ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಮು ಸಾಮರಸ್ಯಕ್ಕೆ ಆಧ್ಯಾತ್ಮ ಗೀತಾವಳಿ

By Staff
|
Google Oneindia Kannada News

ಸಚ್ಚಿದಾನಂದೇಂದ್ರ ಶ್ರೀಗಳು ಬರೆದಿರುವ ಅನೇಕ ಕೃತಿಗಳಲ್ಲಿ ಕನ್ನಡದಲ್ಲಿ ಬರೆದಿರುವ "ಅಧ್ಯಾತ್ಮ ಗೀತಾವಳಿ" ಸರ್ವ ಶ್ರೇಷ್ಠ ಗ್ರಂಥ. ಅಚ್ಚ ಕನ್ನಡದಲ್ಲಿ , ವೇದಾಂತದ ಚೌಕಟ್ಟಿನಲ್ಲಿರುವ ಸುಂದರ ಹಾಡುಗಳು. ಇವತ್ತಿನ ಕರ್ನಾಟಕದ ಸಾಮಾಜಿಕ ಸನ್ನಿವೇಶಗಳಿಗೆ ಹೊಂದುವಂತಹ ಒಂದು ಗೀತೆಯನ್ನು ದಟ್ಸ್ ಕನ್ನಡ ಓದುಗರ ಮುಂದೆ ತೆರೆದಿಡುತ್ತಿದೆ.

ಲೇಖನ : ಚಿತ್ರದುರ್ಗ ಸಂಜೀವ ಮೂರ್ತಿ, ಬೆಂಗಳೂರು

ಕರ್ನಾಟಕ ಶಂಕರರೆಂದೇ ಪ್ರಸಿದ್ಧರಾದ ಈ ಶತಮಾನದ ಒಬ್ಬ ಮಹಾನ್ ಚೇತನ ಹೊಳೆನರಸೀಪುರದ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು. ಇವರು ಮೊಟ್ಟ ಮೊದಲಿಗೆ ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬಹಾದ್ದೂರ್ ರವರ ಪ್ರಾರ್ಥನೆಯಂತೆ ಭಗವತ್ಪಾದ ಶಂಕರಾಚಾರ್ಯರು ಬರೆದಿರುವ ಪ್ರಸ್ಥಾನತ್ರಯ (ವೇದವ್ಯಾಸರ ಬಾದರಾಯಣ ಸೂತ್ರಗಳು, ಶ್ರೀಮದ್ಭಗವದ್ಗೀತೆ ಮತ್ತು 10 ಉಪನಿಷತ್ತುಗಳು) ಸಂಸ್ಕೃತ ಭಾಷೆಯಲ್ಲಿದ್ದ ಭಾಷ್ಯವನ್ನು ಸಿರಿಗನ್ನಡಕ್ಕೆ ಭಾಷಾಂತರಿಸಿ ಇಡೀ ಕನ್ನಡ ಜನತೆಗೆ, ಅಷ್ಟೇಅಲ್ಲ ಇಡೀ ಮಾನವ ಕುಲಕ್ಕೇ ಮಹದುಪಕಾರ ಮಾಡಿದ್ದಾರೆ.

ಸರಸ್ವತೀ ಸ್ವಾಮಿಗಳು 96 ವರ್ಷಗಳ ಕಾಲ ಬದುಕಿದ್ದು ಒಬ್ಬ ಆದರ್ಶ ಸನ್ಯಾಸಿಯಾಗಿ ಬಾಳಿ ಇಡೀ ಜೀವನದುದ್ದಕ್ಕೂ ಕೇವಲ ವೇದಾಂತ ಪ್ರಚಾರ ಮಾಡಿದರು. ಅನೇಕ ಉಪನ್ಯಾಸಗಳು ಹಾಗೂ 250ಕ್ಕೂ ಹೆಚ್ಚಿನ ಕೃತಿಗಳನ್ನು ಸರ್ಕಾರದ ಯಾವ ಸಹಾಯವನ್ನೂ ಬೇಡದೆ ಜನ ಸಾಮಾನ್ಯರಿಗಾಗಿಯೇ ಕನ್ನಡ, ಇಂಗ್ಲಿಷ್ ಹಾಗೂ ಸಂಸ್ಕೃತ ಪುಸ್ತಕಗಳನ್ನು ಸುಲಭ ಬೆಲೆಯಲ್ಲಿ ಹಂಚಿದರು. ಇವರು ಕೇವಲ ಮಡಿವಂತಿಕೆಗೆ, ಪವಾಡಗಳಿಗೆ, ಕುರುಡು ನಂಬಿಕೆಗೆ ಬೆಲೆ ಕೊಡದೆ ವಿಚಾರ, ವಿಜ್ಞಾನ, ವಿವೇಕ ಮಾರ್ಗಗಳಿಗೆ ಮುಖ್ಯ ಸ್ಥಾನವನ್ನು ಕೊಟ್ಟ ಮಹಾತ್ಮ.

