• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಗೀತ ಜ್ಞಾನಮು ಭಕ್ತಿ ವಿನಾಃ -ತ್ಯಾಗರಾಜ ನಮನ

By Staff
|

ಪುಷ್ಯ ಬಹುಳ ಪಂಚಮಿಯಂದು (ಜನವರಿ 27) ಕರ್ನಾಟಕ ಸಂಗೀತದ ಮೇರುಪುರುಷ ತ್ಯಾಗರಾಜರ ಆರಾಧನಾ ಮಹೋತ್ಸವ. ಕರ್ಣಾನಂದಕರ, ಮಹದಾನಂದಕರ ಸಂಗೀತ ಸುಧೆಯನ್ನು ಸವಿಯುವ ಐತಿಹಾಸಿಕ ದಿನ. ಇಂದು ನಿಮ್ಮ ಮನೆ ಮನಗಳಲ್ಲಿ ಪಂಚರತ್ನ ಕೃತಿಗಳು ಮಾರ್ದನಿಸಲಿ.

  • ಹಂಸಾನಂದಿ, ಉತ್ತರಕ್ಯಾಲಿಫೋರ್ನಿಯ

ಸಂಗೀತ ಜ್ಞಾನಮು ಭಕ್ತಿ ವಿನಾಃ -ತ್ಯಾಗರಾಜ ನಮನಇಂದು ಜನವರಿ 27. ಪುಷ್ಯ ಬಹುಳ ಪಂಚಮಿ. ಸರಿಯಾಗಿ ನೂರ ಅರವತ್ತೊಂದು ವರ್ಷದ ಹಿಂದಿನ ಪುಷ್ಯ ಬಹುಳ ಪಂಚಮಿಯ ದಿನ ಒಬ್ಬ ರಾಜ ತೀರಿಕೊಂಡ. ನಿಜ ಹೇಳಬೇಕೆಂದರೆ ಈ ರಾಜ ಸತ್ತುಹೋಗಲಿಲ್ಲ. ಕಣ್ಮರೆಯಾದ ಕ್ಷಣದಿಂದಲೆ ಚಿರಂಜೀವಿಯಾದ. ಸಂಗೀತವನ್ನು ಮೆಚ್ಚುವ, ಆರಾಧಿಸುವ, ಹಾಡುವ, ಗುನುಗುವ, ತಾಳಹಾಕುವ ಪ್ರತಿಯೊಬ್ಬರ ಸಮಕಾಲೀನನಾಗಿಹೋದ!

ಈ ರಾಜ ಯಾವ ಯುದ್ಧವನ್ನೂ ಮಾಡಿ ಜಯಿಸಿಲಿಲ್ಲ. ಯಾವ ರಾಜ್ಯಕ್ಕೂ ರಾಜನಾಗಲಿಲ್ಲ. ಎಲ್ಲವನ್ನೂ "ತ್ಯಾಗ" ಮಾಡಿದರೂ, ಸಂಗೀತ ಪ್ರಪಂಚಕ್ಕೇ ರಾಜರಾಗಿ ಮೆರೆದರು. ಹೌದು. ತ್ಯಾಗರಾಜರ ದೇಹಾಂತ್ಯ ಆದದ್ದು 1847ರ ಜನವರಿ 6ರಂದು. ಆ ದಿನ, ಹಿಂದೂ ಪಂಚಾಗದ ಪ್ರಕಾರ ಪುಷ್ಯ ಬಹುಳ ಪಂಚಮಿಯ ದಿನ. ಆ ದಿನ ತ್ಯಾಗರಾಜರ ನೆನಪಿನಲ್ಲಿ, ಅವರು ಬದುಕಿ ಬಾಳಿದ ಕಾವೇರೀ ತೀರದ ತಿರುವಯ್ಯಾರಿನಲ್ಲಿ ಆರಾಧನಾ ಮಹೋತ್ಸವ ಜರುಗುತ್ತದೆ, ಭಕ್ತಿಸಂಗೀತದ ವಾರಿಧಿ ಉಕ್ಕಿ ಹರಿಯುತ್ತದೆ. ಕನ್ನಡಿಗರಿಗೆ ಇನ್ನೂ ಹತ್ತಿರವಾದ ಕಾವೇರಿಯ ಮಡಿಲಿನ ಶ್ರೀರಂಗಪಟ್ಟಣದಲ್ಲಿಯೂ ವಿಜೃಂಭಣೆಯಿಂದ ತ್ಯಾಗರಾಜರ ಆರಾಧನೆ ನಡೆಯುತ್ತದೆ. ಇವಷ್ಟೇ ಅಲ್ಲದೆ, ಕರ್ನಾಟಕ ಸಂಗೀತದ ಅಭಿಮಾನಿಗಳು, ರಸಿಕರು ಎಲ್ಲೆಲ್ಲಿದ್ದಾರೋ, ಅಲ್ಲೆಲ್ಲ ತ್ಯಾಗರಾಜರ ಆರಾಧನೆ ಒಂದಲ್ಲ ಒಂದು ರೀತಿಯಲ್ಲಿ ನಡೆದೇ ನಡೆಯುತ್ತದೆ.

