ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಮರಳಿ ಕೃಷ್ಣ’ಗೆ ಸಮ್ಮಾನ,‘ಐಟಿ ಕೃಷ್ಣ’ ದುಮ್ಮಾನ !

By Staff
|
Google Oneindia Kannada News

*ನಾಡಿಗೇರ್‌ ಚೇತನ್‌

Balamurali Krishna felicitated with Gayana Sarvabhouma‘ಇಂಥ ಅಪರೂಪದ ಕಾರ್ಯಕ್ರಮಕ್ಕೆ ಮಾಧ್ಯಮದವರು ಬರೋಲ್ಲ. ಅದೇ ಯಾರಾದರೂ ಪುಸ್ತಕ ಬರೀತೀನಿ ಅಂದ್ರೆ, ಮುಖ್ಯಮಂತ್ರಿ ರಾಜೀನಾಮೆ ಕೊಡ್ತೇನೆ ಅಂದ್ರೆ ಅಲ್ಲಿಗೆ ಓಡ್ತಾರೆ’ !

ಮಾಧ್ಯಮದವರ ಮೇಲೆ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಮುನಿಸು ಹೊರಹಾಕಿದ ಪರಿಯಿದು. ಸಂದರ್ಭ- ಪದ್ಮವಿಭೂಷಣ ಡಾ.ಬಾಲಮುರಳಿ ಕೃಷ್ಣ ಅವರನ್ನು ಗಾಯನ ಸಮಾಜವು ಗಾಯನ ಸಾರ್ವಭೌಮ ಬಿರುದು ಕೊಟ್ಟು ಭಾನುವಾರ ಗೌರವಿಸಿದಾಗ. ದಿನಕರ್‌ ಬರೆದ ಪುಸ್ತಕಕ್ಕೆ ಮಾಧ್ಯಮಗಳ ಮೂಲಕ ಸಾಕಷ್ಟು ಮೈಲೇಜ್‌ ಸಿಕ್ಕಿರುವುದೇ ಮುಖ್ಯಮಂತ್ರಿಗಳ ಮುನಿಸಿಗೆ ಕಾರಣ ಅನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಸಮಾರಂಭದಲ್ಲಿ ನಾವೂ ಸೇರಿದಂತೆ ಕೆಲವು ಮಾಧ್ಯಮಗಳ ಪ್ರತಿನಿಧಿಗಳು ಅಕ್ಷರಶಃ ಹಾಜರಿದ್ದಾಗ್ಯೂ ಕೃಷ್ಣ ಈ ಪರಿ ಕಟಕಿಯಾಡಿದ್ದು ಯಾಕೋ? ಅದಿರಲಿ, ಸಮಾರಂಭದ ಮಧುರ ಕ್ಷಣಗಳ ಕಡೆ ಹೊರಳೋಣ ಬನ್ನಿ...

ಕಟಕಿ ಕುಕ್ಕಿದ ನಂತರ ಸಿಎಂ ಕೃಷ್ಣ ಬಾಲಮುರಳಿ ಕೃಷ್ಣರನ್ನು ಬಾಯಿತುಂಬಾ ಹೊಗಳಿದ್ದು ಹೀಗೆ- ‘ಡಾ. ಬಾಲಮುರಳಿ ಕೃಷ್ಣ ಕರ್ನಾಟಕ ಸಂಗೀತದ ಅನಭಿಷಿಕ್ತ ಸಾಮ್ರಾಟ. ಇಂಥ ಅಪರೂಪದ ಸಮಾರಂಭಕ್ಕೆ ನನ್ನನ್ನು ಆಹ್ವಾನಿಸಿದಕ್ಕೆ ಅಭಿನಂದನೆಗಳು. 72ನೇ ವಯಸ್ಸಿನಲ್ಲೂ ಕೂಡ ಇವರು ಸಂಗೀತದ ನಾನಾ ಪ್ರಕಾರಗಳ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ. ಬಾಲಮುರಳಿ ಕೃಷ್ಣ ಸಂಪ್ರದಾಯ ಸಂಗೀತಗಾರರಲ್ಲ ಎಂಬ ಆರೋಪವಿದೆ. ಇದರ ನಡುವೆಯೂ ಇವರೇ ಕೆಲವು ಹೊಸ ರಾಗಗಳನ್ನು ಸೃಷ್ಟಿ ಮಾಡಿದ್ದಾರೆ. ಈತ ಒಬ್ಬ ಒಳ್ಳೇ ಗಾಯಕನಷ್ಟೆ ೕ ಅಲ್ಲ - ಪಿಟೀಲು, ಕೊಳಲು ಮುಂತಾದ ವಾದ್ಯಗಳನ್ನು ಕೂಡ ನುಡಿಸುತ್ತಾರೆ. ಅವರು ಸದಾ ಹಾಡುತ್ತಿರಬೇಕು’.

