ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ರೋಲ್ಸ್‌ ರಾಯ್ಸ್‌ ಕಾರಿನ ಹಾಗೆ : ಪಂಡಿತ್‌ ರವಿಶಂಕರ್‌

By Staff
|
Google Oneindia Kannada News

I am like an old, good car : Ravishankarನಾನು ಎರಡು ಲಕ್ಷ ಮೈಲು ಓಡಿರುವ ಕಾರಿನ ತರಹ. ಆದರೂ ರೋಲ್ಸ್‌ ರಾಯ್ಸ್‌ ಕಾರಿನ ಹಾಗೆ, ಹಳೆಯದಾದರೂ ಒಳ್ಳೆಯ ಕಾರು. ಈಗಲೂ ಓಡುತ್ತಲೇ ಇದೆ. ನಾನೂ ಹಾಗೇ, ವಯಸ್ಸಾದರೂ ಸಿತಾರಕ್ಕೆ ಬೆರಳು ಕೊಡಲು ಈಗಲೂ ಹಿಂದೆ ಬೀಳುವುದಿಲ್ಲ.

- ಎಂಬತ್ತೆರಡರ ಹರೆಯದ ಸಿತಾರ ಮಾಂತ್ರಿಕ ಪಂಡಿತ್‌ ರವಿಶಂಕರ್‌ ನಗುನಗುತ್ತಲೇ ಮಾತಡುತ್ತಾರೆ. ಬರ್ಲಿನ್‌ನಲ್ಲಿನ ಅವರ ಅಭಿಮಾನಿ ವೃಂದಕ್ಕೆ ಸಂಗೀತದೂಟದ ನಡುವೆ ಅವರ ಮೊನಚು ಮಾತಿನ ಉಪ್ಪಿನಕಾಯಿ. ಸದ್ಯ ಅವರು ಮಗಳ ಜೊತೆ ಯೂರೋಪ್‌ ಪ್ರವಾಸದಲ್ಲಿದ್ದಾರೆ. ಜನರ ಮಾತು ರವಿಶಂಕರ್‌ ಅವರಿಗೆ ಸ್ಪಷ್ಟವಾಗಿ ಕೇಳುವುದಿಲ್ಲ. ಮಾತಾಡಿಸಿದವರ ಬಾಯಿಯ ಹತ್ತಿರಕ್ಕೆ ಕಿವಿ ಕೊಂಡೊಯ್ಯುತ್ತಾರೆ. ಸಹಾಯಕ್ಕೆ ಪಕ್ಕದಲ್ಲಿ ಮಗಳು ಅನೂಷ್ಕಾ ಇರುತ್ತಾಳೆ.

ಅವರ ಮಾತೂ ಸಿತಾರ್‌ ವಾದನದಷ್ಟೇ ಮುದ ನೀಡುತ್ತದೆ....

‘ನನಗೂ ಎಂಬತ್ತೆರಡಾಯ್ತು. ಎಂಬತ್ಮೂರು ರನ್ನಿಂಗು. ಗಾಡಿ ಹಳೆಯದಾಗಿದೆ. ಚಿಕ್ಕ ವಯಸ್ಸಲ್ಲಿದ್ದಾಗಿನ ಹುಮ್ಮಸ್ಸು ಇಲ್ಲ. ಹಾಗಂತ ನಾನು ರಿಟೈರ್‌ ಆಗೋಲ್ಲ. ತ್ರಾಣ ಇರುವವರೆಗೆ, ಅಭಿಮಾನಿಗಳು ನುಡಿಸು ಅನ್ನುವವರೆಗೆ ಸಿತಾರದ ಸಂಗ ಬಿಡೆನು. 1960ರಲ್ಲಿ ನನಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಕ್ಕಿತು. ಬೀಟಲ್‌ ಜಾರ್ಜ್‌ ಹ್ಯಾರಿಸನ್‌ ನನ್ನ ಜೀವದ ಗೆಳೆಯ. ಆತನಿಗೆ ನಾನು ಸಿತಾರ ಕಲಿಸಿದೆ. ಪುನರ್ಜನ್ಮದಲ್ಲಿ ನಂಬಿಕೆ ಇರುವವ ನಾನು. ನನಗೂ ಆತನಿಗೂ ಈ ಜನ್ಮದ್ದಷ್ಟೇ ಅಲ್ಲ, ಜನ್ಮ ಜನ್ಮಾಂತರದ ನಂಟಿದೆ ಅನಿಸುತ್ತದೆ. ಆತ ಕೂಡ ಹಾಗೆಯೇ ಹೇಳುತ್ತಿದ್ದ. ಆದರೆ ಕಳೆದ ವರ್ಷ ಹ್ಯಾರಿಸನ್‌ ಮೃತಪಟ್ಟ’.

