ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀ ಗುರು ಸಮರ್ಥ ಸಂಗೀತ ವಿದ್ಯಾಲಯದ ಹಿಂದೂಸ್ತಾನಿ ಸಂಗೀತೋತ್ಸವ 2018

By ವಿದ್ವಾನ್ ಅಮೃತೇಶ್ ಕುಲಕರ್ಣಿ
|
Google Oneindia Kannada News

"ಹೃದ್ಯ ಹೃದಯೇಂಗಿತಕೆ ರಾಗ ತಾಳದ ಕಟ್ಟು" ಎಂಬ ಡಿ.ವಿ.ಜಿ ಅವರ ಮಾತಿನಂತೆ ನಮ್ಮ ಹೃದಯದ ಇಂಗಿತವನ್ನು ಅರುಹಲು ರಾಗ, ತಾಳ ಮತ್ತು ಲಯಗಳ ಚೌಕಟ್ಟಿನಲ್ಲಿರುವ ಸಂಗೀತ ಮಾಧ್ಯಮವಾಗುತ್ತದೆ. ಸಂಗೀತ ಕೇವಲ ರಂಜನೆಯ ವ್ಯಂಜನವಲ್ಲ, ಅದೊಂದು ಆತ್ಮ ಸಂಜೀವಿನಿ. ಪ್ರಕೃತಿ ದತ್ತವಾದ ಒಂದು ನಿರ್ಮಲ ನಿಧಿ. ದೈವ ಕೃಪೆಯ ದಿವ್ಯ ಯೋಗ.

ಗಾಯಕ ಶ್ರೋತೃಗಳೀರ್ವರನ್ನೂ ಏಕ ಕಾಲದಲ್ಲಿ ಪುಳಕಿತರನ್ನಾಗಿಸುವ ಸಾಧನ ಮಾರ್ಗ ಸಂಗೀತ. ಸಂಗೀತ ಕಲಾ ಸರಸ್ವತಿಯ ಎರಡು ಕಮನೀಯ ಕಣ್ಣುಗಳೆಂದರೆ ಒಂದು ಕರ್ನಾಟಕ ಸಂಗೀತ ಮತ್ತೊಂದು ಹಿಂದೂಸ್ತಾನಿ ಸಂಗೀತ. ಅದರಲ್ಲಿ ಹಿಂದೂಸ್ತಾನಿ ಸಂಗೀತದ ರಸದೌತಣವನ್ನು ನಾಡಿನ ಜನತೆಗೆ ಉಣಬಡಿಸಲು ಶ್ರೀ ಗುರು ಸಮರ್ಥ ಸಂಗೀತ ವಿದ್ಯಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಹಿಂದೂಸ್ತಾನಿ ಸಂಗೀತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಶ್ರೀ ಗುರು ಸಮರ್ಥ ಸಂಗೀತ ವಿದ್ಯಾಲಯ ಕಳೆದ 15 ವರ್ಷಗಳಿಂದ ಅವಿರತವಾಗಿ ಸಂಗೀತ ಕ್ಶೇತ್ರಕ್ಕೆ ತನ್ನದೇ ವಿಶಿಷ್ಟ ಕೊಡುಗೆಯನ್ನು ನೀಡುತ್ತಿದೆ. ವಿದ್ಯಾದಾನ ಮಾಡಿ ವಾತ್ಸಲ್ಯ ತೋರುವ ಗುರು ವಿದ್ವಾನ್ ಅಮೃತೇಶ್ ಕುಲಕರ್ಣಿ ಅವರು ಸ್ಥಾಪಿಸಿದ ಈ ಸಂಸ್ಥೆಯಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಬಲಾ, ಹಾರ್ಮೋನಿಯಂ ಹಾಗು ಗಾಯನದ ತರಬೇತಿ ಪಡೆಯುತ್ತಿದ್ದಾರೆ. ಸಂಸ್ಥೆಯ ಗೌರವಾಧ್ಯಕ್ಷರಾಗಿ ಶತ ತಬಲ ಪಂ|| ಸತೀಶ್ ಹಂಪಿಹೊಳಿ ಅವರು ವಿದ್ಯಾಲಯದ ಎಲ್ಲ ಕಾರ್ಯ ಚಟುವಟಿಕೆಗಳಿಗೆ ಬೆನ್ನೆಲಬಾಗಿದ್ದಾರೆ.