ಶ್ರೀಗಳು ಹಚ್ಚಿದ ಜ್ಞಾನದೀಪಗಳು : 1) ಶಂಕರರ ಮಾರ್ಗ ಸಾರ್ವತ್ರಿಕ, ಯಾವ ಜಾತಿ, ಪಂಗಡ, ಕುಲ, ದೇಶ, ಲಿಂಗ, ಕಾಲ,ಇತ್ಯಾದಿಗಳ ಹಂಗಿಲ್ಲ. 2) ನಮ್ಮೆಲ್ಲರ ದುಃಖಗಳಿಗೆ ಕಾರಣ ಅಜ್ಞಾನ ಅಥವಾ ತಪ್ಪು ತಿಳಿವಳಿಕೆ. 3) ಇದು ಕೇವಲ ವಿಚಾರದಿಂದ ತೊಲಗಬೇಕೇ ವಿನಹ ಬೇರೆ ಯಾವ ಮಾರ್ಗದಿಂದಲ್ಲ. 4) ನಾನು ತಾನು ವ್ಯತ್ಯಾಸ ತಿಳಿದು ತಾನಾಗಿ ತಾನಿನಲ್ಲಿ ನಿಂತವನೇ ಧೀರ. 5) ಆತ್ಮಜ್ಞಾನ ಒಂದರಿಂದಲೇ ಸುಖ, ಶಾಂತಿ, ತೃಪ್ತಿ ಲಭ್ಯ. 6) ಬದುಕಿರುವಾಗಲೇ ಅಜ್ಞಾನದಿಂದ ಬಿಡುಗಡೆ ಹೊಂದುವುದೇ ಮೋಕ್ಷ, ಸತ್ತಮೇಲಲ್ಲ. 7) ನಾವೆಲ್ಲರೂ ತಿಳಿದಿರಲಿ ತಿಳಿಯದಿರಲಿ ಪರಿಪೂರ್ಣ ಬ್ರಹ್ಮಸ್ವರೂಪರೇ. 8) ವೇದಾಂತವು ಅನುಭವದಲ್ಲಿರುವ, ಜೀವಂತ ವಿದ್ಯೆ, ಎಲ್ಲ ಮನುಷ್ಯರಿಗೂ ಅನ್ವಯಿಸುತ್ತದೆ.

ಶ್ರೀಗಳು ಬರೆದಿರುವ ಅನೇಕ ಕೃತಿಗಳಲ್ಲಿ ಕನ್ನಡದಲ್ಲಿ ಬರೆದಿರುವ "ಅಧ್ಯಾತ್ಮ ಗೀತಾವಳಿ" ಸರ್ವ ಶ್ರೇಷ್ಠ ಗ್ರಂಥ. ಅಚ್ಚ ಕನ್ನಡದಲ್ಲಿ , ವೇದಾಂತದ ಚೌಕಟ್ಟಿನಲ್ಲಿರುವ ಸುಂದರ ಹಾಡುಗಳು. ಇವತ್ತಿನ ಕರ್ನಾಟಕದ ಸಾಮಾಜಿಕ ಸನ್ನಿವೇಶಗಳಿಗೆ ಹೊಂದುವಂತಹ ಒಂದು ಗೀತೆಯನ್ನು ದಟ್ಸ್ ಕನ್ನಡ ಓದುಗರ ಮುಂದೆ ತೆರೆದಿಡಲು ಹರ್ಷಿತನಾಗುತ್ತೇನೆ.

ಸಕ್ಕದವೆ ಬೇಕೆಂಬ ಕಕ್ಕುಲಿತೆ ಏತಕೊ ಮಿಕ್ಕ ಭಾಷೆಗಳ ದೇವನರಿಯನೇನು ?
ಎಕ್ಕತುಳ ಭಕುತಿಯಲಿ ಬೇಡಿದರೆ ಪೊರೆಯನೆ ಮಕ್ಕಳಲ್ಲವೆ ನೀವು ಮಾದೇವಗೆ ?

