ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಣಸೇಹಣ್ಣಿನ ಗೊಜ್ಜು ಅದೆಷ್ಟು ಹುಳಿಯಾಗಿಬಿಟ್ಟಿತ್ತೆಂದರೆ

By ಸುಶ್ರುತ ದೊಡ್ಡೇರಿ
|
Google Oneindia Kannada News

ನಿನ್ನೆ ರಾತ್ರಿಯ ಅಡುಗೆಗೆ ನಾನು ಮಾಡಿದ್ದ ಹುಣಸೇಹಣ್ಣಿನ ಗೊಜ್ಜು ಅದೆಷ್ಟು ಹುಳಿಯಾಗಿಬಿಟ್ಟಿತ್ತೆಂದರೆ ನನಗೆ ಅಮ್ಮ ನೆನಪಾಗುವಷ್ಟು ಹುಳಿಹುಳಿಯಾಗಿತ್ತು. ಹುಣಸೇಹಣ್ಣಿನ ಗೊಜ್ಜು ಹುಳಿಯಾಗುವುದಕ್ಕೂ ನಿನಗೆ ನಿನ್ನ ಅಮ್ಮ ನೆನಪಾಗುವುದಕ್ಕೂ ಯಾವ ಸೀಮೆ ಸಂಬಂಧವಯ್ಯಾ ಎಂದು ನೀವು ಮುಖ ಹಿಂಡಿ ಹುಬ್ಬೇರಿಸಿದಿರಲ್ಲವೇ? ಆ ಏರಿಸಿದ ಹುಬ್ಬನ್ನು ಹಾಗೇ ಹಿಡಿದು ಮುಂದೆ ಓದಿ:

ಸುಶ್ರುತ ದೊಡ್ಡೇರಿ

ನನ್ನ ಅಮ್ಮನಿಗೆ ಹುಳಿ ಅಂದ್ರೆ ಪಂಚಪ್ರಾಣ. ಅವಳು ಮಾಡಿದ ಅಡುಗೆ ಯಾವಾಗಲೂ ಹುಳ್‌ಹುಳ್ಳಗಿರುತ್ತದೆ. ಅದಕ್ಕೇ ಅಪ್ಪ ಅದನ್ನು ಬಡಿಸಿಕೊಳ್ಳುವ ಮುನ್ನ ಪ್ಲೇಟಿನ ತುದಿಗೆ ಒಂದೇ ಒಂದು ಹನಿ ಬಿಟ್ಟುಕೊಂಡು, ನಾಲಿಗೆಯಿಂದ ಚಪ್ಪರಿಸಿ ಎಷ್ಟು ಹುಳಿಯಾಗಿದೆ ಎಂದು ನೋಡಿ, ಆ ನಂತರ ಅನ್ನಕ್ಕೆ ಬಡಿಸಿಕೊಳ್ಳುತ್ತಾನೆ. ಏಕೆಂದರೆ ಅಪ್ಪನಿಗೆ ಹುಳಿ ದೂರ.

ಅಮ್ಮನ ನೆನಪನ್ನು ಹತ್ತಿಕ್ಕಲಾಗದೇ ಊಟ ಮಾಡುತ್ತಲೇ ಮನೆಗೆ ಫೋನಿಸಿದೆ. ಫೋನೆತ್ತಿದವಳು ಅಮ್ಮನೇ. ಊರಲ್ಲಿ ಜೋರು ಮಳೆಯಂತೆ. ಹುಚ್ಚಾಪಟ್ಟೆ ಗಾಳಿ ಸಹ ಎಂದಳು ಅಮ್ಮ. ಹುಣಸೇಹಣ್ಣಿನ ಗೊಜ್ಜಿಗೆ ಹುಳಿ ಜಾಸ್ತಿಯಾಗಿರುವುದನ್ನು ಹೇಳಿದ ನಾನು ಈ ವರ್ಷ ಫಸಲು ಬಂದಿದೆಯಾ?" ಎಂದು ಕೇಳಲು ಮರೆಯಲಿಲ್ಲ. ಈ ಎಂಬುದು ನಮ್ಮ ಸೀಮೆಯಲ್ಲೆಲ್ಲಾ ಫೇಮಸ್ಸಾಗಿರುವ ಒಂದು ಮಾವಿನ ಮರ.

