ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೊಡ್ಡ ಕನಸುಗಾರರು ನಂಗಿಷ್ಟ - ಶುಭ ಮುದಗಲ್‌

By Staff
|
Google Oneindia Kannada News

*ವಿಶಾಖ ಎನ್‌.

ಸಂಗೀತೋಪಾಸಕಿ ಹಾಗೂ ಸಂಗೀತ ಬರಹಗಾರರ ನಡುವೆ ಕೊಂಕಿ ಹಾಕಿಕೊಂಡ ನಂಟಿನ ಪ್ರಸಂಗವಿದು-

ಎಂಟಿವಿಯಲ್ಲಿ ಒಂದು ಸಂದರ್ಶನ. ಶಾಸ್ತ್ರೀಯ ಗಾಯಕಿ ಶುಭ ಮುದಗಲ್‌ರತ್ತ ವಿಡಿಯೋ ಜಾಕಿ ಪ್ರಶ್ನೆಗಳನ್ನು ಎಸೆಯುತ್ತಿದ್ದಾನೆ. ಸಂಗೀತ ಹಾಗೂ ವೆಬ್‌ ಜಾಲದ ಬಗ್ಗೆ ಹೇಳಿ ಅಂತ ಕೇಳಿದ್ದೇ ತಡ, ಶುಭ ಮುದಗಲ್‌ ಹೇಳಿದ ವೆಬ್‌ಸೈಟಿನ ಹೆಸರು- themusicmagazine.com. ಸಂಗೀತದ ಬಗ್ಗೆ ಇಷ್ಟು ಅಚ್ಚುಕಟ್ಟಾದ, ವಸ್ತುನಿಷ್ಠ ಹಾಗೂ ಪೂರ್ವಾಗ್ರಹವಿಲ್ಲದ ಕೂಲಂಕಷ ಬರವಣಿಗೆಯನ್ನು ತಾವು ಬೇರೆ ಯಾವ ವೆಬ್‌ಸೈಟಲ್ಲೂ ನೋಡಿಲ್ಲ ಅಂತ ಶುಭ ಮುದಗಲ್‌ ಹೇಳಿದಾಗ ಸಂದರ್ಶನ ನೋಡುತ್ತಿದ್ದ ವೆಬ್‌ಸೈಟಿನ ಬಳಗ ಪುಳಕಿತವಾಯಿತು.

Shubha Mudgalಆಮೇಲೆ ತಮಗಿದ್ದ ಸಂಪರ್ಕಗಳನ್ನೇ ಬಳಸಿಕೊಂಡು ಶುಭ ಅವರನ್ನು ಇ- ಮೇಲ್‌ ಮೂಲಕ ಮಾತಾಡಿಸುವಲ್ಲಿ ಮ್ಯೂಸಿಕ್‌ ಮ್ಯಾಗಜಿನ್‌ನ ರೂವಾರಿ ದಂಪತಿಗಳಾದ ಎಸ್‌.ಆರ್‌.ರಾಮಕೃಷ್ಣ ಮತ್ತು ಎಸ್‌.ಸುಚಿತ್ರ ಲತ ಯಶಸ್ವಿಯಾದರು. ವೆಬ್‌ಸೈಟಿನ ಕೆಲಸಕ್ಕೆ ಬೆನ್ನು ತಟ್ಟುತ್ತಲೇ ಬಂದ ಶುಭ ಬರಬರುತ್ತಾ ಬಳಗಕ್ಕೆ ಆತ್ಮೀಯರಾದರು. ಹೊಸತನ್ನು ಮಾಡಲು ಪ್ರೇರೇಪಣೆ ನೀಡಿದರು. ಹೀಗೆ ಬೆಳೆದ ಸಂಗೀತಾಕ್ಷರ ಸಂಬಂಧ ಮುಂದೆ ಒಂದು ರೆಕಾರ್ಡಿಂಗ್‌ ಸ್ಟುಡಿಯೋ ‘ದಿ ಮ್ಯೂಸಿಕ್‌ ಮಿಂಟ್‌’ ಕಟ್ಟಲು ಬೆನ್ನು ತಟ್ಟಿತು.

