ ನೋಡಲು ತೊಂದರೆ ಇರುವುದಿಲ್ಲ. ಮೊಮ್ಮಕ್ಕಳು ಕಾರ್ಟೂನ್ ನೋಡುವಾಗ ನಾವು ಆರಾಮವಾಗಿ ಕನ್ನಡ ಪ್ರೋಗ್ರಾಂ ನೋಡಬಹುದು.

ವಯಸ್ಸೂ ಆಗಿ ನೋಡಿಕೊಳ್ಳುವರು ಯಾರೂ ಇಲ್ಲ ಎಂದಾಗ ಯಾವುದಾದರೂ ವೃದ್ಧಾಶ್ರಮ ಸೇರುವುದು ಉತ್ತಮ. ಆನುವಂಶಿಕ ಅಥವಾ ನಮ್ಮದೇ ಗಳಿಕೆಯಾದ ರೋಗ ರುಜಿನಗಳ ಶಮನಕ್ಕೆ ಸಮಯಕ್ಕೆ ತಕ್ಕ ಔಷಧಿ ತೆಗೆದುಕೊಳ್ಳುವುದು ನಮ್ಮದೇ ಕೆಲಸ. ಆದರೆ ನಮ್ಮ ರೋಗಗಳ ಬಗ್ಗೆ ಸದಾ ಗೊಣಗುವುದರಿಂದ ಕಿರಿಕಿರಿ ಜಾಸ್ತಿ ಆಗಬಹುದು. ಮನೆಯ ಮಾನ ಕಳೆಯದ ಯಾವುದಾದರೂ ಹವ್ಯಾಸ ಇದ್ದರೆ ಬದುಕಿಗೆ ಒಂದು ಅರ್ಥ. ಜೊತೆಗಾರರೂ ಸಿಗುತ್ತಾರೆ. ಖುಶಿಯಾಗೂ ಇರಬಹುದು. ಆರೋಗ್ಯಕ್ಕೂ ಒಳ್ಳೆಯದು.

ದೇವರನ್ನು ನಂಬುವುದೂ ಬಿಡುವುದೂ ನಮಗೇ ಬಿಟ್ಟಿದ್ದು. ಆದರೆ ಯಾವುದೋ ಒಂದು ಶಕ್ತಿ ಈ ಪ್ರಪಂಚವನ್ನು ಕಾಯುತ್ತಿದೆ ಎನ್ನುವ ನಂಬಿಕೆ ಬದುಕಿಗೆ ಒಂದು ಊರುಗೋಲು. ಈ ನಂಬಿಕೆ ಸಮಾಜದಲ್ಲಿ ಗೌರವನ್ನೂ ತರುತ್ತದೆ. ಕೊನೆಯಲ್ಲಿ ಒಂದು ಮಾತು. ವೃದ್ಧಾಪ್ಯದಲ್ಲಿ ದೀಪ ನಮಗೆ ಮಾದರಿ ಆಗಬೇಕು. ಬತ್ತಿ ಹಾಗೂ ಎಣ್ಣೆ ಕಮ್ಮಿಯಾದಂತೆ ದೀಪದ ಬೆಳಕು ಶಾಂತವಾಗುತ್ತಾ ಹೋದರೂ ಆರುವತನಕ ಅದು ಬೆಳಕು ಕೊಡುತ್ತೆ.

ಕಡೆಯ ದಿನಗಳಲ್ಲಾದರೂ ನಮ್ಮ ಬದುಕೂ ಇಂತಹ ದೀಪವಾದರೆ ಎಷ್ಟು ಚೆನ್ನ? ನಮ್ಮ ನಂತರವೂ ನಾವು ಬದುಕಿದ ರೀತಿ ಕಿರಿಯರ ಪಾಲಿಗೆ ಸುಂದರ ನೆನಪಾಗಬಹುದು. ಇದೇ ಇಂದಿನ ಕಾಲದ ಮಾನಸ ವಾನಪ್ರಸ್ಥ ಆಶ್ರಮ ಅಂತ ನನ್ನ ಅನಿಸಿಕೆ. ಏನಂತೀರಿ?

ಲೇಖಕರು : ಹಿರಿಯ ವಕೀಲರು, ಅಗ್ರಹಾರ, ರಾಮನಗರ (ಜಿಲ್ಲೆ) 571 511

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X