Spell of a taste : Mango tree in my yard


ನಮ್ಮೂರಲ್ಲಿ ಪ್ರಮೋದ ಅಂತ ಎರಡನೇ ಕ್ಲಾಸಿಗೆ ಹೋಗುವ ಒಬ್ಬ ಹುಡುಗನಿದ್ದಾನೆ. ಪ್ರಮೋದನ ಅಪ್ಪ ಪ್ರಕಾಶಣ್ಣ. ಪ್ರಕಾಶಣ್ಣನ ಅಪ್ಪ ಸೀತಾರಾಮಣ್ಣ. ಸೀತಾರಾಮಣ್ಣನ ಅಪ್ಪ ಶೀನಪ್ಪಜ್ಜ. ಶೀನಪ್ಪಜ್ಜನ ಅಮ್ಮ ಗಂಗಮ್ಮ. ಈ ಗಂಗಮ್ಮ ತನ್ನ ತವರಿನಿಂದ ತಂದಿದ್ದ ಮಾವಿನಕಾಯಿಯಿಂದ ಗೊಜ್ಜು ಮಾಡಿ ಅದರ ಓಟೆಯನ್ನು ತೋಟದಲ್ಲಿ ಎಸೆದಿದ್ದಂತೆ. ಹಾಗೆ ಎಸೆಯಲ್ಪಟ್ಟಿದ್ದ ಓಟೆಯು ಮುಂಗಾರು ಮಳೆಯ ಹನಿಗಳ ಮಾಯಾಸಿಂಚನಸ್ಪರ್ಶಕ್ಕೆ ಒಳಗಾಗಿ, ಅಲ್ಲೇ ನೆಲದಲ್ಲಿ ಬೇರೂರಿ, ಮೇಲೆ ಪುಟ್ಟ ಮೊಳಕೆಯಾಗಿ ಒಡೆದು, ಗಿಡವಾಗಿ ಬೆಳೆದು, ಆಮೇಲೆ ಮರವಾಗಿ, ಈಗ ಹೆಮ್ಮರವಾಗಿ ನಿಂತಿರುವುದು ಒಂದು ಇತಿಹಾಸ.

ಈ ಮರ ಎಷ್ಟು ದೊಡ್ಡದಾಗಿದೆಯೆಂದರೆ, ಇದನ್ನು ಒಂದು ರೌಂಡು ಸುತ್ತಿ ಬರಲು ಕನಿಷ್ಟ ಎರಡು ನಿಮಿಷ ಬೇಕು. ಸೀತಾರಾಮಣ್ಣನ ಮನೆ ತೋಟಕ್ಕೂ ಮಹಾಬಲಗಿರಿಯಣ್ಣನ ಮನೆ ತೋಟಕ್ಕೂ ಮಧ್ಯೆ ಹಾಕಲಾಗಿರುವ ಜಂಬಿಟ್ಟಿಗೆ ಪಾಗಾರ ಇದರ ಕಾಂಡದವರೆಗೆ ಬಂದು ನಿಲ್ಲುತ್ತದೆ. ಮತ್ತೆ ಕಾಂಡ ಮುಗಿದಮೇಲೆ ಆ ಕಡೆಯಿಂದ ಮುಂದುವರೆಯುತ್ತದೆ.