ಬೆಂಗಳೂರಿನ ಜಯನಗರ 9ನೇ ಬಡಾವಣೆಯಲ್ಲಿರುವ ‘ದಿ ಮ್ಯೂಸಿಕ್‌ ಮಿಂಟ್‌’ ರೆಕಾರ್ಡಿಂಗ್‌ ಸ್ಟುಡಿಯೋ ಕೆಲಸಗಳಿಗೆ ಶುಕ್ರವಾರ (ಜ.17) ಅಧಿಕೃತ ಚಾಲನೆ ಕೊಟ್ಟಿದ್ದೂ ಅದೇ ಪ್ರೇರಕ ಶಕ್ತಿ ಶುಭ ಮುದಗಲ್‌. ಅದು ಮನೆ ಮಟ್ಟಿಗಿನ ಸಮಾರಂಭ. ಇದ್ದದ್ದು ನೂರೋ ನೂರೈವತ್ತೋ ಸಂಗೀತ- ಸಾಹಿತ್ಯಾಸಕ್ತರು. ಶುಭ ಮುದಗಲ್‌ ಹೆಚ್ಚು ಮಾತಾಡಲಿಲ್ಲ. ಆದರೆ ಆಡಿದ ಮಾತುಗಳು ತೂಕವಾಗಿದ್ದವು- ‘ನಾನು ದೊಡ್ಡದಾಗಿ ಕನಸು ಕಾಣುವವರನ್ನು ಹಾಗೂ ಅಂಥ ಕನಸನ್ನು ನನಸು ಮಾಡಲು ಟೊಂಕ ಕಟ್ಟುವವರನ್ನು ಇಷ್ಟಪಡುತ್ತೇನೆ. ಆ ಕಾರಣಕ್ಕೇ ರಾಮಕೃಷ್ಣ ಹಾಗೂ ಸುಚಿತ್ರ ನನಗೆ ಮೆಚ್ಚು. ವೆಬ್‌ಸೈಟಿನಲ್ಲಿ ಅವರು ಸಂಗೀತದ ಬಗ್ಗೆ ಅಚ್ಚುಕಟ್ಟಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅವರಿಗೆ ಸಂಗೀತದ ಜ್ಞಾನವಿದೆ. ಸ್ಟುಡಿಯೋದಲ್ಲೂ ಅವರ ಅಚ್ಚುಕಟ್ಟುತನ ಬಿಂಬಿಸುತ್ತಾರೆ ಅನ್ನುವ ನಂಬಿಕೆಯಿದೆ’.

