• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಂಗರಿಯ ಡಾ ಕಟೋನಾ ಮತ್ತು ಕನ್ನಡ ಪ್ರೇಮ

By Super Admin
|

ನಾವಾಡುವ ಕಂಗ್ಲೀಷಿನಲ್ಲೇ ಎರಡು ಕನ್ನಡ ಪದಗಳಿದ್ದರೆ ನಾವೂ ಕನ್ನಡ ಪ್ರೇಮಿಗಳು ಎನ್ನುವ ಭ್ರಮೆ ನಮ್ಮಲ್ಲನೇಕರಿಗಿದೆ. ಸರ್ವಜ್ಞ, ಅಲ್ಲಮ ಹೆಸರು ಹೇಳಿದರೆ ಮಕ್ಕಳಿರಲಿ ಇಂದಿನ ಪೀಳಿಗೆಯ ಯುವಕರೂ ಕಕ್ಕಾಬಿಕ್ಕಿಯಾಗುತ್ತಾರೆ. ಅಂಥದ್ದರಲ್ಲಿ ದೂರದ ಹಂಗರಿಯಿಂದ ಬಂದ ವಿದೇಶಿಯೊಬ್ಬರ ಪ್ರಾಂತೀಯ ಭಾಷೆಯ ಮೇಲಿನ ಪ್ರೇಮ ಮೈಮರೆತಿರುವ ಕನ್ನಡಿಗರನ್ನು ಬಡಿದೆಬ್ಬಿಸುವಂತಿದೆ. ಅವರಿಂದ ನಾವು ಕಲಿತರೆ ಅಭಿಮಾನಕ್ಕೇನು ಕುಂದಾಗುವುದಿಲ್ಲ.

ಲೇಖನ : ಮೀರಾ ಪ್ರಸನ್ನ, ಬೆಂಗಳೂರು

ದೂರದ ಹಂಗೇರಿಗೂ ನಮ್ಮ ಸರ್ವಜ್ಞನಿಗೂ ಎತ್ತಣದಿಂದೆತ್ತಣ ಸಂಬಂಧವಯ್ಯಾ?ಅಂತೀರಾ ಓದಿ ನೋಡಿ.

ಇದೇ ಜೂನ್ ತಿಂಗಳು ದಿನಾಂಕ 6ರಿಂದ 10ರವರೆಗೂ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ 'Discrete Mathematics' ವಿಷಯವಾಗಿ ಅಂತಾರಾಷ್ಟ್ರೀಯ ಗಣಿತ ಸಮ್ಮೇಳನ ನಡೆದಿತ್ತು. ಸಮ್ಮೇಳನ ನಡೆದದ್ದು ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ. ದೇಶ ವಿದೇಶಗಳಿಂದ ಆಗಮಿಸಿದ್ದ ಗಣಿತಜ್ಞರು ನೆರೆದಿದ್ದ ಸಭೆಗೆ ಪ್ರವೇಶಿಸುವಾಗ ಕನ್ನಡದಲ್ಲಿದ್ದ ಸಭಾಂಗಣದ ಹೆಸರನ್ನು ತಮ್ಮ ಕೈಯಲ್ಲಿದ್ದ 'Learn kannada in 30 days' ಪುಸ್ತಕದ ಸಹಾಯದಿಂದ ಓದಲು ಪ್ರಯತ್ನಿಸುತ್ತಿದ್ದ 50ರ ಆಸು ಪಾಸಿನ ವಿದೇಶಿ ವ್ಯಕ್ತಿ ನನ್ನ ಗಮನ ಸೆಳೆದರು. ತರಾತುರಿಯಲ್ಲಿದ್ದ ನಾನು ಸಮ್ಮೇಳನದ ನಂತರ ಮಾತನಾಡಿಸಿದರೆ ಆಯಿತು ಅಂತ ಸಭಾಂಗಣದ ಒಳ ಸೇರಿದೆ.

