ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಭಾಷೆಗೆ ಶಾಸ್ತ್ರೀಯ ಗೌರವ : ಮುನ್ನಾನೋಟಗಳು

By Staff
|
Google Oneindia Kannada News

Anand
ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ಮಾನ ಪ್ರಾಪ್ತವಾಗಬೇಕೆಂದು ಕನ್ನಡಿಗರು ಎನಿಸಿಕೊಂಡವರೆಲ್ಲ ವರ್ಷಾನುಗಟ್ಟಳೆಯಿಂದ ಆಗ್ರಹಿಸುತ್ತಲೇ ಬಂದಿದ್ದಾರೆ. ಈ ಆಗ್ರಹಕ್ಕೆ ಕೇಂದ್ರ ಸರಕಾರ ತಲೆದೂಗಿ, ತಲೆಬಾಗಿ ಕನ್ನಡಿಗರ ಬೇಡಿಕೆಯನ್ನು ಈಡೇರಿಸುವ ಇಂಗಿತವನ್ನು ಗುರುವಾರ [ಜೂ.19, 2008]ಕೊಟ್ಟಿದೆ. ಶಾಸ್ತ್ರೀಯ ಸ್ಥಾನ ಕನ್ನಡಕ್ಕೆ ದೊರಕಿದರೆ ಅದರಿಂದ ಉತ್ಪತ್ತಿಯಾಗುವ ಲಾಭಗಳೇನು? ಪ್ರಯೋಜನಗಳೇನು ? ಮುಂದೇನು ? ಬನವಾಸಿ ಬಳಗದ ಆನಂದ್ ಜಿ ಅವರಿಂದ ಒಂದು ಸಿಂಹಾವಲೋಕನ.

***

ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತಾಗಿನಿಂದಲೂ (2004ರಲ್ಲಿ) ಕನ್ನಡಿಗರೂ ಕೂಡಾ ನಾನಾ ತೆರನಾಗಿ ಹೋರಾಟ/ ಒತ್ತಾಯ ಹೇರಿಕೆಗಳನ್ನು ತೀವ್ರವಾಗಿ ನಡೆಸಿದ್ದು, ಇದೀಗ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆಯಲಿರುವ ಸೂಚನೆಗಳು ದಟ್ಟವಾಗಿ ಕಂಡು ಬರುತ್ತಿವೆ. ಭಾರತ ಸರ್ಕಾರ ತಮಿಳು ಕಣ್ಣಿಗೆ ಬೆಣ್ಣೆ, ಕನ್ನಡದ ಕಣ್ಣಿಗೆ ಸುಣ್ಣ ಹಚ್ಚುವುದೆಂಬ ಅಪವಾದದಿಂದ ಪಾರಾಗಲು ಈ ಕ್ರಮ ಅತ್ಯಗತ್ಯವಾಗಿದೆ.

ಪ್ರಪಂಚದಲ್ಲಿನ ಪುರಾತನ ಭಾಷೆಗಳಲ್ಲೊಂದಾಗಿದ್ದು, ಸಾವಿರಾರು ವರ್ಷಗಳ ಹಳಮೆ, ತನ್ನದೇ ಸ್ವತಂತ್ರ ನೆಲೆ, ಒಂದು ಪರಂಪರೆಗೆ ಕಾರಣವಾಗುವ ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡಲಾಗುತ್ತಿದ್ದು ಭಾರತದಲ್ಲಿ ಮೊಟ್ಟಮೊದಲಿಗೆ ಆ ಸ್ಥಾನಮಾನವನ್ನು ತಮಿಳಿಗೆ 2004ರಲ್ಲಿ ನೀಡಲಾಯಿತು. ಇದಾದ ಒಂದು ವರ್ಷದ ನಂತರ ಸಂಸ್ಕೃತ ಭಾಷೆಗೂ ಆ ಗೌರವ ನೀಡಲಾಯಿತು. ಯಾವ ಅರ್ಹತೆಗಳು ತಮಿಳಿಗೆ ಇವೆಯೋ ಅವೆಲ್ಲಾ ಕನ್ನಡಕ್ಕೆ ಇರುವುದರಿಂದ ಕನ್ನಡಕ್ಕೂ ಶಾಸ್ತ್ರೀಯ ಸ್ಥಾನ ನೀಡಬೇಕೆಂದು ಒತ್ತಾಯಿಸಿದಾಗ ಕೇಂದ್ರ ಸರ್ಕಾರ ಹೊಸದಾಗಿ ಅನೇಕ ಮಾನದಂಡಗಳನ್ನು ನಿಶ್ಚಯಿಸಿ ಅದರ ಪರಾಮರ್ಶೆಗೆ ಒಂದು ತಜ್ಞರ ಸಮಿತಿಯನ್ನು ಮಾಡಿತು.

ಕನ್ನಡ ಭಾಷೆ ಈ ಎಲ್ಲ ಕಟ್ಟಳೆಗಳನ್ನು ಪೂರೈಸುತ್ತಿದ್ದು ಅದಕ್ಕೆ ಪೂರಕ ದಾಖಲೆಗಳನ್ನು ತಜ್ಞರ ಸಮಿತಿಯ ಮುಂದೆ ಇಡಲಾಗಿದೆ. ಇವುಗಳ ಪರಾಮರ್ಶೆ ಮಾಡಿ ಅತಿ ತ್ವರಿತವಾಗಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಘೋಷಿಸುವಂತೆ ಕೇಂದ್ರವನ್ನು ಒತ್ತಾಯಿಸಲಾಗುತ್ತಿದೆ. ತಮಿಳಿನಷ್ಟೇ ಹಳಮೆ, ಹಿರಿಮೆ, ಪರಂಪರೆ ಹೊಂದಿರುವ ಕನ್ನಡ ಭಾಷೆಗೂ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡುವಂತೆ ನಡೆಯುತ್ತಿರುವ ಹಕ್ಕೊತ್ತಾಯಕ್ಕೆ ಇದೀಗ ಫಲ ಸಿಗುವ ಕಾಲ ಸನ್ನಿಹಿತವಾಗಿದೆ.

