ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ರಿ ನೆನಪಿನ ಗಂಗೆಯಲಿ ಸಂಗೀತದ ಹಾಯಿದೋಣಿ

By Staff
|
Google Oneindia Kannada News

* ಚೇತನ್‌ ನಾಡಿಗೇರ್‌

In Memory of G.V.Athri...ಥೇಟ್‌ ಪಿ.ಬಿ.ಶ್ರೀನಿವಾಸ್‌ ಥರ ಹಾಡುತ್ತಿದ್ದ ಜಿ.ವಿ.ಅತ್ರಿ ಉಸಿರು ತುಂಗೆಯಲ್ಲಿ ಕಳೆದು ಹೋಗಿ 3 ವರ್ಷ ಸಂದಿದೆ. ಈ ಸಂದರ್ಭದಲ್ಲಿ ಅವರ ಸ್ಮರಣೆ ನಡೆದದ್ದು ಸಂಗೀತದ ಮೂಲಕವೇ. ಸಂಗೀತ ಗಂಗಾ ಸಂಸ್ಥೆ ‘ಜಿ.ವಿ. ಅತ್ರಿ ಸವಿನೆನಪು - 2003’ ಎಂಬ ಸಂಗೀತೋತ್ಸವವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ (ಏ.30) ಏರ್ಪಡಿಸಿತ್ತು.

ದೀಪ ಬೆಳಗುವುದರ ಮೂಲಕ ಸಮಾರಂಭ ಉದ್ಘಾಟಿಸಿದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ, ‘ಅತ್ರಿ ತನ್ನ ಬಂಧು ಭಾಂದವರಿಗೆ ಸವಿನೆನಪಾಗಿದ್ದಾರೆ. ಆದರೆ ಕಲಾರಸಿಕರಿಗೆ ಇಂದೂ ಅವರು ಹಾಡಿನ ಹುರುಪು. ಪಿ.ಬಿ. ಶ್ರೀನಿವಾಸ್‌ ತರಹ ಹಾಡುತ್ತಿದ್ದ ಅತ್ರಿ ಎಂದೂ ಅವರ ಅನುಕರಣೆ ಮಾಡಲಿಲ್ಲ. ಅತ್ರಿಯಲ್ಲಿ ನಾನು ಅತಿಯಾಗಿ ಮೆಚ್ಚಿಕೊಂಡಿದ್ದು ಅವರ ಶಿಸ್ತು ಮತ್ತು ಅಚ್ಚುಕಟ್ಟುತನ. ಶಂಕರ್‌ನಾಗ್‌ನಷ್ಟೇ ವೇಗ ಮತ್ತು ಹುರುಪಿನಿಂದಿರುತ್ತಿದ್ದ ಅತ್ರಿ, ಶಂಕರ್‌ನಾಗ್‌ ವೇಗದಲ್ಲೇ ತೀರಿಕೊಂಡರು’ ಎಂದು ವಿಷಾದ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯದ ನಿರ್ದೇಶಕ ಸಿ. ಸೋಮಶೇಖರ್‌, ತಮ್ಮ ಭಾಷಣದ ಚಾಳಿಯನ್ನು ಮುಂದುವರೆಸಿ ಅತ್ರಿ ಪ್ರತಿಭೆಯನ್ನು ವಾಚಾಮಗೋಚರ ಹೊಗಳಿದರು. ಸೋಮಶೇಖರ್‌ ಹೊಗಳಿಕೆಗೆ ಅತ್ರಿ ತುತ್ತಾದದ್ದು ಹೀಗೆ- ‘ಆತ ಇನಿದನಿಯ ಗಾಯಕ, ಅಪ್ರತಿಮ ಪ್ರತಿಭಾವಂತ, ಸಂಗೀತದ ಚೇತನ. ಸಂಗೀತ ಕ್ಷೇತ್ರದಲ್ಲಿ ಅಲ್ಪಕಾಲದಲ್ಲೇ ಸಾಧನೆ ಮಾಡಿದ ಪ್ರತಿಭೆ. ಯಾವುದೇ ತ್ಯಾಗಮಾಡದೆ, ಶ್ರಮವಹಿಸದೇ ಬಹಳ ದೊಡ್ಡ ಸ್ಥಾನ ಬೇಕೆನ್ನುವವರಿಗೆ ಅತ್ರಿ ತದ್ವಿರುದ್ಧವಾಗಿದ್ದರು. ಹಿಂದೊಮ್ಮೆ ನಾನು ಅನಾಮಧೇಯ ವಚನಕಾರರ ವಚನಗಳ ಕ್ಯಾಸೆಟ್‌ ಮತ್ತು ಸಿ.ಡಿ. ಹೊರತರಬೇಕೆಂದುಕೊಂಡಾಗ ಅತ್ರಿ ಮುಂದೆ ಬಂದು ತಾವು ಆ ಕೆಲಸ ಮಾಡುವುದಾಗಿ ಹೇಳಿದ್ದರು. ಆದರೆ ಅದಕ್ಕೂ ಮುಂಚೆಯೇ ತೀರಿಕೊಂಡ ಅತ್ರಿ, ಇಂದು ಬರಿಯ ನೆನಪಾಗಿದ್ದಾರೆ. ಆ ಕೆಲಸ ಹೇಮಾ ಪ್ರಸಾದ್‌ ಮತ್ತು ಸಂಗೀತ ಗಂಗಾ ವಿದ್ಯಾರ್ಥಿಗಳಿಂದಾಗಬೇಕು’.

ಅತ್ರಿ ತಾಯಿ ನಾಗಮ್ಮ, ಸಂಗೀತ ಗಂಗಾದ ಹೇಮಾ ಪ್ರಸಾದ್‌, ಖ್ಯಾತ ಸಂಗೀತಗಾರ್ತಿ ಶ್ಯಾಮಲ ಜಾಗಿರ್‌ದಾರ್‌ ಸಮಾರಂಭದಲ್ಲಿ ಹಾಜರಿದ್ದರು. ಬೆಳಿಗ್ಗೆ 10 ರಿಂದ ರಾತ್ರಿ 9ರವರೆಗೆ ನಡೆದ ಸಂಗೀತೋತ್ಸವದಲ್ಲಿ ನಾಡಿನ ಹೆಸರಾಂತ ಗಾಯಕರು, ಗಾಯಕಿಯರು, ಸಂಗೀತಗಾರರು ಮತ್ತು ಸಾಹಿತಿಗಳು ಭಾಗವಹಿಸಿದ್ದರು.

ಈ ಸಂಗೀತೋತ್ಸವದಲ್ಲಿ ಸುಗಮ ಸಂಗೀತ, ರಂಗ ಗೀತೆ, ವಾಚನ ಗಾಯನ, ಗೀತ ನೃತ್ಯ, ಕಾವ್ಯಗೋಷ್ಠಿ, ಜಾನಪದ ಗೀತೆ ಮುಂತಾದ ಹಲವು ವೈವಿಧ್ಯಮಯ ಕಾರ್ಯಕ್ರಮಗಳು ಏರ್ಪಾಟಾಗಿದ್ದವು.


ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X