ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರೀಯತೆ ಸಾರುವ ವಿಶ್ವದ ಅತಿ ದೊಡ್ಡ ತಂಬೂರಿ

By Staff
|
Google Oneindia Kannada News


(ಚಿತ್ರ ಕೃಪೆ: ಯುಎನ್ ಐ)

ಬೆಂಗಳೂರು, ಏ.13: ಮಲ್ಲೇಶ್ವರದ ಶಿವಮ್ಯೂಸಿಕಲ್ಸ್‌ನ ನಟರಾಜ್ ಹಾಗೂ ಅವರ ಪುತ್ರ ವಿನೋದ್ 11 ಅಡಿ ಎತ್ತರ, 150 ಕೆ.ಜಿ. ತೂಕ, 3 ಅಡಿ ಅಗಲದ ಬೃಹದಾಕಾರದ ತಂಬೂರಿಯನ್ನು ಒಂದೇ ಮರದಲ್ಲಿ ಸಿದ್ಧಪಡಿಸಿದ್ದಾರೆ. ಈ ಕಲಾತ್ಮಕ ತಂಬೂರಿಯನ್ನು ಎತ್ತಿಡಲು ಕನಿಷ್ಠ ಎಂದರೆ 15 ಜನ ಬೇಕು!

ಇದು ಬರೀ ಪ್ರದರ್ಶನದ ತಂಬೂರಿಯಲ್ಲ. ಸಪ್ತ ಸ್ವರಗಳನ್ನು ಹೊಮ್ಮಿಸುತ್ತದೆ. ಸುಮಾರು ಒಂದು ಲಕ್ಷ ರೂ.ಖರ್ಚು ಮಾಡಲಾಗಿದೆ. 1 ವರ್ಷ, 9 ತಿಂಗಳ ಕಾಲ ನಟರಾಜ್ ಹಾಗೂ ವಿನೋದ್ ಸತತ ಶ್ರಮಿಸಿ ಇದನ್ನು ಸಿದ್ಧಪಡಿಸಿದ್ದಾರೆ. ಇದು ಸಾಮಾನ್ಯ ತಂಬೂರಿಯಲ್ಲ. ವಿವಿಧ ಚಿತ್ತಾರಗಳನ್ನು ಹೊಂದಿರುವ ತಂಬೂರಿ ರಾಷ್ಟ್ರೀಯತೆಯನ್ನು ಸಾರುತ್ತಿದೆ.

ತಂಬೂರಿಯ ದಂಡಿಯ ಮೇಲ್ಭಾಗದಲ್ಲಿ ರಾಷ್ಟ್ರ ಪುಷ್ಪ ಕಮಲ, ರಾಷ್ಟ್ರ ಕ್ರೀಡೆಯ ಹಾಕಿ ದಂಡ, ರಾಷ್ಟ್ರ ಫಲ ಮಾವಿನ ಹಣ್ಣು, ರಾಷ್ಟ್ರ ವೃಕ್ಷ ಆಲದ ಮರ, ರಾಷ್ಟ್ರಗೀತೆ ಜನಗಣಮನ ಮತ್ತು ವಂದೇ ಮಾತರಂ ಗೀತೆಗಳನ್ನು ನಮೂದಿಸಿದ್ದಾರೆ. ತಂಬೂರಿಯ ಕೊನೆಯ ಭಾಗದಲ್ಲಿ ರಾಷ್ಟ್ರ ಲಾಂಛನ ನಾಲ್ಕು ಸಿಂಹಗಳ ಮುಖ (ಅಶೋಕ ಚಕ್ರ)ವನ್ನು ಕಲಾತ್ಮಕವಾಗಿ ಕೆತ್ತಲಾಗಿದೆ. ತಂಬೂರಿಯ ಎದೆಯ ಹಲಗೆಯ ಮೇಲೆ ಲಕ್ಷ್ಮಿ, ಸರಸ್ವತಿ, ಗಣಪತಿ ಚಿತ್ರಗಳನ್ನು ಕೆತ್ತಲಾಗಿದೆ. ರಾಷ್ಟ್ರಪಕ್ಷಿ ನವಿಲು ಹಾಗೂ ಕುದುರೆ ತಂಬೂರಿಯನ್ನು ಎತ್ತಿಹಿಡಿದಿರುವಂತೆ ವಿನ್ಯಾಸಗೊಳಿಸಲಾಗಿದೆ. ರಾಷ್ಟ್ರಪ್ರಾಣಿ ಹುಲಿಯನ್ನು ಮಣೆಯ ಜಾಗದಲ್ಲಿ ರೂಪಿಸಲಾಗಿದೆ.

ತಂಬೂರಿಯ ದಂಡಿಯ ಪಾರ್ಶ್ವಭಾಗದಲ್ಲಿ ದಸರಾ ಮೆರವಣಿಗೆ ಚಿತ್ರಗಳು, ರಾಷ್ಟ್ರಧ್ವಜ ಹಿಡಿದಿರುವ ಪದಾತಿದಳ, ಬಂದೂಕು ಹಿಡಿದಿರುವ ಸೈನಿಕರು, ಗಂಡಭೇರುಂಡ, ದೇವರ ಪ್ರತಿಮೆಯನ್ನು ಹೊತ್ತ ಬೆಳ್ಳಿಯ ರಥ, ಕತ್ತಿ ವರಸೆ ಮಾಡುತ್ತಿರುವ ಸೈನಿಕರು, ಜಂಬೂ ಸವಾರಿ, ನಗಾರಿ ಬಾರಿಸುತ್ತಿರುವ ವಾದಕರ ಚಿತ್ರಗಳನ್ನು ಅದ್ಭುತವಾಗಿ ಚಿತ್ರಿಸಲಾಗಿದೆ.

ನಟರಾಜ್ ಮತ್ತು ಅವರ ಪುತ್ರ ವಿನೋದ್ ಶೃಂಗೇರಿಯ ಶ್ರೀ ಶಾರದಾ ಪೀಠಕ್ಕೆ 10 ಅಡಿ ಉದ್ದದ ರುದ್ರವೀಣೆ ನೀಡಿದ್ದಾರೆ. ಈಗ 11 ಅಡಿ ಉದ್ದ್ದದ ತಂಬೂರಿ ನಿರ್ಮಿಸಿ ಮತ್ತೊಂದು ದಾಖಲೆ ಮಾಡಿದ್ದಾರೆ. ಮುಂದೆ 15 ಅಡಿ ಉದ್ದದ ಕೊಳಲನ್ನು ರೂಪಿಸುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X