ಕರ್ನಾಟಕ ಸಂಗೀತದ ಇತಿಹಾಸ ಪುರುಷರಾದ ತ್ಯಾಗರಾಜ ಮತ್ತು ಪುರಂದರದಾಸರ ಸಂಗೀತದ ಬಗ್ಗೆ ಸಂಶೋಧನೆ ಮಾಡಲೆಂದೇ ಡಾ.ಬಾಲಮುರಳಿ ಕೃಷ್ಣ ಒಂದು ಟ್ರಸ್ಟ್‌ ಸ್ಥಾಪಿಸಿದ್ದಾರೆ. ಸರ್ಕಾರದ ಪರವಾಗಿ ಮುಖ್ಯಮಂತ್ರಿ ಕೃಷ್ಣ ಈ ಟ್ರಸ್ಟ್‌ಗೆ 1 ಲಕ್ಷ ರುಪಾಯಿ ದೇಣಿಗೆ ನೀಡಿದರು.

ಸನ್ಮಾನ ಸ್ವೀಕರಿಸಿ ಕಂಗಳಲ್ಲಿ ತೇವ ತುಂಬಿಕೊಂಡಿದ್ದ ಬಾಲಮುರಳಿ ಕೃಷ್ಣ, ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಸ್ವೀಕರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಮುಂದಿನ ಪೀಳಿಗೆಯವರಿಗೆ ಉಪಯುಕ್ತವಾಗುವಂತೆ ಸಂಗೀತಗಾರರ ಹಾಡುಗಳನ್ನು ಆಡಿಯೋ ಮತ್ತು ವೀಡಿಯೋ ಚಿತ್ರೀಕರಣ ಮಾಡುವಂತೆ ಕರೆಕೊಟ್ಟ ಬಾಲಮುರಳಿ ಕೃಷ್ಣ, ಕರ್ನಾಟಕ ಸಂಗೀತ ಕೇವಲ ಕರ್ನಾಟಕಕ್ಕಷ್ಟೇ ಸೀಮಿತವಾಗಕೂಡದು ಎಂದು ಆಶಿಸಿದರು.

ಸಂಪ್ರದಾಯ ಸಂಗೀತಗಾರರಲ್ಲ ಎಂಬ ಆರೋಪವನ್ನು ನೆನಪಿಸಿದ ಮುಖ್ಯಮಂತ್ರಿ ಮಾತಿಗೆ ಪ್ರತಿಕ್ರಿಯಿಸಿದ ಬಾಲಮುರಳಿ, ತಾವು ಸಂಗೀತದಲ್ಲಿ ಯಾವತ್ತೂ ಸಂಪ್ರದಾಯವಾದಿ. ತ್ಯಾಗರಾಜರು ಮತ್ತು ಪುರಂದರರು ಯಾವ ಸಂಪ್ರದಾಯ ಪಾಲಿಸಲಿಲ್ಲ. ಅವರು ಮಹಾತ್ಮರು, ಅವರೇ ಹೊಸ ಸಂಪ್ರದಾಯವನ್ನು ಹುಟ್ಟು ಹಾಕಿದರು. ಸಂಗೀತಕ್ಕೆ ತಾವೇನೂ ಕೊಟ್ಟಿಲ್ಲ ಎಂದು ನಮ್ರವಾಗಿ ಹೇಳಿದರು.