ಅದೇ ಮಧ್ಯಾಹ್ನ , ಬೆಳಿಗ್ಗೆ ಕಂಡ ವಿದೇಶಿ ವ್ಯಕ್ತಿಯ ಸಂಶೋಧನಾ ಲೇಖನ ಪ್ರಸ್ತುತಿ ಇತ್ತು. ಅವರು ಹಂಗೇರಿಯ ಗಣಿತಜ್ಞ ಡಾ. ಕಟೋನಾ ಎಂದು ತಿಳಿದು ಬಂತು. ಮಧ್ಯಾಹ್ನದ ಊಟದ ನಂತರ ಈ ಕಾರ್ಯಕ್ರಮವಿದ್ದುದರಿಂದ ನೆರೆದಿದ್ದ ಬಹುಮಂದಿಯ ಹತ್ತಿರ ನಿದ್ರಾದೇವಿ ಸುಳಿದಾಡುತ್ತಾ ಇದ್ದಳು. ಆಗ ಗಹನವಾದ ಗಣಿತ ವಿಷಯದ ಪವರ್ ಪಾಯಿಂಟ್ ಸ್ಲೈಡುಗಳ ನಡುವೆ ಅನೀರಿಕ್ಷಿತವಾಗಿ ಮೂಡಿಬಂತು ಸರ್ವಜ್ಞನ ವಚನವಿರುವ ಸ್ಲೈಡು!

ಹೊಲಬನರಿಯದ ಮಾತು ತಲೆ ಬೇನೆ ಹಿಡಿದಂತೆ

ಹೊಲಬನರಿದೊಂದು ನುಡಿದೊಡೆ

ಅದು ದಿವ್ಯ ಫಲ ಪಕ್ವದಂತೆ ಸರ್ವಜ್ಞ.

ಅಲ್ಲಿ ನೆರೆದಿದ್ದ ನನ್ನಂತಹ ಬಹಳಷ್ಟು ಕನ್ನಡಿಗರಿಗೂ ತಿಳಿಯದ ವಚನ.

"ಕೆಲಸಕ್ಕೆ ಬಾರದ ಮಾತಿನಿಂದ ತಲೆನೋವು ಬರುವುದು. ಅರ್ಥವತ್ತಾದ ಒಂದೇ ಒಂದು ಮಾತು ಪಕ್ವವಾದ ಫಲದಂತೆ" ಎಂದು ಕನ್ನಡದಲ್ಲಿ ಬರೆದ ವಚನದ ಜೊತೆಯಲ್ಲೇ ಇಂಗ್ಲಿಷ್‌ನಲ್ಲಿ ಸಾರಾಂಶವನ್ನೂ ನೀಡಿದರು! ನಾನು ಗಣಿತದ ವಿಷಯ ಹೇಳುವಾಗ ಕೆಲ ಜನ ಹಣೆ ಉಜ್ಜಿ ಕೊಳ್ಳುತ್ತಿದ್ದರು, ನನ್ನ ಮಾತಿನಿಂದ ಅವರಿಗೆ ತಲೆಬೇನೆ ಬಂದಿರಬಹುದೇಯೆಂದು ಹೆದರಿದೆ ಎನ್ನುತ್ತಾ ಸಭೆಯನ್ನು ನಗೆಗಡಲಲ್ಲಿ ತೇಲಿಸಿದರು ಡಾ. ಕಟೋನಾ.