Hindustani Music Festival in Bengaluru by Guru Samarth Music Institute

ಶ್ರೀ ಗುರು ಸಮರ್ಥ ಸಂಗೀತ ವಿದ್ಯಾಲಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ಸನ್ಮಾನಿಸಿ ಗೌರವ ನೀಡುವ ಪರಿಪಾಠವನ್ನು ರೂಢಿಸಿಕೊಂಡಿದೆ. ಚಿಗುರು ಪ್ರತಿಭೆಗಳನ್ನು ಹಾಗು ಪ್ರೌಢ ಪ್ರತಿಭೆಗಳನ್ನು ವೇದಿಕೆಗೆ ಸಾದರ ಪಡಿಸುವ, ಆ ಮೂಲಕ ಕಲಾಪ್ರಿಯರಿಗೆ ಪರಿಚಯಿಸುವಂಥ ಘನೋದ್ದೇಶದೊಂದಿಗೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಸಾಂಸ್ಕೃತಿಕ ಕ್ಷೇತ್ರವನ್ನು ಶ್ರೀಮಂತಗೊಳಿಸುತ್ತಿದೆ.

Hindustani Music Festival in Bengaluru by Guru Samarth Music Institute

ಫೆಬ್ರವರಿ 11ರಂದು ಭಾನುವಾರ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಹಮ್ಮಿಕೊಂಡಿರುವ ಹಿಂದುಸ್ತಾನಿ ಸಂಗೀತೋತ್ಸವ ಕಾರ್ಯಕ್ರಮವನ್ನು, ಅಂತಾರಾಷ್ಟ್ರೀಯ ತಬಲಾ ವಾದಕರಾದಂಥ ಡಾ||ರಾಚಯ್ಯ ಎಸ್ ಹಿರೇಮಠ್ ಅವರು ಉದ್ಘಾಟಿಸಲಿದ್ದಾರೆ. ಡಾ||ಮಲ್ಲಿಕಾರ್ಜುನ್ ಮನ್ಸೂರ್, ಪಂ||ಬಸವರಾಜ ರಾಜಗುರುಗಳಂಥ ಉದ್ಧಾಮ ಗಾಯಕರಿಗೆ ತಬಲಾ ಸಾಥ್ ನೀಡಿದ ಹೆಗ್ಗಳಿಕೆ ಪಂ||ಡಾ||ರಾಚಯ್ಯ ಹಿರೇಮಠ್ ಅವರದ್ದು. ತಬಲಾದ ಮೇಲೆ ತಮ್ಮ ಬೆರಳುಗಳನ್ನು ಕುಣಿಸಿ, ಪ್ರೇಕ್ಷಕರ ಮನ ತಣಿಸುವಂಥ ವಾದನದ ವೈಖರಿ ಇವರದ್ದು.

Hindustani Music Festival in Bengaluru by Guru Samarth Music Institute

ಬೆಂಗಳೂರು ದೂರದರ್ಶನ ಕೇಂದ್ರದ ಉಪ ನಿರ್ದೇಶಕರಾದ ನಿರ್ಮಲಾ ಸಿ ಎಲಿಗಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದಾರೆ. ನಾಕಾಣೆ, ಕೌದಿ, ಕಸೂತಿ, ಸಾವಿರದ ಶರಣೆ, ಜ್ಞಾನಾಗ್ನಿ ಮುಂತಾದ ಕವನ ಸಂಕಲನಗಳ ಖ್ಯಾತಿಯ, ಚಾಲುಕ್ಯ ಪ್ರಶಸ್ತಿ ಪುರಸ್ಕೃತರು. ಆವಕಾಶ ವಂಚಿತರ ಆಶಾಕಿರಣವಾಗುವ ಸದಾಶಯದೊಂದಿಗೆ, ಶ್ರದ್ಢಾ ಎಂಬ ಸಂಸ್ಠೆಯನ್ನು ಸ್ಥಾಪಿಸಿ, ಸಮಾಜಮುಖಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Hindustani Music Festival in Bengaluru by Guru Samarth Music Institute