sushrutha dodderiನಾಲ್ಕಾರು ತಲೆಮಾರುಗಳನ್ನು ಕಂಡಿರುವ ಈ ಮರ ಈಗ ತನ್ನ ವಿನಾಶದ ಅಂಚಿನಲ್ಲಿದೆ ಎಂದರೆ ಅದಕ್ಕೆ ಅವಮಾನ ಮಾಡಿದಂತೆ. ಸ್ವರ್ಗದಲ್ಲಿರುವ ಗಂಗಮ್ಮ ನಿಮ್ಮನ್ನು ಶಪಿಸಿಯಾಳು. ಈ ಮರಕ್ಕೆ ವಯಸ್ಸಾಗಿದೆ ನಿಜ. ಪೂರ್ತಿ ಲಡ್ಡಾಗಿದೆ ನಿಜ. ತೋಟಕ್ಕೆ ಅಡಿಕೆ ಹೆಕ್ಕಲು ಹೋದಾಗ ಜೋರು ಗಾಳಿ ಬೀಸಿದರೆ ಇದರ ಕೊಂಬೆಗಳು ಮುರಕೊಂಡು ತಲೆಮೇಲೇ ಬೀಳುತ್ತವೆ ನಿಜ. ಹಾಗಂತ ನೀವಿದರ ಆಯಸ್ಸೇ ಮುಗಿದಿದೆ ಎಂದು ತೀರ್ಮಾನಿಸುವಂತಿಲ್ಲ.

ಮರ ಲಡ್ಡಾದರೂ ಅದರ ಕಾಯಿಯ ಹುಳಿ ಮುಕ್ಕೇ? ಮರ ಈಗ ಪೂರ್ತಿ ಜೀರ್ಣವಾಗಿರುವುದರಿಂದ ಅದನ್ನು ಹತ್ತಿ ಮಿಡಿ ಇಳಿಸುವ ಸಾಹಸವನ್ನು ಇತ್ತೀಚಿನ ವರ್ಷಗಳಲ್ಲಿ ಯಾರೂ ಮಾಡಿಲ್ಲ. ಮರದಲ್ಲಿ ಫಸಲು ಬಂದರೆ ಅದು ಹಣ್ಣಾಗಿ ಉದುರುವವರೆಗೂ ಕಾಯಬೇಕು. ಉದುರಿದ ಹಣ್ಣನ್ನೇ ಹೆಕ್ಕಿಕೊಂಡು ಬಂದು, ಅದರ ಹುಳಿ ಹಿಂಡಿ, ನೀರುಗೊಜ್ಜನ್ನೋ ಮಂದನಗೊಜ್ಜನ್ನೋ ಮಾಡಿ ಉಂಡು ತೃಪ್ತಿ ಪಟ್ಟುಕೊಳ್ಳುತ್ತಾರೆ ಊರ ಜನ. ಈ ಮರ ಶೀನಪ್ಪಜ್ಜನ ಮನೆಗೆ ಸೇರಿದ ಆಸ್ತಿಯಾದರೂ ಅವರ ಮನೆಯವರೇನು ಯಾರು ಬಂದು ಹಣ್ಣು ಹೆಕ್ಕಿಕೊಂಡು ಹೋದರೂ ಆಕ್ಷೇಪಿಸುವುದಿಲ್ಲ.

ಅದರ ಹುಳಿಗಿಂತಲೂ ಪರಿಮಳಕ್ಕೆ ಪ್ರಸಿದ್ಧ. ಈಗ ಐದಾರು ವರ್ಷಗಳ ಹಿಂದೆ ಕೊನೆಕಾರ ಶೀನ ಭಾರೀ ಧೈರ್ಯ ಮಾಡಿ ಈ ಮರ ಹತ್ತಿದ್ದ. ಸುಮಾರಿನವರೆಲ್ಲ ಹತ್ತುವ ಮರವೇ ಅಲ್ಲ ಇದು. ಸುಮಾರು ಎಂಟು ಅಂಕಣಕ್ಕಿರುವ ಇದಕ್ಕೆ ಏಣಿ ಹಾಕಿ, ಹಗ್ಗ ಬಿಗಿದು, ಏನೇನೋ ಕಸರತ್ತು ಮಾಡಿ ಮರ ಹತ್ತಿದ್ದ ಶೀನ. ಆದಷ್ಟೂ ಮೇಲೆ ಹೋಗಿ ಜಾಸ್ತಿ ಮಿಡಿ ಬಂದಿದ್ದ ಒಂದಷ್ಟು ರೆಂಬೆಗಳನ್ನು ಕಡಿದು ಉರುಳಿಸಿದ್ದ.