ಕನ್ನಡ ನೆಲದಲ್ಲಿ ಹುಟ್ಟಿ, ಬೆಳೆದು ಹಲವು ಜನ ಸೇರಿದೆಡೆ ಇಂಗ್ಲಿಷ್‌ನಲ್ಲಿ ಅಮೆರಿಕಾದ ಒಬಾಮ, ಹಿಲರಿ ಚುನಾವಣೆ ಬಗ್ಗೆ ಹೆಮ್ಮೆಯಿಂದ ಮಾತನಾಡುವ ನಾವು ಸರ್ವಜ್ಞ, ಅಲ್ಲಮರನ್ನು ಗಾಳಿಗೆ ತೂರಿ ಬಿಟ್ಟಿದ್ದೇವೆ. ಕನ್ನಡ ಸಾಹಿತಿಗಳು ಎಂದರೆ ಈಗಿನ ಮಕ್ಕಳಿಗೆ ಗುರುಕಿರಣ್, ಸಾಧು ಕೋಕಿಲ! ದೂರದೂರಿನವರನ್ನು ಇಷ್ಟು ಆಕರ್ಷಿಸುವ ನಮ್ಮ ಭಾಷೆ, ನಮ್ಮವರಿಗೆ ಏಕೆ ಬೇಕಿಲ್ಲ? ಎಲ್ಲಿಂದ ಎಲ್ಲಿಗೆ ಹೋದರೂ ಮಮ್ಮೀ, ಡ್ಯಾಡೀ, ಅಂಕಲ್, ಆಂಟಿ . . . ಡಾಗ್ ಹೋಯ್ತು ಕ್ಯಾಟ್ ಬಂತು ಎಂದು ಉಲಿಯುವ ಈಗಿನ ಕನ್ನಡ ಕಂದಮ್ಮಗಳು! ಕನ್ನಡ ಮಾತನಾಡಿದರೆ ವಿಚಿತ್ರ ಪ್ರಾಣಿಯೆಂಬ ನೋಟಕ್ಕೆ ಗುರಿಯಾಗುವ ನಮ್ಮವೇ ಸ್ಥಳಗಳು! ನಮ್ಮ ಮಗುವಿನ ಶಾಲೆಯಲ್ಲಿ ಕನ್ನಡ ಮಾತಾನಾಡಿದರೆ ಫೈನ್ ಹಾಕುತ್ತಾರೆ ಎಂದು ಹೆಮ್ಮೆ ಪಡುವ ಅಪ್ಪ ಅಮ್ಮಂದಿರು! ಕನ್ನಡ, ಇಂಗ್ಲಿಷ್ ಎರಡನ್ನೂ ವಿಧವಿಧ ಪ್ರಮಾಣದಲಿ ಬೆರೆಸಿ, ಎರಡೂ ಭಾಷೆಗಳನ್ನು ಒಟ್ಟೊಟ್ಟಿಗೇ ಕೊಲ್ಲುತ್ತಿರುವ FM ಚಾನಲ್‌ಗಳು, ಪರಭಾಷಿಗರಿಂದ ತುಂಬಿ ತುಳುಕುವ ಹೋಟೆಲ್, ಮಾಲ್‌ಗಳು. ಬೆಂಗಳೂರಿನಲ್ಲಿ ಕನ್ನಡಿಗರ ಗತಿ ದೇವರಿಗೇ ಪ್ರೀತಿ.

ಮರುದಿನ ಮಧ್ಯಂತರದಲ್ಲಿ ಡಾ. ಕಟೋನಾರನ್ಣು ಮಾತನಾಡಿಸಿ, ಅವರ ಕನ್ನಡ ಪ್ರೇಮವನ್ನು ಮನಸಾರೆ ಹೊಗಳಿದೆ. I am so and so from Bangalore ಎಂದೆ. More correctly Bengalooru ಎಂದರು ಕಟೋನಾ ಮುಗುಳ್ನಕ್ಕು! ಛಟೀರ್ ಎಂದು ಎಡಗೆನ್ನೆಗೆ ಬಾರಿಸಿದಂತಾಯಿತು.

ನಮ್ಮ ಮುಂದಿನ ಭೇಟಿ ಮುಂದಿನ ಸಮೇಳನದಲ್ಲಿ ಚೆನ್ನೈನಲ್ಲಿ ಅಲ್ಲವೇ ಎಂದೆ (ಮದರಾಸು ಎಂದರೆ ಎಡವಟ್ಟಾದೀತೆಂದು). ಹೌದು, ನಾನು ಬರುತಿದ್ದೇನೆ ಎಂದರು ಕಟೋನಾ. ಹಾಗಾದರೆ, ನೀವು ತಮಿಳು ಕಲಿಯಬೇಕಲ್ಲ ಎಂದೆ ಸಣ್ಣಗೆ ವ್ಯಂಗ್ಯವಾಗಿ. Oh! I already know two words ಎಂದು ಎರಡು ಪದಗಳನ್ನು ಹೇಳಿದರು ಕಟೋನಾ. ಈ ಬಾರಿ ಬಲಗೆನ್ನೆಗೆ ಬಾರಿಸಿದಂತಾಯಿತು.

English summary
Mathematician Dr. Katona from Hungary had a lesson to teach the Kannadigas who continue to speak in english inspite of born in Kannada land and pretend to be Kannada lovers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X