ಕಾರ್ಯಕ್ರಮದ ಮುಖ್ಯ ಅತಿಥಿಯ ಸ್ಥಾನವನ್ನು ಅಲಂಕರಿಸಲಿದ್ದಾರೆ ಪಂ||ಡಾ ಮೃತ್ಯುಂಜಯ ಶೆಟ್ಟರ್. ಸಂಗೀತದ ಹಲವಾರು ಪ್ರಕಾರಗಳಲ್ಲಿ ಪ್ರಭುತ್ವ ಸಾಧಿಸಿ, ಭಾರತದಾದ್ಯಂತ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಾ ತಮ್ಮ ಸುಮಧುರ ಕಂಠಸಿರಿಯ ಗಾಯನದಿಂದ, ವಿಶಿಷ್ಟ ಬಗೆಯ ಸ್ವರ ಸಂಚಾರದಿಂದ, ಸಂಗೀತ ರಸಿಕರ ಮನ ರಂಜಿಸುತ್ತಿರುವವರು ಪಂ||ಡಾ||ಮೃತ್ಯುಂಜಯ ಶೆಟ್ಟರ್.

Hindustani Music Festival in Bengaluru by Guru Samarth Music Institute

ಬೆಂಗಳೂರು ಕೆನರಾ ಬ್ಯಾಂಕಿನ ಮಹಾ ಪ್ರಬಂಧಕರು, ಹಿರಿಯ, ಪ್ರಾಮಾಣಿಕ, ದಕ್ಷ ಅಧಿಕಾರಿಗಳಾಗಿರುವಂಥ ಡಿ. ಕಲ್ಲೂರಾವ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮತ್ತೋರ್ವ ಮುಖ್ಯ ಅತಿಥಿ ಖ್ಯಾತ ಉದ್ದಿಮೆದಾರ ಶ್ರೀನಿವಾಸ ಉಡುಪ. ಸಮಾಜಿಕ ಸ್ವಾಸ್ಥ್ಯದ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದಾರೆ. ಅನಾಥ-ಅಂಗವಿಕಲ ಮಕ್ಕಳಿಗೆ ಆರ್ಥಿಕ ಹಾಗು ನೈತಿಕ ನೆರವು ನೀಡುತ್ತಾ, ಶಾಸ್ತ್ರೀಯ ಕಲೆಗಳನ್ನು ಪ್ರೋತ್ಸಾಹಿಸುತ್ತಾ, ಸಮಾಜದಲ್ಲಿ ಆಧ್ಯಾತ್ಮಿಕ ಔನ್ನತ್ಯದ ಹೊಳಹುಗಳನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ಶ್ರಮದಾನ ಮಾಡಿ ಸಮಾಜ ಸೇವೆ ಸಲ್ಲಿಸುತ್ತಿದ್ದಾರೆ.

Hindustani Music Festival in Bengaluru by Guru Samarth Music Institute

ಪಂ||ಡಾ||ಮೃತ್ಯುಂಜಯ ಶೆಟ್ಟರ್, ಚಿ||ಸಮೀರ್, ಪಂ||ಬಸವರಾಜ ಮುಗಳಖೋಡ ಹಾಗು ಶ್ರೀ ಗುರು ಸಮರ್ಥ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಹಿಂದುಸ್ತಾನಿ ಸಂಗೀತವನ್ನು ಸಾದರಪಡಿಸಲಿದ್ದರೆ.
ಪಂ||ಡಾ||ರಾಚಯ್ಯ ಹಿರೇಮಠ ಅವರಿಂದ ತಬಲ ಸೋಲೊ ಪ್ರಸ್ತುತಿ, ಶ್ರೀ ವೆಂಕಟೇಶ್ ಮೂರ್ತಿ ಶಿರೂರ್ ಅವರಿಂದ ಸುಗಮ ಸಂಗೀತ, ಗಾಯತ್ರಿ ಶ್ರೀಧರ್ ಅವರಿಂದ ದಾಸವಾಣಿ ಗಾಯನ ಹಾಗು ಸಂಸ್ಠೆಯ ವಿದ್ಯಾಭ್ಯಾಸಿಗಳಿಂದ ತಬಲಾ ವಾದನದನದ ಪ್ರಸ್ತುತಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳು.

English summary
Hindustani Music Festival in Bengaluru by Guru Samarth Music Institute at Kannada Sahitya Parishat, Chamarajpet, Bengaluru on 11th February, Sunday, in association with Kannada and Culture Department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X