ಈಗಾಗಲೇ ಕೆಲಸ ಶುರು ಮಾಡಿರುವ ಸ್ಟುಡಿಯೋದಲ್ಲಿ ಹಾಕಿರುವ ಅನೇಕ ಮಟ್ಟುಗಳನ್ನು ಸಿ.ಡಿ. ಹಾಗೂ ಕೆಸೆಟ್ಟಿಗೆ ತುಂಬಿಸಿ ಬೆನ್ನು ತಟ್ಟಿರುವ ಲಹರಿ ಕೆಸೆಟ್‌ ಕಂಪನಿಯ ವೇಲು ಕಾರ್ಯಕ್ರಮದ ವಿಶೇಷ ಅತಿಥಿ. ಈತ ಮಾತುಗಾರನಲ್ಲ, ಕೆಲಸಗಾರ. ಆ ಕಾರಣಕ್ಕೇ ಸ್ಟುಡಿಯೋಗೆ ಯಶಸ್ಸು ಹಾರೈಸುವುದಕ್ಕಷ್ಟೆ ತಮ್ಮ ಮಾತನ್ನು ಸೀಮಿತಗೊಳಿಸದರು. ಸ್ಟುಡಿಯೋದಲ್ಲಿ ಹಾಡುಗಳ ಮುದ್ರಿಸಿಕೊಂಡ ಕೆಲವರು ತಮ್ಮ ಅನುಭವ ಹಂಚಿಕೊಂಡರು. ಈ ಪೈಕಿ ಕನ್ನಡ ಸಿನಿಮಾ ಸಂಗೀತ ನಿರ್ದೇಶಕ ಹಾಗೂ ಹಾಡುಗಳ ಸಾಹಿತಿ ವಿ.ಮನೋಹರ್‌ ಕೂಡ ಇದ್ದರು. ಮನೆಯ ವಾತಾವರಣ, ಚಿಕ್ಕದಾದರೂ ಇರುವ ಚೊಕ್ಕತನ, ತಾಂತ್ರಿಕವಾಗಿ ಅಚ್ಚುಕಟ್ಟಾದ ವ್ಯವಸ್ಥೆ, ಮಟ್ಟುಗಳ ವಿಷಯದಲ್ಲಿ ಆಯ್ಕೆಯನ್ನು ಹೇರದ ಸಿಬ್ಬಂದಿ, ಮೇಲಾಗಿ ಯುವ ಹಾಗೂ ಸಂಗೀತದ ಗಂಧ ಗಾಳಿಯಿರುವ ಉತ್ಸಾಹಿ ಧ್ವನಿ ತಂತ್ರಜ್ಞರಾದ ಗೋಕುಲ್‌ ಹಾಗೂ ಅಭಿಷೇಕ್‌- ಎಲ್ಲವನ್ನೂ ಅನುಭವಿ ಸಂಗೀತಕಾರರು ಮುಕ್ತ ಕಂಠದಿಂದ ಹೊಗಳಿದರು.

ಯುವ ಕತೆಗಾರರಿಗೆ ಬರೆಯುವಂತೆ ನಗೆ ತುಂಬಿಕೊಂಡು ಜಯಂತ ಕಾಯ್ಕಿಣಿ ಬೆನ್ನು ತಟ್ಟುತ್ತಿದ್ದರು. ರಂಗ ಬರಹಗಾರ ಹಾ.ಸ.ಕೃ. ಸಂಗೀತೋಪಾಸಕರ ಜೊತೆ ಅನುಭವ ಹಂಚಿಕೊಳ್ಳುತ್ತಿದ್ದರು. ಹೊಸ ಸಂಗೀತದ ಪ್ರತಿಭೆಗಳು ಕಿಲಕಿಲನೆ ಓಡಾಡುತ್ತಿದ್ದರು.

ಇದೇ ಸಮಾರಂಭದಲ್ಲಿ ಬಸವಣ್ಣನವರ ವಚನಗಳನ್ನು ಇಂಗ್ಲಿಷ್‌ಗೆ ಅನುವಾದಿಸಿ, ಮಟ್ಟುಗಳನ್ನು ಹಾಕಿದ ಸಿ.ಡಿ.ಯನ್ನು ಶುಭ ಮುದಗಲ್‌ ಬಿಡುಗಡೆ ಮಾಡಿದರು. ಅಂದಹಾಗೆ, ವಚನಗಳನ್ನು ಇಂಗ್ಲಿಷಿಗೆ ತರ್ಜುಮೆ ಮಾಡಿರುವುದು ಇದೇ ಸ್ಟುಡಿಯೋದ ಎಸ್‌.ಆರ್‌.ರಾಮಕೃಷ್ಣ . ಶುಭ ಮುದಗಲ್‌ ಹಾಡು ಹಾಡಿದ್ದರೆ ಸಮಾರಂಭ ಇನ್ನೂ ಚೆನ್ನಾಗಿರುತ್ತಿತ್ತು.

Post Your Views

ವಾರ್ತಾ ಸಂಚಯ

ಹಲವು ಮೊದಲುಗಳ ‘ದಿ ಮ್ಯೂಸಿಕ್‌ ಮಿಂಟ್‌’

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X