ಜಾತಿಯಲಿ ಕೆಳಗೆಂಬ ಕಾತರವದೇತಕೋ ನೀತಿಯೊಂದಿರೆ ದೇವನೊಲಿಯನೇನು ?
ಪ್ರೀತಿಮಿಗೆ ಭಕುತಿಯಲಿ ಭಜಿಸುತ್ತಲಿರುವನೆನ್ನಾತುಮನೆ ಎನ್ನನೆ ಭಗವಂತನು ?

ಗುಡಿಮಸೀದಿಗಳೆಂಬ ಹೊಡೆದಾಟವೇತಕೋ ಅಡಿಯಿಡನೆ ದೇವನುಳಿಯೆದೆಡೆಯೊಳೇನು ?
ಎಡಬಿಡದ ಭಕುತಿಯಲಿ ಪೊಡೆಮಡುವರೆದೆಯೊಳೇ ಬಿಡದೆ ಮನೆಮಾಡನೇ ಜಗದೊಡೆಯನು ?

ಹಿಂದುಮುಸ್ಲಿಮಕ್ರೈಸ್ತ ದಂದುಗವದೇತಕೋ ಒಂದೊಂದು ಮತಕೊಬ್ಬ ದೇವನೇನು ?
ಒಂದೆಭಕುತಿಯಲಿ ಶರಣೆಂದವರ ಬಂಧುತಾ ಹಿಂದುಮುಂದಿನ ಮತವ ಕೇಳ್ವನೇನು ?

ಎಲ್ಲವನು ಬಲ್ಲ ನಮ್ಮೆಲ್ಲರಾ ಬಲ್ಲಹನದೆಲ್ಲರನು ಸಲಹುವನು ಸರ್ವಾತುಮ |
ಇಲ್ಲವಾತನ ಭಕುತರಲ್ಲಿ ಕೀಳ್ಮೇಲುಗಳು ಸೊಲ್ಲನಿದನಾಲಿಸಿರಿ ಶಂಕರವಿದು ||

ಎಷ್ಟು ಚೆಂದ ನೋಡಿ ಈ ಹಾಡು!! ಅರ್ಥ ಮಾಡಿಕೊಂಡರೆ ಜಗಳವೇ ಇಲ್ಲ. ಯಾವ ಮತಾಂತರವೂ ಬೇಕಿಲ್ಲ. ಅವನವನ ಜಾತಿಯಲಿ ಅವನವನು ಪ್ರಾಮಾಣಿಕನಾಗಿದ್ದು ಸತ್ಯವನ್ನು ಪಾಲಿಸುತ್ತಿದ್ದರೆ 'ಇಲ್ಲಿ ಈಗ ಮುಕುತರು ನಾವೆಲ್ಲಾ, ಬಂಧವೆ ಇಲ್ಲಾ' ಎನ್ನುವ ಸತ್ಯ ವಚನ ಅನುಭವ ವೇದ್ಯವಾಗುವುದು ದಿಟ.

ಆದ್ದರಿಂದ ಏಳಿ ಎದ್ದೇಳಿ ಅಣ್ಣ ತಮ್ಮಂದಿರಾಗಿ ಬಾಳೋಣ. ಪ್ರಪಂಚಕ್ಕೆ ನಮ್ಮ ಪವಿತ್ರ ಭಾರತದ ಸಂದೇಶಗಳನ್ನು ಸಾರೋಣ. ಈ ರೀತಿಯ ಹಾಡುಗಳು ಸುಶ್ರಾವ್ಯವಾದ ಆಡಿಯೋ ಸಿ.ಡಿ.ಗಳಲ್ಲಿ ಲಭ್ಯವಿದೆ ಆಸಕ್ತರು 98860 51222 ಸಂಖ್ಯೆಗೆ ಮಾತನಾಡಿ ಪಡೆದುಕೊಳ್ಳಬಹುದು. ಸಿ.ಡಿ ಸಿಗುವ ಸ್ಥಳ : ಬಾಂದುನವರ ಬೀದಿ, ಬಸವನಗುಡಿ, ಬೆಂಗಳೂರು. ಬೆಲೆ ರು.60/- ಶುಭಮಸ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X