ಪುರಂದರ ದಾಸರನ್ನು ಮನಸಲ್ಲೇ ಗುರುವಾಗಿ ನಿಲಿಸಿಕೊಂಡ ತ್ಯಾಗರಾಜರು ದಾಸರ ಆರಾಧನೆಯ ತಿಂಗಳಾದ ಪುಷ್ಯ ಮಾಸದಲ್ಲೇ ದೇಹತ್ಯಾಗ ಮಾಡಿದ್ದು ಕಾಕತಾಳೀಯವಿರಬಹುದು. ಆದರೆ, ಪುರಂದರದಾಸರ ರಚನೆಗಳಿಗೂ, ತ್ಯಾಗರಾಜರ ರಚನೆಗಳಲ್ಲೂ ಇರುವ ಹೋಲಿಕೆ ಕಾಕತಾಳೀಯವೇ? ಅಥವಾ, ದಾಸರ ಸಾಹಿತ್ಯ ತ್ಯಾಗರಾಜರ ಮೇಲೆ ಮಾಡಿದ ಪ್ರಭಾವದ ಪರಿಣಾಮವೇ? ಅಥವಾ ಮಹಾತ್ಮರ ಮನಗಳು ಒಂದೇ ತೆರದಲ್ಲಿ ಯೋಚಿಸುವುವೇ?

ಈ ಪ್ರಶ್ನೆಗೆ ನನ್ನಲ್ಲಿ ಖಚಿತ ಉತ್ತರವಿಲ್ಲ. ಆದರೆ, ತಾವು ರಚಿಸಿದ “ಪ್ರಹ್ಲಾದ ಭಕ್ತಿ ವಿಜಯ" ಎಂಬ ಗೇಯ ನಾಟಕದ ಮಂಗಳಶ್ಲೋಕದಲ್ಲಿ ತ್ಯಾಗರಾಜರು ಪುರಂದರ ದಾಸರನ್ನು ನೆನೆದಿರುವುದೂ, ಮತ್ತು ಹಲವಾರು ತ್ಯಾಗರಾಜರ ರಚನೆಗಳು ಪುರಂದರ ದಾಸರ ರಚನೆಗಳನ್ನು ಹೋಲುವುದೂ ಮಾತ್ರ ಸತ್ಯ.

ಉದಾಹರಣೆಗೆ, ಪುರಂದರದಾಸರು "ಸಕಲಗ್ರಹಬಲನೀನೆ ಸರಸಿಜಾಕ್ಷ" ಎಂದರೆ, ತ್ಯಾಗರಾಜರು "ಗ್ರಹಬಲಮೇಮಿ? ರಾಮಾನುಗ್ರಹಮೇ ಬಲಮು" (ಗ್ರಹಬಲವೇನದು? ರಾಮನ ಅನುಗ್ರಹವೇ ಬಲ) ಅನ್ನುತ್ತಾರೆ. ಪುರಂದರ ದಾಸರು "ಕೇಳನೋ ಹರಿ ತಾಳನೋ, ತಾಳಮೇಳಗಳಿದ್ದು ಪ್ರೇಮವಿಲ್ಲದ ಗಾನ" ಎಂದು ಹಾಡಿದರೆ, ತ್ಯಾಗರಾಜರು "ಸಂಗೀತ ಜ್ಞಾನಮು ಭಕ್ತಿವಿನಾ ಸನ್ಮಾರ್ಗಮು ಗಲದೇ!" ಅನ್ನುತ್ತಾರೆ. ತ್ಯಾಗರಾಜರ ಎಲ್ಲ ಜೀವನ ಚರಿತ್ರೆಗಳೂ, ತ್ಯಾಗರಾಜರ ತಾಯಿ ಪುರಂದರ ದಾಸರ ರಚನೆಗಳನ್ನು ಹಾಡುತ್ತಿದ್ದರೆಂದೂ, ಅದನ್ನು ಕೇಳುತ್ತ ಬೆಳೆದ ಬಾಲಕ ತ್ಯಾಗರಾಜರಿಗೆ ಪುರಂದರ ದಾಸರ ಭಕ್ತಿಮಾರ್ಗವು ಹತ್ತಿರವಾಯಿತೆಂದೂ ಹೇಳುತ್ತವೆ.

ನನಗೆ ಹಿಡಿಸಿರುವ ಪುರಂದರ ದಾಸರ ಒಂದು ಉಗಾಭೋಗ ಹೀಗಿದೆ:

ನಿನ್ನಂಥ ಸ್ವಾಮಿ ನನಗುಂಟು ನಿನಗಿಲ್ಲ

ನಿನ್ನಂಥ ದೊರೆಯು ಎನಗುಂಟು ನಿನಗಿಲ್ಲ

ನಿನ್ನಂಥ ತಂದೆ ಎನಗುಂಟು ನಿನಗಿಲ್ಲ

ನಾನೇ ಸ್ವದೇಶಿ ನೀನೇ ಪರದೇಶಿ

ನಿನ್ನರಸಿ ಲಕುಮಿ ಎನ್ನ ತಾಯಿ

ನಿನ್ನ ತಾಯ ತೋರೋ ಪುರಂದರ ವಿಠಲ!