ಆಗ ಈ ಮಿಡಿಗಳನ್ನು ತಮ್ಮದಾಗಿಸಿಕೊಳ್ಳಲು ಹವಣಿಸಿದ ಜನಗಳ ಸಂಖ್ಯೆ ಲೆಕ್ಕಕ್ಕೆ ಮೀರಿದ್ದು. ಒಂದು ಹತ್ತು ಮಿಡಿ ಸಿಕ್ಕಿದ್ರೆ ಸಾಕಿತ್ತೇ, ನಮ್ಮನೆ ಉಪ್ಪಿನ್‌ಕಾಯಿ ಜೊತಿಗೆ ಸೇರುಸ್ತಿದ್ದಿ" ಎಂದ ಸರೋಜಕ್ಕನಿಂದ ಹಿಡಿದು ಕೊನಿಗೆ ಎರ್ಡು ಚಮಚ ಸೊನೆನಾದ್ರೂ ಸಿಕ್ಕಿದ್ರೇ..." ಎಂದು ಆಸೆ ಪಟ್ಟುಕೊಂಡ ಗೌರಕ್ಕನವರೆಗೆ ಊರ ಜನಗಳ ಸಾಲಿತ್ತು. ಊರವರಷ್ಟೇ ಅಲ್ಲ, ಇಡೀ ಸೀಮೆಯವರು, ಅಷ್ಟೇ ಏಕೆ, ಬೆಂಕಟವಳ್ಳಿಯಿಂದ ನನ್ನ ಮಾವ ಫೋನ್ ಮಾಡಿ ಜೀರಿಗೆ ಮಾವಿನ ಮಿಡಿ ಇಳಿಸಿದ್ರಡ, ಸುದ್ದಿ ಗೊತ್ತಾತು, ಒಂದು ನಾಲ್ಕು ಮಿಡಿ ನಮ್ಮನಿಗೆ ಎತ್ತಿಡಕ್ಕಾಗ್ತಾ ನೊಡಿ" ಎಂದು ಅರ್ಜಿ ಇಟ್ಟಿದ್ದ! ಹೀಗೆ, ಆ ವರ್ಷ ನಮ್ಮೂರಿನ ಯ ಮಿಡಿಗಳು ಯಾವ್ಯಾವುದೋ ಊರಿನ ಯಾರ್ಯಾರದೋ ಮನೆಯ ಅಡುಗೆಮನೆ ನಾಗಂದಿಗೆ ಮೇಲಿದ್ದ ಉಪ್ಪಿನಕಾಯಿ ಜಾರಿಯ ಒಡಲು ಸೇರಿಕೊಂಡುಬಿಟ್ಟವು.

ನೀವು ಏರಿಸಿದ್ದ ಹುಬ್ಬನ್ನು ಈಗಾಗಲೇ ಇಳಿಸಿರುತ್ತೀರಿ ಎಂದು ನನಗೆ ನಂಬಿಕೆ ಇದ್ದರೂ ಊರಲ್ಲಿ ಗಾಳಿಮಳೆ" ಎಂದಾಕ್ಷಣ ನನಗೆ ಈ ಜೀರಿಗೆ ಮಾವಿನ ಮರ ನೆನಪಾದದ್ದು ಯಾಕೆ ಎಂಬ ನಿಮ್ಮ ಸಂಶಯವನ್ನು ನಾನು ಈಗ ಪರಿಹರಿಸುತ್ತೇನೆ. ನಾನು ಊರಲ್ಲಿದ್ದಾಗ ಮನೆಯಲ್ಲಿದ್ದರೆ ಈ ಹಣ್ಣು ಹೆಕ್ಕುವ ಪಾಳಿ ನನ್ನದಾಗಿರುತ್ತಿತ್ತು. ಜೋರು ಗಾಳಿ ಬೀಸಿದರೆ, ಮಳೆ ಬಂದರೆ ಮರ ಹಣ್ಣುಗಳನ್ನು ಉದುರಿಸುತ್ತಿತ್ತು. ಇದನ್ನು ಅರಿತಿದ್ದ ಊರ ಜನ ಅಲ್ಲಿಗೆ ಮುತ್ತಿಗೆ ಹಾಕುತ್ತಿದ್ದರು.