ರವಿಶಂಕರ್‌ ಉತ್ತರಾಧಿಕಾರಿ ಯಾರು?

ಅವರ ಮಗಳು ಅನೂಷ್ಕ. 20ರ ಹರೆಯದ ಈ ಹುಡುಗಿ ಸಿತಾರ್‌ ವಾದನ ಕುರಿತ 3 ಸಿ.ಡಿ.ಗಳನ್ನು ಈಗಾಗಲೇ ಹೊರ ತಂದಿದ್ದಾಳೆ. ಅಪ್ಪನ ಹೆಸರನ್ನು ಉಳಿಸುವುದರಲ್ಲಿ ಅನುಮಾನವೇ ಇಲ್ಲ ಅಂತ ಅಭಿಮಾನಿಗಳು ಬೆನ್ನು ತಟ್ಟಿದ್ದಾರೆ ಕೂಡ. ಮಗಳ ಬಗ್ಗೆ ರವಿಶಂಕರ್‌ ಅವರನ್ನು ಕೇಳಿದರೆ, ‘ಆಕೆ ಕಲಿಯುವುದು ಸಾಕಷ್ಟಿದೆ. ನನ್ನ ಕಛೇರಿಗಳ ನಂತರ ನನಗೇ ನಾನು ಪಾಠ ಹೇಳಿಕೊಳ್ಳುವ ಪರಿಸ್ಥಿತಿ ಇವತ್ತಿಗೂ ಇದೆ. ಕಲಿಯುವುದು ನಿರಂತರ. ಅನೂಷ್ಕ ಅಂದುಕೊಂಡದ್ದನ್ನ ಮಾಡುತ್ತಾಳೆ ಅನ್ನುವ ವಿಶ್ವಾಸವಿದೆ’ ಎನ್ನುತ್ತಾರೆ.

ಪಂಡಿತರ ಕೊನೆಮಾತು...

‘ನಾನು ಬೆಳೆದದ್ದು ದೇಶ ಇಬ್ಭಾಗವಾಗುವ ಮುನ್ನ. ನನ್ನ ಗುರು ಒಬ್ಬ ಮುಸ್ಲಿಂ. ನನ್ನ ಪಾಲಿಗೆ ಆತ ದೇವರು. ನನ್ನ ಆತ್ಮೀಯ ಸ್ನೇಹಿತರ ಪೈಕಿ ಮುಸಲ್ಮಾನರು ಸಾಕಷ್ಟು ಜನ ಇದ್ದಾರೆ. ಭಯೋತ್ಪಾದನೆಯ ವಿಷಯವಾಗಿ ಮುಸ್ಲಿಮರ ಕಡೆಗೇ ಬೆಟ್ಟು ಮಾಡುವುದು ಸಲ್ಲ. ಭಯೋತ್ಪಾದನೆ ಒಳ್ಳೆಯದಲ್ಲ ಅನ್ನುವುದು ಮುಖ್ಯ. ಅದನ್ನು ಮುಸ್ಲಿಮರು ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಮಾತ್ರ ದೂರುವುದು ಸುತಾರಾಂ ಸರಿಯಲ್ಲ. ಸಹೃದಯರಲ್ಲಿ ಎಲ್ಲ ಜಾತಿ ವರ್ಗದವರೂ ಇರುತ್ತಾರೆ. ಸಂಗೀತ ಕೇಳಿ ಮೈಮರೆಯುತ್ತಾರೆ. ದೂರುವವರೂ ಇದ್ದಾರೆ. ಹಾಗಂತ ಅಲ್ಲೂ ನಾನು ಜಾತಿ ತಂದರೆ, ನಾನೂ ಒಬ್ಬ ಭಯೋತ್ಪಾದಕನಂತೆಯೇ ಅಲ್ಲವೇ ಎಂಬ ಗಂಭೀರ ಪ್ರಶ್ನೆ ಎಸೆದು ನಗುತ್ತಾರೆ ರವಿಶಂಕರ್‌.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X