ತ್ಯಾಗರಾಜರು ತಮ್ಮ ಜಿಂಗಲ ರಾಜದ ಕೃತಿಯೊಂದರಲ್ಲಿ ಹೀಗೆ ಹಾಡುತ್ತಾರೆ.

ಪಲ್ಲವಿ:ಅನಾಥುಡನು ಗಾನು ರಾಮ ನೇ ||ನನಾಥುಡನುಗಾನು ||

ಅನುಪಲ್ಲವಿ: ಅನಾಥುಡವು ನೀವನೆ ನಿಗಮಜ್ಞುಲ ಸನಾತನುಲ ಮಾಟವಿನ್ನಾವು ನೇ ||ನನಾಥುಡನುಗಾನು||

ಚರಣ: ನಿರಾದರವು ಜೂಚಿ ಈ ಕಲಿ ನರಾಧಮುಲನೆದರು ಪುರಾಣಪುರುಷ ಪುರರಿಪುನುತ ನಾಗರಾಜ ಶಯನ ತ್ಯಾಗರಾಜನುತ ನೇ|| ನನಾಥುಡನು ಗಾನು ||

ಕನ್ನಡದ ಓದುಗರಿಗೆ ಈ ಕೃತಿಯ ಭಾವ ತಿಳಿಯಲೆಂದು ಇದನ್ನು ನಾನು ಹೀಗೆ ಕನ್ನಡಿಸಿದ್ದೇನೆ.

ಪಲ್ಲವಿ: ಅನಾಥನಾನಗಿಲ್ಲ! ರಾಮ ನಾ ||ನನಾಥನಾಗಿಲ್ಲ ||

ಅನುಪಲ್ಲವಿ:ಅನಾಥ ನೀನೆಂದು ನಿಗಮಗಳನರಿತ

ಸನಾತನರು ಪೇಳ್ವುದ ಕೇಳಿಹೆ! ನಾ ||ನನಾಥನಾಗಿಲ್ಲ||

ಚರಣ:ಆದರಿಪರು ಎನಗಿರದೆ ಮನುಜರು ಕಲಿಕಾ-

ಲದಿ ಅನಾಥ ನೀಯೆಂಬರು! ಅ-

ನಾದಿಪುರುಷ ತ್ರಿಪುರಾರಿನುತನ

ಸದಾ ಈ ತ್ಯಾಗರಾಜ ಮಣಿದಿರೆ, ನಾ ||ನನಾಥನಾಗಿಲ್ಲ||

ಪುರಂದರ ದಾಸರು, ವಿಠಲನಿಗೇ ತನ್ನ ತಾಯಿಯನ್ನು ತೋರಿಸಬಲ್ಲೆಯಾ ಎಂದು ಸವಾಲೆಸೆದರೆ, ತ್ಯಾಗರಾಜರು ಪುರಾತನರು ಹೇಳಿರುವಂತೆ ನೀನೇ ಅನಾಥ, ನಾನು ಸನಾಥ ಎಂದು ಮರುನುಡಿದಿದ್ದಾರೆ. ಪುರಂದರ ದಾಸರು, ಮತ್ತು ತ್ಯಾಗರಾಜರ ಭಾವನೆಗಳಲ್ಲಿನ ಹೋಲಿಕೆಗಳನ್ನು ತೋರಿಸುವಲ್ಲಿ ಈ ರಚನೆ ಯಶಸ್ವಿಯಾಗಿದೆ ಎಂಬುದು ನನ್ನೆಣಿಕೆ.

ಈ ಪುಷ್ಯ ಬಹುಳ ಪಂಚಮಿಯಂದು ನಿಮ್ಮೂರಿನಲ್ಲಿ, ಎಲ್ಲಾದರೂ ನಿಮ್ಮ ಸನಿಹದಲ್ಲಿ ನಡೆಯುತ್ತಿರುವ ತ್ಯಾಗರಾಜ ಆರಾಧನೆಯಲ್ಲಿ ಪಾಲ್ಗೊಳ್ಳಿ. ಆನಂದಿಸಿ. ಆ ಮಹಾನುಭಾವನನ್ನು ಈ ಸಂದರ್ಭದಲ್ಲಿ ನೆನೆಯಿರಿ. ಜೊತೆಗೆ, ಎಲ್ಲೆಲ್ಲಿಯೂ ಇರಬಹುದಾದ ಮಹಾನುಭಾವರಿಗೆ, ತ್ಯಾಗರಾಜರ ಮಾತಿನಲ್ಲೇ ನಮನ ಸಲ್ಲಿಸಿ: "ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು".

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more