ಕನ್ನಡ ಭಾಷೆಗೆ ಇಂತಹ ಒಂದು ಸ್ಥಾನಮಾನ ದೊರೆಯುವುದರಿಂದ ಮೊದಲಿಗೆ ಪ್ರಪಂಚದೆಲ್ಲೆಡೆಯಿಂದ ವಿಶೇಷ ಮನ್ನಣೆ ಸಿಗಲಿದೆ. ಶಾಸ್ತ್ರೀಯ ಕನ್ನಡ ಭಾಷಾ ಬೆಳವಣಿಗೆಗೆ ಅನೇಕ ರೀತಿಯ ಬೆಂಬಲ ದೇಶ ವಿದೇಶಗಳಿಂದ ಸಿಗುತ್ತದೆ. ಭಾರತ ಸರ್ಕಾರದ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ, ವಿಶ್ವದ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಶಾಸ್ತ್ರೀಯ ಕನ್ನಡದ ಕಲಿಕೆಗೆ ಪೀಠಗಳ ಸ್ಥಾಪನೆಯಾಗಲಿವೆ. ಭಾರತೀಯ ವಾರ್ಷಿಕ ಬಜೆಟ್‌ನಲ್ಲಿ ಕೆಲ ಕೋಟಿ ರೂಪಾಯಿಗಳ ವಾರ್ಷಿಕ ಅನುದಾನ ಸಿಗಲಿದೆ.

ಕನ್ನಡ ಭಾಷಾ ಪ್ರಚಾರ, ನಿಘಂಟುಗಳ ರಚನೆ, ವಿದ್ಯುನ್ಮಾನ ನಿಘಂಟು, ಭಾರತೀಯ ಸಮಾಜದ ಮೇಲೆ ಕನ್ನಡದ ಪ್ರಭಾವ, ಕನ್ನಡ ಭಕ್ತಿ ಪಥದಂತಹ ಹಲವಾರು ಆಯಾಮಗಳ ಅಧ್ಯಯನಕ್ಕೆ ಉತ್ತೇಜನ ಸಿಗುತ್ತದೆ. ವಿಶ್ವ ಪರಂಪರೆಯ ನಿರ್ಮಾಣದಲ್ಲಿ ಕನ್ನಡ ವಹಿಸಿದ ಪಾತ್ರಕ್ಕೆ ಮನ್ನಣೆ ದೊರೆಯಲಿದೆ. ಹಾಗಾಗಿ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಮಹತ್ವದ್ದಾಗಿದೆ.

ಕೆಲ ಬುದ್ಧಿಜೀವಿಗಳು ಇಂತಹ ಸ್ಥಾನಮಾನದ ಅಗತ್ಯ ಕನ್ನಡಕ್ಕಿಲ್ಲ ಅನ್ನುವ ಅಭಿಪ್ರಾಯ ನೀಡಿದ್ದಾರೆ. ನಿಜವಾದ ಅರ್ಥದಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಬೇಕಿರುವುದು ಅದಕ್ಕಿರುವ ಹಳಮೆ ಹಿರಿಮೆಗಳಿಗಿಂತಲೂ ಮುಖ್ಯವಾದ ಕಾರಣವೊಂದಕ್ಕಾಗಿ. ಅದೇನೆಂದರೆ ಭಾರತವೆಂಬುದು ಒಕ್ಕೂಟ ವ್ಯವಸ್ಥೆಯಾಗಿದ್ದು ಇಲ್ಲಿ ಪ್ರತಿಯೊಬ್ಬರಿಗೂ, ಪ್ರತಿಯೊಂದು ಪ್ರದೇಶಕ್ಕೂ ಸಮಾನ ಸ್ಥಾನಮಾನವಿದೆ ಎನ್ನುವುದು ಸಾಬೀತಾಗಬೇಕಿದೆ.

ಯಾವ ಮಾನದಂಡಗಳನ್ನು ಅನುಸರಿಸಿ ತಮಿಳಿಗೆ, ಸಂಸ್ಕೃತಕ್ಕೆ ಶಾಸ್ತ್ರೀಯ ಭಾಷಾ ಸ್ಥಾನವನ್ನು ನೀಡಲಾಯಿತೋ ಅದೇ ಮಾನದಂಡ ಭಾರತದ ಎಲ್ಲ ಭಾಷೆಗಳಿಗೂ ಅನ್ವಯವಾಗಬೇಕಾಗಿದೆ. ಆ ಕಾರಣದಿಂದ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ಘೋಷಣೆ ಮಾಡುವುದು ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು ಎನ್ನುವ ಸಂದೇಶ ನೀಡಲಿದೆ. ಆ ದಿನ ಬೇಗ ಬರಲಿ ಎಂದು ಕನ್ನಡಿಗರು ಕಾಯುತ್ತಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X