ಮೊದಲ ಕಚೇರಿ ನಡೆಸಿಕೊಟ್ಟಿದ್ದು 1944ರಲ್ಲಿ , ಇದೇ ಗಾಯನ ಸಮಾಜದಲ್ಲಿ. ಆಗ ಕರ್ನಾಟಕವೇ ಇನ್ನೂ ಹುಟ್ಟಿರಲಿಲ್ಲ ಎಂದು ಮರೆಯಲಾಗದ ನೆನಪನ್ನು ಬಾಲಮುರಳಿ ಮೆಲುಕು ಹಾಕಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿಕ್ಷಣ ತಜ್ಞ ಡಾ. ಎಚ್‌. ನರಸಿಂಹಯ್ಯ, ಪಾಶ್ಚಾತ್ಯ ಸಂಸ್ಕೃತಿ ನಮ್ಮ ಸಂಸ್ಕೃತಿಯನ್ನು ಕಬಳಿಸುತ್ತಿದೆ ಎಂದರು. ಬ್ರಿಟಿಷರು ಭಾರತ ಬಿಡುವಾಗ, ನಾವು ನಿಮಗೆ ಸ್ವಾತಂತ್ರ್ಯವನ್ನು ಕೊಟ್ಟಿರಬಹುದು ಆದರೆ ನಮ್ಮ ಸಂಸ್ಕೃತಿಯನ್ನು ಇಲ್ಲೇ ಬಿಟ್ಟು ಹೋಗುತ್ತಿದ್ದೇವೆ ಎಂದು ಹೇಳಿದ್ದನ್ನು ನೆನಪಿಸಿಕೊಂಡ ಅವರು, ನಮ್ಮ ಸಂಗೀತ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಕರೆ ನೀಡಿದರು.

ಬಾಲಮುರಳಿ ಕೃಷ್ಣ : ಒಂದು ಟಿಪ್ಪಣಿ

ತ್ಯಾಗರಾಜರ ಐದನೇ ಪೀಳಿಗೆಯ ಶಿಷ್ಯರಾದ ಡಾ. ಬಾಲಮುರಳಿ ಕೃಷ್ಣ 400ಕ್ಕೂ ಹೆಚ್ಚು ಕೀರ್ತನೆಗಳನ್ನು ಸಂಯೋಜನೆ ಮಾಡಿದ್ದಾರೆ. ದೇಶ ವಿದೇಶ ಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ತೆಲುಗು, ತಮಿಳು, ಮಲಯಾಳಂ, ಕನ್ನಡ, ಒರಿಯ ಮುಂತಾದ ಭಾಷೆಗಳಲ್ಲಿ ಹಾಡಿರುವ ಇವರು, ಒಂದೇ ಸಂಗೀತ ಕಂಪೆನಿಯ 250ಕ್ಕೂ ಹೆಚ್ಚು ಕ್ಯಾಸೆಟ್‌ಗಳಿಗೆ ಹಾಡಿದ್ದಾರೆ. ಉತ್ತರ ಭಾರತದ ಅನೇಕ ಸಂಗೀತಗಾರರ ಜತೆ ಜುಗಲ್‌ಬಂದಿ ಕಾರ್ಯಕ್ರಮ ನೀಡಿದ್ದಾರೆ. 13 ವರ್ಷದ ಬಾಲಕನಿದ್ದಾಗಲೇ ಸಂಗೀತವನ್ನು ಅಭ್ಯಸಿಸಿದ ಡಾ.ಬಾಲಮುರಳಿ ಕೃಷ್ಣ ಸುಮಾರು 1000ಕ್ಕೂ ಹೆಚ್ಚು ಬಿರುದುಗಳಿಗೆ ಭಾಜನರಾಗಿದ್ದಾರೆ. ಈ ಪೈಕಿ ಕಾಳಿದಾಸ ಸಮ್ಮಾನ್‌, ಪದ್ಮವಿಭೂಷಣ, ಪದ್ಮಶ್ರೀ, ಸಂಗೀತ ಕಲಾ ಶಿಖಾಮಣಿ, ಸಂಗೀತ ಕಲಾ ನಿಪುಣ, ಕಲಾ ಪ್ರವೀಣ ಪ್ರಮುಖವಾದವು.

ಗಾಯನ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X