ಅದರಲ್ಲೂ ಮಾಬ್ಲಗಿರಣ್ಣ ಮತ್ತು ಅನ್‌ಪೂರ್ಣಕ್ಕ! ಅವರಿಗೆ ಕಾಂಪಿಟಿಶನ್ ಕೊಡಲಿಕ್ಕೆ ನಾನು! ನಮ್ಮನೆ ಎದುರುಗಡೆಯೇ ತೋಟಕ್ಕೆ ಇಳಿಯಲಿಕ್ಕೆ ಒಂದು ದಾರಿಯಿದೆ. ಗಾಳಿ ಬೀಸತೊಡಗಿ, ಮಾಬ್ಲಗಿರಣ್ಣ ನಮ್ಮನೆ ಎದುರಿಗೆ ಚಬ್ಬೆ ಹಿಡಿದು ತೋಟಕ್ಕೆ ಇಳಿದದ್ದು ಕಂಡಿತೋ, ನಾನು ಪುಸಕ್ಕನೆ ಗೇಟು ದಾಟಿ ನಡೆದು ಮೇಲ್ಗಡೆ ತೋಟಕ್ಕೆ ಇಳಿಯುವ ದಾರಿಯಲ್ಲಿ ಇಳಿದು, ಮಾಬ್ಲಗಿರಣ್ಣ ಬರುವ ಮೊದಲೇ ಮರದ ಜಾಗವನ್ನು ತಲುಪಿಬಿಡುತ್ತಿದ್ದೆ! ಏನೋ? ಸಿಕ್ಚನೋ?" ಎಂದ ಮಾಬ್ಲಗಿರಣ್ಣನಿಗೆ ಇಲ್ಯಾ, ಎರಡೇ ಸಿಕ್ಕಿದ್ದು" ಎನ್ನುತ್ತಾ ಕೈಯಲ್ಲಿದ್ದ ಎರಡು ಹಣ್ಣನ್ನು ಮಾತ್ರ ತೋರಿಸಿ ತುಂಬಿದ್ದ ಚೀಲವನ್ನು ಲುಂಗಿಯಿಂದ ಮುಚ್ಚಿಕೊಳ್ಳುತ್ತಿದ್ದೆ.

ಅಮ್ಮ ಈ ವರ್ಷವೂ ಫಸಲು ಬಂದಿರುವುದನ್ನು ಹೇಳಿದಳಲ್ಲದೇ ನಾನು ಮಾಡಿದ ಹುಣಸೇಹಣ್ಣಿನ ಗೊಜ್ಜಿಗೆ ಇನ್ನಷ್ಟು ಬೆಲ್ಲ ಹಾಕುವುದರ ಮೂಲಕ ಹುಳಿ ಕಮ್ಮಿ ಮಾಡಬಹುದೆಂದೂ ಹೇಳಿದಳು. ಆದರೆ ಅವಳು ಹೇಳುವ ಹೊತ್ತಿಗಾಗಲೇ ನನ್ನ ಊಟ ಮುಗಿಯಲು ಬಂದಿತ್ತಾದ್ದರಿಂದ ಆ ಸಲಹೆಯಿಂದ ಪ್ರಯೋಜನವೇನು ಆಗಲಿಲ್ಲ. ಊಟ ಮುಗಿದು, ಫೋನಿಟ್ಟು, ಎದ್ದು ಕೈ ತೊಳೆದು ತೇಗುವಾಗ ಅದೇ ಯ ಪರಿಮಳ ನನ್ನ ನೆನಪಿನಾಳದಿಂದ ತೇಲಿ ಬಂದದ್ದು ಮಾತ್ರ ನಿಮ್ಮ ನಾಲಿಗೆಯಡಿ ಜಿನುಗಿದ ನೀರಿನಷ್ಟೇ ಸತ್ಯ..

English summary
Spell of a taste : Mango tree in my yard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X